ಪುಟಗಳು

ಶನಿವಾರ, ಡಿಸೆಂಬರ್ 28, 2019

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು


           ಅರ್ಧ ಸಹಸ್ರಮಾನದ ಹೋರಾಟಕ್ಕೆ ಫಲ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಇತಿಹಾಸ ವಿಧಿಸಿದ್ದ ವನವಾಸ ಮುಗಿದಿದೆ! ಭಾರತದ ಅಸ್ಮಿತೆಯ ಕುರುಹು ಮೇಲೆದ್ದಿತು. ಪ್ರತಿಯೊಬ್ಬ ಭಾರತೀಯನೂ ಭಾವುಕನಾಗುವ, ಧನ್ಯನಾಗುವ ಕ್ಷಣವಿದು. ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದ ಬರೋಬ್ಬರಿ 76 ಯುದ್ಧಗಳು ಇಂದು ಸಾರ್ಥಕವಾದವು. ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ಬಳಿಕ ನಡೆದ ಕರಸೇವಕರ ಬಲಿದಾನ, 134 ವರ್ಷಗಳ ಕಾನೂನು ಯುದ್ಧ ಎಲ್ಲದಕ್ಕೂ ಧನ್ಯತೆಯನ್ನು ಒದಗಿಸುವ ಸುಸಂಧಿ ಪ್ರಾಪ್ತವಾಯಿತು. ರಾಮೋ ವಿಗ್ರಹವಾನ್ ಧರ್ಮಃ ಎಂಬ ತಮ್ಮ ದೇವರ ಧರ್ಮದ ನಡೆಯನ್ನೇ ಉಸಿರಾಗಿಸಿಕೊಂಡ ಅವನ ಭಕ್ತರು ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಜೀವದ ಹಂಗು ತೊರೆದು ನಡೆಸಿದ ಹೋರಾಟಕ್ಕೆ ಪೂರ್ಣಫಲ ದೊರಕಿತು.

                   ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಕನ್ನಿಂಹ್ ಹ್ಯಾಮ್ ಲಖ್ನೋ ಗೆಜೆಟಿಯರ್'ನಲ್ಲಿ ಇದನ್ನು ದಾಖಲಿಸಿದ್ದಾನೆ. ಇತಿಹಾಸಕಾರ ಹೆನ್ಸಿಲಿಯನ್ ಬಾರಾಬಂಕಿಗೆಜೆಟಿಯರ್'ನಲ್ಲಿ "ಜಲಾಲ್ ಷಾ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ" ಎಂದು ಬರೆದಿದ್ದಾನೆ.

                 ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ’ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ.

                 ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ಈ ಎಲ್ಲಾ ದಾಖಲೆಗಳ ಜೊತೆಗೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳ ಮಾಹಿತಿಯನ್ನೂ ಗಮನದಲ್ಲಿಟ್ಟುಕೊಂಡು ರಾಮಜನ್ಮಭೂಮಿಯನ್ನು ಹಿಂದೂಗಳ ಸುಪರ್ದಿಗೆ ಒಪ್ಪಿಸಿ, ರಾಮಜನ್ಮಸ್ಥಾನದಲ್ಲೇ ಮಂದಿರವನ್ನು ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದೆ. ಈ ರೀತಿ ಆದೇಶ ನೀಡುವ ಮೂಲಕ ಭಾರತದ ನ್ಯಾಯಾಂಗ ತನಗಿನ್ನೂ ಸಂಪೂರ್ಣವಾಗಿ ಸೆಕ್ಯುಲರ್ ರೋಗ ಬಡಿದಿಲ್ಲ; ತಾನು ನಿಷ್ಪಕ್ಷಪಾತವಾಗಿ ತೀರ್ಪು ನೀಡಬಲ್ಲೆ ಎಂದು ನಿರೂಪಿಸಿದೆ. ಅದೇನೇ ಇರಲಿ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನಕ್ಕೆ ಇಂದು ಸಾರ್ಥಕತೆ ಒದಗಿದೆ. ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಾಮರಥ ಯಾತ್ರೆ ನಿಜಾರ್ಥದಲ್ಲಿ ಇಂದು ಸಮಾಪನಗೊಂಡಿದೆ. ಆದರೆ ಇದು ಅಂತ್ಯವಲ್ಲ; ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ರಾಮಮಂದಿರ ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಹೌದು...ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...!

               ರಾಮನ ಜೀವನದ ಪ್ರತಿಯೊಂದು ಘಟನೆಯ ಅಂತಿಮ ಘಟ್ಟದಲ್ಲಿ ಸಿಕ್ಕಿದ್ದು ದುಃಖವೇ. ಪಟ್ಟಾಭಿಷೇಕದ ಸಮಯದಲ್ಲಿ ವನಗಮನದ ದುಃಖ; ಮುಂದೆ ಭರತನ ಭೇಟಿಯ ಸಮಯದಲ್ಲಿ ಪಿತೃವಿಯೋಗದ ದಾರುಣ ವಾರ್ತೆ; ಎಲ್ಲವೂ ಸರಿಯಾಯಿತು ಎನ್ನುತ್ತಿರುವಾಗಲೇ ಸೀತಾಪಹಾರ, ರಾವಣಾಖ್ಯರ ವಧೆಯ ಬಳಿಕ ರಾಮರಾಜ್ಯವಾಗಿ ಸುಭೀಕ್ಷೆಯಲ್ಲಿದ್ದಾಗ ಅಗಸನೊಬ್ಬನ ಆಡಬಾರದ ಮಾತು, ತನ್ಮೂಲಕ ಸೀತಾ ಪರಿತ್ಯಾಗ; ಯಾಗದ ಪೂರ್ಣಾಹುತಿಗೆ ಸಮೀಪಿಸುತ್ತಿರುವಾಗ ಪ್ರಿಯೆ ಸೀತೆಯ ಅಗಲಿಕೆ; ಕಾಲನೇ ಬಂದು ಕರೆದಾಗ ಭ್ರಾತೃತ್ವದ ಶೇಷ ಉಳಿಸಿ ಹೊರಟು ಹೋದ ಪ್ರಾಣಪ್ರಿಯ ಸಹೋದರ; ಈ ಎಲ್ಲಾ ದುಃಖದ ಸನ್ನಿವೇಶಗಳಲ್ಲಿ ಅವನು ಸ್ಥಿತಪ್ರಜ್ಞನಾಗಿಯೇ ಉಳಿದಿದ್ದ. ಆದರೆ ಅವನ ಭಕ್ತರಾದ ನಮಗೆ ಹಾಗಾಗಲಿಲ್ಲ. 491 ವರ್ಷಗಳ ಹೋರಾಟದ ಬಳಿಕ ನಮಗಿದ್ದ ದುಃಖ ನಿವಾರಣೆಯಾಯಿತು. ಭವ್ಯವಾದ ಅವನ ಮಂದಿರ ಅವನ ಜನ್ಮಸ್ಥಾನದಲ್ಲೇ ಮರುನಿರ್ಮಾಣವಾಗುವ ಸಂತೋಷ ದೊರಕಿತು. ಅಷ್ಟೂ ವರ್ಷವೂ ರಾಮನಂತೆಯೇ ಧರ್ಮಮಾರ್ಗದಲ್ಲಿ ನಡೆದ ಅವನ ಭಕ್ತರು ನೆಲದ ಕಾನೂನಿಗೆ ಗೌರವ ಕೊಟ್ಟರು. ರಾಮನಂತೆಯೇ ರಾಮಮಂತ್ರವೂ ದೊಡ್ಡದು ಎನ್ನುವ ಸತ್ಯ ಮತ್ತೆ ನಿರೂಪಿತವಾಯಿತು. ರಾಮಾಯಣದುದ್ದಕ್ಕೂ ಕೇಳಿದ್ದು ಕ್ರೌಂಚದ ಶೋಕ. ಅಂತಹಾ ದುಃಖದ ನಡುವೆಯೂ ಸ್ಥಿತಪ್ರಜ್ಞನಾಗಿ ಉಳಿದು, ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿ, ಧರ್ಮವನ್ನೇ ಎತ್ತಿ ಹಿಡಿದು ಪುರುಷೋತ್ತಮ ಎನಿಸಿಕೊಂಡ. ಅಂತಹಾ ಕ್ರೌಂಚದ ಶೋಕವೂ ಇಂದು ಧರ್ಮದ ದಾರಿಯಲ್ಲೇ ಕೊನೆಗೊಂಡು ರಾಮನೆನುವ ಪರಪ್ರಹ್ಮ ತತ್ತ್ವ ತನ್ನ  ಜನ್ಮಸ್ಥಾನದ ಭವ್ಯಮಂದಿರದೊಳಗೆ ವಿಗ್ರಹರೂಪಿಯಾಗಿ ಪ್ರತಿಷ್ಠೆಗೊಳ್ಳುವ ಸುಸಂಧಿ ಒದಗಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ