ಪುಟಗಳು

ಮಂಗಳವಾರ, ಜನವರಿ 23, 2018

ಸೂತ್ರ

ಅಲ್ಪಾಕ್ಷರಮಸಂದಿಗ್ಧಂ ಸಾರವದ್ವಿತ್ವತೋಮುಖಮ್
ಅಸ್ತೋಭಮನವದ್ಯಂ ಚ ಸೂತ್ರಂ ಸೂತ್ರವಿದೋವಿದುಃ ||

- ಸೂತ್ರದ ಆಶಯವು ಆರು ಸಂಕೇತಗಳ ತತ್ವಗಳಿಗನುಸಾರವಾಗಿ ವ್ಯಾಖ್ಯಾನಕಾರನಿಂದ ರೂಪಿಸಲ್ಪಡುತ್ತದೆ. ಅವುಗಳೆಂದರೆ: 'ಉಪಕ್ರಮ' ಮತ್ತು 'ಉಪಸಂಹಾರ', 'ಅಭ್ಯಾಸ' (ಪುನರಾವರ್ತನೆ ಅಥವಾ ಪುನರುಕ್ತಿ), 'ಅಪೂರ್ವತಾ', 'ಫಲ' , 'ಅರ್ಥವಾದ' (ಸ್ತುತಿ ಅಥವಾ ಗುಣಗಾನ) ಮತ್ತು 'ಉಪಪತ್ತಿ' (ತರ್ಕಬದ್ಧತೆ). ಯಾವ ವಾಕ್ಯದಲ್ಲಿ ಅದರ ಉದ್ದೇಶಕ್ಕೆ ಅವಶ್ಯವಾದ ಮಾತೊಂದನ್ನೂ ಬಿಟ್ಟಿಲ್ಲವೋ ಮತ್ತು ಅನವಶ್ಯಕವಾದ ಮಾತೊಂದನ್ನೂ ಸೇರಿಸಿಲ್ಲವೋ ಮತ್ತು ಯಾವುದಕ್ಕೆ ಹೊಸ ಅಕ್ಷರವನ್ನು ಸೇರಿಸಿದರಾಗಲೀ, ಇರುವುದನ್ನು ತೆಗೆದುಹಾಕಿದರಾಗಲೀ ಅಥವಾ ಅಕ್ಷರಗಳನ್ನು ಸ್ಥಾನಾಂತರ ಮಾಡಿದರಾಗಲೀ ಅರ್ಥವು ಉದ್ದೇಶಕ್ಕಿಂತ ಹೆಚ್ಚಿನದೋ, ಕಡಿಮೆಯದೋ ಅಥವಾ ಬೇರೆಯದೋ ಆದೀತೋ ಅಂತಹ ಮಿತ ಪದ ಸಂಯೋಜನೆಗೆ ಸೂತ್ರ ಎಂದು ಹೆಸರು. ಅಂದರೆ ವ್ಯರ್ಥಾಕ್ಷರಗಳಿಲ್ಲದೇ, ಮಿತಾಕ್ಷರಗಳಿಂದೊಡಗೂಡಿ ಬಹುವಿಷಯ ನಿರ್ಣಾಯಕವಾಗಿ, ಇತರ ಪ್ರಮಾಣಗಳಿಂದ ಅಲಭ್ಯವಾದ ಅರ್ಥಗಳನ್ನು ಜ್ಞಾಪಿಸುವವುಗಳಾಗಿ ಬಹುಶಾಖಾನಿರ್ಣಾಯಕಗಳಾದ ವಾಕ್ಯಗಳು - ಸೂತ್ರಗಳು.

ಜನ್ಮಾದ್ಯಸ್ಯ ಯತಃ || #ಬ್ರಹ್ಮಸೂತ್ರ
ನಾಲ್ಕೇ ಪದಗಳು:
ಅಸ್ಯ = ಈ ಜಗತ್ತಿನ
ಜನ್ಮ = ಹುಟ್ಟುವಿಕೆ
ಆದಿ = ಮೊದಲಾದದ್ದು
ಯತಃ = ಯಾವುದರಿಂದ ಉಂಟಾಗಿದೆಯೋ
ಅದೇ ಬ್ರಹ್ಮ ಎಂದು ನಾವು ಅಧ್ಯಾಹಾರ ಮಾಡಿಕೊಳ್ಳಬೇಕು.
ಸೂತ್ರವು ನಾಲ್ಕು ಪದಗಳಲ್ಲಿ ಹೇಳಿದ್ದನ್ನು ತಿಳಿಸಲು #ತೈತ್ತಿರೀಯೋಪನಿಷತ್ತು ಹದಿನೈದು ಪದಗಳನ್ನು ತೆಗೆದುಕೊಂಡಿದೆ.
"ಯತೋ ವಾ ಇಮಾನಿ ಭೂತಾನಿ ಜಾಯನ್ತೇ
ಯೇನ ಜಾತಾನಿ ಜೀವನ್ತಿ |
ಯತ್ಪ್ರಯನ್ತ್ಯಭಿಸಂವಿಶನ್ತಿ
ತದ್ವಿಜಿಜ್ಞಾಸಸ್ವ | ತದ್ಬ್ರಹ್ಮೇತಿ ||

"ಸೂತ್ರಾರ್ಥೋ ವರ್ಣ್ಯತೇ ಯತ್ರ ಪದೈಸ್ಸೂತ್ರಾನುಕಾರಿಭಿಃ
ಸ್ವಪದಾನಿ ಚ ವರ್ಣ್ಯಂತೇ ಭಾಷ್ಯಂ ಭಾಷ್ಯವಿದೋವಿದುಃ ||"

- ಸೂತ್ರಾನುಕಾರಿಪದಗಳನ್ನೇ ಉಪಯೋಗಿಸಿ ಸೂತ್ರಾರ್ಥಗಳನ್ನು ಅರಹುತ್ತಾ ಗಂಭೀರಾರ್ಥಕ ಸ್ವಪದಗಳನ್ನೂ ವಿವರಿಸುವುದು ಭಾಷ್ಯಲಕ್ಷಣ

#ಡಿವಿಜಿಯವರ #ಜೀವನಧರ್ಮಯೋಗದಿಂದ ಪ್ರೇರಿತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ