ಭರತ ಭೂಮಿಯ ಪುನರ್ವೈಭವದ ಸಂಕಲ್ಪ ಹೊತ್ತು ಭುವಿಗಿಳಿದ "ವಜ್ರ" ಶಕ್ತಿ
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂ ಚೌ ಚರತಃ ಸಹ |
ತಂ ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ ||
ಯಾವ ರಾಷ್ಟ್ರದಲ್ಲಿ ಅಧ್ಯಾತ್ಮ ವಿದ್ಯೆಯ ಉಪಾಸಕನೂ ಕ್ಷತ್ರಿಯನೂ ಉತ್ತಮ ರೀತಿಯಲ್ಲಿ ಪರಸ್ಪರ ಸಹಕರಿಸುತ್ತಾ ಇರುತ್ತಾರೋ ಹಾಗೂ ಯಾವ ರಾಷ್ಟ್ರದಲ್ಲಿ ದೇವತೆಗಳು ಯಜ್ಞಾಗ್ನಿಯ ಜೊತೆ ವಿರಾಜಿಸುತ್ತಿರುತ್ತಾರೋ ಆ ರಾಷ್ಟ್ರವು ಪುಣ್ಯಪ್ರದವಾದ ನಾಡು ಎನ್ನುತ್ತದೆ ವಾಜಸನೇಯ ಸಂಹಿತೆ. ಆಳುವ ಅರಸನೇ ಅಧ್ಯಾತ್ಮ ವಿದ್ಯೆಯ ಉಪಾಸಕನೋ ಅಥವಾ ಅಧ್ಯಾತ್ಮದ ಒಲವುಳ್ಳವನೋ ಆಗಿದ್ದರೆ? ಅದಕ್ಕಿಂತ ಬೇರೆ ದೊಡ್ಡ ಭಾಗ್ಯವೇನಿದೆ ಆ ನಾಡಿಗೆ? ಅಂತಹಾ ಭಾಗ್ಯವನ್ನು ಈ ನಾಡು ಅದೆಷ್ಟು ಕಂಡಿಲ್ಲ? ಜನಕನಂತೂ ರಾಜರ್ಷಿಯ ಪಟ್ಟವನ್ನೇ ತನ್ನದಾಗಿಸಿಕೊಂಡ. ಸೂರ್ಯ-ಚಂದ್ರ ವಂಶಗಳ ಅರಸುಗಳನೇಕರು ಇದೇ ಪರಂಪರೆಯ ಮೂಲಕ ಈ ರಾಷ್ಟ್ರವನ್ನು ಬೆಳಗಿದರು. ಕಲಿಯುಗದ ಆದಿಯ ಪರೀಕ್ಷಿತನಿಂದ ಹಿಡಿದು ಶುಂಗ, ಗುಪ್ತಾದಿಯಾಗಿ ಶಿವಾಜಿ, ಬಾಜೀರಾಯನವರೆಗೆ ಈ ಪರಂಪರೆ ಮರಳುಗಾಡಿನ ಮತಾಂಧರ ಬರ್ಬರತೆಯ ನಡುವೆಯೂ ಉಳಿದು ಬೆಳೆದು ಬಂತು. ಸ್ವಾತಂತ್ರ್ಯ ಹೋರಾಟದ ಕಿಚ್ಚಿನಲ್ಲೂ ಅಧ್ಯಾತ್ಮವೇ ಜನರನ್ನು ಒಟ್ಟುಗೂಡಿಸಿತು; ವಂದೇ ಮಾತರಂ ಮಂತ್ರದ ಮೂಲಕ ಮನಸ್ಸುಗಳನ್ನು ಬೆಸೆದು ಕ್ರಾಂತಿಯ ಕಿಡಿ ದಾವಾನಲವಾಗುವಂತೆ ಮಾಡಿತು. ಅಧ್ಯಾತ್ಮದ ಸಂಪರ್ಕ, ಅಂಕೆಯಿಲ್ಲದ ಯಾವ ತತ್ತ್ವ, ಸಂಘಟನೆಯೂ ಇಲ್ಲಿ ಬಾಳಲಿಲ್ಲ; ರಾಷ್ಟ್ರದ ಅಭಿವೃದ್ದಿಯಲ್ಲಿ ಪಾಲುದಾರನೂ ಆಗಲಿಲ್ಲ.
ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಈ ಪರಂಪರೆ ಉಳಿಯಲಿಲ್ಲ. ನಕಲಿ ಜಾತ್ಯಾತೀತವಾದ, ಅಲ್ಪಸಂಖ್ಯಾತರ ಓಲೈಕೆ, ರಾಷ್ಟ್ರತತ್ತ್ವಕ್ಕಿಂತಲೂ ಸ್ವತತ್ತ್ವದ ಮೇಲಿನ ದುರಭಿಮಾನ ಅಲ್ಲಿ ಮೇರೆ ಮೀರಿತು. ಪ್ರಸಿದ್ಧ ಸೋಮನಾಥ ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲಿ ಈ ದೇಶದ ಪ್ರಧಾನಿ ನೆಹರೂ ನಡೆದುಕೊಂಡ ರೀತಿಯೇ ಅದಕ್ಕೆ ನಿದರ್ಶನ. ಸೋಮನಾಥದ ಜೀರ್ಣೋದ್ಧಾರದ ವಿಚಾರವನ್ನು ಉಕ್ಕಿನ ಮನುಷ್ಯ ಪಟೇಲರು ಪ್ರಧಾನಿ ನೆಹರೂ ಬಳಿ ಪ್ರಸ್ತಾಪಿಸಿದಾಗ, ಸರ್ಕಾರ ಒಂದೇ ಒಂದು ಪೈಸೆಯನ್ನೂ ಕೊಡುವುದಿಲ್ಲ ಎಂದು ಆತ ಕಡ್ಡಿಮುರಿದಂತೆ ನುಡಿದರು. ಪಟೇಲರು ಗಾಂಧಿಯ ಬಳಿ ಈ ವಿಚಾರವನ್ನು ಚರ್ಚಿಸಿದಾಗ ಗಾಂಧಿ "ದೇವಸ್ಥಾನದ ನಿರ್ಮಾಣಕ್ಕೆ ಹಣ ಜನರಿಂದ ಬರಬೇಕೇ ಹೊರತು ಸರಕಾರದಿಂದಲ್ಲ" ಎಂದು ನೆಹರೂವನ್ನು ಬೆಂಬಲಿಸಿ ನುಡಿದರು. ಛಲದಂಕ ಮಲ್ಲ ಪಟೇಲ್, ಕೆ.ಎಂ ಮುನ್ಷಿಯವರ ಜೊತೆ ಸೇರಿ ಸೋಮನಾಥದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿಯೇ ಬಿಟ್ಟರು. ಪಟೇಲರು ದಿವಂಗತರಾದ ಬಳಿಕ ದೇವಾಲಯ ನಿರ್ಮಾಣದ ಹೊಣೆ ಹೊತ್ತಿದ್ದ ಕೆ.ಎಂ ಮುನ್ಷಿಯವರನ್ನು ನೆಹರೂ ಅಡಿಗಡಿಗೆ ಅವಮಾನಿಸಿದರು. ದೇವಸ್ಥಾನ ಸಿದ್ಧಗೊಂಡ ಬಳಿಕ ಲೋಕಾರ್ಪಣೆಗೂ ಬರಲೊಲ್ಲೆನೆಂದರು. ರಾಷ್ಟ್ರಪತಿ ರಾಜೇಂದ್ರ ಪ್ರಸಾದರನ್ನೂ ಲೋಕಾರ್ಪಣೆಗೆ ಹೋಗದಂತೆ ತಡೆಯಲು ಬಹುಪ್ರಯತ್ನ ಮಾಡಿದರು. ತನ್ನ ಪ್ರಯತ್ನಗಳೆಲ್ಲಾ ವಿಫಲವಾದಾಗ, ರಾಜೇಂದ್ರ ಪ್ರಸಾದರು 11 ಮೇ 1951ರಂದು ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾಡಿದ ಭಾಷಣವೂ ಪೂರ್ತಿ ಪ್ರಸಾರವಾಗದಂತೆ ಅಡ್ಡಗಾಲಿಕ್ಕಿದರು ನೆಹರೂ!
ಎಪ್ಪತ್ತು ವರ್ಷಗಳಲ್ಲಿ ಇಂದ್ರಪ್ರಸ್ಥವೆಂಬ ಇವತ್ತಿನ ದೆಹಲಿ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಯಿತು. ಯಮುನೆಯ ಕಲುಷಿತ ನೀರಿನಂತೆ ಜಾತ್ಯಾತೀತವೆಂಬ ಪೊಳ್ಳು ತತ್ವದ ಮೇಲೆ ನಿಂತಿದ್ದ ರಾಜಕಾರಣದ ಅಡಿಪಾಯ ಕುಸಿಯಲು ಆರಂಭವಾಗಿದ್ದು ಅದೇ ಪುನರುತ್ಥಾನಗೊಂಡ ಸೋಮನಾಥದ ನಾಡಿನಿಂದ ಎದ್ದು ಬಂದ ಬೆಳಕಿನ ಕಿರಣದಿಂದ. ಆ ಕಿರಣ ದೀಪವಾಗಿ, ರಾಷ್ಟ್ರಜ್ಯೋತಿಯಾಗಿ ದೇಶದ ಮೂಲೆಮೂಲೆಗೂ ಹಬ್ಬಿತು. ಈ ದೇಶವನ್ನು ಉಳಿಸಿ ಬೆಳೆಸಿದ್ದ ಅಧ್ಯಾತ್ಮ ಪರಂಪರೆಯನ್ನು ಹೃದಯದಲ್ಲಿಟ್ಟು ಪೋಷಿಸಿಕೊಂಡು ಬಂದುದೇ ಆ ದೀಪ ಈ ದೇಶದ ಜನರ ಮನೆ-ಮನಗಳಲ್ಲಿ ಬೆಳಗಲು ಕಾರಣವಾಯಿತು. ಭಾರತದ ಅಧ್ಯಾತ್ಮ ಕ್ಷಾತ್ರವನ್ನು ಜಗತ್ತಿಗೆ ಪರಿಚಯಿಸಿ ಮೆರೆದಿದ್ದ ವೀರ ಸಂತ ಆ ನರೇಂದ್ರನಂತೆ ರಾಜಕಾರಣದಲ್ಲೂ ಅಧ್ಯಾತ್ಮದ ಅಂಕೆಯೂ, ಫಲವೂ ಇದ್ದರೆ ಜಗತ್ತಿನೆದುರು ಈ ದೇಶ ಹೇಗೆ ಮೆರೆಯಬಹುದು ಎನ್ನುವುದನ್ನು ಈ ರಾಜಕೀಯ ಸಂತ ನರೇಂದ್ರನೂ ತೋರಿಸಿಕೊಟ್ಟ. ಆ ಫಲಗಳನ್ನೆಲ್ಲಾ ವಿವಿಧ ರೂಪದಲ್ಲಿ ದೇಶದ ಜನತೆ ಕಳೆದ ಆರು ವರ್ಷಗಳಲ್ಲಿ ಕಣ್ಣಾರೆ ಕಂಡಿದೆ.
ಅವೆಲ್ಲಕ್ಕೂ ಕಲಶಪ್ರಾಯದಂತೆ ನಡೆಯಿತು ಈ ದೇಶದ ರಾಷ್ಟ್ರೀಯ ಅಸ್ಮಿತೆ ಶ್ರೀರಾಮಮಂದಿರದ ಭೂಮಿ ಪೂಜನಾ. ಸ್ವತಃ ಪ್ರಧಾನಿ ಮೋದಿ ತನ್ನ ಮಹತ್ವದ ಕೆಲಸಗಳನ್ನೆಲ್ಲಾ ಬದಿಗಿಟ್ಟು ಯಜಮಾನನಾಗಿ, ಅರ್ಧದಿನ ರಾಮಜನ್ಮಭೂಮಿಯಲ್ಲೇ ನಿಂತು ನಡೆಸಿದ ಈ ಪವಿತ್ರ ಕಾರ್ಯವನ್ನು ದೇಶದ ಮೂಲೆಮೂಲೆಯಿಂದ ಮಾತ್ರವಲ್ಲದೆ ಜಗತ್ತಿನ ಹಲವೆಡೆಯ ಜನತೆ ವೀಕ್ಷಿಸಿತು. ಅದು ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬನ ಕನಸು. ಕೇವಲ ರಾಮಮಂದಿರ ಮಾತ್ರ ಭಾರತೀಯನ ಕನಸಲ್ಲ. ತನ್ನ ಪ್ರಧಾನಿ ಈ ದೇಶದ ಯಜಮಾನನಾಗಿ ಈ ರಾಷ್ಟ್ರದ ಸಂಸ್ಕೃತಿಯಂತೆ ತನ್ನ ಕರ್ತವ್ಯವನ್ನು ಯಾವುದೇ ಅಳುಕಿಲ್ಲದೆ, ಹಿಂಜರಿಕೆಯಿಲ್ಲದೆ, ತೋರಿಕೆಗಾಗಿಯಲ್ಲದೆ ಮಾಡಬೇಕು ಎಂಬ ಕನಸು. ಆ ಕನಸು ನನಸಾಗಲು ಎಪ್ಪತ್ತು ವರ್ಷ ಭಾರತೀಯ ಕಾಯಬೇಕಾಯಿತು. ಯಾವ ದೇಶದ ಪ್ರಧಾನಿಯೊಬ್ಬ ಹಿಂದೊಮ್ಮೆ ಈ ದೇಶದ ಅಸ್ಮಿತೆ ಸೋಮನಾಥವೆಂಬ ಭವ್ಯ ದೇಗುಲದ ಉದ್ಘಾಟನಾ ಸಮಾರಂಭಕ್ಕೆ ಹೋಗಲು ನಾಚಿಕೆಪಟ್ಟಿದ್ದನೋ, ಎಪ್ಪತ್ತು ವರುಷಗಳ ಬಳಿಕ ಅದೇ ದೇಶದ ಪ್ರಧಾನಿಯಾದವನು ಯಾವುದೇ ಅಳುಕು, ಹಿಂಜರಿಕೆಯಿಲ್ಲದೆ, ಹೆಮ್ಮೆ, ಸಂಭ್ರಮಗಳ ಸಮ್ಮಿಳಿತದಿಂದ ತುಂಬಿದ ಭಾವದೊಂದಿಗೆ ಈ ದೇಶದ ಇನ್ನೊಂದು ಅಸ್ಮಿತೆಯ ಮಂದಿರಕ್ಕೆ ಶಿಲಾನ್ಯಾಸಗೈದ. ಕ್ಷಾತ್ರದೊಂದಿಗೆ ಅಧ್ಯಾತ್ಮ ಮಿಳಿತವಾದರೆ ಮಾತ್ರ ಇದು ಸಾಧ್ಯ. ಅಂದು ನೆಹರೂ ತಮ್ಮ ಪೊಳ್ಳು ಜಾತ್ಯಾತೀತ ತತ್ವದ ಉಳಿವಿಗಾಗಿ, ಈ ದೇಶದ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲದಿರುವ ತನ್ನ ಮನಃಸ್ಥಿತಿಯಿಂದಾಗಿ, ಅಲ್ಪಸಂಖ್ಯಾತರ ಮತವನ್ನು ಕಳೆದುಕೊಳ್ಳುವ ಹೆದರಿಕೆಯಿಂದಾಗಿ ದೇವಾಲಯ ಕಟ್ಟಲು ಅಡ್ಡಗಾಲಿಟ್ಟು, ಕೊನೆಗೆ ಉದ್ಘಾಟನೆಗೂ ಹೋಗಲಿಲ್ಲ. ಆದರೆ ಮೋದಿಯವರು ರಾಜರ್ಷಿಯಂತೆ, ಯಾವುದೇ ಸೆಕ್ಯುಲರ್, ಮತಭ್ರಾಂತ, ಮತಾಂಧ, ದೇಶದ ಕಡೆಗೆ ಕಮ್ಮಿನಿಷ್ಠೆಯಿರುವವರ ಬೆದರಿಕೆ, ಬೊಬ್ಬಾಟ, ಅರಚಾಟಗಳಿಗೆ ಕಿವಿಗೊಡದೆ ಗಜಗಾಂಭೀರ್ಯದಿಂದ ಈ ದೇಶದ ನಿಜವಾದ ಪ್ರಜೆಯೊಬ್ಬ ಬಯಸಿದಂತೆ ನಡೆದುಕೊಂಡುದುದು ಈ ನೆಲದ, ನೆಲದ ಜನರ ಹಲವು ಸಾವಿರ ವರ್ಷಗಳ ತಪದ ಪುಣ್ಯಫಲವೇ ಇರಬೇಕು.
ಹಿಂದಿನ ಸರ್ಕಾರಗಳಲ್ಲಿ ವಿದೇಶೀ ಗಣ್ಯರು ಭಾರತಕ್ಕೆ ಆಗಮಿಸಿದಾಗ ಪ್ರಮುಖವಾಗಿ ಅವರಿಗೆ ಭಾರತೀಯ ಸಂಸ್ಕೃತಿಯ ಕುರುಹೇ ಇಲ್ಲದ ತಾಜ್‌ಮಹಲಿನಂತಹಾ ಕಟ್ಟಡಗಳನ್ನು ತೋರಿಸಲಾಗುತ್ತಿತ್ತು. ಆದರೆ ಮೋದಿಯವರು ಪ್ರಧಾನಿಯಾದ ಈ ಸಂಪ್ರದಾಯ ಬದಲಾಯಿತು. ಜಪಾನ್ ಪ್ರಧಾನಿ ಶಿಂಜೋ ಅಬೆಯವರನ್ನು ವಾರಾಣಸಿಯಲ್ಲಿ ಬರಮಾಡಿಕೊಂಡ ಪ್ರಧಾನಿ ಮೋದಿಯವರು ಭಾರತೀಯ ಸಂಪ್ರದಾಯದಂತೆ ಅವರಿಂದ ವೇದ-ಘೋಷಗಳೊಂದಿಗೆ ಗಂಗಾ ಆರತಿಯನ್ನು ಮಾಡಿಸುವ ಮೂಲಕ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಯುಎಇ ಯ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್‌ಜಯೇದ್, ದಕ್ಷಿಣಕೊರಿಯಾದ ಅಧ್ಯಕ್ಷ ಮೂನ್-ಜೆ-ಇನ್, ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ಬಂದಾಗ ಭಾರತಕ್ಕೆ ಬಂದಾಗ ಅಕ್ಷರಧಾಮ ದೇವಾಲಯಕ್ಕೆ ಭೇಟಿ ಮಾಡಿಸಲಾಯಿತು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಅಯೋಧ್ಯೆಯ ರಾಜಕುಮಾರಿ ಸುರಿರತ್ನ ಕೊರಿಯಾಕ್ಕೆ ತೆರಳಿ ಅಲ್ಲಿನ ರಾಜನಾದ ಕಿಮ್‌ಸುರೋರನ್ನು ವರಿಸಿದ್ದ ಹಿನ್ನೆಲೆಯಲ್ಲಿ ಸೀತಾ ಉತ್ಸವಕ್ಕೆ ದಕ್ಷಿಣಕೊರಿಯಾದ ರಾಣಿಯವರನ್ನೇ ಆಹ್ವಾನಿಸಿ ಅವರಿಂದ ಪೂಜೆಮಾಡಿಸಲಾಯಿತು. 2019ರಲ್ಲಿ ಚೀನಾದ ಅಧ್ಯಕ್ಷನ ಜೊತೆ ಅನೌಪಚಾರಿಕ ಮಾತುಕತೆಯನ್ನು ಮೋದಿಯವರು ಏರ್ಪಡಿಸಿದ್ದು ತಮಿಳುನಾಡಿನ ಮಹಾಬಲಿಪುರಂನಲ್ಲಿ. ಬಲಿಚಕ್ರವರ್ತಿಯ ಹೆಸರಿನಿಂದ ಮಹಾಬಲಿಪುರಂ ಎಂದು ಹೆಸರು ಪಡೆದಿದ್ದ ಈ ಪ್ರಾಚೀನ ನಗರ ಪಲ್ಲವ ನರಸಿಂಹವರ್ಮನೆಂಬ "ಮಹಾಮಲ್ಲ"ನನ್ನು ತನ್ನೊಡನೆ ತಳುಕುಹಾಕಿಕೊಂಡು ಮಾಮಲ್ಲಪುರಮ್ ಎಂದಾಯಿತು. ತನ್ನ ತಂದೆಯನ್ನು ಸೋಲಿಸಿದ್ದ ಇಮ್ಮಡಿ ಪುಲಿಕೇಶಿಯನ್ನು ಗೆದ್ದು ವಾತಾಪಿಕೊಂಡ ಬಿರುದು ಪಡೆದಿದ್ದ ಈ ಮಹಾಸಾಹಸಿ ತನ್ನ ತಂದೆಯ ಮಹಾಬಲಿಪುರವೆಂಬ ಸುಂದರ ಕನಸನ್ನು ನನಸಾಗಿಸಿದ. ಪಲ್ಲವರ ಕಾಲದಲ್ಲಿ ಈ ನಗರ ಚೀನಾ, ರೋಮ್'ಗಳ ಜೊತೆ ವ್ಯಾಪಾರ ಸಂಪರ್ಕವನ್ನು ಹೊಂದಿತ್ತಾದರೂ ಚೀನೀ ಅಧ್ಯಕ್ಷನನ್ನು ದೆಹಲಿಯೋ, ಚೆನ್ನೈಯಂತಹಾ ಆಧುನಿಕ ನಗರಗಳನ್ನು ಬಿಟ್ಟು ಈ ಪ್ರಾಚೀನ ದೇಗುಲಗಳ ಬೀಡಿಗೆ ಕರೆದೊಯ್ದುದಕ್ಕೆ ಅದೊಂದೇ ಕಾರಣವಾಗಿರಲಿಲ್ಲ. ಇನ್ನೊಂದು ಮುಖ್ಯ ನಂಟು ಅಲ್ಲಿತ್ತು. ಅದು ಬೌದ್ಧರ ಝೆನ್ ಶಾಖೆ ಹಾಗೂ ಚೀನಾ ಸಮರಕಲೆ ಶಾವೊಲಿನ್ ಜನಕ ಬೋಧಿಧರ್ಮ ಇಲ್ಲಿನವನೇ ಎಂಬ ಪ್ರತೀತಿ. ಜೊತೆಗೆ ಪಲ್ಲವರು ತಮ್ಮ ರಕ್ತ ಬಸಿದು ಕಟ್ಟಿದ ಸುಂದರ ನಗರದಲ್ಲಿ ಶಿಲ್ಪಕಲೆಗಳಿಂದ ಬೆಳಗಿದ ದೇಗುಲ ಸಮೂಹ. ಅಲ್ಲದೇ ನರಸಿಂಹ ವರ್ಮನ ಸೇನಾನಿಯಾಗಿದ್ದು ಬಳಿಕ 63 ನಾಯನ್ಮಾರ್ ಸಂತರುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ(ಸಿರುತೊಂಡರ್) ಪರಂಜೋತಿಯ ಅಧ್ಯಾತ್ಮಿಕ ಶಕ್ತಿ!
ಇವೆಲ್ಲವೂ ಮೋದಿ ರಾಜಕೀಯ ಉದ್ದೇಶಕ್ಕಾಗಿ ಮಾಡಿದ್ದು ಎನ್ನುವ ಆರೋಪಗಳನ್ನು ಕ್ಸುತಿತ ಮನಸ್ಥಿತಿಯವರು ಮಾಡಬಹುದು. ಆದರೆ ಮೋದಿ ರಾಜಕೀಯ ಉದ್ಡೇಶವಷ್ಟೇ ಇಟ್ಟು ಇವನ್ನೆಲ್ಲಾ ಮಾಡುತ್ತಿದ್ದರೆ ಅಷ್ಟೆಲ್ಲಾ ದೇವಾಲಯ ಸುತ್ತುವ ಅವಶ್ಯಕತೆ ಇರಲಿಲ್ಲ. ಅಥವಾ ಕಾಟಾಚಾರಕ್ಕೆ ಎಂಬಂತೆ ಭೇಟಿಕೊಡಬಹುದಿತ್ತು. ಆದರೆ ಅವರ ಪ್ರತಿಯೊಂದು ಕಾರ್ಯದಲ್ಲೂ ಈ ನೆಲದ ಸಂಸ್ಕೃತಿಯೆಡೆಗಿನ ಶ್ರದ್ಧೆ, ಗೌರವಗಳು ಎದ್ದು ಕಾಣುತ್ತವೆ. ಪ್ರಧಾನಿಯಾದ ಬಳಿಕ ನೇಪಾಳದ ಪಶುಪತಿನಾಥಕ್ಕೆ ತೆರಳಿದ್ದರು ಮೋದಿ. 2017ರಲ್ಲಿ ಕೇದಾರನಾಥಕ್ಕೆ ತೆರಳಿ ಅಲ್ಲಿನ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದರು. 2018ರಲ್ಲಿ ಕೇದಾರನಾಥದಲ್ಲೇ ದೀಪಾವಳಿಯನ್ನೂ ಆಚರಿಸಿದರು. 2017ರಲ್ಲಿ ಕಾಶ್ಮೀರದಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದೂ ಅಲ್ಲಿಯವರೆಗೆ ಯಾವೊಬ್ಬ ಪ್ರಧಾನಿಯೂ ಮಾಡದ ಸಂಭ್ರಮಾಚರಣೆಯೇ. ಕಾಶಿಯ ವಿಶ್ವನಾಥನ ಅನುಗ್ರಹ ಪಡೆದು ಸತತ ಚುನಾವಣೆ ಗೆದ್ದ ಮೋದಿ ಕಾಶಿ ಕಾರಿಡಾರ್ ಮೂಲಕ ಅಸ್ತವ್ಯಸ್ತಗೊಂಡಿದ್ದ ಕಾಶಿಯನ್ನು ಸುಂದರಗೊಳಿಸುತ್ತಿದ್ದಾರೆ. ಅಲ್ಲಿ ಅಕ್ರಮವಾಗಿ ದೇವಾಲಯಗಳನ್ನೇ ಆಕ್ರಮಿಸಿ ಕೂತಿದ್ದವರ ಕಥೆಗಳು ಜೆಸಿಬಿಯು ಒಂದೊಂದೇ ಕಟ್ಟಡಗಳನ್ನು ಕೆಡವಿದಾಗ ಹೊರಬೀಳುತ್ತಿವೆ. ಸೋಮನಾಥ, ಬದರೀನಾಥ, ತಿರುಪತಿ, ಗುರುವಾಯೂರು, ನೇಪಾಳದ ಮುಕ್ತಿಕಾಂತ್ ದೇವಾಲಯ, ಗುಜರಾತಿನ ಮೊಧೇರಾ ದೇವಾಲಯ, ವಾರಾಣಸಿಯ ದುರ್ಗಾಮಾತಾ, ತುಳಸಿ ಮಾತಾ ಮಂದಿರಗಳಿಗೆ ಭೇಟಿ, ಬಹ್ರೈನಿನ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿಗೆ ಚಾಲನೆ, ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ, ಚಾರ್ ಧಾಮ್ ಯಾತ್ರೆಗೆ ರಸ್ತೆ ಅಭಿವೃದ್ಧಿ, ರಾಮಾಯಣ ಸರ್ಕ್ಯೂಟ್, 84 ಕೋಸಿ ಪರಿಕ್ರಮ ಮಾರ್ಗದ ಅಭಿವೃದ್ಧಿ, ರಾಮಾಯಣ ಥೀಮ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ, ಅಮೂಲ್ಯ ವಿಗ್ರಹಗಳ ಘರ್‌ವಾಪಸಿ, ಹತ್ತು ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುವ ಕುಂಭಮೇಳದ ಅಚ್ಚುಕಟ್ಟಾದ ಆಯೋಜನೆ, ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಆಶ್ರಯ ನೀಡುವ ಪೌರತ್ವ ಕಾಯ್ದೆ, ನಮಾಮಿ ಗಂಗೆ, ಜೊತೆಗೆ ತನಗೆ ಬಂದ ಉಡುಗೊರೆಗಳ ಹರಾಜಿನ ಹಣ, ಪ್ರಶಸ್ತಿಗಳ ಹಣವನ್ನೂ ಈ ಯೋಜನೆಗೆ ಅರ್ಪಣೆ, ವೈಷ್ಣೋದೇವಿಯಿರುವ ಕಟ್ರಾ ನಗರಕ್ಕೆ ರೈಲು ಮಾರ್ಗ, ಮತಾಂತರಕ್ಕೆ ಹಣ ಸುರಿಯುತ್ತಿದ್ದ ಎನ್ಜಿಓಗಳ ಬಾಗಿಲು ಮುಚ್ಚಿಸಿದ್ದು ಹೀಗೆ ಹತ್ತು ಹಲವು. ಇವೆಲ್ಲಾ ಜಾತ್ಯಾತೀತತೆಯ ಸೋಗಿನಡಿಯಲ್ಲಿ ಮುಚ್ಚಿಹೋಗಿದ್ದ ಹಿಂದು ಸಂಸ್ಕೃತಿಯ ಪುನರುತ್ಥಾನವಲ್ಲದೆ ಮತ್ತೇನು?ಇವುಗಳೆಲ್ಲಾ ಬರೇ ರಾಜಕೀಯಕ್ಕಾಗಿ ಮಾಡಿದ್ದು ಅಂತ ಮೂರ್ಖರು ಮಾತ್ರ ಹೇಳಬಲ್ಲರು. ಗಂಗಾ ನದಿಯಲ್ಲಿ ನರೇಂದ್ರ ಮೋದಿಯೂ ಮಿಂದೆದ್ದಿದ್ದರು, ಕೇಜ್ರೀವಾಲರೂ ಮಿಂದೆದ್ದಿದ್ದರು. ಯಾವುದು ಭಾವ, ಭಕ್ತಿ ಯಾವುದು ಬೂಟಾಟಿಕೆ ಎನ್ನುವುದನ್ನು ಭಾರತೀಯ ನಿರ್ಧರಿಸಿದ್ದ. 2019ರಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಮುಗಿದ ಮರುದಿನ ಸುಮಾರು ಹದಿನೇಳು ಘಂಟೆಗಳ ಕಾಲ ಕೇದಾರದ ಗುಹೆಯೊಂದರಲ್ಲಿ ಮೋದಿ ಮಾಡಿದ ಧ್ಯಾನದ ಹಿಂದೆ ಯಾವ ರಾಜಕೀಯವಿತ್ತು?
ದೇವಸ್ಥಾನಕ್ಕೆ ಭೇಟಿಕೊಡುವುದನ್ನೂ ರಾಜಕೀಯ ದೃಷ್ಟಿಯಿಂದಲೇ ಮಾಡುವವರಿಗೆ ಉಳಿದವರೂ ತನ್ನಂತೆಯೇ ಎಂದು ಭಾಸವಾಗುವುದು ಸಹಜ. ವೀರ ಸಾವರ್ಕರ್ 1959ರಲ್ಲಿ ಹೇಳಿದ್ದ "ಒಂದು ದಿನ ಬರುತ್ತದೆ. ಕಾಂಗ್ರೆಸ್ಸಿಗರು ಮತಬೇಟೆಗಾಗಿ ಕೋಟಿನ ಮೇಲೆಯೇ ಜನಿವಾರ ಹಾಕುತ್ತಾರೆ" ಎನ್ನುವ ಮಾತು ಸತ್ಯವಾಗುತ್ತಿದೆ. ಮತ ಬೇಟೆಗಾಗಿ ದೇವಾಲಯ ಭೇಟಿಗೆ ಕಾಂಗ್ರೆಸ್ಸಿಗರೂ ಆರಂಭಿಸಿದ್ದಾರೆ. ಅದಕ್ಕಾಗಿ ತಾವು ಕೌಲ ಗೋತ್ರದ ಬ್ರಾಹ್ಮಣ ಎಂದು ಹುಸಿ ಪ್ರಚಾರವನ್ನೂ ಮಾಡುತ್ತಾರೆ. ತನ್ನ ಮುತ್ತಜ್ಜ ಯಾವ ದೇವಾಲಯದ ಜೀರ್ಣೋದ್ಧಾರಕ್ಕೆ ಅಡ್ಡಗಾಲಿಕ್ಕಿದ್ದನೋ ಅದೇ ದೇವಾಲಯ ಸೋಮನಾಥಕ್ಕೆ ಇಂದು ಕೌಲ ಗೋತ್ರಜನಾಗಿ ಮರಿಮಗ ಹಿಂದೂಗಳ ಮತದ ಬೇಟೆಗಾಗಿ ಭೇಟಿಕೊಡುತ್ತಿದ್ದಾನೆ. ಹಿಂದೆ ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ಸಿಗರು ಹಿಂದೂಗಳ ಮತ ತಪ್ಪಿ ಹೋದೀತು ಎಂಬ ಹೆದರಿಕೆಯಿಂದ ರಾಮಮಂದಿರದ ನಿರ್ಮಾಣದ ಪರವಾಗಿ ಘೋಷಣೆ ಕೂಗಲು ಆರಂಭಿಸಿದ್ದಾರೆ. ಎಲ್ಲದರಲ್ಲೂ ರಾಜಕೀಯವನ್ನೇ ಕಾಣುವವರಿಗೆ, ಮಾಡುವವರಿಗೆ ಮೋದಿಯ ಕಾರ್ಯದಲ್ಲೂ ರಾಜಕೀಯವೇ ಕಾಣುತ್ತದೆ!
ಹಿಂದೆ ಪ್ರಧಾನಿಯಾದವರು ಯಾಕೆ ಹೀಗಿರಲಿಲ್ಲ? ಯಾಕೆ ಬಹಿರಂಗವಾಗಿ ನಮ್ಮ ಸಂಸ್ಕೃತಿಯ ಬಗ್ಗೆ ಹೇಳಿಕೊಳ್ಳಲಿಲ್ಲ? ಕೆಲವರಿಗೆ ಎಲ್ಲಿ ಅಲ್ಪಸಂಖ್ಯಾತರು ತಮ್ಮ ಮೇಲೆ ಮುರಕೊಂಡು ಬಿಡ್ತಾರೋ ಅನ್ನುವ ಭಯ. ಕೆಲವರಿಗೆ ನಂಬಿಕೆಯೇ ಇರಲಿಲ್ಲ. ಕೆಲವರು ಸೆಕ್ಯುಲರ್ ಸೋಗಿನಲ್ಲಿದ್ದರು. ಹಲವರು ತಮ್ಮ ಜೋಳಿಗೆ ತುಂಬಿಸುವುದರಲ್ಲೇ ವ್ಯಸ್ತರಾಗಿದ್ದರು. ಒಬ್ಬ ಪ್ರಧಾನಿಯಂತೂ ದೇಶದ ಸಂಪನ್ಮೂಲಗಳ ಪ್ರಥಮ ಹಕ್ಕು ಇರುವುದು ಮುಸಲ್ಮಾನರಿಗೆ ಎಂದು ದೊಡ್ಡ ದನಿಯಲ್ಲಿ ಹೇಳಿದ್ದರು. ಅವರ ಪಿತಾಮಹರುಗಳು ಸಾರಿದ್ದು, ಮಾಡಿದ್ದೂ ಅದನ್ನೇ. ಕೆಲವು ಪ್ರಧಾನಿಗಳು ಒಂದೆರಡು ಕೋಮಿಗೋಸ್ಕರ ಸಂವಿಧಾನವನ್ನೇ ಬದಲಾಯಿಸಿದ್ದರು. ಆದರೆ ಮೋದಿ ಯಾವುದೇ ರಾಗದ್ವೇಷಗಳಿಲ್ಲದೆ ಸಮಸ್ತ ಭಾರತೀಯರನ್ನೂ ಒಂದೇ ತೆರನಾಗಿ ನೋಡುತ್ತೇನೆ ಎಂದು ಪ್ರಮಾಣ ಮಾಡಿ ಅದರಂತೆ ನಡೆದರು. ಯಾವುದು ಇಲ್ಲಿನ ಜೀವಂತಿಕೆಯೋ, ಯಾವುದು ಈ ಮಣ್ಣಿನ ಸತ್ವವೋ, ಯಾವುದು ಈ ರಾಷ್ಟ್ರೀಯರ ಸ್ವತ್ವವೋ ಅದನ್ನು ಜೀವಂತವಾಗಿರಿಸಲು, ತನ್ಮೂಲಕ ನಮ್ಮ ನಿಜವಾದ ಸಂಸ್ಕೃತಿ ಹೀಗಿದೆ ಎಂದು ಜಗತ್ತಿಗೆ ತೋರಿಸಲು ಮೋದಿ ಪ್ರಯತ್ನಿಸಿದರು. ಅದಕ್ಕಾಗಿ ಅವರು ಯಾವ ವಿರೋಧ, ವಿಕಾರತೆಗಳಿಗೂ ತಲೆಕೆಡಿಸಿಕೊಳ್ಳಲಿಲ್ಲ. ಸಾಮಾನ್ಯ ಹಿಂದೂವೊಬ್ಬ ಜೀವನದಲ್ಲಿ ಹೇಗೆ ನಡೆದುಕೊಳ್ಳುತ್ತಾನೋ, ಹೇಗೆ ತನ್ನ ಸಂಸ್ಕೃತಿ, ಸಂಪ್ರದಾಯಗಳನ್ನು ಆಚರಿಸುತ್ತಾನೋ ಹಾಗೆಯೇ ಮೋದಿಯೂ ನಡೆದರು. ಹಾಗಾಗಲು ಯೌವನದ ದಿನಗಳಲ್ಲಿ ಮೋದಿಯ ಅಂತಃಸತ್ವವನ್ನು ವೃದ್ಧಿಗೊಳಿಸಿದ ಅಧ್ಯಾತ್ಮಶಿಖರ ಹಿಮಾಲಯದ ಕೊಡುಗೆಯಿದೆ. ಅದಕ್ಕೆ ಸ್ವಾಮಿ ಆತ್ಮಸ್ಥಾನಂದರು ಅಂದು ಉಪದೇಶಿಸಿದ ಜೀವನಧ್ಯೇಯ ಕಾರಣವಾಯ್ತು. ವ್ಯಕ್ತಿತ್ವವನ್ನು ರೂಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ಸಂಸ್ಕಾರ ಕಾರಣವಾಯ್ತು. ಕಳೆದ ಶತಮಾನದ ಸರಿ ಮಧ್ಯಭಾಗದಲ್ಲಿ ಸೆಪ್ಟೆಂಬರ್ ಹದಿನೇಳರಂದು ಈ ಪುಣ್ಯಭೂಮಿಗೆ ಈ ಪುಣ್ಯಾತ್ಮನನ್ನು ಒದಗಿಸಿಕೊಟ್ಟ ಆ ಮಹಾಮಾತೆಯ "ವಜ್ರ" ಸಂಕಲ್ಪ, ಆಕೆ ಕೊಟ್ಟ ಸಂಸ್ಕಾರ ಕಾರಣವಾಯ್ತು! ಭಾರತದ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಅಧ್ಯಾತ್ಮದ ಲೇಪ ಬೇಕು. ಅಧ್ಯಾತ್ಮದ ಆಸ್ವಾದವೇ ಭಾರತದ ವರ್ತಮಾನ ಮತ್ತು ಭವಿಷ್ಯತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎಂದಿದ್ದರು ಮಹರ್ಷಿ ಅರವಿಂದರು. ಹೌದು ಈಗ ಬೇಕಾಗಿರುವುದೂ ಅದೇ. ಪ್ರತಿಯೊಂದು ಕ್ಷೇತ್ರದ ಪ್ರತಿಯೊಂದು ಹಂತದಲ್ಲೂ ಮೋದಿಯಂತಹಾ ವ್ಯಕ್ತಿ ಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ