ಪುಟಗಳು

ಸೋಮವಾರ, ಮೇ 18, 2015

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ-೧

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ-೧

                ಹಲವು ದಿನಗಳೇ ಉರುಳಿದವು. ಕೋಟೆಯನ್ನು ಸುತ್ತುವರಿದ ಅಗಾಧ ಶತ್ರುಸೇನೆ ಹಿಂದೆ ಸರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕೋಟೆಯೊಳಗಿನ ಆಹಾರ ದಾಸ್ತಾನು ಬರಿದಾಗುತ್ತಿರಲು ಕೈ ಮೀರಿದ ಆ ಪರಿಸ್ಥಿತಿಯಲ್ಲಿ ಆತ್ಮಾರ್ಪಣೆಯೇ ಮಾರ್ಗವೆಂದು ನಿರ್ಧರಿಸಿತು ಚಿತ್ತೋಡಿನ ಸೇನೆ. ಬಿಲ್ಲಿನಿಂದ ಸೆಳೆದು ಬಿಟ್ಟ ಬಾಣಗಳಂತೆ ಹೊರಬಿತ್ತು 8000ಕ್ಕೂ ಅಧಿಕ ಯೋಧರ ಪಡೆ. ಆ ಸೈನ್ಯವನ್ನೆಲ್ಲಾ ತನ್ನ ಕತ್ತಿಗೆ ಆಹುತಿ ನೀಡಿ ವಿಜಯೋತ್ಸಾಹದಿಂದ ಕೋಟೆಯೊಳಗೆ ಕಾಲಿಟ್ಟ ಶತ್ರುರಾಜ. ಬಾಯಲ್ಲಿ ನೀರೂರಿಸಿದ್ದ ಮೇವಾಡದ ಸೌಂದರ್ಯ ರಾಶಿಗಳನ್ನೆಲ್ಲಾ ತನ್ನ ಜನಾನಾಕ್ಕೆ ತಳ್ಳಿ ಮನಸೋ ಇಚ್ಛೆ ಮೇಯಬಹುದೆಂದು ಒಳಗೊಳಗೇ ಖುಷಿಪಟ್ಟ. ಆದರೆ ಕೋಟೆಯೊಳಹೊಕ್ಕವನಿಗೆ ಕಾಣಸಿಕ್ಕಿದ್ದೇನು? ಧಗಧಗಿಸುತ್ತಿರುವ ಚಿತ್ತೋಡಿನ ಚಿತ್ತಚೋರಿಯರ ಚಿತೆಗಳು! ಒಂದು ಕಡೆ ಭಸ್ಮಗೊಂಡ ಸೌಂದರ್ಯರಾಶಿಗಳನ್ನು ಎವೆಯಿಕ್ಕದೆ ನೋಡುತ್ತಾ ಉಂಟಾದ ದಿಗ್ಭ್ರಮೆ ಇನ್ನೊಂದೆಡೆ ಮಿಕ್ಕವರಂತೆ ತತ್ತಕ್ಷಣ ಮಣಿಯದೆ ತನ್ನನ್ನು ಕಾಡಿದ ಮೇವಾಡದ ಮೇಲಿನ ಕ್ರೋಧ! ಎರಡೂ ಸೇರಿ ಹೊರಬಿದ್ದದ್ದು ಸರ್ವರನ್ನು, ಸಕಲವನ್ನೂ ನಾಶ ಮಾಡಿರೆಂಬ ಆಜ್ಞೆ!

               ಒಡೆಯನ ಅನುಮತಿ ಸಿಕ್ಕಿದ್ದೇ ತಡ, ಇನ್ನೇನು ತಡೆ, ಮತಿಗೆಟ್ಟ ಪಡೆ ವಿಜೃಂಭಿಸಿತು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು. ತಮ್ಮ ಅರಸನಿಗೆ ಲೆಕ್ಕ ಒಪ್ಪಿಸುವ ಸಲುವಾಗಿ ಶವಗಳಿಂದ ಜನಿವಾರಗಳನ್ನು ಕಲೆ ಹಾಕಿದರು. ಅವುಗಳನ್ನು ತೂಕ ಮಾಡಿದಾಗ 600 ಪೌಂಡುಗಳಿದ್ದವೆಂದರೆ ಮಾರಣಹೋಮದ ಪರಿ ಅರಿವಾದೀತು. ಕೇವಲ ಒಂಬತ್ತೂವರೆ ಗಂಟೆಗಳವಧಿಯಲ್ಲಿ ಕೊಲೆಯಾದವರ ಸಂಖ್ಯೆ 30ಸಾವಿರ ಎಂದು ಆನಂದದಿಂದ ವರ್ಣಿಸಿದ್ದಾನೆ ಅಬುಲ್ ಫಜಲ್! ಎಲ್ಲಿ ನೋಡಿದರಲ್ಲಿ ಶವಗಳ ರಾಶಿ, ನಾಲ್ದೆಸೆಗಳಿಗೆ ಚಾಚಿದ ಬೆಂಕಿಯ ಕೆನ್ನಾಲಿಗೆ, ಕಮಟು ವಾಸನೆ, ಆಕ್ರಂದನ, ಭೀಭತ್ಸ ದೃಶ್ಯಗಳು. ಇದರ ಕಾರಣಕರ್ತನಾದ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ ಇನ್ನೂ ಇದೆಯೇ. ಇದ್ದರೆ ಕೇಳಿ...ಮಹಾ ಮಾನವತಾವಾದಿ ಎಂದು ನಮ್ಮ ಸೆಕ್ಯುಲರ್ ಇತಿಹಾಸಕಾರರು ಹಾಡಿ ಹೊಗಳಿರುವ; ಸಾಹಸಿ, ಸುಕೋಮಲಿ, ಆದರ್ಶವಾದಿ, ಕನಸುಗಾರ ಎಂದು ನೆಹರೂ ಹಾಡಿಹೊಗಳಿರುವ ಅಕ್ಬರ್...ಅದೇ "ಅಕ್ಬರ್ ದಿ ಗ್ರೇಟ್"!!!

                 ಈ ಭೀಭತ್ಸ ಹತ್ಯಾಕಾಂಡವನ್ನು ನೋಡಲಾರದೆ ರಾಜ್ಯದ ಮೂಲೆ ಮೂಲೆಗಳಿಂದ ಕೇಳಿಬರುತ್ತಿರುವ ಆಕ್ರಂದನಗಳಿಂದ ಕಂಬನಿದುಂಬಿ ರಜಪೂತ ಪ್ರಮುಖರಾದ ಮಾನ್ ಸಿಂಗ್, ತೋಡರಮಲ್ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡಾಗ ಇದೇ ಮಾನವತಾವಾದಿ ಹೇಳಿದ್ದೇನು ಗೊತ್ತೇ? 
"ನಾನೀಗ ತೈಮೂರನೊಂದಿಗೆ ಅನುಸಂಧಾನದಲ್ಲಿದ್ದೇನೆ. ನನಗೀಗ ಬೇಕಾದುದು ರಕ್ತವೇ ಹೊರತು ಅಮೃತವಲ್ಲ. ಷಾಹಾನಾಮಾದ ಪಠಣವನ್ನು ನಾನೀಗ ಕೇಳಬೇಕು."
ಕ್ಷಣಿಕ ಕೋಪದಿಂದ ಅರಸ ಹೀಗಾಡಿದ ಎಂದುಕೊಳ್ಳೋಣವೇ? ಆದರೆ ಅಂತಹ ಕಿಂಚಿತ್ ಪಶ್ಚಾತ್ತಾಪವೂ ಅವನಿಗಿರಲಿಲ್ಲ. ತಾನು ಮಾಡಿದ್ದು ಸರಿ; ಅದನ್ನು ದೇವರೇ ಮೆಚ್ಚಿಕೊಂಡ ಎಂದು ಯಾವ ನಾಚಿಕೆ-ಹಿಂಜರಿಕೆಗಳಿಲ್ಲದೆ ಆತ ಹೇಳಿಕೊಂಡ. ಅಬುಲ್ ಫಜಲ್ ಯಥಾವತ್ತಾಗಿ ನಮೂದಿಸಿರುವ ಅಕ್ಬರನ ಮಾತುಗಳನ್ನು ಓದಿದವರ್ಯಾರೂ ಆತನನ್ನು ಮಾನವತಾವಾದಿ ಬಿಡಿ ಮಾನವನೆಂದೇ ಕರೆಯಲಾರರು. ಅಷ್ಟಕ್ಕೂ ನನ್ನ ರೀತಿ ನೀತಿಯನ್ನು ಅಲ್ಲಾ ಅನುಮೋದಿಸದೇ ಇರುತ್ತಿದ್ದರೆ ಮೈಮೇಲೆ ಸಣ್ಣ ಗಾಯವೂ ಇಲ್ಲದಂತೆ ನಾನು ಹಿಂದಿರುಗುತ್ತಿರಲಿಲ್ಲ ಎಂದ ಆ ದಯಾಪರನ ಉನ್ಮಾದವೇನೂ ಕ್ಷಣಿಕವಾದುದಾಗಿರಲಿಲ್ಲ. ಅದು ಜನ್ಮಜಾತ ಸ್ವಭಾವಜನ್ಯ ಸಹಜೋನ್ಮಾದ, ರಕ್ತಗುಣ! ನಮ್ಮ "ಮಹಾನ್ ಇತಿಹಾಸಕಾರರು" ಬರೆದುದನ್ನು ಓದಿ ಸತ್ಯ ಎಂದುಕೊಂಡವರಿಗೆ ಅಕ್ಬರನೇ ಆದರ್ಶಪುರುಷನಾಗಿರುವುದಕ್ಕೂ, ಅಕ್ಬರನಿಗೆ ಆತನ ವಂಶಜ ತೈಮೂರನೇ ಆದರ್ಶಪುರುಷನಾಗಿರುವುದಕ್ಕೆ ಹೆಚ್ಚೇನು ವ್ಯತ್ಯಾಸವಿಲ್ಲ. ಅದು ಆಶ್ಚರ್ಯಪಡುವಂತಹದ್ದೂ ಅಲ್ಲ!

                  ಚಿತ್ತೋಡಿನ ಮೇಲಾದ ದೌರ್ಜನ್ಯ ಕೇವಲ ಜನರಿಗಷ್ಟೇ ಸೀಮಿತವಾಗುಳಿಯಲಿಲ್ಲ. ಖಿಲ್ಜಿ, ಬಾಬರರು "ಕರುಣೆದೋರಿ" ಉಳಿಸಿದ್ದ ಪುಣ್ಯಕ್ಷೇತ್ರಗಳೆಲ್ಲಾ ಈ ಪಾಪಿಯ ಕತ್ತಿಗೆ ಬಲಿಯಾದವು. ರಜಪೂತರ ಆರಾಧ್ಯ ದೈವ ಏಕಲಿಂಗೇಶ್ವರನ ವಿಗ್ರಹ ಮಸೀದಿಗಳಲ್ಲಿ ಕುರಾನನ್ನಿಡುವ ಪೀಠಕ್ಕಾಗಿ ತುಂಡರಿಸಲ್ಪಟ್ಟಿತು. ಇಂತಹವನನ್ನು ಪರಮತ ಸಹಿಷ್ಣು ಎಂದವರಿಗೆ ಅಕ್ಬರನೇ 1568 ಮಾರ್ಚ್ 9ರಂದು ಹೊರಡಿಸಿದ ವಿಜಯೋನ್ಮಾದದ "ಫತ್ವಾ" ತಮ್ಮ ಸೆಕ್ಯುಲರ್ ಬುದ್ಧಿಯಿಂದಲೇ ಮರೆತುಹೋಗಿರಬೇಕು! "ನಮ್ಮ ಅಮೂಲ್ಯ ಸಮಯವನ್ನು ಜಿಹಾದಿಗೆ ಸರ್ವರೀತಿಯಿಂದಲೂ ಬಳಸೋಣ. ಕೋಟೆ-ಕೊತ್ತಲಗಳನ್ನು ವಶಪಡಿಸಿಕೊಂಡು, ಖಡ್ಗದ ಬಲದಿಂದ ಬಹುದೇವತಾರಾಧನೆಯನ್ನು ಹೋಗಲಾಡಿಸಿ ಕಾಫಿರರ ಪುಣ್ಯ ಸ್ಥಳಗಳನ್ನು ನಾಶಮಾಡಿ ಇಸ್ಲಾಂ ಪತಾಕೆಯನ್ನು ಹಾರಿಸೋಣ." ಎಂದವನನ್ನು ಆದರ್ಶವಾಗಿಟ್ಟುಕೊಂಡವರು ಹೇಗಿರಬಹುದು?

             ವಿನ್ಸೆಂಟ್ ಸ್ಮಿತ್, ಜೇಮ್ಸ್ ಟಾಡ್ ಮುಂತಾದ ಪಾಶ್ಚಾತ್ಯ ಇತಿಹಾಸಕಾರರು ಬರೆದಿರುವುದನ್ನು ಬಿಡಿ, ಅಬುಲ್ ಫಜಲ್ ಎಂಬ ಅಕ್ಬರ್ ಭಕ್ತ ಬರೆದುದನ್ನೂ ಪಕ್ಕಕ್ಕಿಡಿ, ಸ್ವತಃ ಅಕ್ಬರನೇ ಹೊರಡಿಸಿದ ಫತ್ವಾಗಳನ್ನೆಲ್ಲಾ ನೋಡಿದರೆ ಸಾಕು ದಯಾಪರ, ಪರಮತ ಸಹಿಷ್ಣುವಿನ ನಿಜಬಣ್ಣ ಬಯಲಿಗೆ ಬರುತ್ತದೆ. ತನ್ನ ಕನಸು ಸಾಕಾರಗೊಳಿಸಲು ಈ ಮಹಾನ್ ಮಾನವತಾವಾದಿ ಮಾಡಿದ ದಾನವ ಉಪಕ್ರಮಗಳ ಅರಿವಾದೀತು.
--ಮುಂದುವರಿಯುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ