ಶ್ರಮಿಕ ಭಾರತವನ್ನು ಒಗ್ಗೂಡಿಸಿದ ಸಾಧಕ ದತ್ತೋಪಂಥ ಠೇಂಗಡಿ
ಅದು ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಮಟ್ಟದ ಪ್ರಪ್ರಥಮ ಕಾರ್ಯಾಗಾರ. ಆಗ ದತ್ತೋಪಂಥ ಠೇಂಗಡಿಯವರು ಅಂದ ಮಾತುಗಳು ಹಿಂದೂ ಎಂಬ ಜೀವನ ಪದ್ದತಿ ಹೇಗೆ ತನ್ನನ್ನು ಕಾಲ ಕಾಲಕ್ಕೆ ಪಕ್ವಗೊಳಿಸುತ್ತಾ ಸಾಗುತ್ತದೆ ಎನ್ನುವುದಕ್ಕೆ ನಿದರ್ಶನವಾಗಿದೆ. "ಒಂದೇ ಕಾಲದಲ್ಲಿ ವಿವಿಧ ಪರಿಸ್ಥಿತಿಗಳಲ್ಲಿರುವ ವಿಭಿನ್ನ ಸಮಾಜಗಳಿಗೆ ಒಂದೇ ವಿಚಾರಧಾರೆ ಇರುವುದಿಲ್ಲ. ಹಾಗೆಯೇ ಒಂದು ಸಮಾಜಕ್ಕೆ ಒಂದೇ ವಿಚಾರ ವಿಭಿನ್ನ ಕಾಲಘಟ್ಟಗಳಲ್ಲಿ ಸೂಕ್ತವಾಗಿ ಇರಬೇಕೆಂದೇನೂ ಇಲ್ಲ. ಒಂದು ಸಿದ್ಧಾಂತವು ಆ ಕಾಲದಲ್ಲಿ ಒದಗಿದ ಜ್ಞಾನ ಸಮುಚ್ಛಯದಿಂದ ಮಾತ್ರವೇ ಒಂದು ಆಕಾರವನ್ನು ಪಡೆದುಕೊಳ್ಳುವುದರಿಂದ ಹಾಗೂ ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುವುದರಿಂದ ಒಂದೇ ಚಿಂತನೆಯೂ ಎಲ್ಲಾ ಕಾಯಿಲೆಗಳಿಗೆ ರಾಮಬಾಣವಾಗಲಾರದು" ಎನ್ನುತ್ತಾರೆ ಠೇಂಗಡಿ. ಎಷ್ಟು ಶ್ರೇಷ್ಠ ಚಿಂತನೆ. ಹಾಗೆಂದು ಇದೇನೂ ಹೊಸ ಚಿಂತನೆಯೆಂದೇನೂ ಅಲ್ಲ. ವೇದಗಳು ಘೋಷಿಸಿದ ಚಿಂತನೆಯೇ ಇದು. ಕಾಲಕಾಲಕ್ಕೆ ದೃಷ್ಟಾರರು ಕಂಡುಕೊಂಡ ಮಂತ್ರವೇ ಇದು. ವಿಶೇಷ ಎಂದರೆ ಆ ಚಿಂತನೆ ಈ ಕಾಲದಲ್ಲೂ ಪ್ರವಹಿಸಿದ್ದು. ಅದಕ್ಕೇ ವೇದವು ಅಪೌರುಷೇಯವಾದದ್ದು. ಕೃಣ್ವಂತೋ ವಿಶ್ವಮಾರ್ಯಮ್ ಎಂದು ಸದಾ ಕಾರ್ಯಾಚರಿಸುವ ಹಿಂದೂ ಎಂಬ ಜೀವನ ಪದ್ದತಿ ನಿಂತ ನೀರಾಗದೇ ಸನಾತನ ಧರ್ಮವಾದದ್ದು. ಇಂದು ಬಹುತ್ವ ನಾಶವಾಗುತ್ತಿದೆ ಎಂದು ಬೊಬ್ಬಿರಿವ ಪ್ರಭೃತಿಗಳೆಲ್ಲಾ ಅಳವಡಿಸಿಕೊಳ್ಳಬೇಕಾದ ಚಿಂತನೆ ಇದು. ಎಲ್ಲದಕ್ಕೂ ಕೆಂಪು ಬಳಿದು ರಕ್ತ ಹರಿಸಲು ಹೊರಟ ರಕ್ಕಸರಿಗೆ ಬಹುತ್ವದ ನಿಜವಾದ ಅರ್ಥ ಏನು ತಿಳಿಸುವ ಮಾತುಗಳಿವು. ಈ ಧ್ಯೇಯ ಠೇಂಗಡಿಯವರ ಮೂಲಕ ಮಜ್ದೂರ್ ಸಂಘ, ಸ್ವದೇಶೀ ಜಾಗರಣ ಮಂಚ್ ಭಾರತೀಯ ಕಿಸಾನ್ ಸಂಘಗಳಲ್ಲೂ ಪ್ರವಹಿಸಿತು, ಜನಸಂಘಕ್ಕೂ ಹೊಕ್ಕಿತು, ಸಂಸತ್ತಿನೊಳಗೂ ವಿರಾಜಮಾನವಾಯಿತು, ಸಮಾಜದ ನಡುವೆಯೂ ಪ್ರತಿಷ್ಠಿತವಾಯಿತು.
ಹೋರಾಟವು ಅನ್ಯಾಯದ ವಿರುದ್ಧವಾಗಿರಬೇಕೇ ಹೊರತು ಯಾವುದೇ ವರ್ಗದ ವಿರುದ್ಧವಲ್ಲ ಎನ್ನುವುದನ್ನು ಆತ ಸ್ಪಷ್ಟಪಡಿಸಿದ್ದರು. ಜನರನ್ನು ಜಾಗೃತಿಗೊಳಿಸುವುದು ಹಾಗೂ ಸಂಘಟನೆಯನ್ನು ಬಲಗೊಳಿಸುವುದರಿಂದ ಬದಲಾವಣೆಯನ್ನು ತರಬಹುದೇ ಹೊರತು ಬರಿಯ ಹರತಾಳಗಳಿಂದಲ್ಲ ಎನ್ನುವುದನ್ನು ಅವರು ಮಾಡಿ ತೋರಿಸಿದರು. "ಜಗತ್ತಿನ ಕಾರ್ಮಿಕರೇ ಒಂದುಗೂಡಿ" ಎನ್ನುವುದನ್ನು ಆತ "ಕಾರ್ಮಿಕರೇ ಜಗತ್ತನ್ನು ಒಗ್ಗೂಡಿಸಿ" ಅಂತ ಬದಲಾಯಿಸಿದರು. ಹಾಗಾಗಿಯೇ ಕಾರ್ಮಿಕ ಚಳುವಳಿಗಳಲ್ಲಿ ಅಂದಿನವರೆಗೆ ಕಾಣದಿದ್ದ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಬಿಎಂಎಸ್ ಮೂಲಕ ಕೇಳಿ ಬರಲಾರಂಭಿಸಿತು. ಅಂದಿನವರೆಗೆ ಸ್ಪೂರ್ತಿಗಾಗಿ ರಷ್ಯಾ, ಚೀನಾಗಳತ್ತಲೇ ನೋಡುತ್ತಲಿದ್ದ ಕಾರ್ಮಿಕ ಚಳುವಳಿ ಎಡಪಂಥೀಯವೆಂಬ ಏಕ ವಿಚಾರಧಾರೆಯಿಂದ ಹೊರಳಿ ದೇಶೀ ಸೊಗಡಿನತ್ತ ಸಾಗಿತು. ಧ್ವಜದ ಬಣ್ಣ ಕೆಂಪಿನಿಂದ ಕೇಸರಿಯಾಗಿ ಬದಲಾಯಿತು. ಅದರ ಧ್ಯೇಯವು ಶ್ರಮಿಕರ ರಾಷ್ಟ್ರೀಯಕರಣ, ರಾಷ್ಟ್ರದ ಔದ್ಯೋಗೀಕರಣ, ಉದ್ಯೋಗಗಳ ಶ್ರಮಿಕೀಕರಣವೆಂಬ ಬಿಎಂಎಸ್ ಧ್ಯೇಯವಾಗಿ ಪರಿವರ್ತಿತವಾಯಿತು.
ಠೇಂಗಡಿ ಅನಾಸಕ್ತ ಯೋಗದ ಸಾಕಾರ ಮೂರ್ತಿ. 1975ರಲ್ಲಿ ಜಯಪ್ರಕಾಶ ನಾರಾಯಣರಿಂದ ಸ್ಥಾಪಿಸಲ್ಪಟ್ಟ ಲೋಕಸಂಘರ್ಷ ಸಮಿತಿಯ ನೇತೃತ್ವ ವಹಿಸಿಕೊಂಡ ಠೇಂಗಡಿ ಇಂದಿರಾಗಾಂಧಿ ದೇಶದ ಮೇಲೆ ವಿಧಿಸಿದ್ದ ತುರ್ತುಪರಿಸ್ಥಿತಿ ಹಾಗೂ ಆಕೆಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟವನ್ನು ರೂಪಿಸಿದವರು. ಆಕೆ ಚುನಾವಣೆಯಲ್ಲಿ ಸೋತು ಜನತಾ ಸರಕಾರ ಅಧಿಕಾರಕ್ಕೆ ಬಂದಾಗ, ಅವರಾಗಿಯೇ ಜನಸಂಘವನ್ನು ಜನತಾ ಸರಕಾರದ ಜೊತೆ ಜೋಡಿಸಿದ್ದರೂ ಮೊರಾರ್ಜಿ ಸಂಪುಟದಲ್ಲಿ ಸಿಕ್ಕ ಮಂತ್ರಿ ಪದವಿಯನ್ನು ನಿರಾಕರಿಸಿದರು. ಮಾತ್ರವಲ್ಲ ರಾಜಕೀಯದಿಂದಲೇ ಹೊರಬಂದುಬಿಟ್ಟರು. ಮುಂದೆ ತಮಗೆ ಪದ್ಮವಿಭೂಷಣದಂತಹಾ ಸಮ್ಮಾನ ಘೋಷಣೆಯಾದಾಗ ಅದನ್ನೂ ನಿರಾಕರಿಸಿದರು. ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿಗಳನ್ನು, ಪ್ರಶಸ್ತಿಗಾಗಿ ಆಳುವ ವರ್ಗದ ಕೈ, ಕಾಲು ಹಿಡಿಯುವ ವ್ಯಕ್ತಿಗಳನ್ನೇ ಕಾಣುತ್ತಿರುವ ನಮ್ಮನ್ನು ಅಚ್ಚರಿಗೊಳಿಸುವ ಸಂಗತಿಯಿದು!
ಇಂದಿನ ಕೇಂದ್ರ ಸರಕಾರದ ನೀತಿಗಳಾದ ಸಾರ್ವತ್ರಿಕ ಆರೋಗ್ಯ ಸೇವೆ, ಸರ್ವರಿಗೂ ವಿದ್ಯುತ್ ಆದಿಯಾಗಿ ಇಂಧನಗಳ ಲಭ್ಯತೆ ಎಲ್ಲವೂ ಠೇಂಗಡಿಯವರ ಮೂಲ ಪರಿಕಲ್ಪನೆಗಳೇ. ಮೋದಿ ಸರಕಾರದ ಹೂಡಿಕೆಯ ವಿಧಾನಗಳು ಹಾಗೂ ನೀತಿ ನಿಯಮಗಳು ಹಾಗೂ ಪಿಎಸ್ಯು(PSU)ಗಳನ್ನು ಮಾರಾಟ ಮಾಡುವ ಬದಲು ಷೇರು ಮಾರುಕಟ್ಟೆಗಳಲ್ಲಿ ಪ್ರವೇಶ ಒದಗಿಸಿರುವುದು ಇವು ಠೇಂಗಡಿಯವರು ಪ್ರತಿಪಾದಿಸಿದ ನೀತಿಗಳೇ. ಈ ನೀತಿಯನ್ನು ವಾಜಪೇಯಿ ಸರಕಾರದ ವಿತ್ತ ಸಚಿವ ಯಶ್ವಂತ್ ಸಿನ್ಹಾ ಅನುಸರಿಸದೇ ಇದ್ದಾಗ ಆತ ತಮ್ಮದೇ ಸ್ನೇಹಿತರು, ಸಮಾನ ಮನಸ್ಕರು, ಸಿದ್ಧಾಂತವಾದಿಗಳಿದ್ದ ಸರಕಾರದ ವಿರುದ್ಧವೇ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಯನ್ನೂ ಕೈಗೊಂಡಿದ್ದರು. ಇದು ಒಂದು ಧ್ಯೇಯಕ್ಕಾಗಿ, ತತ್ತ್ವಕ್ಕಾಗಿ ಅವರು ಬಡಿದಾಡುತ್ತಿದ್ದ ರೀತಿ. ಈಗಿನ ಜೀ ಹುಜೂರ್ ಸಂಸ್ಕೃತಿಯ, ಹಣಕ್ಕಾಗಿಯೇ ಕೆಲಸ ಮಾಡುವ ರಾಜಕಾರಣಿಗಳು ಠೇಂಗಡಿಯವರಿಂದ ಕಲಿಯಬೇಕಾದುದು ಸಾಕಷ್ಟಿದೆ!
ಡಾಕ್ಟರ್ ಹೆಡಗೇವಾರರೊಂದಿಗೆ ಅನುಶೀಲನ ಸಮಿತಿಯಲ್ಲಿದ್ದ ನರೇಂದ್ರ ಭಟ್ಟಾಚಾರ್ಯ ಬಾಲಾಸೋರ್ ಕದನದಲ್ಲಿ ಬಾಘಾ ಜತೀನನ ವೀರ ಮರಣದ ಬಳಿಕ ಮಾರುವೇಷದಲ್ಲಿ ಎಂ.ಎನ್ ರಾಯ್ ಆಗಿ ರಷ್ಯಾ ಪ್ರವೇಶಿಸಿ ತಾಷ್ಕೆಂಟಿನಲ್ಲಿ ಭಾರತೀಯ ಕಮ್ಯೂನಿಷ್ಟ್ ಪಕ್ಷವನ್ನು ಆರಂಭಿಸಿದ. ಮುಂದೆ ಅದೇ ಮಾಸ್ಕೋ ಸಿದ್ಧಾಂತವನ್ನು ಭಾರತಕ್ಕೂ ತಂದ. ಅದರ ಮೂಲಕ ಬೆಳೆದು ಬಂದ ಕಾರ್ಮಿಕ ಸಂಘಟನೆಗಳಿಗೆ ತಮಗಾಗದ ಪ್ರತಿಯೊಂದರ ವಿರುದ್ಧವೂ ಹರತಾಳ, ಹೊಡಿ-ಬಡಿ, ಕೊಚ್ಚು-ಕೊಲ್ಲು ಇವೇ ಧ್ಯೇಯವಾಗಿ ಬೆಳೆಯಿತು. ಅದೇ ಹೆಡಗೇವಾರರು ಚತುರ್ವಿಧ ಪುರುಷಾರ್ಥಗಳನ್ನು ಆಧರಿಸಿದ ಹಿಂದೂ ಜೀವನ ಪದ್ದತಿಯ ನೆಲೆಗಟ್ಟಿನಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಬೆಳೆದು ಬಂದ ಠೇಂಗಡಿಯವರು ಆರಂಭಿಸಿದ ಕಾರ್ಮಿಕ ಸಂಘಟನೆ ಸಾಂಪ್ರದಾಯಿಕ ಹಿಂದೂ ವಿಶ್ವದೃಷ್ಟಿಕೋನವನ್ನು ಅಪ್ಪಿಕೊಂಡು ತೀವ್ರ ವಿರೋಧದ ನಡುವೆಯೂ ಅಪಾರ ಕರ್ತೃತ್ವ ಶಕ್ತಿ ಹಾಗೂ ದೂರದೃಷ್ಟಿಯ ಫಲದಿಂದ ಬೆಳೆದು ಹೆಮ್ಮರವಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ