ಆತ್ಮಾಹುತಿ.....ಆತ್ಮಾರ್ಪಣೆ!
"ಸಾವು" ಎಂದಾಕ್ಷಣ ಮನುಷ್ಯನೊಮ್ಮೆ ಬೆಚ್ಚಿ ಬೀಳುತ್ತಾನೆ. ಪ್ರತಿಯೊಂದು ಜೀವಿಗೂ ಸಾವಿನ ಭಯವಿದ್ದೇ ಇದೆ. ಸಾವು ಇದೆ ಎನ್ನುವುದನ್ನು ಮರೆಯಲೋಸುಗವೇ ಬಹುಷಃ ಜೀವಿ ಇಂದ್ರಿಯ ಸುಖಗಳನ್ನು ಪೂರೈಸುವುದರಲ್ಲಿ ಗಮನವೀಯುತ್ತದೆ. ಅಥವಾ ಇಂದ್ರಿಯ ಸುಖಗಳೇ ಸಾವನ್ನು ಮರೆಸುತ್ತವೆ. ಅದನ್ನು ಮರೆತು ಜೀವಿ ತಾನು ಶಾಶ್ವತನೆನ್ನುವಂತೆ ಬೀಗುತ್ತದೆ. ಆದರೂ ಸಾವು ಅದಕ್ಕೆ ಭಯಗೊಳಿಸುವ ವಿಚಾರವೇ ಆಗಿರುತ್ತದೆ. ಅದು ಇಂದ್ರಿಯ ಮಟ್ಟದಲ್ಲಷ್ಟೇ ಸಾವನ್ನು ಎದುರಿಸಲು ತೊಡಗುವುದೇ ಅದಕ್ಕೆ ಕಾರಣವಿರಬಹುದು. ಆದರೆ ಸಾವಿನ ಬಗೆಗಿನ ಚಿಂತನ-ಮಂಥನಗಳೇ ಅನೇಕ ತತ್ತ್ವಚಿಂತನೆಗಳಾಗಿ ಹೊರಹೊಮ್ಮಿ ಬಹು ಎತ್ತರದಲ್ಲಿ ನಿಂತವು. ಸಾವಿನ ಪ್ರಶ್ನೆಯೇ ಭಾರತೀಯ ತತ್ತ್ವದರ್ಶನಗಳ ಮೂಲ ಬಿಂದುವಾಗಿತ್ತು. ನಚಿಕೇತ ಸಾವಿನ ಬಗ್ಗೆ ಯಮನನ್ನೇ ಪ್ರಶ್ನಿಸಿ ಉತ್ತರ ದೊರಕಿಸಿಕೊಂಡ. ಇಹ-ಪರಗಳ, ಹುಟ್ಟು-ಸಾವುಗಳ ಕುರಿತ ಜಿಜ್ಞಾಸೆಯಿಂದಲೇ ಉಪನಿಷತ್ತುಗಳು ಹುಟ್ಟಿದವು. ದುಃಖದ ಮೂಲವನ್ನು ಕಂಡು ಹಿಡಿಯಲು ಬುದ್ಧನನ್ನು ಪ್ರಚೋದಿಸಿದ ವೃದ್ಧ,ರೋಗಿ ಹಾಗೂ ಶವಗಳು ಸಾವಿನ ಮುಖಗಳೇ.ಸಾವನ್ನು ಗೆದ್ದು ಶಾಶ್ವತವಾಗೇನೂ ಉಳಿಯಲಾಗದು. ಆದರೆ ಸಾವನ್ನು ಗೆಲ್ಲಬಹುದು. ಅದು ಹೇಗೆ? ಸಾವಿನ ಭಯವನ್ನು ಗೆಲ್ಲುವ ಮೂಲಕ. ನಿರ್ಲಿಪ್ತತೆಯಿಂದ ಸಾವಿನ ಬಳಿ ಸಾಗುವ ಮೂಲಕ. ಇನ್ನೇನು ನಾನು ಇಲ್ಲಿ ಮಾಡಬಹುದಾದದ್ದೆಲ್ಲಾ ಮುಗಿಯಿತು; ಇನ್ನಿಲ್ಲಿರುವುದರಲ್ಲಿ ಅರ್ಥವಿಲ್ಲ, ನನ್ನ ಗಮ್ಯವನ್ನು ಸೇರಿಕೊಳ್ಳುವೆ ಎಂದು ಅತ್ತ ಹೊರಡಲು ತಯಾರಾಗುವ ಮೂಲಕ. ಅದು ಆತ್ಮಾರ್ಪಣೆ. ಭಾರತೀಯ ಪರಂಪರೆಯಲ್ಲಿ ಎಂತೆಂತಹ ಮಹನೀಯರು ಆತ್ಮಾರ್ಪಣೆ ಮಾಡಿಕೊಂಡರು! ಸಾವರ್ಕರ್...ಅಲ್ಲಲ್ಲಾ ವೀರ ಸಾವರ್ಕರ್! ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ "ಸ್ವಾತಂತ್ರ್ಯ ವೀರ" ಎಂದು ಕರೆಸಿಕೊಂಡ ಏಕೈಕ ವ್ಯಕ್ತಿ. ಎಂತಹಾ ಅಪ್ರತಿಮ ವ್ಯಕ್ತಿತ್ವ. ತಾನು, ತನ್ನ ಪರಿವಾರ, ತನ್ನ ಬಂಧುಬಳಗ, ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸ್ವಾತಂತ್ರ್ಯ ಯಜ್ಞದಲ್ಲಿ ಆಜ್ಯವನ್ನಾಗಿಸಿದ ಅಪ್ರತಿಮ ದೇಶಭಕ್ತ. ದೇಶದ ಸ್ವಾತಂತ್ರ್ಯಕ್ಕಾಗಿ ಹಡಗಿನ ಶೌಚಕೋಣೆಯ ಪುಟ್ಟ ಕಿಟಕಿಯಲ್ಲಿ ಯೋಗಬಲದಿಂದ ದೇಹ ತೂರಿ ಜಿಗಿದು ಸಾಗರ ಈಜಿದ ಶೂರ. ಎರಡೆರಡು ಕರಿನೀರ ಶಿಕ್ಷೆಯನ್ನು ಪಡೆದು, ಅಂಡಮಾನಿನ ಕತ್ತಲ ಕೋಣೆಯಲ್ಲಿ ಗಾಣವೆಳೆದು, ಬರಿಗೈಯಲ್ಲಿ ತೆಂಗಿನ ನಾರು ಸುಲಿದು, ಹುಳುಹುಪ್ಪಟೆಗಳಿಂದ ಕೂಡಿದ ಅನ್ನ ತಿಂದೂ ದೇಶಕ್ಕಾಗಿ ತನ್ನ ಜೀವ ಉಳಿಸಿ ಜೀವನ ಸವೆಸಿದ ಮಹಾವ್ಯಕ್ತಿ! ಯಾವ ದೇಶೀಯರ ಸ್ವಾತಂತ್ರ್ಯಕ್ಕಾಗಿ ಜೀವನವನ್ನೆಲ್ಲಾ ಸವೆಸಿದರೋ ಅಂತಹ ದೇಶವಾಸಿಗಳಿಂದಲೇ ವಿನಾ ಕಾರಣ ಕಲ್ಲು ಹೊಡೆಸಿಕೊಂಡು, ಜೈಲಿಗೆ ಅಟ್ಟಿಸಿಕೊಂಡೂ ತನ್ನ ಕರ್ತವ್ಯ ಬಿಡದ, ಮರೆಯದ ಸ್ಥಿತಪ್ರಜ್ಞ! ಆಗಲೂ ಅವರು ಸಾವಿಗೆ ಶರಣಾಗಲಿಲ್ಲ. ಅಂತಹ ಸಾವರ್ಕರ್ 1964ರಲ್ಲಿ ಹಾಸಿಗೆ ಹಿಡಿಯಬೇಕಾಗಿ ಬಂದಾಗ ತನ್ನ ಆತ್ಮಾರ್ಪಣೆಯ ನಿರ್ಧಾರವನ್ನು ಸಮರ್ಥಿಸುತ್ತಾ ತನ್ನ ಕೊನೆಯ ಲೇಖನವನ್ನು ಬರೆದರು. ಬರೆದಂತೆ ಬದುಕಿದವರು ಬರೆದ ರೀತಿಯೇ ಅಳಿದರು ಕೂಡಾ. ದಿನೇ ದಿನೇ ಅನ್ನ, ಪಾನೀಯ, ಔಷಧಿಗಳನ್ನು ತ್ಯಜಿಸುತ್ತಾ ನಿರಾಹಾರಿಯಾಗಿದ್ದು ದೇಹ ತ್ಯಜಿಸಿದ ಅವರು ಕೊನೆಗೂ ಮೃತ್ಯುವನ್ನು ಗೆದ್ದು ತಮ್ಮ ದೇಶೀಯರಿಟ್ಟ ಮೃತ್ಯುಂಜಯ ಹೆಸರನ್ನು ಸಾರ್ಥಕವಾಗಿಸಿಕೊಂಡರು.
ದೇಶವನ್ನು ಸೈನಿಕೀಕರಣಗೊಳಿಸುವ ಸಲಹೆಯನ್ನು ಸಾವರ್ಕರ್ ಸ್ವಾತಂತ್ರ್ಯಪೂರ್ವದಿಂದಲೇ ಕೊಡುತ್ತಾ ಬಂದಿದ್ದರು. ದೇಶ ಸ್ವತಂತ್ರಗೊಂಡ ಬಳಿಕ ಮಹಾರಾಷ್ಟ್ರದ ಶಿಕ್ಷಣ ಸಚಿವ ಬಾಳಾಸಾಹೇಬ ದೇಸಾಯಿಯವರಿಗೆ ಪತ್ರ ಬರೆದು ಶಾಲಾಕಾಲೇಜುಗಳಲ್ಲಿ ಸೈನಿಕ ಶಿಕ್ಷಣ ಆರಂಭಿಸುವಂತೆ ಸಲಹೆಯಿತ್ತರು. ಅದರಂತೆ ಬಾಳಾಸಾಹೇಬರು ಯೋಜನೆಯೊಂದನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಚವ್ಹಾಣರ ಸಮ್ಮತಿಯೊಡನೆ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಿದರು. ಪಂಚಶೀಲದ ಕನಸಿನ ಕಂಬಗಳ ಮೇಲೆ ರಕ್ಷಣಾ ಸೌಧ ಸ್ಥಾಪಿಸಿದ್ದ ನೆಹರೂ ಅದನ್ನು ಕಸದ ಬುಟ್ಟಿಗೆ ಎಸೆದರು! ಮೃತ್ಯುಂಜಯ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸರಕಾರ ಸೇನಾಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಬೇಕೆಂದೂ, ಹೈಡ್ರೋಜನ್ ಬಾಂಬ್ ಅನ್ನೂ ತಯಾರಿಸಬೇಕೆಂದೂ, ಯುವ ಜನತೆಗೆ ಸೈನಿಕ ಶಿಕ್ಷಣ ಕೊಡಬೇಕೆಂದು ಸಾರಿದರು. ಚೀನಾದ ಕುರಿತು ಎಚ್ಚರಿಕೆಯಿಂದಿರಿ ಎಂದೂ ಅವರು ನೀಡಿದ ಎಚ್ಚರಿಕೆಯನ್ನು ನೆಹರೂ ನಿರ್ಲಕ್ಷ್ಯಿಸಿಬಿಟ್ಟರು. ಮಾತ್ರವಲ್ಲ 1954ರಲ್ಲಿ ಟಿಬೇಟನ್ನು ಚೀನಾದ ತೆಕ್ಕೆಗೆ ಬಿಡುವ ಒಪ್ಪಂದಕ್ಕೂ ಸಹಿ ಹಾಕಿದರು. ಚೀನಾ ಅಷ್ಟರಲ್ಲಾಗಲೇ ಭಾರತದ ಗಡಿ ಭಾಗಗಳನ್ನು ನುಂಗಲು ಶುರುಮಾಡಿತ್ತು. 1960ರ ವೇಳೆಗೆ ನೇಪಾಳ, ಅಪ್ಘಾನಿಸ್ಥಾನ, ಪಾಕಿಸ್ತಾನ, ಬರ್ಮಾ ಇಂಡೋನೇಷಿಯಾಗಳನ್ನು ತನ್ನ ಜೊತೆಗೂಡಿಸಿಕೊಂಡು ಭಾರತವನ್ನು ಒಂಟಿಯಾಗಿಸಿತು. ನೆಹರೂ ಸಹಿತ ಕಾಂಗ್ರೆಸ್ ನೇತಾರರೆಲ್ಲರೂ ಚೀನಾ ಯುದ್ಧ ಮಾಡುವುದಿಲ್ಲ ಎನ್ನುತ್ತಾ ಚೀನಾದ ಪರವಾಗಿ ವಾದ ಮಂಡಿಸಲು ಆರಂಭಿಸಿದ್ದಲ್ಲದೇ ನಾವಾಗಿಯೇ ನಿಶ್ಶಸ್ತ್ರೀಕರಣ ನೀತಿ ಸ್ವೀಕರಿಸಿ ಶಸ್ತ್ರಗಳನ್ನು ವಿಸರ್ಜಿಸಬೇಕು ಎಂಬ ಮೊಂಡುವಾದವನ್ನು ಆರಂಭಿಸಿದರು. ಅಷ್ಟು ಹೊತ್ತಿಗೆ ಚೀನಾ ಲಢಾಕ್ ಹಾಗೂ ನೀಫಾಕ್ಕೆ ನುಗ್ಗಿತ್ತು. ಸಹಸ್ರಾರು ವೀರ ಯೋಧರು ಸರಿಯಾದ ಶಸ್ತ್ರಾಸ್ತ್ರ, ಮದ್ದುಗುಂಡುಗಳಿಲ್ಲದೆ ಕೊಲ್ಲಲ್ಪಟ್ಟರು. ಪಂಚಶೀಲದ ಸ್ಥಂಭಗಳು ಡ್ರಾಗನ್ನಿನ ಆರ್ಭಟಕ್ಕೆ ಬಿದ್ದು ಹೋದವು. ಈ ವಿಪತ್ತನ್ನು ನೋಡಿ ಸಾವರ್ಕರರಿಗೆ ದುಃಖ ತಡೆಯಲಾಗದೆ ತನ್ನ ಚಿಕಿತ್ಸೆಗೆಂದು ಬರುತ್ತಿದ್ದ ವೈದ್ಯರಲ್ಲಿ "ದಯವಿಟ್ಟು ನನ್ನ ಜೀವನವನ್ನು ಕೊನೆಗೊಳಿಸಿಬಿಡಿ. ನನಗಿನ್ನು ಬದುಕುವ ಆಸೆಯಿಲ್ಲ. ದೇಶದ ಈ ದುಃಸ್ಥಿತಿಯನ್ನು ನಾನು ನೋಡಲಾರೆ" ಎಂದು ಗೋಗರೆದರು.
1963ರ ಡಿಸೆಂಬರಿನಲ್ಲಿ ತಮ್ಮ ಆರೋಗ್ಯ ವಿಚಾರಿಸಲು ಬಂದ ಆಚಾರ್ಯ ಪಿ.ಕೆ.ಅತ್ರೆಯವರ ಬಳಿ "ಶಂಕರಾಚಾರ್ಯ, ಜ್ಞಾನೇಶ್ವರ, ರಾಮದಾಸ, ತುಕಾರಾಮ ಮುಂತಾದರೆಲ್ಲಾ ತಮ್ಮ ಜೀವನೋದ್ದೇಶ ಪೂರೈಸಿದ ಮೇಲೆ ದೇಹತ್ಯಾಗ ಮಾಡಿ ತಮ್ಮ ಇಹಜೀವನ ಯಾತ್ರೆಯನ್ನು ಪೂರೈಸಿದರು. ಈ ಕುರಿತಾಗಿ ನಾನೊಂದು ಲೇಖನ ಬರೆಯಬೇಕೆಂದಿರುವೆ" ಎಂದು ಆತ್ಮಾರ್ಪಣೆ ಮಾಡುವ ತಮ್ಮ ಮನಸ್ಸನ್ನು ಬಿಟ್ಟುಕೊಡದೇ ಹೇಳಿದ್ದರು ಸಾವರ್ಕರ್. ಹಾಗೆ ಯಾರಿಗೂ ತಿಳಿಯದಂತೆ ಲೇಖನವನ್ನೂ ಬರೆದಿಟ್ಟರು. ಅಲ್ಲಿ ಆತ್ಮಹತ್ಯೆಗೂ ಆತ್ಮಾರ್ಪಣೆಗೂ ಇರುವ ವ್ಯತ್ಯಾಸವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಸಾವರ್ಕರ್. ರೋಗ, ಅಪಘಾತ ಇಲ್ಲವೇ ಇನ್ನಾವ ಅಪರಿಹಾರ್ಯ ರೀತಿಯಲ್ಲಿ ಸಾವು ಬಾರದೇ ಇದ್ದು, ಯಾವುದೋ ಕಾರಣಕ್ಕಾಗಿ ಬದುಕು ಬೇಡ ಎಂದೆನಿಸಿದಾಗ ಸಾವನ್ನು ತಾವೇ ಬರಮಾಡಿಕೊಂಡರೆ ಅದು ಆತ್ಮಹತ್ಯೆ ಎನ್ನಿಸಿಕೊಳ್ಳುತ್ತದೆ. ಆದರೆ ಜಗತ್ತಿನಲ್ಲಿ ತಾನು ಮಾಡಬಹುದಾದ ಎಲ್ಲವೂ ಮುಗಿಯಿತು ಎಂದು ಭಾಸವಾಗಿ ಸಂತೃಪ್ತನಾಗಿ ನಿರ್ಲಿಪ್ತ ಭಾವದಿಂದ ತನ್ನ ದೇಹವನ್ನು ಬಿಟ್ಟು ಹೋಗುವುದನ್ನು ಆತ್ಮಾರ್ಪಣೆ, ಆತ್ಮವಿಸರ್ಜನೆ ಎಂದು ಪ್ರಾಚೀನ ಕಾಲದಿಂದಲೇ ಗೌರವಿಸಿಕೊಂಡು ಬರಲಾಗಿದೆ. ಅಂತಹಾ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸದೆ ಪುಣ್ಯಕಾರ್ಯವೆಂದು ಭಾವಿಸಲಾಗಿದೆ. ಈ ಲೇಖನದಲ್ಲಿ ತಾನು ಕೊಡುವ ದೃಷ್ಟಾಂತಗಳನ್ನು ತನ್ನ ವೃದ್ಧಾಪ್ಯದ ಕಾರಣ ಅಧಿಕೃತ ಗ್ರಂಥಗಳನ್ನು ಓದಿ ಕೊಡಲು ಸಾಧ್ಯವಿಲ್ಲದೆ ಕೇವಲ ತನ್ನ ಜ್ಞಾಪಕ ಶಕ್ತಿಯಿಂದ ಕೊಟ್ಟಿರುವುದಾಗಿಯೂ, ಹಾಗಾಗಿ ಸಣ್ಣಪುಟ್ಟ ನ್ಯೂನತೆಗಳಿದ್ದರೂ ಅದು ತನ್ನ ಅಂತಿಮ ನಿರ್ಧಾರವನ್ನು ಅಪಕರ್ಷಿಸಲಾರವು ಎಂದಿದ್ದಾರೆ ಸಾವರ್ಕರ್.
ಪ್ರಖ್ಯಾತ ಮೀಮಾಂಸಕರಾಗಿದ್ದ ಕುಮಾರಿಲಭಟ್ಟರು ತಮ್ಮ ಕಾರ್ಯ ಮುಗಿದೊಡನೆ ತಮ್ಮ ಕೈಗಳಿಂದ ತಾವೇ ಬೆಂಕಿ ಹಚ್ಚಿಕೊಂಡು ಬೂದಿಯಾದರು. ಬೌದ್ಧ ವಿದ್ವಾಂಸರನ್ನು ಅವರದ್ದೇ ಮತವನ್ನು ಮುಂದಿಟ್ಟು ಸೋಲಿಸುವ ಉದ್ದೇಶದಿಂದ, ಛದ್ಮವೇಶಧಾರಿಯಾಗಿ ಬೌದ್ಧರ ನಡುವೆಯೇ ಇದ್ದು ಬೌದ್ಧ ಮತವನ್ನು ಅಭ್ಯಸಿಸಿದ ಆತ ಬಳಿಕ ಕದ್ದು ವಿದ್ಯೆ ಪಡೆದ ಗುರು ದ್ರೋಹದ ಪಾಪ ಪ್ರಾಯಶ್ಚಿತ್ತಕ್ಕಾಗಿ ತುಷಾಗ್ನಿಯೊಳಗೆ ಹೊಕ್ಕರು. ಅದನ್ನು ನಮ್ಮ ಪರಂಪರೆ ಅಗ್ನಿದಿವ್ಯ ಅಥವಾ ಆತ್ಮಾರ್ಪಣೆ ಎಂದಿದೆಯೇ ವಿನಹಾ ಆತ್ಮಹತ್ಯೆಯೆಂದಲ್ಲ. ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಅದ್ವೈತವೆಂಬ ಸೂತ್ರದಿಂದ ಭಾರತವನ್ನು ಏಕತ್ರಗೊಳಿಸಿ ಹಿಂದೂ ಧರ್ಮದ ಪುನರುತ್ಥಾನಗೈದವರು ಷಣ್ಮತಸ್ಥಾಪನಾಚಾರ್ಯ, ಸ್ವತಃ ಬ್ರಹ್ಮವೇ ಆದ ಆದಿಶಂಕರರು. "ಯದಹರೇವ ವಿರಜ್ಯೇತ್| ತದಹರೇವ ಪ್ರವಜೇತ್ | ಗೃಹಾತ್ ವಾ ವನಾತ್ ವಾ" ಎಂದ ಅವರು ತನ್ನ ಕಾರ್ಯ ಮುಗಿದಾಕ್ಷಣ ಬದರಿಯಲ್ಲಿ ಗುಹೆಯೊಂದನ್ನು ಹೊಕ್ಕು ಯೋಗ ಮಾರ್ಗದಿಂದ ದೇಹತ್ಯಾಗ ಮಾಡಿದರು. ಹೀಗೆ ಶಂಕರರು ಸಹಿತವಾಗಿ ಅನೇಕ ಯೋಗಿಗಳು ಈ ರೀತಿ ತಮ್ಮ ದೇಹತ್ಯಾಗ ಮಾಡಿದ್ದನ್ನು ಪೂಜ್ಯಭಾವನೆಯಿಂದಲೇ ನಮ್ಮ ಪರಂಪರೆ ನೋಡಿದೆಯೇ ಹೊರತು ಅಪರಾಧವೆಂಬಂತೆ ಅಲ್ಲ. ಇಡಿಯ ಬಂಗಾಳವನ್ನು ಭಕ್ತಿರಸದಿಂದ ತೋಯಿಸಿ ಹಿಂದೂ ಸಮಾಜ ಚೈತನ್ಯದಿಂದ ಪುಟಿದೇಳುವಂತೆ ಮಾಡಿದವರು ಚೈತನ್ಯ ಮಹಾಪ್ರಭುಗಳು. ಪುರಿಯ ದಾರಿಯಲ್ಲಿ ಅಮೋಘ ಕೃಷ್ಣ ಜಲಸಾಗರವು ಕೃಷ್ಣನೇ ತಮ್ಮನ್ನು ಕರೆಯುವಂತೆ ಕಂಡು ಜೈ ಶ್ರೀಕೃಷ್ಣ ಎನ್ನುತ್ತಾ ಸಮುದ್ರವನ್ನು ಹೊಕ್ಕು ಜಲಸಮಾಧಿಯಾದರು ಆತ. ತತ್ತ್ವಜ್ಞಾನದ ಸುವರ್ಣ ಕಲಶಗಳೆರಡಾದ ಜ್ಞಾನೇಶ್ವರಿ ಮತ್ತು ಅಮೃತಾನುಭವವನ್ನು ರಚಿಸಿದ ಮೇಲೆ ಗುರು ನಿವೃತ್ತನಾಥರ ಒಪ್ಪಿಗೆಯೊಂದಿಗೆ ಜ್ಞಾನೇಶ್ವರರು ಭೂಗರ್ಭದಲ್ಲಿ ತಾವೇ ರಚಿಸಿದ ಸಮಾಧಿಯೊಳಗೆ ಸೇರಿಹೋದರು.
ಸನಾತನ ಧರ್ಮದ ರಕ್ಷಣೆಗೆ ಕಟಿಬದ್ಧರಾಗಿ ಶಿವಾಜಿ ಮಹಾರಾಜರಿಗೆ ಮಾರ್ಗದರ್ಶನ ಮಾಡಿದವರು ಸಮರ್ಥ ರಾಮದಾಸರು. ಶಿವಾಜಿ ತೀರಿಕೊಂಡ ಬಳಿಕ ಆತನ ಮಗ ಸಂಭಾಜಿ ಶಿವಾಜಿಯ ನಿಷ್ಠಾವಂತ ಸರದಾರರನ್ನು ಸೆರೆಮನೆಗೆ ತಳ್ಳಿದ್ದ. ಆತ ಸಮರ್ಥ ರಾಮದಾಸರನ್ನು ಕಾಣಲೆಂದು ಸಜ್ಜನಗಢದ ಬುಡದಲ್ಲಿ ನಿಂತು ಪ್ರಾರ್ಥಿಸಿದಾಗ ಆತನಿಂದ ತಮಗೆದುರಾಗಬಹುದಾದ ಅಪಾಯವನ್ನು ಮನಗಂಡು ಸಮರ್ಥರು ತನ್ನ ಆರೋಗ್ಯ ಕ್ಷೀಣವಾಗಿದ್ದು ಕೆಳಗಿಳಿದು ಬರಲು ಅಸಹಾಯಕನಾಗಿರುವುದಾಗಿ ಹೇಳಿ ಅನುಗ್ರಹಿಸುವ ಪತ್ರವನ್ನು ಬರೆದರು. ಅದರಲ್ಲಿ ಶಿವಾಜಿಯ ವ್ಯಕ್ತಿತ್ವ, ಶೌರ್ಯ, ಸೂಕ್ಷ್ಮಗ್ರಹಣಶಕ್ತಿಗಳನ್ನು ನೆನಪಿಸಿಕೊಂಡು ಮ್ಲೇಚ್ಛರನ್ನು ಹೊಡೆದೋಡಿಸಿ, ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು. ಬಳಿಕ ಔರಂಗಜೇಬ ಮರಾಠರ ಮೇಲೆ ಆಕ್ರಮಣ ಮಾಡಲು ಸನ್ನದ್ಧನಾಗಿರುವನೆಂಬ ವಿಷಯ ತಿಳಿದೊಡನೆ ತೀರಾ ದುಃಖಿತರಾದ ಅವರು ತನ್ನ ಕೆಲಸವಿನ್ನಿಲ್ಲಿ ಮುಗಿಯಿತು ಎಂದು ಬಗೆದು ಅನ್ನ ನೀರುಗಳನ್ನು ತ್ಯಜಿಸಿದರು. ಅಚಲಾಸನದಲ್ಲಿ ಮಂಡಿಸಿ ರಾಮಧುನ್ ಹಾಡುತ್ತಾ ಹಾಡುತ್ತಾ ತಮ್ಮ ಪ್ರಾಣವನ್ನು ಪ್ರಭು ಶ್ರೀರಾಮನ ಪದಕಮಲಗಳಿಗೆ ಅರ್ಪಿಸಿದರು. ಇಂದಿಗೂ ಸಮರ್ಥರಾಮದಾಸರು ಆತ್ಮಹತ್ಯೆ ಮಾಡಿಕೊಂಡರು ಎಂದು ಯಾರೂ ಹೇಳುವುದಿಲ್ಲ. ಅದೇ ರೀತಿ ಸಂತ ಏಕನಾಥ ಹಾಗೂ ತುಕಾರಾಮರು ತಮ್ಮ ಐಹಿಕ ಜೀವನ ಕೃತಕೃತ್ಯವಾಯಿತು ಎಂದು ತಿಳಿದೊಡನೆ ಸಂತೃಪ್ತಿಯಿಂದ ಇಹಜೀವನವನ್ನು ತೊರೆದು ಪರಂಧಾಮವನ್ನೈದಿದರು.
ಇವಾವುದನ್ನೂ ನಾವು ಆತ್ಮಹತ್ಯೆ ಎಂದಿಲ್ಲ. ತಮ್ಮ ಜೀವಿತೋದ್ದೇಶ ಸಫಲವಾಗಿದೆ, ಇನ್ನು ತಾನಿರುವುದೆಂದರೆ ಬರಿಯ ಭೂಭಾರ ಎಂದರಿತ ರಿಕ್ತಕಾಮ ಅಥವಾ ಪೂರ್ಣಕಾಮರಾದ ಪ್ರತಿಯೊಬ್ಬ ಧನ್ಯಪುರುಷರು ಸ್ವಪ್ರೇರಣೆಯಿಂದ ತಮ್ಮ ಪ್ರಾಣ ವಿಸರ್ಜಿಸುತ್ತಾರೆ. ತಮ್ಮ ನಶ್ವರ ಜೀವನವನ್ನು ತೊರೆದು ವಿಶ್ವದ ಚಿರಂತನ ಜೀವನದಲ್ಲಿ ಒಂದಾಗುತ್ತಾರೆ. ಇದನ್ನೇ ಯೋಗವಾಸಿಷ್ಠ "ಅಂತರಿಕ್ತೋ ಬಹಿರಿಕ್ತೋ ರಿಕ್ತ ಕುಂಭ ಇವಾಂಬರೇ| ಅಂತಃಪೂರ್ಣೋ ಬಹಿಃಪೂರ್ಣೋ ಪೂರ್ಣಕುಂಭ ಇವಾರ್ಣವೇ ||" ಎಂದಿದೆ. ತಮ್ಮ ಜೀವನದ ಉದ್ದೇಶವು ಸಾಪೇಕ್ಷತಃ ಪೂರ್ಣವಾಯಿತು ಎಂಬ ಆತ್ಮಸಂತುಷ್ಠಿ ಬಂದ ನಂತರ, ತಮ್ಮ ದೇಹವು ಮುಪ್ಪು, ರೋಗಗಳ ಗೂಡಾಗಿ ಸ್ವಂತಕ್ಕೋ, ಪರಿವಾರಕ್ಕೋ ಅಥವಾ ಸಮಾಜಕ್ಕೋ ಹೊರೆಯಾಗಿ ಉಳಿಯುವಂತಾದಾಗ ಅಗ್ನಿಪ್ರವೇಶವೋ, ಗುಹಾಪ್ರವೇಶವೋ, ಪ್ರಾಯೋಪವೇಶವೋ, ಜಲಸಮಾಧಿಯೋ ಅಥವಾ ಯೋಗ ಸಮಾಧಿಯೋ ಹೀಗೆ ಒಂದಿಲ್ಲೊಂದು ಮಾರ್ಗದಿಂದ ದೇಹವನ್ನು ವಿಸರ್ಜಿಸುವುದು ಆತ್ಮಸಮರ್ಪಣೆಯೇ ಸರಿ ಎನ್ನುತ್ತಾ ಸಾವರ್ಕರ್ ಅವಧೂತ ಉಪನಿಷತ್ ಮತ್ತು ಪಂಚದಶಿಯ ಶ್ಲೋಕವನ್ನು ಉದ್ಧರಿಸುತ್ತಾರೆ:-
"ಧನ್ಯೋಹಮ್ | ಧನ್ಯೋಹಮ್
ಕರ್ತವ್ಯಂ ಮೇ ನ ವಿಧ್ಯತೇ ಕಿಂಚಿತ್ |
ಧನ್ಯೋಹಮ್ | ಧನ್ಯೋಹಮ್
ಪ್ರಾಪ್ತವ್ಯಂ ಸರ್ವಮಧ್ಯ ಸಂಪನ್ನಮ್ ||
-ಮಾಡಬೇಕಾದುದು ಏನೂ ಉಳಿದಿಲ್ಲ. ಗಳಿಸಬೇಕಾದುದೆಲ್ಲವೂ ಸಿಕ್ಕಿದೆ. ನಾನು ಧನ್ಯ, ನಾನು ಧನ್ಯ!"
ಆತ್ಮಾರ್ಪಣೆಯ ಬಗೆಗಿನ ಲೇಖನ ಬರೆದ ಮೇಲೆ ಸಾವರ್ಕರ್ ಒಂದೆರಡು ಬಾರಿ ಜಲಸಮಾಧಿಯ ಪ್ರಯತ್ನವನ್ನೂ ಮಾಡಿದರು. ಆದರೆ ಆಪ್ತ ಕಾರ್ಯದರ್ಶಿ ಬಾಳಾರಾವ್ ಅವರ ಇಂತಹಾ ಪ್ರಯತ್ನಗಳನ್ನು ವಿಫಲಗೊಳಿಸಿಬಿಟ್ಟರು. ಬಳಿಕ ತಮ್ಮ ಚಿಕಿತ್ಸೆಗೆ ಮತ್ತು ತಮ್ಮನ್ನು ಕಾಣಲೆಂದು ಬರುತ್ತಿದ್ದ ವೈದ್ಯರೆಲ್ಲರಿಗೂ ಸುಖಸಾವು ಬರುವಂತಹಾ ಔಷಧಿ ಕೊಟ್ಟುಬಿಡಿ ಎಂದರೂ ಅವರ್ಯಾರೂ ನೆರವಾಗಲಿಲ್ಲ. ಮುಂದೆ 1966ರ ಫೆಬ್ರವರಿ 3ರಂದು ಪ್ರಾಯೋಪವೇಶಕ್ಕೆ ಆರಂಭಿಸಿದ ಅವರು ಆಹಾರ, ಚಹಾ, ನೀರು ಹೀಗೆ ಒಂದೊಂದನ್ನೇ ತ್ಯಜಿಸುತ್ತಾ ಕೊನೆಗೆ ವೈದ್ಯರನ್ನೂ ಹತ್ತಿರ ಬರಗೊಡದೆ, "ನಾವು ನಮ್ಮ ಊರಿಗೆ ಹೊರಟಿದ್ದೇವೆ, ನಮ್ಮ ನಮಸ್ಕಾರ ಸ್ವೀಕರಿಸಿ. ಕೊಡುವುದು, ತೆಗೆದುಕೊಳ್ಳುವುದು ಇನ್ನೆಲ್ಲಿ? ಮಾತು ಮುಗಿಯಿತಿನ್ನು" ಎಂಬ ಸಂತ ತುಕಾರಾಮರ ಪದ್ಯವನ್ನುಚ್ಛರಿಸುತ್ತಾ ಫೆಬ್ರವರಿ 26ರಂದು ಮೂಲನೆಲೆಗೆ ಗೆಳೆಯ ಮೃತ್ಯುವಿನ ಕೈಹಿಡಿದು ನಡೆದೇ ಬಿಟ್ಟರು! ಅದು ಆತ್ಮಾರ್ಪಣೆ.
ಕಟುಕ ಬ್ರಿಟಿಷರ ಕೆಂಗಣ್ಣಿಗೆ ಬಿದ್ದಾಗ, ಸಾಗರ ಈಜಿದಾಗ, ಅಂಡಮಾನಿನಲ್ಲಿ ಕರಿನೀರ ಶಿಕ್ಷೆಯಲ್ಲಿ ನರಳಿದಾಗ, ವೃದ್ಧಾಪ್ಯದ ಅಶಕ್ತತೆ, ಕಾಯಿಲೆಗಳಿಗೆ ತುತ್ತಾದಾಗ..... ಹೀಗೆ ಪ್ರತೀ ಬಾರಿಯೂ ಅವರು ಮೃತ್ಯುವನ್ನು ಗೆದ್ದರು. ಕೊನೆಗೆ ಮೃತ್ಯುವನ್ನು ಪರಮ ಮಿತ್ರನಂತೆ ಆಲಿಂಗಿಸಿಕೊಂಡು ಮೃತ್ಯುಂಜಯ ಎನ್ನಿಸಿಕೊಂಡರು. ಆದರೆ...ಆದರೆ ಯಾವ ದೇಶಕ್ಕಾಗಿ ತನ್ನದೆಲ್ಲವನ್ನು ಅರ್ಪಿಸಿದ್ದರೋ ಅದೇ ದೇಶ ಅವರಿಗೆ ಬಾರಿ ಬಾರಿಗೂ ಅವಮಾನದ ಸಾವನ್ನು ಕೊಟ್ಟಿತು. ಗಾಂಧಿ ಹತ್ಯೆಯ ಕಳಂಕವನ್ನು ಅವರ ತಲೆಗೆ ಕಟ್ಟಲು ಯತ್ನಿಸಿತು. ಅಹಿಂಸಾವಾದಿಗಳು ಅವರತ್ತ ಕಲ್ಲೆಸೆದರು. ಪಾಕಿಸ್ತಾನದ ಪ್ರಧಾನಿ ಬರುವಾಗಲೂ ಅವರನ್ನು ಬಂಧಿಸಿತು. ದೇಶ ಸ್ವತಂತ್ರಗೊಂಡ ಬಳಿಕವೂ ಒಂದು ರೀತಿಯ ಗೃಹಬಂಧನದಲ್ಲಿ ಇರಿಸಿ ಅವರ ಸುತ್ತ ಗೂಢಚಾರರನ್ನು ಬಿಟ್ಟಿತು. ಯುದ್ಧಪಿಪಾಸು, ಹಿಂದೂ ಉಗ್ರವಾದಿ ಎಂದೆಲ್ಲಾ ಜರೆಯಿತು. ಅವರು ಆತ್ಮಾರ್ಪಣೆ ಮಾಡಿಕೊಂಡ ಬಳಿಕವೂ ಈ ಅವಮಾನದ ಸಾವು ನಿಲ್ಲಲಿಲ್ಲ. ಅಧಿಕೃತ ದಾಖಲೆ ಇಲ್ಲದಿದ್ದರೂ ಅವರ ಕ್ಷಮಾಪಣೆಯೆಂಬ ನಾಟಕವನ್ನೇ ಗುರಿ ಮಾಡಿಕೊಂಡು ಹೇಡಿ ಎಂಬಂತೆ ಜರೆಯಿತು. ಈ ಅವಮಾನವೆಂಬ ಕೊಲೆ ಇವತ್ತಿಗೂ ಮುಂದುವರೆದಿದೆ. ಆದರೆ ಅವರು ಇದಕ್ಕಾಗಿ ಯಾವುದೇ ಪ್ರತೀಕಾರ ಬಯಸಲಿಲ್ಲ. ಬಯಸಿದ್ದರೆ ಅವರು ಇದೆಲ್ಲಕ್ಕೂ ನ್ಯಾಯಾಲಯದಲ್ಲಿ ಮಂಗಳ ಹಾಡಬಹುದಿತ್ತು. ಬಯಸಿದ್ದರೆ ಪ್ರಧಾನಿಯೂ ಆಗಬಹುದಿತ್ತು. ಆದರೆ ಆತ, ಅವರೆಲ್ಲಾ ತನ್ನ ದೇಶವಾಸಿಗಳು ಎಂಬ ಔದಾರ್ಯ ತೋರಿ ಕ್ಷಮಿಸಿಬಿಟ್ಟರು. ಅದು ಅವರ ದೊಡ್ಡಗುಣ, ಅದು ನಿಜವಾದ ಅಹಿಂಸಾಪಾಲನೆ. ಆತ ಎಂತಹಾ ಕಾಲಘಟ್ಟದಲ್ಲೂ, ಎಂತಹಾ ಕ್ಲಿಷ್ಟ ಸನ್ನಿವೇಶದಲ್ಲೂ ತನ್ನ ಸಿದ್ಧಾಂತಪಥದಿಂದ ಬದಿಗೆ ಸರಿಯಲಿಲ್ಲ. ಯಾಕೆಂದರೆ ಅವರು ನಿಜವಾದ ಸ್ವಾತಂತ್ರ್ಯ ವೀರರಾಗಿದ್ದರು. ದೇಶಕ್ಕಾಗಿ ಅವರು ಎಂದೋ ಆತ್ಮಾಹುತಿಗೈದಾಗಿತ್ತು!
ಅದ್ಭುತವಾಗಿ ಬರೆದಿರುವಿರಿ ಅಣ್ಣ!
ಪ್ರತ್ಯುತ್ತರಅಳಿಸಿ