ಪುಟಗಳು

ಶನಿವಾರ, ಫೆಬ್ರವರಿ 20, 2021

ಐದೂವರೆ ಶತಮಾನಗಳ ಪ್ರತಿರೋಧ

 ಐದೂವರೆ ಶತಮಾನಗಳ ಪ್ರತಿರೋಧ


                 ಭಾರತದ ಇತಿಹಾಸವನ್ನು ಸೋಲಿನ ಇತಿಹಾಸವನ್ನಾಗಿ ಇಂದಿಗೂ ಪಠ್ಯಪುಸ್ತಕಗಳಲ್ಲಿ ಬೋಧಿಸಲಾಗುತ್ತಿದೆ. ಮೊಘಲರನ್ನು, ಬ್ರಿಟಿಷರನ್ನು ವೈಭವೀಕರಿಸುವ ಇಂತಹಾ ಇತಿಹಾಸದ ಘಟನೆಗಳನ್ನು ಒರೆಗಲ್ಲಿಗೆ ಹಚ್ಚಿದಾಗ ಮಿಂಚಿನೋಪಾದಿಯಲ್ಲಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ವೀರರ ಯಶೋಗಾಥೆ ಗೋಚರಿಸುತ್ತದೆ. ಅದರಲ್ಲೂ ಭಾರತೀಯರ ಅಂತಿಮ ಸೋಲನ್ನು ಮಾತ್ರ ಕಣ್ಣಿಗೆ ಕಟ್ಟುವಂತೆ ವಿವರಿಸಿದ ತಥಾಕಥಿತ ಇತಿಹಾಸಕಾರರು ಐದೂವರೆ ಶತಮಾನಗಳಷ್ಟು ದೀರ್ಘಕಾಲ ಅಂದರೆ ಸುಮಾರು ಹನ್ನೆರಡನೇ ಶತಮಾನದ ಅಂತಿಮ ದಶಕದವರೆಗೂ ಹಿಂದೂಗಳು ಆಕ್ರಮಣಕಾರರಿಗೆ ಒಡ್ಡಿದ ಪ್ರತಿರೋಧದ ಬಗೆಗೆ ಕೆಲವು ಸೊಲ್ಲುಗಳನ್ನೂ ಉಲ್ಲೇಖಿಸದಿರುವುದು ಅವರ ಸುಳ್ಳಿನ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾವು ಗೆದ್ದುಕೊಂಡ ಯಾವ ನಾಡಿನಲ್ಲೂ ಇಂತಹಾ ದೀರ್ಘಕಾಲದ ಪ್ರತಿರೋಧವನ್ನು ಮುಸ್ಲಿಮರು ಎದುರಿಸಿರಲಿಲ್ಲ ಹಾಗೂ ಉಳಿದೆಲ್ಲಾ ದೇಶಗಳು ತಮ್ಮೆಲ್ಲಾ ಸಂಸ್ಕೃತಿ - ಸಂಸ್ಕಾರಗಳನ್ನು ಕಳೆದುಕೊಂಡು ಇಸ್ಲಾಮೀಕರಣಗೊಂಡರೂ ಐದೂವರೆ ಶತಮಾನಗಳ ತೀವ್ರ ಪ್ರತಿರೋಧ ಹಾಗೂ ಐದು ಶತಮಾನಗಳ ಮುಸ್ಲಿಂ ಆಳ್ವಿಕೆಯ ನಡುವೆಯೂ ಮುಸ್ಲಿಮೇತರ ನಾಡಾಗಿ ಉಳಿಯಿತು ಎನ್ನುವುದನ್ನು ಗಮನಿಸಿದಾಗ ಭಾರತೀಯರ ಕ್ಷಾತ್ರಬಲ, ದೃಢಸಂಕಲ್ಪ ಎಂತಹದ್ದೂ ಎನ್ನುವುದರ ಅರಿವಾದೀತು.


            ಭಾರತದ ಮೇಲೆ ಮೊದಲ ಮುಸ್ಲಿಂ ದಾಳಿ ನಡೆದುದು ಸಾಮಾನ್ಯ ಯುಗದ 636ರಲ್ಲಿ. ಮಹಾರಾಷ್ಟ್ರ ಸಮುದ್ರ ತೀರದ ಥಾಣೆಯ ಮೇಲೆ ಎರಡನೇ ಖಲೀಫಾ ಉಮರನ ನೌಕಾದಳ ಉಸ್ಮಾನನ(ಸಕೀಫ್ ಬುಡಕಟ್ಟಿನವ) ನೇತೃತ್ವದಲ್ಲಿ ದಾಳಿ ಮಾಡಿತು. ಬಳಿಕ ದಕ್ಷಿಣ ಗುಜರಾತಿನ ಬರೂಚ್ ಮೇಲೆ ಹಕಾಮ್ ನೇತೃತ್ವದಲ್ಲಿ ದಾಳಿ ಮಾಡಿತು. ಈ ಎರಡೂ ಯುದ್ಧಗಳಲ್ಲಿ ತೀವ್ರ ಮುಖಭಂಗಗೊಂಡು ಇಸ್ಲಾಂ ಸೇನೆ ಓಡಿ ಹೋಗಬೇಕಾಯಿತು. ಆಗ ಈ ಭಾಗಗಳು ನಮ್ಮ ಹೆಮ್ಮೆಯ ಇಮ್ಮಡಿ ಪುಲಿಕೇಶಿಯ ಆಳ್ವಿಕೆಯಲ್ಲಿದ್ದವು. ಭಾರತದ ಮೇಲೆ ಮುಸ್ಲಿಮರ ಮೊದಲ ದಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ ಕೀರ್ತಿ ಕನ್ನಡ ನಾಡಿನ ಸೈನ್ಯಕ್ಕಿದೆ. ಬಳಿಕ 643ರಲ್ಲಿ ಸಿಂಧ್'ನ ಮೇಲೆ ಆಕ್ರಮಣವೆಸಗಲು ದೇವಲ್(ದೇವಲಯ್) ಬಂದರಿನ ಮೂಲಕ ಹಕಾಮ್ ತನ್ನ ತಮ್ಮ ಮುಘೈರಾಹ್'ನನ್ನು ಕಳುಹಿಸಿದ. ಆ ಸಮಯದಲ್ಲಿ ಸಿಂಧ್ ಪ್ರಾಂತ್ಯವನ್ನು ಆಳುತ್ತಿದ್ದವ ರಾಜಾ ಚಚ್ ರಾಯ್. ಆತ ತನ್ನ ಸಾಮ್ರಾಜ್ಯವನ್ನು ಕಾಶ್ಮೀರದಿಂದ ಮಕ್ರಾನ್ ವರೆಗೂ, ರತ್ನಾಕರದಿಂದ ಕುರ್ದಾನ್ & ಕಿಕಾನನ್ ಪರ್ವತಗಳವರೆಗೂ ವಿಸ್ತರಿಸಿದ್ದ. ದೇವಲದಲ್ಲಿದ್ದ ಈತನ ಸರದಾರ ದೇವಜಿಯ ಮಗ ಸಾಮಹಾ ಅರಬ್ ಸೇನೆಯನ್ನು ಅಟ್ಟಾಡಿಸಿ ಬಡಿದು ಮುಘೈರಾಹ್'ನನ್ನು ಕೊಂದು ಹಾಕಿದ. ಹೀಗೆ ಸತತ ಮೂರು ಬಾರಿಯೂ ಖಲೀಫಾನಿಗೆದುರಾದದ್ದು ಭಯಾನಕ ಸೋಲುಗಳು. ಇದು ಅವನನ್ನು ಅಚ್ಚರಿ ಹಾಗೂ ಆಘಾತಕ್ಕೆ ಗುರಿ ಮಾಡಿತು. ಹಾಗಾಗಿ ಆತ ನೌಕಾದಳವನ್ನು ಬಿಟ್ಟು ಭೂಮಾರ್ಗವಾಗಿ ತನ್ನ ಕಾರ್ಯ ಸಾಧಿಸಿಕೊಳ್ಳಲು ಮಕ್ರಾನ್ ಮೇಲೆ ದಾಳಿ ಮಾಡಲು ನಿರ್ಧರಿಸಿದ. ಇರಾಕಿನ ನವಾಬ ಅಬು ಮೂಸಾ ಆತನ ಹಿಂದಿನ ಪ್ರಯತ್ನವನ್ನೆಲ್ಲಾ ತಿಳಿದು "ಭಾರತದ ಮೇಲೆ ದಂಡೆತ್ತಿ ಹೋಗುವುದು ಬೇಡ" ಎಂದು ಸಲಹೆ ನೀಡಿದ. ಹೀಗೆ ಖಲೀಫ ತೆಪ್ಪಗಾದ. ಮುಂದಿನ ಖಲೀಫ ಉಸ್ಮಾನನೂ ಭಾರತದ ಮೇಲೆ ದಾಳಿಯೆಸಗುವ ತಪ್ಪು ಮಾಡಲಿಲ್ಲ. ಆದರೆ ನಾಲ್ಕನೇ ಖಲೀಫ 660ರಲ್ಲಿ  ಭೂಮಾರ್ಗವಾಗಿ ತನ್ನ ಸೈನ್ಯವನ್ನು ಕಳುಹಿಸಿದ. 'ಕಿಕಾನ್'ನಲ್ಲಿ ನಡೆದ ಈ ಯುದ್ಧದಲ್ಲಿ ಅರಬ್ ಸೈನ್ಯ ನುಚ್ಚುನೂರಾಯಿತು.


           ಐದನೆಯ ಖಲೀಫ 661-680ರ ಅವಧಿಯಲ್ಲಿ ಭೂಮಾರ್ಗದ ಮೂಲಕ ಐದು ಬಾರಿ ದಾಳಿ ಮಾಡಿ ಸೋತು ಹೋದನು. ಆರನೆಯ ಬಾರಿ, 680ರಲ್ಲಿ ಮಕ್ರಾನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಆದರೆ ಮುಂದಿನ 28 ವರ್ಷಗಳಲ್ಲಿ ಸಿಂಧ್'ಗೆ ಸೈನ್ಯವನ್ನು ಕಳುಹಿಸುವ ಧೈರ್ಯವನ್ನೇ ಅರಬ್ಬರು ಮಾಡಲಿಲ್ಲ. ಸೇನಾಧಿಕಾರಿಗಳಾದ ಉಬೇದುಲ್ಲಾ ಹಾಗೂ ಬುದೈಲ್ 708ರಲ್ಲಿ ದೇವಲವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ಗತಪ್ರಾಣರಾದರು. ಖಲೀಫನ ಸಾಮಂತ ಇರಾಕಿನ ಹಜ್ಜಾಜನು ದಾಳಿಗೆ ಅನುಮತಿ ಕೇಳಿದಾಗ "ಪ್ರತೀಬಾರಿ ದಾಳಿ ಮಾಡಿದಾಗ ಭಾರೀ ಸಂಖ್ಯೆಯಲ್ಲಿ ನಮ್ಮವರು ಹತರಾಗಿದ್ದಾರೆ. ಇದು ತುಂಬಾ ಆತಂಕದ ವಿಷಯ. ಹಾಗಾಗಿ ಇನ್ನು ಮುಂದೆ ಇಂತಹಾ ಸಂಚು ಹೂಡುವುದು ಬೇಡ" ಎಂದು ಆತ ಆಜ್ಞಾಪಿಸಿದ. ಹಜ್ಜಾಜನು ಬೃಹತ್ ಸೇನೆಯನ್ನು ರೂಪಿಸಿ 712ರಲ್ಲಿ ತನ್ನ ಅಳಿಯ ಮೊಹಮದ್ ಬಿನ್ ಖಾಸಿಂನನ್ನು "ನನ್ನ ವಶದಲ್ಲಿರುವ ಇರಾಕಿನ ಸಮಸ್ತ ಐಶ್ವರ್ಯವನ್ನೂ ಈ ದಾಳಿಗೆ ಮೀಸಲಿಡುತ್ತೇನೆ" ಎಂದು ಅಲ್ಲಾನ ಹೆಸರಲ್ಲಿ ಪ್ರತಿಜ್ಞೆ ಮಾಡಿ ಕಳುಹಿಸಿದ. ಪ್ರಚಂಡ ಪ್ರತಿರೋಧದ ನಡುವೆಯೂ ಕೆಲವು ವ್ಯಾಪಾರಿಗಳು ಹಾಗೂ ಸಾಮಂತರ ವಿಶ್ವಾಸದ್ರೋಹದಿಂದಾಗಿ ಮೂಲಸ್ಥಾನ(ಮುಲ್ತಾನ್) 713ರಲ್ಲಿ ಖಾಸಿಂನ ವಶವಾಯಿತು. ಆದರೇನು 714ರಲ್ಲಿ ಖಲೀಫನು ಖಾಸಿಂನನ್ನು ಹಿಂದಕ್ಕೆ ಕರೆಸಿದ ಕೂಡಲೇ ಇಲ್ಲಿನ ಜನರು ದಂಗೆಯೆದ್ದು ಸ್ವತಂತ್ರರಾದರು.


            ಅವಂತಿಯ ರಾಜ ನಾಗಭಟ್ಟನು 725ರಲ್ಲಿ ಅರಬ್ ಸೈನ್ಯವನ್ನು ಸದೆಬಡಿದಿದ್ದ. ಗುರ್ಜರ-ಪ್ರತೀಹಾರರ ಮೊದಲನೆಯ ಭೋಜ ಇದನ್ನು ತನ್ನ ಗ್ವಾಲಿಯರ್ ಶಾಸನದಲ್ಲಿ ಬರೆಸಿದ್ದಾನೆ. ಇನ್ನೊಮ್ಮೆ ಇಸ್ಲಾಂ ಸೈನ್ಯವು ಸಿಂಧ್,ಸೌರಾಷ್ಟ್ರ, ಗುರ್ಜರಗಳನ್ನು ಗೆದ್ದುಕೊಂಡು ನವಸಾರಿಯನ್ನು ಆಕ್ರಮಿಸಲು ಹವಣಿಸಿದಾಗ "ಅವನಿ ಜನಾಶ್ರಯ" ಚಾಲುಕ್ಯ ಪುಲಿಕೇಶಿ ಅರಬ್ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದನು. ಈ ಬಗೆಗೆ 738 ರ ನವಸಾರಿ ಶಿಲಾಶಾಸನ ತಾಜಿಕಾ(ಅರಬ್) ಸೇನೆಯನ್ನು ಸೋಲಿಸಿದ ಈತನ ಪರಾಕ್ರಮವನ್ನು ಬಣ್ಣಿಸುತ್ತಾ "ಅನಿವರ್ತಕ-ನಿವರ್ತಯೀ", "ದಕ್ಷಿಣಾಪಥಸಾಧಾರ" ಎಂಬ ಬಿರುದುಗಳಿಂದ ಕೊಂಡಾಡಿದೆ. ಗುರ್ಜರ ಪ್ರತೀಹಾರರನ್ನು ಅರಬ್ ಇತಿಹಾಸಕಾರರು ಜುರ್ಸ್'ನ ದೊರೆಗಳು ಅನ್ನುತ್ತಿದ್ದರು. ಗುರ್ಜರ-ಪ್ರತೀಹಾರರ ಅರಸನೊಬ್ಬನನ್ನು ಕುರಿತು ಅರಬ್ ಇತಿಹಾಸಕಾರನೊಬ್ಬನು "ಭಾರತದ ರಾಜರಲ್ಲಿ ಇಸ್ಲಾಮಿಗೆ ಅವನಿಗಿಂತ ದೊಡ್ಡ ಶತ್ರುವಿಲ್ಲ" ಎಂದು ಬರೆದಿದ್ದಾನೆ. ಈ ಅರಸ ಯಾರೆಂದು ನಿಖರವಾಗಿ ಹೇಳಲಾಗದಿದ್ದರೂ ಪ್ರಸಿದ್ಧ ಪರಮಾರ ಭೋಜನೆಂದು ಊಹಿಸಬಹುದು.


                ಇತ್ತ ಕಾಶ್ಮೀರದತ್ತ ಬಂದ ಅರಬ್ ಸೇನೆಯನ್ನು ಮಣ್ಣುಮುಕ್ಕಿಸಿದ ಲಲಿತಾದಿತ್ಯ ಮುಕ್ತಾಪೀಡ ಸ್ವಾತ್, ಸಿಂಧ್, ಮುಲ್ತಾನ್ಗಳಿಂದ ಅರಬ್ಬರನ್ನು ಓಡಿಸಿದ. ಅಫ್ಘನ್ನರ ಮೇಲೆ ದಾಳಿ ಮಾಡಿ ಆತ ಕಾಬೂಲನ್ನು ಗೆದ್ದ. ಇರಾನಿನ ಕೆಲ ಭಾಗಗಳನ್ನೂ ತನ್ನ ವಶವಾಗಿಸಿಕೊಂಡ. ಕಾಬೂಲಿನ ಮುಖಾಂತರ   ಅಫ್ಘನ್ನಿನ ಈಶಾನ್ಯ ಭಾಗಗಳನ್ನು, ತುರ್ಕಿಸ್ತಾನ, ಟ್ರಾನ್ಸೊಕ್ಸಿಯಾನಾ(ಆಧುನಿಕ ಉಜ್ಬೇಕಿಸ್ತಾನ್, ತಜಕಿಸ್ತಾನ್, ದಕ್ಷಿಣ ಕಿರ್ಗಿಸ್ತಾನ್ ಮತ್ತು ನೈಋತ್ಯ ಕಝಕಿಸ್ತಾನಗಳೊಂದಿಗೆ ಕೂಡಿದ ಮಧ್ಯ ಏಷ್ಯದ ಭಾಗ)ಗಳಲ್ಲಿದ್ದ ಮುಸಲರ ಸೊಕ್ಕು ಮುರಿದ. ಬುಖಾರ್ ಪ್ರಾಂತ್ಯದ ಆಡಳಿತಗಾರ ಮುಮಿನ್ ನಾಲ್ಕು ನಾಲ್ಕು ಬಾರಿ ಲಲಿತಾದಿತ್ಯನ ಕೈಯಲ್ಲಿ ಏಟು ತಿಂದ. "ತನಗೆ ಸೋತು ಶರಣಾಗತರಾದುದರ ಕುರುಹಾಗಿ ತುರುಷ್ಕರ ಅರ್ಧ ತಲೆ ಬೋಳಿಸುವಂತೆ ಲಲಿತಾದಿತ್ಯ ಆದೇಶಿಸಿದ್ದ. ವಾಯುವ್ಯ ಭಾರತದ ಅನೇಕ ಭಾಗಗಳಿಂದ ಮುಸ್ಲಿಮರು ಕಾಲು ಕೀಳಬೇಕಾಯಿತು. ಕಸಬಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳ ಜನರು ಮತ್ತೆ ವಿಗ್ರಹಾರಾಧನೆಯಲ್ಲಿ ತೊಡಗಿದರು. ಸೋತು ಓಡಿದ ಮುಸ್ಲಿಮರಿಗೆ ಎಲ್ಲಿ ಹೋಗುವುದು ಎಂಬುದೇ ಗೊಂದಲವಾದಾಗ, ಅರಬ್ಬರ ಸಾಮಂತನೊಬ್ಬ ಸರೋವರದಾಚೆಯ ಆಲ್-ಹಿಂದ್ ಬಳಿ ಅವರೆಲ್ಲಾ ಇರಲು ವ್ಯವಸ್ಥೆ ಮಾಡಿದ. ಅದನ್ನು ಅತ್ ಮೆಹಫುಜಾ(ರಕ್ಷಿತ) ಎಂದು ಹೆಸರಿಟ್ಟು ಕರೆಯಲಾಯಿತು. ಮಸೂದಿ ಎಂಬ ಅರಬ್ ಇತಿಹಾಸಕಾರ "ಹಜ್ಜಾಜನು ಅರಬ್ ಸೇನಾಧಿಕಾರಿ ಅಬ್ದುಲ್ ರಹಮಾನನ ಅಧಿಕಾರವನ್ನು ವಜಾಗೊಳಿಸಿ ಬೇರೊಬ್ಬನನ್ನು ನೇಮಿಸುವುದಾಗಿ ಬೆದರಿಕೆ ಹಾಕಿದಾಗ ಅಬ್ದುಲ್ ರಹಮಾನನು ದಂಗೆಯೆದ್ದು ಹಿಂದೂರಾಜನೊಬ್ಬನ ಜೊತೆ ಹೊಂದಾಣಿಕೆ ಮಾಡಿಕೊಂಡು ಹಜ್ಜಾಜನ ವಿರುದ್ಧವೇ ಯುದ್ಧಕ್ಕೆ ಸಿದ್ಧನಾದ. ಈ ಒಪ್ಪಂದ ಕಾರ್ಯರೂಪಕ್ಕೆ ಬರದ ಕಾರಣ ಅಬ್ದುಲ್ ರಹಮಾನ್ ಆತ್ಮಹತ್ಯೆ ಮಾಡಿಕೊಂಡ. ಆದರೆ ಆ ಹಿಂದೂ ರಾಜ ಯುದ್ಧ ಮುಂದುವರೆಸಿದ. ಆತ ಪೂರ್ವ ಪರ್ಷಿಯಾವನ್ನು ವಶಪಡಿಸಿಕೊಂಡು ಟೈಗ್ರಿಸ್ ಮತ್ತು ಯುಫ್ರೆಟಿಸ್ ನಡಿಗಳ ದಡದವರೆಗೆ ಮುಂದುವರೆದಿದ್ದ. ಹಜ್ಜಾಜ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದರೂ ಆತ ಖಲೀಫನಿಗೆ ಬಗ್ಗಲಿಲ್ಲ" ಎಂದು ಬರೆದಿದ್ದಾನೆ. ಆ ಸಮಯದಲ್ಲಿ ಅಂತಹಾ ಬಲಾಢ್ಯ ಹಿಂದೂ ಅರಸನಿದ್ದದ್ದು ಲಲಿತಾದಿತ್ಯನೇ. ಕಲ್ಹಣನ ರಾಜತರಂಗಿಣಿ ಒದಗಿಸಿದ ಮಾಹಿತಿಯೂ ಇದರೊಡನೆ ತಾಳೆಯಾಗುತ್ತದೆ.


                ಹತ್ತನೇ ಶತಮಾನದಲ್ಲಿ ಮುಸ್ಲಿಮರ ಕೈಗೆ ಸಿಕ್ಕಿದ್ದು ಮುಲ್ತಾನ್ ಮತ್ತು ಮನ್ಸುರಾ ಎಂಬ ಚಿಕ್ಕ ಸಂಸ್ಥಾನಗಳು ಮಾತ್ರ ಎನ್ನುವುದಕ್ಕೆ ಆ ಕಾಲದಲ್ಲಿ ಭಾರತಕ್ಕೆ ಭೇಟಿಕೊಟ್ಟ ಅರಬ್‍ ಪ್ರವಾಸಿಗಳ ಬರಹಗಳೇ ಸಾಕ್ಷಿ. ಪ್ರತೀಹಾರರು ಪ್ರತೀ ಬಾರಿಯೂ ಮುಲ್ತಾನಿನ ಮೇಲೆ ದಾಳಿ ಮಾಡಿದಾಗ ಅಲ್ಲಿದ್ದ ಹಿಂದೂ ದೇವಾಲಯವೊಂದು ಅರಬ್ಬರನ್ನು ಕಾಪಾಡುತ್ತಿತ್ತು! ಆ ದೇವಾಲಯಕ್ಕೆ ಹಿಂದೂಗಳು ಪ್ರತೀ ವರ್ಷ ದೂರದೂರದ ಪ್ರದೇಶಗಳಿಂದ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದರು. ಅರಬ್ಬರು ಪ್ರತೀ ಬಾರಿ ಪ್ರತೀಹಾರರು ದಾಳಿಯೆಸಗಿದಾಗ ಈ ದೇವಾಲಯವನ್ನು ನಾಶ ಮಾಡುವ ಬೆದರಿಕೆ ಒಡ್ಡುತ್ತಿದ್ದರು. ಇದರಿಂದ ಪ್ರತೀಹಾರ ದೊರೆಗಳು ನಿರುಪಾಯರಾಗಿ ಹಿಂದಿರುಗಬೇಕಾಗುತ್ತಿತ್ತು. ಇಲ್ಲದಿದ್ದಲ್ಲಿ ಅರಬ್ಬರ ಕೈಯಲ್ಲಿದ್ದ ಪುಟ್ಟ ಮುಲ್ತಾನವೂ ಎಂದೋ ಭಾರತೀಯರ ಕೈಗೆ ಮರಳಿರುತ್ತಿತ್ತು. ಸಾಮಾನ್ಯ ಯುಗ 951ರಲ್ಲಿ ಇದನ್ನು ಅಲ್-ಇಸ್ರಾಖ್ರಿ ಎಂಬಾತ ನಮೂದಿಸಿದ್ದಾನೆ. ಹೀಗೆ ಮೂರು ಶತಮಾನಗಳ ಪರ್ಯಂತ ಸತತ ಹೋರಾಟ ನಡೆಸಿದರೂ ಅರಬ್ಬರಿಗೆ ದಕ್ಕಿದ್ದು ಮುಲ್ತಾನ್ ಹಾಗೂ ಮನ್ಸುರಾ ಮಾತ್ರ. ಅದೂ ಮೂರ್ತಿ ಭಂಜನೆಯನ್ನು ಬಿಟ್ಟು, ಮೂರ್ತಿಗಳನ್ನೇ ರಾಜಕೀಯ ತಂತ್ರವನ್ನಾಗಿ ಬಳಸಿಕೊಂಡ ಕಾರಣಕ್ಕಾಗಿ ಅಷ್ಟೇ. ಅಂದಿನ ಕಾಲಘಟ್ಟದಲ್ಲಿ ಸಂಖ್ಯೆಯಲ್ಲೂ, ಬರ್ಬರತೆ, ಆಕ್ರಮಣಶೀಲತೆಯಲ್ಲೂ ಜಗತ್ತಿನಲ್ಲೇ ಅಭೇದ್ಯವಾಗಿದ್ದ ಅರಬ್ಬರ ಬೃಹತ್ ಸೈನ್ಯವನ್ನು ಭಾರತದ ಚಿಕ್ಕಪುಟ್ಟ ಸಂಸ್ಥಾನಗಳ ಪುಟ್ಟ ಸೈನ್ಯಗಳು ಮೂರು ಶತಮಾನಗಳ ಪರ್ಯಂತ ತಡೆದು ನಿಲ್ಲಿಸಿದುದು ಸಣ್ಣ ಸಾಧನೆಯೇನಲ್ಲ. ಮಧ್ಯ ಏಷ್ಯಾದಲ್ಲಿ ಇಸ್ಲಾಮಿನ ಮತಾಂಧತೆಗೆ ವಿಗ್ರಹಾರಾಧಕರು ಸರ್ವನಾಶವಾಗಿ ಹೋದರೂ ಸಿಂಧ್ ಪ್ರಾಂತ್ಯದಲ್ಲಿ ಹಾಗಾಗಲಿಲ್ಲ. ದೇವಲ್ ಪ್ರಾಂತದ ದೇವಾಲಯಗಳನ್ನು ನಾಶ ಮಾಡಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿ, ಮೂರು ದಿನಗಳ ಕಾಲ ನಿರಂತರ ಹತ್ಯಾಕಾಂಡ ನಡೆಸಿ, ಹಲವು ಹಿಂದೂಗಳನ್ನು ಬಂಧಿಸಿ, ಭಾರೀ ಸಂಪತ್ತನ್ನು ಲೂಟಿ ಮಾಡಿದರೂ ಇಸ್ಲಾಮಿನ ಕಠಿಣ ನಿಯಮಗಳನ್ನು ಮಧ್ಯ ಏಷ್ಯಾದಲ್ಲಿ ಜಾರಿ ಮಾಡಿದಂತೆ ಇಲ್ಲಿ ಸಾಧ್ಯವಾಗಲಿಲ್ಲ. ಮಾಡಿದ ಕಠಿಣ ನಿಯಮಗಳನ್ನು ಕೆಲವೇ ದಿನಗಳಲ್ಲಿ ಸಡಿಲಿಸಬೇಕಾಯಿತು. ಹಿಂದೂಗಳಿಗೆ ದೇವಾಲಯ ಮತ್ತೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕಾಯಿತು. ಹಿಂದೆ ಅಲ್ಲಿದ್ದ ಸರಕಾರ ದೇವಾಲಯದ ಪೂಜಾ ಕೈಂಕರ್ಯ ಮಾಡುತ್ತಿದ್ದವರಿಗೆ ನೀಡುತ್ತಿದ್ದ ವರಮಾನವನ್ನು ನಿಲ್ಲಿಸಲೂ ಅವರಿಂದ ಸಾಧ್ಯವಾಗಲಿಲ್ಲ!


                ಕಾಶ್ಮೀರದ ಲಲಿತಾದಿತ್ಯ, ದಕ್ಷಿಣ ತಜಕಿಸ್ತಾನದ ನಾರಾಯಣ, ಸಮರಖಂಡ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ಗೋರಖ್ ಹಾಗೂ ಬುಖಾರ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ತುಷಾರಪತಿಯರ ಸಾಹಸದಿಂದ ಅರಬ್ಬರ ಅಬ್ಬರ ನಿರ್ಬಂಧಿಸಲ್ಪಟ್ಟಿತು. ಭಾರತದ ಭದ್ರ ಕೋಟೆ ಬಿರುಕು ಬಿಟ್ಟುದುದು ಸಬಕ್ತಜಿನನ ಮೋಸದ ಯುದ್ಧಕ್ಕೇನೆ. ಸಬಕ್ತಜಿನ್, ಶಾಹಿ ಜಯಪಾಲನನ್ನು ಕುತಂತ್ರದಿಂದ ಸೋಲಿಸಿದರೂ ಜಯಪಾಲ ಆತನನ್ನು ಭಾರತದ ಗಡಿಭಾಗಕ್ಕಷ್ಟೇ ಸೀಮಿತವಾಗಿರಿಸಿದ. ಮಹಾಲೂಟಿಕೋರ ಘಜನಿಯನ್ನಂತೂ ಆನಂದಪಾಲ ಸೋಲಿಸಿ ಹಿಮ್ಮೆಟ್ಟಿಸಿಬಿಟ್ಟ. ತನ್ನ ಕೊನೆಯ ಯುದ್ಧದಲ್ಲಿ ಆನಂದಪಾಲ ವಿಜಯದಂಚಿನಲ್ಲಿದ್ದಾಗ ಅವನು ಕುಳಿತಿದ್ದ ಆನೆಯನ್ನು ನುಸಿಗುಳಿಗೆಗಳಿಂದ ಘಜನಿಯ ಸೇನೆ ಹಿಮ್ಮೆಟ್ಟಿಸಿದಾಗ ತಮ್ಮ ರಾಜನೇ ಸೋತನೆಂದು ಸೇನೆ ಕಕ್ಕಾಬಿಕ್ಕಿಯಾಗಿ ಚದುರಿದ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಂಡ ಘಜನಿ ವಿಜಯಿಯಾದ. ಘಜನಿಯನ್ನು ದಿಟ್ಟವಾಗಿ ಎದುರಿಸಿದ ತ್ರಿಲೋಚನಪಾಲ ಹತ್ತು ದಿವಸಗಳ ಕಾಲ ರಣಭೀಕರವಾಗಿ ಹೋರಾಡಿ ಮೋಸಕ್ಕೊಳಗಾಗಿ ಹತನಾದ. ನೀಡರ ಭೀಮ ಖ್ಯಾತಿಯ ಭೀಮಪಾಲ ಘಜನಿಯನ್ನು ಅಟ್ಟಾಡಿಸಿಬಿಟ್ಟ(1015). ಭಾರತದ ಮೇಲಿನ ದಾಳಿಗಳಲ್ಲಿ ಮೊಹಮ್ಮದನು ಮೊದಲಬಾರಿಗೆ ಪೂರ್ಣಪ್ರಮಾಣದ ಸೋಲನ್ನು ಕಾಣಬೇಕಾಯಿತು ಎಂದು ಫಿರಿಷ್ತಾ ದಾಖಲಿಸಿದ್ದಾನೆ. ಯುದ್ಧದಲ್ಲಿ ಸೋತು ಜೀವ ಉಳಿಸಿಕೊಳ್ಳಲು ಓಡಿದ ಮೊಹಮ್ಮದ್ ನಿಂತದ್ದು ಘಜನಿಯಲ್ಲೇ! ಹೀಗೆ ಶಾಹಿಗಳು ಲೋಹಾರ(ಲೋಹ ಕೋಟ್)ದಿಂದ ಆಚೆಗೆ ಮುಂದುವರಿಯಲು ಘಜನಿಗೆ ಅವಕಾಶವನ್ನೇ ಕೊಡಲಿಲ್ಲ.  ಶಾಹಿ ವಂಶವೇ ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿ ನಿಂತು ಮಾತೃಭೂಮಿಯನ್ನು ರಕ್ಷಿಸಿತು. ಸತತ ಯುದ್ಧಗಳನ್ನು ಮಾಡಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಲು ಘಜನಿಗೆ ಇಪ್ಪತ್ತು ವರ್ಷಗಳೇ ಬೇಕಾದವು(1026). ಶಾಹಿ ವಂಶದ ಈ ಪರಿಯ ಶೌರ್ಯವನ್ನು, ಉದಾರತೆ, ಸತ್ಯ-ಧರ್ಮಗಳಿಂದ ನಡೆಸಿದ ಆಡಳಿತವನ್ನು ಆಲ್ಬರೂನಿ ಕೊಂಡಾಡಿದ್ದಾನೆ.


              1018ರಲ್ಲಿ ಘಜನಿಯು ಛಂದೇಲರ ವಿದ್ಯಾಧರನ ಮೇಲೆ ದಾಳಿ ಮಾಡಿದಾಗ ಆತ ಶಾಹಿಗಳನ್ನು ಇತರ ಹಿಂದೂರಾಜರನ್ನೂ ಒಟ್ಟುಗೂಡಿಸಿ ಬೃಹತ್ ಸೈನ್ಯವನ್ನು ಘಜನಿಯ ವಿರುದ್ಧ ಸಜ್ಜುಗೊಳಿಸಿದ. ಎತ್ತರದ ಸ್ಥಳವೊಂದರಲ್ಲಿ ನಿಂತು ಆ ಬೃಹತ್ ಸೈನ್ಯವನ್ನು ನೋಡಿ ತಾನು ಯಾಕಾದರೂ ಆಕ್ರಮಣ ಮಾಡಲು ಬಂದೆನೋ ಎಂದು ಪರಿತಪಿಸಿದ ಮೊಹಮ್ಮದನು ಬರಿಗೈಯಲ್ಲಿ ವಾಪಸ್ ಹೋಗಬೇಕಾಯಿತು ಎಂದು ನಿಜಾಮುದ್ದೀನ್ ಎಂಬ ಮುಸ್ಲಿಂ ಇತಿಹಾಸಕಾರ ಬರೆದಿದ್ದಾನೆ. 1022ರಲ್ಲಿ ಮತ್ತೆ ದಾಳಿಗೆ ಬಂದು ಅವಮಾನಿತನಾದ ಘಜನಿ ಛಂದೇಲರ ಗೊಡವೆಗೇ ಹೋಗಲಿಲ್ಲ. 1026ರಲ್ಲಿ ಘಜನಿಯು ಸೋಮನಾಥದ ಮೇಲೆ ದಾಳಿ ಮಾಡಿದಾಗ ಐವತ್ತು ಸಾವಿರದಷ್ಟು ಹಿಂದೂಗಳು ಪ್ರಾಣಾರ್ಪಣೆ ಮಾಡಿದರು. ಸೋಮನಾಥದ ಮೇಲೆ ಅವನ ದಾಳಿಯ ಸುದ್ದಿ ತಿಳಿದ ತಕ್ಷಣ ಅವನನ್ನು ಮಣ್ಣುಮುಕ್ಕಿಸಲು ಪರಮಾರ ಭೋಜ ಸಿದ್ಧನಾದ. ಪರಮಾರ ಭೋಜನ ವಿಚಾರ ತಿಳಿದಿದ್ದ ಘಜನಿ ತಾನು ಬಂದ ದಾರಿಯನ್ನು ಬಿಟ್ಟು ಮುಲ್ತಾನ್ & ಮನ್ಸುರಾ ಮಾರ್ಗವಾಗಿ ಹಿಂದಿರುಗಿದ. ಆದರೆ ಆ ದಾರಿಯಲ್ಲಿ ಜಾಟ್ ವೀರರು ಮಹಮ್ಮದನ ಸೈನ್ಯವನ್ನು ಸದೆ ಬಡಿದರು. ಮಾತ್ರವಲ್ಲ ಮನ್ಸುರಾದ ಮೇಲೆ ದಾಳಿ ಮಾಡಿ ಅಲ್ಲಿನ ಅಮೀರನನ್ನೇ ಮುಸ್ಲಿಂ ಮತ ತೊರೆಯುವಂತೆ ಒತ್ತಾಯಿಸಿದರು. ಹಿಂದೂರಾಜರುಗಳ ಸಹಕಾರವನ್ನು ಪಡೆದ ದೆಹಲಿಯ ಅರಸ, ಘಜನಿ ಮೊಹಮ್ಮದನ ಉತ್ತರಾಧಿಕಾರಿ ಮದೂದ್'ನು ನೇಮಿಸಿದ್ದ ಹನ್ಸಿ, ಥಾಣೇಸರ ಮುಂತಾದ ಪ್ರಾಂತ್ಯಗಳ ನವಾಬರನ್ನು ಯುದ್ಧದಲ್ಲಿ ಸೋಲಿಸಿದ(1043). ಬಳಿಕ ಹಿಂದೂಸೇನೆ ಕಾಂಗ್ರಾದ ನಾಗರಕೋಟೆಯನ್ನು ನಾಲ್ಕು ತಿಂಗಳ ಪರ್ಯಂತ ಮುತ್ತಿಗೆ ಹಾಕಿತು. ಸಹಾಯಕ್ಕೆ ಲಾಹೋರಿನಿಂದ ಸೇನೆಯೂ ಬರದೇ, ಆಹಾರವೂ ಇಲ್ಲದೆ ಮುಸ್ಲಿಮರು ಪರದಾಡಬೇಕಾಯಿತು ಎಂದು ಫಿರಿಷ್ತಾ ಬರೆದಿದ್ದಾನೆ. ಗೆದ್ದ ಪ್ರಾಂತ್ಯಗಳಲ್ಲಿನ ಧ್ವಂಸಗೊಂಡ ದೇವಾಲಯಗಳಲ್ಲಿ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.  ವಿಜಯ ಸಂಕೇತವಾಗಿ ಸಿಂಹಮುಖಗಳನ್ನು ಕೋಟೆಯ ಮೇಲೆ ಸ್ಥಾಪಿಸಲಾಯಿತು. ಪರಮಾರ ಭೋಜ ತಾನಿರುವವರೆಗೆ ಘಜನಿಯು ಭಾರತದೊಳಕ್ಕೆ ಬರದಂತೆ ತಡೆದ. ಆದರೆ ನಿಜವಾಗಿ ಭೋಜ ಹಾಗೂ ಕಲಚೂರಿ ಕರ್ಣನಿಗೆ ಮುಸ್ಲಿಂ ಆಕ್ರಮಣಕಾರಿಗಳು ಬಹುವಾಗಿ ಹೆದರುತ್ತಿದ್ದರು. ಇವರಿಬ್ಬರ ಅವಸಾನದ ಬಳಿಕವೇ ಮುಸ್ಲಿಮರು ತಮ್ಮ ದಾಳಿ ಮುಂದುವರೆಸಿದ್ದು. ಆದರೂ ಭಾರತೀಯರ ಪ್ರತಿರೋಧ ನಿಂತಿರಲಿಲ್ಲ. ಘಜನಿಯ ಸೋದರಳಿಯ ಸಾಲಾರ್ ಮಸೂದನನ್ನು ಬಹ್ರೈಚ್'ನ ರಾಜಾ ಸುಹೈಲ್ ದೇವ ಸೂರ್ಯಕುಂಡದ ಬಳಿ ವಧಿಸಿ ರಕ್ತತರ್ಪಣ ಕೊಟ್ಟ. ಷಹಜಾದ ಮೊಹಮ್ಮದನನ್ನು ಪರಮಾರ ಲಕ್ಷ್ಮದೇವನೂ, ಛಂದೇಲರೂ ಸೋಲಿಸಿ ಓಡಿಸಿದರು. ಕನೌಜಿನ ಗೋವಿಂದ ಚಂದ್ರನಂತೂ ಇಸ್ಲಾಮೀಸೇನೆಯನ್ನು ಮತ್ತೆ ಮತ್ತೆ ಪರಾಭವಗೊಳಿಸಿದ. ಅಜಯಮೇರು(ಅಜ್ಮೀರ್)ವಿನ ಅರುಣರಾಜ ಚೌಹಾನ(1133-1151)ನಿಂದ ಮುಸ್ಲಿಮರು ಅನುಭವಿಸಿದ ಸೋಲು ಬಲುದೊಡ್ಡದು. ಮುಸ್ಲಿಂ ಸೇನೆಯು ಸೋತು ಓಡಿದ ದಾರಿಗಳಲ್ಲಿ ಅನೇಕರ ಶವ ಬಿದ್ದಿತ್ತಂತೆ. ಅಜ್ಮೀರಿನ ವಸ್ತು ಸಂಗ್ರಹಾಲಯದಲ್ಲಿರುವ "ಚೌಹಾಣ ಪ್ರಶಸ್ತಿ" ಎಂಬ ಶಿಲಾಶಾಸನ "ಸೋತು ಸತ್ತ ಆಕ್ರಮಣಕಾರಿ ತುರುಷ್ಕರ ನೆತ್ತರಿನಿಂದ ಅಜ್ಮೀರದ ಭೂಮಿ ಹೇಗೆ ಕೆಂಪಾಗಿತ್ತೆಂದರೆ ಭೂತಾಯಿಯು ವಿಜಯೋತ್ಸವಕ್ಕಾಗಿ ಕೆಂಪುವಸ್ತ್ರ ಧರಿಸಿ ಅಲಂಕೃತಳಾಗಿದ್ದಾಳೆ" ಎಂದು ಈ ವಿಜಯವನ್ನು ಬಣ್ಣಿಸಿದೆ. ಅರುಣರಾಜನ ಉತ್ತರಾಧಿಕಾರಿ ವಿಗ್ರಹರಾಜ ಮ್ಲೇಚ್ಛರನ್ನು ಮತ್ತೆ ಮತ್ತೆ ಸೋಲಿಸಿ ಶತದ್ರು ನದಿಯ ದಕ್ಷಿಣ ಭಾಗವನ್ನು ಮುಸ್ಲಿಂ ಆಳ್ವಿಕೆಯಿಂದ ಮುಕ್ತಗೊಳಿಸಿ ಆರ್ಯಾವರ್ತದ ಹೆಸರಿಗೆ ಶೋಭೆ ತಂದ. ಆ ಬಳಿಕ ಆಕ್ರಮಣಕ್ಕೆ ಬಂದ ಮಹಮ್ಮದ್ ಘೋರಿಯನ್ನು ಗುಜರಾತಿನ ಚಾಲುಕ್ಯ ರಾಣಿ ನಾಯಕಿ ದೇವಿ ಒದ್ದೋಡಿಸಿದಳು. ಪೃಥ್ವೀರಾಜ ಚೌಹಾನನಂತೂ ಹಲವು ಬಾರಿ ಘೋರಿಯನ್ನು ಸೋಲಿಸಿದ. ಹಮ್ಮೀರ ಮಹಾಕಾವ್ಯ 7 ಬಾರಿ ಎಂದರೆ, ಪ್ರಬಂಧ ಚಿಂತಾಮಣಿ ಹಾಗೂ ಪೃಥ್ವೀರಾಜ ರಾಸೋ, ಪೃಥ್ವೀರಾಜನು 21 ಬಾರಿ ಘೋರಿಯನ್ನು ಕೆಡಹಿದ ಎಂದಿವೆ. ಕೊನೆಯ ಯುದ್ಧದಲ್ಲಿ(1192) ಘೋರಿ, ಪೃಥ್ವೀರಾಜನನ್ನು ಸೋಲಿಸಿದ್ದು ಮೋಸದಿಂದಷ್ಟೇ.



             ಹೀಗೆ ಈ 550 ವರ್ಷಗಳ ದೀರ್ಘ ಕಾಲದ ಪ್ರತಿರೋಧ ಕೇವಲ ತಮ್ಮ ಅಧಿಕಾರದ ಉಳಿವಿಗಾಗಿ ಮಾಡಿದ ಯುದ್ಧಗಳಲ್ಲ. ಅವು ಮತಾಂಧತೆಯನ್ನೇ ತುಂಬಿಕೊಂಡ ಶತ್ರುವು ನಮ್ಮ ಮಾತೃಭೂಮಿಯನ್ನು ಒಂದಿಂಚೂ ಆಕ್ರಮಿಸಲು ಬಿಡದೆ ನಮ್ಮ ಧರ್ಮ-ಸಂಸ್ಕೃತಿಗಳ ರಕ್ಷಣೆಗಾಗಿ ಹಿಂದೂಗಳು ದೀರ್ಘ ಕಾಲ ನಡೆಸಿದ ದೃಢ ಸಂಕಲ್ಪದ ಕೆಚ್ಚಿನ ಹೋರಾಟ. ಏಳುಬೀಳುಗಳ ನಡುವೆಯೂ ಹೊರಗಿನ ಶತ್ರುವಿಗೆ ಪರ್ವತಾಕಾರವಾಗಿ ನಿಂತು ದೇಶದೊಳಕ್ಕೆ ಅವನು ಪ್ರವೇಶಿಸದಂತೆ ನಡೆಸಿದ ಸ್ವಾಭಿಮಾನ ಭರಿತ ಹೋರಾಟ. ಕೇವಲ ಇಸ್ಲಾಮಿನ ವಿಜಯಗಾಥೆಗಳನ್ನಷ್ಟೇ ದಾಖಲಿಸಿದ ಇತಿಹಾಸಕಾರರು ಅವರಿಗೆ ತಿರುಗಿಸಿ ಹೊಡೆದ ಹಿಂದೂ ರಾಜರುಗಳ ಅಪ್ರತಿಮ ವೀರಗಾಥೆಯನ್ನು ದಾಖಲಿಸದೆ ಇತಿಹಾಸಕ್ಕೇ ಅನ್ಯಾಯ ಮಾಡಿದರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ