ಯಾಝಿದಿಗಳು; ಸನಾತನ ಧರ್ಮದ ದೀಪ ಬೆಳಗಿದವರು
62 ಮೈಲಿ ಉದ್ದಕ್ಕೆ ಹರಡಿರುವ ಸಿಂಜರ್ ಅಥವಾ ಶಿಂಗಲ್ ಪರ್ವತ ಶ್ರೇಣಿ. ಅದರ ಬುಡದಲ್ಲೊಂದು ಪುಟ್ಟ ಹಳ್ಳಿ; ಕೋಚೋ. ಅಲ್ಲೊಂದು ಬಡಕುಟುಂಬದಲ್ಲಿ ಹೂವೊಂದು ಅರಳಿತ್ತು. ಎಲ್ಲರಂತೆ ಬಾಲ್ಯ ಕಳೆದು, ಶಿಕ್ಷಣ ಪಡೆಯುತ್ತಾ ಇದ್ದ ಆ ಹೂವು ತಾನೊಬ್ಬಳು ಶಿಕ್ಷಕಿಯಾಗಬೇಕು, ಬ್ಯೂಟಿಷಿಯನ್ ಆಗಬೇಕು ಎಂಬ ಹಲವು ಕನಸುಗಳೊಂದಿಗೆ ತನ್ನದೇ ಪುಟ್ಟ ಜಗತ್ತಿನಲ್ಲಿ ಮೈಮರೆತಿತ್ತು. ಆದರೆ ಯಾವಾಗ ಕಪ್ಪು ಬಾವುಟ ಹೊತ್ತ; "ತನ್ನದಲ್ಲದ, ತನ್ನದಾಗದ ಎಲ್ಲವನ್ನೂ ನಾಶ ಮಾಡಬೇಕು" ಎಂಬುದನ್ನೇ ತುಂಬಿಕೊಂಡಿದ್ದ ತಲೆಗಳಿದ್ದ ಟ್ರಕ್ಕುಗಳು ಆ ಹಳ್ಳಿಗೆ ನುಗ್ಗಿದವೋ ಅಂದಿಗೆ ಆ ಕನಸಿನ ಲೋಕ ಮುರಿದು ಬಿತ್ತು. ಹೂವು ಬಾಡಿತು. ಅದೊಂದೇ ಹೂವಲ್ಲ; ಅದರೊಟ್ಟಿಗಿದ್ದ, ಆ ಹಳ್ಳಿಯ ಸುತ್ತಮುತ್ತಲಿದ್ದ ಎಲ್ಲಾ ಹೂವುಗಳು ಬಾಡಿ ಬಸವಳಿದವು. ಕೆಲವು ಅಳಿದು ಹೋದವು; ಉಳಿದವು ಕತ್ತಲ ಕೂಪದಲ್ಲಿ, ನರಕಯಾತನೆಯಲ್ಲಿ ನಲುಗಿ ಹೋದವು. ಹೂವುಗಳ ರಕ್ಷಣೆಗಿದ್ದವರನ್ನು ಹೊಸಕಿ ಹಾಕಲಾಯಿತು. ಆ ಪುಟ್ಟ ಜಗತ್ತು ಸ್ಮಶಾನವಾಯಿತು.
ಇದು ಕಥೆಯಲ್ಲ; ತಮ್ಮಷ್ಟಕ್ಕೆ ತಾವೇ ಇದ್ದು ಅರಳಿ ಕಂಪು ಸೂಸುತ್ತಿದ್ದ ಯಾಝಿದಿಗಳೆಂಬ ಹೂವುಗಳು ಸುಟ್ಟು ಕರಕಲಾದ ಬಗೆಗಿನ ವ್ಯಥೆ. ಅದೇ ಕೋಚೋ ಹಳ್ಳಿಯಲ್ಲಿ ಹುಟ್ಟಿದವಳೇ ನಾದಿಯಾ ಮುರಾದ್. ಅದು 2014ರ ಆಗಸ್ಟ್ 3; ಆಗ ನಾದಿಯಾಗೆ 21ರ ಹರೆಯ. ಕಪ್ಪುಧ್ವಜ ಹೊತ್ತ ಟ್ರಕ್ಕುಗಳು ಆರ್ಭಟಿಸುತ್ತಾ ಬಂದವು. ಅವುಗಳಲ್ಲಿ ಕುರಾನನ್ನು ಅರೆದು ಕುಡಿದಿದ್ದ ನರ ರಾಕ್ಷಸರು. ಹಸುಳೆ-ಹಳಬರೆನ್ನದೆ, ಗರ್ಭಿಣಿ-ರೋಗಿಗಳೆಂಬ ತಾರತಮ್ಯವಿಲ್ಲದೆ, ಸ್ತ್ರೀ-ಪುರುಷರೆಂಬ ಭೇದವಿಲ್ಲದೆ ಎಲ್ಲರ ಮೇಲೂ ನಡೆಯಿತು ದೌರ್ಜನ್ಯ. ಮತಾಂತರವಾಗಲು ಒಪ್ಪದ ಗಂಡಸರೆಲ್ಲಾ ಗುಂಡಿಗೆ ಬಲಿಯಾದರು. ಹೆಣ್ಣುಮಕ್ಕಳನ್ನೆಲ್ಲಾ ಟ್ರಕ್ಕುಗಳಿಗೆ ತುಂಬಿದರು. ಅದರಲ್ಲಿ ನಾದಿಯಾಳೂ ಒಬ್ಬಳು. ಅಲ್ಲಿಗೆ ಅವಳ ಜಗತ್ತು, ಅವಳ ಕುಟುಂಬ ಹಾಗೂ ಅವಳ ಕನಸುಗಳು ಛಿದ್ರ ಛಿದ್ರವಾದವು. ಅವಳದ್ದೇನು, ಇಡಿಯ ಯಾಝಿದಿ ಜನಾಂಗವೇ ಕುಸಿದು ಪಾತಾಳ ಸೇರಿತು. ಅಂದು ತನ್ನೂರು ಕೋಚೋವನ್ನು ಕೊನೆಯದಾಗಿ ಕಂಡಳು ನಾದಿಯಾ. ಎಲ್ಲೆಲ್ಲೂ ಶವಗಳ ರಾಶಿ, ನೆತ್ತರ ಹೊಳೆ, ಆಕ್ರಂದನ, ಅಸಹಾಯಕ ಕಣ್ಣೀರು... ಅವುಗಳನ್ನು ಚಕ್ರಗಳಡಿಯಲ್ಲಿ ಹೂತು ಹಾಕಿ ಟ್ರಕ್ ಮುಂದೆ ಮುಂದೆ ಸಾಗಿದಂತೆ ಅವಳು ಆಡಿ ನಲಿದಿದ್ದ ಗ್ರಾಮ ಕಣ್ಣಿಂದ ಮರೆಯಾಗುತ್ತಾ ಸಾಗಿತು.
ಟ್ರಕ್ ಐಸಿಸ್ ಉಗ್ರರ ಸ್ವಘೋಷಿತ ಖಲಿಫೇಟ್ ರಾಜಧಾನಿ ಮೊಸೂಲ್ ತಲುಪಿತು. ಉಗ್ರನೊಬ್ಬ “ನೀವಿಲ್ಲಿ ಸಬಾಯಾಗಳಾಗಿ ಬಂದಿದ್ದೀರಿ. ನಾವೇನು ಹೇಳುತ್ತೇವೆಯೋ ಅದನ್ನು ಮಾಡಬೇಕು ಅಷ್ಟೇ" ಎಂದ. ಸಬಾಯಾ ಎಂದರೆ ಲೈಂಗಿಕ ಗುಲಾಮರು ಎಂದು ಅರಿವಾಗುವ ಹೊತ್ತಿಗೆ ಆ ನತದೃಷ್ಟೆಯರು ಮತಾಂಧರ ಕಾಮುಕತೆಗೆ ಬಲಿಯಾಗುತ್ತಾ ಒಬ್ಬರಿಂದೊಬ್ಬರಿಗೆ ಮಾರಾಟವಾಗುತ್ತಿದ್ದರು. ಮನೆಯ ಮಾಳಿಗೆಯೊಂದರಲ್ಲಿ ಅವರನ್ನು ಕೂಡಿಹಾಕಲಾಯಿತು. ಸೂರ್ಯಾಸ್ತವಾಗುತ್ತಿದ್ದಂತೆ ಮಾರುಕಟ್ಟೆಯೊಂದಕ್ಕೆ ಅವರನ್ನು ಒಯ್ಯಲಾಯಿತು. ಅದು ವಸ್ತುಗಳನ್ನು ಮಾರುವ ಸಂತೆಯಲ್ಲ. ಹುಡುಗಿಯರನ್ನು ವಿಕ್ರಯಿಸುವ, ಲೈಂಗಿಕ ಗುಲಾಮರನ್ನು ಮಾರುವ ಮಾರುಕಟ್ಟೆ! ಅದಕ್ಕಾಗಿ ನೋಂದಣಿ ಪ್ರಕ್ರಿಯೆಗಳು ಇದ್ದವು. ಹುಡುಗಿಯರಿದ್ದ ಕೋಣೆಗೆ ಹಸಿದ ತೋಳಗಳಂತೆ ಉಗ್ರರು ನುಗ್ಗಿದರು. ಅವರ ಅಳು, ಕಿರುಚಾಟಗಳು ಅರಣ್ಯರೋದನವಾಗಿತ್ತು. ನೋಡಲು ಸುಂದರವಾಗಿರುವ ಹುಡುಗಿಯರ ಬಳಿ ಮೊದಲು ಬಂದು ಪ್ರಾಯ ಕೇಳಿದರು. ಇವರೆಲ್ಲರೂ ಕನ್ಯೆಯರು ಹೌದಲ್ಲವೇ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದರು. ಆತ ಮುಗುಳ್ನಕ್ಕು ವ್ಯಾಪಾರಿಯೊಬ್ಬ ತನ್ನ ಸರಕನ್ನು ಹೊಗಳುವಂತೆ ಹೌದೆಂಬಂತೆ ಉತ್ತರಿಸಿದ. ಬಳಿಕ ಉಗ್ರರು ಅವರ ದೇಹಗಳನ್ನು ತಮಗಿಷ್ಟ ಬಂದಂತೆ ಸ್ಪರ್ಶಿಸತೊಡಗಿದರು. ಹುಡುಗಿಯರು ತಮ್ಮ ಅಸಹಾಯಕತೆಯಿಂದ ಮುದುಡಿ ಮುದುಡಿ ಸೋಲುತ್ತಿದ್ದರು. ಅಸಹನೆಯಿಂದ ಕಣ್ಣೀರು ಸುರಿಸುತ್ತಿದ್ದರು. ನಮ್ಮನ್ನು ಬಿಟ್ಟುಬಿಡಿ ಎಂದು ಗೋಗರೆಯುತ್ತಿದ್ದರು.
ಅಷ್ಟರಲ್ಲಿ ದೈತ್ಯನೊಬ್ಬ ಬಂದು ನಿಂತ. ಅವನು ಸಲ್ವಾನ್. ಉಗ್ರಗಾಮಿಗಳ ಉನ್ನತ ಮಟ್ಟದ ನಾಯಕ. ಒಬ್ಬ ಯಾಜಿದಿ ಹುಡುಗಿಯನ್ನು ತನಗೆ ಬೇಕಾದಂತೆ ಬಳಸಿಕೊಂಡು, ಅವಳನ್ನು ಮತ್ತೆ ಇಲ್ಲಿ ಬಿಟ್ಟು, ಇನ್ನೊಬ್ಬಳನ್ನು ಕರೆದೊಯ್ಯಲೆಂದು ಆತ ಬಂದಿದ್ದ. ಮುದುಡಿ ಕುಳಿತಿದ್ದ ನಾದಿಯಾ ತಲೆಬಗ್ಗಿಸಿ ಕುಳಿತಿದ್ದಳು. ಅವನ ಪಾದಗಳಷ್ಟೇ ಕಾಣುತ್ತಿತ್ತು. “ನಿಂತುಕೋ” ಎಂದ. ಅವಳು ನಿಲ್ಲಲಿಲ್ಲ. ಆಕ್ರೋಶಗೊಂಡು ಕಾಲಲ್ಲಿ ಒದ್ದುಬಿಟ್ಟ. "ನೀನೇ, ಗುಲಾಬಿ ಬಣ್ಣದ ಜಾಕೆಟ್ ಧರಿಸಿದವಳು, ನಿಂತುಕೊಳ್ಳುತ್ತೀಯೋ ಇಲ್ಲವೋ" ಎಂದು ಗಟ್ಟಿ ಧ್ವನಿಯಲ್ಲಿ ಗದರಿದ. ಅವಳು ನಡುಗಿದಳು. ಕಣ್ಣೆತ್ತಿ ನೋಡಿದಳು; ಅವನ ಕಣ್ಣುಗಳು ಕೆಂಡದುಂಡೆಗಳಂತಿದ್ದವು. ಆತ ಮನುಷ್ಯನಂತೆ ಕಾಣುತ್ತಿರಲಿಲ್ಲ. ಆಕೆಗೆ ಮೊದಲ ಬಾರಿಗೆ ದೈತ್ಯ ರಾಕ್ಷಸನನ್ನು ನೋಡಿದಂತಾಯಿತು. ಈತನ ಕೈಗೇನಾದರೂ ತಾನು ಸಿಕ್ಕಿದರೆ ತನ್ನನ್ನು ಹೇಳಹೆಸರಿಲ್ಲದಂತೆ ಚಿವುಟಿ ಹಾಕಿಬಿಡುತ್ತಾನೆ ಎಂದು ಅವಳಿಗೆ ಅನಿಸಿತು. ಕೊಳೆತ ಮೊಟ್ಟೆಯ ವಾಸನೆ ಅವನ ದೇಹದಿಂದ ಮೂಗಿಗೆ ಬಡಿಯುತ್ತಿತ್ತು. ಆತನನ್ನು ಎದುರಿಸಿ ಒಂದು ಕ್ಷಣವೂ ಬದುಕುವುದು ಅಸಾಧ್ಯ ಎಂದು ಆಕೆಗೆ ಮನದಟ್ಟಾಯಿತು. ಏನು ಮಾಡಬೇಕೆಂದು ತೋಚದೆ, ಅತ್ತಿತ್ತ ನೋಡತೊಡಗಿದಾಗ ತೆಳ್ಳಗಿನ ವ್ಯಕ್ತಿಯೊಬ್ಬ ಕಾಣಿಸಿದ. ಮರುಯೋಚಿಸದೆ ಆ ಕಾಲಿಗೆರಗಿದಳು. “ದಯವಿಟ್ಟು ನನ್ನನ್ನು ನೀವೇ ಕರೆದುಕೊಂಡು ಹೋಗಿ" ಎಂದು ಅವನ ಕಾಲು ಹಿಡಿದು ಬೇಡತೊಡಗಿದಳು. ಆತ ಸಲ್ವಾನ್ನತ್ತ ತಿರುಗಿ, “ಈಕೆ ನನ್ನವಳು" ಎಂದ. ನೋಂದಣಿ ಮಾಡುವಾತನ ಬಳಿ ಅವಳನ್ನು ಕರೆದೊಯ್ದ. ಪುಸ್ತಕದಲ್ಲಿ ಹೆಸರು ನೋಂದಾಯಿಸಿಕೊಳ್ಳುವಲ್ಲಿ ನಿರತನಾಗಿದ್ದ ಆತ ತಲೆಎತ್ತಿಯೂ ನೋಡದೆ, ಹುಡುಗಿಯ ಮತ್ತು ಆಕೆಯನ್ನು ಖರೀದಿಸಿದಾತನ ಹೆಸರು ಕೇಳಿದ. “ನಾದಿಯಾ, ಹಜ್ಜಿ ಸಲ್ಮಾನ್" ಎಂಬ ಉತ್ತರ ಹೊರಬಂತು. “ಹಜ್ಜಿ ಸಲ್ಮಾನ್" ಎಂಬ ಹೆಸರು ಕೇಳುತ್ತಿದ್ದಂತೆ ನೋಂದಣಿ ಮಾಡುತ್ತಿದ್ದವನ ಮುಖದಲ್ಲಿ ಸಣ್ಣಗೆ ಬೆವರಿಳಿದಿದ್ದು ಕಂಡುಬಂತು. ಅದೇಕೆಂದು ಅವಳಿಗೆ ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿತ್ತು!
ಸಲ್ವಾನ್ನ ದೈತ್ಯ ದೇಹ ಕಂಡು ಹೆದರಿದ್ದ ನಾದಿಯಾ, ಸಲ್ಮಾನ್ ಎಂಬ ವಿಕೃತ ಕಾಮಿಯ ತೆಕ್ಕೆಗೆ ಬಿದ್ದಿದ್ದಳು. ಬರೋಬ್ಬರಿ ಮೂರು ತಿಂಗಳ ಕಾಲ ಸಲ್ಮಾನ್ ಎಂಬ ರಾಕ್ಷಸ ಯಾವ ರೀತಿಯೆಲ್ಲ ಚಿತ್ರಹಿಂಸೆ ನೀಡಲು ಸಾಧ್ಯವೋ, ಅದನ್ನೆಲ್ಲವನ್ನೂ ನೀಡಿದ. ಸಿಗರೇಟ್ನಿಂದ ಅಂಗಾಂಗಗಳನ್ನು ಸುಡಲಾಯಿತು. ಹೊಡೆದು, ಬಡಿದು ಚಿತ್ರಹಿಂಸೆ ನೀಡಲಾಯಿತು. ಒಬ್ಬರ ನಂತರ ಒಬ್ಬರಿಗೆ ಮಾರಾಟ ಮಾಡಲಾಯಿತು. ಉಗ್ರರ ಕ್ರೌರ್ಯದಿಂದ ತೀವ್ರವಾಗಿ ಘಾಸಿಗೊಂಡಿದ್ದ ನಾದಿಯಾ, ಇನ್ನು ಈ ಕತ್ತಲಲ್ಲೇ ತನ್ನ ಅಂತ್ಯ ಎಂದು ಭಾವಿಸಿದ್ದಳು. ಅಲ್ಲಿಂದ ತಪ್ಪಿಸಿಕೊಳ್ಳಲು ಆಕೆ ನಡೆಸಿದ ಮೊದಲ ಪ್ರಯತ್ನ ವಿಫಲವಾಯಿತು. ಅದಕ್ಕೆ ಶಿಕ್ಷೆಯಾಗಿ ಆರು ಉಗ್ರರು ಪ್ರಜ್ಞಾಹೀನಳಾಗುವ ತನಕ ನಿರಂತರವಾಗಿ ಅವಳನ್ನು ಅತ್ಯಾಚಾರ ನಡೆಸಿದ್ದರು! ಆಘಾತದ ನಡುವೆಯೂ ಧೈರ್ಯ ತಂದುಕೊಂಡ ಮುರಾದ್ ಎಂಟು ತಿಂಗಳ ನಂತರ ದೌರ್ಜನ್ಯದ ಸಂಕೋಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದಳು. ನವೆಂಬರ್ 2014ರಲ್ಲಿ ಮೇಲ್ವಿಚಾರಕ ಮನೆಯ ಬೀಗ ತೆರೆದು ಹೊರಹೋಗಿದ್ದಾಗ ತಪ್ಪಿಸಿಕೊಂಡಳು. ಓಡಿ ಹೋಗಿ ಮನೆಯೊಂದರ ಬಾಗಿಲು ಬಡಿದಳು. ಆ ಮನೆಯವ ಅವಳಿಗೆ ರಕ್ಷಣೆ ನೀಡಿದ. ಆಕೆ ಯಾಝಿದಿ ಎನ್ನುವುದನ್ನು ಮರೆಮಾಚಿ ನಕಲಿ ಗುರುತಿನ ಚೀಟಿ ಮಾಡಿ, ಬುರ್ಖಾ ತೊಡಿಸಿ, ತನ್ನ ಪತ್ನಿ ಎಂದು ಸುಳ್ಳು ಹೇಳಿ, ಆಕೆಯನ್ನು ಮೊಸೂಲ್ ದಾಟಿಸಿ, ಇರಾಕ್ನ ಕುರ್ದಿಸ್ತಾನಕ್ಕೆ ತಲುಪಿಸಿದ. ಉತ್ತರ ಇರಾಕ್ನ ಡುಹೊಕ್ನಲ್ಲಿ ನಿರಾಶ್ರಿತರ ಶಿಬಿರಕ್ಕೆ ಸೇರಿದಳು. ಉಗ್ರರ ಅಟ್ಟಹಾಸಕ್ಕೆ ಹೆದರಿ ವಲಸೆ ಹೋದ ಯಾಜಿದಿ ಕುಟುಂಬಗಳು ಕುರ್ದಿಸ್ತಾನದಲ್ಲಿ ನೆಲೆಯೂರಿದ್ದವು. ಅವರನ್ನು ಸೇರಿದ ಬಳಿಕವೇ ನಾದಿಯಾಗೆ ತನ್ನ ತಾಯಿ ಮತ್ತು 6 ಮಂದಿ ಸಹೋದರರನ್ನು ಉಗ್ರರು ಅಂದೇ ಕೊಂದು ಹಾಕಿದ್ದರು ಎಂಬ ವಿಷಯ ಗೊತ್ತಾಗಿದ್ದು. ಬಳಿಕ ಆಕೆ ಸಂಘಟನೆಯೊಂದರ ಸಹಾಯದಿಂದ ಜರ್ಮನಿಯಲ್ಲಿದ್ದ ತನ್ನ ಸಹೋದರಿಯನ್ನು ಸೇರಿಕೊಂಡಳು.
ಇದು ನಾದಿಯಾಳೊಬ್ಬಳ ಕಥೆಯಲ್ಲ. ಸಿಂಜರ್ ಪರ್ವತದ ತಪ್ಪಲಲ್ಲಿದ್ದ ಸುಮಾರು 6500ಕ್ಕೂ ಹೆಚ್ಚು ಯಾಝಿದಿ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲಾಗಿತ್ತು. ಗಂಡಸರ ಕತ್ತು ಕೊಯ್ಯಲಾಯಿತು; ಕೆಲವರನ್ನು ಸಾಮೂಹಿಕವಾಗಿ ಬೆಂಕಿಗೆ ಹಾಕಿ ಸುಡಲಾಯಿತು. ಇದು ಸಿಂಜರ್ ಹತ್ಯಾಕಾಂಡವೆಂದೇ ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸದಲ್ಲಿ ಯಾಝಿದಿಗಳ 73 ಹತ್ಯಾಕಾಂಡಗಳು ದಾಖಲಾಗಿವೆ. ಐಸಿಸ್'ನದ್ದು 74ನೆಯದ್ದು. ಒಟ್ಟೊಮನ್ ಪ್ರಭುತ್ವ ಯಾಝಿದಿಗಳನ್ನು ಸುನ್ನಿಗಳಾಗಿ ಮತಾಂತರಿಸಿತು. ಯಾಝಿದಿ ಸಂಸ್ಕೃತಿಯನ್ನು ಬಿಟ್ಟು ಮುಸ್ಲಿಮರಾಗಿ ತಮ್ಮ ಮೇಲೆ ಸವಾರಿ ಮಾಡಿ, ತಮ್ಮವರನ್ನು ಹತ್ಯೆಗೈದ ಕುರ್ದಿಶ್'ಗಳನ್ನು ಯಾಝಿದಿಗಳು ಇಂದಿಗೂ ತಿರಸ್ಕಾರದಿಂದ ನೋಡುತ್ತಾರೆ. ಕ್ರೈಸ್ತರೂ ಅವರನ್ನು ಮತಾಂತರಿಸದೇ ಬಿಟ್ಟಿಲ್ಲ! ಯಾಝಿದಿಗಳು ಪ್ರತಿರೋಧ ನಡೆಸಲಿಲ್ಲ ಎನ್ನುವುದು ಸುಳ್ಳು. ಮೂರು ತಿಂಗಳುಗಳ ಕಾಲ ಅವರು ಐಸಿಸ್ ಉಗ್ರರನ್ನು ಸಮತಟ್ಟಾದ ಪ್ರದೇಶದಲ್ಲೇ ತಡೆ ಹಿಡಿದಿದ್ದರು. ಬಳಿಕ ಪರ್ವತ ಪ್ರದೇಶಕ್ಕೆ ಓಡಿಹೋಗಬೇಕಾಗಿ ಬಂದು, ಅನ್ನಾಹಾರಗಳಿಲ್ಲದೆ ಬಳಲಿ ಐಸಿಸ್ ಉಗ್ರರ ಕ್ರೌರ್ಯಕ್ಕೆ ಬಲಿಯಾದರು. 10 ರಿಂದ 20 ವರ್ಷದೊಳಗಿನ ಹುಡುಗಿಯರನ್ನು ಐಸಿಸ್'ನ ಹಿರಿಯ ಉಗ್ರನಿಗೆ ಬಹುಮಾನವಾಗಿ ಕೊಡಲಾಯಿತು. ಅದರಲ್ಲಿ ಹತ್ತು ವರ್ಷದ ಮಾರ್ವಾ ಖೇದ್ರ್ ಎನ್ನುವ ಬಾಲಕಿಯೂ ಇದ್ದಳು. ಕೆಲವೇ ಸಮಯದಲ್ಲಿ ಆ ಬಾಲಕಿ ಗರ್ಭಿಣಿಯಾಗುವ ದುಸ್ಥಿತಿಗೆ ತಲುಪಿದಳು. ಇಂತಹಾ ಹಲವು ಬಾಲಕಿಯರು ಐಸಿಸ್ ವಶದಲ್ಲಿದ್ದಾರೆ; ಮಾತ್ರವಲ್ಲ ಗರ್ಭಿಣಿಯಾಗುವ ಮುನ್ನ ಕನಿಷ್ಟ ನೂರು ಉಗ್ರರಿಂದ ಅತ್ಯಾಚಾರಕ್ಕೊಳಪಟ್ಟಿರುತ್ತಾರೆ ಎಂದಿದ್ದಾಳೆ ಐಸಿಸ್ ಕಪಿಮುಷ್ಠಿಯಿಂದ ಪಾರಾಗಿ ಬಂದ 29 ವರ್ಷದ ಮ್ಹಾದ್ಯಾ. ಅವಳ ಕಥೆಯಂತೂ ಇನ್ನಷ್ಟು ಭಯಾನಕ. ಆಕೆಯ ಮಗುವೊಂದನ್ನು ಬಾಂಬಿಟ್ಟು ಉಡಾಯಿಸಲಾಗಿತ್ತು. ಉಗ್ರರು ಆಕೆಯ ಮಕ್ಕಳನ್ನು ವೈರುಗಳಿಂದ ಹೊಡೆಯುತ್ತಿದ್ದರು. ನನ್ನನ್ನು ಅದೆಷ್ಟು ಬಾರಿ ಮಾರಾಟ ಮಾಡಿದ್ದಾರೆ ಎಂಬುದು ನನಗೇ ತಿಳಿದಿಲ್ಲ ಎನ್ನುತ್ತಾಳೆ ಆಕೆ. ಆಕೆಯ ಮಕ್ಕಳನ್ನು ಮುದುಕರಿಗೆ ಮದುವೆ ಮಾಡುವ ಬೆದರಿಕೆ ಒಡ್ಡಲಾಗಿತ್ತು. ಐಸಿಸ್'ಗೆ ಸೇರಿದ್ದ ಬಿಳಿಯನೊಬ್ಬ ಯಾಝಿದಿ ಮಹಿಳೆಯರನ್ನು ಕೊಂಡು, ಒಳ್ಳೆಯ ಬಟ್ಟೆಯಿಂದ ಸಿಂಗರಿಸಿ ಮಾರುತ್ತಿದ್ದ ಎಂದಿದ್ದಾಳೆ ಆಕೆ. ಕಡ್ಡಿಗಳನ್ನು, ಪ್ರಾಣಿಗಳ ಮಲವನ್ನು ಬಲವಂತವಾಗಿ ಆಕೆಗೆ ತಿನ್ನಿಸಿದ್ದರು. ನಾಲ್ಕೂವರೆ ವರ್ಷದ ಈ ಭಯಾನಕ ನರಕದಿಂದ ಪಾರಾಗಲು ಆಕೆ ಯತ್ನಿಸಿದಾಗ ಆಕೆಯ ಮಕ್ಕಳೇ ಆಕೆಯೊಂದಿಗೆ ಬರಲು ಒಪ್ಪಲಿಲ್ಲವಂತೆ. ಅಷ್ಟರಮಟ್ಟಿಗೆ ಆ ಮಕ್ಕಳನ್ನು ಭೀತರನ್ನಾಗಿಸಿದ್ದರು ಉಗ್ರರು.
2015ರ ಫೆಬ್ರವರಿಯಲ್ಲಿ ಬೆಲ್ಜಿಯಂ ದಿನಪತ್ರಿಕೆ "ಲಾ ಲಿಬ್ರೆ ಬೆಲ್ಜಿಕ್"ಗೆ ತಾನನುಭವಿಸಿದ ಚಿತ್ರಹಿಂಸೆಯನ್ನು ನಾದಿಯಾ ತೆರೆದಿಟ್ಟಳು. 2015ರ ಡಿಸೆಂಬರಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಐಸಿಸ್ ಉಗ್ರರ ಅಟ್ಟಹಾಸವನ್ನು ವಿವರಿಸಿದಳು. ಮಾನವ ಕಳ್ಳಸಾಗಣೆಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊಟ್ಟಮೊದಲ ಚರ್ಚೆ ಅದಾಗಿತ್ತು. ಆಗ ಐಸಿಸ್ ಉಗ್ರರ ಪೈಶಾಚಿಕ ಕೃತ್ಯ ವಿಶ್ವದ ಗಮನಕ್ಕೆ ಬಂತು. ಬಳಿಕ, ದೌರ್ಜನ್ಯದಿಂದ ನಲುಗಿದ್ದ ಜನರ ಪರವಾಗಿ ಹೋರಾಡುವ ಕಾರ್ಯಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಳು. ತನ್ನ ಜನರಿಗೆ ನ್ಯಾಯ ಒದಗಿಸುವ, ಹರಿದು ಹಂಚಿಹೋಗಿರುವ ಯಾಜಿದಿ ಜನಾಂಗದವರನ್ನು ಒಂದೆಡೆ ಸೇರಿಸುವ, ಉಗ್ರರು ತನ್ನ ಸಮುದಾಯಕ್ಕೆ ಮಾಡಿದ ಘೊರ ಅನ್ಯಾಯಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದಳು. "ಇಂಥದ್ದೊಂದು ದುರಂತ ಕಥೆಗೆ ಸಾಕ್ಷಿಯಾದ ಜಗತ್ತಿನ ಕೊನೆಯ ಹುಡುಗಿ ನಾನಾಗಿರಲಿ" ಎನ್ನುವ ಆಕೆ 2017ರಲ್ಲಿ "ದಿ ಲಾಸ್ಟ್ ಗರ್ಲ್" ಎನ್ನುವ ಪುಸ್ತಕವನ್ನೂ ಬರೆದಳು.
ಅವಳ ಕಥೆ ಕೇಳಿದ ಬಳಿಕ 2017ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಐಸಿಸ್ನ ಕ್ರೌರ್ಯಗಳ ಕುರಿತು ಸಾಕ್ಷ್ಯ ಸಂಗ್ರಹಕ್ಕೆ ಬದ್ಧ ಎಂದು ಘೋಷಿಸಿತು! ಅಷ್ಟೊಂದು ಜನರಿಗೆ ಅನ್ಯಾಯವಾದ ಮೇಲೂ ವಿಶ್ವಸಂಸ್ಥೆ ಎದ್ದು ಕುಳಿತದ್ದು ಬರಿಯ ಸಾಕ್ಷ್ಯ ಸಂಗ್ರಹಕ್ಕಷ್ಟೇ! ವಿಶ್ವದ ಮುಸ್ಲಿಮರ ಅಥವಾ ಕ್ರೈಸ್ತರ ಕೂದಲು ಕೊಂಕಿದರೂ ದೊಡ್ಡ ಗಂಟಲಲ್ಲಿ ಸುಳ್ಳೇ ಸುಳ್ಳು ಬೊಬ್ಬೆ ಹಾಕುವ ವಿಶ್ವಸಂಸ್ಥೆ ಯಾಝಿದಿಗಳೆಂಬ ಜನಾಂಗವೇ ನಿರ್ನಾಮವಾಗುವ ಸನ್ನಿವೇಶ ಹತ್ತಿರವಾದಾಗಲೂ ಸಾಕ್ಷಿ ಬೇಕು ಎನ್ನುತ್ತಾ ಕೂತಿತು. ಮಾನವ ಕಳ್ಳಸಾಗಣೆಯ ಸಂತ್ರಸ್ತರ ಮೊದಲ ಸೌಹಾರ್ದ ರಾಯಭಾರಿಯನ್ನಾಗೇನೋ ಆಕೆಯನ್ನು ವಿಶ್ವಸಂಸ್ಥೆ ನೇಮಿಸಿತು. ವಿಶ್ವಸಂಸ್ಥೆಯ ಮಾದಕದ್ರವ್ಯ ಮತ್ತು ಅಪರಾಧ ವಿಭಾಗದ ಅಧಿಕಾರಿಯಾಗಿಯೂ ಆಕೆಯನ್ನು ನೇಮಕ ಮಾಡಿತು. ಆದರೆ ಅದರಿಂದ ಏನು ಸಾಧಿಸಿದಂತಾಯಿತು? ಯಾಝಿದಿಗಳ ಜೀವ ಉಳಿಯಿತೇ? ಲೈಂಗಿಕ ಗುಲಾಮರಾಗಿ ಬದುಕುತ್ತಿರುವ ಯಾಝಿದಿ ಹೆಣ್ಣುಮಕ್ಕಳನ್ನು ಕತ್ತಲಕೂಪದಿಂದ ಹೊರತರಲು ಇದು ಸಹಾಯಕವಾಯಿತೇ? ಇಸ್ಲಾಮ್ ಮತಾಂಧತೆಯನ್ನು ಪೋಷಿಸುವ ಸೆಕ್ಯುಲರ್ ತಂಡದ ಪಾರಿತೋಷಕವಾಗಿರುವ; ನಿರ್ಭಯಾ ಅತ್ಯಾಚಾರಿಗಳಿಗೆ ಲೈಂಗಿಕ ಕ್ರಿಯೆಗೆ ಅವಕಾಶವಿರಲಿಲ್ಲ, ಹಾಗಾಗಿ ಅತ್ಯಾಚಾರ ಎಸಗಿದರು ಎಂದು ಲೇಖನ ಬರೆದವರಿಗೆಲ್ಲಾ ಕೊಡುವ; ಮೌಲ್ಯ ಕಳೆದುಕೊಂಡಿರುವ ನೊಬೆಲ್ ಎಂಬ ಪ್ರಶಸ್ತಿಯೂ ಆಕೆಗೆ ಸಿಕ್ಕಿತು. ಇದಂತೂ ಯಾಝಿದಿಗಳ ಹೋರಾಟವನ್ನೇ ತಣ್ಣಗಾಗಿಸಲು ನಡೆಸಿದ ಯತ್ನವೆಂಬಂತೆ ಅನ್ನಿಸುತ್ತದೆ. ಈ ಪ್ರಶಸ್ತಿ ಕೊಟ್ಟು ಯಾಝಿದಿಗಳ ಕಣ್ಣೀರ ಕಥೆಯನ್ನು ನಾದಿಯಾಳೊಬ್ಬಳಿಗೇ ಸೀಮಿತವಾಗಿಸಿ ಯಾಝಿದಿಗಳ ಮೇಲೆ ನಡೆದ ಕ್ರೌರ್ಯವನ್ನು ಮುಚ್ಚಿ ಹಾಕುವ ಪ್ರಯತ್ನದಂತೆ ಎಂದನ್ನಿಸುತ್ತದೆ. ನೊಬೆಲ್ ಪ್ರಶಸ್ತಿ ಕೊಡುವ ಹಿಂದಿನ ರಾಜಕಾರಣಗಳನ್ನೆಲ್ಲಾ ಗಮನಿಸಿದರೆ ಈ ಗುಮಾನಿಯನ್ನು ಅಲ್ಲಗೆಳೆಯುವಂತಿಲ್ಲ.
ಈಗೇಕೆ ಯಾಝಿದಿಗಳ ಸುದ್ದಿ ಎನ್ನುವ ಪ್ರಶ್ನೆ ಏಳಬಹುದು. ಸೆಪ್ಟೆಂಬರ್ 30ರಂದು ಅರ್ಮೇನಿಯಾದ ಅಕ್ನಾಲಿಚ್ ಹಳ್ಳಿಯಲ್ಲಿ ಜಗತ್ತಿನ ಅತೀ ದೊಡ್ಡ ಯಾಝಿದಿಗಳ ದೇವಾಲಯ "ಕ್ಯೂಬಾ ಮಿಯರ್ ದಿವೇನ್" ಉದ್ಘಾಟನೆಯಾಯಿತು. ಮುಸ್ಲಿಂ ದೇಶದಲ್ಲಿ, ಮುಸ್ಲಿಂ ದೇಶಗಳ ನಡುವೆ ಇದ್ದು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡದ್ದು ಒಂದು ಸಾಧನೆಯಾದರೆ, ಅನವರತ ಘಾಸಿಗೊಳಗಾಗಿ ಇನ್ನೇನೂ ನಶಿಸಿಯೇ ಹೋಯಿತು ಎನ್ನುವ ಸಂದರ್ಭದಲ್ಲಿ ಜೀವಂತವಿದ್ದೇವೆ ಎನ್ನುವುದನ್ನು ತೋರಿಸಿಕೊಳ್ಳುವ ಸಲುವಾಗಿ ತಮ್ಮ ಸಂಸ್ಕೃತಿಯ ಕುರುಹನ್ನು ಕಟ್ಟಿಕೊಂಡದ್ದು ಮತ್ತೊಂದು ಮಹತ್ಸಾಧನೆಯೇ ಸರಿ. 1960ರಲ್ಲಿ ಟರ್ಕಿಯಲ್ಲಿ ಪುರಾತತ್ವ ಶಾಸ್ತ್ರಜ್ಞರಿಗೆ ಹಳೆಯ ಕಟ್ಟಡದ ಅವಶೇಷವೊಂದು ಕಣ್ಣಿಗೆ ಬಿತ್ತು. ಆದರೆ ಅದರತ್ತ ಎಲ್ಲರ ಗಮನ ಸೆಳೆದದ್ದು 1994ರಲ್ಲಿ ನಡೆದ ಉತ್ಖನನದಲ್ಲಿ ಅದೊಂದು 11ಸಾವಿರ ವರ್ಷ ಹಳೆಯ ದೇವಾಲಯ ಎಂಬ ಮಾಹಿತಿ ಹೊರಬಿದ್ದಾಗ. ಶಿವಾಲಯದಂತೆ ಇರುವ, ಪಕ್ಕದಲ್ಲೇ ಸ್ಮಶಾನವಿರುವ ಹಾಗೂ ಶಿಖೆ ಬಿಟ್ಟ ವ್ಯಕ್ತಿಯ ವಿಗ್ರಹ ಹೊಂದಿರುವ ಈ ದೇವಾಲಯ ಭಾರತದಿಂದ ವಲಸೆ ಹೋದ ಹಿಂದೂಗಳಿಂದ ಸ್ಥಾಪಿಸಲ್ಪಟ್ಟಿರಬಹುದು. ಗೊಬೆಕ್ಲಿ ತೇಪಿ ಎಂಬ ಹೆಸರಿನ ಈ ದೇವಾಲಯದ ಅರ್ಚಕರು ಯಾಜಿದಿಗಳಾಗಿದ್ದಿರಬಹುದು ಎನ್ನುವುದೊಂದು ಊಹೆ. ಇದಕ್ಕೆ ಕಾರಣವಿದೆ. ಕುರ್ಮಂಜಿ ಎನ್ನುವ ಭಾಷೆಯನ್ನು ಪ್ರಧಾನವಾಗಿ ಮಾತಾಡುವ ಇರಾಕ್, ಸಿರಿಯಾ, ಟರ್ಕಿ, ಅರ್ಮೇನಿಯಾಗಳಲ್ಲಿ ಹರಡಿರುವ ಯಾಝಿದಿ ಜನಾಂಗಕ್ಕೆ ಭಾರತೀಯರೊಡನೆ ಕೆಲವು ನಂಟಿದ್ದಂತನಿಸುತ್ತದೆ.ಟರ್ಕಿಯ ಪುರಾತನ ಹೆಸರು ಅನತೋಲಿಯಾ. ಆನಲ ಎಂದರೆ ಬೆಂಕಿ, ತೋಲ್ ಎಂದರೆ ಚರ್ಮ. ಬೆಂಕಿಯಂತೆ ಕೆಂಪಾದ ಚರ್ಮದ ಜನತೆಯುಳ್ಳ ಪ್ರದೇಶ ಎಂಬ ಅರ್ಥ ಇದಕ್ಕಿರಬಹುದು. ಇನ್ನೊಂದು ಅಚ್ಚರಿದಾಯಕ ಅಂಶವೆಂದರೆ ತಮಿಳಿನಲ್ಲಿ ಕುರುದಿ ಎಂದರೆ ರಕ್ತ. ರಕ್ತವರ್ಣದವರು ಎನ್ನುವ ಅರ್ಥ ಕುರ್ದಿಶ್ ಎನ್ನುವ ಪದಕ್ಕಿದ್ದಿರಬಹುದೇ? ಇರಾಕ್ ಮತ್ತು ಅರಬ್ ಮರಳುಗಾಡಿನಲ್ಲಿ ಇಂದಿಗೂ ಕೂಡ ಇಸ್ಲಾಮಿಕ್ ಧಾರ್ಮಿಕ ಆಚರಣೆಗಳ ಪ್ರಭಾವಕ್ಕೆ ಅಷ್ಟಾಗಿ ಒಳಪಡದ ಏಕೈಕ ಜನಾಂಗವೆಂದರೆ ಬಹುಷಃ ಯಾಝಿದಿಗಳೇ. ಇವರ ಮುಖ್ಯ ದೈವ "ತವಾಯ್ ಮೇಲಕ್" ಅಂದರೆ ನವಿಲುಗಳ ದೊರೆ. ದೇವರು ತನ್ನ ಮಗ ತವಾಯ್ ಮೇಲಕ್'ಗೆ ಸಹಾಯ ಮಾಡಲು ಆರು ಜನ ಅಪ್ಸರೆಯರನ್ನು ಸೃಷ್ಟಿಸಿದನಂತೆ. ನಮ್ಮ ಶಿವ, ಕಾರ್ತಿಕೇಯ ಹಾಗೂ ಕೃತ್ತಿಕಾ ಮಾತೆಯರನ್ನು ನೆನಪಿಸಿಕೊಳ್ಳಿ. ಅವರ ಧಾರ್ಮಿಕ ಆಚರಣೆಯಲ್ಲಿರುವ ಮುಖ್ಯ ಅಂಗವೇ ನವಿಲಿನ ಚಿತ್ರವಿರುವ ದೀಪ. ಇದರಲ್ಲೇನು ವಿಶೇಷ? ಒಂದು, ದೀಪ ಬೆಳಗುವುದು ಹಿಂದೂಗಳ ವಿಶೇಷತೆ; ಇನ್ನೊಂದು, ಇರಾಕ್, ಟರ್ಕಿ ಸೇರಿ ಪೂರ್ವ ಏಷಿಯಾದಲ್ಲೆಲ್ಲೂ ನವಿಲುಗಳೇ ಕಂಡುಬರುವುದಿಲ್ಲ. ನವಿಲುಗಳ ವಾಸವೇನಿದ್ದರೂ ಭಾರತ ಉಪಖಂಡದ ಸುತ್ತಮುತ್ತ ಮತ್ತು ಆಫ್ರಿಕಾದ ಕೆಲ ಜಾಗಗಳಷ್ಟೆ. ಅವರ ಪವಿತ್ರ ಕ್ಷೇತ್ರ ಲಾಲಿಶ್ ಮಂದಿರದ ಮುಖ್ಯದ್ವಾರದೆದುರು ಹಾವಿನ ಚಿತ್ರವಿದೆ. ಹಾವು, ನವಿಲು ಎಲ್ಲವೂ ಸುಬ್ರಹ್ಮಣ್ಯನಿಗೆ ಸಂಬಂಧಪಟ್ಟವು. ಲಾಲಿಶ್ ಮಂದಿರದ ಗೋಡೆಯೊಂದರ ಮೇಲಿರುವ ಯಾಝಿದಿಗಳ ಅಪ್ಸರೆಯ ಮೈಕಟ್ಟು, ಸೀರೆ, ಬೈತಲೆ, ಕಿವಿಯೋಲೆ, ಹೂವು ಎಲ್ಲವೂ ಪಕ್ಕಾ ಭಾರತೀಯಂತೆಯೇ ಇದೆ.
ಬೆಳಿಗ್ಗೆ ಸೂರ್ಯನತ್ತ ಮುಖಮಾಡಿ ಕೈಮುಗಿಯುತ್ತಾ ಪ್ರಾರ್ಥನೆ, ಸಂಜೆ ಲಾಲಿಶ್ ದೇವಾಲಯದ ದಿಕ್ಕಿನತ್ತ; ಪ್ರಾರ್ಥನೆ ಸಮಯದಲ್ಲಿ ಹೊರಗಿನವರು ಜತೆಗಿರುವಂತಿಲ್ಲ; ಪುನರ್ಜನ್ಮದಲ್ಲಿ ನಂಬಿಕೆ; ಧಾರ್ಮಿಕ ಪರಿಶುದ್ಧತೆ; ದೇವಾಲಯ ಪ್ರವೇಶಿಸುವಾಗ ಹಣೆಗೆ ತಿಲಕವಿಡುವುದು; ಡಿಸೆಂಬರಿನಲ್ಲಿ ಮೂರು ದಿನಗಳ ಉಪವಾಸ; ಹಬ್ಬದ ಸಮಯದಲ್ಲಿ ಹೆಣ್ಣುಮಕ್ಕಳು ಮನೆ ತುಂಬಾ ದೀಪ ಬೆಳಗುವುದು; ನಮ್ಮ ಹವನದ ರೀತಿಯ ಅಗ್ನಿಪೂಜೆ; ಅನ್ಯ ಮತೀಯರೊಂದಿಗೆ ವಿವಾಹಾದಿ ಸಂಪರ್ಕ ನಡೆಸದಿರುವುದು; ಹಿಂದೂ ದೇವಾಲಯಗಳಲ್ಲಿದ್ದಂತೆ ಯಾಝಿದಿ ದೇವಾಲಯಗಳಲ್ಲಿ ಗೋಪುರಗಳಿವೆ. ಅವರ ಪುರಾಣ ಪ್ರಸಿದ್ಧ ಪವಿತ್ರ ಭೂಮಿಯ ಹೆಸರು ಪೆರನಿ(ನಮ್ಮ ಪಳನಿಯನ್ನು ನೆನಪಿಸಿಕೊಡುತ್ತದೆ)! ನಮ್ಮ ಸಪ್ತರ್ಷಿಗಳಿಗೆ ಸಮನಾದ "ಹೆಪ್ಟ್ ಸಿರ್ರ್" (ಏಳು ದೇವತೆಗಳು/ಶಕ್ತಿಗಳು)ನ್ನು ಅವರು ನಂಬುತ್ತಾರೆ. ಅವರು ವೃಕ್ಷಗಳನ್ನೂ ಪೂಜಿಸುತ್ತಾರೆ. ಯಾಝಿದಿಗಳ ಗುರುಗಳನ್ನು ಶೇಖ್ ಆದಿ೧, ಶೇಖ್ ಆದಿ೨,...ಹೀಗೆ ಕರೆಯಲಾಗುತ್ತದೆ! ಶೇಖ್ ಆದಿ ಇಬ್ನ್ ಮುಸಾಫಿರ್'ನನ್ನು ಯಾಝಿದಿಗಳು ತವಾಯ್ ಮೇಲಕ್'ನ ಅವತಾರವೆಂದೇ ನಂಬುತ್ತಾರೆ. ಸದಾ ಮೌನವಾಗಿರುತ್ತಿದ್ದ, ತಪಶ್ಚರ್ಯೆಯಲ್ಲಿ ನಿರತನಾಗಿದ್ದ ಆತ ಅನೇಕ ಪವಾಡಗಳನ್ನು ಮಾಡಿದ್ದ. ಆತನ ಸಮಾಧಿ ಇಂದಿಗೂ ಯಾಝಿದಿಗಳ ಯಾತ್ರಾಸ್ಥಳವಾಗಿದೆ. ಗಮನಿಸಿ ಮೌನ, ತಪಸ್ಸು ಹಿಂದೂ ಸಂಸ್ಕೃತಿಯನ್ನು ಬಿಟ್ಟರೆ ಮತ್ತೆಲ್ಲೂ ಬಲು ಅಪರೂಪ.
ಯಾಝಿದಿಗಳು ತಮ್ಮನ್ನು ದಾಸೇನಿ ಅಥವಾ ದೌಸೇನ್ ಎಂದು ಕರೆದುಕೊಳ್ಳುತ್ತಾರೆ. ಅದು ಸಂಸ್ಕೃತದ ದೇವಯಜ್ಞಿಯಿಂದ ಉತ್ಪತ್ತಿಯಾದ ಪದ. ಯಾಝಿದಿ ಎಂಬುದು ಸಂಸ್ಕೃತದ ಯಜತ(ಪೂಜೆಗೆ ಅರ್ಹ)ದಿಂದ ಹುಟ್ಟಿಕೊಂಡಿದೆ. ಪ್ರಾಚೀನ ಪರ್ಶಿಯನ್ ಹಾಗೂ ಕಾಶ್ಮೀರಿಯಲ್ಲೂ ಇದು ಯಜತ ಎಂದೇ ಕರೆಸಿಕೊಳ್ಳುತ್ತದೆ. ಈಗ ಯಾಝಿದಿ ಕ್ಯಾಲೆಂಡರಿನ ಪ್ರಕಾರ 6,769ನೇ ವರ್ಷ. ಅಂದರೆ ಅವರು ಭಾರತವನ್ನು ಬಿಟ್ಟು ಇಷ್ಟು ವರ್ಷಗಳಾಗಿದ್ದಿರಬಹುದು. ನಮ್ಮ ಸಪ್ತರ್ಷಿ ಕ್ಯಾಲೆಂಡರ್ ಹುಟ್ಟಿದ್ದು ಇದೇ ಸಮಯದಲ್ಲಿ! ಇನ್ನೊಂದು ವಿಶೇಷವೆಂದರೆ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಥಿಯ ದಿನವೇ "ಸಬ್ಬತ್ ದಿನ" ಎಂಬ ಅವರ ದೇವರ (ನವಿಲುಗಳ ಒಡೆಯ) ಹಬ್ಬವಿರುತ್ತದೆ. ಯಹೂದಿ ಬಾಬಾ ಶೇಖ್ 2014ರ ಸ್ಕಂದ ಷಷ್ಠಿಯೊಂದರ ದಿನ ವಾಷಿಂಗ್ಟನ್ನಿನ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು.ಇರಾಕಿನ ಸಿಲೆಮನಿಯಾ ಪ್ರಾಂತ್ಯದಲ್ಲಿ ಶ್ರೀರಾಮ-ಹನುಮಂತರ ಕೆತ್ತನೆಯೂ ಕಂಡುಬಂದಿರುವುದರಿಂದ ಯಾಝಿದಿಗಳ ಹಿಂದೂ ಮೂಲವನ್ನು ಅಲ್ಲಗಳೆಯುವಂತಿಲ್ಲ.
ತಮ್ಮದು ಎಂಬ ಒಂದು ರಾಷ್ಟ್ರವಿಲ್ಲದೆ, ರಾಷ್ಟ್ರೀಯತೆಯ ಪರಿಕಲ್ಪನೆಯಿಲ್ಲದೆ, ಸಂಖ್ಯಾಬಲವೂ ಇಲ್ಲದೆ, ಎಲ್ಲವೂ ಒಳ್ಳೆಯದು, ಎಲ್ಲರೂ ಒಳ್ಳೆಯವರು ಎಂದು ಬಗೆದ ಯಾಝಿದಿಗಳು ಪಟ್ಟ ಪಾಡು ಇದು. ದೇಶಭಕ್ತಿ, ರಾಷ್ಟ್ರ ಎನ್ನುವ ಪರಿಕಲ್ಪನೆ ಅಗತ್ಯವಿಲ್ಲ, ಜಾತ್ಯಾತೀತರಾಗೋಣ, ವಿಶ್ವಮಾನವರಾಗೋಣ ಅಂತ ಬೊಬ್ಬಿಡುವ ಮಂದಮತಿಗಳು ಯಾಝಿದಿಗಳಿಗಾದ ಹಾಗೂ ಈಗ ಕುರ್ದಿಶ್'ಗಳ ಮೇಲಾಗುತ್ತಿರುವ ಘನಘೋರ ಹಿಂಸೆಯನ್ನು ಗಮನಿಸಬೇಕು. ಒಂದು ತುತ್ತು ತಿನ್ನಲೂ ಬಡಿದಾಡಬೇಕಾದ ಪರಿಸ್ಥಿತಿ ಅವರದ್ದು. ಸ್ನೇಹಿತನಾಗಿದ್ದ ಅಮೆರಿಕಾವೇ ಈಗ ಅವರ ಕೈಬಿಟ್ಟಿದೆ. ಹಿಂದೂಗಳ ಪರಿಸ್ಥಿತಿಯೇನೂ ವಿಭಿನ್ನವಲ್ಲ. ಕೊನೇ ಪಕ್ಷ ಯಾಝಿದಿಗಳ ಮಾರಣಹೋಮಕ್ಕೆ ಇಷ್ಟಾದರೂ ಪ್ರತಿಕ್ರಿಯೆ ಬಂತು. ಆದರೆ ಇತಿಹಾಸದುದ್ದಕ್ಕೂ ಬಲಿಯಾಗುತ್ತಲೇ ಬಂದ ಹಿಂದೂಗಳ ಕರುಣಾಜನಕ ಕಥೆಯನ್ನು ಕೇಳುವವರಿಲ್ಲ. ಜಗತ್ತಿನ ಇತಿಹಾಸದಲ್ಲೇ ಅತೀ ದೊಡ್ಡ ವಲಸೆ ನಡೆದ 47ರಲ್ಲಿ ಹಿಂದೂಗಳ ಮೇಲೆ ನಡೆದ ಮಾರಣಹೋಮಕ್ಕೆ ಒಂದು ಖಂಡನೆಯೂ ವ್ಯಕ್ತವಾಗಲಿಲ್ಲ. 71ರ ಆಸುಪಾಸಿನಲ್ಲಿ ಆಗಿನ ಪೂರ್ವ ಪಾಕಿಸ್ತಾನ ಈಗಿನ ಬಾಂಗ್ಲಾದಲ್ಲಿ ಭೀಕರ ಅತ್ಯಾಚಾರಕ್ಕೆ ಒಳಗಾದ ಹಿಂದೂಗಳ ಆರ್ತನಾದಕ್ಕೆ ಯಾವ ವಿಶ್ವಮಾನವನೂ ಓಗೊಡಲಿಲ್ಲ. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರವೆಸಗಿ ಅವರ ಮೂಲನೆಲೆಯಿಂದಲೇ ಬಲವಂತವಾಗಿ ಹೊರದಬ್ಬಿದಾಗ ಯಾವ ಮಾನವ ಹಕ್ಕು ಹೋರಾಟಗಾರರೂ ಪ್ರತಿಭಟನೆ ನಡೆಸಲಿಲ್ಲ. ಇತಿಹಾಸದಲ್ಲಿ ಹಿಂದೂಗಳ ಮೇಲೆ ನಡೆದಷ್ಟು ಹಲ್ಲೆ, ಅತ್ಯಾಚಾರ, ಹತ್ಯಾಕಾಂಡ ಮತ್ಯಾವ ಜನಾಂಗದ ಮೇಲೂ ನಡೆದಿಲ್ಲ. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾದರೆ ಒಂದು ರಾಷ್ಟ್ರವಾಗಿ ಶಕ್ತಿವಂತರಾಗಬೇಕು. ಆಂಗ್ಲ ಶಿಕ್ಷಣದ ಮಾನಸಿಕತೆಯನ್ನೇ ತಲೆಯಲ್ಲಿ ತುಂಬಿಕೊಂಡಿರುವ, ಮಾವೋ-ಮಾರ್ಕ್ಸ್'ಗಳಿಂದ ಬಂದದ್ದೇ ತೀರ್ಥ ಎಂಬಂತಾಡುವ, ಜಾತ್ಯಾತೀತತೆಯೇ ಭಾರತಕ್ಕೊಳ್ಳೆಯದು ಎನ್ನುವವರಿಗೆ ಈ ಸತ್ಯ ತಿಳಿಯಲಾರದು. ತಿಳಿಯುವ ಪ್ರಯತ್ನವನ್ನೂ ಅವರು ಮಾಡುವುದಿಲ್ಲ. 370 ಎಂಬ ಮರಣಶಾಸನ ಕಿತ್ತೆಸೆದಾಗ ಜಗತ್ತಿನ ಕೆಲವೆಡೆ ವಿರೋಧಗಳು ಕಂಡುಬಂದರೂ ಹಲವರು ಬೆಂಬಲಕ್ಕೆ ನಿಂತರು. ಯಾಕೆ? ಶಕ್ತಿವಂತನಿಗೆ ಜಗತ್ತು ಬಾಗುತ್ತದೆ. ಮತಾಂಧರು, ಕ್ರೂರಿಗಳು ಶಕ್ತಿವಂತರಾದರೆ ಜಗತ್ತು ಅಸ್ತವ್ಯಸ್ತವಾಗುತ್ತದೆ. ಕೃಣ್ವಂತೋ ವಿಶ್ವಮಾರ್ಯಮ್ ಎಂದು ಹೊರಟ ಭಾರತ ಶಕ್ತಿವಂತವಾದರೆ ಜಗತ್ತಿಗೇ ಒಳ್ಳೆಯದಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ