ಪುಟಗಳು

ಶನಿವಾರ, ಫೆಬ್ರವರಿ 20, 2021

ರಾಮನದ್ದಾಯಿತು; ಕೃಷ್ಣನನ್ನೂ ಸೆರೆವಾಸದಿಂದ ಬಿಡಿಸಬೇಕಾಗಿದೆ...

 ರಾಮನದ್ದಾಯಿತು; ಕೃಷ್ಣನನ್ನೂ ಸೆರೆವಾಸದಿಂದ ಬಿಡಿಸಬೇಕಾಗಿದೆ...


 


         ಶ್ರೀ ವಲ್ಲಭರ ಮಧುರಾಷ್ಟಕವು "ಮಥುರಾಧಿಪತೇರಖಿಲಂ ಮಧುರಂ", ಶ್ರೀಕೃಷ್ಣನಿಗೆ ಸಂಬಂಧಿಸಿದ ಎಲ್ಲವೂ ಮಧುರವಾದುದು ಎಂದು ವರ್ಣಿಸುತ್ತಾ ಮಧುರ ಭಾವವನ್ನು ಉಂಟುಮಾಡುತ್ತದೆ. ಆದರೆ ಕೃಷ್ಣನ ಜೀವನವು ಮಧುರವಾಗಿತ್ತೇ ಎಂದು ನೋಡಿದರೆ ಅದು ಕಲ್ಲುಮುಳ್ಳುಗಳ ಹಾದಿಯಾಗಿದ್ದದ್ದು ಕಂಡುಬರುತ್ತದೆ. ಭಕ್ತರನ್ನು ಭವಬಂಧನದಿಂದ ಬಿಡುಗಡೆ ಮಾಡುವವನ ಜನ್ಮವೇ ಕಾರಾಗೃಹದ ಬಂಧನದಲ್ಲಾಯಿತು. ಜೀವ ಉಳಿಸಲು ಅಪ್ಪ ವಸುದೇವ ರಾತ್ರೋರಾತ್ರಿ ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ ಗೋಕುಲದಲ್ಲಿ ಗೋಪಬಾಲನನ್ನು ತಂದಿರಿಸಬೇಕಾಯಿತು. ಮುಂದೆ ಕಂಸ ಕಳಿಸಿದ ಪೂತನಿ, ಶಕಟ, ಧೇನುಕ, ವತ್ಸ, ನಗ, ಹಯ, ವೃಷಭ, ಕಾಳಿಂಗರನ್ನು ಸದೆಬಡಿಯಬೇಕಾಯಿತು. ಕುವಲಪೀಡಾ, ಚಾಣೂರ, ಮುಷ್ಠಿಕರನ್ನು ಮೆಟ್ಟಿ ನಿಲ್ಲಬೇಕಾಯಿತು. ಮಲ್ಲಮಾವ ಕಂಸನನ್ನು ಸಂಹರಿಸಬೇಕಾಯಿತು. ಬಳಿಕವೂ ಎಷ್ಟು ಬಾರಿ ನಾಶಗೈದರೂ ಮತ್ತೆ ಮತ್ತೆ ದಾಳಿ ಎಸಗುತ್ತಿದ್ದ ಅಜ್ಜ(ಕಂಸನ ಮಾವ) ಜರಾಸಂಧನಿಂದ ನೆಮ್ಮದಿ ಕಾಣಲು ದ್ವಾರಕೆಗೆ ಹೋಗಿ ನೆಲೆಸಬೇಕಾಯಿತು. ಅಂತಹಾ ಕಠಿಣ ಜೀವನದಲ್ಲೂ ಸದಾ ಹಸನ್ಮುಖಿಯಾಗಿದ್ದ, ಭಕ್ತರಿಗೆ ಸದಾ ಮಧುರನಾಗಿದ್ದ ಮಥುರಾಧಿಪತಿಯನ್ನು ಭಕ್ತರು ಮಧುರಾಧಿಪತಿ ಎಂದೇ ಕೊಂಡಾಡಿದ್ದು ಸಹಜವೇ ಆಗಿದೆ. ಮಥುರಾಧಿಪತಿಗಿದ್ದ ಈ ಕಠಿಣ ಪರಿಸ್ಥಿತಿ ಆತನ ಜನ್ಮಸ್ಥಾನ ಮಥುರೆಗೂ ಬಂದಿತು. ಮತ್ತದು ತಮ್ಮದಲ್ಲದ್ದನ್ನು ಸದಾ ಭಂಜಿಸುವ ಬರ್ಬರ ಮತೀಯರಿಂದಲೇ ಎನ್ನುವುದು ಜಾತ್ಯಾತೀತರು ಮುಚ್ಚಿಡಲು ನೋಡಿದರೂ ತೆರೆದು ತೋರುತ್ತಿರುವ ಸತ್ಯ!


             ಪ್ರಾಚೀನ ಕಾಲದಲ್ಲಿ ಮಹಾರಣ್ಯವಾಗಿದ್ದ ಮಥುರಾ ಮಧು ರಾಕ್ಷಸನ ಅಂಕೆಗೆ ಒಳಪಟ್ಟಿತ್ತು. ಪ್ರಭು ಶ್ರೀರಾಮನ ಅಶ್ವಮೇಧದ ತುರಗವನ್ನು ತಡೆದ ಈತ ಹಾಗೂ ಈತನ ಮಗ ಲವಣಾಸುರ ಹಯವ ಕಾಯಲು ಬಂದ ಶತ್ರುಘ್ನನೊಡನೆ ಕಾದು ಮಡಿದರು. ಮಧುವನ, ಮಥುರಾ ಎಂದು ಶತ್ರುಘ್ನನಿಂದ ನಾಮಕರಣಗೊಂಡಿತು. ಮುಂದೆ ಅದು ಶತ್ರುಘ್ನನ ಮಗನಾದ ಶೂರಸೇನನ ಪಾಲಿಗೆ ಬಂತು. ಇಂತಹಾ ಮಥುರಾ ದ್ವಾಪರೆಯಲ್ಲಿ ಯದು ವಂಶಜರ ವಶಕ್ಕೆ ಬಂದು ರಾಜಾ ಉಗ್ರಸೇನನ ಆಳ್ವಿಕೆಯಲ್ಲಿ ಮೆರೆಯಿತು. ತಂದೆಯನ್ನು ಸೆರೆಗೆ ತಳ್ಳಿದ ಕಂಸ ಪ್ರಜಾಪೀಡಕನಾಗಿ ಮೆರೆದ. ಅಶರೀರವಾಣಿಯನ್ನು ಕೇಳಿ ತಂಗಿ-ಭಾವರನ್ನು ಸೆರೆಯಲ್ಲಿಟ್ಟು ಅವರಿಂದ ಜೀವ ತಳೆದ ಆರು ಮಕ್ಕಳನ್ನು ಅಪ್ಪಳಿಸಿ ಕೊಂದ. ಕೃಷ್ಣ ಬಲರಾಮರಿಬ್ಬರು ತಪ್ಪಿ, ಕೃಷ್ಣನನ್ನು ಕೊಲ್ಲುವ ಹಂಚಿಕೆಗಳೂ ವಿಫಲವಾಗಿ ಕೊನೆಗೆ ಅವರಿಂದಲೇ ಸಂಹರಿಸಲ್ಪಟ್ಟ. ಕೃಷ್ಣ ತನ್ನ ಅಜ್ಜ ಉಗ್ರಸೇನನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ. ತನ್ನ ಅಳಿಯನ ಸಾವಿನಿಂದ ದುಃಖಿತನಾದ ಜರಾಸಂಧ ಕಾಲಯವನನನ್ನು ಜೊತೆ ಸೇರಿಸಿಕೊಂಡು ಯಾದವರ ಮೇಲೆ ಸತತ ಆಕ್ರಮಣ ಮಾಡಿದ. ಜರಾಸಂಧನ ಉಪಟಳದಿಂದ ತಪ್ಪಿಸಿಕೊಳ್ಳಲು ಕೃಷ್ಣ ದ್ವಾರಕೆಗೆ ತೆರಳಿದ.

 

             ಸಪ್ತಮೋಕ್ಷದಾಯಕ ಕ್ಷೇತ್ರಗಳಲ್ಲಿ ಮಥುರೆಯೂ ಒಂದು. ಸರ್ವಪಾಪಹರಳಾದ ಯಮುನೆಯ ತಟದಲ್ಲಿ ಸ್ಥಿತವಾದ ಮಥುರಾಮಂಡಲವು 20 ಯೋಜನಗಳಷ್ಟು ವ್ಯಾಪಿಸಿದೆ ಎಂದು ವರಾಹಪುರಾಣವು ವರ್ಣಿಸಿದೆ. ಶ್ರೀಕೃಷ್ಣನ ಬಾಲ ಲೀಲೆಗಳಿಗೆ ಸಾಕ್ಷಿಯಾಗಿ, ಗೋಕುಲ, ವೃಂದಾವನ, ಗೋವರ್ಧನಗಳಿಂದ ಒಡಗೂಡಿ ವ್ರಜಮಂಡಲವೆಂದು ಪ್ರಖ್ಯಾತಿಯಾದ ಈ ಪ್ರದೇಶ ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. ಭಾಗವತ ಸಂಪ್ರದಾಯವೂ ಇಲ್ಲೇ ಮೊಳಕೆಯೊಡೆಯಿತು. ಬುದ್ಧನ ಪದಸ್ಪರ್ಶದಿಂದ ಪುನೀತವಾಯಿತು. ಜೊತೆಗೆ ವೈದಿಕ ಮತಕ್ಕೂ ಇಲ್ಲಿ ಗ್ರಹಣ ಹಿಡಿಯಿತು. ಉಪಗುಪ್ತ, ಅಶೋಕರಿಂದಾಗಿ ಹಿಂದೂಗಳನ್ನು ಬೌದ್ಧ ಮತಕ್ಕೆ ಮತಾಂತರಿಸುವ ಕೇಂದ್ರವಾಯಿತು. ಉಪಗುಪ್ತ ಮಥುರಾ ಹಾಗೂ ಸುತ್ತಮುತ್ತಲಿನ ಹಿಂದೂಗಳನ್ನು ಬೌದ್ಧರನ್ನಾಗಿಸಿದ. ಅವನಿಂದ ಮತಾಂತರಗೊಂಡ ಹದಿನೆಂಟು ಸಾವಿರಕ್ಕೂ ಹೆಚ್ಚು ಮಂದಿ ಬೌದ್ಧ ಮತ ಪ್ರಚಾರಕ್ಕೆ ದೇಶವಿದೇಶಗಳಲ್ಲಿ ಹರಡಿಕೊಂಡರು. ಅಶೋಕ ನಡೆಸುತ್ತಿದ್ದ ಬಲವಂತದ ಮತಾಂತರ ಜಗತ್ಪ್ರಸಿದ್ಧ. ಹ್ಯೂಯೆನ್ ತ್ಸಾಂಗ್ ಮಥುರಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಐದು ಮಂದಿರಗಳು, ಅಶೋಕನು ಕಟ್ಟಿಸಿದ ಮೂರು ಸ್ತೂಪಗಳು, ಇಪ್ಪತ್ತು ಬೌದ್ಧವಿಹಾರಗಳು ಇದ್ದುದನ್ನು ದಾಖಲಿಸಿದ್ದಾನೆ. ಬಳಿಕ ಕುಶಾನರ ಕಾಲದಲ್ಲಿ ಮಥುರಾದಲ್ಲಿ ಜೈನರ ಪ್ರಭಾವ ಹೆಚ್ಚಿತು. ಹೀಗಿದ್ದ ಮಥುರಾದಲ್ಲಿ ವೈದಿಕಧರ್ಮ ಪುನರುಜ್ಜೀವನಗೊಂಡದ್ದು ಶ್ರೀಶಂಕರವಿಜಯದ ಬಳಿಕವೇ.


             ಇಂದಿರುವ ಕೃಷ್ಣಜನ್ಮಭೂಮಿ ದೇವಾಲಯವು ಕೃಷ್ಣನು ಜನಿಸಿದ ನಿಜವಾದ ಸ್ಥಳವಲ್ಲ. ಇದು ಕೃಷ್ಣನ ನಿಜವಾದ ಜನ್ಮಸ್ಥಳದ ಪಕ್ಕದಲ್ಲಿ ನಿರ್ಮಿಸಲ್ಪಟ್ಟ ದೇವಾಲಯ. 1949ರಲ್ಲಿ ತೆಗೆದ ಮಥುರಾದ ಶಾಹಿ ಈದ್ಗಾದ ಚಿತ್ರ ಇದನ್ನು ಸ್ಪಷ್ಟಪಡಿಸುತ್ತದೆ. ಶಾಹಿ ಈದ್ಗಾದ ತಳಪಾಯದಲ್ಲಿ ಮತ್ತು ಅದರ ಸುತ್ತಲೂ ಭಗ್ನಗೊಂಡ ದೇವಾಲಯದ ಅವಶೇಷಗಳನ್ನು ಕಾಣಬಹುದು. ಈ ಅವಶೇಷಗಳ ಮೇಲ್ಭಾಗದಲ್ಲಿ ಪುರಾತತ್ವ ಇಲಾಖೆಯಿಂದ ನಿಲ್ಲಿಸಲ್ಪಟ್ಟ "ಶ್ರೀಕೃಷ್ಣಜನ್ಮಭೂಮಿ" ಎಂಬ ಫಲಕವನ್ನು ನೋಡಬಹುದು. "ಹಿಂದೂಗಳು ತಮ್ಮ ದೇವರಾದ ಭಗವಾನ್ ಶ್ರೀಕೃಷ್ಣನ ಜನ್ಮಸ್ಥಾನವೆಂದು ನಂಬುವ ಜಾಗ" ಎಂಬ ಉಲ್ಲೇಖ ಈ ಫಲಕದಲ್ಲಿದೆ. ಹಿಂದೆ ಇಲ್ಲಿ ಭವ್ಯವಾದ ಕೇಶವದೇವ ಮಂದಿರವಿತ್ತು. ಮಹಮದ್ ಘಜನಿ ಎಂಬ ಮತಾಂಧ ಸಾಮಾನ್ಯ ಯುಗ 1017ರಲ್ಲಿ ಮಥುರಾದ ಮೇಲೆ ದಾಳಿ ಮಾಡಿದ. ನಗರದ ಸಕಲ ಸಂಪತ್ತನ್ನು ದೋಚಿ ಮಥುರೆಗೆ ಬೆಂಕಿ ಇಟ್ಟ. ಚಿನ್ನದ ದೊಡ್ಡ ಐದು ವಿಗ್ರಹಗಳು ಸೇರಿದಂತೆ 25ಸಾವಿರ ಪೌಂಡ್ ಸಂಪತ್ತನ್ನು ಆತ ದೋಚಿದ. ಬಳಿಕ ಮಥುರಾದ ಮೇಲೆ ದಾಳಿಯೆಸಗಿದವ ಸಿಕಂದರ್ ಲೋದಿ, 1500ರಲ್ಲಿ. 1618 ರಲ್ಲಿ, ಓರ್ಛಾ ರಾಜ ವೀರ್ ಸಿಂಗ್ ದೇವಾ ಬುಂದೇಲಾ 33ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಂದಿರವನ್ನು ಮರು ನಿರ್ಮಿಸಿದ. ನೆನಪಿರಲಿ ಆ ಕಾಲದಲ್ಲಿ ಒಂದು ರೂಪಾಯಿ, 296ಕೆಜಿ ಅಕ್ಕಿಗೆ ಸಮನಾಗಿತ್ತು. ಅಂದರೆ ಈ ಬೃಹತ್ ಮೊತ್ತದ ಮೌಲ್ಯವೆಷ್ಟೆಂದು ಊಹಿಸಿಕೊಳ್ಳಬಹುದು.


             ಆದರೆ ಮಥುರೆಯ ಭವಿಷ್ಯ ಮಧುರವಾಗಲಿಲ್ಲ. ಮುಂದೆ ಅದು ಮತಾಂಧ ಔರಂಗಜೇಬನ ಬರ್ಬರತೆಗೆ ಬಲಿಯಾಯಿತು. 1670ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಅಬ್ದ-ಇನ್-ನಬೀರಖಾನ್ ಜನ್ಮಸ್ಥಾನದಲ್ಲಿದ್ದ ಕೇಶವದೇವ ಮಂದಿರವನ್ನು ನೆಲಸಮಗೊಳಿಸಿ ಅದರ ಅವಶೇಷಗಳನ್ನು ಬಳಸಿಕೊಂಡು ಶಾಹಿ ಈದ್ಗಾವನ್ನು ನಿರ್ಮಿಸಿದ. ಅಂದಿನಿಂದ ಅದನ್ನು ಮರಳಿ ಪಡೆಯಲು ಹಿಂದೂಗಳ ಹೋರಾಟ ಇಂದಿಗೂ ಜಾರಿಯಲ್ಲಿದೆ. 18ನೇ ಶತಮಾನದಲ್ಲಿ ಮರಾಠರು ಮಥುರಾ ಮಾಲೀಕತ್ವವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. 1804ರಲ್ಲಿ ಮಥುರಾ ಬ್ರಿಟಿಷರ ನಿಯಂತ್ರಣಕ್ಕೆ ಬಂತು. 1815ರಲ್ಲಿ ಈಸ್ಟ್ ಇಂಡಿಯಾ ಕಂಪನಿ, ಕೃಷ್ಣ ಜನ್ಮಭೂಮಿಯ 13.37 ಎಕರೆ ಭೂಮಿಯನ್ನು ಹರಾಜು ಹಾಕಿತು. ಆಗ ಇದನ್ನು ಬನಾರಸ್‌ನ ಶ್ರೀಮಂತ ಬ್ಯಾಂಕರ್ ರಾಜ ಪತ್ನಿಮಲ್ 45 ಲಕ್ಷಕ್ಕೆ ಖರೀದಿಸಿದರು. ಅದರಲ್ಲಿ ಶಾಹಿ ಈದ್ಗಾವೂ ಸೇರಿತ್ತು. ಆ ದಿನಗಳಲ್ಲಿ ಈ ಮಸೀದಿ ಹಿಂದೂ ಅವಶೇಷಗಳ ಮೇಲೆ ನಿರ್ಮಿಸಲಾದ, ಕೈಬಿಟ್ಟ, ಯಾವುದೇ ರೀತಿಯ ಚಟುವಟಿಕೆಗಳಿಲ್ಲದ ಸ್ಥಳವಾಗಿತ್ತು. 1921ರಲ್ಲಿ ಮುಸ್ಲಿಮರು ಈ ಭೂಮಿಯ ಮೇಲಿನ ಮಾಲಿಕತ್ವವನ್ನು ಪ್ರಶ್ನಿಸಿದರು. 1935ರಲ್ಲಿ  ಅಲಹಾಬಾದ್ ಹೈಕೋರ್ಟ್ ರಾಜಾ ಪತ್ನಿಮಲ್ ಅವರ ವಂಶಸ್ಥರ ಪರವಾಗಿ ತೀರ್ಪು ನೀಡಿತು. ಗಮನಿಸಿ ಈಸ್ಟ್ ಇಂಡಿಯಾ ಕಂಪನಿಯು ಹರಾಜು ಹಾಕಿದಾಗ ಯಾವುದೇ ಮುಸ್ಲಿಮರು ಈ ಭೂಮಿಯನ್ನು ಖರೀದಿಸಲು ಮುಂದೆ ಬರಲಿಲ್ಲ. ಆದರೆ ಭೂಮಿಯನ್ನು ಖರೀದಿಸಿದ ನಂತರ, ಅವರು ನ್ಯಾಯಾಲಯಗಳಲ್ಲಿ ಮಾಲೀಕತ್ವವನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಇದರಿಂದ ಇಂದಿನ ಕಾಲದಲ್ಲೂ ಜಗಳಕ್ಕೆ ಮೂಲಕಾರಣರು ಯಾರು ಎನ್ನುವ ಅಂಶ ತಿಳಿಯುತ್ತದೆ. ಜೊತೆಗೆ ತಮ್ಮದಲ್ಲದ ಭೂಮಿಯನ್ನು ಕಿತ್ತುಕೊಳ್ಳಲು ಹವಣಿಸುವ ಆಕ್ರಮಣಕಾರೀ ಮನಸ್ಥಿತಿಯಿಂದ ಹೊರಬರಲಾಗದ ಕುರಾನ್ ಪೀಡಿತರ ಧೋರಣೆಯನ್ನು ಪ್ರತ್ಯಕ್ಷೀಕರಿಸುತ್ತದೆ. ರಾಜಾ ಪತ್ನಿಮಲ್ ಅವರ ವಂಶಸ್ಥರ ಪರವಾಗಿ ನ್ಯಾಯಾಲಯವು ತೀರ್ಪು ನೀಡಿದ ನಂತರವೂ, ಸ್ಥಳೀಯ ಮುಸ್ಲಿಮರ ಸತತ ಬೆದರಿಕೆ ಹಾಗೂ ಅಡಚಣೆಯುಂಟುಮಾಡುವ ಪ್ರವೃತ್ತಿಯಿಂದಾಗಿ ಅಲ್ಲಿ ದೇವಾಲಯವನ್ನು ಮರುನಿರ್ಮಿಸುವ ಯೋಜನೆಯನ್ನು ಮುಂದುವರಿಸಲು ಆಗಲೇ ಇಲ್ಲ. 1944ರಲ್ಲಿ ಪತ್ನಿಮಲ್ ವಂಶಜರು ಈ ಭೂಮಿಯನ್ನು ಮದನ್ ಮೋಹನ್ ಮಾಳವೀಯ, ಗಣೇಶ ಗೋಸ್ವಾಮಿ, ಭಿಕೆನ್ ಲಾಲರಿಗೆ ಮಾರಾಟ ಮಾಡಿದರು.


            1947ರ ಬಳಿಕ ಬಿರ್ಲಾ ಈ ಭೂಮಿಯನ್ನು ಖರೀದಿಸಿದರು. ಆತ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು ರಚಿಸಿದರು. 1968ರಲ್ಲಿ, ಟ್ರಸ್ಟ್ ಮತ್ತು ಶಾಹಿ ಈದ್ಗಾ ಸಮಿತಿಯ ನಡುವೆ ಒಪ್ಪಂದವೊಂದು ನಡೆದು ಮಸೀದಿಯ ಪಕ್ಕದ ಭೂಮಿ ಟ್ರಸ್ಟ್‌ಗೆ ಸೇರಿತು ಮತ್ತು ಈದ್ಗಾ ನಿರ್ವಹಣೆ ಈದ್ಗಾ ಸಮಿತಿಗೆ ಸೇರಿತು. ಆದರೆ ಈದ್ಗಾದ ಮೇಲೆ ಟ್ರಸ್ಟ್‌, ಕಾನೂನು ರೀತಿ ಯಾವುದೇ ಹಕ್ಕನ್ನು ಪಡೆಯುವಂತಿರಲಿಲ್ಲ! ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಒಪ್ಪಂದವು ಮೂಲ ಕೃಷ್ಣ ದೇವಾಲಯದ ಮೇಲ್ಭಾಗದಲ್ಲಿ ನಿರ್ಮಿಸಲಾದ ಶಾಹಿ ಈದ್ಗಾದ ಅಸ್ತಿತ್ವವನ್ನು ಗುರುತಿಸಿತು. ಅಲ್ಲಿಯವರೆಗೆ ಆ ಮಸೀದಿಗೆ ಕಾನೂನು ರೀತ್ಯಾ ಯಾವುದೇ ಅಸ್ತಿತ್ವವಿರಲಿಲ್ಲ. ಈ ಒಪ್ಪಂದದ ಬಳಿಕವೇ ಆ ಮಸೀದಿಯಲ್ಲಿ ಕಾರ್ಯಚಟುವಟಿಕೆ ಆರಂಭಗೊಂಡಿತು. ಒಪ್ಪಂದಕ್ಕೆ ಬರುವ ಮೊದಲು ಯಾವುದೇ ಹಿಂದೂ ಸಂಘಟನೆ ಅಥವಾ ಸಾರ್ವಜನಿಕರನ್ನು ಸಂಪರ್ಕಿಸಿಲ್ಲ ಎಂಬುದನ್ನು ಗಮನಿಸಬೇಕು. ಇದು ನೇರವಾಗಿ ಬಿರ್ಲಾಗಳು ಹಾಗೂ ಶಾಹಿ ಈದ್ಗಾ ಸಮಿತಿಯ ನಡುವೆ ಇತ್ತು. ಈ ಒಪ್ಪಂದವು ಹಿಂದೂಗಳಿಗೆ ಈದ್ಗಾದ ದಕ್ಷಿಣಕ್ಕೆ ಒಂದು ಸಣ್ಣ ತುಂಡು ಭೂಮಿಯನ್ನಷ್ಟೇ ನೀಡಿತು. ಇದೇ ಒಪ್ಪಂದದ ಮೇರೆಗೆ ವಿವಾದಿತ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಬಾರದು; ನಿರ್ಮಾಣಗಳ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮಥುರಾ ಸಿವಿಲ್ ಕೋರ್ಟ್ ತೀರ್ಪು ನೀಡಿತು. ಅಂದರೆ ಈ ಒಪ್ಪಂದದಿಂದ ಹಿಂದೂಗಳು ಮೋಸ ಹೋಗಿದ್ದಾರೆಂದು ಬೇರೆ ಹೇಳಬೇಕಾಗಿಲ್ಲ. ಆಧುನಿಕ ಕೃಷ್ಣ ಜನ್ಮಭೂಮಿ ದೇವಾಲಯವು 1982 ರಲ್ಲಿ ಪೂರ್ಣಗೊಂಡಿತು. ವೃಂದಾವನದ ನಿವಾಸಿ ಮನೋಹರ್ ಲಾಲ್ ಶರ್ಮಾ ಅವರು 1968ರ ಒಪ್ಪಂದವನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಮತ್ತು 1947 ರ ಆಗಸ್ಟ್ 15 ರಂದು ಇದ್ದಂತೆ ಎಲ್ಲ ಪೂಜಾ ಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡುವ "ಧಾರ್ಮಿಕ ಪೂಜಾ ಸ್ಥಳ ಕಾಯಿದೆ - 1991"ನ್ನು ರದ್ದುಗೊಳಿಸುವ ಮನವಿಯನ್ನು ಸಲ್ಲಿಸಿದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ.



          ಶಿವ, ರಾಮ, ಕೃಷ್ಣರು ಈ ದೇಶದ ಅಸ್ಮಿತೆಗಳು. ಮರ್ಯಾದಾ ಪುರುಷೋತ್ತಮನ ಜನ್ಮಸ್ಥಾನದ ವಿವಾದ ಬಗೆಹರಿದು ಮಂದಿರದ ಕಾರ್ಯವೇನೋ ಆರಂಭವಾಗಿದೆ. ಕಾಶಿ ವಿಶ್ವೇಶನ ದೇವಾಲಯ ಹಾಗೂ ಕೃಷ್ಣನ ಜನ್ಮಸ್ಥಾನ ಭಕ್ತರಿಗಾಗಿ ಕಾಯುತ್ತಿವೆ. ಸರಕಾರ, ನ್ಯಾಯಾಲಯಗಳೂ ಇದಕ್ಕೆ ಮನಸ್ಸು ಮಾಡಿ ಮುಂದಡಿಯಿಡಬೇಕಿದೆ. ಮಥುರಾಧೀಶನ ಜನ್ಮಸ್ಥಾನದಲ್ಲೇ ಅವನ ಪ್ರತಿಷ್ಠೆ ಮಧುರವಾಗಿ ನೆರವೇರಲಿ. ಜೊತೆಗೆ ಗೋಪಾಲನ ಭೂಮಿಯಲ್ಲಿ ನಿರ್ಭಯದ ಗೋಪಥವೂ ನಿರ್ಮಾಣವಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ