ಪುಟಗಳು

ಶನಿವಾರ, ಫೆಬ್ರವರಿ 20, 2021

ಭಾಗ್ಯನಗರದ ಜನನವಾದ ಬಗೆ…..

ಭಾಗ್ಯನಗರದ ಜನನವಾದ ಬಗೆ…..


               "ಗೋಲ್ಕೊಂಡಾ ಕೋಟೆಯ ಭೌತಿಕ ಪುರಾವೆಗಳನ್ನು ಮರುಪರಿಶೀಲಿಸಿದಾಗ ಕೋಟೆಯ ಅಂತರತಮ ಆವರಣದ ಗೋಡೆಗಳು ಹದಿಮೂರು ಅಥವಾ ಹದಿನಾಲ್ಕನೆಯ ಶತಮಾನದ ಆರಂಭಿಕ ಭಾಗಕ್ಕೆ ಚೆನ್ನಾಗಿ ಹೊಂದುತ್ತವೆ. ಈ ಗೋಡೆಗಳು ಕೋಟೆಗೆ ಮತ್ತೆ ಜೋಡಿಸಲ್ಪಟ್ಟ(ಶಾಸನದಲ್ಲಿ ಉಲ್ಲೇಖಿತವಾದ)ವುಗಳಿಂದ ಪ್ರತ್ಯೇಕತೆಯನ್ನು ತಮ್ಮ ವಿಶಿಷ್ಟತೆಯಿಂದಾಗಿ ಕಾಯ್ದುಕೊಂಡಿವೆ. ಇವು ಎರಡು ಪಕ್ಕದ ಆವರಣಗಳನ್ನು 'ಬಾಲ ಹಿಸಾರ್'ನ ಮೇಲ್ಭಾಗದೊಂದಿಗೂ, ಮೂರನೆಯದನ್ನು ಪರ್ವತದ ತಳದೊಂದಿಗೂ ರೂಪಿಸಿವೆ. ಗಾರೆಯಿಲ್ಲದೆ ಚೌಕ ಹಾಗೂ ಆಯತಾಕಾರವಾಗಿ ಕತ್ತರಿಸಲ್ಪಟ್ಟ ಬೃಹದಾಕಾರದ ಗ್ರಾನೈಟ್ ಶಿಲೆಗಳಿಂದ ಇವು ಮಾಡಲ್ಪಟ್ಟಿವೆ. ನೆಲ ಭಾಗವೂ ಅನಿಯಮಿತವಾಗಿ ಕತ್ತರಿಸಿದ ಆದರೆ ಸರಿಯಾಗಿ ಜೋಡಿಸಲ್ಪಟ್ಟ ಗ್ರಾನೈಟ್ ಶಿಲೆಗಳಿಂದ ಮಾಡಲ್ಪಟ್ಟಿವೆ. ಪರ್ವತದ ಅನಿಯಮಿತ ಆಕಾರದ ಕಲ್ಲುಗಳ ಜೊತೆ ಕೌಶಲ್ಯಪೂರ್ಣವಾಗಿ ಈ ಶಿಲೆಗಳನ್ನು ಜೋಡಿಸಿ ಗೋಡೆಗಳನ್ನು ಪರ್ವತದ ಮೇಲೆ ಹಾಗೂ ಸುತ್ತ ಕಟ್ಟಲಾಗಿದೆ. ಮುಂದಿನ ಯಾವುದೇ ನಿರ್ಮಾಣದಲ್ಲೂ ಈ ಗೋಡೆಗಳ ಮೇಲ್ಭಾಗವನ್ನು ಮಾರ್ಪಡಿಸಿಲ್ಲ. ಕೋಟೆಗಳ ಮೇಲೆ ಆಯತಾಕಾರದ ಬುರುಜುಗಳನ್ನು ಅಲ್ಲಲ್ಲಿ ಇಡಲಾಗಿದೆ. ಕೌಶಲ್ಯಪೂರ್ಣವಾಗಿ ಕತ್ತರಿಸಲ್ಪಟ್ಟ ಶಿಲೆಗಳಲ್ಲಿ ಚೌಕಾಕಾರದ ರಂಧ್ರಗಳನ್ನು ಕೊರೆದು ಅಲ್ಲಿ ಪರ್ವತದ ಕಲ್ಲುಗಳಿಂದ ಗೋಡೆಯನ್ನು ಪ್ರತ್ಯೇಕಿಸುವ ಸಲುವಾಗಿ ಮರ/ಲೋಹದ ತುಂಡುಗಳನ್ನು ತೂರಿಸಲಾಗಿದೆ.....ಹೀಗೆ ಒಟ್ಟಾರೆಯಾಗಿ ಈ ಎಲ್ಲಾ ಗುಣಲಕ್ಷಣಗಳು ಬಾಲ ಹಿಸಾರ್ ನ ಮೇಲ್ಭಾಗದ ಗೋಡೆಗಳನ್ನು ಕೋಟೆಯ ಉಳಿದ ರಚನೆಗಳಿಂದ ಪ್ರತ್ಯೇಕಿಸುತ್ತವೆ. ಇದರ ಹೊರ ಆವರಣದ ಗೋಡೆಯ ಕಾಲ ಹದಿನಾರನೆಯ ಶತಮಾನ(ಶಾಸನಾಧರಿತ)" ಇದು ಪುರಾತತ್ವ ಶಾಸ್ತ್ರಜ್ಞ ಮಣಿಕಾ ಸರ್ದಾರ್ ನಿರೂಪಿಸಿರುವ ವಿವರಗಳು. ಅಲ್ಲಿಗೆ ಗೋಲ್ಕೊಂಡಾ, ಸುಲ್ತಾನ್ ಖುಲಿಯಿಂದ ನಿರ್ಮಾಣಗೊಂಡಿದೆಯೆಂಬ ತಿರುಚುವ ಇತಿಹಾಸಕಾರರ ವಾದ ಸೋತು ಹೋಯಿತು. ಆತ ಹುಟ್ಟುವ ಮೊದಲೇ ಆ ಕೋಟೆಯಿತ್ತು. ಹಾಗಾದರೆ ಇದರ ನಿರ್ಮಾಣ ಮಾಡಿದ್ದು ಯಾರು? ಹದಿಮೂರನೆಯ ಶತಮಾನದಲ್ಲಿ ಇದು ಯಾರ ವಶದಲ್ಲಿತ್ತು? ಇದಕ್ಕೂ ಉತ್ತರ ಸಿಕ್ಕಿದೆ.


            ಹನ್ನೆರಡು - ಹದಿಮೂರನೇ ಶತಮಾನದಲ್ಲಿ ಆಂಧ್ರದಲ್ಲಿ ಪ್ರಬಲವಾಗಿದ್ದ ರಾಜವಂಶ ಕಾಕತೀಯರದ್ದು. ಗೋಲ್ಕೊಂಡಾ ಅವರ ವಶದಲ್ಲಿತ್ತು. ಅಲ್ಲಿನ ಕೋಟೆಯನ್ನು ನಿರ್ಮಿಸಿದವರು ಇವರೇ. ಗಣಪತಿ ದೇವ ಈ ಸಾಮ್ರಾಜ್ಯದ ಸ್ಥಾಪಕ.  ಬಾಲ್ಯದಲ್ಲಿಯೇ ದೇವಗಿರಿಯ ಯಾದವರಿಗೆ ಸೆರೆಸಿಕ್ಕಿ ಬಳಿಕ ಬಿಡಿಸಿಕೊಂಡು ಸ್ವತಂತ್ರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದ.ಅದು ಶತಮಾನಕ್ಕೂ ಹೆಚ್ಚು ಕಾಲ ಬೆಳೆದು ವೈಭವದ ದಿನಗಳನ್ನು ಕಂಡುದದರ ಹಿಂದೆ ಗಣಪತಿದೇವನ ಪರಿಶ್ರಮವಿದೆ. ಗೋಲ್ಕೊಂಡಾ ಕೋಟೆ ಬಹುಷಃ ಇವನಿಂದಲೇ ನಿರ್ಮಾಣಗೊಂಡಿರಬೇಕು. ಹೇಗಿದ್ದರೂ ಈ ಕೋಟೆ ಕಾಕತೀಯರ ಕಾಲದಲ್ಲೇ ಆಗಿತ್ತು ಎಂಬುದಕ್ಕೆ ಮೊಘಲ್ ಚರಿತ್ರೆಗಳಾದ ಮಾಸಿರ್-ಐ-ಆಲಮ್‌ಗಿರಿ ಮತ್ತು ಮುಂಟಖಾಬ್ ಅಲ್ ಲುಬಾಬ್'ಗಳಲ್ಲೇ ಉಲ್ಲೇಖಗಳಿವೆ. ಅಲ್ಲದೇ ಹಿಂದೂ ರಾಜರಿಂದ ಅದು ಮುಸ್ಲಿಂ ದೊರೆಗಳ ಕೈಗೆ ಸಿಕ್ಕಿದುದನ್ನೂ ಅವು ಉಲ್ಲೇಖಿಸಿವೆ. "ಹಿಂದೆ ಮಂಗಲ್ ಎಂದು ಕರೆಯಲ್ಪಡುತ್ತಿದ್ದು ದೇವರಾಯ ಎಂಬ ಹಿಂದೂ ಅರಸನಿಂದ ಆಳಲ್ಪಡುತ್ತಿದ್ದು, ಅವನಿಂದ ಬಹಮನಿಗಳು ಕಿತ್ತುಕೊಂಡರು. ಬಳಿಕ ಸುಲ್ತಾನ್ ಮಹಮ್ಮದ್ ಬಹಮನಿಯ ಗುಲಾಮನಾದ ಅಲಿ ನಖಿ ಕುತುಬ್ ಮುಲ್ಕ್'ನ ಸ್ವಾಧೀನಕ್ಕೆ ಬಂತು" ಎಂದು ಇವುಗಳಲ್ಲಿ ಉಲ್ಲೇಖಿಸಲಾಗಿದೆ.


              ಕುತುಬ್ ಶಾಹಿ ರಾಜವಂಶವನ್ನು ಸ್ಥಾಪಿಸಿದವ ಸುಲ್ತಾನ್ ಖುಲಿ ಕುತುಬ್ ಮುಲ್ಕ್ (ಸಾ.ಯು. 1470-1543). ಉಳಿದ ಮುಸ್ಲಿಮ ಆಕ್ರಮಣಕಾರರಂತೆ ಭಾರತದಲ್ಲಿನ ಅಪಾರ ಸಂಪತ್ತು ಹಾಗೂ ಅವಕಾಶಗಳ ಸುದ್ದಿ ಕೇಳಿ ಬಂದವನೀತ. ಬಂದದ್ದು ಇರಾನಿನ ಹಮದನ್'ನಿಂದ. ಭಾರತದ ಪಶ್ಚಿಮ ಕರಾವಳಿಯ ಚೌಲ್ ಎಂಬ ಬಂದರು ನಗರಕ್ಕೆ ಕಾಲಿಟ್ಟ ಈತ, ಒಂದು ಮುಷ್ಟಿ ಕಪ್ಪು ಮಣ್ಣನ್ನು ಕೈಯಲ್ಲಿ ಹಿಡಿದು ಭಾರತದಾದ್ಯಂತ ಶಿಯಾ ಮತವನ್ನು ಹಬ್ಬಿಸುವುದಾಗಿ ಪ್ರತಿಜ್ಞೆ ಮಾಡಿದ. ಬಹಮನಿ ರಾಜ ಶಿಹಾಬುದ್ದೀನ್ ಮಹಮೂದ್ ಕೈಕೆಳಗೆ ಚಾಕರಿಗೆ ಆರಂಭಿಸಿದ ಆತ ಶೀಘ್ರವಾಗಿ ಪ್ರಮುಖ ಹುದ್ದೆಗಳನ್ನು ಪಡೆಯುತ್ತಾ ತೆಲಿಂಗ(ಈಗಿನ ತೆಲಂಗಾಣದ ಮೂಲ) ದೇಶದ ರಾಜ್ಯಪಾಲನಾದ. 1518ರಲ್ಲಿ ಬಹಮನಿ ಸುಲ್ತಾನ ಮರಣ ಹೊಂದಿದ ಬಳಿಕ, ಸುಲ್ತಾನ್ ಖುಲಿ ಗೋಲ್ಕೊಂಡದಲ್ಲಿ ಸ್ವತಂತ್ರ ಆಡಳಿತಗಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡ. ಗೋಲ್ಕೊಂಡಾ ಕೋಟೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದ. ಕೆಲವು ಆವರಣಗಳನ್ನು ಸೇರಿಸಿದ. ಕೋಟೆಯ ಕೇಂದ್ರದಲ್ಲಿದ್ದ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ. ಇವತ್ತಿಗೂ ಹೈದರಾಬಾದಿನ ಹಳೆಯ ಮಸೀದಿ ಎಂದು ಕರೆಯಲ್ಪಡುವ ಜಾಮಿ ಮಸೀದೀ ಇದೇ!


           ಗಣಪುರದ ಕೋಟಗುಡಿಯ ದ್ವಾರದ ಪಡಿಯಚ್ಚಿನಂತಿರುವ ಹದಿಮೂರನೆಯ ಶತಮಾನದ ದ್ವಾರ, ಸ್ತಂಭಗಳು, ಬಳ್ಳಿ, ರತ್ನ-ವಜ್ರ, ಶಾಖೆಗಳ ಕೆತ್ತನೆಗಳು, ಬಂಡೆಯಲ್ಲಿ ಕೆತ್ತಲಾದ ಶಿಲ್ಪ ಎಲ್ಲವೂ ಅಲ್ಲಿ ದೇವಾಲಯವಿದ್ದುದನ್ನು, ಬಳಿಕ ನಾಶ ಮಾಡಿ ಮಸೀದಿಯಾಗಿಸಿದುದನ್ನು ಸಾರಿ ಹೇಳುತ್ತವೆ. ಬೆಟ್ಟದ ದೇವಾಲಯವನ್ನು ತಾರಾಮತಿ ಮಸೀದಿಯಾಗಿ ಪರಿವರ್ತಿಸಲಾಯಿತು. ಬಳಿಕ ಅಕ್ಕಣ್ಣ-ಮಾದಣ್ಣ ದೇವಸ್ಥಾನವನ್ನು ಔರಂಗಜೇಬನು ನಾಶಪಡಿಸಿದನು. ಆದಾಗ್ಯೂ, ಗುಹಾ ದೇವಾಲಯಗಳು ಇಂದಿಗೂ ಉಳಿದುಕೊಂಡಿವೆ. ಗೋಲ್ಕೊಂಡ ಕೋಟೆಯೊಳಗೆ ಇಂದಿಗೂ ಜಗದಂಬಾ ಗುಹಾ ದೇವಾಲಯವಿದೆ.




            ಯಾವ ಹಿಂದೂ ದೇವಾಲಯವನ್ನು ಸುಲ್ತಾನ್ ಖುಲಿ ಮಸೀದಿಯಾಗಿ ಪರಿವರ್ತಿಸಿದನೋ ಅಲ್ಲಿ ಆತ ನಮಾಜ್ ಮಾಡುತ್ತಿದ್ದಾಗ ಆತನ ಮಗ ಜಮ್ಶೆಡ್ ಖುಲಿ ಅವನನ್ನು ಇರಿದು ಕೊಂದ. ಬಳಿಕ ಸಿಂಹಾಸನವನ್ನೂ ಆಕ್ರಮಿಸಿಕೊಂಡ. ತನ್ನ ಪಟ್ಟಕ್ಕೆ ಕುತ್ತು ತರಬಲ್ಲನೆಂದು ಸಹೋದರ ಇಬ್ರಾಹಿಂ ಖುಲಿಯನ್ನು ಕೊಲ್ಲಿಸಲು ಯತ್ನಿಸಿದ. ಹೆದರಿದ ಇಬ್ರಾಹಿಮ್ ಖುಲಿ ಪ್ರಬಲ ಹಿಂದೂ ಸಾಮ್ರಾಜ್ಯ ವಿಜಯನಗರಕ್ಕೆ ಪಲಾಯನ ಮಾಡಿದ. ಕೃಷ್ಣದೇವರಾಯನ ಅಳಿಯ ರಾಮರಾಯ ಆತನಿಗೆ ಏಳು ವರ್ಷಗಳಷ್ಟು ದೀರ್ಘ ಕಾಲ ಆಶ್ರಯ ಕೊಟ್ಟ. ಮಾತ್ರವಲ್ಲ ಜಹಗೀರುಗಳನ್ನೂ ದಯಪಾಲಿಸಿದ. ಜಗಮಗಿಸುವ ಹಿಂದೂ ಸ್ವರ್ಣ ಸಾಮ್ರಾಜ್ಯವನ್ನು ಸ್ಥಾಪಿಸುವ ಉದ್ದೇಶ ಹೊತ್ತು ಎದ್ದಿದ್ದ ವಿಜಯನಗರ ತನ್ನ ಅರಸರ ಸೆಕ್ಯುಲರ್ ನೀತಿಯಿಂದ ತನ್ನ ಅವಸಾನದ ಬೀಜವನ್ನೂ ಒಡಲೊಳಗೆ ಹೊತ್ತುಕೊಂಡಿತ್ತು. ಬುಕ್ಕದೇವರಾಯನ ಕಾಲದಲ್ಲೇ ಅಲ್ಲೊಂದು ಮಸೀದಿ ನಿರ್ಮಾಣವಾಗಿತ್ತು. ಮುಸ್ಲಿಮರಿಗೆ ಹಿಂದೂ ರಾಜನನ್ನು ಗೌರವಿಸುವ ಶಂಕೆ ಬಂದಾಗ ಇದನ್ನು ನೋಡಿಯಾದರೂ ಗೌರವಿಸಲಿ ಎಂದು ಆಸ್ಥಾನದಲ್ಲಿ ಖುರಾನಿನ ಪ್ರತಿಯೊಂದನ್ನು ಇಟ್ಟುಕೊಂಡಿದ್ದರು. ಅಳಿಯ ರಾಮರಾಯನ ಕಾಲದಲ್ಲಂತೂ ಈ ಸೆಕ್ಯುಲರುತನ ಮೇರೆ ಮೀರಿತು. ಆಗ ಸೈನ್ಯದಲ್ಲಿ ಮುಸ್ಲಿಮರ ಜಮಾವಣೆಯೂ ಜಾಸ್ತಿಯಾಯಿತು. ರಾಜ್ಯದಲ್ಲಿ ಮಸೀದಿಗಳ ಸಂಖ್ಯೆಯೂ ಬೆಳೆಯಿತು. ಮುಸ್ಲಿಮರಿಗೆಂದೇ ಮಾರುಕಟ್ಟೆ ಜಾಗವೂ ದೊರಕಿತು. ತನ್ನ ಸಹೋದರ ಹಾಗೂ ಆಸ್ಥಾನವಾಸಿಗಳ ವಿರೋಧದ ನಡುವೆಯೂ ಅವರಿಗೆ ಪ್ರಾಣಿ(ಗೋವು?) ಹತ್ಯೆಗೆ ಅವಕಾಶವನ್ನೂ ರಾಮರಾಯ ಮಾಡಿಕೊಟ್ಟಿದ್ದ. ಯಾವ ಸಾಮ್ರಾಜ್ಯ ಮತಾಂಧತೆಯನ್ನು ಮಣ್ಣು ಮುಕ್ಕಿಸಲು ಮಣ್ಣಿನಿಂದ ಎದ್ದು ನಿಂತಿತ್ತೋ ಅಲ್ಲಿಯೇ ಮೈಮರೆವೂ ಆವರಿಸಿತ್ತು. ಇಬ್ರಾಹಿಮ್ ಖುಲಿಯ ವಿಚಾರದಲ್ಲಿ ಆದದ್ದೂ ಅದೇ. ಆತನಿಗೆ ಭಾಗೀರಥಿ ಎನ್ನುವ ರಾಜಪರಿವಾರದ ಹುಡುಗಿಯನ್ನು ಮದುವೆ ಮಾಡಿಕೊಡಲಾಯಿತು. ರಾಮರಾಯನಂತೂ ಆತನನ್ನು ಫರ್ಜಾಂಡ್' (ಮಗ) ಎಂದೇ ಸಂಬೋಧಿಸುತ್ತಿದ್ದ.


          ಜಮ್ಷೆಡ್ ಸತ್ತ ಬಳಿಕ ಗೋಲ್ಕೊಂಡಾವನ್ನು ಗೆಲ್ಲಲು ತನ್ನ ಫರ್ಜಾಂಡ್ ಇಬ್ರಾಹಿಂನಿಗೆ ರಾಮರಾಯ ಸಹಾಯವನ್ನು ಮಾಡಿದ. ಆ ಯುದ್ಧದಲ್ಲಿ, ರಾಮರಾಯರ ಆಶ್ರಯದಲ್ಲಿ ಇಬ್ರಾಹಿಂಗೆ ಹಿಂದೂಗಳ ಅಪಾರ ಬೆಂಬಲವೂ ದೊರಕಿತು ಎಂಬುದನ್ನು ಗಮನಿಸಬೇಕು. ಗೋಲ್ಕೊಂಡಕ್ಕೆ ಹೋಗುವ ದಾರಿಯಲ್ಲಿ ಕೊಯಿಲ್ಕೊಂಡ ಕೋಟೆಯಲ್ಲಿ, ಹಿಂದೂಗಳು ಅವನಿಗೆ ನಿಷ್ಠೆ ಮತ್ತು ಬೆಂಬಲವನ್ನು ಸೂಚಿಸುವ ಪ್ರತಿಜ್ಞೆ ಮಾಡಿದರು. ಕೊಯಿಲ್‌ಕೊಂಡ ಶಾಸನದಲ್ಲಿ, ಹಿಂದೂಗಳು "ನಾವು ಇಬ್ರಾಹಿಂ ಖುಲಿಯನ್ನು ಬೆಂಬಲಿಸುವ ಪ್ರತಿಜ್ಞೆಯನ್ನು ಮಾಡುತ್ತಿದ್ದೇವೆ. ನಮ್ಮಲ್ಲಿ ಯಾರಾದರೂ ಈ ವಾಗ್ದಾನವನ್ನು ಮುರಿದರೆ ವಾರಣಾಸಿಯಲ್ಲಿ ಹಸುಗಳು ಮತ್ತು ಬ್ರಾಹ್ಮಣರನ್ನು ಕೊಲೆ ಮಾಡಿದ ಸಮಾನವಾದ ಪಾಪಕ್ಕೆ ಗುರಿಯಾಗುತ್ತಾರೆ" ಎಂದು ಭರವಸೆ ನೀಡಿದರು. ಮಾತ್ರವಲ್ಲದೆ ಅದೇ ಇಬ್ರಾಹಿಂನನ್ನು ಮಲ್ಕಿಭಾ (ರಾಮ) ಎಂದು ಕರೆಯಲಾಯಿತು, (ಮಲಿಕ್) ಇಬ್ರಾಹಿಂನನ್ನು ಭಗವಾನ್ ರಾಮನೊಂದಿಗೆ ಸಮೀಕರಿಸಲಾಯಿತು. ರಾಜನೊಬ್ಬ ಮೂರ್ಖ ಹಾಗೂ ಸೆಕ್ಯುಲರ್ ಚಿಂತಕನಾದಾಗ ಯಾವೆಲ್ಲಾ ಅಪಸವ್ಯಗಳು ಆಗಬಹುದೋ ಅದೆಲ್ಲವೂ ಆಯಿತು!


            ಆದರೆ ಎಲ್ಲಾ ಮುಸ್ಲಿಮರ ಹುಟ್ಟುಗುಣದಂತೆಯೇ ಉಪಕಾರ ಸ್ಮರಣೆ ಇಬ್ರಾಹಿಂನಲ್ಲಿ ಉಳಿಯಲಿಲ್ಲ. ರಾಮರಾಯರು ಅಹ್ಮದ್ ನಗರದ ಮೇಲೆ ದಂಡೆತ್ತಿ ಹೋದಾಗ ಆ ರಾಜ್ಯವನ್ನು ಗೆದ್ದು ಆತನೆಲ್ಲಿ ಬಲಿಷ್ಠನಾಗುತ್ತಾನೋ ಎಂಬ ಹೊಟ್ಟೆ ಉರಿಯಿಂದ ಹಳೆಯ ದ್ವೇಷವನ್ನು ಮರೆತು ಅಹ್ಮದ್ ನಗರದ ಸುಲ್ತಾನ ನಿಜಾಂಷಾನಿಗೆ ಇಬ್ರಾಹಿಂ ಬೆಂಬಲ ನೀಡಿದ. ಇದರಿಂದ ಉರಿದೆದ್ದ ರಾಮರಾಯರು ಕಲ್ಯಾಣಿಕೋಟೆಯ ಮೇಲೆ ದಂಡೆತ್ತಿ ಹೋದ ಸಂದರ್ಭದಲ್ಲಿ ಗೋಲ್ಕೊಂಡಾ ರಾಜ್ಯವನ್ನು ಧೂಳೀಪಟ ಮಾಡಿ ಇಬ್ರಾಹಿಂನಿಗೆ ಪಾಠ ಕಲಿಸಿದರು. ಪಾನ್ ಗಲ್, ಗಣಪುರಗಳನ್ನು ರಾಮರಾಯರಿಗೆ ಅರ್ಪಿಸಿ ಇಬ್ರಾಹಿಂ ಸಂಧಿ ಮಾಡಿಕೊಳ್ಳಬೇಕಾಯಿತು. ಇಷ್ಟಾದ ಮೇಲೂ ಇಬ್ರಾಹಿಂನ ಜನ್ಮಜಾತ ಬುದ್ಧಿ ಬದಲಾಗಲಿಲ್ಲ. ರಾಮರಾಯನನ್ನು ಸದೆಬಡಿಯಲು ನಾವೆಲ್ಲಾ ಒಟ್ಟಾಗಬೇಕು ಎಂಬ ಸಂದೇಶ ತನ್ನ ಶತ್ರು ಬಿಜಾಪುರದ ಆದಿಲ್ ಷಾನಿಂದ ಬಂದದ್ದೇ ತಡ ಜೊಲ್ಲು ಸುರಿಸಿಕೊಂಡು ಸನ್ನದ್ಧನಾದ. ಹೊಸ ಸ್ನೇಹವನ್ನು ನೆಂಟಸ್ತನದಿಂದ ಬಲಪಡಿಸಿಕೊಳ್ಳಲು ತನ್ನ ಮಗಳನ್ನು ಆದಿಲ್ ಷಾನಿಗೂ ಅವನ ತಂಗಿಯನ್ನು ತನ್ನ ಮಗನಿಗೂ ತಂದುಕೊಳ್ಳಲು ಒಪ್ಪಿಕೊಂಡ. ಸಂಯುಕ್ತರಂಗ ವಂಚನೆಯಿಂದ ಯುದ್ಧಕ್ಕೆ ಆರಂಭಿಸಿತು. ರಘುನಾಥರಾಯ ಧರೆಗುರುಳಿ, ವೆಂಕಟಾದ್ರಿಯ ಕಣ್ಣು ಹೋದುದನ್ನು ಕಂಡ ರಾಯರು ಅಕ್ಷರಶಃ ಪ್ರಳಯ ರುದ್ರನಂತೆ ಮುಸ್ಲಿಂ ಸೈನ್ಯವನ್ನು ಚೆಂಡಾಡಿದರು. ಚದುರಿ ಹೋದ ಸೈನ್ಯವನ್ನು ಒಗ್ಗೂಡಿಸಿಕೊಂಡು, ಓಡಿ ಹೋಗಲು ಹವಣಿಸುತ್ತಿದ್ದ ಗೋಲ್ಕೊಂಡಾ,  ಬಿಜಾಪುರ ಸುಲ್ತಾನರನ್ನು ಹುರಿದುಂಬಿಸಿದ ನಿಜಾಂಷಾ ತಾಮ್ರದ ನಾಣ್ಯಗಳನ್ನು ಒತ್ತಾಗಿ ತುಂಬಿದ್ದ ಗುಂಡುಗಳನ್ನು ಫಿರಂಗಿಗಳಿಂದ ಸ್ಫೋಟಿಸಿ ವಿಜಯನಗರದ ಸೈನ್ಯ ದಿಕ್ಕಾಪಾಲಾಗುವಂತೆ ಮಾಡಿದ. ಅದೇ ಸಮಯದಲ್ಲಿ ರಾಯರು ನಂಬಿದ್ದ ಮುಸ್ಲಿಂ ಸರದಾರರು, ಸೈನಿಕರೆಲ್ಲಾ ನಿಷ್ಠೆ ಬದಲಾಯಿಸಿಬಿಟ್ಟರು. ಅಹ್ಮದ್ ನಗರದ ಮದ್ದಾನೆಯೊಂದು ಪಲ್ಲಕ್ಕಿಯಲ್ಲಿದ್ದ ರಾಮರಾಯರನ್ನು ಕೆಳಕ್ಕೆ ಬೀಳಿಸಿ ಸೊಂಡಿಲಿನಲ್ಲಿ ಎತ್ತಿಕೊಂಡಿತು. ಆ ವಯೋವೃದ್ಧ ವೀರನನ್ನು ಬಂಧಿಸಿ ನಿಜಾಂಷಾ ಬಳಿ ಕರೆದೊಯ್ದಾಗ ಆತ ರಾಯರ ತಲೆಕಡಿದು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಿದ. ರಾಜ ಸೋತನೆಂದು ಸೈನ್ಯ ಬೆದರಿ ಚೆಲ್ಲಾಪಿಲ್ಲಿಯಾಯಿತು. ಎರಡುಪಟ್ಟು ಹೆಚ್ಚು ಸೈನ್ಯಬಲವಿದ್ದರೂ ವಿಜಯನಗರದ ಸೈನ್ಯ ವಂಚಕರಿಂದಾಗಿ, ಅಲ್ಲಲ್ಲ ಸೆಕ್ಯುಲರ್ ಮತಿಭ್ರಾಂತತೆಯಿಂದಾಗಿ ಸೋತು ಹೋಯಿತು. ಕೃಷ್ಣೆ ಕೆಂಪಾದಳು. ಆ ಒಂದು ದಿವಸವೇ ಒಂದು ಲಕ್ಷ ಕಾಫಿರರನ್ನು ಕತ್ತರಿಸಿ ಕೆಡವಲಾಯಿತು ಎಂದು ಫಿರಿಸ್ತಾ ಬರೆದಿದ್ದಾನೆ. ಕಲ್ಲಿನಲ್ಲಿ ಕೆತ್ತಿದ ರಾಮರಾಯನ ತಲೆಯನ್ನು ಬಿಜಾಪುರದ ಕೋಟೆಯಲ್ಲಿ ಮಲಮೂತ್ರಗಳು ಹರಿಯುವ ಒಳಚರಂಡಿಗೆ ಕಿಂಡಿಯಾಗಿ ಇರಿಸಿದ ಆ ಮತಾಂಧರ ಕ್ರೌರ್ಯಕ್ಕೆ ವಿಜಯನಗರ ಬೆಚ್ಚಿಬಿತ್ತು. ಸತತ ಆರು ತಿಂಗಳು ನಗರವನ್ನು ಸೂರೆಗೈಯ್ಯಲಾಯಿತು. ಮಹಿಳೆ, ಹಸುಳೆ, ಶಿಲ್ಪಕಲೆ ಎಲ್ಲದರ ಮೇಲೂ ಅವರ ಅತ್ಯಾಚಾರ ವಿಜೃಂಭಿಸಿತು. ತುಂಗಾಭದ್ರೆಯ ಒಡಲು ರಕ್ತದಿಂದ ತುಂಬಿಹೋಯಿತು. ಸ್ವರ್ಣ ಹಂಪೆ ಹಾಳು ಹಂಪೆಯಾಯಿತು. ಕಲಿಯುಗದ ಹಸಿಯ ಹಿರಿಮಸಣವಾಯಿತು. "ತಾಳವಿಲ್ಲದೆಲೆ, ಬೇತಾಳನಂದದಿ ಕುಣಿವ ಕಾಳನರ್ತಕನ ಕಾಲ್ಕೆಳಗೆ ತೊತ್ತುಳಿಗೊಂಡು ಹಾಳಾಗಿ ಹುಡಿಗೂಡಿ ಹೋದ ಕನ್ನಡನಾಡಿಗಿದಿರಾಗಿ ಬಂದು ನಿಂದು | ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು, ಬೀಳುಗಳ ಬದಿಬದಿಗೆ ಬೀಳುಗಳ ಬಾಳುಗಳು, ಕಾಳರಕ್ಕಸನ ಕಡೆಕೂಳು ಬಾಳಕವಾದ ನಾಡ ನಡುಮನೆಯ ಕಂಡೆ" ಎಂದು ಹಂಪೆ ಹಾಳಾದ ಬಗೆಯನ್ನು ಕಂಡು ಕಣ್ಣೀರು ಸುರಿಸಿದ್ದಾರೆ ಬೇಂದ್ರೆ ಕವಿ.


             ಆರು ತಿಂಗಳ ಕಾಲ ಅವ್ಯಾಹತವಾಗಿ ಮತಾಂಧರು ವಿಜಯನಗರವನ್ನು ಲೂಟಿ ಮಾಡಿ ಸುಟ್ಟು ಹಾಕಿದರು. ಈ ಸಂಪತ್ತಿನ ಹಂಚಿಕೆಯಲ್ಲಿ ಅವರ ಮಧ್ಯೆಯೇ ಜಗಳ ಶುರುವಾಯಿತು. ಬಳಿಕ ಅವರಿಗೆ ತಮ್ಮ ಸರದಾರರ ಮೇಲೆಯೇ ಗುಮಾನಿ ಶುರುವಾಯಿತು. ಪತ್ತೆ ಹಚ್ಚಲು ಇಬ್ರಾಹಿಂ ಸ್ವತಃ ತನ್ನ ಭಾವ ಹಾಗೂ ಸಂಪತ್ತನ್ನು ಸೂರೆಗೈಯ್ಯಲು ತಾನು ನೇಮಿಸಿದ್ದ ಸರದಾರ ಮುಸ್ತಫಾ ಖಾನನ ಜೊತೆ ರಂಗಕ್ಕಿಳಿದ. ಮುಸ್ತಫಾ ಖಾನ್ ಗೊಲ್ಕೊಂಡಾದ ಸರಹದ್ದಿನಲ್ಲಿದ್ದ ಮುದ್ಗಲ್, ತೆಕ್ಕಲ್ಕೋಟ್ ಹಾಗೂ ರಾಯಚೂರಿನ ಕೋಟೆಗಳನ್ನು ಆದಿಲ್ ಷಾನಿಗೆ ಹಸ್ತಾಂತರಿಸಿದ ಸುದ್ದಿ ತಿಳಿದು ಅವನನ್ನು, ಅವನಲ್ಲಿದ್ದ ಸಂಪತ್ತನ್ನೆಲ್ಲಾ ಕಿತ್ತುಕೊಂಡು ಆ ಕೆಲಸದಿಂದ ಕಿತ್ತೆಸೆದ. ವಿಜಯನಗರದ ಲೂಟಿಯಿಂದ ಇಬ್ರಾಹಿಂಗೆ ಸಿಕ್ಕಿದ ಪಾಲೇ ಎಷ್ಟಿತ್ತೆಂದರೆ ಮೂವತ್ತು ವರ್ಷಗಳ ಬಳಿಕ ಅದರ ಒಂದು ಪಾಲನ್ನು ಬಳಸಿ ಹೈದರಾಬಾದ್ ನಗರವನ್ನು ನಿರ್ಮಿಸಲಾಯಿತು. ಹೌದು, ವಿಜಯನಗರವನ್ನು ಲೂಟಿ ಮಾಡುವ ಮೂಲಕ ಪಡೆದ ಹಣದಿಂದ ಇಬ್ರಾಹಿಂನ ಮರಣಾನಂತರ ಅವನ ಮಗ ಮುಹಮ್ಮದ್ ಖುಲಿ ಹೈದರಾಬಾದ್ ನಗರವನ್ನು ನಿರ್ಮಿಸಿದ. ಅಲ್ಲಿ ಹಾಗೂ ಗೋಲ್ಕೊಂಡಾ ಕೋಟೆಯಲ್ಲಿ ಈ ಸಂಪತ್ತನ್ನು ಇರಿಸಿ ಕಾವಲಿಗೆ ನಿಷ್ಠಾವಂತ ಮುಸ್ಲಿಮ್ ಹಾಗೂ ಯೂರೋಪಿಯನ್ ಸೈನ್ಯವನ್ನಿಡಲಾಯಿತು. ವಿಜಯನಗರದಿಂದ ಸೂರೆಗೈದ ಅಪಾರ ವಜ್ರಗಳನ್ನು ಸಮುದ್ರ ಮೂಲಕ ವಿದೇಶಕ್ಕೆ ಮಾರಾಟ ಮಾಡುವ ವ್ಯಾಪಾರವೂ ಶುರುವಾಯಿತು. ಮುಸ್ಲಿಮರಿಗೆ ಅಪಾರ ಪ್ರಮಾಣದ ಭೂಮಿಯನ್ನು ಹಂಚಲಾಯಿತು. ಯಥಾಪ್ರಕಾರ ಹಿಂದೂಗಳ ಪಾಲಿಗೆ ತೆರಿಗೆ ಕಟ್ಟುವುದು ಮಾತ್ರ ಉಳಿಯಿತು!


           ಇಬ್ರಾಹಿಂ ಖುಲಿಯ ಮರಣಾನಂತರ ಗೋಲ್ಕೊಂಡಾದ ಪಟ್ಟವನ್ನೇರಿದವನು ಅವನ ಮಗ ಮಹಮ್ಮದ್ ಖುಲಿ. ಅವನ ಹೆಂಡತಿಯ ಹೆಸರು ಭಾಗ್ಮತಿ. ಅವಳ ಹೆಸರಿನಿಂದಲೇ ಈಗಿನ ಹೈದರಾಬಾದ್ ನಗರ ಭಾಗ್ಯನಗರವೆಂದು ಕಟ್ಟಲ್ಪಟ್ಟಿತು. ಮೊನ್ನೆ ಮೊನ್ನೆ ಯೋಗಿಜೀಯವರು ಹೈದರಾಬಾದ್ ಅನ್ನು ಭಾಗ್ಯನಗರವೆಂದು ಮರು ನಾಮಕರಣ ಮಾಡುತ್ತೇವೆ ಎಂದಾಗ ಸೆಕ್ಯುಲರ್ ಬ್ರಿಗೇಡಿನಿಂದ ಹೈದರಾಬಾದಿನ ನಿಜ ಇತಿಹಾಸವನ್ನು ಬಚ್ಚಿಡುವ ಕಾರ್ಯ ಆರಂಭವಾಯಿತು. "ಹೈದರಾಬಾದ್ ಭಾಗ್ಯನಗರವಾಗಿರಲೇ ಇಲ್ಲ. ಭಾಗ್ಮತಿ ಇರಲೇ ಇಲ್ಲ" ಎಂಬ ಹೇಳಿಕೆಗಳೂ, ಲೇಖನಗಳೂ, ವಿಡೀಯೋಗಳು, ಸಾಮಾಜಿಕ ಜಾಲತಾಣಗಳಲ್ಲಿ ಬರವಣಿಗೆಗಳೂ ಪುಂಖಾನುಪುಂಖವಾಗಿ ಬಂದವು. ಕೆಲವರು ಇನ್ನೂ ಮುಂದಕ್ಕೆ ಹೋಗಿ ಯೋಗಿ ಜೀಯವರು ಉತ್ತರಪ್ರದೇಶದಲ್ಲಿ ಕಾನೂನು ಮಾಡಿ ಯಾವುದನ್ನು ನಿಷೇಧಿಸಿರುವರೋ ಅದೇ ಲವ್ ಜಿಹಾದ್ ಈ ಪ್ರಕರಣದಲ್ಲಿ ನಡೆದಿತ್ತು; ಹಾಗಾಗಿ ಭಾಗ್ಯನಗರವೆಂದು ನಾಮಕರಣ ಮಾಡುವುದು ಹಾಸ್ಯಾಸ್ಪದ ಎಂದು ಯೋಗಿಜೀಯವರನ್ನು ಹಳಿಯಲು ಯತ್ನಿಸಿದರು. ಮಹಮ್ಮದ್ ಖುಲಿ ಹಾಗೂ ಭಾಗ್ಮತಿಯ ವಿವಾಹದ ಮೆರವಣಿಗೆಯ ಸಮಕಾಲೀನ ಕುತುಬ್ ಶಾಹಿ ಚಿತ್ರಕಲೆಯೊಂದು ಅಶ್ಮೋಲಿಯನ್ ಮ್ಯೂಸಿಯಂನಲ್ಲಿದೆ. ಇದನ್ನು ಮಾಡಿದವ ಅವರ ಮೊಮ್ಮಗನೇ. ಆರತಿಗಳನ್ನು ಹೊತ್ತ ಮಹಿಳೆಯರೊಂದಿಗೆ ಮದುಮಕ್ಕಳು ಇರುವ ಹಿಂದೂ ಶೈಲಿಯ ವಿವಾಹವನ್ನು ಈ ಚಿತ್ರದಲ್ಲಿ ನೋಡಬಹುದು. ಮುಸ್ಲಿಮನೊಬ್ಬ ಹಿಂದೂ ಶೈಲಿಯ ವಿವಾಹವಾದುದಕ್ಕೆ ಕಾರಣವೇನು?



           ಭಾಗ್ಯನಗರ ಹಾಗೂ ಚಾರ್ ಮಿನಾರ್ ಅನ್ನು ನಿರ್ಮಿಸಿದವ ಇದೇ ಮಹಮ್ಮದ್ ಖುಲಿ. ಆತನ ತಾಯಿ ಹಿಂದೂ. ಆಕೆ ಮಗನನ್ನು ಹಿಂದೂ ಸಂಪ್ರದಾಯದಂತೆಯೇ ಬೆಳೆಸಿದಳು. "ಕುಲಿಯತ್" ಎಂದು ಕರೆಯಲ್ಪಡುವ ಅವನ ಉರ್ದು ಕವಿತೆಗಳಲ್ಲಿ ಸ್ವತಃ ಆತನೇ ಇದನ್ನು ಬರೆದಿದ್ದಾನೆ. ಅದರಲ್ಲಿ ಆತ "ನಾನು ನನ್ನ ಹಿಂದೂ ತಾಯಿಯ ಕೃಪೆಯಿಂದ ಅವಳ ಮಡಿಲಲ್ಲಿ ಬೆಳೆದೆ. ಈಗ ನಾನು ನನ್ನ ಮೂಲ ಧರ್ಮವನ್ನು, ನಂಬಿಕೆಯನ್ನು ಬಿಟ್ಟು ಹೊಸ ಮತವನ್ನು ಸ್ವೀಕರಿಸಿದೆ" ಎಂದಿದ್ದಾನೆ. ಹೀಗೆ ಹಿಂದೂ ಧರ್ಮವನ್ನು ತೊರೆದ ಆತ ತನ್ನ ಪೂರ್ವಜರ ಷಿಯಾ ಸಂಪ್ರದಾಯವನ್ನು ಅಳವಡಿಸಿಕೊಂಡ. ಆದರೆ ಅದಕ್ಕೂ ಮುಂಚೆಯೇ ಆತನಿಗೆ ಭಾಗ್ಮತಿಯೊಂದಿಗೆ ಪ್ರೀತಿಯೂ ಶುರುವಾಗಿತ್ತು. 1589ರಲ್ಲೇ ಅಂದರೆ ಅವನು ಹಿಂದೂ ಆಗಿರುವಾಗಲೇ ಅವಳೊಡನೆ ಹಿಂದೂ ಪದ್ದತಿಯಂತೆ ವಿವಾಹವೂ ಆಗಿತ್ತು. ಹಾಗೆಯೇ ಮದುವೆಯಾದ ಬಳಿಕವೂ ಆಕೆ ಮತಾಂತರವಾದುದಕ್ಕೆ ಯಾವುದೇ ಆಧಾರಗಳಿಲ್ಲ. ಅವಳಿಗೆ ಗೋರಿ ಯಾಕೆ ಇಲ್ಲ ಎನ್ನುವುದೇ ಇದನ್ನು ವಿವರಿಸುತ್ತದೆ. ಆದ್ದರಿಂದ ಇದು ಲವ್ ಜಿಹಾದ್ ಆಗಿತ್ತು ಎನ್ನುವುದು ಸತ್ಯದೂರ ವಿಚಾರ.



           ಹೈದರಾಬಾದ್‌ನ ಸಲಾರ್ ಜಂಗ್ ಮ್ಯೂಸಿಯಂನಲ್ಲಿ ಭಾಗಮತಿಯ ಹಳೆಯ ಚಿತ್ರವಿದೆ. ಅವಳ ಪ್ರಭಾವ ಪ್ರಚಂಡದ್ದದ್ದಾಗಿರಬೇಕು. ಅವಳೊಂದಿಗೆ 1,000 ಸೈನಿಕರು ಇದ್ದರು. ಖುಲಿ ಅವಳನ್ನು "ಹೈದರ್ ಮಹಲ್" (ಧೈರ್ಯಶಾಲಿ ಪ್ರಿಯೆ) ಎಂದು ವರ್ಣಿಸಿದ್ದಾನೆ. ಹೈದರಾಬಾದ್ ಮತ್ತು ಭಾಗ್ ನಗರ ಈ ಎರಡೂ ಹೆಸರೂ ಅವಳದ್ದೇ. ಅವಳು ಕಿರೀಟ ಧಾರಣೆ ಮಾಡುತ್ತಿದ್ದಳು. ಅವಳ ಸೌಂದರ್ಯ, ಪ್ರೀತಿ, ಸ್ವಭಾವ ಹಾಗೂ ಧೈರ್ಯವನ್ನು ವರ್ಣಿಸುತ್ತಾ ಅವಳೇಕೆ ಕಿರೀಟ ಧರಿಸಲು ಅರ್ಹಳು ಎಂದು ತನ್ನ ಕುಲಿಯತ್ ಕವಿತೆಯಲ್ಲಿ ವಿವರಿಸಿದ್ದಾನೆ ಮಹಮ್ಮದ್ ಖುಲಿ. ಕೆಲವರು ಭಾಗ್ ನಗರ ಎಂದರೆ ಉದ್ಯಾನಗಳ ನಗರವೆಂದು ಹೆಸರನ್ನು ತಿರುಚಲು ಯತ್ನಿಸಿದರೂ ಫ್ರೆಂಚ್ ಯಾತ್ರಿಕರ ಬರಹಗಳು ಇವನ್ನು ಅಲ್ಲಗಳೆಯುತ್ತವೆ. ತನ್ನ ಹೆಂಡತಿಯ ಇಚ್ಛೆಯಂತೆ ಅವಳ ಪ್ರೀತಿಗಾಗಿ ರಾಜನು ಅವಳ ಹೆಸರನ್ನು ಈ ನಗರಕ್ಕೆ ಇರಿಸಿದ್ದಾನೆಂದು ಆ ಯಾತ್ರಿಕರು ಬರೆದಿದ್ದಾರೆ. ಮಾತ್ರವಲ್ಲ ಭಾಗ್ಯನಗರದ ನಿರ್ಮಾಣದ ಹೊತ್ತಲ್ಲಿ ಅಲ್ಲಿ ಉದ್ಯಾನಗಳೇ ಇರಲಿಲ್ಲ. ಅಲ್ಲದೆ ಇಬ್ರಾಹಿಂನ ಯೋಜನೆಗಳ ವೈಫಲ್ಯದಿಂದಾಗಿ ಆ ಭಾಗಕ್ಕೆ ನೀರಾವರಿ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ. ಇನ್ನೂ ಗಿಡಗಳು ಬೆಳೆಯುವುದೆಂತು? ಉದ್ಯಾನಗಳನ್ನು ನಿರ್ಮಿಸುವುದೆಂತು? ಹದಿನೇಳನೇ ಶತಮಾನದಿಂದೀಚೆಗೆ ಬಶೀರ್ ಬಾಘ್ ಹಾಗೂ ಹುಸೈನ್ ನಗರಗಳಲ್ಲಿ ಉದ್ಯಾನಗಳು ನಿರ್ಮಿತವಾದವಷ್ಟೇ. ಭಾಗ್ಯನಗರಕ್ಕೆ ಭಾಗ್ಯಮತಿಯ ಹೆಸರಿಡಲಾಗಿದೆ; ಉದ್ಯಾನಗಳಿಂದ ಆ ಹೆಸರು ಬಂದದ್ದಲ್ಲ ಎಂಬ ಅಂಶವು ನಾಣ್ಯಗಳ ಮೇಲೆ ಹೈದರಾಬಾದ್‌ನ ಕಾಲಸೂಚಕ ಹೆಸರು "ಫರ್ಖುಂಡಾ ಬುನ್ಯಾಡ್" ಎಂದಿರುವುದರಿಂದಲೇ ಸಾಬೀತಾಗಿದೆ. ಪರ್ಷಿಯನ್ ಭಾಷೆಯಲ್ಲಿ ಫರ್ಖುಂಡಾ ಎಂದರೆ ಅದೃಷ್ಟ (ಸಂಸ್ಕೃತದ ಭಾಗ್ಯ) ಎಂಬರ್ಥವೇ ಹೊರತು "ಉದ್ಯಾನಗಳು" (ಪರ್ಷಿಯನ್ನಿನ ಬಾಗ್) ಎಂದಲ್ಲ. ಅಲ್ಲದೆ ತೆಲುಗಿನಲ್ಲಿ ಭಾಗ್ ಹಾಗೂ ಭಾಗ್ಯ ಎರಡೂ ಸಮನಾರ್ಥಕ ಪದಗಳು.


          ಭಾಗಮತಿಯ ಅಸ್ತಿತ್ವಕ್ಕೆ ಸಮಕಾಲೀನ ಮೊಘಲ್ ಪುರಾವೆಗಳಿವೆ. ಅವಳ ಜೀವಿತಾವಧಿಯಲ್ಲಿ, ಅಬುಲ್ ಫಜಲ್'ನ ಸಹೋದರ 1591 ರಲ್ಲಿ ಹೈದರಾಬಾದಿಗೆ ಬಂದಿದ್ದ. ಅವನು ನೀಡಿರುವ ಸಾಕ್ಷ್ಯವು ಭಾಗಮತಿಯ ಅಸ್ತಿತ್ವವನ್ನು ಸಾಬೀತು ಮಾಡುವ ಮೂಲಕ ಆಕೆಯ ಐತಿಹಾಸಿಕತೆಯನ್ನು ನಿರಾಕರಿಸುವವರಿಗೆ ಕಪಾಳಮೋಕ್ಷ ಮಾಡುತ್ತಿದೆ. ಅವನು ಆಕೆಯನ್ನು ಘಾಟಿ ಹೆಂಗಸು, ವೇಶ್ಯೆ, ರಾಜನ ಹಳೆಯ ಪ್ರೇಯಸಿ ಎಂದು ಜರೆದು ಅವಳ ಮಾತು ಕೇಳಿ ಅಲ್ಲಿನ ಅರಸ, ಸರದಾರರು ನಮಗೆ ತೊಂದರೆ ಕೊಡುವವರೇ ಆಗಿದ್ದಾರೆ ಎಂದು ಬರೆದಿದ್ದಾನೆ. ಇನ್ನೊಬ್ಬ ಸಮಕಾಲೀನ ಮುಸ್ಲಿಂ ಚರಿತ್ರಕಾರ ನಿಜಾಮುದ್ದೀನ್ 1594 ರಲ್ಲಿ ಭಾಗಮತಿಯ ಬಗ್ಗೆ ಅವಳ ಜೀವಿತಾವಧಿಯಲ್ಲಿಯೇ ಬರೆದಿದ್ದಾನೆ. ಹೈದರಾಬಾದ್ / ಭಾಗ್ಯನಗರಕ್ಕೆ  ಅವಳ ಹೆಸರನ್ನು ಇಡಲಾಗಿದೆ ಎಂದು ಅವನು ಸಾಕ್ಷ್ಯ ನೀಡುತ್ತಾನೆ. ಆತನೂ ಆಕೆಯನ್ನು ಸುಲ್ತಾನನ ಹಿಂದೂ ವೇಶ್ಯೆ, ಅವಳ ಜೊತೆಗೆ ಸಾವಿರ ಕುದುರೆ ಸವಾರರನ್ನು ರಾಜ ಇಟ್ಟಿದ್ದಾನೆ ಎಂದು ಹೀನಾಯವಾಗಿ ಬರೆದಿದ್ದಾನೆ. ಇನ್ನೊಬ್ಬ ಸಮಕಾಲೀನ ಮುಸ್ಲಿಂ ಇತಿಹಾಸಕಾರ ಫೆರಿಷ್ತಾ, ಹೈದರಾಬಾದ್ / ಭಾಗ್ಯನಗರಕ್ಕೆ ಭಾಗ್ಮತಿಯ ಹೆಸರಿಡಲಾಗಿದೆ ಎಂದೇ ಬರೆದಿದ್ದಾನೆ. ಈ ಎಲ್ಲಾ ಮುಸ್ಲಿಂ ಇತಿಹಾಸಕಾರರು ಅವಳ ಬಗೆಗೆ ಅವಮಾನಕರ ಭಾಷೆ ಬಳಸಿದುದಕ್ಕೆ ಕಾರಣವೇನಿರಬಹುದು? ಆಕೆ ಮತಾಂತರವಾಗಿರದೇ ಇದ್ದುದು ಹಾಗೂ ನಗರಕ್ಕೆ ಆಕೆಯ(ಹಿಂದೂ ರಾಣಿಯ) ಹೆಸರಿನ್ನಿರಿಸಿರುವುದನ್ನು ಸಹಿಸಲು ಆ ಮತಾಂಧರಿಗೆ ಸಾಧ್ಯವಾಗಿಲ್ಲ ಅನ್ನಿಸುತ್ತದೆ. 19ನೇ ಶತಮಾನದಲ್ಲಿಯೂ ಈ ಹೆಸರನ್ನೇ ಬಳಸಲಾಗುತ್ತಿತ್ತು. ಬ್ರಿಟಿಷ್ ಇಐಸಿ ಕಾರ್ಟೋಗ್ರಾಫರ್ ಆರನ್ ಅರೋಸ್ಮಿತ್ ಅವರು 1816ರಲ್ಲಿ ತಾನು ಮಾಡಿದ ನಕ್ಷೆಯಲ್ಲಿ ಭಾಗ್ನಗರ್ ಎಂದೇ ನಮೂದಿಸಿದ್ದಾರೆ.


ಈ ಎಲ್ಲಾ ಸಾಕ್ಷ್ಯಗಳು ಹೈದರಾಬಾದಿಗೆ ಭಾಗಮತಿಯ ಹೆಸರಿಡಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತವೆ. ಆದರೂ ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ದಾಳಿ ಮಾಡಲಾಗಿದೆ. ಸೆಕ್ಯುಲರ್ ಬುದ್ಧಿಯ ಪುರಾತತ್ವ ಇಲಾಖೆ ಭಾಗ್ಯಲಕ್ಷ್ಮಿ ದೇವಸ್ಥಾನವನ್ನು "ಅನಧಿಕೃತ ನಿರ್ಮಾಣ" ಎಂದು ಕರೆದು ಅದನ್ನು ಧ್ವಂಸ ಮಾಡಲು ಮುಂದಾಗುತ್ತದೆ.


          ಪುರಾತತ್ವ ಇಲಾಖೆ ದೇವಾಲಯವನ್ನು "ಅನಧಿಕೃತ ನಿರ್ಮಾಣ" ಎಂದು ಕರೆದರೆ, ಸರ್ಕಾರದ ದತ್ತಿ ಇಲಾಖೆಯು ಚಾರ್ಮಿನಾರ್‌ನ ಭಾಗ್ಯಲಕ್ಷ್ಮಿ ದೇವಾಲಯವನ್ನು 'ನೋಂದಾಯಿತ ದೇವಾಲಯಗಳಲ್ಲಿ' ಒಂದೆಂದು ಪಟ್ಟಿಮಾಡಿದೆ! ರಾಜ್ಯ ಸರ್ಕಾರವು ದೇವಾಲಯದ ಆದಾಯವನ್ನು ತನ್ನ ಸೆಕ್ಯುಲರ್ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಹಿಂಜರಿದಿಲ್ಲ! 2012ರಲ್ಲಿ ದೇವಾಲಯದ ಸಂಘಟಕರು ದೀಪಾವಳಿಗಾಗಿ ತಾತ್ಕಾಲಿಕ ನಿರ್ಮಾಣವನ್ನು ಮಾಡಲು ಬಯಸಿದಾಗ, ಪೊಲೀಸರು ಅವರನ್ನು ಬಲವಂತವಾಗಿ ತಡೆದರು. ಒಂದೆಡೆ ದೇವಾಲಯದ ಆದಾಯವನ್ನು ಕಸಿದುಕೊಳ್ಳುವುದು ಇನ್ನೊಂದೆಡೆ ದೇವಾಲಯವನ್ನು "ಅನಧಿಕೃತ" ಎಂದು ಕರೆದು ತಾತ್ಕಾಲಿಕ ನಿರ್ಮಾಣಕ್ಕೂ ಅನುಮತಿಸುವುದಿಲ್ಲ ಎನ್ನುವ ಈ ಇಬ್ಬಗೆಯ ನೀತಿ ವಿಚಿತ್ರವಲ್ಲವೆ? ದೇವಾಲಯವು ಪಾರಂಪರಿಕ ತಾಣವಾದ ಚಾರ್ಮಿನಾರ್‌ಗೆ ಹಾನಿಯನ್ನುಂಟುಮಾಡುತ್ತಿದೆ ಮತ್ತು ಅದನ್ನು ತೆಗೆದುಹಾಕಬೇಕು ಎನ್ನುವ ಅವರು ಚಾರ್ಮಿನಾರ್ ಸಂಕೀರ್ಣದ ಒಳಗೆ ಮತ್ತು ಚಾರ್ಮಿನಾರ್ ಜಾಗವನ್ನು ಅತಿಕ್ರಮಿಸಿ ಇತ್ತೀಚೆಗೆ ನಿರ್ಮಿಸಲಾದ ಸೂಫಿ ಚಿಲ್ಲಾ ಬಗ್ಗೆ ಮೌನ ವಹಿಸುತ್ತಾರೆ! ಭಾಗ್ಯಲಕ್ಷ್ಮಿ ದೇವಸ್ಥಾನದ ಅರ್ಚಕರೂ ಸಹಾ ನಿಜಾಮನ ಕಾಲದಲ್ಲಿ ಚಾರ್ಮಿನಾರ್ ಪಕ್ಕದಲ್ಲಿ ದೇವಿಯನ್ನು ಹೊಂದಿರುವ ಶಾಶ್ವತ ದೇವಾಲಯವಿತ್ತು ಎಂದು ಹೇಳಿಕೊಂಡಿಲ್ಲ. ಬದಲಿಗೆ ಅವರು ಹೇಳಿದ್ದು ಅಲ್ಲಿ ತಲೆತಲಾಂತರದಿಂದ ಪವಿತ್ರ ಶಿಲೆಯಿದೆ ಮತ್ತು ದೀಪಾವಳಿಯ ಸಮಯದಲ್ಲಿ ಪೆಂಡಾಲ್ ಹಾಕಿ ಪೂಜಿಸಲಾಗುತ್ತಿತ್ತು ಎಂದು. ಇದರ ಬಗ್ಗೆ ಆಕ್ಷೇಪವೆತ್ತುವವರು ಹಲವು ಸಾವಿರ ದೇವಾಲಯಗಳನ್ನು ಮತಾಂಧರು ಭಗ್ನಗೊಳಿಸುದುದರ ಬಗ್ಗೆ ಯಾಕೆ ಮೌನವಹಿಸುತ್ತಾರೆ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ