ಪುಟಗಳು

ಮಂಗಳವಾರ, ಫೆಬ್ರವರಿ 4, 2020

ಆ ಯುದ್ಧಕ್ಕೆ 350 ವರ್ಷಗಳು! ಅದು ಕೇಸರಿ ಪಡೆಯ ಸರ್ಜಿಕಲ್ ಸ್ಟ್ರೈಕ್!

ಆ ಯುದ್ಧಕ್ಕೆ 350 ವರ್ಷಗಳು! ಅದು ಕೇಸರಿ ಪಡೆಯ ಸರ್ಜಿಕಲ್ ಸ್ಟ್ರೈಕ್!


           ಧ್ಯಾನಾಸಕ್ತಳಾಗಿದ್ದ ಜೀಜಾ ಮಾತೆಗೆ ಕಂಡಿತು ಬೋಳಾಗಿ ನಿಂತಿದ್ದ ದುರ್ಗಮ ಕೊಂಡಾಣ. ತಕ್ಷಣವೇ ಮಗ ಶಿವಾಜಿಗೆ ತನ್ನನ್ನು ಕೂಡಲೇ ಕಾಣಬೇಕೆಂದು ಹೇಳಿಕಳುಹಿದಳು. ತಾಯಿ ಮಗನಿಗೆ ರಾಜಕಾರ್ಯದಲ್ಲಿ ಸಲಹೆ ಸೂಚನೆ ನೀಡುತ್ತಿದ್ದಳು. ಹಾಗಾಗಿ ಏನೋ ರಾಜಕಾರ್ಯವಿರಬೇಕೆಂದು ಶಿವಾಜಿ ರಾಯಗಢದಿಂದ ಓಡೋಡಿ ಬಂದ. ಬಂದವನೇ "ಕೊಂಡಾಣದಲ್ಲಿ ಮುಗಿಲೆತ್ತರಕ್ಕೆ ಭಗವಾಧ್ವಜ ಹಾರಬೇಕು" ಎಂದ ತಾಯಿಯ ಮಾತಿಗೆ ಒಮ್ಮೆಗೆ ಬೆಚ್ಚಿಬಿದ್ದ. ಅದಕ್ಕೆ ಹಲವು ಕಾರಣಗಳಿದ್ದವು.

           ಕೊಂಡಾಣ, ಸಹ್ಯಾದ್ರಿಯ ಶ್ರೇಣಿಯ ಪೂರ್ವ ಭಾಗದಲ್ಲಿ ಸ್ಥಿತವಾಗಿದ್ದ ದುರ್ಗಮ ಕೋಟೆ. ಅದರ ಸುತ್ತಲೂ ಎರಡು ಮೈಲುಗಳಷ್ಟು ದೂರ ಕರಿಗಲ್ಲಿನ ನೈಸರ್ಗಿಕ ರಚನೆ! "ಕತ್ತಲೂ ಕಗ್ಗತ್ತಲೂ| ಸಿಂಹಗಡದ ಕೋಟೆಯ ಸುತ್ತಲು| ಎತ್ತಲೂ ಎತ್ತೆತ್ತಲೂ” ಎಂದು ಕವಿವರ್ಯನೊಬ್ಬ ಕೊಂಡಾಣವನ್ನು ವರ್ಣಿಸಿದ್ದಾನೆ. ಅದಕ್ಕೆ ಹೋಗಲಿದ್ದುದು ಒಂದೇ ದಾರಿ. ಅದು ನೇರವಾಗಿ ದುರ್ಗಕ್ಕಿದ್ದ ಏಕ, ಮುಖ್ಯದ್ವಾರವನ್ನು ಸೇರುತ್ತಿತ್ತು. ಬಹು ಎತ್ತರದಲ್ಲೂ ಇದ್ದುದರಿಂದ ಸುತ್ತಮುತ್ತಲ ಪ್ರದೇಶಗಳನ್ನು, ಬಹಳ ದೂರದವರೆಗಿನ ಚಲನವಲನಗಳನ್ನು ಅಲ್ಲಿದ್ದುಕೊಂಡೇ ವೀಕ್ಷಿಸಬಹುದಿತ್ತು. ಕಡಿದಾದ ಬೆಟ್ಟ, ಕಿರಿದಾದ, ಕೊರಕಲಾದ ದುರ್ಗಮ ದಾರಿ, ಕೋಟೆಯ ಎತ್ತರ ಹಾಗೂ ಅದನ್ನು ಹತ್ತಲು ಅಸಾಧ್ಯವಾದಂತಹಾ ರಚನೆ ಆ ಕೋಟೆಗೆ ವಿಶೇಷ ರಕ್ಷಣೆಯನ್ನು ನೀಡಿತ್ತು. ಅದರ ಜೊತೆಗೆ ಕೋಟೆಯ ಉಸ್ತುವಾರಿಯನ್ನು ಮೊಘಲರ ಪರವಾಗಿ ವಹಿಸಿದ್ದಾತ ಹಲವು ಯುದ್ಧಗಳನ್ನು ಗೆದ್ದ ಅನುಭವವಿದ್ದ ರಜಪೂತ ಸೇನಾನಿ ವೀರ ಉದಯಭಾನು. ಕೋಟೆಯೊಳಗೆ ಅಪಾರ ಪ್ರಮಾಣದ ಆಹಾರ ದಾಸ್ತಾನು, ಶಸ್ತ್ರಾಸ್ತ್ರಗಳೂ ಇದ್ದವು. ಇಂತಹಾ ದುರ್ಗಮ ಕೋಟೆಯನ್ನು ಗೆಲ್ಲುವುದೆಂದರೆ ಅದ್ಭುತವಾದ ಪರಾಕ್ರಮವನ್ನೇ ಮೆರೆಯುವುದರ ಮೊದಲು ಜೀವ ಸಹಿತ ಕೋಟೆಯವರೆಗೆ ತಲುಪುವುದೂ ಹಾಗು ಕೋಟೆ ಏರುವುದೇ ಮಹತ್ಸಾಧನೆಯೆನಿಸುತ್ತಿತ್ತು. ಇದು ಶಿವಾಜಿಗಿದ್ದ ಒಂದು ಚಿಂತೆಯಾಗಿತ್ತು. ಆ ದುರ್ಗಮ ಕೋಟೆ ಗೆಲ್ಲುವ ಸಾಮರ್ಥ್ಯ ಶಿವಾಜಿ ಪಾಳಯದಲ್ಲಿ ಇದ್ದಿದ್ದು ತಾನಾಜಿಗೆ ಮಾತ್ರ. ಕರೆಸೋಣ ಅಂದರೆ ತಾನಾಜಿಯ ೧೩ ವರ್ಷದ ಮಗ ರಾಯಬಾನ ಮದುವೆ. ಮದುವೆಯ ಸಂಭ್ರಮದಲ್ಲಿರುವವನನ್ನು ಯುದ್ಧಕ್ಕೆ ಹೋಗು ಅನ್ನುವುದಾದರೂ ಹೇಗೆ? ಇತ್ತ ತಾಯಿಯ ಆಜ್ಞೆ ಅತ್ತ ರಾಯಬಾನ ಮದುವೆ ಎಂಬ ಉಭಯಸಂಕಟಕ್ಕೆ ಒಳಗಾದ ಶಿವಾಜಿ.  ಅದರ ಜೊತೆಗೆ ತಾಯಿಯ ಜೊತೆ ಮಾತುಕತೆಗಾಗಿ ಬಂದಾಗ ಆಡಿದ ಚದುರಂಗದಾಟದಲ್ಲಿ ಸೋತದ್ದು ಅಪಶಕುನವೇನೋ ಎಂಬ ಖಿನ್ನತೆಯೂ ಶಿವಾಜಿಯನ್ನಾವರಿಸಿತು.

            ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ತಾನಾಜಿಗೆ ಕರೆ ಕಳುಹಿದ ಶಿವಾಜಿ. ಶಿವಾಜಿಯ ಕರೆ ಬಂದೊಡನೆ ಎಪ್ಪತ್ತು ವರ್ಷ ಪ್ರಾಯದ ತಾನಾಜಿಯ ಭುಜ ಕುಣಿಯಿತು. ಉತ್ಸಾಹದ ಬುಗ್ಗೆಯಾದ ಆತ ತನ್ನ ಮಾವಳಿ ಸಂಗಡಿಗರೊಡನೆ ಬಂದು ಅಪ್ಪಣೆ ಕೇಳಿದ. ಶಿವಾಜಿಯೂ, ಜೀಜಾ ಮಾತೆಯು "ಮಗನ ಮದುವೆ ಮುಗಿಯಲಿ" ಎಂದಾಗಲೂ ಕೇಳದೆ "ತಾಯಿ ಮೊದಲು ಕೊಡಾಣದ ಮದುವೆ. ನಂತರ ನನ್ನ ಮಗನ ಮದುವೆ ಆದರಾಯಿತು. ರಾಯಬಾ ಮಹಾರಾಜ ಶಿವಾಜಿಗೂ ಮಗನ ಸಮಾನ ತಾನೇ. ಹಾಗಾಗಿ ನನ್ನ ಮಗನ ಮದುವೆ ಅವನೇ ಮಾಡಲಿ. ಕೊಂಡಾಣದ ಮದುವೆ ನಾನು ಮಾಡುವೆ" ಎನ್ನುತ್ತಾ ರಣವೀಳ್ಯ ಪಡೆದೇ ಬಿಟ್ಟ.

              ಮಾಘ ಮಾಸದ ಅಮವಾಸ್ಯೆಯ ದಿನ. ಕಗ್ಗತ್ತಲ ರಾತ್ರಿ, ಅಸಾಧ್ಯವಾದ ಚಳಿ, ತೋಳಗಳ ಅರಚಾಟ, ನರಿ-ನಾಯಿಗಳು ಊಳಿಡುತ್ತಿದ್ದವು. ಮರಾಠ ಸಿಂಹಗಳು ಒಂದೊಂದಾಗಿ ಕಡಿದಾದ ಬೆಟ್ಟ ಏರುತ್ತಿದ್ದವು. ಬೆಟ್ಟವನ್ನೇನೋ ಏರಿದ್ದಾಯಿತು. ಕೋಟೆಯೇರುವುದು ಹೇಗೆ? ತಾನಾಜಿ ತಾನು ಸಾಕಿದ್ದ ಉಡ ಯಶವಂತಿಯನ್ನೂ ತನ್ನೊಂದಿಗೆ ಕರೆತಂದಿದ್ದ. ಗೂಡಿನಿಂದ ಅದನ್ನು ಹೊರಬಿಟ್ಟು, ಹಣೆಗೆ ಕುಂಕುಮ ಹಚ್ಚಿ "ಅತ್ಯುತ್ಸಾಹದಿಂದ ಮಹಾರಾಜರು ತಡೆ ಎಂದರೂ ಹಠಬಿಡದೆ ರಣವೀಳ್ಯ ಪಡೆದು ಬಂದಿದ್ದೇನೆ. ಇಷ್ಟರವರೆಗೆ ಮಹಾರಾಜರು ನನ್ನ ಮೇಲಿಟ್ಟಿರುವ ಭರವಸೆ ಮುಕ್ಕಾಗದಂತೆ ಸೆಣಸಿದ್ದೇನೆ. ಇಂದಿನ ನನ್ನ ಗೆಲುವು ನಿನ್ನ ಗೆಲುವನ್ನು ಅವಲಂಬಿಸಿದೆ. ಏರು ಯಶವಂತಿ, ಕೋಟೆಯೇರುವಲ್ಲಿ ಯಶಸ್ವಿಯಾಗು ಎಂದು ನಮಸ್ಕರಿಸಿ ಪ್ರಾರ್ಥಿಸಿ, ಉಡದ ಉದರಕ್ಕೆ ಹಗ್ಗ ಕಟ್ಟಿ ಕೋಟೆ ಏರುವಂತೆ ಸಂಜ್ಞೆ ಮಾಡಿದ. ಯಶವಂತಿ ಕೋಟೆಯನ್ನು ಸರಸರನೆ ಏರಿದಳು. ಕಡಿಮೆ ತೂಕವುಳ್ಳ ಮರಾಠಾ ವೀರನೊಬ್ಬ ಆ ಹಗ್ಗ ಹಿಡಿದು ಮೇಲೇರಿದ. ಬಳಿಕ ಇಳಿಬಿಟ್ಟ ಹಗ್ಗ ಹಿಡಿದು ಮುನ್ನೂರು ಶಿವಸೈನಿಕರು ಕೋಟೆಯ ತುದಿ ತಲುಪಿಯೇ ಬಿಟ್ಟರು.

              ಅಷ್ಟರಲ್ಲಿ ಎಚ್ಚರಗೊಂಡ ಕಾವಲುಗಾರರಿಗೆ ಕೋಟೆಯ ಮೇಲೆ ಮರಾಠ ವೀರರನ್ನು ಕಂಡು ಗಲಿಬಿಲಿಗೊಂಡರು. ಸಾವರಿಸಿಕೊಂಡು ಅಪಾಯದ ಗಂಟೆ ಬಾರಿಸಿದರು. ಕೋಟೆಯೊಳಗೆ ರಜಪೂತರು, ಪಠಾಣರು, ಅಪ್ಘನ್, ಅರಬ್ ಸೈನಿಕರು ಸುಮಾರು ಸಾವಿರಕ್ಕಿಂತಲೂ ಅಧಿಕವಿದ್ದರು. ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬೇರೆ. ಆದರೆ ದಿಢೀರ್ ದಾಳಿಯಿಂದ ಅವರು ಕಂಗೆಟ್ಟಿದ್ದರು. ಜೊತೆಗೆ ಗೋದಾಮಿಗೂ ಬೆಂಕಿ ಬಿತ್ತು. ತಾನಾಜಿ ಮಾಲಸುರೆಯೆಂಬ ವೀರ ಕೇಸರಿಯ ಆಕ್ರಮಣಕ್ಕೆ ಕೊಂಡಾಣ ಅಕ್ಷರಶಃ ನಡುಗಿತ್ತು. ಮಾವಳಿ ವೀರರ ಖಡ್ಗಕ್ಕೆ ಪಠಾಣರು ಆಹುತಿಯಾದರೆ ಒಟ್ಟಾಗಿ ತಾನಾಜಿಯ ಮೇಲೆ ಮುಗಿಬಿದ್ದ ಉದಯಭಾನುವಿನ ದ್ವಾದಶ ಪುತ್ರರ ರಕ್ತದ ರುಚಿಯನ್ನು ತಾನಾಜಿಯ ಖಡ್ಗ ಸವಿದಿತ್ತು. ಅವರೆಲ್ಲರೂ ಸತ್ತು ಬಿದ್ದಾಗ ಕೋಟೆಯ ಪೂರ್ವಭಾಗವೂ ಮರಾಠ ಕೇಸರಿಗಳ ವಶವಾದೊಡನೆ ರಾಯಗಢದಿಂದ ಬಂದಿದ್ದ ಮತ್ತಷ್ಟು ಯೋಧರು ತಾನಾಜಿಯನ್ನು ಕೂಡಿಕೊಂಡರು. ಉದಯಭಾನು ಸ್ವತಃ ತನ್ನ ಮದ್ದಾನೆ ಅಮರಾವತಿಯನ್ನು ತಾನಾಜಿಗೆದುರಾಗಿ ನುಗ್ಗಿಸಿದಾಗ ತಾನಾಜಿ ಆನೆಯ ಬೆನ್ನ ಮೇಲೆ ಜಿಗಿದು ಅದರ ಸೊಂಡಿಲು ಕತ್ತರಿಸಿದ. ರಕ್ತವು ಛಿಲ್ಲೆಂದು ಹಾರುತ್ತಿರುಂತೆ ಆನೆ ಕುಸಿದು ಬಿದ್ದು ಮಣ್ಣ ಮುದ್ದೆಯಾಯಿತು. ಹೀಗೆ ಅಭಿಮನ್ಯುವಿನ ತೆರದಿ ತಾನಾಜಿ ಮೊಘಲ್ ಸೈನ್ಯವನ್ನು ನುಚ್ಚುನೂರು ಮಾಡುತ್ತಿದ್ದಾಗ ತಾನಾಜಿಯ ಮೇಲೆ ಅನಿರೀಕ್ಷಿತವಾಗಿ ಕತ್ತಿ ಏಟೊಂದು ಬಿತ್ತು. ಅವನ ಕೈ ಕತ್ತರಿಸಲ್ಪಟ್ಟಿತು. ಗುರಾಣಿಯೂ ಕಳೆದು ಹೋಯಿತು. ಆ ಕೈಗೆ ಬಟ್ಟೆ ಸುತ್ತಿ ರಣಭಯಂಕರವಾಗಿ ಕಾದು ಉದಯಭಾನುವನ್ನು ನಿತ್ರಾಣನನ್ನಾಗಿಸಿದ ಆತ. ಆದರೆ ಗುರಾಣಿಯಿಲ್ಲದೆ ಹೆಚ್ಚಿನ ಕತ್ತಿಯೇಟುಗಳು ಆತನ ದೇಹಕ್ಕೇ ಬೀಳುತ್ತಿದ್ದುದರಿಂದ ಆ ಗಾಯಗಳಿಂದ ಬಹಳಷ್ಟು ರಕ್ತ ಹೊರ ಹೋಗಿ ತಾನಾಜಿಯ ದೇಹ ನೆಲಕ್ಕುರುಳಿತು. ಅವನ ಜೊತೆಗೆ ಇನ್ನಷ್ಟು ಮರಾಠ ವೀರರು ಬಲಿಯಾಗಿ ಇನ್ನೇನು ಉದಯಭಾನುವಿನ ಕೈಮೇಲಾಗುತ್ತದೆ ಅನ್ನಿಸಿದಾಗ ತಾನಾಜಿಯ ಸೋದರನ ಖಡ್ಗ ಉದಯಭಾನುವಿನ ಉದರವನ್ನು ಬಗಿದು ಹೊರಬಂತು. (ಕೆಲವು ಇತಿಹಾಸಕಾರರ ಪ್ರಕಾರ ತಾನಾಜಿಯೇ ಉದಯಭಾನುವನ್ನು ಸಂಹರಿಸಿದ; ಹಾಗೆಯೇ ತಾನಾಜಿಯ ಸೋದರನ ಹೆಸರಿನ ಬಗೆಗೂ ಭಿನ್ನಾಭಿಪ್ರಾಯಗಳಿವೆ). ಕೊಂಡಾಣ ಹಿಂದೂ ಕೇಸರಿಗಳ ವಶವಾಯಿತು.

           ಶಿವಾಜಿ ಮಹಾರಾಜರಿಗೆ ಕೊಂಡಾಣವನ್ನು ಗೆದ್ದ ಶುಭ ಸುದ್ದಿ ತಲುಪಿತು. ಜೊತೆಗೇ ತಾನಾಜಿ ಹುತಾತ್ಮನಾದ ಸುದ್ದಿಯೂ. ತಾನಾಜಿಯ ಹೌತಾತ್ಮ್ಯಕ್ಕೆ ಮಮ್ಮಲ ಮರುಗಿದ ಶಿವಾಜಿ ತಾನಾಜಿಯ ತಲೆಯನ್ನು ತನ್ನ ತೊಡೆಯಮೇಲಿರಿಸಿಕೊಂಡು “ಗಢ್ ಆಲಾ, ಪಣ್ ಸಿಂಹ ಗೇಲಾ” (ಕೋಟೆಯೇನೋ ಬಂತು ಆದರೆ ಸಿಂಹವೇ ಹೊರಟುಹೋಯಿತು) ಎ೦ದು ಉದ್ಗರಿಸಿ ಬಿಕ್ಕಿ ಬಿಕ್ಕಿ ಅತ್ತ. ಕೋಟೆ ಗೆದ್ದ ಸ೦ತೊಷವನ್ನು ತಾನಾಜಿಯ ಸಾವು ನು೦ಗಿ ಹಾಕಿತ್ತು. ತಾನಾಜಿಯ ಮನೆಯವರಿಗೆ ಹೇಗೆ ಸಮಧಾನಿಸಲಿ ಎನ್ನುವಿನ್ನೊಂದು ಚಿಂತೆ ಶಿವಾಜಿ ಮಹಾರಾಜರ ಎದೆಯನ್ನು ಇರಿಯುತ್ತಿತ್ತು. ಹೇಗಿತ್ತು ತಾನಾಜಿಯ ಮನೆಯ ಸ್ಥಿತಿ ಆಗ? ಅದನ್ನು ದಿವಂಗತ ವಿದ್ಯಾನಂದ ಶೆಣೈಯವರು ವಿವರಿಸುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.
"ಮನೆಯಲ್ಲಿ ಮಂಗಲ ಕಾರ್ಯ, ತಂದೆಯ ಸ್ಮಶಾನ ಯಾತ್ರೆ!
ಮಗ ಹಸೆಮಣೆ ಏರಿದ, ತಂದೆ ಚಿತೆ ಏರಿದ!
ಸೊಸೆ ತಾಳಿ ಕಟ್ಟಿಕೊಂಡಳು, ಅತ್ತೆ ಮಾಂಗಲ್ಯ ಬಿಚ್ಚಿಟ್ಟಳು!
ಒಂದೇ ಮನೆಯಲ್ಲಿ!"

            ಆದರೆ ತಾನಾಜಿಯ ದೇಹವನ್ನು ಅವನ ಮನೆಗೆ ತೆಗೆದುಕೊ೦ಡು ಹೋದ ಶಿವಾಜಿಗೆ ತಾನಾಜಿಯ ತಾಯಿ ಹೇಳುತ್ತಾಳೆ... "ಮಹಾರಾಜಾ ಆ ಮಗನಿಗಾಗಿ ನಾನು ಅಳುವುದಿಲ್ಲ. ನನ್ನ ಮಗ ಹಿಂದೂ ಸಾಮ್ರಾಜ್ಯಕ್ಕಾಗಿ ದುಡಿದು ಕೋಟೆಯನ್ನು ಗೆದ್ದು ನಿನಗೆ ಒಪ್ಪಿಸಿ ವೀರಸ್ವರ್ಗ ಪಡೆದ. ಅದಕ್ಕಾಗಿ ನನಗೆ ಗರ್ವವಿದೆ, ಹೆಮ್ಮೆಯಿದೆ. ಒ೦ದು ಸಿ೦ಹ ಹೋದರೇನು? ಇನ್ನೆರಡು ಸಿಂಹಗಳು ಅವನ ಸ್ಥಾನ ತುಂಬು ತ್ತವೆ" ಎಂದು ಕಿರಿಮಗ ಸೂರ್ಯಾಜಿ ಹಾಗೂ ಆಗಷ್ಟೇ ಮದುವೆಯಾಗಿದ್ದ ಮೊಮ್ಮಗ ರಾಯಬಾರ ಕೈಗಳನ್ನು ಶಿವಾಜಿಯ ಕೈಮೇಲೆ ಇಡುತ್ತಾಳೆ. ಉಘೇ ಉಘೇ ವೀರಮಾತೆಗೆ, ವೀರಭೂಮಿಗೆ! ಆ ತಾಯಿಗೆ ತಲೆಬಾಗಿ ನಮಸ್ಕರಿಸಿದ ಶಿವಾಜಿ. ತಾನಾಜಿಗೆ ಕೊಂಡಾಣದಲ್ಲಿಯೇ ಸಮಾಧಿ ಮಾಡಿ ಅದಕ್ಕೆ ಅವನ ನೆನಪಿಗಾಗಿ ಸಿಂಹಗಢ ಎಂದು ಹೆಸರಿಟ್ಟ ಶಿವಾಜಿ. ಅದಿಂದು ನಮ್ಮ ತೀರ್ಥಕ್ಷೇತ್ರ. ಹೌದು ಅದೊಂದು ಸರ್ಜಿಕಲ್ ಸ್ಟ್ರೈಕ್. ದುರ್ಗಮವಾದ, ಎಂಥವರಿಗೂ ಅಸಾಧ್ಯವಾಗಿದ್ದ ಶತ್ರುವಿನ ಗುಹೆಯೊಳಕ್ಕೆ ಹೊಗ್ಗಿ ಆತನನ್ನು ಹೊಡೆದದ್ದು ಮಾತ್ರವಲ್ಲ ಆ ನೆಲೆಯನ್ನೇ ಶಾಶ್ವತವಾಗಿ ತನ್ನದಾಗಿಸಿಕೊಂಡದ್ದು. ಅದು ಮೊಘಲ್ ಸಾಮ್ರಾಜ್ಯದ ಜಂಘಾಬಲವನ್ನೇ ಉಡುಗಿಸಿತು. ತಾನಾಜಿಯ ವೀರಗಾಥೆ, ಬಲಿದಾನ ಮರಾಠರ ಲಾವಣಿಗಳಲ್ಲಿ ನಲಿಯಿತು(ಬಲ್ಲಾಡ್ ಆಫ್ ಸಿಂಹಗಢ್). ಪುರಂದರ ಒಪ್ಪಂದದಲ್ಲಿ ಕಳೆದುಕೊಂಡಿದ್ದ ಕೋಟೆಗಳನ್ನೆಲ್ಲಾ ಮುಂದಿನ ಕೆಲವೇ ತಿಂಗಳುಗಳಲ್ಲಿ ಶಿವಾಜಿ ಗೆದ್ದುಕೊಳ್ಳುವಂತೆ ಮಾಡಿತು.. ಮುಂದಿನ ನಾಲ್ಕು ವರ್ಷಗಳಲ್ಲಿ ಶಿವಾಜಿಯನ್ನು ಛತ್ರಪತಿಯನ್ನಾಗಿಸಿ ವಿಶಾಲ ಹಿಂದೂ ಸಾಮ್ರಾಜ್ಯಕ್ಕೆ ಮುನ್ನುಡಿ ಬರೆಯಿತು. ಔರಂಗಜೇಬನ ಮದಾಂಧತೆ, ಮತಾಂಧತೆ, ಮತಾಂತರಗಳ ವಿರುದ್ಧ ಹಿಂದೂ ಸ್ವಾಭಿಮಾನವನ್ನು ಎತ್ತಿ ಹಿಡಿದು ನಿಲ್ಲಿಸಿತು. ಭಾರತಕ್ಕೆ ಭಾರತವೇ ಮೀಸೆ ಬೋಳಿಸಿಕೊಳ್ಳದಂತೆ ಪರಾಕ್ರಮ ಮೆರೆಯಲು ಪ್ರೇರಣೆಯಾಯಿತು.

            ಸ್ವಾತಂತ್ರ್ಯ ವೀರ ಸಾವರ್ಕರ್ "ಬಾಜೀಪ್ರಭು" ಎನ್ನುವ ಗೀತೆಯೊಂದನ್ನು ರಚಿಸಿ ತಾನಾಜಿಯನ್ನು ಕೀರ್ತಿಸಿದ್ದಾರೆ. ಮತ್ತದು ಬ್ರಿಟಿಷರಿಂದ ನಿಷೇಧಕ್ಕೊಳಪಟ್ಟಿತ್ತು! ಈಗ ತಾನಾಜಿ ಬಗೆಗಿನ ಚಲನಚಿತ್ರವೊಂದು ಬಂದಿದೆ. ತನ್ನ ಮಿತಿಯಲ್ಲಿ ಅದು ತಾನಾಜಿಯ ವೀರಗಾಥೆಯನ್ನು ವರ್ಣಿಸಿದೆ. ಇದು ದೇಶ ಬದಲಾಗುತ್ತಿರುವ ಲಕ್ಷಣ. ಭಗವಾ ಸಿಂಹಗಢದಲ್ಲಿ ಮಾತ್ರವಲ್ಲ, ಹಿಂದಿನಂತೆ ಭಾರತಾದ್ಯಂತ ಹಾರಾಡುವ ಕಾಲ ಬರಲಿರುವ ಮುನ್ಸೂಚನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ