ಪುಟಗಳು

ಭಾನುವಾರ, ನವೆಂಬರ್ 2, 2014

ಅಖಂಡತೆಗೊದಗಿದೆ ಆಪತ್ತು...ನಿರ್ಲಕ್ಷಿಸಿದರೆ ಭಾರತ ಪರರ ಸೊತ್ತು!

ಅಖಂಡತೆಗೊದಗಿದೆ ಆಪತ್ತು...ನಿರ್ಲಕ್ಷಿಸಿದರೆ ಭಾರತ ಪರರ ಸೊತ್ತು!
             ಇತ್ತೀಚೆಗಷ್ಟೇ ರಾಜಕೀಯ ಧುರೀಣರೊಬ್ಬರ ಪ್ರತ್ಯೇಕ ರಾಜ್ಯದ ಕುರಿತ ಹೇಳಿಕೆ ಕರ್ನಾಟಕದಾದ್ಯಂತ ಒಂದು ಸಂಚಲನವನ್ನುಂಟುಮಾಡಿತು. ಉತ್ತರಕರ್ನಾಟಕ ಪ್ರಾಂತ್ಯ ಅಭಿವೃದ್ಧಿಯಾಗಿಲ್ಲ ಹಾಗಾಗಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿರುವುದು ಅನ್ನುವ ವಾದವನ್ನು ಒಪ್ಪಿಕೊಂಡರೂ ಈಗಾಗಲೇ ರಾಜಕೀಯ-ಸ್ವಾರ್ಥ-ಸ್ವಹಿತ-ಮತೀಯ ಕಾರಣಗಳಿಗಾಗಿ ಛಿದ್ರಗೊಂಡ ಹಾಗೂ ಛಿದ್ರಗೊಳ್ಳುತ್ತಿರುವ ಭರತಖಂಡದ ಬಗೆಗೆ ಚಿಂತಿಸಿದಾಗ ಅಪಾಯದ ಸುಳಿಯೊಂದು ಹಾದು ಹೋಗುತ್ತದೆ. ಭಾಷೆಯ ಕಾರಣಕ್ಕಾಗಿ, ಮತೀಯ ಕಾರಣಕ್ಕಾಗಿ ಅಥವಾ ರಾಜಕೀಯ ಹಿತಾಸಕ್ತಿಯ ಸಾಧನೆಗಾಗಿ ಅಭಿವೃದ್ಧಿಯ ವಿಚಾರವನ್ನು ಹರಿಯಬಿಟ್ಟು ಪ್ರತ್ಯೇಕ ರಾಜ್ಯಗಳನ್ನು ಮಾಡುತ್ತಾ ಹೋದರೆ ಮುಂದೊಂದು ದಿನ ಈ ರಾಜ್ಯಗಳೇ ತಾವು ಸ್ವತಂತ್ರಗೊಳ್ಳಬೇಕೆಂದು ದಂಗೆಯೇಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಕಾಂಗ್ರೆಸ್ಸಿನ ರಾಜಕೀಯ ಲಾಭಕ್ಕಾಗಿ ಆಂಧ್ರದ ವಿಭಜನೆಗೊಂಡಿತು. ಪುಣ್ಯಾವಶಾತ್ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುವುದರೊಂದಿಗೆ ಅಗಾಧ ನಷ್ಟ ಉಂಟಾಗಿಲ್ಲವಾದರೂ ಒಂದೇ ರಾಜ್ಯದ ಎರಡು ಮನಸ್ಸುಗಳ ನಡುವೆ ದ್ವೇಷದ-ಪ್ರತ್ಯೇಕತೆಯ ಗೋಡೆಯೊಂದು ಸೃಷ್ಟಿಯಾದದ್ದು ಸತ್ಯ ತಾನೇ.
                  ದಕ್ಷಿಣ ಭಾರತದ ಪ್ರತೀ ರಾಜ್ಯಗಳ ಗಡಿಪ್ರದೇಶಗಳಲ್ಲಿ ಭಾಷೆಯ ಕಾರಣಕ್ಕಾಗಿ ಅಲ್ಲದೆ ಅಭಿವೃದ್ಧಿಯ ಕಾರಣಕ್ಕಾಗಿಯೂ ಪ್ರತ್ಯೇಕತೆಯ ಕೂಗು ಇದ್ದೇ ಇದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಮಾರಾಮಾರಿಯೂ ನಡೆಯುತ್ತದೆ. ಭಾಷೆಯ ಮೇಲಿನ ಅಂಧಾಭಿಮಾನ ಕೇವಲ ಭೂವಿವಾದಕ್ಕಷ್ಟೇ ಸೀಮಿತವಾಗಿಲ್ಲ. ಅದು ಕಾರ್ಪೋರೇಟ್ ಜಗತ್ತಿನಲ್ಲೂ ಹಾಸುಹೊಕ್ಕಾಗಿದೆ. ಇದ್ದುದರಲ್ಲಿ ಕನ್ನಡಿಗರು ಹೇಳುವಷ್ಟು ಭಾಷಾಂಧತೆಯುಳ್ಳವರಲ್ಲವಾದರೂ ಈ ಲೇಖನ ಬರೆಯುವ ಹೊತ್ತಿಗೇನೆ ಕನ್ನಡ ಮಾತಾಡಲು ಬರುವುದಿಲ್ಲವೆಂಬ ಕಾರಣಕ್ಕಾಗಿ ಮಣಿಪುರಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ! ತಮಿಳಿಗರ ಭಾಷಾಂಧತೆ ಎಷ್ಟೆಂದರೆ ಅಲ್ಲಿ ದೇಶವನ್ನು "ರಾಷ್ಟ್ರ"ವನ್ನಾಗಿಸಿದ ಸಂಸ್ಕೃತ ಹಾಗೂ ಹಿಂದಿಗಳಿಗೆ ಸ್ಥಾನವೇ ಇಲ್ಲ. ಇನ್ನು ಬೆಳಗಾವಿಯಲ್ಲಂತೂ ಮರಾಠಿ ಹಾಗೂ ಕನ್ನಡಿಗರ ಭಾಷಾ ಕದನ ನಿತ್ಯ ನಿರಂತರ. ಜನತೆ ಇಂತಹ ಸ್ಥಿತಿಯಲ್ಲಿ ಮುಳುಗೇಳುತ್ತಿರುವಾಗಲೇ ಈ ರಾಜ್ಯಗಳಲ್ಲಿ ಗೆದ್ದಲು ಹುಳುಗಳಂತೆ ಬೆಳೆಯುತ್ತಿರುವ ಜಿಹಾದಿ ಸಂಘಟನೆಗಳು ಹಾಗೂ ಮತಾಂತರಿಗಳು ಅಲ್ಲಲ್ಲಿ ಗಲಭೆಯೆಬ್ಬಿಸುತ್ತಾ ದೇಶದ ಭದ್ರತೆಗೂ ಅಖಂಡತೆಗೂ ಮಾರಕವಾಗುತ್ತಿದ್ದಾರೆ. ಕೇರಳದಲ್ಲಿ ಮುಸ್ಲಿಂ ಲೀಗ್ ಜೊತೆಗೆ ಸಿಮಿಯ ಬಹುರೂಪಗಳು, ತಮಿಳಿನ ಮುಸ್ಲಿಂ ಮುನ್ನಣಿ, ಕರ್ನಾಟಕ-ಆಂಧ್ರ-ಮಹಾರಾಷ್ಟ್ರದಲ್ಲಿರುವ ಜಿಹಾದಿ ಸಂಘಟನೆಗಳು ದಕ್ಷಿಣ ಭಾರತವನ್ನು ಪ್ರತ್ಯೇಕಿಸಿ "ಹೈದರಿಸ್ತಾನ" ಮಾಡುವ ತಮ್ಮ ಕಾರ್ಯದಲ್ಲಿ ಮಗ್ನವಾಗಿವೆ. ಉತ್ತರ ಭಾರತದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಓಲೈಕೆ ರಾಜಕಾರಣ ಯಾವ ಪರಿ ತಲುಪಿದೆಯೆಂದರೆ ಹಿಂದೂಗಳು ಮಾನವನ್ನುಳಿಸಿ ಜೀವಿಸುವುದೇ ದುಸ್ತರವಾಗಿದೆ. ಈಶಾನ್ಯ ರಾಜ್ಯಗಳ ಪಾಡಂತೂ ಕೇಳುವವರಿಲ್ಲ.
                  ಅಲ್ಲಿಗೆ ಹೋಗಬೇಕಾದರೆ ಅನುಮತಿ ಪತ್ರ ಬೇಕು. ನಾವು ಯಾಕಾಗಿ ಅಲ್ಲಿ ಹೋಗುತ್ತಿದ್ದೇವೆ? ಅಲ್ಲಿ ತಂಗುತ್ತಿರುವುದು ಎಲ್ಲಿ? ನಮ್ಮ ವಿಶ್ವಾಸಾರ್ಹತೆ ಸಾಬೀತುಪಡಿಸುವ ಅಂಶಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರಿಸಿ, ಅಲ್ಲಿರುವಷ್ಟು ದಿನ ಸನ್ನಡತೆ ಪ್ರದರ್ಶಿಸುವುದಾಗಿ ಖಚಿತಪಡಿಸಿ ಕೆಲಸ ಮುಗಿದ ತಕ್ಷಣ ಮರಳುತ್ತೇನೆ ಎಂಬ ಪ್ರಮಾಣ ಪತ್ರ ನೀಡಿದ ಮೇಲೆಯೇ ಆ ಪ್ರದೇಶಕ್ಕೆ ನಿಮ್ಮ ಪ್ರವೇಶ ಸಾಧ್ಯ! ಅದೇನು ವಿದೇಶೀ ನೆಲ ಅಂತ ತಿಳಿದುಕೊಂಡಿರೇನು? ಅಥವಾ 370ನೇ ವಿಧಿಯಿಂದ ದೇಶದೊಳಗೊಂದು ದೇಶವೆಂದೆನಿಸಿದ ಕಶ್ಯಪ ಬ್ರಹ್ಮನಿಂದ ಸೃಷ್ಟಿಯಾಗಿ ಈಗ ಜಿಹಾದಿಗಳಿಂದ ನರಕಮಯವಾಗಿರೋ ಕಾಶ್ಮೀರವೆಂದು ತಿಳಿದಿರೇನು? ಎರಡೂ ಅಲ್ಲ. ನಮ್ಮದೇ ದೇಶದ ಭಾಗವಾದ ನಾಗಾಲ್ಯಾಂಡ್! ಇದನ್ನು ಭಾರತದಿಂದ ಬೇರ್ಪಡಿಸಿದ್ದು 1873ರ ಬೆಂಗಾಲ್ ಈಸ್ಟರ್ನ್ ರೆಗ್ಯುಲೇಷನೆ ಆಕ್ಟ್! ಬ್ರಿಟಿಷರು ತೊಲಗಿದರೂ ಅವರು ಮಾಡಿದ ಕಾನೂನು ತೊಲಗಲಿಲ್ಲ. ಮೆಕಾಲೆ ಸೃಷ್ಟಿ ಮಾಡಿದ ಕಪ್ಪು ಚರ್ಮದ ಬ್ರಿಟಿಷರು ಇನ್ನೂ ಇರುವರಲ್ಲ! ಸ್ಥಳೀಯ ಬುಡಕಟ್ಟು ಜನರ ರಕ್ಷಣೆಗೆ ಎಂಬ ಕಥೆಕಟ್ಟಿ ಈ ಜನರನ್ನು ಕ್ರಾಂತಿಕಾರಿಗಳು ತಮ್ಮ ವಿರುದ್ಧ ಬಳಸಬಾರದು ಹಾಗೂ ತಮ್ಮ ಮತಾಂತರದ ಪ್ರಯತ್ನಕ್ಕೆ ತಡೆ ಒಡ್ಡಬಾರದೆಂಬ ಉದ್ದೇಶದಿಂದ ಬ್ರಿಟಿಷರು ರೂಪಿಸಿದ ಕಾಯಿದೆ ಇದು! ಅರುಣಾಚಲ ಪ್ರದೇಶ, ಮಣಿಪುರ, ಮಿಝೋರಾಂಗಳದ್ದೂ ಇದೇ ಕತೆ!
                  ಎಂಥಾ ವಿಪರ್ಯಾಸ. ತಮ್ಮದೇ ನೆಲವನ್ನು ಸಂದರ್ಶಿಸಲು ಭಾರತೀಯರು "ವೀಸಾ" ಪಡೆಯಬೇಕಾಗಿದೆ. ಅದೇ ಬಾಂಗ್ಲಾದಿಂದ ಹರಿದು ಬಂದ ಅಕ್ರಮ ವಲಸಿಗರಿಗೆ ಸರಕಾರಗಳು ಪಡಿತರ-ಮನೆ-ಜಾಗ ಕೊಟ್ಟು ಶಾಸಕರನ್ನಾಗಿಯೂ ಮಾಡಿವೆ. ಅದೇ ಅಲ್ಲಿಂದ ಮಾನ-ಪ್ರಾಣ ರಕ್ಷಣೆಗೆ ಓಡೋಡಿ ಬಂದ ಅಸಹಾಯಕ ಹಿಂದೂಗಳಿಗೆ ಅನ್ನಾಹಾರ ಬಿಡಿ ರಕ್ಷಣೆಯ ಮಾತುಗಳನ್ನಾಡಲೂ ಸರಕಾರಗಳಿಗೆ ಪುರುಸೊತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವು ಮತಾಂಧ ಜಿಹಾದಿಗಳ ಓಲೈಕೆಯಲ್ಲಿ ತೊಡಗಿವೆ. ಅಕ್ರಮ ವಲಸಿಗರನ್ನು ಹೊರಹಾಕಿ ಎಂದು ಅರುಣಾಚಲ ಪ್ರದೇಶದ ವಿದ್ಯಾರ್ಥಿ ಒಕ್ಕೂಟ ಒತ್ತಡ ಹೇರಿದಾಗ ಸರಕಾರ ಅವರನ್ನು ನೆರೆಯ ಅಸ್ಸಾಮಿಗೆ ಕಳುಹಿಸಿ ಕೈ ತೊಳೆದುಕೊಂಡಿತು. ಅಸ್ಸಾಮಿನ "ಬಾಂಧವ"ರು ಅವರನ್ನೇನಾದರೂ ಹೊರಹಾಕಿದರೆ ತಾವು ಹಿಂದೂಗಳನ್ನು ಮುಸ್ಲಿಂ ಬಾಹುಳ್ಯ ಪ್ರದೇಶಗಳಿಂದ ಹಿಂದೂಗಳನ್ನು ಹೊರಗಟ್ಟುವುದಾಗಿ ಬೆದರಿಕೆ ಹಾಕಿದರು. ಬೆದರಿದ ಮುಖ್ಯಮಂತ್ರಿ ತರುಣ್ ಗೋಗೊಯ್ ಅವರಿಗೆಲ್ಲಾ ಅಸ್ಸಾಮಿಗಳೆಂಬ ಪ್ರಮಾಣಪತ್ರ ನೀಡಿ ಬಾರ್ಪೆಟಾದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದರು. ಈಗ ಕೇಂದ್ರದ ನೂತನ ಸರಕಾರ ಅಕ್ರಮ ವಲಸಿಗರನ್ನು ವಾಪಸು ಅಟ್ಟಲು ಪ್ರಾರಂಭಿಸಿದೆಯಾದರೂ ಅಷ್ಟರಲ್ಲಾಗಲೇ ಆಗಬಾರದ ಅನಾಹುತ ಆಗಿ ಹೋಗಿದೆ. ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತೆಯ ದನಿ ಬಲವಾಗಿಬಿಟ್ಟಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗ "ಬಾಂಧವ"ನ ಮೈಮುಟ್ಟಿದರೆ ಜಾಗ್ರತೆ ಎಂದು ದೀದಿ ದಾದಾಗಿರಿ ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬ ಅಸ್ಸಾಮಿ ಹಿಂದೂವಿಗೂ ಪುಣ್ಯಕ್ಷೇತ್ರವಾದ ಸ್ವಾಮಿ ಶಂಕರದೇವರ ಜನ್ಮಸ್ಥಳ ಧಿಂಗ್ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಸಂಖ್ಯೆ 90%ಕ್ಕೂ ಅದಿಕವಾಗಿದೆಯೆಂದರೆ ವಲಸೆಯ ಪ್ರಮಾಣ ಅರಿವಾದೀತು! ಈಶಾನ್ಯ ರಾಜ್ಯಗಳಲ್ಲಿ ಜಿಹಾದಿ ಕಾರ್ಖಾನೆಗಳು ಸಾಲಾಸಾಲು ವಿಧ್ವಂಸವನ್ನು ಸೃಷ್ಟಿಸುತ್ತಾ ಪ್ರತ್ಯೇಕತೆಗೆ ಆಗ್ರಹಿಸುತ್ತಿವೆ.
            ತನ್ನ ಹದಿನಾರರ ಹರೆಯದಲ್ಲಿ ಬ್ರಿಟಿಷರ ವಿರುದ್ಧ ಸಿಡಿದು ನಿಂತು ಗೆರಿಲ್ಲಾ ಸಮರ ಸಾರಿ ಅವರ ಭಾರೀ ಸೇನೆಯ ಎದುರು ಸೋಲನ್ನುಂಡು ಜೀವಾವಧಿ ಶಿಕ್ಷೆಗೆ ಗುರಿಯಾದ ರಾಣಿ ಗೈದಿನ್ ಲೀಯ ಪ್ರತಿಮೆ ಸ್ಥಾಪನೆಗೆ ಅಲ್ಲಿನ ಪ್ರತ್ಯೇಕತಾವಾದಿ ಹಾಗೂ ಕ್ರೈಸ್ತ ಮಾನಸಿಕತೆ ಬಿಡಲಿಲ್ಲ. ಕಾರಣ ಆಕೆಯ ಚಳವಳಿ ಹಿಂದೂ ಮಾರ್ಗದ್ದು ಹಾಗೂ ಆಕೆ ಕ್ರೈಸ್ತಳಾಗಿ ಮತಾಂತರಗೊಳ್ಳಲು ಒಪ್ಪದೇ ಇದ್ದುದು. ಪ್ರಕೃತಿ ಹಾಗೂ ಕಾಳಿ ಮಾತೆಯ ಆರಾಧಕರಾದ ನಾಗಾಗಳು ಹಿಂದೂಗಳು ಎಂದು ಆಕೆ ಹೇಳಿದುದನ್ನು ಚರ್ಚುಗಳಿಗೆ ಅರಗಿಸಿಕೊಳ್ಳಲಾಗಲಿಲ್ಲ. ನಾಗಾಲ್ಯಾಂಡಿನಲ್ಲಿ ಪ್ರತ್ಯೇಕವಾದಿಗಳು ಕ್ರೈಸ್ತನ ಹೆಸರಿನಲ್ಲಿ ಪ್ರತ್ಯೇಕ "ನಾಗಾಲಿಂ" ರಾಜ್ಯಕ್ಕೆ ಆಗ್ರಹಿಸುತ್ತಿದ್ದಾರೆ. ಸ್ವತಂತ್ರ ನಾಗಾಲಿಂ ರಾಜ್ಯಕ್ಕೆ ಆಗ್ರಹಿಸುತ್ತಿರುವ ಬಂಡುಕೋರರು ಮಣಿಪುರ ಹಾಗೂ ಅರುಣಾಚಲದ ಕೆಲವು ಪ್ರದೇಶಗಳನ್ನೂ ಆಗ್ರಹಿಸುತ್ತಿದ್ದಾರೆ. 1980ರಲ್ಲಿ ಸ್ಥಾಪನೆಯಾದ ಗಾಂಧಿ ಪ್ರತಿಮೆಯನ್ನು ಕಿತ್ತೆಸೆದ ಪ್ರತ್ಯೇಕವಾದಿಗಳು ನಾಗಾಲ್ಯಾಂಡಿನಲ್ಲಿ ಭಾರತೀಯರ ಪ್ರತಿಮೆಯ ಸ್ಥಾಪನೆಯ ಅವಶ್ಯಕತೆಯಿಲ್ಲ ಎಂದು ಫರ್ಮಾನು ಹೊರಡಿಸಿದ್ದರು. ಅಸ್ಸಾಮಿನಲ್ಲಂತೂ ಮುಸ್ಲಿಂ ಯುನೈಟೆಡ್ ಲಿಬರೇಷನ್ ಫ್ರಂಟ್, ಮುಸ್ಲಿಂ ಯುನೈಟೆಡ್ ಟೈಗರ್ಸ್, ಇಸ್ಲಾಮಿಕ್ ಲಿಬರೇಷನ್ ಆರ್ಮಿ ಮುಂತಾದ ಮೂಲಭೂತ ಸಂಘಟನೆಗಳು ಭಯೋತ್ಪಾದಕ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ.
               ಇನ್ನು ಈ ರಾಷ್ಟ್ರದ ಪ್ರಾಚೀನ ನಾಗರೀಕತೆಯ ಆಭರಣ ಎಂದು ಕರೆಯಲ್ಪಡುವ "ದೇವರ ದೇಶ" ಮಣಿಪುರದ ದುಃಸ್ಥಿತಿ ಇನ್ನೊಂದು ಬಗೆ! 2005ರ ಮೇ ತಿಂಗಳಲ್ಲಿ ಆ ಬುಡಕಟ್ಟು ರಾಜ್ಯದ ಮಹಾನ್ ಆಸ್ತಿಯಾಗಿದ್ದ ಬೃಹತ್ ಗ್ರಂಥಾಲಯವೇ ಧಗಧಗನೆ ಉರಿದು ಹೋಯಿತು. ಪ್ರಾಚೀನ ಕಾಲದ ಅಪರೂಪದ ಪುಸ್ತಕಗಳು, ಸಾವಿರಾರು ಹಸ್ತಪ್ರತಿಗಳು ಭಸ್ಮವಾದವು. ಗ್ರಂಥಭಂಡಾರಕ್ಕೆ ಬೆಂಕಿ ಬೀಳಲು ಕಾರಣವಾದದ್ದು ಕಮ್ಯೂನಿಸ್ಟರು ಹಾಗೂ ಚರ್ಚುಗಳಿಂದ ಪ್ರೇರಿತವಾಗಿರುವ ಸ್ಥಳೀಯ ಮೈತಿಯ್ ಎಂಬ ಆಂದೋಲನ. ಗ್ರಂಥಾಲಯದಲ್ಲಿ ಬಂಗಾಳಿ ಹಸ್ತಪ್ರತಿಗಳ ಸ್ಥಾನದಲ್ಲಿ ಸ್ಥಳೀಯ ಮೈತಿಯ್ ಭಾಷೆಯ ಹಸ್ತಪ್ರತಿಗಳಿರಬೇಕು ಎಂಬ ತಾಲಿಬಾನ್ ಮನಸ್ಥಿತಿಯಿಂದಾಗಿ ಈ ಗ್ರಂಥಭಂಡಾರ ಅಗ್ನಿಗಾಹುತಿಯಾಯಿತು! ಇಲ್ಲಿ ಹತ್ತಾರು ಪ್ರತ್ಯೇಕತಾವಾದಿ ಸಂಘಟನೆಗಳಿವೆ.  ಅಧ್ಯಾಪಕರಿಂದ ಹಿಡಿದು ವಿಶ್ವವಿದ್ಯಾಲಯದ ಕುಲಪತಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರವರೆಗೂ ತಮ್ಮವರನ್ನೇ ನೇಮಕ ಮಾಡಬೇಕೆಂದು ಗನ್ ಹಿಡಿದೇ ಬೆದರಿಸುತ್ತವೆ. ಇಲ್ಲಿ ರಾಷ್ಟ್ರಗೀತೆಯನ್ನೇ ನಿಷೇಧಿಸಲಾಗಿದೆ.
             ಇದು ಈಶಾನ್ಯ ರಾಜ್ಯಗಳ ಕತೆಯಾದರೆ 370ನೇ ವಿಧಿಯಿಂದ ವಿಧಿ ಬರಹವೇ ಬದಲಾದ ವಿಧಿ ಪುತ್ರನ ಭೂಮಿಯಲ್ಲಿ ಪ್ರತ್ಯೇಕತೆಯ ಕೂಗು ನೆಹರೂ ಎಂಬ ರಾಷ್ಟ್ರಘಾತುಕನ "ಘನ" ಕಾರ್ಯದ ಫಲವೆಂದರೆ ತಪ್ಪಾಗಲಾರದು. ಅಲ್ಲಿ ರಾಷ್ಟ್ರಧ್ವಜವನ್ನು ಸುಡಲಾಗುತ್ತದೆ, ಅಮರನಾಥ ಯಾತ್ರಿಗಳಿಗೆಂದು ನೀಡಲಾದ ತಾತ್ಕಾಲಿಕ ಜಮೀನನ್ನು ಕಿತ್ತುಕೊಳ್ಳಲಾಗುತ್ತದೆ, ಯಾತ್ರಿಕರ ಮೇಲೆ ಹಲ್ಲೆ ನಡೆಸಲಾಗುತ್ತದೆ, ಕೌನ್ಸರ್ ನಾಗ್ ನಂತಹ ಪೂಜನೀಯ ಯಾತ್ರೆಗಳೇ ರದ್ದುಗೊಳ್ಳುತ್ತವೆ, ದೇವಾಲಯಗಳು ಧರೆಗುರುಳುತ್ತವೆ, ಮೂರ್ತಿಗಳು ಭಗ್ನಗೊಳ್ಳುತ್ತವೆ, ಭಾರತದ ವಿರುದ್ದ-ಪಾಕಿಸ್ತಾನ ಪರ ಘೋಷಣೆಗಳನ್ನು ಅಡಿಗಡಿಗೆ ಕೂಗಲಾಗುತ್ತದೆ. ಪ್ರತ್ಯೇಕ ಧ್ವಜ, ಪ್ರತ್ಯೇಕ ಲಾಂಛನ, ಪ್ರತ್ಯೇಕ ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ದೇಶದ ಏಕೈಕ ರಾಜ್ಯವೊಂದರಲ್ಲಿ ಪ್ರತ್ಯೇಕತಾವಾದಿಗಳು ಮಾಡುತ್ತಿರುವ ಬಾನಗಡಿ ಮೀರಿದ ವ್ಯವಹಾರಗಳು ಮಾನವ ಹಕ್ಕುಗಳ ಮುಖವಾಡ ತೊಟ್ಟು ಮರೆಯಾಗುತ್ತವೆ. ಇತ್ತೀಚೆಗೆ ಉಂಟಾದ ಭೀಕರ ಪ್ರವಾಹದ ಸಂದರ್ಭದಲ್ಲಿ ಸೇನೆ ರಕ್ಷಣೆ-ಪರಿಹಾರ ಕಾರ್ಯದಲ್ಲಿ ದಿನ-ರಾತ್ರಿ ತೊಡಗಿಸಿಕೊಂಡಿದ್ದರೆ ಪ್ರತ್ಯೇಕವಾದಿಗಳು ಯೋಧರತ್ತ ಕಲ್ಲು ತೂರುತ್ತಿದ್ದರು. ಆಹಾರ ಸಾಮಗ್ರಿಗಳನ್ನು-ರಕ್ಷಣಾ ಸಾಮಗ್ರಿಗಳನ್ನು ಕಿತ್ತುಕೊಳ್ಳುತ್ತಿದ್ದರು. ಪ್ರವಾಸಿಗರನ್ನು ಪಾಕಿಸ್ತಾನದ ಪರ ಘೋಷಣೆ ಹಾಕಿ ಇಲ್ಲದಿದ್ದರೆ ಸಾಯಲು ಸಿದ್ಧರಾಗಿ ಎಂದು ಬೆದರಿಸುತ್ತಿದ್ದರು. ಕಾಶ್ಮೀರ ಪಂಡಿತರನ್ನು ಕಾಶ್ಮೀರದಲ್ಲಿ ಮತ್ತೆ ನೆಲೆಗೊಳಿಸಲು ಪ್ರಯತ್ನಿಸುತ್ತಿರುವ ಮೋದಿ ಸರಕಾರದ ಪ್ರಯತ್ನಗಳಿಗೂ ಕಲ್ಲು ಹಾಕುತ್ತಿದ್ದಾರೆ.
          ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೇಶ ಛಿದ್ರವಾಗುವುದು ಖಂಡಿತ. ಈ ದೇಶದ ಪ್ರಜೆಗಳ ಮನಸ್ಸುಗಳ ನಡುವೆಯೇ ಪ್ರತ್ಯೇಕತೆಯ ಗೋಡೆ ಎದ್ದರೆ ರಾಷ್ಟ್ರ ಉಳಿದೀತೇ? ಅಷ್ಟಕ್ಕೂ ರಾಷ್ಟ್ರವೆಂದರೆ ಬರೀ ಭೂಮಿಯ ತುಂಡೇ ಅಥವಾ ಜನರ ಗುಂಪೇ..ಅಲ್ಲವಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ-ಇತಿಹಾಸ, ಒಂದೇ ಬಗೆಯ ಆಸೆ-ಆಕಾಂಕ್ಷೆಗಳು, ಸುಖ-ದುಃಖಗಳು, ಒಂದೇ ಶತ್ರು-ಮಿತ್ರ ಭಾವನೆ ಹೊಂದಿ ಒಂದು ನಿರ್ದಿಷ್ಟ ಪ್ರಾಕೃತಿಕ ಗಡಿಗಳನ್ನು ಹೊಂದಿರುವ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗ. ಅದು ಕೇವಲ ವರ್ತಮಾನದ ಲೆಕ್ಕಾಚಾರಗಳಿಗಷ್ಟೇ ಒಳಪಡುವುದಿಲ್ಲ. ಭೂತಕಾಲದ ಇತಿಹಾಸ-ಪರಂಪರೆಗಳ ಆಳ ಅದಕ್ಕಿರುತ್ತದೆ. ಭವಿಷ್ಯತ್ತಿನ ಆಸೆ-ಆಕಾಂಕ್ಷೆಗಳ ಔನ್ನತ್ಯವೂ! ಹಾಗಾದರೆ ನಾವೂ ನಮ್ಮ ಪರಂಪರೆಯನ್ನು ಮರೆತು ಭಾಷಾಂಧರಾಗಿಯೋ ರಾಜಕೀಯ ಹಿತಾಸಕ್ತಿಗೆ ಸಿಲುಕಿಯೋ ಅಥವಾ ಸ್ವಹಿತದ-ಸ್ವಾರ್ಥದ ಸಾಧನೆಗಾಗಿಯೋ ಈ ದೇಶವನ್ನು ಈ ರಾಷ್ಟ್ರವನ್ನು ತುಂಡರಿಸುತ್ತಾ ಹೋಗುವುದು ಎಷ್ಟು ಸರಿ? ನಾವು ಒಂದಾಗಿದ್ದು ಕೈಬಿಟ್ಟಿರುವ ನಮ್ಮ ಭೂಭಾಗಗಳನ್ನು ಮತ್ತೆ ಭಾರತ ಮಾತೆಗೆ ಆಭರಣವಾಗಿ ತೊಡಿಸಿ ಅಖಂಡ ಭಾರತವನ್ನು ಮರುಸ್ಥಾಪಿಸಬೇಕಲ್ಲದೆ ನಮ್ಮೊಳಗೆ ಕಚ್ಚಾಡುತ್ತಿದ್ದರೆ ನಾವು ಮತ್ತೊಮ್ಮೆ ಜಗದ್ಗುರುವಾಗುವ ಕನಸು ನನಸಾದೀತೇ? ಅದೃಷ್ಟವಶಾತ್ ನಮ್ಮ ದನಿಗೆ ಕಿವಿಯಾಗಿರುವ ಅಭಿವೃದ್ಧಿಪರ ಅಖಂಡತೆಯ ಸಂಕಲ್ಪ ಮಾಡಿರುವ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಪ್ರತ್ಯೇಕತಾವಾದಿಗಳನ್ನು ಮಟ್ಟ ಹಾಕುವ ಕೇಂದ್ರ ಸರಕಾರದ ಪ್ರಯತ್ನಗಳಿಗೆ ನಮ್ಮ ಸಹಕಾರದ ಅಗತ್ಯವೂ ಇದೆ. ಸ್ವಚ್ಛ ಭಾರತದ ಜೊತೆ ಶುದ್ಧ ಮನಸ್ಸಿನ ಅಖಂಡ ಭಾರತವೂ ಉಳಿಯಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ