ಪುಟಗಳು

ಶನಿವಾರ, ಏಪ್ರಿಲ್ 18, 2020

ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?

ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?


ಗೂಡಿನಂತಹಾ ಕಗ್ಗತ್ತಲ ಕೊಠಡಿ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ, ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಗೋಡೆ ಕಡೆ ಮುಖ ಮಾಡಿ ನಿಲ್ಲಿಸಿ ಕೈಗಳಿಗೆ ಬೇಡಿ ಹಾಕುತ್ತಿದ್ದರು. ಸೊಂಟದ ಸುತ್ತ ಬಿಗಿದು ಬರುವ ಎರಡು ಎಳೆಗಳನ್ನು ಪಾದಗಳೆರಡಕ್ಕೂ ಬಿಗಿದು ಹಾಕುವ ಕಂಬಿ ಬೇಡಿ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ ಕಾಲನ್ನು ಕಿಂಚಿತ್ತೂ ಮಡಿಸದೆ ತಿಂಗಳುಗಟ್ಟಲೆ ಇರಬೇಕಿತ್ತು! ಕೈಗಳನ್ನು ಹಿಂದಕ್ಕೆ ಸರಿಸಿ ಬೇಡಿ ಹಾಕುವುದು ಇನ್ನೊಂದು. ಮಗದೊಂದು ಅಡ್ಡಕಂಬಿ ಬೇಡಿ - ಎರಡೂ ಕಾಲುಗಳನ್ನು ಒಂದಡಿಗಿಂತಲೂ ಹೆಚ್ಚು ದೂರದಲ್ಲಿರಿಸಿ ಹಾಕಲಾಗುತ್ತಿತ್ತು. ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಊಟ, ನಿದ್ರೆ, ವಿಸರ್ಜನೆ, ಓಡಾಟ, ಕೆಲಸ ಎಲ್ಲವನ್ನೂ ಇದೇ ಸ್ಥಿತಿಯಲ್ಲಿ ಮಾಡಬೇಕು. ಕೇಳಿದರೆ ಮೈಜುಮ್ಮೆನಿಸುವ ಶಿಕ್ಷೆ. ಇದು ಯಾವ ಗಾಂಧಿ, ನೆಹರೂವೂ ಕಾಣದ, ಅನುಭವಿಸದ ಶಿಕ್ಷೆ. ಇದು ಅಂಡಮಾನಿನಲ್ಲಿ ಹನ್ನೊಂದು ವರ್ಷ ವೀರ ಸಾವರ್ಕರ್ ಅನುಭವಿಸಿದ, ನರಕಯಾತನೆ ಪಟ್ಟ ಕರಿನೀರ ಶಿಕ್ಷೆ!

ಮಾರ್ಸೆಲ್ಸಿನಲ್ಲಿ ಮೊರಿಯಾ ಹಡಗಿನ ಶೌಚ ಕೊಠಡಿಯ ಕಿರು ಗವಾಕ್ಷದಿಂದ ಯೋಗಶಕ್ತಿಯಿಂದ ದೇಹವನ್ನು ಸಂಕುಚಿಸಿ ಸಮುದ್ರಕ್ಕೆ ಹಾರಿ ಈಜಿದಂತೆ ಅಂಡಮಾನಿಗೆ ಹೊರಟ ಮಹಾರಾಜ ಹಡಗಿನಿಂದ ತಪ್ಪಿಸಿಕೊಳ್ಳಲು ವೀರ ಸಾವರ್ಕರರಿಗೆ ಯಾವುದೇ ಮಾರ್ಗಗಳಿರಲಿಲ್ಲ. ಕೈಕಾಲುಗಳೆಲ್ಲದಕ್ಕೂ ಬೇಡಿ ಹಾಕಲಾಗಿತ್ತು. ಮಾತ್ರವಲ್ಲ ತಪ್ಪಿಸಿಕೊಂಡರೂ ಪ್ರಯೋಜನವಿರಲಿಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯವನ್ನೇ ಬ್ರಿಟಿಷರು ಹಣದ ಬೇಡಿ ಹಾಕಿ ಬಂಧಿಸಿದ್ದರು. ಸೆಲ್ಯುಲರ್ ಜೈಲೆಂಬ ಯಮಪುರಿಯನ್ನು ಹೊಕ್ಕ ನಂತರವಂತೂ ತಪ್ಪಿಸಿಕೊಳ್ಳುವ ಯಾ ಬಿಡುಗಡೆಯಾಗುವ ಆಸೆಯನ್ನು ಬಿಡಿ, ಬದುಕುವ ಭರವಸೆಯೂ ಇರಲಿಲ್ಲ. ರಾಕ್ಷಸ ಸ್ವರೂಪಿಯಾಗಿದ್ದ ಅಲ್ಲಿನ ಅಧಿಕಾರಿ ಬಾರಿ ಸಾಹೇಬನಂತೂ ಸಾಕ್ಷಾತ್ ಯಮಸ್ವರೂಪಿಯೇ ಆಗಿದ್ದ. ಮೂರನೇ ಮಹಡಿಯ ಏಳನೇ ನಂಬರಿನ ಕೋಣೆಯಲ್ಲಿ ಸಾವರ್ಕರರನ್ನು ಬಂಧಿಸಿಡಲಾಯಿತು. ಆ ಸಾಲಿನ ಎಲ್ಲಾ ಕೊಠಡಿಗಳನ್ನು ಮೊದಲೇ ಖಾಲಿ ಮಾಡಲಾಗಿತ್ತು. ಅಂದರೆ ಸುಮಾರು 150 ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸರಕಾರದ ಕಣ್ಣಿನಲ್ಲಿ ಬಲು ಯೋಗ್ಯರೆಂದು ಗುರುತಿಸಿಕೊಂಡಿದ್ದ ಆದರೆ ಕೈದಿಗಳ ದೃಷ್ಟಿಯಲ್ಲಿ ದ್ರೋಹಿಗಳು, ಚಾಡಿಕೋರರು, ಧೂರ್ತರೆಂದು ಕುಪ್ರಸಿದ್ಧರಾಗಿದ್ದ ಮೂವರು ಮುಸಲ್ಮಾನರು ಸಾವರ್ಕರರ ಪಹರೆಗೆ ನೇಮಕಗೊಂಡಿದ್ದರು.

ಬೇಕಾಬಿಟ್ಟಿ ಸ್ನಾನ ಮಾಡುವಂತಿರಲಿಲ್ಲ. ಜಮಾದಾರ "ಲೇವ ಪಾಣಿ" ಎನ್ನುತ್ತಲೇ ಒಂದು ಬಟ್ಟಲು ನೀರು ತೆಗೆದುಕೊಳ್ಳಬೇಕಿತ್ತು. ಆಮೇಲೆ ಆತ ಮೈಉಜ್ಜಲು ಹೇಳಿದೊಡನೆ ಮೈ ಉಜ್ಜಿಕೊಳ್ಳಬೇಕು. "ಜಾರಲೇವ ಪಾಣೀ" ಎಂದಾಗ ಮತ್ತೊಂದು ಬಟ್ಟಲು ನೀರು ತೆಗೆದುಕೊಳ್ಳಬೇಕು. ಹೀಗೆ ಮೂರು ಬಟ್ಟಲು ನೀರು, ಮೂರೇ ಬಟ್ಟಲು ನೀರಿನಲ್ಲಿ ಸ್ನಾನ ಮುಗಿಸಬೇಕಿತ್ತು! ಅದರಲ್ಲೂ ಸ್ನಾನಕ್ಕಿದ್ದದ್ದು ಉಪ್ಪು ನೀರು. ಹಿಂದಿನ ದಿನ ಏಟು ತಿಂದು ಉರಿಯುತ್ತಿರುವ ಚರ್ಮ ಈ ಉಪ್ಪು ನೀರು ಬಿದ್ದೊಡನೆ ಬೆಂಕಿಗೆ ಬಿದ್ದಂತಾಗುತ್ತಿತ್ತು. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ. ಒಳಗೆ ಹೋದವರನ್ನು ಪಹರೆದಾರ ಸಮಯ ಮುಗಿದೊಡನೆ ಅವರು ಯಾವ ಸ್ಥಿತಿಯಲ್ಲಿದ್ದಾರೋ ಅದೇ ಸ್ಥಿತಿಯಲ್ಲಿ ಅವರನ್ನು ಹೊರಗೆಳೆದು ತರುತ್ತಿದ್ದ. ಬೇರೆ ಸಮಯದಲ್ಲೇನಾದರೂ ವಿಸರ್ಜನೆಯಾದರೆ ಅದಕ್ಕೂ ಶಿಕ್ಷೆ!

ಹಸಿಯಾದ ತೆಂಗಿನಕಾಯಿಗಳ ತೊಗಟೆಗಳನ್ನು ಒಣಗಿಸಿ, ಕುಟ್ಟಿ ಅದರಿಂದ ತೆಂಗಿನ ನಾರನ್ನು ಬೇರ್ಪಡಿಸುವ ಕೆಲಸ. ಇದನ್ನು ಕೈಯಿಂದಲೇ ಮಾಡಬೇಕಿತ್ತು. ಯಾವುದೇ ಯಂತ್ರಗಳಿರಲಿಲ್ಲ. ಎಣ್ಣೆಯ ಗಾಣಕ್ಕೆ ಅವರನ್ನು ಹೂಡಲಾಗುತ್ತಿತ್ತು. ಬೆಳಗೆ ಎದ್ದ ಕೂಡಲೆ ಕೌಪೀನ ತೊಟ್ಟು ಗಾಣದ ಕೋಣೆಗೆ ಹೋಗಬೇಕಿತ್ತು. ಗಾಣ ತಿರುಗಿಸುವಾಗ ನೀರು ಕೇಳಿದರೆ ಅದೂ ಸಿಗುತ್ತಿರಲಿಲ್ಲ. ಹತ್ತು ಗಂಟೆಗೆ ಉಳಿದೆಲ್ಲಾ ಕೆಲಸಗಳು ಮುಂದಿನ ಎರಡು ಘಂಟೆಗಳ ಕಾಲ ನಿಂತರೂ ಗಾಣ ತಿರುಗಿಸುವುದನ್ನು ನಿಲ್ಲಿಸುವಂತಿರಲಿಲ್ಲ. ಅಲ್ಲಿಗೆ ಊಟ ಬರುತ್ತಿತ್ತು. ಆದರೆ ಕೈ ತೊಳೆಯಲೂ ನೀರು ಸಿಗುತ್ತಿರಲಿಲ್ಲ. ಅದೇ ಕೈಗಳಿಂದ ತಿನ್ನಬೇಕು. ಗಬಗಬ ತಿಂದು ಮತ್ತೆ ಗಾಣ ಎಳೆಯಬೇಕು. ಬೆವರು ಒರೆಸಲು ಅರೆಕ್ಷಣ ನಿಂತರೂ ಜಮಾದಾರನಿಂದ ಏಟು ಬೀಳುತ್ತಿತ್ತು. ಗಾಣ ತಿರುಗಿಸಿ ಉಸಿರಾಟ ಭಾರವಾಗುತ್ತಿತ್ತು. ಎದೆಯಲ್ಲಿ ಉರಿ, ತಲೆ ಸುತ್ತಿ ಬಂದು ಪ್ರಜ್ಞಾಶೂನ್ಯರಾಗಿ ಬಿದ್ದರೂ ಯಾರೂ ಎಬ್ಬಿಸುತ್ತಿರಲಿಲ್ಲ. ಎಚ್ಚರವಾದಾಗ ಮತ್ತೆ ಗಾಣ ತಿರುಗಿಸಬೇಕಿತ್ತು. ಯಾಕೆಂದರೆ ನಿಗದಿಪಡಿಸಿದ ಮೂವತ್ತು ಪೌಂಡ್ ಎಣ್ಣೆ ದಿವಸಕ್ಕೆ ತೆಗೆಯಬೇಕಿತ್ತು. ಕಡಿಮೆಯಾದರೆ ಹೊಡೆತ, ಬಡಿತ, ಸೊಂಟದ ಕೆಳಗೆ ಒದೆತ ತಪ್ಪಿದ್ದಲ್ಲ.

ಧಾರಾಕಾರ ಮಳೆಯಿರಲಿ, ಉರಿಬಿಸಿಲಿರಲಿ ಅದರಲ್ಲೇ ಊಟಕ್ಕೆ ನಿಲ್ಲಬೇಕಿತ್ತು. ಅಕ್ಕಪಕ್ಕದವರ ಬಳಿ ಮಾತಾಡುವಂತಿಲ್ಲ. ಸದ್ದು ಬಂದರೆ ಗುದ್ದು ಬೀಳುತ್ತಿತ್ತು. ಆಹಾರವೋ ಅರೆಬೆಂದದ್ದು. ಮಣ್ಣು, ಕಲ್ಲು, ಬೆವರು ಮಿಶ್ರಿತ ಸುವಾಸಿತ ಅಡುಗೆ! ಅನ್ನದಲ್ಲಿ ಹುಳುಹುಪ್ಪಟೆಗೆಳು, ಗೆದ್ದಲು ಹುಳುಗಳು, ಸತ್ತ ಹಾವಿನ ಚೂರುಗಳು ಸಿಗದಿದ್ದ ದಿನವೇ ವಿಶೇಷ! ಜೊತೆಗೆ ರಾತ್ರಿ ದೀಪಕ್ಕೆ ಹಾಕಿದ್ದ ಎಣ್ಣೆಯೂ ಅದರಲ್ಲಿ ಬಿದ್ದಿದ್ದರಂತೂ ವಾಕರಿಕೆ ಬರುವಂತಾಗುತ್ತಿತ್ತು. ಆದರೆ ಚೆಲ್ಲುವಂತಿರಲಿಲ್ಲ. ಚೆಲ್ಲಿದರೆ ಅದನ್ನು ಹೆಕ್ಕಿ ತಿನ್ನುವವರೆಗೆ ಏಟು ಬೀಳುತ್ತಿತ್ತು. ಚೆಲ್ಲಿದರೆ ಬೇರೆ ಆಹಾರವೂ ಸಿಗುತ್ತಿರಲಿಲ್ಲ. ಆಹಾರ ಕಡಿಮೆಯಾದರೂ ಕೇಳುವಂತಿರಲಿಲ್ಲ. ಹೆಚ್ಚಾದರೆ ಚೆಲ್ಲುವಂತಿರಲಿಲ್ಲ. ಊಟ ಎಷ್ಟು ಹೊತ್ತು ಮಾಡಬೇಕು ಎನ್ನುವುದನ್ನು ಪಹರೆಕಾರ ನಿರ್ಧರಿಸುತ್ತಿದ್ದ! ಕುಡಿಯಲು ಗಬ್ಬುನಾತವುಳ್ಳ ನೀರು. ಗಾಣ ಎಳೆಯುವಾಗ ವಿಪರೀತ ಬಾಯಾರಿಕೆಯಾಗುತ್ತಿತ್ತು. ಆದರೆ ನೀರು ಸಿಗಬೇಕಾದರೆ ನೀರು ಕೊಡುವವನಿಗೆ ಹೊಗೆಸೊಪ್ಪು ಹೇಗಾದರೂ ಸಂಪಾದಿಸಿ ಬಚ್ಚಿಟ್ಟುಕೊಂಡು ಕೊಡಬೇಕಾಗುತ್ತಿದ್ದಿತು. ನೀರು ಕುಡಿಯಲೂ ಲಂಚ ಕೊಡಬೇಕಾದ ದುಃಸ್ಥಿತಿ! ಅಷ್ಟು ಕೊಟ್ಟ ಮೇಲೂ ಸಿಗುತ್ತಿದ್ದುದು ಎರಡು ಬಟ್ಟಲು ನೀರು ಮಾತ್ರ!

ಸಂಜೆ ಐದು ಘಂಟೆಯೊಳಗೇ ಪೂರ್ತಿ ಎಣ್ಣೆ ತೆಗೆಯಬೇಕೆಂದು ಬಾರಿ ಸಾಹೇಬ ಆಜ್ಞೆ ಮಾಡುತ್ತಿದ್ದ. ಆಗದಿದ್ದರೆ ರಾತ್ರಿಯ ಊಟವಿಲ್ಲ. ಊಟವನ್ನು ತಪ್ಪಿಸಲೆಂದೇ ರಾತ್ರಿಯ ಊಟವನ್ನು ಐದು ಘಂಟೆಗೇನೆ ಕೊಡಲಾಗುತ್ತಿತ್ತು.  ಆರು ಗಂಟೆಯಾಗುತ್ತಲೇ ಬಾರಿ ಸಾಹೇಬ ಕೆಲಸಗಳೆಲ್ಲಾ ಮುಗಿದವೆಂದು ಕೊಠಡಿಗಳಿಗೆ ಬೀಗ ಜಡಿಸುತ್ತಿದ್ದ. ಗಾಣದ ಕೊಠಡಿಗೂ! ಪಹರೆಯವರು ಅವುಗಳೆದುರು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ನಿಗದಿಪಡಿಸಿದಷ್ಟು ಎಣ್ಣೆ ತೆಗೆಯಲಾಗದೆ ಇದ್ದವರು ಆಗಲೂ ಗಾಣ ಎಳೆಯುತ್ತಲೇ ಇರಬೇಕಿತ್ತು. ಇರುಳಲ್ಲಿ ಗಂಟೆಗಳು ಉರುಳುತ್ತಿದ್ದರೂ ಸೆರೆಮನೆಯಿಡೀ ನಿದ್ರಿಸುತ್ತಿದ್ದರೂ ಗಾಣದ ರಥ ತಿರುಗುತ್ತಲೇ ಇರುತ್ತಿತ್ತು!

ಸಾಮಾನ್ಯ ಜ್ವರವೆಲ್ಲಾ ಅಲ್ಲಿ ಕಾಯಿಲೆಯೇ ಅಲ್ಲ. ಅದಕ್ಕೆ ಚಿಕಿತ್ಸೆಯೂ ಸಿಗುತ್ತಿರಲಿಲ್ಲ. ಕೆಲಸವೂ ತಪ್ಪುತ್ತಿರಲಿಲ್ಲ. ಜ್ವರ ಎಷ್ಟೇ ಏರಿದರೂ ವೈದ್ಯನ ಉಷ್ಟತಾಮಾಪಕದ ಪಾದರಸ ಮೇಲೇರುತ್ತಲೇ ಇರಲಿಲ್ಲ. ತಲೆನೋವು, ತಲೆಶೂಲೆ, ಹೃದಯವಿಕಾರಗಳಿಂದ ಜರ್ಝರಿತರಾದವರನ್ನು ಕೆಲಸಗಳ್ಳರು ಎಂದು ಬಡಿದು ಕೆಲಸಕ್ಕೆ ಅಟ್ಟಲಾಗುತ್ತಿತ್ತು. ವಾಂತಿ, ಭೇದಿ, ರಕ್ತಕಾರುವಿಕೆ, ರಕ್ತಭೇದಿಯೆಲ್ಲಾ ಶುರುವಾದರೆ ದೇವರೇ ಗತಿ. ಜಮಾದಾರ ಅಥವಾ ಬಾರಿ ಸಾಹೇಬ ಮನಸ್ಸು ಮಾಡಿದರೆ ಚಿಕಿತ್ಸೆ ಸಿಗುತ್ತಿತ್ತು. ಆದರೆ ಅವರ ಮನಸ್ಸೆಂಬುದೇ ಸತ್ತು ಹೋಗಿತ್ತು. ಅನಿವಾರ್ಯವಾಗಿ ಕೊಣೆಯೊಳಗೇ ವಿಸರ್ಜನೆ ಮಾಡಿದರೆ ಮರುದಿನದಿಂದ ನಾಲ್ಕುದಿನದವರೆಗೆ ದಿನವಿಡೀ ಮರದ ದಿಮ್ಮಿಗಳನ್ನು ಹೊತ್ತು ನಿಲ್ಲುವ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿತ್ತು.

ಬಂಧು ಮಿತ್ರರನ್ನು ಭೇಟಿಯಾಗುವ ಅವಕಾಶವೇ ಇರಲಿಲ್ಲ. ಅದೆಲ್ಲಾ ಬಿಡಿ ಅದೇ ಮರಣ ಬಾವಿಯಲ್ಲಿ ಬಂಧಿಯಾಗಿದ್ದ ಸ್ವಂತ ಅಣ್ಣನನ್ನೇ ಭೇಟಿಯಾಗುವಂತಿರಲಿಲ್ಲ. ಅದರಲ್ಲೂ ಸಾವರ್ಕರ್ ಕುತ್ತಿಗೆಯಲ್ಲಿ ನೇತುಹಾಕಿದ್ದ ಭಿಲ್ಲೆಯಲ್ಲಿ "D" ಎಂಬ ಅಕ್ಷರ ಜೊತೆಯಾಗಿತ್ತು. ಅಂದರೆ "ಡೇಂಜರಸ್" ಎಂದು! ಹಾಗಾಗಿ ಯಾವನೇ ಕೈದಿಯೂ ಅವರ ಜೊತೆ ಮಾತಾಡುವಂತಿರಲಿಲ್ಲ. ಯಾವುದೇ ರೀತಿಯ ವ್ಯವಹಾರ ಮಾಡುವಂತಿರಲಿಲ್ಲ. ಮಾಡಿದ್ದೂ ಗೊತ್ತಾದರೆ ಚಾವಟಿ ಏಟು ತಿನ್ನಲು ಸಿದ್ಧನಾಗಿರಬೇಕಿತ್ತು. ಕಾನೂನಲ್ಲಿದ್ದ ವರ್ಷಕ್ಕೆ ಒಂದು ಸಲ ಪತ್ರ ಬರೆಯಬಹುದಾದ ಅವಕಾಶವೂ ಯಾವುದಾದರೂ ತಪ್ಪಿನ ಸುಳ್ಳು ನೆವ ಹೂಡಿ ನಿರಾಕರಿಸಲ್ಪಡುತ್ತಿತ್ತು. ಇನ್ನು ಓದುವುದು ಬರೆಯುವುದಂತೂ ಗಗನಕುಸುಮವೇ ಸರಿ. ಎದೆಗುಂದದ ಸಾವರ್ಕರ್ ಕಲ್ಲಿನಗೋಡೆಗಳ ಮೇಲೆ ಕಲ್ಲಿನ ಮೊಳೆಯಿಂದ "ಕಮಲಾ" ಎನ್ನುವ ಹತ್ತು ಸಾವಿರ ಸಾಲಿನ ಬೃಹತ್ ಕಾವ್ಯವನ್ನೇ ಕೆತ್ತಿದರು.

ವೀರ ಸಾವರ್ಕರ್, ಅವರ ಅಣ್ಣ ಬಾಬಾ ಸಾವರಕರ್ ಆದಿಯಾಗಿ ಹಲವಾರು ಕ್ರಾಂತಿಕಾರಿಗಳು ಈ ಕರಿನೀರ ಶಿಕ್ಷೆಯನ್ನು ಅನುಭವಿಸಿದರು. ಬರೋಬ್ಬರಿ ಹನ್ನೊಂದು ವರ್ಷ ಈ ಮೃತ್ಯುಕೂಪದಲ್ಲಿದ್ದರೂ ಸಾವರ್ಕರ್ ತಮ್ಮ ತತ್ತ್ವ, ಚಿಂತನೆ, ಕಾರ್ಯಗಳಾವುದನ್ನೂ ಬದಲಾಯಿಸಲಿಲ್ಲ. ಯಾರ್ಯಾರನ್ನೋ ಮಹಾತ್ಮ ಎನ್ನಲಾಗುತ್ತದೆ. ಕಾಯಾ, ವಾಚಾ, ಮನಸಾ ಒಂದೇ ಆಗಿದ್ದವರನ್ನು ಮಾತ್ರ ಮಹಾತ್ಮ ಎನ್ನಬೇಕಾದದ್ದು. ಆ ಮಹಾತ್ಮ ಸಾವರ್ಕರ್. ಸಾವರ್ಕರರನ್ನು ಬಂಧಿಸಿದ್ದರು; ಹಾಗಾಗಿ ಅವರು ಅನುಭವಿಸಲೇ ಬೇಕಿತ್ತು ಅನ್ನುತ್ತೀರಾ? ಸಾವರ್ಕರ್ ಅಂತಹಾ ಶಿಕ್ಷೆಯನ್ನು ಅನುಭವಿಸಿದ್ದು ತನಗಾಗಿ ಅಲ್ಲ; ದೇಶಕ್ಕಾಗಿ. ತನ್ನ ಸರ್ವಸ್ವವನ್ನೂ ದೇಶಕ್ಕೆ ಧಾರೆಯೆರೆದವರು ಅವರು. ನಾವು ದೇಶಕ್ಕಾಗಿ ಕನಿಷ್ಠ ನಮ್ಮ ಮನೆಯೊಳಗಿರಬಾರದೇ? ಇದರಿಂದ ನಾವೂ ಸುರಕ್ಷಿತವಾಗಿರುತ್ತೇವೆ; ದೇಶವೂ.

ಒಂದಷ್ಟು ದಿನಗಳ ಲಾಕ್ ಡೌನ್ ಅನ್ನು ಅನುಭವಿಸಲು ಒದ್ದಾಡುವ ಮನಸ್ಸುಗಳು ಒಮ್ಮೆ ಕರಿನೀರ ಶಿಕ್ಷೆಯನ್ನು ಕಣ್ತುಂಬಿಕೊಳ್ಳಬೇಕು. ಮನೆಯಲ್ಲಿ ನಮಗೆ ಪ್ರೀತಿಪಾತ್ರರಾದವರ ಜೊತೆಯಲ್ಲಿ ನಗು, ಹರಟೆಯಲ್ಲಿ ಕಾಲ ಕಳೆಯಬಹುದಾದ, ನಮಗಿಷ್ಟವಾದದ್ದನ್ನು ಮಾಡಿಕೊಂಡು ತಿನ್ನಬಹುದಾದ, ಪುಸ್ತಕ, ಟಿವಿ, ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು, ತರಹೇವಾರಿ ಮೊಬೈಲ್ ಯಾ ಕಂಪ್ಯೂಟರ್ ಗೇಮ್ಸ್ ಹೀಗೆ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರತೆಯನ್ನು ಕಾಯ್ದುಕೊಂಡು ಸಮಯ ಕಳೆಯಬಹುದಾದ, ವಿಧವಿಧದ ಹವ್ಯಾಸಗಳನ್ನು ಬೆಳೆಸಿಕೊಳ್ಳುವ, ಹೊಸತನ್ನು ಕಲಿಯುವ ಅವಕಾಶ ಒದಗಿಸಿದ ನಮ್ಮ ಸೌಭಾಗ್ಯವನ್ನು ಅದರ ಜೊತೆ ತುಲನೆ ಮಾಡಿಕೊಳ್ಳಬೇಕು. ನಿತ್ಯ ಜೀವನದಲ್ಲಿ ಸೂರ್ಯೋದಯ, ಸೂರ್ಯಾಸ್ತಗಳನ್ನು ಕಣ್ತುಂಬಿಕೊಳ್ಳುವ, ಪಕ್ಷಿಗಳ ಕಲರವವನ್ನು ಆಲಿಸುವ, ಧ್ಯಾನ, ಪ್ರಾಣಾಯಾಮ, ಯೋಗಾಸನಗಳನ್ನು ಕಲಿತು ರೂಢಿಸಿಕೊಳ್ಳುವುದಕ್ಕೆ ಸಿಕ್ಕ ಈ ಅಪೂರ್ವ ಅವಕಾಶವನ್ನು ಒಮ್ಮೆ ನೀವು ಆ ಕಗ್ಗತ್ತಲ ಕೋಣೆಯಲ್ಲಿ ಆ ಸ್ಥಿತಿಯಲ್ಲಿ ಕರಿನೀರ ರೌರವದಲ್ಲಿರುವಂತೆ ಭಾವಿಸಿ ಊಹಿಸಿಕೊಳ್ಳಿ. ಆಗ ತಿಳಿಯುತ್ತದೆ ನಾವು ಲಾಕ್ ಡೌನ್ ಆದದ್ದಲ್ಲ; ನಮ್ಮ ನಿಜವಾದ ಸ್ವಾತಂತ್ರ್ಯವನ್ನು ಪಡೆದುಕೊಂಡದ್ದು ಎಂದು!



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ