ಪುಟಗಳು

ಶನಿವಾರ, ಫೆಬ್ರವರಿ 20, 2021

ಸಮಾನ ನಾಗರಿಕ ಸಂಹಿತೆಯ ಅನುಷ್ಠಾನದಲ್ಲಡಗಿದೆ ರಾಷ್ಟ್ರಹಿತ

 ಸಮಾನ ನಾಗರಿಕ ಸಂಹಿತೆಯ ಅನುಷ್ಠಾನದಲ್ಲಡಗಿದೆ ರಾಷ್ಟ್ರಹಿತ


 


           "ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯವೇ ಸರಿ. ಇಂತಹಾ ಪ್ರಕರಣಗಳಲ್ಲಿ ಆ ಮಹಿಳೆ ವಿಚ್ಛೇದನದ ಮೊರೆ ಹೋಗಬಹುದು." ಎಂದು ಕಲ್ಬುರ್ಗಿಯ ವಿಭಾಗೀಯ ಉಚ್ಛ ನ್ಯಾಯಪೀಠ ಮಹತ್ವದ ತೀರ್ಪೊಂದನ್ನು ಕಳೆದ ಶುಕ್ರವಾರ ನೀಡಿದೆ. ಸತತ ಯುದ್ಧಗಳನ್ನು ಮಾಡುತ್ತಿದ್ದುದರಿಂದ ಸತ್ತ ಸೈನಿಕರ ವಿಧವೆ ಪತ್ನಿಯರನ್ನು ಬದುಕಿನುದ್ದಕ್ಕೂ ರಕ್ಷಣೆ ಮಾಡುವರಾರು ಎಂಬ ಪ್ರಶ್ನೆಗೆ ಉತ್ತರವಾಗಿ ಅಂತಹಾ ಮಹಿಳೆಯರ ರಕ್ಷಣೆಯ ಸಲುವಾಗಿ ಪ್ರವಾದಿ ಮೊಹಮ್ಮದ್ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಪ್ರೋತ್ಸಾಹಿಸಿದರು. 1500 ವರ್ಷಗಳ ಹಿಂದೆ ಚಲಾವಣೆಗೆ ಬಂದ ಇಂತಹಾ ವಿಲಕ್ಷಣ ಪದ್ದತಿಯನ್ನು ಸಮುದಾಯವೊಂದು ಷರೀಯತ್ ನೆರಳಿನಲ್ಲಿ ಇಂದಿಗೂ ದುರ್ಬಳಕೆ ಮಾಡಿಕೊಳ್ಳುವುದು ಎಷ್ಟು ಸೂಕ್ತ? ಈ ರೀತಿಯ ಪದ್ದತಿಯನ್ನು ಇವತ್ತಿನ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ನೆಲೆಗಟ್ಟಿನಡಿಯಲ್ಲಿ ಮರುವಿಮರ್ಶೆ ಮಾಡುವ ಅಗತ್ಯವಿದೆ ಎಂದು ಪೀಠ ಕಟುವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿತು. ಪೀಠದ ತೀರ್ಪು ಸ್ವಾಗತಾರ್ಹವೇ. ಆದರೆ ನಾವು ಮೂಲ ವಿಷಯಕ್ಕೆ ಬರೋಣ. ಇದೇನು, ವಿಚ್ಛೇದನವಾಗದೇ ಎರಡನೆ ಮದುವೆ? ಹಿಂದೂಗಳಿಗೋ ಅಥವಾ ಇನ್ನಿತರ ಮತೀಯರಿಗೆ ಇಲ್ಲದ ರಿಯಾಯಿತಿ ಮಸ್ಲಿಂ ಸಮುದಾಯಕ್ಕೆ ಮಾತ್ರ ಯಾಕಿದೆ? ಪ್ರಜಾಪ್ರಭುತ್ವ ಜೊತೆಗೆ ಜಾತ್ಯಾತೀತ ಎಂದೆಲ್ಲಾ ಹಣೆಪಟ್ಟಿ ಕಟ್ಟಿಕೊಂಡ ದೇಶದಲ್ಲಿ ಯಾಕೆ ಒಂದು ಕೋಮಿಗೆ ಒಂದು ಕಾನೂನು, ಇನ್ನೊಂದಕ್ಕೆ ಅವರದೇ ಮತೀಯ ಕಾನೂನು; ಬಹುಸಂಖ್ಯಾತರಿಗೊಂದು ಕಾನೂನು, ಅಲ್ಪಸಂಖ್ಯಾತರಿಗೊಂದು ಕಾನೂನು; ಜಾತಿಗೊಂದು ಕಾನೂನು? ಇದಕ್ಕಿಂತ ದೊಡ್ಡ ಕ್ರೌರ್ಯ ಇನ್ನೇನಿದೆ? ವಿಶ್ವದ ಅತೀ ದೊಡ್ದ ಪ್ರಜಾಪ್ರಭುತ್ವ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಯಾಕಿಲ್ಲ?


             ವಿವಿಧ ಜಾತಿ, ಮತ, ಆಚರಣೆಗಳಿರುವ ಭಾರತದಲ್ಲಿ ಆಯಾ ಮತದ ವಿವಿಧ ಆಚರಣೆಗಳಿಗೆ ಅನುಗುಣವಾಗಿ ಕಾನೂನುಗಳಿವೆ. ವಿವಿಧ ಮತಗಳಿಗೆ ಆಯಾ ಮತದ ವೈಯುಕ್ತಿಕ ಕಾನೂನುಗಳಿವೆ. ಅಂದರೆ ಕೌಟುಂಬಿಕ, ವಿವಾಹ, ವಿಚ್ಛೇದನ, ದತ್ತು ಸ್ವೀಕಾರ, ಆಸ್ತಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಆಯಾ ವೈಯುಕ್ತಿಕ ಕಾನೂನುಗಳಿಗೆ ಅನುಗುಣವಾಗಿ ತೀರ್ಪುಗಳೂ ಬರುತ್ತವೆ. ಸಮಾನ ನಾಗರಿಕ ಸಂಹಿತೆ ಇದೆಲ್ಲವನ್ನೂ ತೆಗೆದು ಹಾಕಿ ಜಾತಿ, ಮತ ಭೇದವಿಲ್ಲದೆ ಒಂದೇ ಕಾನೂನಿನಡಿ ಎಲ್ಲರೂ ಬರುವಂತೆ ಮಾಡುತ್ತದೆ. ಸಮಾನ ನಾಗರಿಕ ಸಂಹಿತೆ ಪ್ರಜಾಪ್ರಭುತ್ವ ರಾಷ್ಟ್ರವೊಂದರ ನೈಜ ಜಾತ್ಯಾತೀತ ಲಕ್ಷಣವೂ ಹೌದು. ಇದರಿಂದ ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರ ನ್ಯಾಯ ಸಿಕ್ಕಿದಂತಾಗುವುದಿಲ್ಲ; ಇಲ್ಲಿನ ಬಹುಸಂಖ್ಯಾತರಿಗೂ ನ್ಯಾಯ ಸಿಗುತ್ತದೆ.  ಇದು ಸಮಾನತೆಯನ್ನು ಪ್ರತಿಪಾದಿಸುತ್ತದೆ; ಮಹಿಳೆಯರ ಹಕ್ಕುಗಳಿಗೂ ಪೂರಕವಾಗಿದೆ. ಮತದ ಹೆಸರಲ್ಲಿ ನಡೆಯುವ ಅನ್ಯಾಯಕ್ಕೂ ಇದು ಅಂತ್ಯ ಹಾಡುತ್ತದೆ. ಮತ ಬ್ಯಾಂಕ್ ರಾಜಕಾರಣವನ್ನೂ ನಿಲ್ಲಿಸುತ್ತದೆ. ಅಲ್ಲದೇ ನ್ಯಾಯಾಂಗದ ಹೊರೆಯನ್ನು ಕಡಿಮೆಗೊಳಿಸುವುದಕ್ಕೂ, ಮಹತ್ವದ ಸಮಯದ ಉಳಿತಾಯಕ್ಕೂ ಇದು ಪ್ರಯೋಜನಕಾರಿ.


             ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯ ಬೇಡಿಕೆ ಇಂದು ನಿನ್ನೆಯದಲ್ಲ. ಬ್ರಿಟಿಷರ ಕಾಲದಲ್ಲೇ ಅದು ಹುಟ್ಟಿತ್ತು. 1840ರಲ್ಲೇ ಭಾರತದಲ್ಲಿ ಏಕರೂಪದ ಕಾನೂನು ಬೇಕು ಎಂಬ ಬಗ್ಗೆ ದಿ ಲೆಕ್ಸ್‌ ಲೊಸಿ ವರದಿ ಸಲ್ಲಿಕೆಯಾಗಿತ್ತು. ದೇಶ ಸ್ವತಂತ್ರವಾದ ಬಳಿಕ ಸಂವಿಧಾನ ರಚನೆ ಸಂದರ್ಭ ಇದರ ಬಗ್ಗೆ ಚರ್ಚೆಯಾಗಿತ್ತು. ಆದರೆ ಸೆಕ್ಯುಲರ್ ತಲೆಗಳೇ ಹೆಚ್ಚಿದ್ದ ಕಾರಣ ಬ್ರಿಟಿಷ್ ಪಳಿಯುಳಿಕೆ ಕಾನೂನುಗಳನ್ನು ಮುಂದುವರೆಸಿ, "ಭಾರತದ ಭೌಗೋಳಿಕ ಪ್ರದೇಶಾದ್ಯಂತ ಪೌರರ ಹಿತವನ್ನು ಕಾಪಾಡುವುದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಅಳವಡಿಸುವುದು ಸರ್ಕಾರದ ಕರ್ತವ್ಯ" ಎಂದು ಸಂವಿಧಾನದ ಅನುಚ್ಛೇದ 44ರಲ್ಲಿ, ರಾಜ್ಯನೀತಿಯ ನಿರ್ದೇಶಕ ತತ್ತ್ವಗಳಲ್ಲಿ ಇದನ್ನು ಸೇರಿಸಿಲಾಯಿತು. ಅಷ್ಟೇ ಅಲ್ಲ, ಹಿಂದೂ ವೈಯಕ್ತಿಕ ಕಾನೂನಿನಲ್ಲಿ ಮೂಲಭೂತ ಬದಲಾವಣೆಗಳನ್ನು ತರುವ ಪ್ರಯತ್ನಕ್ಕೂ ಆ ಸಂದರ್ಭದಲ್ಲಿ ಪ್ರಯತ್ನಿಸಲಾಯಿತು. ಈ ಕ್ರಮದಿಂದ, ಕೆಲವೇ ಮಂದಿಯ 'ಪ್ರಗತಿಪರ ವಿಚಾರಗಳನ್ನು' ಇಡೀ ಹಿಂದೂ ಸಮುದಾಯದ ಮೇಲೆ ಹೇರಿದಂತಾಗುತ್ತದೆ ಎಂದು ಸಂವಿಧಾನರಚನಾ ಸಭೆಯ ಅಧ್ಯಕ್ಷರಾಗಿದ್ದ ಬಾಬೂ ರಾಜೇಂದ್ರ ಪ್ರಸಾದ್ 1948ರಲ್ಲಿ ಎಚ್ಚರಿಕೆ ನೀಡಿದ್ದರು. ಈ ಪ್ರಯತ್ನವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ, ಎಂ. ಎ. ಅಯ್ಯಂಗಾರ್, ಕೈಲಾಸನಾಥ ಕಾಟ್ಜು ಹಾಗೂ ಮದನಮೋಹನ ಮಾಳವೀಯರೂ ವಿರೋಧಿಸಿದ್ದರು. 1949ರ ಡಿಸೆಂಬರ್ ತಿಂಗಳಿನಲ್ಲಿ ಹಿಂದು ಸಂಹಿತೆ ವಿಧೇಯಕ (ಹಿಂದು ಕೋಡ್ ಬಿಲ್) ಕುರಿತು ಚರ್ಚೆ ನಡೆದಾಗ 28 ಮಂದಿ ಸದಸ್ಯರ ಪೈಕಿ 23 ಮಂದಿ ವಿಧೇಯಕವನ್ನು ವಿರೋಧಿಸಿದರು. ವಿಧೇಯಕವನ್ನು ಸಂಸತ್ತಿಗೆ ವಾಪಸು ಕಳಿಸುವುದಾಗಿ ಇಲ್ಲವೇ ಅದರ ವಿರುದ್ಧ 'ವಿಟೋ' ಅಧಿಕಾರ ಚಲಾಯಿಸುವುದಾಗಿ ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಅವರು 1951ರ ಸೆಪ್ಟಂಬರ್ 15ರಂದು ನೇರ ಬೆದರಿಕೆ ಹಾಕಿದರು. ಅಂದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಿಂದೂಗಳ ನಂಬಿಕೆ, ಆಚರಣೆಗಳನ್ನು ಪ್ರಗತಿಪರತೆ, ಜಾತ್ಯಾತೀತತೆಯ ಸೋಗಿನಲ್ಲಿ ಹಿಂದೂ ಬಿಲ್ ಕೋಡ್ ಮೂಲಕ ನಿಷ್ಕ್ರಿಯಗೊಳಿಸಲು ಸಂಚು ಹಾಕಲಾಗಿತ್ತು! ಆದರೆ ಇದೇ ಚರ್ಚೆ ಉಳಿದ ಮತೀಯರ ವೈಯುಕ್ತಿಕ ಕಾನೂನುಗಳ ವಿಷಯದಲ್ಲಿ ನಡೆಯಲಿಲ್ಲ. ಅವುಗಳಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಕೈ ಹಾಕಲೇ ಇಲ್ಲ. ಕಾರಣ ಅದರಿಂದ ನೆಹರೂರ ಮತಬ್ಯಾಂಕಿಗೆ ನಷ್ಟವಾಗುತ್ತಿತ್ತು.


              1985ರಲ್ಲಿ ಶಾ ಬಾನೋ ಪ್ರಕರಣದ ಸಂದರ್ಭ, ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ನಿರ್ದೇಶನ ನೀಡಿತ್ತು. ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದ ಮೊದಲ ಪ್ರಕರಣ ಇದು. 5 ಮಕ್ಕಳ ತಾಯಿಯಾಗಿದ್ದ ಶಾ ಬಾನೋಗೆ ಆಕೆಯ ಪತಿ ತ್ರಿವಳಿ ತಲಾಖ್ ಹೇಳಿ 1978ರಲ್ಲಿ ವಿಚ್ಛೇದನ ನೀಡಿದ್ದ. ಆಕೆ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆವ ಸಲುವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಭಾರತೀಯ ದಂಡ ಸಂಹಿತೆ ಸೆಕ್ಷನ್ 125 ಪ್ರಕಾರ ತಲಾಖ್ ನೀಡಿದ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಆಕೆಗಿದೆ ಎಂದು ಜೀವನಾಂಶ ನೀಡುವಂತೆ ನ್ಯಾಯಪೀಠ ಆದೇಶಿಸಿತ್ತು. ಆದರೆ ಮುಸಲ್ಮಾನರ ಒತ್ತಡದಿಂದ ಜೊತೆಗೆ ತನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಸಲುವಾಗಿ ಮಧ್ಯಪ್ರವೇಶಿಸಿದ ರಾಜೀವ್‌ ಗಾಂಧಿ ಇದು ಮುಸ್ಲಿಂ ವೈಯಕ್ತಿಕ ಕಾನೂನುಗಳಿಗೆ ವಿರುದ್ಧ ಎಂದು ಹೇಳಿ, ಇದಕ್ಕೆ ವಿರುದ್ಧವಾದ ಮುಸ್ಲಿಂ ಮಹಿಳೆಯರ (ರಕ್ಷಣೆ ಮತ್ತು ಹಕ್ಕುಗಳು, ವಿಚ್ಛೇದನ ಕುರಿತ ಹಕ್ಕು) ಕಾಯ್ದೆ-1986ನ್ನು ಜಾರಿಗೆ ತಂದರು. ಸಂವಿಧಾನದ ಆಶಯದ ವಿರುದ್ಧವಾಗಿ ನಡೆಸಿದ ಈ ಉಪಕ್ರಮದಲ್ಲಿ ಜಾತ್ಯಾತೀತ ತತ್ವಗಳು ಎಲ್ಲಿ ಅಡಗಿದ್ದವು? ಭಾರತದಲ್ಲಿ ಮುಸ್ಲಿಮರಿಗೆ ವೈಯಕ್ತಿಕ ಕಾನೂನು ಆಗಿ ಷರೀಯತ್ ಮತ್ತು ಹದಿತ್ ಗಳ ಕಾನೂನು ಪಾಲನೆಗೆ ಮುಸ್ಲಿಂ ವೈಯಕ್ತಿಕ ಕಾನೂನು(ಷರೀಯತ್) ಅನ್ವಯ ಕಾಯ್ದೆ-1937 ಅವಕಾಶ ಮಾಡಿಕೊಟ್ಟಿದೆ. ಸ್ವಾತಂತ್ರ್ಯಾನಂತರವೂ, ದೇಶ ಒಡೆದು ಮುಸ್ಲಿಮರಿಗೆ ಪ್ರತ್ಯೇಕ ಭಾಗ ಕೊಟ್ಟ ಬಳಿಕವೂ ಈ ಬ್ರಿಟಿಷ್ ಪಳಿಯುಳಿಕೆಯನ್ನೇ ಮುಂದುವರೆಸಿದ್ದು ಮಾತ್ರ ವಿಪರ್ಯಾಸ. ಯಾವುದಾದರೂ ಬಿಕ್ಕಟ್ಟಿಗೆ ಕುರಾನ್ ಚೌಕಟ್ಟಿನಲ್ಲಿ ಪರಿಹಾರ ಸಿಗದಿದ್ದಲ್ಲಿ ಷರೀಯತನ್ನು ವ್ಯಾಖ್ಯಾನ ಮಾಡುವ ಅವಕಾಶ ಮುಸ್ಲಿಂ ಮತದ ಗುರುಗಳಿಗಿದೆ. ಆದರೆ, ಮುಸ್ಲಿಂ ಮಹಿಳೆಯ ವಿಷಯಕ್ಕೆ ಬಂದಾಗ, ಲಿಂಗ ಮತ್ತು ಮತಾಚರಣೆಯ ವಿಷಯದಲ್ಲಿ ಸಮಾನತೆ ಇಲ್ಲ, ತಾರತಮ್ಯ ನೀತಿ ವಿರುದ್ಧ ರಕ್ಷಣೆಯೂ ಸಿಗುವುದಿಲ್ಲ. ಬಹುಪತ್ನಿತ್ವ ಪದ್ಧತಿಯು ಇಸ್ಲಾಂನ ಅವಿಭಾಜ್ಯ ಅಂಗವೂ ಅಲ್ಲ. ಆದರೆ ಮತಬ್ಯಾಂಕಿಗಾಗಿ ಈ ವೈಯುಕ್ತಿಕ ಕಾನೂನನ್ನು ಮುಂದುವರೆಸಿದ್ದು ಕಾಂಗ್ರೆಸ್ಸಿನ ಕುಟಿಲ ನೀತಿ. ಢೋಂಗಿ ಜಾತ್ಯಾತೀತತೆ ಮತ್ತು ಮತಬ್ಯಾಂಕ್ ರಾಜಕಾರಣ ಯಾವ ಕನಿಷ್ಠ ಮಟ್ಟಕ್ಕೆ ಇಳಿದಿದೆಯೆಂದರೆ ವಕ್ಫ್ ಮಂಡಳಿಗೆ ನ್ಯಾಯಾಂಗ(ಷರಿಯಾ ಕೋರ್ಟ್) ಸ್ಥಾನಮಾನ ನೀಡುವ ಕುರಿತು ತೆಲಂಗಾಣ ಸರಕಾರ ಯೋಚಿಸುತ್ತಿದೆ.


             ಭಾರತದ ಜನಸಂಖ್ಯೆ ನಾಗಾಲೋಟದಿಂದ ಏರುತ್ತಲೇ ಇದೆ. ಇದರಿಂದ ನಿರುದ್ಯೋಗವೂ ಹೆಚ್ಚುತ್ತಿದೆ. ಇದು ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹೀಗೆ ಜನಸಂಖ್ಯೆ ಹೆಚ್ಚಲು ಕಾರಣವೇನು? ಹಿಂದೂಗಳು ಸೇರಿದಂತೆ ಕೆಲವು ಮತೀಯರು ಸ್ವನಿಯಂತ್ರಣ ಹೇರಿಕೊಂಡಿರುವಾಗ ಮುಸ್ಲಿಮರಲ್ಲಿ ಮಾತ್ರ(ಕೆಲವು ಪ್ರಜ್ಞಾವಂತರನ್ನು ಹೊರತುಪಡಿಸಿ) ಅಂತಹಾ ಯಾವುದೇ ಉಪಕ್ರಮ ಯಾಕಿಲ್ಲ? ಇದರ ಜೊತೆಗೆ ಬಹುಪತ್ನಿತ್ವವೂ ಸೇರಿ ಜನಸಂಖ್ಯೆಯ ಏರಿಕೆಗೆ ಕಾರಣವಾಗಿರುವುದು ಢೋಂಗಿ ಸೆಕ್ಯುಲರ್ ಅಲ್ಲದ ಕಣ್ಣಿಗೆ ರಾಚುವ ಸತ್ಯ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲಕ್ಕೆ ಹೆಚ್ಚಿನ ಮಹತ್ವವಿರುವುದರಿಂದ ಜೊತೆಗೆ ವೈಯುಕ್ತಿಕ ಮತೀಯ ಕಾನೂನಿನ ಬಲವೂ, ಮತೀಯ ಮುಖಂಡರ ಪ್ರೇರೇಪಣೆಯೂ ಸೇರಿ ತಮ್ಮ ಸಂಖ್ಯಾ ಬಲವನ್ನು ಹೆಚ್ಚಿಸಿಕೊಳ್ಳುವ ಈ ಕಾರ್ಯಕ್ಕೆ ಸಮಾನ ಕಾನೂನು ಅಲ್ಲದೆ ಮತ್ತಿನ್ನಾವುದರಿಂದ ತಡೆ ನೀಡಬಹುದು? ಇಲ್ಲಿ ಕೇವಲ ಜನಸಂಖ್ಯಾ ಹೆಚ್ಚಳದಿಂದ ಮಾತ್ರ ದೇಶಕ್ಕೆ ತೊಂದರೆಯಾಗಿರುವುದಲ್ಲ. ಆ ರೀತಿಯ ಜನಸಂಖ್ಯಾ ಹೆಚ್ಚಳ ದೇಶದ ಕೆಲವು ಜಿಲ್ಲೆಗಳ ಜನಸಂಖ್ಯಾ ಚಿತ್ರಣವನ್ನು ಬದಲಿಸಿ ಅಲ್ಲಿನ  ಸಾಮಾಜಿಕ ಸಮತೋಲನವನ್ನೇ ಹದಗೆಡಿಸಿದೆ. ಕೇರಳ, ಬಂಗಾಳ, ಅಸ್ಸಾಂ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣದ ಹಲವು ಜಿಲ್ಲೆಗಳು ಈ ಪಟ್ಟಿಯಲ್ಲಿವೆ. ಅಂತಹಾ ಜಿಲ್ಲೆಗಳಲ್ಲಿ ಅಕ್ರಮ ಗೋ ಸಾಗಾಟ & ಹತ್ಯೆ, ಮಾದಕದ್ರವ್ಯ ಜಾಲದಂತಹಾ ಅಕ್ರಮ ಚಟುವಟಿಕೆಗಳು ಮೇರೆ ಮೀರಿವೆ. ಹತ್ಯೆ, ಹೊಡೆದಾಟ, ದಂಗೆ ಕೂಡಾ! ಇಂತಹಾ ಜಿಲ್ಲೆಗಳಲ್ಲಿ ಸಾತ್ವಿಕನಾದ ಪ್ರಜೆಗೆ ನೆಮ್ಮದಿಯ ಜೀವನ ನಡೆಸಲು ಯಾವ ಕಾನೂನು, ಯಾವ ಸರಕಾರ ಸಹಾಯ ಮಾಡುತ್ತದೆ?


                ಕಾನೂನಿನ ಮುಂದೆ ಎಲ್ಲ ನಾಗರಿಕರೂ ಸಮಾನರು ಎನ್ನುವ ವಾಕ್ಯಗಳೆಲ್ಲಾ ಪುಂಖಾನುಪುಂಖವಾಗಿ ಸಿಗುತ್ತವೆ. ಅಲ್ಪಸಂಖ್ಯಾತ, ಬಹುಸಂಖ್ಯಾತ ಹಾಗೂ ಮೀಸಲಾತಿಯ ಕಾನೂನಿನ ಮುಂದೆಯೂ ಎಲ್ಲರೂ ಸಮಾನರೆ? ಯಾವುದಾದರೂ ದೊಡ್ಡ ಸಂಶೋಧನೆಯಾದಾಗ ಅಥವಾ ಸಂಶೋಧನೆಗೆ ಪ್ರಶಸ್ತಿ ಸಿಕ್ಕಿದಾಗ ನೋಡಿ ಭಾರತೀಯರೇ ಇಲ್ಲ ಎನ್ನುವ ಮಾತು ಹೇರಳವಾಗಿ ಕಾಣಸಿಗುತ್ತದೆ. ಕನಿಷ್ಠ ಅಂಕ ಪಡೆದು ಉತ್ತೀರ್ಣನಾಗಿ ಮೀಸಲಾತಿಯ ಮೂಲಕ ಮಹತ್ವದ ಹುದ್ದೆ ಪಡೆದಾತನಿಂದ ಸಾಧನೆ ಹೇಗೆ ಸಾಧ್ಯ?  ಗರಿಷ್ಠ ಅಂಕ ಪಡೆದರೂ ಸಣ್ಣಪುಟ್ಟ ಕೆಲಸ ಸಿಗಲೂ ಪರದಾಡುವ ಪರಿಸ್ಥಿತಿಯಿರುವಾಗ ಭಾರತದಿಂದ ಯಾರೂ ಇಲ್ಲ ಎನ್ನುವ ಮಾತಿಗೆ ಮೂಲ ಕಾರಣ ಏನು ಅಂತ ತಿಳುವಳಿಕೆಯುಳ್ಳ ಯಾರಿಗಾದರೂ ಅರ್ಥವಾಗಬೇಕಲ್ಲವೇ? ಸರಿಯಾದ ಅವಕಾಶ ಕೊಡದೆ ಪ್ರತಿಭಾ ಪಲಾಯನ ಎಂದು ಬೊಬ್ಬಿರಿಯುತ್ತಾ ಇದ್ದರೆ ವಿದೇಶಗಳು ಭಾರತದ ಮೆದುಳುಗಳನ್ನು ಬಳಸಿಕೊಂಡು ಬಲಿಷ್ಠವಾಗುತ್ತಲೇ ಇರುತ್ತವೆ. ಆರ್ಥಿಕವಾಗಿ ಬಲಿಷ್ಟನಾಗಿದ್ದವನೂ ಮೀಸಲಾತಿಯ ಲಾಭ ಪಡೆದು ಕನಿಷ್ಟ ಅಂಕಗಳಿಸಿದ್ದರೂ ಉನ್ನತ ಶಿಕ್ಷಣ ಪಡೆಯುತ್ತಾನೆ, ಉತ್ತಮ ಸರಕಾರೀ ಹುದ್ದೆಯನ್ನು ಪಡೆಯುತ್ತಾನೆ, ಬೇಗನೆ ಭಡ್ತಿಯನ್ನೂ ಹೊಂದುತ್ತಾನೆ! ಅದೇ ಆರ್ಥಿಕವಾಗಿ ದುರ್ಬಲನಾಗಿದ್ದವ ಚತುರಮತಿಯಾಗಿದ್ದು ಉತ್ತಮ ಅಂಕಗಳನ್ನು ಪಡೆದಿದ್ದರೂ ಉನ್ನತ ಶಿಕ್ಷಣ, ಸರಕಾರೀ ನೌಕರಿಯಿಂದ ವಂಚಿತನಾಗುತ್ತಾನೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಾದರೆ ಈ ತಾರತಮ್ಯ ಏಕಿದೆ? ಮೀಸಲಾತಿ ಕಾನೂನಿನಲ್ಲಿರುವ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ಕ್ರೈಸ್ತ, ಮುಸ್ಲಿಮ್ ಮತೀಯರು ದಲಿತ ಸಮುದಾಯಕ್ಕಿರುವ ಹಕ್ಕನ್ನು ವಂಚನೆಯಿಂದ ತಮ್ಮದಾಗಿಸಿಕೊಳ್ಳುತ್ತಿರುವುದೂ ಯಥೇಚ್ಛವಾಗಿ ನಡೆಯುತ್ತಿದೆ. ಒಂದು ಉದಾಹರಣೆ ಗಮನಿಸಿ; ಎಸ್.ಸಿ ಮೀಸಲು ಕ್ಷೇತ್ರವಾಗಿದ್ದ ಹರಿದ್ವಾರ ಜಿಲ್ಲಾ ಪಂಚಾಯತಿನಲ್ಲಿ ಕಳೆದ ಐದು ವರ್ಷಗಳಿಂದ ಮುಸ್ಲಿಂ ಮಹಿಳೆಯೊಬ್ಬಳು ಸದಸ್ಯೆಯಾಗಿ ಕೂತಿದ್ದಳು. ಮೂಲತಃ ಜಾಟ್ ಆಗಿದ್ದ ಆಕೆ ಮುಸ್ಲಿಮನೊಬ್ಬನನ್ನು ಮದುವೆಯಾಗಿ ಮತಾಂತರವೂ ಆಗಿದ್ದಳು. ಯಾವ ವಿರೋಧ, ಒತ್ತಡಕ್ಕೂ ಆಕೆ ಬಗ್ಗಿರಲಿಲ್ಲ. ಕಾನೂನೂ ಕ್ರಮವೂ ಜರಗಲಿಲ್ಲ. ಕಾನೂನು ಕ್ರಮ ಒತ್ತಟ್ಟಿಗಿರಲಿ, FIR ದಾಖಲಾಗಿದ್ದೇ ಕಳೆದ ವಾರ. ಆಕೆ ಈಗಲೂ ರಾಜಾರೋಷವಾಗಿ ತಿರುಗುತ್ತಲೇ ಇದ್ದಾಳೆ. ಇಂತಹುದ್ದೇ ಪ್ರಕರಣ ನಮ್ಮ ಸಂಸತ್ತಿನಲ್ಲೇ ಇದೆ. 2014ರಲ್ಲಿ ಪಶ್ಚಿಮ ಬಂಗಾಳದ ಆರಾಮ್ ಭಾಗ್ ಕ್ಷೇತ್ರದಿಂದ ಗೆದ್ದಾಕೆ ಆಫ್ರಿನ್ ಅಲಿ. ಅದು ಎಸ್.ಸಿ ಮೀಸಲು ಕ್ಷೇತ್ರ! ಆಕೆ ಹುಟ್ಟಿದ್ದು ಹಿಂದೂವಾಗಿ(ಅಪರೂಪಾ ಪೊದ್ದರ್) ಮದುವೆಯಾಗಿ ಮತಾಂತರವೂ ಆದಳು. ಭಾಜಪಾ ಆಕೆಯ ಮೇಲೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದಾಗ ತಾನು ಹೆಸರು ಮಾತ್ರ ಬದಲಾಯಿಸಿದ್ದೇನೆ,ಮತವನ್ನಲ್ಲ ಎಂದಳು! ಅಂದರೆ ಈ ಮೀಸಲಾತಿ ಕಾನೂನಿನ ದುರುಪಯೋಗ ಅದೆಷ್ಟು ನಡೆದಿದೆ. ನಿಜವಾಗಿ ತುಳಿತಕ್ಕೊಳಗಾದವರಿಗೆ ಅದರ ಉಪಯೋಗವೇ ಆಗುತ್ತಿಲ್ಲ. ಮೀಸಲಾತಿಯನ್ನು ಬಳಸಿಕೊಂಡು ಬಲಿಷ್ಠನಾದವನೇ ತನಗೆ, ತನ್ನ ಮಕ್ಕಳಿಗೆ ಅನ್ನುತ್ತಾ ಪದೇ ಪದೇ ಅದನ್ನು ಬಳಸುತ್ತಾ ಅರ್ಹರಿಗೆ ಸಿಗದಂತೆ ಮಾಡುತ್ತಿರುವ ಪ್ರಕರಣಗಳು ಅದೆಷ್ಟಿವೆ? ಸಮಾನ ನಾಗರಿಕ ಸಂಹಿತೆ ಅನುಷ್ಠಾನವಾದರೆ ಇಂತಹಾ ಅನ್ಯಾಯ, ಅಪಸವ್ಯಗಳಿಗೆ ಅವಕಾಶವೇ ಇಲ್ಲವಲ್ಲ.


              ಹಿಂದೂ ಮತ್ತು ಕ್ರೈಸ್ತ ವಿವಾಹ ಕಾನೂನು ಪ್ರಕಾರ ಪುರುಷನಿಗೆ 21, ಮಹಿಳೆಗೆ 18 ವರ್ಷ ಪೂರ್ತಿಯಾಗಿರಬೇಕು. ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ, 15 ವರ್ಷಕ್ಕೆ ಮೈನೆರೆದರೆ ಮದುವೆ ಮಾಡಬಹುದು. ಹಿಂದು ವಿವಾಹ ಕಾಯ್ದೆ 1955ರ ಪ್ರಕಾರ ಬಹುಪತ್ನಿತ್ವ ಶಿಕ್ಷಾರ್ಹ ಅಪರಾಧ. ಕ್ರೈಸ್ತ ಧಾರ್ವಿುಕ ಕಾನೂನು ಪ್ರಕಾರವೂ ನಿಷೇಧವಿದೆ. ಮುಸ್ಲಿಂ ವೈಯಕ್ತಿಕ ಕಾನೂನು ನಾಲ್ವರು ಪತ್ನಿಯರನ್ನು ಹೊಂದಲು ಪುರುಷನಿಗೆ ಅವಕಾಶ ಕಲ್ಪಿಸುತ್ತದೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಪತಿ-ಪತ್ನಿ ಬೇರೆ ಬೇರೆ ವಾಸವಿದ್ದರೆ ಹಿಂದೂ ವೈಯಕ್ತಿಕ ಕಾನೂನು ವಿಚ್ಛೇದನಕ್ಕೆ ಅನುಮತಿಸುತ್ತದೆ. ಕ್ರೈಸ್ತ ವೈಯಕ್ತಿಕ ಕಾನೂನು ಪ್ರಕಾರ 2 ವರ್ಷ. ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ತ್ರಿವಳಿ ತಲಾಖ್ ಹೇಳಿದರಷ್ಟೇ ಸಾಕಿತ್ತು. ಕಳೆದ ವರ್ಷ ತ್ರಿವಳಿ ತಲಾಖ್ ಅನ್ನು ಮೋದಿ ಸರಕಾರ ನಿಷೇಧಿಸಿದ ಕಾರಣ ಮುಸ್ಲಿಂ ಹೆಂಗಳೆಯರು ನಿಟ್ಟುಸಿರು ಬಿಡುವಂತಾಗಿದೆ. ಟರ್ಕಿ, ಮೊರಾಕ್ಕೋ, ಟ್ಯುನೀಷಿಯಾ, ಇಂಡೋನೇಷ್ಯಾದಂತಹಾ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲೇ ಬಹುಪತ್ನಿತ್ವಕ್ಕೆ ನಿಷೇಧ ಇರುವಾಗ ಭಾರತದಂತಹಾ ಜಾತ್ಯಾತೀತ ರಾಷ್ಟ್ರದಲ್ಲಿ ಮುಸ್ಲಿಮರಿಗೊಂದು ಪ್ರತ್ಯೇಕ ಕಾನೂನು ಏಕಿದೆ?


              ಪ್ರತೀ ಬಾರಿ ಮುಸ್ಲಿಮರನ್ನು ಪ್ರತ್ಯೇಕ ಭಾವದಿಂದ ನೋಡಲಾಗುತ್ತದೆ ಎಂಬ ಮಾತು ಕೆಲವು ಬುದ್ಧಿಹೀನ ಜೀವಿಗಳಿಂದ ಬರುತ್ತದೆ. ಆದರೆ ದೇಶದ ಏಕರೂಪದ ಕಾನೂನು ಬಿಟ್ಟು ತಮ್ಮದೇ ಮತೀಯ ಕಾನೂನು ತಮಗಿರಬೇಕು ಎಂದು ಒತ್ತಾಯಿಸಿ ಅವರೇ ಪಡೆದುಕೊಂಡ ಮೇಲೆ ಪ್ರತ್ಯೇಕವಾಗಿರುವುದೇ ಅವರ ಸ್ವಭಾವವೆಂದಾಯಿತಲ್ಲವೇ? ಪ್ರತ್ಯೇಕವಿರಬೇಕು ಎಂಬ ಕಾರಣಕ್ಕೆ ದೇಶವನ್ನು ವಿಭಜಿಸಿದ್ದೂ ಅವರೇ ಅಲ್ವೇ. ಇಂದಿಗೂ ಈ ನೆಲದ ಕಾನೂನಿಗೆ ಗೌರವ ಕೊಡದೆ ಸಿಕ್ಕಲ್ಲೆಲ್ಲಾ ಬಾಂಬು ಇಡುವುದು, ಮಾದಕ ದ್ರವ್ಯಗಳ ಸರಬರಾಜು ಮಾಡುವುದು, ಗುಂಪಲ್ಲಿ ಬಂದು ಹಿಂದೂಗಳ ಮನೆ ಸುಡುವುದು, ತಮಗೆ ಮಾರಕವೇ ಆಗದ ಸಿಎಎ ವಿರುದ್ಧ ನಿಲ್ಲುವುದು, ಭಯೋತ್ಪಾದನೆಯ ವಿರುದ್ಧ ಮಾತಾಡದೇ ಇರುವುದು ಇವೆಲ್ಲಾ ಅವರ ಪ್ರತ್ಯೇಕತಾ ಮನಃಸ್ಥಿತಿಯೇ ಅಲ್ಲವೇ? ಇತ್ತೀಚೆಗೆ ನಮ್ಮ ದೇಶದಲ್ಲಿ ಈ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬಾರದು ಎಂದು ವಿರೋಧಿಸಿ ಮುಸ್ಲಿಂ ಹೆಣ್ಣುಮಕ್ಕಳ ಸಂಘಟನೆಯೊಂದು ಪ್ರತಿಭಟನೆ ನಡೆಸಿತು. ಎದುರಿಗೆ ಮಹಿಳಾ ಸಂಘಟನೆಗಳ ಒಕ್ಕೂಟ ಎಂದು ಬ್ಯಾನರ್ ಕೈಯಲ್ಲಿ ಹಿಡಿದಿದ್ದ ಯುವಕರಿಂದ ಹಿಡಿದು ಆ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ಅಷ್ಟೂ ಜನರೂ ಪುರುಷರೇ ಆಗಿದ್ದರು! ಒಬ್ಬಳೇ ಒಬ್ಬ ಮಹಿಳೆಯ ಮುಖ ಅದರಲ್ಲಿ ಕಾಣಿಸಲಿಲ್ಲ. ಈ ಸಮಾನ ನಾಗರಿಕ ಸಂಹಿತೆಗೆ ಮುಸ್ಲಿಂ ಪುರುಷರು ಹೆದರುವುದು ಯಾಕೆ? ನಮ್ಮ ಮತವೇ ನಮಗೆ ಕಾನೂನು, ಅನ್ನ, ನೀರು ಕೊಟ್ಟ ನೆಲದ ಕಾನೂನಲ್ಲ ಎಂಬ ಪ್ರತ್ಯೇಕತಾ ಮನೋಭಾವೇ ಅಲ್ಲವೇ?


            2019 ಸೆಪ್ಟೆಂಬರಿನಲ್ಲಿ ಗೋವಾದ ಆಸ್ತಿ ಸಂಬಂಧಿತ ವಿಷಯವೊಂದರ ವಿಚಾರಣೆ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆಯ ಉತ್ತಮ ಉದಾಹರಣೆ ಎಂದು ಗೋವಾ ರಾಜ್ಯವನ್ನು ಸುಪ್ರೀಂ ಕೋರ್ಟು ಬಣ್ಣಿಸಿತು. ಇಡೀ ದೇಶಕ್ಕೆ ಸಮಾನ ನಾಗರಿಕ ಸಂಹಿತೆ ಜಾರಿಯಾಗುವ ನಿರೀಕ್ಷೆಯನ್ನೂ ವ್ಯಕ್ತಪಡಿಸಿತು. ಪೂರ್ಣವಾದ ಕಾನೂನು ಅಲ್ಲದಿದ್ದರೂ, ಅದಕ್ಕೆ ಸನಿಹವಾದ ಏಕರೂಪ ನಾಗರಿಕ ಸಂಹಿತೆಯೊಂದು ಗೋವಾದಲ್ಲಿದೆ. ಗೋವಾ ನಾಗರಿಕ ಸಂಹಿತೆ ಅಥವಾ ಗೋವಾ ಕೌಟುಂಬಿಕ ಕಾನೂನು ಎಂಬ ಹೆಸರಲ್ಲಿ ಇದು ಅಸ್ತಿತ್ವದಲ್ಲಿದೆ. ಭಾರತದ ಉಳಿದ ರಾಜ್ಯಗಳಲ್ಲಿರುವ ವೈಯಕ್ತಿಕ ಕಾನೂನುಗಳು ಇಲ್ಲಿಲ್ಲ. ವಿವಾಹಿತ ಪುರುಷ-ಮಹಿಳೆಗೆ ಆಸ್ತಿ ಮೇಲೆ ಸಮಾನ ಹಕ್ಕಿದೆ. ವಿಚ್ಛೇದನವಾದರೆ ಆಸ್ತಿ ಸಮಾನ ಹಂಚಿಕೆಯಾಗುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಅರ್ಧದಷ್ಟರ ಮೇಲೆ ಮಕ್ಕಳಿಗೆ ಹಕ್ಕಿರುತ್ತದೆ. ಮುಸ್ಲಿಮರು ಬಹುಪತ್ನಿತ್ವ ಪಾಲಿಸುವಂತಿಲ್ಲ. ಗೋವಾದಲ್ಲಿ ಪಾಲನೆಯಾಗುವ ಕಾನೂನು ಇಡೀ ದೇಶಕ್ಕೆ ಯಾಕೆ ಸಾಧ್ಯವಿಲ್ಲ?


              ಬ್ರಿಟಿಷರ ಒಡೆದಾಳುವ ನೀತಿಯನ್ನು ತನ್ನದಾಗಿಸಿಕೊಂಡ ಕಾಂಗ್ರೆಸ್ ೬೦ ವರ್ಷಗಳ ಕಾಲ ತಾನೇ ಕೊಟ್ಟ ಜಾತ್ಯಾತೀತ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕೇವಲ ಭಾಷಣಗಳಿಗೆ ಸೀಮಿತವಾಗಿಸಿ, ಓಲೈಕೆ ರಾಜಕಾರಣದ ವಿಷಬೀಜವನ್ನು ಬಿತ್ತಿ, ಅದನ್ನು ಹೆಮ್ಮರವಾಗಿಸಿತು. ಇದರಿಂದ ಈ ರಾಷ್ಟ್ರದಲ್ಲಿ ಜಾತಿ, ಮತಗಳೇ ಇಂದು ಎಲ್ಲ ಕ್ಷೇತ್ರಗಳ ಪ್ರಮುಖ ವಿಚಾರ ಹಾಗೂ ವಿವಾದಗಳಾಗಿ ಪರಿವರ್ತನೆಯಾಗಿದ್ದು, ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರಿದ ಭಾರತದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿತು. ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಈ ವಿಚಾರಗಳು ಸಂವಿಧಾನದ ಮೂಲ ಆಶಯ ಹಾಗೂ ಈ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಉಲ್ಲಂಘಿಸುವ ಮಟ್ಟಕ್ಕೆ ಮತಾಧಾರಿತ ಕಾನೂನು ಹಾಗೂ ವ್ಯವಸ್ಥೆಗಳನ್ನು ರೂಪಿಸಿ, ಸುಸಂಸ್ಕೃತ ಸಮಾಜವನ್ನೇ ನಾಶ ಮಾಡಲು ಅವಕಾಶ ಮಾಡಿಕೊಟ್ಟಿವೆ. ಈ ಎಲ್ಲಾ ಅಪಸವ್ಯಗಳಿಗೆ ಕೊನೆ ಹಾಡಬೇಕಾದರೆ ಸಮಾನ ನಾಗರಿಕ ಸಂಹಿತೆ ಜಾರಿಯಾಗಲೇಬೇಕು. ಹಾಂ…..ಕೇವಲ ವಿವಾಹ, ವಿಚ್ಛೇದನ, ದತ್ತು, ಪೋಷಕತ್ವ ಮತ್ತು ಮಗುವಿನ ಪಾಲನೆ, ನಿರ್ವಹಣೆ, ಉತ್ತರಾಧಿಕಾರಿ ಮತ್ತು ವಾರಸುದಾರಿಕೆ ವಿಷಯಗಳಿಗೆ ಮಾತ್ರ ಸಮಾನ ನಾಗರಿಕ ಸಂಹಿತೆ ಸೀಮಿತವಾಗಬಾರದು. ಶಿಕ್ಷಣ, ಮೀಸಲಾತಿ ಸೇರಿದಂತೆ ಸಾರ್ವಜನಿಕವಾದ ಎಲ್ಲಾ ರೀತಿಯ ವಿಚಾರಗಳಿಗೂ ಅನ್ವಯವಾಗಬೇಕು. ಕೇವಲ ಸಮಾನ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ಪ್ರಯೋಜನವಿಲ್ಲ. ಅದರ ಅನುಷ್ಠಾನವೂ ಸರಿಯಾದ ರೀತಿಯಲ್ಲಿ ನಡೆಯಬೇಕು. ಈಗಿನಂತೆ ಕಾನೂನು ಇದ್ದರೂ ಮತಾಂಧರಿಗೆ ಹೆದರಿಯೋ, ಸೆಕ್ಯುಲರ್ ಬುದ್ಧಿಗೆ ಬಲಿ ಬಿದ್ದೋ ಆ ಕಾನೂನನ್ನು ಅನುಷ್ಠಾನಗೈಯ್ಯದಿರುವ ಅವ್ಯವಸ್ಥೆಗೆ ಅದೂ ಬಲಿಯಾಗಬಾರದು. ಆಗ ಮಾತ್ರ ಸಾಮಾನ್ಯ ಪ್ರಜೆಯೊಬ್ಬ ನೆಮ್ಮದಿಯ ಜೀವನ ನಡೆಸಲು ಸಾಧ್ಯ.


           "118ನೇ ವಿಧಿಯಲ್ಲಿನ ಭಾರತೀಯ ಉತ್ತರಾಧಿಕಾರ ಕಾಯ್ದೆಯು ಅಸಂವಿಧಾನಾತ್ಮಕ. 44ನೇ ವಿಧಿಯನ್ವಯ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ" ಎಂದು ನ್ಯಾಯಮೂರ್ತಿ ವಿ.ಎಸ್ ಖಾರೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು 2003ರಲ್ಲಿ ಅಭಿಪ್ರಾಯಪಟ್ಟಿತ್ತು. 2015 ಅಕ್ಟೋಬರಿನಲ್ಲಿ ಸಮಾನ ನಾಗರಿಕ ಸಂಹಿತೆಯ ಅವಶ್ಯಕತೆಯನ್ನು ಎತ್ತಿಹಿಡಿದ ಸರ್ವೋಚ್ಛ ನ್ಯಾಯಾಲಯ‌ "ದೇಶದಲ್ಲಿ ಹಲವು ಧಾರ್ಮಿಕ ಕಟ್ಟುಪಾಡುಗಳ ವೈಯಕ್ತಿಕ ಕಾನೂನುಗಳಿಂದ ಗೊಂದಲವಿದೆ. ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಮತಗಳಿಗೆ ಅವುಗಳದ್ದೇ ಆದ ನಿರ್ಧಾರಗಳಿರಬಹುದು. ಅದನ್ನೆಲ್ಲ ನಾವು ಒಪ್ಪಿಕೊಳ್ಳಲಾಗದು. ಪೌರರ ಹಿತ ಕಾಯುವುದಕ್ಕಾಗಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಉತ್ತಮ. ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಬೇಕು" ಎಂದಿತು. ಬಳಿಕ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಪರಾಮರ್ಶೆ ನಡೆಸುವಂತೆ ಕಾನೂನು ಆಯೋಗಕ್ಕೆ ಸೂಚನೆ ನೀಡಿತು. ಅದರಂತೆ ನ್ಯಾ. ಡಾ. ಬಿ.ಎಸ್.ಚೌಹಾಣ್ ನೇತೃತ್ವದ ಕೇಂದ್ರ ಕಾನೂನು ಆಯೋಗವು ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಪ್ರಕಟಿಸಿ ಸಾರ್ವಜನಿಕ ಅಭಿಪ್ರಾಯವನ್ನು ಕೋರಿತು. ಈ ಸಮೀಕ್ಷೆಯ ಸಂಪುರ್ಣ ಅಧ್ಯಯನ ನಂತರ, ಕಾನೂನು ಜಾರಿಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸುತ್ತದೆ. ದೇಶದ ಅಭಿವೃದ್ಧಿ ಪರವಾದ ಹಲವಾರು ಕೆಲಸಗಳನ್ನು ಮಾಡಿರುವ, ಹಲವಾರು ಅನಿಷ್ಟ ಸಂಪ್ರದಾಯಗಳನ್ನು ಕಾನೂನು ಮುಖಾಂತರ ನಿಷೇಧಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಭಾಜಪಾ ಸರಕಾರ ಏಕರೂಪದ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಿ ನಿಜಾರ್ಥದ ಜಾತ್ಯಾತೀತ ತತ್ವ ಪಾಲನೆಯಾಗುವಂತೆ ಮಾಡುತ್ತದೆ ಎನ್ನುವ ವಿಶ್ವಾಸವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ