ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯು ಎದ್ದು ನಿಲ್ಲುತಿದೆ...
ಪಂಚ ಶತಮಾನಗಳ ಕಾಯುವಿಕೆಗೆ ಮೋಕ್ಷ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಮತಾಂಧ-ಸೆಕ್ಯುಲರ್ ಪಾಳಯವೆಂಬ ಕೈಕೆ ವಿಧಿಸಿದ್ದ ಐತಿಹಾಸಿಕ ವನವಾಸ ಮುಗಿದು ಅವನ ಮನೆಯ ಮರುನಿರ್ಮಾಣದ ಶಿಲಾನ್ಯಾಸಕ್ಕೆ ಮುಹೂರ್ತ ಸಿದ್ಧವಾಗಿದೆ. ಸಪ್ತಮೋಕ್ಷದಾಯಕ ನಗರಗಳಲ್ಲಿ ಒಂದಾದ ಅಯೋಧ್ಯೆ ಮತ್ತೊಮ್ಮೆ ರಾಮಭದ್ರ ಜನಿಸಿದನೇನೋ ಎಂಬಂಥಾ ಸಡಗರದಲ್ಲಿ ಮಿಂದೇಳುತ್ತಿದೆ. ಈ ಮೋಕ್ಷಕ್ಕೂ ಈ ಹೊಸ ಸೃಷ್ಟಿಗೂ ಕಾರಣವಾದುದು ರಾಮನಾಮವೇ! ಭಾರತದ ರಾಷ್ಟ್ರೀಯ ಅಸ್ಮಿತೆಯ ಕುರುಹು ಎದ್ದು ನಿಲ್ಲುವ ಈ ಕ್ಷಣ ಭರತ ಭೂಮಿಯನ್ನು ಪೂಜಿಸುವ ಪ್ರತಿಯೊಬ್ಬನೂ ಧನ್ಯನಾಗುವ ಕ್ಷಣ. ಆದರ್ಶ ಪುರುಷನನ್ನು ಮರು ಪ್ರತಿಷ್ಠಾಪಿಸಲು ನಡೆದ ಅದಷ್ಟೂ ಹೋರಾಟಗಳೂ ಸಾರ್ಥಕಗೊಂಡ ಕ್ಷಣ. ಧರ್ಮದ ಹಾದಿಯಲ್ಲೇ ನಡೆದು ದೇವನಾದವನ ಮೂರ್ತಿಯನ್ನು ಮರುಸ್ಥಾಪಿಸಲು ಭಕ್ತರು ಆ ದೇವ ಪಥದಲ್ಲೇ ನಡೆಸಿದ ಹೋರಾಟಕ್ಕೆ ಸಿಕ್ಕ ಪೂರ್ಣಫಲದ ಭಾವುಕ ಕ್ಷಣ. ಪರಮ ಪುರುಷನ ಆಯನವನ್ನೇ ಸಂಶಯಿಸಿ ಸುಳ್ಳು - ಪೊಳ್ಳುಗಳನ್ನು ಹೆಣೆದವರ ಹಣಾಹಣಿ ನಿಂತು ಧರ್ಮದ ಹಣತೆ ಬೆಳಗುವ ದಿವ್ಯ ಕ್ಷಣ.
ಮನು ನಿರ್ಮಿತ ನಗರ, ಗೋ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಚಕ್ರವರ್ತಿ ದಿಲೀಪ ವಿಶ್ವಜಿತ್ ಯಾಗ ಮಾಡಿದ ತಾಣ, ಇಕ್ಷ್ವಾಕು ವಂಶವನ್ನೇ ತನ್ನ ಹೆಸರಿನಿಂದ ಕರೆವಂತಹ ಆಡಳಿತ ನೀಡಿದ ಶ್ರೇಷ್ಠ, ರಾಜಾ ರಘುವಿನ ರಾಜಧಾನಿ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನಾಳಿದ ಭೂಮಿ, ಬ್ರಹ್ಮರ್ಷಿ ವಸಿಷ್ಠರೇ ನೆಲೆ ನಿಂತ ಪುಣ್ಯ ಭೂಮಿ. ಯುದ್ಧದ ಕಲ್ಪನೆಯನ್ನೂ ಮಾಡದ ಈ ಶಾಂತಿಪ್ರಿಯ ನಾಡು, ಸಪ್ತ ಮೋಕ್ಷದಾಯಕ ನಗರ ಅಯೋಧ್ಯೆ ಪಾವನವಾದುದು ರಾಮಭದ್ರನ ಜನನದಿಂದ. ಅವನೆಂದರೆ ಅಯೋಧ್ಯೆ, ಅಯೋಧ್ಯೆಯೆಂದರೆ ಅವನು. ಅಷ್ಟೇಕೆ ಅವನೇ ಭಾರತ. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವನು ಪರಬ್ರಹ್ಮ ಸ್ವರೂಪವಾಗಿ ಕಂಡದ್ದು ಎಷ್ಟೊಂದು ಜನರಿಗೆ!ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು.
ರಾಮನಿಗಾಗಿ ಯಾರು ಕಾಯಲಿಲ್ಲ ಹೇಳಿ? ಪುತ್ರಕಾಮೇಷ್ಠಿ ನಡೆಸಿ ಕ್ಷಣವನ್ನೂ ಯುಗದಂತೆ ಭ್ರಮಿಸಿ ಕಾಲವನ್ನು ನೂಕುತ್ತಾ ದಶರಥ ಚಕ್ರವರ್ತಿಯೇ ರಾಮನಿಗಾಗಿ ಕಾದಿದ್ದ. ಗರ್ಭದಲ್ಲಿ ಅಂಕುರಗೊಂಡ ರಾಮಭದ್ರನ ಕಿಲಕಿಲ ನಗುವಿಗೆ ಮಾತೆ ಕೌಸಲ್ಯೆ ಕಾದಿದ್ದಳು. ರಾಜನ ಕೊರಗು ರಾಜ್ಯದ ಕೊರಗಾಗಿತ್ತು. ರಾಜ ಪರಿವಾರ, ಪ್ರಜಾವರ್ಗ ಪರಮ ಪುರುಷೋತ್ತಮನಿಗಾಗಿ ಕಾದಿತ್ತು. ಜಗತ್ತಿಗೇ ಮಿತ್ರನನ್ನಾಗಿ ತಯಾರು ಮಾಡಲೋಸುಗ ವಿಶ್ವಾಮಿತ್ರನೇ ಬಾಲ ರಾಮ ಬೆಳೆಯುವುದನ್ನು ಕಾಯುತ್ತಿದ್ದ. ಭೂಮಿಯನ್ನು ಉಳುವಾಗ ಸಿಕ್ಕ ಭೂಜಾತೆಯನ್ನು ಭಗವಂತನಿಗೇ ಒಪ್ಪಿಸಲು ಉಪನಿಷತ್ತುಗಳನ್ನು ಅರೆದು ಕುಡಿದ ರಾಜರ್ಷಿ ಕಾದಿದ್ದ. ತನ್ನ ಉಸ್ತುವಾರಿಯನ್ನು ದಾಟಿಸಲು ಕೊಡಲಿ ರಾಮ ಕಾದಿದ್ದ. ಅಹಲ್ಯೆ ಕಲ್ಲಾಗಿ ಕಾದಳು. ತಮ್ಮ ಭರತ ಪಾದುಕೆ ಹೊತ್ತು ಕಾದ. ಹಣ್ಣಾಗಿ ಪಕ್ವವಾಗಿದ್ದ ಶಬರಿ ಹಣ್ಣುಹಣ್ಣು ಮುದುಕಿಯಾಗಿ ಬಾಗಿ ಕಾದಳು. ಪಂಚವಟಿ, ದಂಡಕಾರಣ್ಯದ ಋಷಿಗಳು ರಕ್ಕಸರ ಉಪಟಳವನ್ನು ಅಳಿಸುವವನನ್ನು ಕಾದರು. ರಾವಣನ ಕುತಂತ್ರಕ್ಕೆ ಸಿಲುಕಿ ರೆಕ್ಕೆ ಕತ್ತರಿಸಲ್ಪಟ್ಟು ಬಿದ್ದ ಜಟಾಯು ಕುಟುಕು ಜೀವ ಉಳಿಸಿಕೊಂಡು ಕಾದ. ತನ್ನೊಳಗಿರುವ, ತಾನೇ ಅವನಾಗಿರುವ ಭಗವಾನನಿಗಾಗಿ ಭಕುತ ಹನುಮ ಕಾದ. ರಾಮನಂಥ ಶಕ್ತಿವಂತ ಮಿತ್ರನಿಗಾಗಿ ವಾನರೇಂದ್ರ ಸುಗ್ರೀವ ಕಾದ. ಸೇತುವಿಗಾಗಿ ಸಮುದ್ರ ಕಾದಿತ್ತು. ಸೇವೆಗಾಗಿ ಅಳಿಲು ಕಾದಿತ್ತು. ಕಪಿಗಡಣ ಮಾನವೇಂದ್ರನ ಸಹಾಯಕ್ಕಾಗಿ ಶಿಸ್ತಿನಿಂದ ಕಾದಿತ್ತು. ಅಣ್ಣನ ಅಧರ್ಮದ ಅಂಕುಶದಿಂದ ಪಾರಾಗಿ ಧರ್ಮವನ್ನು ಅಪ್ಪಿಕೊಳ್ಳಲು ಶರಣ ಶ್ರೇಷ್ಠ ಕಾದಿದ್ದ. ರಾಮ ಬಾಣ ತಾಗಿ ಮೋಕ್ಷ ಪಡೆಯಲು ದುರುಳರೂ, ರಕ್ಕಸರೂ ಕಾದಿದ್ದರು. ಮಾತೆ ಸೀತೆ ತನ್ನಿನಿಯ ಬಂದು ಕಾಯ್ವನೆಂದು ಅಶೋಕ ವನದಲ್ಲಿ ಶೋಕತಪ್ತಳಾಗಿ ಕಾದಿದ್ದಳು. ವನವಾಸ ಮುಗಿಸಿ ಮರಳಿ ಬಂದು ಪಟ್ಟವೇರಿ ರಾಮರಾಜ್ಯವನ್ನಾಗಿಸಬೇಕೆಂದು ಅಯೋಧ್ಯೆಗೆ ಅಯೋಧ್ಯೆಯೇ ಕಾದು ಕುಳಿತಿತ್ತು. ಅಂತಹಾ ಪರಮ ಪುರುಷನ ಮಂದಿರವನ್ನು ಮರು ನಿರ್ಮಿಸಲು ಕೋಟಿ ಕೋಟಿ ಭಕ್ತಗಣ 492 ವರ್ಷ ರಾಮ ಮಂತ್ರ ಜಪಿಸುತ್ತಾ, ಕಾದುತ್ತಲೇ ಕಾದು ಕುಳಿತಿತ್ತು! ಕಾಯುವಿಕೆಗಿಂತ ಅನ್ಯ ತಪವೇನಿದೆ?
"ವ್ಯಸನೇಷು ಮನುಷ್ಯಾಣಾಂ ಭೃಷಂಭವತಿ ದುಃಖಿತಃ":- ಇನ್ನೊಬ್ಬನ ಸಂಕಟವನ್ನು ಕಂಡಾಗ ತೀವ್ರವಾದ ದುಃಖಕ್ಕೆ ಒಳಗಾಗುವವನು" ಎಂದು ರಾಮನನ್ನು ವರ್ಣಿಸಿದ್ದಾನೆ ಮಹರ್ಷಿ ವಾಲ್ಮೀಕಿ. ಅದಕ್ಕೇ ದುಃಖಿತರೆಲ್ಲರೂ ರಾಮನಿಗಾಗಿ ಕಾದದ್ದಿರಬೇಕು. ರಾಮ "ದೂರ್ವಾದಲ ಶ್ಯಾಮ". ದೂರ್ವೆ ಎಂಬ ಮಂಗಲ ಸಸ್ಯ ಒಂಟಿಯಾಗಿ ಬೆಳೆಯುವುದೇ ಇಲ್ಲ. ಅದು ಗುಂಪು ಗುಂಪಾಗಿಯೇ ಬೆಳೆಯುವುದು. ಮಂಗಲಪುರುಷ ಶ್ರೀರಾಮನೂ ಹಾಗೆಯೇ. ಸಮಷ್ಠಿಯ ಹಿತವನ್ನಾತ ಬಯಸುತ್ತಿದ್ದ. ಆದುದರಿಂದಲೇ ರಾಮ ನಡೆದ ಹಾದಿಯಲ್ಲಿದ್ದು ಪುನೀತವಾದ ಕಲ್ಲುಗಳು, ಬೀಸುವ ಗಾಳಿ, ಅವನಿಗಾಗಿ ಬಾಗುವ ತರುಲತೆಗಳೂ ರಾಮನ ಕಥೆಯನ್ನು ಸಾರಿ ಹೇಳಿವೆ. ವಾನರರು ಸಮುದ್ರಕ್ಕೆ ಒಗೆದಿದ್ದ ಸೇತುವಿನ ಕಲ್ಲೂ ತಾನು ರಾಮನ ಕಾಲದವನೆಂದು ಸಾರಿ ಹೇಳುತ್ತಿದೆ. ಸ್ವತಃ ರಾಕ್ಷಸರುಗಳನ್ನು ಸಂಹಾರ ಮಾಡುವ ಸಾಮರ್ಥ್ಯವಿದ್ದಾಗ್ಯೂ ಬ್ರಹ್ಮರ್ಷಿ ವಿಶ್ವಾಮಿತ್ರ ರಾಮನನ್ನು ಮಾಧ್ಯಮವಾಗಿ ಬಳಸಿ ಧರ್ಮದ ಒಳಸೂಕ್ಷ್ಮತೆಯ ಅರಿವನ್ನೂ ಮೂಡಿಸಿದ. ಈ ಜಗದಲ್ಲಿ ಧರ್ಮದ-ಸಂಸ್ಕೃತಿಯ ರಕ್ಷಣೆಗೆ ತಾನೊಂದು ಮಾಧ್ಯಮ ಎನ್ನುವುದನ್ನು ಬಾಲರಾಮ ಅರ್ಥ ಮಾಡಿಕೊಂಡಿದ್ದ. ಮಾಧ್ಯಮಕ್ಕೆ ವೈಯುಕ್ತಿಕತೆ ಇರುವುದಿಲ್ಲ. ಅದಕ್ಕೆ ತನ್ನ ಪರಂಪರೆಯ ಬಗೆಗೆ ಪೂಜ್ಯ ಭಾವನೆ ಇರುತ್ತದೆ. ಸಂಸ್ಕೃತಿಯ ಉಳಿವಿಗೆ ಅದು ಹಾತೊರೆಯುತ್ತದೆ. ಧರ್ಮಪಥ ದರ್ಶಕವದು. ಹೇಗಿರಬೇಕೆಂದು ಆಚರಿಸಿ ತೋರಿಸುವುದಷ್ಟೇ ಅದರ ಕರ್ತವ್ಯ. ಆ ಮಾಧ್ಯಮ ಇಲ್ಲಿನ ಜನರನ್ನು ಜೀವನ ಪ್ರವಾಹದಲ್ಲಿ ಏಕತ್ರಗೊಳಿಸಿ ಹಿಡಿದಿಟ್ಟು ಈ ರಾಷ್ಟ್ರವನ್ನು ನಿರ್ಮಿಸಿದೆ ಎಂಬ ಸೂಕ್ಷ್ಮ ಬರ್ಬರನಾದ ಬಾಬರನಿಗೆ, ಅವನಿಗೆ ಸೂಚನೆ ಕೊಟ್ಟ ಪಾಪಿ ಸೂಫಿಗೆ ಗೊತ್ತಾಗಿತ್ತು. ಈ ನೆಲದಿಂದ ಬೇರ್ಪಡಿಸಲಾಗದ ಯುಗಯುಗದ ಅಸ್ಮಿತೆಯ ಮಂದಿರ ಧರೆಗುರುಳಿತ್ತು. ಆದರೆ ಆ ಅಸ್ಮಿತೆಯ ಮೇಲಿನ ಶ್ರದ್ಧೆ ಕೆಳಗುರುಳಲಿಲ್ಲ.
ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ ಶ್ರೀರಾಮನೇ ಹೀಗೆ ಹೇಳುತ್ತಾನೆ..."ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |
ನ ತು ಪ್ರತಿಜ್ಞಾಂ ಸಂಶ್ರುತ್ಯ ಬ್ರಾಹ್ಮಣೇಭ್ಯೋ ವಿಶೇಷತಃ ||”
ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣವನ್ನಾದರೂ ಬಿಟ್ಟೇನು! ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು! ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು! ಆದರೆ ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ! ರಾಮಭಕ್ತರೂ ರಾಮಮಂದಿರವನ್ನು ರಾಮನ ಜನ್ಮಸ್ಥಾನದಲ್ಲೇ ಮರು ನಿರ್ಮಿಸುವ ತಮ್ಮ ಪ್ರತಿಜ್ಞೆಯಿಂದ ಒಂದಿನಿತೂ ಕದಲದೇ ಮಂದಿರಕ್ಕೆ ತಳಪಾಯ ಹಾಕಿಯೇ ಬಿಟ್ಟರು. ಅದೆಷ್ಟು ಕಾಲ, ಅದೆಷ್ಟು ಹೋರಾಟಗಳು! ಒಂದು ಲಕ್ಷದ ಎಪ್ಪತ್ತು ಸಾವಿರ ಯೋಧರು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆಗೆ, ಮೀರ್ ಬಾಕಿಯ ತೋಪಿಗೆ ಎದುರಾಗಿ ಹದಿನೈದು ದಿವಸಗಳ ಕಾಲ ರಾಮಚಂದಿರನ ಮಂದಿರವನ್ನು ಉಳಿಸಲು ಘನಘೋರವಾಗಿ ಕಾದಿದರು. ಆ ಬಳಿಕ ಎಪ್ಪತ್ತೈದು ಯುದ್ಧಗಳು, ಸಾಧುಸಂತರ, ರಾಮಭಕ್ತರ ಸತ್ಯಾಗ್ರಹ, ಉಪವಾಸ, ಪಾದಯಾತ್ರೆ, ರಾಮಜ್ಯೋತಿ ರಥಯಾತ್ರೆ, ರಾಮಪಾದುಕಾಯಾತ್ರೆ, ಕರಸೇವೆ, ಕರಸೇವಕರ ಬಲಿದಾನ; ಅದೆಷ್ಟು ಸಂತರು ರಾಮಮಂದಿರಕ್ಕಾಗಿ ಅಗ್ನಿಗುಂಡಕ್ಕೆ ಹಾರಿಯೋ, ಶೂಲಕ್ಕೇರಿಯೋ, ಉಪವಾಸಗೈದೋ ಬಲಿದಾನಗೈದರು! ಒಂದು ಬಾರಿಯಂತೂ 3500 ಮಾತಾಭಗಿನಿಯರು ಶಸ್ತ್ರ ಹಿರಿದು ಕಾದಿದರು. ಈ ಹೋರಾಟಗಳೆಲ್ಲವೂ ಕೇವಲ ಒಂದು ಮಂದಿರದ ಮರುನಿರ್ಮಾಣಕ್ಕಾಗಿ ನಡೆದ ಹೋರಾಟವಲ್ಲ; ಅದು ಒಂದು ಬದುಕಿನ ಉಳಿವಿಗಾಗಿ, ಒಂದು ಸಂಸ್ಕೃತಿಯ ರಕ್ಷಣೆಗಾಗಿ ನಡೆದ ಹೋರಾಟ. ಮನಸ್ಸು ಮಾಡಿದ್ದರೆ ನ್ಯಾಯಾಲಯದ ಪ್ರಕ್ರಿಯೆಯನ್ನು ವಿಳಂಬಪಡಿಸುವ ಗುಂಪುಗಳು, ಅವುಗಳ ಮಾನಸಿಕತೆ, ರಾಜಕೀಯ ಷಡ್ಯಂತ್ರ ಇವೆಲ್ಲವುಗಳನ್ನೂ ರಾಮಭಕ್ತರು ಒಂದೇ ಏಟಿಗೆ ಕೊನೆಗೊಳಿಸಬಹುದಿತ್ತು. ಆದರೆ ರಾಮಭಕ್ತರು ಈ ನೆಲದ ಕಾನೂನಿಗೆ ಗೌರವ ಕೊಟ್ಟು ರಾಮ ನಡೆದ ಹಾದಿಯಲ್ಲಿ ಸಾಗಿದರು, ಕಾದರು. ಆ ಕಾಯುವಿಕೆಯೆಂಬ ತಪಸ್ಸಿನ ಪುಣ್ಯಫಲವೇ ಶಿಲಾನ್ಯಾಸ. ಕೋಟಿ ಕೋಟಿ ಮನಸ್ಸುಗಳ ಐನೂರು ವರ್ಷಗಳ ಸಂಕಲ್ಪ ಇಂದು ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯಾಗಿ ಶಿಲಾನ್ಯಾಸಗೊಳ್ಳುತ್ತಿದೆ.
ಶಿಲೆಯನ್ನು ಅಹಲ್ಯೆಯಾಗಿಸಿದವನ ಮಂದಿರಕ್ಕೆ ಶಿಲಾನ್ಯಾಸ. ಪರಮ ಪುರುಷೋತ್ತಮನಿಗೆ ಮಂದಿರ ನಿರ್ಮಿಸಲು ಶಿಲಾನ್ಯಾಸ. ೫೦೦ ವರ್ಷಗಳ ಪರ್ಯಂತ ಭಕ್ತರ ಹೃದಯದಲ್ಲೇ ಪುತ್ಥಳಿಯಾಗಿದ್ದವನ ವಿಗ್ರಹ ಪ್ರತಿಷ್ಠಾಪನೆಗೆ ಶಿಲಾನ್ಯಾಸ. "ರಾಮೋ ವಿಗ್ರಹವಾನ್ ಧರ್ಮಃ"; ಧರ್ಮವೇ ವಿಗ್ರಹವಾಗಿದ್ದವನ ಮೂರ್ತಿಗೆ ಶಿಲಾನ್ಯಾಸ. ಅದು ಬರಿಯ ಕಲ್ಲು ಗುಡಿಯಲ್ಲ; ಅದು ಈ ದೇಶದ ಅಸ್ಮಿತೆಯ ಪ್ರತೀಕ. ಭಕ್ತರ ಹೃದಯದಲ್ಲಿ ಕುಳಿತಿರುವ ಮೂರ್ತಿ ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯಾಗಿ ಎದ್ದು ನಿಲ್ಲುತ್ತದೆ. ಅಲ್ಲಿ ರಾಮನ ಪದಸ್ಪರ್ಶದಿಂದ ಪುನೀತವಾದ ಈ ಮಣ್ಣಿನ ಕಣಕಣಗಳು ಹೇಳುವ ರಾಮಾಯಣದ ಮೂರ್ತ ರೂಪವಿದೆ. ಅಸಂಖ್ಯ ಯುದ್ಧಗಳಲ್ಲಿ ಮಂದಿರಕ್ಕಾಗಿ ರಕ್ತವನ್ನೇ ಬಸಿಬಸಿದು ಕೊಟ್ಟವರ ಪೌರುಷದ ಪ್ರತೀಕವಿದೆ. ಜಾತಿಯ, ಭಾಷೆಯ ದುರಭಿಮಾನಗಳಿಲ್ಲದೆ, ಗಡಿಗುಂಟಗಳ ಹಂಗಿಲ್ಲದೆ, ಆ ಧರ್ಮದೇವತೆಯನ್ನು ಪೂಜಿಸಿದ, ಪೂಜಿಸುವ ಮನಸ್ಸುಗಳ ಭಾವವಿದೆ. ಮಂದಿರದ ಉಳಿವಿಗಾಗಿ, ಮರುನಿರ್ಮಿತಿಗಾಗಿ ಹಣಿದು ಅಳಿದವರ ಪರಿವಾರಗಳ ರೋಷ, ಆಕ್ರೋಷ, ದುಃಖ, ಭಕ್ತಿ-ಭಾವಗಳ ಮೇಳೈಸುವಿಕೆಯಿದೆ. ತಮ್ಮ ಮನೆಯಲ್ಲೂ ರಾಮ ಹುಟ್ಟಬೇಕು, ಅವನ ಮಂದಿರದ ಮರು ನಿರ್ಮಾಣವಾಗಬೇಕು ಎಂದವರ ಹಪಹಪಿಕೆಯಿದೆ. ವಿದ್ವಜ್ಜನರ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ, ಕಾವ್ಯ, ಪದ್ಯ, ಗದ್ಯ, ನಾಟ್ಯ, ನಟನೆಗಳಲ್ಲಿ; ಜನಪದರ ಹಾಡುಗಬ್ಬಗಳಲ್ಲಿ, ಋತ್ವಿಜರ ಹೋಮ-ಹವನಗಳಲ್ಲಿ; ಪೂಜಕರ ಆರಾಧನೆಯಲ್ಲಿ, ಕ್ಷತ್ರಿಯರ ತೋಳ್ಬಲಗಳಲ್ಲಿ, ದಾನಿಗಳ ದಾನಗಳಲ್ಲಿ, ಶ್ರಮಿಕರ ಕೆಲಸಗಳಲ್ಲಿ; ಈ ನೆಲದ ಕಾನೂನಿನಂತೆಯೇ ಹೋರಾಡಿದ ಬಗೆಬಗೆಯ ಹೋರಾಟ-ಬುದ್ಧಿಮತ್ತೆಗಳಲ್ಲಿ ಕಂಡಂತಹಾ ಧರ್ಮದ ಮೂರ್ತ ರೂಪಕ್ಕೆ ಅಲ್ಲಿ ಶಿಲಾನ್ಯಾಸವಾಗುತ್ತಿದೆ. ಆಸೇತುಹಿಮಾಚಲಾದ್ಯಂತ ರಾಮ ನಡೆದ ಮಣ್ಣಿನ ಕಣಕಣಗಳ, ಪಾದ ತೊಳೆದ ಹಳ್ಳ-ಕೊಳ್ಳ, ನದಿ, ಸಮುದ್ರಗಳ, ಅಹಲ್ಯೆಯಾಗಿಸಿದ ಕಲ್ಲುಗಳ, ಉದ್ಧರಿಸಲ್ಪಟ್ಟ ಶಬರಿಯರ, ಪುನೀತರಾದ ಋಷಿಮುನಿಗಳ, ಭಕ್ತರಾದ ಹನುಮರ, ಛೇದನಗೊಂಡ ಸಾಲವೃಕ್ಷಗಳ, ಪಂಚವಟಿ-ದಂಡಕಾರಣ್ಯಗಳ, ಅವನಿಗಾಗಿ ಕಾದಿದ ಜಟಾಯು, ಕಪಿ ವೀರರ, ನೇವರಿಸಿಕೊಂಡ ಅಳಿಲುಗಳ, ಶರಣು ಬಂದ ವಿಭೀಷಣರ, ಮೋಕ್ಷ ಪಡೆದ ವಾಲಿ-ರಾವಣಾಖ್ಯರ, ತಪಸ್ವಿಗಳಂತೇ ಕಾದು ಕುಳಿತ ಮಾತೆ, ಅನಾಥ, ಪಾಮರ, ಭಕ್ತ, ಪ್ರಜಾಜನರ ರಾಮನಾಮ ಸ್ಮರಣೆಯ ಶಕ್ತಿ ಅಲ್ಲಿ ಸಂಚಯನವಾಗುತ್ತಿದೆ.
ದೇಶದೆಲ್ಲೆಡೆ ಸಾವಿರಾರು ರಾಮಮಂದಿರಗಳಿರಬಹುದು. ಆದರೆ ಅವಾವುವೂ ಜನ್ಮಸ್ಥಾನದ ರಾಮಮಂದಿರಕ್ಕೆ ಸಮವಲ್ಲ. ಈ ದೇಶದ ನದಿ, ಸರೋವರಗಳಿಗೆ ಸರಯೂ ಎನಿಸಿಕೊಳ್ಳುವ ಹಪಹಪಿ ಇದೆ. ಕಲ್ಲು ಕಲ್ಲುಗಳಿಗೂ ಅಹಲ್ಯೆಯಂತೆ ಉದ್ಧಾರವಾಗುವ ಮಹದಿಚ್ಛೆಯಿದೆ. ಪ್ರತಿಯೊಂದು ಕಾನನಕ್ಕೂ ಪಂಚವಟಿಯೆನ್ನಿಸಿಕೊಳ್ಳುವ ವಾಂಛೆ ಇದೆ. ಹಾಗೆಯೇ ಪ್ರತಿಯೊಂದು ಮಂದಿರಕ್ಕೂ ರಾಮನಿಗೆ ಗುಡಿಯಾಗುವ ಮಹೋದ್ದೇಶವಿದೆ. 492 ವರ್ಷಗಳ ಬಳಿಕ ರಾಷ್ಟ್ರೀಯ ಅಸ್ಮಿತೆಯ ಪುತ್ಥಳಿ ಎದ್ದು ನಿಲ್ಲುತ್ತಿದೆ. ಈ ಹೋರಾಟ, ಈ ಶಿಲಾನ್ಯಾಸ, ಈ ಮಂದಿರ, ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಪ್ರತಿಯೊಬ್ಬನೂ ರಾಮ ನಡೆದ ಹಾದಿಯಲ್ಲಿ ನಡೆಯುವಂತಾಗಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ