ಪುಟಗಳು

ಶನಿವಾರ, ಡಿಸೆಂಬರ್ 28, 2019

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ


                ಸಂಶೋಧನೆ...ಸಂಶೋಧನೆ...ಸಂಶೋಧನೆ. ಆತನ ಉಸಿರೇ ಅದರಲ್ಲಿತ್ತು. ಬಹುಮುಖಿ ಪ್ರತಿಭೆಯೊಂದು ವಿಷಯದ ಆಳ ಹೊಕ್ಕು ಶೋಧಿಸಿ ಅದನ್ನು ಸಮಾಜಮುಖಿಯಾಗಿಸಿ "ಇದಂ ನ ಮಮ" ಎಂದು ಸನಾತನ ಧರ್ಮದ ಸಹಜ ಭಾವ ತೋರಿದ ಶ್ರೇಷ್ಠ ಬದುಕು. ಅದು ಮೆಕಾಲೆ ಪ್ರಣೀತ ಶಿಕ್ಷಣದಿಂದ ತಮ್ಮ ಮೆದುಳನ್ನು ಅಡವಿಟ್ಟಿದ್ದ ಭಾರತೀಯ ಸಮಾಜ ಹಾಗೂ ಬ್ರಿಟಿಷರ ಪಳಿಯುಳಿಕೆಗಳ ವಿರುದ್ಧ ಸೆಣಸಾಟ ನಡೆಸಿ ನಿಜ ಇತಿಹಾಸದ ನವನೀತವನ್ನು ಕಡೆದ ಬದುಕು. ಗಣಿತಜ್ಞ, ಇತಿಹಾಸ ಸಂಶೋಧಕ, ಹಿಂದುತ್ವದ ವಿದ್ವಾಂಸ, ಹೀಗೆ ಹಲವು ಕ್ಷೇತ್ರಗಳಲ್ಲಿ ಹಲವು ಭಾಷೆಗಳಲ್ಲಿ ಸಾಧನೆಯನ್ನು ನಡೆಸಿದ, ಸಾಹಿತ್ಯವನ್ನು ಸೃಷ್ಟಿಸಿದ, ಅಪಾರ ದೂರದರ್ಶಿತ್ವ ಹೊಂದಿದ್ದ, ಹಲವುಗಳ ಆದ್ಯಪ್ರವರ್ತಕ, ಸಾಂಪ್ರಾದಾಯಿಕ ಸಂಸ್ಕೃತದ ರಸಧಾರೆ, ಹೆಸರಿಗೆ ಅನ್ವರ್ಥವೆನಿಸುವ ನವರತ್ನ ಇತ್ತೀಚೆಗೆ ಮರೆಯಾಯಿತು.

                ಒಂದೇ ತಲೆಮಾರಿನಲ್ಲಿ ಒಂಬತ್ತು ವಿದ್ವಾಂಸರನ್ನು ಹೊಂದಿದ್ದ ಈ ದೇಶಸ್ಥ ಕುಟುಂಬಕ್ಕೆ ಉತ್ತರಾದಿ ಮಠದ ಸ್ವಾಮಿಗಳಿಂದ ಕೊಡಲ್ಪಟ್ಟ ಬಿರುದು "ನವರತ್ನ". ಮುಂದೆ ಇದು ಹೆಸರಿನಲ್ಲಿ ಮಾತ್ರವಲ್ಲ, ಸಾಧನೆಯಲ್ಲೂ ಹರಿದು ಬಂತು. ನವರತ್ನ ರಾಮರಾಯರಂಥ ಪ್ರಸಿದ್ಧ ವಿದ್ವಾಂಸರನ್ನು ಕಂಡ ಪರಿವಾರದಲ್ಲಿ 1943 ಸೆಪ್ಟೆಂಬರ್ 22ರಂದು ಜನ್ಮತಾಳಿದ ಒಂದು ರತ್ನವೇ ನವರತ್ನ ಶ್ರೀನಿವಾಸ ರಾಜಾರಾಮ್. ಅಪ್ಪ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಸರ್ಜನ್. ತಾಯಿ ಭೂಗರ್ಭಶಾಸ್ತ್ರಜ್ಞ, ಉದ್ದಿಮೆದಾರ, ಬಹುಭಾಷಾ ಕೋವಿದ ರಾಮೋಹಳ್ಳಿ ವ್ಯಾಸರಾಯರ ಮಗಳು. ತಾತ ನವರತ್ನ ರಾಮರಾಯರ ಪ್ರಭಾವವೇ ಎಳೆಯ ರಾಜಾರಾಮನಲ್ಲಿ ಹಲವು ಕ್ಷೇತ್ರಗಳ ಅಧ್ಯಯನದ ಆಸಕ್ತಿಯನ್ನು ಬೆಳೆಯಿಸಿತು. ಹತ್ತು ವರ್ಷದವರೆಗೆ ಮನೆಯಲ್ಲೇ ಶಿಕ್ಷಣ; ಬಳಿಕ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರೌಢ, ಪದವಿಪೂರ್ವ ಶಿಕ್ಷಣ; ಬಿಎಂಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾದ ಮೇಲೆ 1965ರಲ್ಲಿ ಮುಂಬೈಯ ಟಾಟಾ ಪವರ್ ಕಂಪೆನಿಯಲ್ಲಿ, ವಿದ್ಯುತ್ ವಿತರಣಾ ಕೇಂದ್ರದ ನಿಯಂತ್ರಣಾ ಕೋಷ್ಠದಲ್ಲಿ ನೌಕರಿ. ಬಳಿಕ ಪೂನಾ ಹಳ್ಳಿಗಳಲ್ಲಿ ಕೃಷಿಕರಿಗಾಗಿ ವಿದ್ಯುಚ್ಛಕ್ತಿ ಆಧಾರಿತ ನೀರಾವರಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ.

              ಐದು ವರ್ಷದ ಬಳಿಕ ಟಾಟಾ ಪವರ್ ಸಂಸ್ಥೆಯನ್ನು ತೊರೆದು ಗಣಿತ ಹಾಗೂ ವಿಜ್ಞಾನದ ಉನ್ನತ ಅಧ್ಯಯನಕ್ಕಾಗಿ ಅಮೆರಿಕೆಗೆ ಹೋಗಲು ನಿರ್ಧರಿಸಿದರು ರಾಜಾರಾಮ್. 1976ರಲ್ಲಿ ಬ್ಲೂಮಿಂಗ್ಟನ್ನಿನ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಸಂಭವನೀಯತಾ ಸಿದ್ಧಾಂತ ಮತ್ತು ಗಣಿತೀಯ ಭೌತವಿಜ್ಞಾನವನ್ನು ಆರು ವರ್ಷಗಳ ಕಾಲ ವಿಶೇಷವಾಗಿ ಅಭ್ಯಸಿಸಿ, ಸಂಶೋಧಿಸಿ ಬರೆದ ಸಂಶೋಧನಾ ಪ್ರಬಂಧಕ್ಕೆ ಸಿಕ್ಕಿದ್ದು ಪಿ.ಹೆಚ್.ಡಿ ಪದವಿ. ಮುಂದಿನ ನಾಲ್ಕು ವರ್ಷ ಒಹಾಯೋದಲ್ಲಿರುವ ಕೆಂಟ್ ಸ್ಟೇಟ್ ವಿಶ್ವವಿದ್ಯಾಲಯಲ್ಲಿ ಗಣಿತ ಮತ್ತು ಗಣಕವಿಜ್ಞಾನ ಬೋಧನೆ. ಸಹಜವಾಗಿಯೇ ಅವರನ್ನು ಸಂಶೋಧನಾ ಕ್ಷೇತ್ರ ಕೈಬೀಸಿ ಕರೆಯಿತು. ಮುಂದಿನ ಹನ್ನೆರಡು ವರ್ಷ ಕೈಗಾರಿಕಾ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇಂದು ಲಾಕ್ ಹೀಡ್ ಮಾರ್ಟಿನ್ ಎಂದು ಕರೆಯಲಾಗುವ ಲಾಕ್ಹೀಡ್ ಕಾರ್ಪೊರೇಶನ್ ಎಂಬ ಸಂಸ್ಥೆಗೆ 1980ರಲ್ಲಿ ಸಂಶೋಧಕನಾಗಿ ಸೇರಿದ ಆತ ಗಣಿತ, ಸಂಖ್ಯಾಶಾಸ್ತ್ರ, ಗಣಕವಿಜ್ಞಾನ, ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ಯಂತ್ರಗಳು, ತಂತ್ರಾಂಶ ಅಭಿವೃದ್ಧಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದರು.

             ಆಗ ಜಗತ್ತಿನ ವಿವಿಧ ಪ್ರದೇಶಗಳ ಕೃಷಿ ಸಂಪನ್ಮೂಲಗಳ ಮೌಲ್ಯಮಾಪನ ಮಾಡುವ ಉದ್ದೇಶದಿಂದ ನಾಸಾ ಲ್ಯಾಂಡ್ಸ್ಯಾಟ್ ಹೆಸರಿನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸುತ್ತಿದ್ದ ಕಾಲ. ಈ ಉಪಗ್ರಹಗಳು ಕಳುಹಿಸುವ ಭೂಮಿಯ ಅಗಾಧ ಪ್ರಮಾಣದ ಚಿತ್ರಗಳನ್ನು ಪರಿಶೀಲಿಸಿ ಅವುಗಳಲ್ಲಿದ್ದ ವರ್ಣ-ಛಾಯೆ ವಿನ್ಯಾಸಗಳ ವ್ಯತ್ಯಾಸಗಳನ್ನು ಗುರುತಿಸಿ ಆಯಾ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳನ್ನು ಊಹಿಸಿ ಯಾವ ಪ್ರದೇಶ ಯಾವ ಕೃಷಿಗೆ ಸೂಕ್ತ ಎಂಬುದರ ನಿಷ್ಕರ್ಷೆ ಮಾಡುವುದು ಮುಖ್ಯ ಕೆಲಸವಾಗಿತ್ತು. ಚಿತ್ರಗಳನ್ನು ವಿಶ್ಲೇಷಿಸುವ ಕೆಲಸದಲ್ಲಿ ತೊಡಗಿದ್ದ ರಾಜಾರಾಮರು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಕಂಡುಕೊಂಡರು. ನಿಖರವಾದ ಮಾಹಿತಿ ಪಡೆದು ಖಚಿತ ನಿರ್ಣಯಕ್ಕೆ ಬರಬೇಕಾದರೆ ಇವೆಲ್ಲವನ್ನೂ ಅರ್ಥಮಾಡಿಕೊಂಡು ತಾನೇತಾನಾಗಿ ಕೆಲಸ ಮಾಡಬಲ್ಲ ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ರೂಪಿಸುವ ಅಗತ್ಯವನ್ನು ಮನಗಂಡು ಸಂಬಂಧಪಟ್ಟವರಿಗೆ ಮನದಟ್ಟು ಮಾಡಿಸಿದರು. ತಮ್ಮ ಪ್ರತಿಪಾದನೆಗೆ ಪ್ರತಿಸ್ಪಂದನ ದೊರೆತಾಗ ಅವರು ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ಬರೆದರು. ಖಚಿತತೆ ಮತ್ತು ಕಡಿಮೆ ಸಂಪನ್ಮೂಲ ಬಳಕೆಯಿಂದ ಮನುಷ್ಯ ಸಹಜವಾದ ಹಸ್ತಚಾಲಿತ ದೋಷಗಳನ್ನು ನಿವಾರಿಸಿಕೊಂಡು ನಿಖರ ಲೆಕ್ಕಾಚಾರ ಒದಗಿಸುವ ಈ ತಂತ್ರಾಂಶಗಳ ಬಗ್ಗೆ ನಾಸಾ ನಿಬ್ಬೆರಗಾಗಿ ನೋಡಿತು.

                1983ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಇತ್ತ ಅವರು ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದುದು ಮಾತ್ರವಲ್ಲದೆ ಸ್ವತಂತ್ರ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದರು. ಆದರೂ ನಾಸಾ ಹಾಗೂ ಲಾಕ್ ಹೀಡ್ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಇವರ ಬೆನ್ನುಹತ್ತುವುದನ್ನು ಬಿಡಲಿಲ್ಲ. ಹಾಗಾಗಿ ನಾಸಾ ಮತ್ತು ರಕ್ಷಣಾ ಇಲಾಖೆಯ ಸಹಯೋಗದಲ್ಲಿ ಸ್ವಯಂಚಾಲಿತ ಯಂತ್ರಗಳ ನಿರ್ಮಾಣ(ರೋಬೋಟಿಕ್ಸ್) ಕುರಿತು ಹಲವು ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರವನ್ನು ನಡೆಸಬೇಕಾಇತು. ಕೃತಕ ಬುದ್ಧಿಮತ್ತೆ ಬಳಸುವುದೇ ಅಚ್ಚರಿದಾಯಕವಾಗಿದ್ದ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಯಾವ ಕೆಲಸ ಮಾಡಬೇಕೆಂಬುದನ್ನು ತಾವಾಗಿ ನಿರ್ಧರಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ, ಬಾಹ್ಯಾಕಾಶದಲ್ಲಿ ಬಹಳಷ್ಟು ಪ್ರಯೋಜನಕ್ಕೆ ಬರುವ ಈ ಸಂಶೋಧನೆ ವಿಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಮೈಲುಗಲ್ಲಾಯಿತು. ಈ ಸಂಬಂಧ ಅವರು ಬರೆದ ರೋಬೆಕ್ಸ್-85 ಹಾಗೂ ರೋಬೆಕ್ಸ್-87 ನಂತಹಾ ಸಂಶೋಧನಾ ಕೃತಿಗಳು ಇಂದಿಗೂ ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ಯಂತ್ರಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಆವಿಷ್ಕಾರಗಳಿಗೆ ಅಧಿಕೃತ ಆಕರ ಸಾಹಿತ್ಯಗಳಾಗಿವೆ.

              ಮುಂದೆ ರಾಜಾರಾಮ್ ಇದೇ ಪ್ರಕ್ರಿಯೆಯನ್ನು ಉದ್ದಿಮೆಗಳಲ್ಲೂ ಬಳಸಲು ಯತ್ನಿಸಿದರು. ಗಣಕ ಯಂತ್ರಗಳ ನಿರ್ಮಾಣ ಮತ್ತು ವಿನ್ಯಾಸ ಎರಡರಲ್ಲೂ ಒಂದು ಉದ್ದಿಮೆಗೆ ಸೀಮಿತವಾಗಿರುವಂತೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಲು ರೋಬೋಎಡಿಟ್ ಯಂತ್ರಾಂಶವನ್ನು ಸಿದ್ಧಪಡಿಸಿದರು. ಇದು ಯಂತ್ರವೊಂದನ್ನು ಸ್ವಯಂಚಾಲಿತ ಮಾತ್ರವಲ್ಲದೆ ತಾನು ಮುಂದೇನು ಮಾಡಬೇಕೆಂದು ಅರಿತು ಮಾಡುವಂತಹ ಬುದ್ಧಿವಂತಿಕೆಯನ್ನು ಹೊಂದಿದ್ದು ಮುಂದಿನ ಕೈಗಾರಿಕಾ ಕ್ರಾಂತಿಗೆ ಇದು ನಾಂದಿಯಾಯಿತು. ಅವರ ಮುಂದಿನ ಬಹುಮುಖ್ಯ ಸಂಶೋಧನೆ ಕೃತಕ ನರವ್ಯವಸ್ಥೆಯ ಶೋಧನೆ! ಇದಂತೂ ಹಲವು ಸಂಶೋಧಕರನ್ನು, ಉದ್ದಿಮೆದಾರರನ್ನು ಸೆಳೆಯಿತು. ಆದರೆ ಅಷ್ಟು ಹೊತ್ತಿಗೆ ಭವಿಷ್ಯಕ್ಕೆ ಸಾಗಿದ್ದ ರಾಜಾರಾಮರ ಬದುಕನ್ನು ಭಾರತದ ಭೂತಪೂರ್ವ ಇತಿಹಾಸ ಸೆಳೆಯಿತು. ಅವರು ಅಪಾರವಾದ ಕೆಲಸ, ಪ್ರಸಿದ್ಧಿ, ಧನರಾಶಿಯನ್ನು ತೊರೆದು ಜನ್ಮಭೂಮಿಗೆ ಮರಳಿದರು. ಅದಕ್ಕೆ ಕಾರಣರಾದವರು ವಾಮದೇವ ಶಾಸ್ತ್ರಿ ಅಥವಾ ಡೇವಿಡ್ ಫ್ರಾಲಿ. ಮುಂದೆ ನಡೆದದ್ದು ಭಾರತದ ಇತಿಹಾಸದಲ್ಲಿ ದಾಖಲಾಗಬೇಕಾದ ಮಹತ್ವದ ಅಂಶ.

              1995ರಲ್ಲಿ ರಾಜಾರಾಮರು ಡೇವಿಡ್ ಫ್ರಾಲಿಯವರೊಡಗೂಡಿ ಮೂರು ವರ್ಷಗಳ ಸತತ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ "ವೇದಿಕ್ ಆರ್ಯನ್ಸ್ & ದಿ ಒರಿಜಿನ್ಸ್ ಆಫ್ ಸಿವಿಲೈಝೇಷನ್" ಎನ್ನುವ, ಬ್ರಿಟಿಷರು ಹಾಗೂ ಅವರ ಅನುವರ್ತಿಗಳ "ಆರ್ಯ ಆಕ್ರಮಣ" ಎಂಬ ಭಾರತದ ಅಂತಃಸತ್ವವನ್ನೇ ನಾಶ ಮಾಡಿದ ಹುಸಿ ಸಿದ್ಧಾಂತವನ್ನು ಸಾಧಾರವಾಗಿ ಬುಡಮೇಲು ಮಾಡಿದ ಸಂಶೋಧನಾ ಕೃತಿಯನ್ನು ರಚಿಸಿದರು. ಪ್ರಾಚೀನ ಜಗತ್ತು ತನ್ನ ವಿಜ್ಞಾನವನ್ನು ಬ್ಯಾಬಿಲೋನ್ ಮತ್ತು ಮೆಸಪೊಟೊಮಿಯಾದಿಂದ ಎರವಲು ಪಡೆದಿದೆ ಎಂದು ಚಾಲ್ತಿಯಲ್ಲಿದ್ದ  ಮಾದರಿಯನ್ನು ಅವರು ಪ್ರಶ್ನಿಸಿದರು. ಮಾತ್ರವಲ್ಲ ಪಾಶ್ಚಿಮಾತ್ಯ ಇಂಡಾಲಜಿಯು ವಿದ್ವಾಂಸರಿಲ್ಲದೆ ಬಳಲುತ್ತಿದೆ. ಅಮೆರಿಕಾ ಮತ್ತು ಯೂರೋಪಿನಲ್ಲಿ ಸಂಸ್ಕೃತ ವಿದ್ವತ್ ಮಟ್ಟ ತುಂಬಾ ಕಡಿಮೆಯಿದ್ದು ಇವರೆಲ್ಲಾ ಹತ್ತೊಂಬನೇ ಶತಮಾನದಲ್ಲಿ ಕೆಲವರು ಮಾಡಿಟ್ಟ ಅನುವಾದಗಳನ್ನೇ ಉರು ಹೊಡೆಯುತ್ತಾ, ಮಾರ್ಕ್ಸ್ ವಾದ ಮತ್ತು ಪ್ರಾಯ್ಡ್ ನ ವಿಶ್ಲೇಷಣಾ ಮಾದರಿಗಳನ್ನೇ ಅನುಕರಿಸುತ್ತಿದ್ದಾರೆ ಎಂದು ಇಂಡಾಲಿಜಿಸ್ಟ್'ಗಳೆಂದು ಪ್ರಶಂಸೆ ಪಡೆಯುತ್ತಾ ಕೂತಿದ್ದ ಮೆಕಾಲೆ ತಲೆಗಳ ಹುಳುಕುಗಳನ್ನು ಜಗತ್ತಿಗೆ ತೋರಿಸಿದರು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ, ವ್ಯಾಟಿಕನ್ನಿನ ಪಾಪಲ್ ಕಛೇರಿಯಲ್ಲಿ ಕ್ರೈಸ್ತೇತರ ಮತಗಳಿಗೆ ಸಲಹೆಗಾರರಾಗಿದ್ದ ಖ್ಯಾತ ಇಂಡಾಲಜಿಸ್ಟ್ ಡಾ. ಕ್ಲಾಸ್ ಕ್ಲೋಸ್ಟರ್ಮೇಯರ್ "ಆರ್ಯ ಆಕ್ರಮಣದ ವಿಷಯದಲ್ಲಿ ಹಳೆಯ ಸಿದ್ಧಾಂತವು ಭಾಷಾ ಶಾಸ್ತ್ರದ ವಾದಗಳ ಮೇಲೆ ನಿಂತಿದ್ದರೆ ಹೊಸದಾಗಿ  ಪ್ರವೇಶಿಸಿದ ಸಿದ್ಧಾಂತ ಖಗೋಳ, ಭೂವೈಜ್ಞಾನಿಕ, ಗಣಿತ ಮತ್ತು ಪುರಾತತ್ವ ಪುರಾವೆಗಳನ್ನು ಒಳಗೊಂಡಿದೆ" ಎಂದು ರಾಜಾರಾಮರು ಹಾಗೂ ಸಂಗಡಿಗರ ಕಾರ್ಯವನ್ನು ಬಹು ಪ್ರಶಂಸಿಸುವ ಕಾರ್ಯವನ್ನು ತಮ್ಮ "ಆರ್ಯ ಆಕ್ರಮಣವಾದವನ್ನು ಪ್ರಶ್ನಿಸುವುದು ಹಾಗೂ ಭಾರತೀಯ ಇತಿಹಾಸವನ್ನು ಪರಿಷ್ಕರಿಸುವುದು" ಎಂಬ ಲೇಖನದಲ್ಲಿ(1998) ಮಾಡಿದ್ದಾರೆ.

                  ಪ್ರಸಿದ್ಧ ಗಣಿತಜ್ಞರೂ, ಆಳವಾಗಿ ಸಂಶೋಧನೆ ಮಾಡುವವರೂ ಆಗಿದ್ದರೂ ರಾಜಾರಾಮರ ಸಂಶೋಧನೆ ಸ್ಥಾಪಿತ ಇಂಡಾಲಜಿಸ್ಟ್'ಗಳನ್ನು ಕೆರಳಿಸಿತು. ಇದಕ್ಕೆ ಕಾರಣಗಳು ಎರಡು; ಒಂದು ಆತ ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯಶೋಧನೆಗೆ ಮಾತ್ರ ಮಹತ್ವ ಕೊಟ್ಟಿದ್ದು; ಇನ್ನೊಂದು ಮತಾಂತರಿಗಳನ್ನು ಖಂಡತುಂಡವಾಗಿ ವಿರೋಧಿಸಿ, ಅವರ ಕುಕೃತ್ಯವನ್ನು ಬಯಲು ಮಾಡುತ್ತಿದ್ದುದು ಮಾತ್ರವಲ್ಲದೆ ಸ್ಥಾಪಿತ ಇಂಡಾಲಜಿಯು ಹೇಗೆ ಮತಾಂತರ ಉದ್ಯಮಕ್ಕೆ ಪೂರಕವಾಗಿ ಹೆಣೆಯಲ್ಪಟ್ಟ ಸುಳ್ಳುಗಳ ಸಂತೆಯಾಗಿದೆ ಎಂದು ಸಾಕ್ಷಿ ಸಮೇತ ಎತ್ತಿ ತೋರಿಸಿದ್ದು! "ದ ವಿನ್ಸಿ ಕೋಡ್" ಬರುವುದಕ್ಕೆ ಎಷ್ಟೋ ವರ್ಷ ಮೊದಲೇ ಕ್ರೈಸ್ತ ಮತಾಂತರಿಗಳ ಸುಳ್ಳುಗಳನ್ನೆಲ್ಲಾ ಕಿತ್ತೆಸೆದು ಭಾರತದ ನಿಜ ಇತಿಹಾಸವನ್ನು ಜಗತ್ತಿಗೆ ತೋರಿಸಲು ರಾಮ ಸ್ವರೂಪ್, ಸೀತಾರಾಮ್ ಗೋಯಲ್, ನವರತ್ನ ರಾಜಾರಾಮ್, ಡೇವಿಡ್ ಫ್ರಾಲಿ ಮುಂತಾದ ಬೌದ್ಧಿಕ ಪ್ರತಿಭೆಗಳು ಅವರೊಂದಿಗೆ ಮುಖಾಮುಖಿ ಸಮರ ನಡೆಸಿದ್ದರು. ಹೆಚ್ಚು ಹೆಚ್ಚು ಪುರಾತತ್ತ್ವ ಸಂಶೋಧನೆಗಳಿಂದ ಕ್ರೈಸ್ತಮತದ ಮೂಲ ಹಾಗೂ ಅಸ್ತಿತ್ವವಾದಕ್ಕೆ ಬರಬಹುದಾದ ಬಿಕ್ಕಟ್ಟನ್ನು ರಾಜಾರಾಮರು 1997ರಲ್ಲೇ ವಿಶ್ಲೇಷಿಸಿದ್ದರು. ಇಂತಹಾ ನಿಖರ ಸಂಶೋಧನೆ, ಸತ್ಯಪಥದಿಂದಾಗಿಯೇ ಆತ ಶೈಕ್ಷಣಿಕ ವಲಯಗಳಿಂದಲೂ ಹೊರಗೆ ಜಾಜ್ವಲ್ಯಮಾನ ನಕ್ಷತ್ರದಂತೆ ಹೊಳೆದರು. ಅಲ್ಲದೆ ಅವರಲ್ಲಿನ ಗಣಿತಜ್ಞ ಹಾಗೂ ವಸ್ತುವಿಜ್ಞಾನಿ, ಆಗಿದ್ದ ಭಾಷಾಶಾಸ್ತ್ರ ರಚನೆಗಳನ್ನು ಹುಸಿವಿಜ್ಞಾನವೆಂದೇ ಪರಿಗಣಿಸುತ್ತಿದ್ದ.

                2000ನೇ ಇಸವಿಯಲ್ಲಿ ಪ್ರಾಚೀನ ಲಿಪಿ ಶಾಸ್ತ್ರಜ್ಞರೂ, ವೈದಿಕ ವಿದ್ವಾಂಸರೂ ಆಗಿದ್ದ ನಟವರ್ ಝಾರೊಡನೆ ಸೇರಿ ಸಿಂಧೂ ಲಿಪಿಯಲ್ಲಿನ ಹಲವು ಸಂಕೇತಾಕ್ಷರಗಳ ಗೂಢವನ್ನು ಭೇದಿಸುವ "ಡಿ ಡೆಸಿಫೆರೆಡ್ ಇಂಡಸ್ ಸ್ಕ್ರಿಪ್ಟ್: ಮೆಥಡಾಲಜಿ, ರೀಡಿಂಗ್ಸ್, ಇಂಟರ್ಪ್ರೆಟೇಶನ್" ಎನ್ನುವ ಸಂಶೋಧನಾತ್ಮಕ ಗ್ರಂಥವನ್ನು ಬರೆಯುವ ಮೂಲಕ ಹರಪ್ಪನ್ನರದು ವೈದಿಕ ಧಾರೆಯೇ ಎಂದು ಸಿದ್ಧಪಡಿಸಿದರು. ಅವರ ಸರಸ್ವತಿ ನದಿಯ ಬಗೆಗಿನ "ಸರಸ್ವತಿ ನದಿ ಹಾಗೂ ವೇದಕಾಲೀನ ನಾಗರಿಕತೆ" ಎನ್ನುವ ಆಂಗ್ಲ ಭಾಷೆಯಲ್ಲಿನ ಗ್ರಂಥ ಸರಸಿರೆಯ ಹುಟ್ಟು-ಹರಿವು-ಸಾವುಗಳನ್ನು, ವೇದಕಾಲೀನ ನಾಗರಿಕತೆಯ ಕಡೆಗೆ ಅದರ ಪ್ರಭಾವವನ್ನು ಸಮೂಲಾಗ್ರವಾಗಿ ವಿವರಿಸಿದೆ. "ಇತಿಹಾಸದ ರಾಜಕೀಯ", "ಪ್ರೊಫೈಲ್ಸ್ ಇನ್ ಡಿಸೆಪ್ಶನ್", "ಗುಪ್ತ ಪದರುಗಳು: ಭಾರತೀಯ ಸಂಸ್ಕೃತಿಯ 10000 ವರ್ಷಗಳ ಅನ್ವೇಷಣೆ" ಅವರ ಇನ್ನುಳಿದ ಪ್ರಮುಖ ಗ್ರಂಥಗಳು. ಕೃಷ್ಣನ ಬಗೆಗಿನ ಅವರ ವಿಚಾರವನ್ನು ಗಮನಿಸುವಂತಹದ್ದು; ಪುರಾಣಗಳನ್ನು ಮೀರಿ ನೋಡಿದರೆ ಕೃಷ್ಣನ ನೈಜ ವ್ಯಕ್ತಿ ಚಿತ್ರಣ ದೊರಕೀತು. ಆತನೊಬ್ಬ ಪ್ರಾಯೋಗಿಕ ತತ್ತ್ವಜ್ಞಾನಿ. ತನ್ನ ಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಮೀರಿ ನಿಂತು ಕ್ರಿಯಾಧಾರಿತ  ಸಾಂಖ್ಯ ಸಿದ್ಧಾಂತದತ್ತ ಸರಿದು ಕರ್ಮಯೋಗವನ್ನು ಪ್ರತಿಪಾದಿಸಿದ ಶ್ರೇಷ್ಠ ಭಗವದ್ಗೀತೆಯನ್ನು ಕೊಟ್ಟ ಶ್ರೇಷ್ಠ ಮಾನವನಾತ ಎಂದಿದ್ದಾರೆ ರಾಜಾರಾಮ್.

                 ವಿಟ್ಜೆಲ್, ಸ್ಟೀವ್ ಫಾರ್ಮರ್ ಹಾಗೂ ಅವರ ಚೇಲಾಗಳೆಲ್ಲಾ ಸೇರಿಕೊಂಡು ಮಾಧ್ಯಮಗಳಲ್ಲಿ ತಮಗಿದ್ದ ಪ್ರಭಾವವನ್ನು ಬಳಸಿಕೊಂಡು ರಾಜಾರಾಮರನ್ನು ಅಪಹಾಸ್ಯ ಮಾಡುತ್ತಾ ತೇಜೋವಧೆ ನಡೆಸಿದರೂ ಆತ ಧೃತಿಗೆಡಲಿಲ್ಲ. ಆತ ವಂಶವಾಹಿ ಆಧಾರಿತವಾಗಿ ವೈದಿಕ ನಾಗರಿಕತೆ ಮೂಲವನ್ನು ದೃಢೀಕರಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಈ ಸಂಶೋಧನೆಯಿಂದ ಆರ್ಯರು ಬೇರೆಲ್ಲಿಂದಲೂ ಬಂದವರಲ್ಲವೆಂದೂ ಹತ್ತಾರು ಸಾವಿರ ವರ್ಷಗಳಿಂದಲೂ ಇಲ್ಲಿಯೇ ನೆಲೆಸಿರುವ ಜನಾಂಗವೆಂದೂ, ಆರ್ಯವೆಂದರೆ ಶ್ರೇಷ್ಠ ಎಂಬ ಅರ್ಥವೇ ಹೊರತು ಜನಾಂಗಸೂಚಕವಲ್ಲವೆಂದೂ, ದ್ರಾವಿಡವು ಕೇವಲ ಪ್ರದೇಶಸೂಚಕವೆಂದು ದೃಢಪಡಿಸಿದರು. ಮುಂದಿನ ಅವರ ಸಂಶೋಧನ ಪ್ರಕ್ರಿಯೆ ನವೀಕರಿಸಬಹುದಾದ ಶಕ್ತಿಗಳ ತಂತ್ರಜ್ಞಾನದತ್ತ ತಿರುಗಿತು. ಯೋಜನಾ ಆಯೋಗದಿಂದ ಹೊರಗಿರುವ ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುತ್ತದೆ. ಭಾರತದ ಯೋಜನಾ ಆಯೋಗ 1960ರ ದಶಕದ ಸೋವಿಯತ್ ಯುಗದ ಮನಃಸ್ಥಿತಿಯಲ್ಲೇ ಇಂದಿಗೂ ಉಳಿದುಕೊಂಡಿರುವುದು ಇದಕ್ಕೆ ಕಾರಣ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ನರೇಂದ್ರ ಮೋದಿ ನೇತೃತ್ವದ ಭಾಜಪಾ ಸರಕಾರ ಯೋಜನಾ ಆಯೋಗವೆಂಬ ಕೆಲಸಕ್ಕೆ ಬಾರದ ಬಿಳಿಯಾಣೆಯನ್ನು ಕಿತ್ತೆಸೆದು, ನೀತಿ ಆಯೋಗವನ್ನು ಆರಂಭಿಸಿದ್ದು ನೆನಪಿರಬಹುದು. ಸೌರ ವಿದ್ಯುತ್ ಸ್ಥಾವರಗಳನ್ನು ವಿಕೇಂದ್ರೀಕೃತಗೊಳಿಸಿ ಜಲವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಗಳ ಜೊತೆ ಸಂಯೋಜಿಸಬೇಕು. ಜಲವಿದ್ಯುತ್ ಉತ್ಪಾದನೆಗಾಗಿರುವ ಜಲಾಶಯಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದರಿಂದ ಕಡಿಮೆ ಬಂಡವಾಳದಲ್ಲಿ ಹೆಚ್ಚು ಸೌರಶಕ್ತಿಯನ್ನು ಪಡೆಯುವ ಬಗೆಯನ್ನು ಆತ ಪ್ರತಿಪಾದಿಸಿದ್ದರು.

               ಶೈಕ್ಷಣಿಕವಾಗಿ ನಮ್ಮ ದೇಶದ ಇತಿಹಾಸವನ್ನು ತಿರುಚಿದ ಪಠ್ಯಗಳನ್ನು ಓದುವ ನಮ್ಮ ಪೀಳಿಗೆಗಳ ಹಣೆಯಬರಹ ಬದಲಾಗಿಲ್ಲ ನಿಜ. ಆದರೆ ನಮ್ಮ ನಿಜವಾದ ಇತಿಹಾಸವನ್ನು ಅರಿಯುವಂತೆ ಮಾಡಿದ ಕೆಲವೇ ಕೆಲವು ಮಹಾತ್ಮರಲ್ಲಿ ರಾಜಾರಾಮ್ ಒಬ್ಬರು. ತನಗಿದ್ದ ದುಬಾರಿ ವೇತನದ ಕೆಲಸ, ಸ್ಥಾನಮಾನಗಳನ್ನು ಬದಿಗಿಟ್ಟು ದೇಶದ ನಿಜವಾದ ಇತಿಹಾಸವನ್ನು ಸಂಶೋಧಿಸಿ ದೇಶೀಯರ ಸ್ವಾಭಿಮಾನವನ್ನು ಉದ್ದೀಪನಗೊಳಿಸುವ ಮಹತ್ಕಾರ್ಯವನ್ನು ದೇಶ ವಿರೋಧಿಗಳಿಂದ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂದು, ಅವಮಾನವನ್ನು ನುಂಗಿಕೊಂಡು ಮಾಡಿದ ಆತ ನಿಜಾರ್ಥದಲ್ಲಿ ಈ ದೇಶದ ನವರತ್ನ. ಜೀವಿತವಿಡೀ ಆತ ನಡೆಸಿದ್ದು ಸಂಶೋಧನೆ; ಮನುಕುಲದ ಉದ್ಧಾರಕ್ಕಾಗಿ; ತನ್ನ ದೇಶದ ಇತಿಹಾಸವನ್ನು ಎದೆಯುಬ್ಬಿಸಿಕೊಂಡು ಹೇಳುವ ಅವಕಾಶ ಭಾರತೀಯನಿಗೆ ಒದಗಿಸಲಿಕ್ಕಾಗಿ. ಅಂತಹಾ ಪುಣ್ಯಜೀವಿಯನ್ನು ಅದು ಮರೆಯಾದ ಸಮಯದಲ್ಲಾದರೂ ನೆನಪಿಸಿಕೊಳ್ಳುವುದು ಆತನ ಕಾರ್ಯಕ್ಕೆ ಸಲ್ಲಿಸಬಹುದಾದ ಅತ್ಯಲ್ಪ ಕೃತಜ್ಞತೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ