ಪುಟಗಳು

ಭಾನುವಾರ, ಆಗಸ್ಟ್ 11, 2019

ಬೇಕಾದುದು ಕ್ಷಮೆಯಲ್ಲ; ಮತಾಂತರಕ್ಕೆ ಕಡಿವಾಣ

ಬೇಕಾದುದು ಕ್ಷಮೆಯಲ್ಲ; ಮತಾಂತರಕ್ಕೆ ಕಡಿವಾಣ


            ಒಬ್ಬ ಆರ್ಚ್ ಬಿಷಪ್ ಜಲಿಯನ್ ವಾಲಾಭಾಗ್'ನಲ್ಲಿ ಏನಾಗಿತ್ತು ಎನ್ನುವುದರ ಪೂರ್ಣ ಮತ್ತು ಪಾರದರ್ಶಕ ಮಾಹಿತಿಯನ್ನು ಕೊಡುವುದೆಂದರೇನರ್ಥ? ಆರ್ಚ್ ಬಿಷಪ್ ಏನು ಇತಿಹಾಸಕಾರನೇ ಅಥವಾ ಜಲಿಯನ್ ವಾಲಾಭಾಗಿನಲ್ಲಿ ನಡೆದ ಕ್ರೌರ್ಯ ಆತ ಮಾಹಿತಿ ಕೊಟ್ಟೊಡನೆ ಮರೆಯಾಗುವುದೇ? ಶತಮಾನದ ಬಳಿಕ ಬ್ರಿಟಿಷರು ತಮ್ಮ ಆರ್ಚ್ ಬಿಷಪ್ ಒಬ್ಬನನ್ನು ಜಲಿಯನ್ ವಾಲಾಭಾಗಿಗೆ ಕಳುಹುತ್ತಿದ್ದಾರೆ. ಆತನ ಸ್ವಾಗತಕ್ಕೆ ಭಾರತದಲ್ಲಿನ ಅವನ ವಂದಿಮಾಗಧರು ಅಣಿಯಾಗುತ್ತಿದ್ದಾರೆ. ಆದರೆ ಆತ ಬರುತ್ತಿರುವುದು ಕ್ಷಮೆ ಕೇಳಲಲ್ಲ; ಇತಿಹಾಸದಲ್ಲಿ ಏನಾಯಿತು ಎಂದು ವಿವರಿಸುವುದಕ್ಕೆ; ತಮ್ಮ ಇತಿಹಾಸದ ಪಾಪಗಳನ್ನು ಗುರುತಿಸಿಕೊಳ್ಳುವುದಕ್ಕೆ ಎನ್ನುವ ನುಡಿಮುತ್ತುಗಳು ಆತನಿಂದಲೇ ಬಂದಿವೆ!ಅಸಲಿಗೆ ನಮಗೆ ಬೇಕಾದುದು ಕ್ಷಮಾಪಣೆಯಲ್ಲ. ಪಂಜಾಬಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಸಿಖ್ ಬಂಧುಗಳ ಮತಾಂತರಕ್ಕೆ ಆತ ಕಡಿವಾಣ ಹಾಕಿದರೆ ಅದು ಆತ ಯಾಚಿಸುವ ಕ್ಷಮೆಗಿಂತಲೂ ದೊಡ್ಡದು. ಮಾತ್ರವಲ್ಲ ಜಲಿಯನ್ ವಾಲಾಭಾಗಿನಲ್ಲಿ ಹರಿದ ನೆತ್ತರಿಗೆ, ಅಳಿದ ಬಂಧುಗಳಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ! ಆದರೆ ಅಂತಹುದನ್ನು ಪಾದ್ರಿಯೊಬ್ಬನಿಂದ ನಿರೀಕ್ಷಿಸಬಹುದೇ? ಈಗಾಗಲೇ ಆತ ಬರುವುದು ತನ್ನ ಮತದ ಹಿರಿಮೆಯನ್ನು ಸಾರಲು ಎನ್ನುವುದು ಆತನಿಗೆ ಅಂತರ್ಮತೀಯ ಸಲಹೆಗಾರನಾಗಿರುವವನಿಂದ ಮಾಧ್ಯಮಗಳಿಗೆ ವಿವರಿಸಲ್ಪಟ್ಟಿದೆ!

               ರಾಜಕೀಯದ ಭೇಟಿ ಇದಲ್ಲ ಎನ್ನುತ್ತಾ ಹತ್ತು ದಿನಗಳ ಭಾರತ ಪ್ರವಾಸಕ್ಕೆಂದು ಆಗಸ್ಟ್ 31ರಂದು ಬರುತ್ತಿರುವ ಕ್ಯಾಂಟರ್ಬರಿಯ ಆರ್ಚ್ ಬಿಷಪ್ "ಭಾರತದಲ್ಲಿ ಗುಂಪುಗಲಭೆ ಇದೆ, ಭಾರತೀಯನೊಬ್ಬ ಹಿಂದೂವೇ ಆಗಿರಬೇಕು ಅನ್ನುವ ಪ್ರತಿಪಾದನೆ ಬಲವಾಗುತ್ತಿದೆ, ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳಾಗುತ್ತಿವೆ" ಎನ್ನುವ ತನ್ನವರ ಕಲ್ಪಿತ ವರದಿಯನ್ನು ಗಮನದಲ್ಲಿಟ್ಟುಕೊಂಡೇ ಭಾರತದಲ್ಲಿ ಕ್ರೈಸ್ತರ ನಿಜವಾದ ಸ್ಥಿತಿಯನ್ನು ಅರಿಯಲು ಬರುತ್ತಿದ್ದೇನೆ ಎಂದಿದ್ದಾನೆ. ಅದಕ್ಕಿಂತಲೂ ವಿಶೇಷವಾಗಿ ಗಮನಿಸಬೇಕಾದುದು "ಭಾರತದಲ್ಲಿ ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಪರಿವರ್ತಿಸಲಾಗುತ್ತಿದೆ; ಕ್ರೈಸ್ತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ; ಕ್ರೈಸ್ತರ ಕೊಲೆಯಾಗುತ್ತಿದೆ; ನರೇಂದ್ರ ಮೋದಿ ನೇತೃತ್ವದ ಬಲಪಂಥೀಯ ಸರಕಾರ ಬಂದ ನಂತರ ಇವು ಹೆಚ್ಚಾಗಿವೆ" ಎನ್ನುವಂತಹಾ ಆತನ ಹೇಳಿಕೆ. ರಾಜಕೀಯದ ಮಾತಿಲ್ಲ ಅನ್ನುವ ಆತನೇ ಈ ರೀತಿಯ ಬಿಡುಬೀಸಾದ ರಾಜಕೀಯ ಹೇಳಿಕೆ ನೀಡುತ್ತಾನೆ ಎನ್ನುವಾಗಲೇ ಆತನ ಮಾತಿನಲ್ಲಿರುವ ದ್ವಂದ್ವ ಭಾರತೀಯರಿಗೆ ಅರಿವಾಗಬೇಕು. ರಾಜಕೀಯದ ಮಾತಾಡುವುದಿಲ್ಲ ಅಂದವನು ಮೋದಿ ಸರಕಾರವನ್ನು ದೂಷಿಸುತ್ತಿರುವುದ್ಯಾಕೆ? ಅದಕ್ಕೆ ಕಾರಣ ಗುಂಪುಗಲಭೆಯೋ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೋ? ಯಾವುದೂ ಅಲ್ಲ ಅಸಲಿಗೆ "ಮಾಬ್ ಲಿಂಚಿಂಗ್" ಎನ್ನುವಂತಹಾ ಪದ ಅವರಿಂದ ಹಾಗೂ ಅವರ ಕೃಪಾ ಪೋಷಿತ ಮಾಧ್ಯಮಗಳಿಂದ ಹುಟ್ಟಿದ್ದೇ ಇವರ ಮತಾಂತರ ಪ್ರಕ್ರಿಯೆಗೆ ಮೋದಿ ಸರಕಾರದ ಕಠಿಣ ಕಾನೂನು ಅಡ್ಡಬಂದುದರಿಂದ!

               ಕಳೆದ ಮೂರು ವರ್ಷಗಳಲ್ಲಿ ಎಫ್.ಸಿ.ಆರ್.ಎ ನಿಯಮಗಳನ್ನು ಉಲ್ಲಂಘಿಸಿದ ಹದಿಮೂರು ಸಾವಿರಕ್ಕೂ ಹೆಚ್ಚು ಎನ್ಜಿಓಗಳ ಪರವಾನಗಿಯನ್ನು ಮೋದಿ ಸರಕಾರ ರದ್ದುಪಡಿಸಿದೆ. ಇದರಿಂದ ವಿದೇಶೀ ಹಣ ಬಳಸಿಕೊಂಡು ನಡೆಯುತ್ತಿದ್ದ ಅವ್ಯಾಹತ ಮತಾಂತರಕ್ಕೆ ಅಡ್ಡಿಯುಂಟಾಯಿತು. ಸೇವೆಯ ಹೆಸರಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಮತಾಂತರಿಸುತ್ತಿದ್ದ ಪ್ರಕ್ರಿಯೆಗಳು, ರಸ್ತೆ ಬದಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಗಳು ಹಠಾತ್ತನೆ ನಿಂತು ಹೋದವು. ಸಭೆಗಳನ್ನು ಮಾಡಿ ಜೋರಾಗಿ ಬೊಬ್ಬೆ ಹೊಡೆಯುತ್ತಾ ರೋಗಿಯ ದೇಹವನ್ನು ಮುಟ್ಟಿದ ತಕ್ಷಣ ರೋಗ ಗುಣವಾಯಿತೆಂದು ನಾಟಕ ಮಾಡುತ್ತಾ ಮುಗ್ಧರನ್ನು ಮೌಢ್ಯದ ಬಲೆಗೆ ಸಿಲುಕಿಸಿ ಮತಾಂತರ ನಡೆಸುತ್ತಿದ್ದ, ಹಣದ ಆಮಿಶವೊಡ್ಡಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಇವಾಂಜೆಲಿಸ್ಟುಗಳೆಲ್ಲಾ ಈಗ ಬೇರೆ ಕೆಲಸ ಹುಡುಕಲು ಅರ್ಜಿ ಸಲ್ಲಿಸುತ್ತಿದ್ದಾರೆ. 2016ರಲ್ಲಿ ದೇಣಿಗೆ ಸಂಗ್ರಹಿಸಿದ 19ಸಾವಿರ ಎನ್ಜಿಓಗಳಿಗೆ ಹಣ ನೀಡಿದ ಪ್ರಮುಖ ಹದಿನಾಲ್ಕು ಸಂಸ್ಥೆಗಳು ಕ್ರಿಶ್ಚಿಯನ್ ಸಂಘಟನೆಗಳಾಗಿವೆ ಕೇಂದ್ರ ಎಂದು ಗೃಹಸಚಿವಾಲಯ ಹೇಳಿತ್ತು. ಹೀಗೆ ತಮಗೆ ಬರುತ್ತಿದ್ದ ಅಕ್ರಮ ಹಣಕ್ಕೆ, ತಮ್ಮ ಮತಾಂತರ ಕಾರ್ಯಕ್ಕೆ ಅಡ್ಡಿಯುಂಟಾದಾಗ ಹುಟ್ಟಿಕೊಂಡದ್ದೇ ಗುಂಪುಗಲಭೆ, ಮಾಬ್ ಲಿಂಚಿಂಗ್, ಅಸಹಿಷ್ಣುತೆ ಮುಂತಾದ ಅರಚಾಟಗಳು. ಆರ್ಚ್ ಬಿಷಪನ ಭಾರತ್ ಭೇಟಿ ಹಾಗೂ ಹೇಳಿಕೆಗಳ ಹಿಂದಿನ ಕಾರಣವೂ ಇದೇ!

             ಭಾರತದಲ್ಲಿ ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎನ್ನುವ ಆತನ ಹೇಳಿಕೆಯೇ ಹಾಸ್ಯಾಸ್ಪದ. ಹಿಂದೂಗಳು ಎಂದಿಗೂ ಯಾರನ್ನೂ ಬಲವಂತವಾಗಿ ಮತಾಂತರ ಮಾಡಲೂ ಇಲ್ಲ; ಮಾಡಲು ಸಾಧ್ಯವೂ ಇಲ್ಲ. ವ್ಯತಿರಿಕ್ತವಾಗಿ ಮೋದಿ ನೇತೃತ್ವದ ಸರಕಾರ, ಅದು ಈಗಿದ್ದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ನಡುವೆಯೂ ಹಿಂದೂಗಳ ಮತಾಂತರ ನಿಂತಿಲ್ಲ. ನಮ್ಮ ಕಾನೂನು ಇನ್ನಷ್ಟು ಬಲಗೊಳ್ಳಬೇಕಾಗಿರುವುದು ಅತ್ಯಗತ್ಯ. ಉದಾಹರಣೆಗೆ "ವಾಟರ್ ಆಫ್ ಲೈಫ್" ಎನ್ನುವ ಅಮೇರಿಕಾ ಮೂಲದ ಸಂಸ್ಥೆಯೊಂದು ತಾನು ಸ್ವಚ್ಛ ಕುಡಿಯುವ ನೀರನ್ನು ದಲಿತರಿಗೆ ಕೊಡುತ್ತೇನೆ ಎನ್ನುತ್ತಾ ಮತಾಂತರ ಕಾರ್ಯವನ್ನು ಅವ್ಯಾಹತವಾಗಿ ನಡೆಸುತ್ತಿದೆ. ಅವರೇ ತಮ್ಮ ವೆಬ್ ಸೈಟಿನಲ್ಲಿ ಹೇಳಿಕೊಳ್ಳುವ ಪ್ರಕಾರ 2012ರಲ್ಲಿ ಹದಿನೈದು ಸಾವಿರ, 2013ರಲ್ಲಿ 37ಸಾವಿರ, 2014ರಲ್ಲಿ 2,92,000, 2015ರಲ್ಲಿ ಆರು ಲಕ್ಷ ಹಾಗೂ 2016ರಲ್ಲಿ 8,98,657 ಹಿಂದೂಗಳನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿದ್ದೇವೆ ಎಂದು ಹೇಳಿಕೊಂಡಿದೆ. ಅಲ್ಲದೆ ಆಂಧ್ರದ ಪ್ರಕಾಶಮ್ ಜಿಲ್ಲೆಯನ್ನು ಸಂಪೂರ್ಣವಾಗಿ ಕ್ರೈಸ್ತಮಯವನ್ನಾಗಿಸಿದ ತನ್ನ ಹೆಗ್ಗಳಿಕೆಯನ್ನು ಹೊಗಳಿಕೊಂಡಿದೆ. ಅಲ್ಲಿನ ಜನಸಂಖ್ಯೆ 3.5ಮಿಲಿಯನ್! ಹಿಂದೂಗಳಲ್ಲಿರುವ ಜಾತಿಪದ್ದತಿ ಹಾಗೂ ಅಸ್ಪೃಷ್ಯತೆಯಿಂದಾಗಿ ಕೆಳವರ್ಗದವರನ್ನು ಮನುಷ್ಯರನ್ನಾಗಿಯೇ ನೋಡುತ್ತಿಲ್ಲ; ಅವರಿಗೆ ಉದ್ಯೋಗವಕಾಶಗಳನ್ನು ಕೊಡದೇ ಬಡವರನ್ನಾಗಿಯೇ ಉಳಿಸಲಾಗಿದೆ; ಅಂಥವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿ ಗೌರವದ ಬದುಕನ್ನು ಕೊಡುತ್ತಿದ್ದೇವೆ- ಇದು ಮತಾಂತರಕ್ಕೆ ಅದು ಕೊಡುವ ಕಾರಣ! ಎಷ್ಟೊಂದು ಹಸಿ ಸುಳ್ಳು! ಭಾರತದಲ್ಲಿ ಶಿಕ್ಷಣಕ್ಕೆ, ಉದ್ಯೋಗಕ್ಕೆ ಇರುವಷ್ಟು ಮೀಸಲಾತಿ ಯಾವ ದೇಶದಲ್ಲಿದೆ? ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಡಿಸುವುದನ್ನು ಬಿಟ್ಟು ಸಂಸ್ಥೆ ಮಾಡುವ ಕೆಲಸ ಮತಾಂತರ! ಸ್ವಚ್ಛ ನೀರು ಕುಡಿಯಲು ವ್ಯಕ್ತಿಯೊಬ್ಬ ಕ್ರೈಸ್ತನಾಗಲೇಬೇಕೇ? ಸ್ವಚ್ಛ ನೀರು ಕೊಡುವ ಮನಸ್ಸಿನಲ್ಲಿ ಎಷ್ಟೆಲ್ಲಾ ಕೊಳಚೆ ಇದೆ! ಇದು ಒಂದು ಸಂಸ್ಥೆಯ ಲೆಕ್ಖ! ಇಂತಹಾ ಅನೇಕ ಸಂಸ್ಥೆಗಳು ಭಾರತಾದ್ಯಂತ ಕಾರ್ಯಾಚರಿಸುತ್ತಲೇ ಇವೆ. ಇಂತಹಾ ಆಮಿಶದ ಮತಾಂತರವನ್ನು ನಿಲ್ಲಿಸಲು ಆರ್ಚ್ ಬಿಷಪ್ ಕರೆಕೊಡಲಿ ನೋಡೋಣ.

             ಆತನ ಇನ್ನೊಂದು ಹೇಳಿಕೆ ಕ್ರೈಸ್ತ ಮಹಿಳೆಯರ ಅತ್ಯಾಚಾರವಾಗುತ್ತಿದೆ ಎಂದು. ಅತ್ಯಾಚಾರ ಎಸಗುವವರು ಯಾರು? ನನ್ಗಳನ್ನೂ ಬಿಡದೆ ಅತ್ಯಾಚಾರ ಎಸಗುತ್ತಿರುವವರು ಯಾರು? ನ್ಯಾಯ ಕೇಳಲೆಂದು ನ್ಯಾಯಾಲಯ ಬಾಗಿಲು ಬಡಿದ ನನ್ಗಳನ್ನು, ಬೀದಿಗಿಳಿದು ಪ್ರತಿಭಟನೆ ನಡೆಸಿದವರ ಮೇಲೆ ದೌರ್ಜನ್ಯ ನಡೆಸಿದವರು ಯಾರು? ಅತ್ಯಾಚಾರವೆಸಗಿದ ಆರೋಪಿಗಳನ್ನು ಹಾರ ತುರಾಯಿ ಹಾಕಿ ಸ್ವಾಗತಿಸಿದವರಾರು? ದೌರ್ಜನ್ಯಗಳಿಗೆ ಸಾಕ್ಷಿಯಾದವರನ್ನು ಸ್ಮಶಾನಕ್ಕಟ್ಟಿದವರು ಯಾರು? ಅತ್ಯಾಚಾರ ಎಸಗಿದ ಪಾದ್ರಿಗಳು ಹೇಗೆ ಬಚಾವಾಗುತ್ತಾರೆ ಎನ್ನುವುದನ್ನೆಲ್ಲಾ ಭಾರತದ ಚರ್ಚುಗಳಿಗೆ ಪ್ರಶ್ನಿಸುವ ತಾಕತ್ತು ಆರ್ಚ್ ಬಿಷಪ್ಗಿದೆಯೇ? ಸಾಧ್ಯವೇ ಇಲ್ಲ. ಯಾಕೆಂದರೆ ಅಂತಹಾ ನೈತಿಕತೆಯೇ ಆತನಿಗಿಲ್ಲ. ಕಾರಣ; ಕಳೆದ ಎಂಟು ವರ್ಷಗಳಲ್ಲಿ ಅಮೇರಿಕಾದ ಈಶಾನ್ಯ ಭಾಗವೊಂದರಲ್ಲೇ ಕ್ಯಾಥೋಲಿಕ್ ಚರ್ಚು 10.6 ಮಿಲಿಯನ್ ಡಾಲರ್ ಹಣವನ್ನು ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಪಾದ್ರಿಗಳ ಪರವಾದ ಕಾನೂನು ಹೋರಾಟಕ್ಕಾಗಿ ವ್ಯಯಿಸಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಕಡಮೆ ಮಾಡುವ ನಿಟ್ಟಿನಲ್ಲಿ ನ್ಯೂಯಾರ್ಕಿನಲ್ಲಿ ಕಳೆದ ಫೆಬ್ರವರಿಯಲ್ಲಿ ತಂದ ಕಾಯಿದೆ ಅನುಷ್ಠಾನವಾಗದಂತೆ ತಡೆಯಲು ಮೂರು ಮಿಲಿಯನ್ ಡಾಲರ್ ಹಣ ವ್ಯಯಿಸಿತ್ತು! ಪೆನ್ಸಿಲ್ವೇನಿಯಾದಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮುನ್ನೂರು ಪಾದ್ರಿಗಳನ್ನು ರಕ್ಷಿಸಲು ಐದು ಮಿಲಿಯನ್ ಹಣ ಕೊಟ್ಟು ಲಾಬಿ ಮಾಡಿತ್ತು! ಇವೆಲ್ಲಾ ಜಗತ್ತಿನ ಕೆಲವು ಭಾಗಗಳ, ಬೆಳಕಿಗೆ ಬಂದ ಸುದ್ದಿಗಳು. ಜಗತ್ತಿನೆಲ್ಲೆಡೆ ಹಬ್ಬಿರುವ ಈ ಮತಾಂತರಿಗಳು ಮಾಡಿರುವ ಪಾಪ ಅದೆಷ್ಟೋ? ಅವರೇ ಅತ್ಯಾಚಾರಕ್ಕೆ ಬೆಂಬಲವಾಗಿ ನಿಂತಿರುವಾಗ ಭಾರತದ ಪಾದ್ರಿಗಳು ಮಾಡುವ ಅತ್ಯಾಚಾರವನ್ನು ಖಂಡಿಸಲು ನಾಲಿಗೆಯಾದರು ಹೇಗೆ ಹೊರಳೀತು?

             ಮತಾಂತರಕ್ಕೆ ಹೊರಗಿನಿಂದ ಬರುತ್ತಿದ್ದ ಹಣ ಬಹುತೇಕ ನಿಂತ ಮೇಲೂ ಮತಾಂತರ ಏಕೆ ನಿಂತಿಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇತ್ತೀಚೆಗೆ ಆರ್ಗನೈಸರ್ ಪತ್ರಿಕೆ ಅದಕ್ಕಿರುವ ಕೆಲವು ಕಾರಣಗಳನ್ನು ವಿಶ್ಲೇಷಿಸಿದೆ. ಎನ್ಜಿಓಗಳಿಗೆ ವಿದೇಶದಿಂದ ನೇರ ದೇಣಿಗೆ ಬರುವುದಕ್ಕೆ ಕಡಿವಾಣ ಹಾಕಿದ ಬಳಿಕ, ಅವು ಬಹುರಾಷ್ಟ್ರೀಯ ಕಂಪೆನಿಗಳನ್ನು ಅಪ್ಪಿಕೊಂಡವು. ಬಹುರಾಷ್ಟ್ರೀಯ ಸಂಸ್ಥೆಗಳು ಈ ಮತಾಂತರಿ ಸಂಸ್ಥೆಗಳನ್ನು ತಮ್ಮ ಪಾಲುದಾರರನ್ನಾಗಿ ಮಾಡಿಕೊಂಡು ಅವುಗಳಿಗೆ ಹಣ ಪಾವತಿ ಮಾಡುತ್ತಿದ್ದು ಅವೆಲ್ಲಾ ಮತಾಂತರ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ. ಬ್ಲೂಡಾರ್ಟ್, ಓಯಸಿಸ್ನಂತಹಾ ಕಂಪೆನಿಗಳು ಹಳ್ಳಿಗಳಲ್ಲಿ ಶಿಕ್ಷಣ, ಪರಿಸರದ ಹಸಿರೀಕರಣ, ಅನಾಥ ಮಕ್ಕಳಿಗೆ ಆಶ್ರಯ ಮುಂತಾದ ಯೋಜನೆಗಳಡಿಯಲ್ಲಿ ಮತಾಂತರ ಕಾರ್ಯಕ್ಕೆ ಬೆಂಬಲ ನೀಡುತ್ತವೆ. ಓಯಸಿಸ್ ಅಂತೂ ನೇರವಾಗಿ ಭಾರತದ ಚರ್ಚುಗಳ ಜೊತೆಗೂಡಿ ಕೆಲಸ ಮಾಡುತ್ತದೆ. ತನ್ನ ಪ್ರತಿಯೊಂದು ಲೇಖನ, ಜಾಲತಾಣದಲ್ಲಿ ಬೈಬಲ್ಲಿನ ವಾಕ್ಯಗಳನ್ನು ಅಣಿಮುತ್ತಿನಂತೆ ಉದುರಿಸುತ್ತದೆ. ತನ್ನೆಲ್ಲಾ ಸಾಮಾಜಿಕ ಕಾರ್ಯಗಳಿಗೆ ಚರ್ಚುಗಳೇ ಪಾಲುದಾರರಾಗಬೇಕೆಂದು ನೇರವಾಗಿ ಹೇಳಿಕೊಳ್ಳುತ್ತದೆ. ಮತಾಂತರ ಪರವಾಗುಳ್ಳ ಲೇಖನಗಳನ್ನು ತನ್ನ ವೆಬ್ಸೈಟಿನಲ್ಲಿ ಪ್ರಕಟಿಸುತ್ತದೆ. ಮತಾಂತರಿ ಸಂಗೀತಗಾರರನ್ನೇ(ಕ್ರಿಸ್ತನ ಕೀರ್ತನೆ ಹಾಡುವವರು) ಕರೆದು ಸಮಾರಂಭ ಏರ್ಪಡಿಸುತ್ತದೆ! ಇಂತಹಾ ಹಲವು ಬಹುರಾಷ್ಟ್ರೀಯ ಸಂಸ್ಥೆಗಳು ಮತಾಂತರಕ್ಕೆ ಬೆಂಗಾವಲಾಗಿ ನಿಂತು ತಮ್ಮ ತೆರಿಗೆಯ ಕೆಲ ಭಾಗವನ್ನೂ ಉಳಿಸಿಕೊಳ್ಳುತ್ತವೆ! ಸ್ವಾಮಿ ಕಾರ್ಯ & ಸ್ವಕಾರ್ಯ! ಆರ್ಚ್ ಬಿಷಪ್ಗಳ ಆಶೀರ್ವಾದವಿಲ್ಲದೆ ಇದೆಲ್ಲಾ ಹೇಗೆ ನಡೆದೀತು?

              ಅಸ್ಪೃಶ್ಯತೆ ಒಂದು ಶಾಪವೇ. ಯಾರು ಮಾಡಿದರೂ ಅದು ತಪ್ಪೇ. ಆದರೆ ಅದು ಹಿಂದೂಗಳಲ್ಲಿ ಮಾತ್ರ ಇರುವುದೇ? ಕ್ರೈಸ್ತರಲ್ಲಿ ದಲಿತ ಕ್ರೈಸ್ತರಿಗೆಂದು ಪ್ರತ್ಯೇಕ ಚರ್ಚುಗಳು ಯಾಕಿವೆ? ಮೇಲ್ವರ್ಗದ ಕ್ರೈಸ್ತರು ಹಾಗೂ ದಲಿತ ಕ್ರೈಸ್ತರ ನಡುವೆ ವಿವಾಹಾದಿ ಸಂಬಂಧಗಳು ಏಕೆ ಏರ್ಪಡುವುದಿಲ್ಲ? ಇತ್ತೀಚೆಗಷ್ಟೇ ಕೆವಿನ್ ಎನ್ನುವ ದಲಿತ ಕ್ರೈಸ್ತನೊಬ್ಬ ಮೇಲ್ವರ್ಗದ ಕ್ರೈಸ್ತ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಆತನ ಕೊಲೆಯಾಗಿತ್ತು. ಚರ್ಚಿನ ಪಕ್ಕ ಬೋರ್ ವೆಲ್ ಹಾಕಿಸಿ ಕ್ರೈಸ್ತರಿಗೆ ಮಾತ್ರ ಎನ್ನುವಂತಹಾ ಪ್ರಕರಣಗಳು ಯಾಕೆ ನಡೆದವು? ಇವೆಲ್ಲಾ ಅಸ್ಪೃಶ್ಯತೆಯ ಪಟ್ಟಿಯೊಳಗೆ ಸೇರುವುದಿಲ್ಲವೇ? ಇಂತಹುದನ್ನು ಖಂಡಿಸುವ ಮಾತುಗಳು ಆತನಿಂದ ಬಂದೀತೇ? ಸಂಪೂರ್ಣ ಕ್ರೈಸ್ತ ಮಯವೇ ಆದ ಬಳಿಕವೂ ಆಫ್ರಿಕಾದ ದೇಶಗಳು ಯಾಕೆ ಬಡವರಾಗಿಯೇ ಉಳಿದಿವೆ? ಹಿಂದೂ ಧರ್ಮವನ್ನು, ದೇವತೆಗಳನ್ನು ನಿಂದಿಸುವಂತಹಾ ಪುಸ್ತಕಗಳು ಚರ್ಚುಗಳಿಂದ ಯಾಕೆ ಪ್ರಕಟಿಸಲ್ಪಟ್ಟವು? ಭಾರತೀಯ ಸಂವಿಧಾನದ ಪರಿಚ್ಛೇದ 25(1)ರ ಪ್ರಕಾರ ಮತ ಪ್ರಚಾರ ಮಾಡಬಹುದಾದರೂ ವ್ಯಕ್ತಿಯೊಬ್ಬನ ನಂಬಿಕೆಯ ವಿರುದ್ಧ ಪ್ರಚಾರ ಮಾಡಿ, ಆತನನ್ನು ಮರುಳುಗೊಳಿಸಿ ಮತಾಂತರ ಮಾಡುವ ಹಾಗಿಲ್ಲ. ಹಾಗಿದ್ದರೂ ಹಿಂದೂ ದೇವರುಗಳನ್ನು ಯೇಸು, ಮೇರಿಯಂತೆ ನಕಲಿಸಿ, ಹಿಂದೂ ಧರ್ಮಗ್ರಂಥಗಳನ್ನು, ಆಚರಣೆಗಳನ್ನು ನಕಲಿಸಿ, ಯೇಸುವಿನ ವಿಭೂತಿ ಎಂದು ಉತ್ತೇಜಕ ವಸ್ತುಗಳನ್ನು ಅದರಲ್ಲಿ ಹಾಕಿ, ವೃದ್ದಾಶ್ರಮ ,ಕುಷ್ಠರೋಗ ನಿರ್ಮೂಲನ ಕೇಂದ್ರದಂತಹಾ ಸೇವಾ ಸಂಸ್ಥೆಗಳ ಹೆಸರುಗಳಡಿಯಲ್ಲಿ, ಹಣ, ಉದ್ಯೋಗಗಳ ಆಮಿಶಗಳನ್ನೊಡ್ಡಿ ಮಾಡುವ ಕಾನೂನು ಬಾಹಿರ ಮತಾಂತರಗಳನ್ನು ಮಾಡದಿರುವಂತೆ ಆಜ್ಞಾಪಿಸಲು ಚರ್ಚ್ ಬಿಷಪ್ ಸಿದ್ಧನಿದ್ದಾನೆಯೇ?

              ಆರ್ಚ್ ಬಿಷಪ್ ಭಾರತಕ್ಕೆ ಬರುವುದಕ್ಕೆ ಯಾರದ್ದೂ ವಿರೋಧವಿಲ್ಲ. ಆದರೆ ಆತ ಹಿಂದೂಗಳನ್ನು, ಬಲಪಂಥೀಯ ಸರಕಾರವನ್ನು ವಿನಾ ಕಾರಣ ದೂಷಿಸುವ ಬದಲು ತನ್ನವರು ಮಾಡುವ ಮತಾಂತರವನ್ನು ನಿಲ್ಲಿಸಲು ಕರೆ ಕೊಡಲಿ; ಮತಾಂತರ ಕಾರ್ಯಗಳನ್ನು ನಿಲ್ಲಿಸಲಿ. ಆಗ ಆತನ ಆಗಮನವನ್ನೂ ಬಲಪಂಥೀಯರೂ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತಾರೆ. ಕೃಣ್ವಂತೋ ವಿಶ್ವಮಾರ್ಯಮ್ ಎಂದ ಹಿಂದೂಗಳಿಗೆ ಅದು ರಕ್ತಗುಣ. ಹಿಂದೂಗಳೂ ಮತಾಂತರದ ಕುರಿತು ಎಚ್ಚರಿಕೆ ವಹಿಸಬೇಕು. ಎಲ್ಲವನ್ನೂ ಸರಕಾರವೇ ಮಾಡಲು ಸಾಧ್ಯವಿಲ್ಲ. ಆಂಧ್ರದ ಕಡಪ ಜಿಲ್ಲೆಯ ಕೆಸಲಿಂಗಪಲ್ಲಿಯ ಗ್ರಾಮಸ್ಥರು 2017ರಲ್ಲಿ ಕೈಗೊಂಡಂತೆ ಮತಾಂತರವಾದವರನ್ನು ಶುದ್ಧೀಕರಣಗೊಳಿಸಿ, ಮತಾಂತರಿಗಳು ತಮ್ಮ ಊರೊಳಗೆ ಕಾಲಿಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಒಗ್ಗಟ್ಟಾಗಿ ಕೈಗೊಂಡರೆ ಮತಾಂತರ ತಾನೇ ತಾನಾಗಿ ನಿಲ್ಲುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ