ಪುಟಗಳು

ಮಂಗಳವಾರ, ಜನವರಿ 24, 2017

ಮತಾಂತರಿಗಳಿಗೆ ಚಾದರ ಅರ್ಪಿಸುವ ಹಿಂದೂವಿನ ಭೋಳೇತನ

ಮತಾಂತರಿಗಳಿಗೆ ಚಾದರ ಅರ್ಪಿಸುವ ಹಿಂದೂವಿನ ಭೋಳೇತನ

                     ಸೂಫಿಗಳ ಬಗೆಗೆ ಭಾರತೀಯ ಸಮಾಜದಲ್ಲಿ ವಿಶೇಷ ಭಕ್ತಿ ಭಾವನೆಗಳಿವೆ. ಜಾತ್ಯಾತೀತ ಬುದ್ಧಿಜೀವಿಗಳಿಗೆ ಈ ಸೂಫಿಗಳಂತೂ ಕ್ರೌರ್ಯವೇ ಮೈವೆತ್ತ ಮುಸ್ಲಿಮ್ ಸಮಾಜದ ಸಮರ್ಥನೆಗೆ ದೊರಕುವ ಬೀಜರೂಪಗಳು. ಮುಸ್ಲಿಮರು ಭಯೋತ್ಪಾದಕರ ಸಮರ್ಥನೆಗೆ ಗುಂಪುಗುಂಪಾಗಿ ನಿಂತಾಗ, ಬೀದಿ ಬೀದಿಗಳಲ್ಲಿ ಪುಂಡಾಟ ನಡೆಸುತ್ತಾ ಹಿಂದೂಗಳ ಕಗ್ಗೊಲೆ ನಡೆಸಿದಾಗ ಸೆಕ್ಯುಲರುಗಳು ಆ ಕೃತ್ಯಗಳನ್ನು ಮರೆಮಾಚಲು ಸೂಫಿಗಳನ್ನು ಮುಂದೆ ತಂದು ನಿಲ್ಲಿಸುತ್ತಾರೆ. ಸೂಫಿಗಳನ್ನು ದೇವರಂತೆ ಕಂಡು ಪೂಜಿಸುವ, ಭಜಿಸುವ,  ಅವರನ್ನೇ ಗುರುಗಳಂತೆ ಗೌರವಿಸುವ ಹಲವಾರು ಹಿಂದೂ ಪರಿವಾರಗಳು ಭಾರತದಲ್ಲಿವೆ. ಮುಸ್ಲಿಮ್ ಸಮಾಜವನ್ನು ಸಹಜವಾಗಿ ಸಂಶಯದ ಕಣ್ಣುಗಳಿಂದ ನೋಡುವವರಿಗೂ ಸೂಫಿಗಳೆಂದರೆ ಆದರ ಭಾವನೆಗಳಿವೆ. ಆದರೆ ನಿಜವಾಗಿಯೂ ಸೂಫಿಗಳು ಅಂತಹ ಗೌರವಕ್ಕೆ ಪಾತ್ರರಾಗಬೇಕಾದವರೇ ಎಂದರೆ "ಇಲ್ಲ" ಎನ್ನುವ ಉತ್ತರವನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅದರಲ್ಲೂ ಭಾರತದ ಸೂಫಿಗಳಂತೂ ಭಾರತವನ್ನು ಸೂರೆಗೈಯಲು, ಸರ್ವನಾಶಗೈಯಲು ಮುಸ್ಲಿಮ್ ಮತಾಂಧ ಅರಸರಿಗೆ ಪ್ರೇರಕ ಶಕ್ತಿಯಾಗಿದ್ದರೆಂದೇ ಇತಿಹಾಸ ಬೊಟ್ಟು ಮಾಡಿ ಹೇಳುತ್ತದೆ. ಆದರೆ ಇತಿಹಾಸಕಾರರು ಇಲ್ಲೂ ತಮ್ಮ ಎಂದಿನ ದ್ರೋಹ ಕಾರ್ಯವನ್ನೆಸಗಿ ಪರದೆಯೊಂದನ್ನು ಎಳೆದುಬಿಟ್ಟಿದ್ದಾರೆ. ಇತಿಹಾಸವನ್ನು ಆವರಿಸಿರುವ ಈ ಸುಳ್ಳು ಪರದೆಯನ್ನು ಸರಿಸಿ ನೋಡಿದರೆ ಹಿಂದೂಗಳ ಭೋಳೆ ಸ್ವಭಾವವನ್ನು ಕ್ರೈಸ್ತರಂತೆ ಅನಾಯಾಸವಾಗಿ ಬಳಸಿಕೊಂಡು ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಿಸಿದ ಸೂಫಿಗಳ ಘಾತಕ ಕಾರ್ಯ ಸ್ಪಷ್ಟವಾಗಿ ಕಾಣುತ್ತದೆ.

               ಸೂಫಿಗಳಲ್ಲಿ ಚಿಸ್ತಿಯಾ, ನಶ್ಕ್ ಬಂದಿಯಾ, ಸುಹಾರ್ ವಾರ್ಡಿ ಮತ್ತು ಖ್ವಾದ್ರಿಯ ಮುಂತಾದ ಹಲವು ಗುಂಪುಗಳಿವೆ. ಆದರೆ ಭಾರತದಲ್ಲಿ ಬಲವಾಗಿ ಬೇರುಬಿಟ್ಟವರು ಚಿಸ್ತಿಯಾ ಗುಂಪಿನ ಸೂಫಿಗಳು. ಇರಾನ್, ಇರಾಕಿನಲ್ಲಿದ್ದ ಸೂಫಿಗಳು ಹಿಂಸೆಯನ್ನು ಪ್ರಚೋದಿಸದ ನೈಜ ಶಾಂತಿದೂತರು ಎನ್ನುತ್ತಾರಾದರೂ ಭಾರತಕ್ಕೆ ಎಲ್ಲೆಡೆಯಿಂದ ಬಂದ ಸೂಫಿಗಳು ಜಿಹಾದ್ ಎಂದು ಬೊಬ್ಬಿರಿಯುತ್ತಲೇ ಬಂದರು. ಭಾರತದ ಭಕ್ತಿ ಪರಂಪರೆಯನ್ನು ತಮ್ಮ ಮತಾಂತರ  ಕಾರ್ಯಕ್ಕೆ ಉಪಯೋಗವಾಗುವಂತೆ ಅಳವಡಿಸಿಕೊಂಡು ದೇವರು ಎಂದರೆ ಕಣ್ಣು ಮುಚ್ಚಿ ನಂಬುವ ಹಿಂದೂಗಳ ಸ್ವಭಾವವನ್ನು ಎಗ್ಗಿಲ್ಲದೆ ಬಳಸಿಕೊಂಡು ಹಿಂದೂ ಸಮಾಜದ ಸರ್ವನಾಶಕ್ಕೆ ಈ ಸೂಫಿಗಳು ಕಾರಣರಾದರು. ಅದರಲ್ಲೂ ಕಾಶ್ಮೀರ, ದೆಹಲಿ, ಗುಜರಾತ್, ಬಿಜಾಪುರಗಳು ಈ ಸೂಫಿಗಳ ಮತಾಂಧತೆಗೆ ಗಬ್ಬೆದ್ದು ಹೋದವು. ಎಂಟನೆಯ ಶತಮಾನದಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಬಂದ ಹಲವು ಸೂಫಿಗಳು ಕ್ರೈಸ್ತ ಮಿಷನರಿಗಳಂತೆ ಮತಪ್ರಚಾರ ಮಾಡಿ, ಪ್ರಾರ್ಥನಾ ಮಂದಿರ ಕಟ್ಟಿ, ಸ್ಥಳೀಯ ಜನರನ್ನು ಮತಾಂತರಗೊಳಿಸಿದರು. ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದ. ಹೀಗೆ ದೇಶದೆಲ್ಲೆಡೆ ಸೂಫಿಗಳ ಘಾತಕ ಕಾರ್ಯ ಕಾಣಸಿಗುತ್ತದೆ. ಪ್ರಸ್ತುತ ಲೇಖನದಲ್ಲಿ ಮದ್ದು ಕೊಂಡು ಹೋಗಲು ಬಂದು ರಣ ಹದ್ದಿನಂತೆ ಹಿಂದೂಗಳ ಮೇಲೆರಗಿದ ಸೂಫಿಯೊಬ್ಬನ ಘಾತಕ ಕಾರ್ಯದಿಂದ ದೇವ ದುರ್ಲಭ ಭೂಮಿ ದುರ್ಬಲವಾದ ಬಗೆಯನ್ನು ವಿಸ್ತರಿಸಲಾಗಿದೆ.

             ಶಂಸುದ್ದೀನ್ ಅರಾಖಿ. ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್" ಹಾಗೂ ಶ್ರೀವರನಿಂದ ರಚಿತವಾದ ರಾಜತರಂಗಿಣಿ ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.

                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ರಾಜತರಂಗಿಣಿ ಈ ದೇವಾಲಯಗಳಲ್ಲಿದ್ದ ದೇವತೆಗಳನ್ನು ರಣರಂಭಾದೇವ, ರಣರಂಭಾಸ್ವಾಮಿನ್ ಎಂದು ಹೆಸರಿಸಿದೆ. ಅಲ್ಲದೆ ಪ್ರದ್ಯುಮ್ನ ಪರ್ವತಾಗ್ರದಲ್ಲೇ ಪಾಶುಪತ ಮಠವನ್ನೂ ರಣಾದಿತ್ಯ ಕಟ್ಟಿಸಿದ್ದ ಎಂದು ರಾಜತರಂಗಿಣಿ ಉಲ್ಲೇಖಿಸಿದೆ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).

               "ಮುಕದ್ದಮ್ ಸಾಹಿಬ್ ಹಾಗೂ ಅಕುಂಡ್ ಮುಲ್ಲಾ ಶಾಹ್ ಮಸೀದಿಗಳ ಕೆಳಗೆ ಪುರಾತನ ಬೃಹತ್ ಹಿಂದೂ ದೇವಾಲಯವೊಂದರ ಅವಶೇಷಗಳಿವೆ" ಎಂದು ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್ ಸ್ಪಷ್ಟಪಡಿಸಿದ್ದಾನೆ. ಮುಂದುವರಿದು ಸ್ಟೈನ್ ಹೇಳುತ್ತಾನೆ, "ಭೀಮಸ್ವಾಮಿನ್ ಬಂಡೆಯ ಆಗ್ನೇಯ ದಿಕ್ಕಿನಲ್ಲಿರುವ ಬಹಾವುದೀನ್ ಸಾಹಿಬ್ ನಿಸ್ಸಂಶಯವಾಗಿ ದೇವಾಲಯದ ಭಗ್ನ ಅವಶೇಷವೊಂದರ ಮೇಲೆಯೇ ನಿರ್ಮಿಸಲ್ಪಟ್ಟಿದೆ. ಹಳೆಯ ಹಿಂದೂ ದೇವಾಲಯದ ಅಳಿದುಳಿದ ಗೋಡೆಗಳನ್ನು ಈ ಝಿಯಾರತ್ತಿನ ಒಳಗೆ ಇನ್ನೂ ಕಾಣಬಹುದು. ನೈರುತ್ಯ ದಿಕ್ಕಿನಲ್ಲಿ ನಾಶಗೊಳಿಸಲ್ಪಟ್ಟ ಕಲ್ಲಿನಿಂದ ನಿರ್ಮಿಸಲ್ಪಟ್ಟ ದೇವಾಲಯವೊಂದರ ಪ್ರವೇಶ ದ್ವಾರ ಕಾಶ್ಮೀರ ಪಂಡಿತರಿಂದ ಪೂಜಿಸಲ್ಪಡುತ್ತಿದ್ದ, ಪ್ರವರಸೇನ ತನ್ನ ಹೊಸ ರಾಜಧಾನಿಯಲ್ಲಿ ಕಟ್ಟಿಸಿದ್ದ ಪ್ರವೇಶ್ವರನ ದೇವಾಲಯದ್ದು ಎಂದು ನಿಖರವಾಗಿ ಹೇಳಬಹುದು. ಹಾಗೆಯೇ ಚಾಮುಂಡಿ ದೇವಳದ ಕಲ್ಲಿನಿಂದ ಕಟ್ಟಲ್ಪಟ್ಟ ಆರು ಯಾರ್ಡುಗಳಿಗೂ ಹೆಚ್ಚು ಎತ್ತರದ ಗೋಡೆಗಳು ಇತಿಹಾಸದ ಸಾಕ್ಷಿಯಾಗಿ ನಿಂತಿವೆ. ಒಳಗಿನ ಅಡಿಪಾಯ ಹಾಗೂ ಗೋಡೆಗಳ ಮೇಲೆ ಮಸೀದಿಯೊಂದು ನಿರ್ಮಿಸಲ್ಪಟ್ಟಿದೆ."

                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.

               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!

               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.

                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.

                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.

              ಇದು ಅರಾಖಿಯ ಕಥೆಯಾದರೆ ಭಾರತದ ಇತಿಹಾಸವನ್ನೇ ಬದಲಾಯಿಸಿದ ತರೈನ್ ಯುದ್ಧಕ್ಕೆ ಕಾರಣನಾದ ಮೊಯಿನುದ್ದೀನ್ ಚಿಸ್ತಿ ಎಂಬ ಸೂಫಿಯದ್ದು ಇನ್ನೊಂದು ಕಥೆ! ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಪತನವನ್ನು ಕಾಣಬೇಕಿರಲಿಲ್ಲ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಅದಕ್ಕೆ ಈ ಚಿಸ್ತಿಯ ಪ್ರೇರಣೆಯಿತ್ತು. ಇಂದು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಚಾದರ ಅರ್ಪಿಸಿ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು. ಎಂತಹಾ ವಿಚಿತ್ರ ನಮ್ಮವರ ಧಾರ್ಮಿಕ ಭಾವನೆ, ತಮ್ಮನ್ನು ಆಕ್ರಮಿಸಿದವರನ್ನೇ ಸಂತ ಎಂದು ಆರಾಧಿಸುವುದು! ನೈಜ ಇತಿಹಾಸ ತಿಳಿದಿಲ್ಲವಾದರೆ ಆಗುವ ಅನಾಹುತ ಇಂತಹುದ್ದೇ! ಸೂಫಿಗಳೆಂದರೆ ದೇವ ಮಾನವರೆಂಬ ಭಾವನೆ ಹಿಂದೂ ಸಮುದಾಯದಲ್ಲಿ ಬೀಡು ಬಿಟ್ಟಿದೆ. ಅದಕ್ಕಾಗಿಯೇ ಸಿಕ್ಕ ಸಿಕ್ಕ ದರ್ಗಾಗಳಿಗೆ ಚಾದರ ಅರ್ಪಿಸುವ ವೈಚಾರಿಕ ಮತಾಂತರಕ್ಕೆ ಹಿಂದೂಗಳು ಸದ್ದಿಲ್ಲದೆ ಗುರಿಯಾಗುತ್ತಿದ್ದಾರೆ. ದಾಡಿ ಬಿಟ್ಟ ಮುಲ್ಲಾಗಳು ಮುಸಿಮುಸಿ ನಗುವ ದೃಶ್ಯ ಮೀಸೆಯಿಲ್ಲದ ಮುಖದಲ್ಲಿ ಎದ್ದು ಕಾಣುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ