ಭಾರತದ ಬೌದ್ಧಿಕ ಕ್ಷತ್ರಿಯ ಈ ಸೀತಾರಾಮ
ಪುಸ್ತಕವೊಂದರ ಮುದ್ರಣ ಮುಗಿದು ರಕ್ಷಾಕವಚವನ್ನು ಹಾಕಿಸಲು ಜೋಡಿಸಿ ಇಡಲಾಗಿತ್ತು. ಮುದ್ರಣಾಲಯದ ಕೆಲಸಗಾರರಲ್ಲಿ ಮುಸ್ಲಿಮರೂ ಇದ್ದರು. ಪುಸ್ತಕಕ್ಕೆ ರಕ್ಷಾಕವಚವನ್ನು ಹಾಕುವ ಮುಸ್ಲಿಂ ಹುಡುಗನೊಬ್ಬ ಅದರಲ್ಲಿದ್ದ ಇಸ್ಲಾಮ್, ಹದೀಸ್ ಎಂಬ ಪದಗಳನ್ನು ಕಂಡು ಒಂದು ಪುಸ್ತಕವನ್ನು ತೆಗೆದುಕೊಂಡು ಹೋಗಿ ಇಮಾಮ್ ಒಬ್ಬನ ಕೈಲಿಟ್ಟ! ತಾಸಿನೊಳಗಾಗಿ ಒಂದು ದೊಡ್ಡ ಮತಾಂಧ ಗುಂಪು ಮುದ್ರಣಾಲಯಕ್ಕೆ ಬಂತು. ಲೇಖಕ, ಪ್ರಕಾಶಕರಿಬ್ಬರೂ ಹಿಂದೂಗಳು; ಹಿಂದೂಗಳು ಇಸ್ಲಾಮ್ ಬಗ್ಗೆ ಬರೆದಿದ್ದಾರೆಂದರೆ ಅದು ತಮ್ಮ ಮತದ ನಿಂದನೆಯೇ ಆಗಿರಬೇಕು ಎಂದು ಸದಾ ಭಾವಿಸುವ ಆ ಅಸಹನೀಯ ವರ್ಗ ತಕ್ಷಣವೇ ಮುದ್ರಣಾಲಯಕ್ಕೆ ಬೆಂಕಿ ಹಚ್ಚುವುದಾಗಿ ಘೋಷಿಸಿತು. ಬೆಂಕಿ ಹಚ್ಚುವುದೆಂದರೆ ಅವರಿಗೆ ಆಟವಾಡಿದಂತೆ ನೋಡಿ. ನ್ಯೂಯಾರ್ಕ್, ಪ್ಯಾರಿಸ್, ನೈಜೀರಿಯಾ, ದೆಹಲಿ, ಬೆಂಗಳೂರು ಹೀಗೆ ವಿವಿಧ ಭೂಪ್ರದೇಶದಲ್ಲಿ, ವಿವಿಧ ಸಂಸ್ಕೃತಿ, ಸಂಸ್ಕಾರ, ಕಾನೂನು, ಮತಧರ್ಮಗಳನ್ನು ಪಾಲಿಸುವ ಜನರ ನಡುವಿನಲ್ಲಿ ಎಲ್ಲೇ ಇದ್ದರೂ ಅವರ ಬೆಂಕಿ ಹಚ್ಚುವಿಕೆಯಲ್ಲಿ ವ್ಯತ್ಯಾಸವಾಗದು! ಬೆದರಿದ ಮುದ್ರಣಾಲಯದ ಮಾಲಕ ಪ್ರಕಾಶಕರಿಗೆ ಕರೆ ಮಾಡಿ "ದಯವಿಟ್ಟು ನಿಮ್ಮ ಪುಸ್ತಕ ತೆಗೆದುಕೊಂಡು ಹೋಗಿ ಬಿಡಿ. ಜನರ ಗುಂಪೇ ಜಮೆಯಾಗಿದೆ. ನನ್ನ ಬಳಿ ಕೆಲಸ ಮಾಡುವ ಮುಸ್ಲಿಂ ಹುಡುಗರೇ ಬೆಂಕಿ ಹಚ್ಚಲು ತಯಾರಾಗಿ ನಿಂತಿದ್ದಾರೆ" ಎಂದು ಗೋಗರೆದ. ಪುಸ್ತಕಗಳನ್ನು ತೆಗೆದುಕೊಂಡು ಹೋದ ಪ್ರಕಾಶಕರು, ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡು, ಛಲದಿಂದ ಪುಸ್ತಕವನ್ನು ಪ್ರಕಟಿಸಿಯೇ ಬಿಟ್ಟರು. ಅಸಹನೀಯ ವರ್ಗ ನ್ಯಾಯಾಲಯದ ಬಾಗಿಲು ತಟ್ಟಿತು. ಭಯೋತ್ಪಾದಕರಿಗಾಗಿ ರಾತ್ರೋರಾತ್ರಿ ಬಾಗಿಲು ತೆರೆಯುವ ವ್ಯವಸ್ಥೆ ಇರುವ ನ್ಯಾಯಾಲಯ ನಮ್ಮ ದೇಶದ್ದು! ಇನ್ನು ಇದನ್ನು ಬಿಟ್ಟೀತೇ? ನ್ಯಾಯಾಲಯ ಎಂಟು ಜನರ ತಂಡವನ್ನು ಪುಸ್ತಕದ ಪರಿಶೀಲನೆಗಾಗಿ ನೇಮಿಸಿತು. ದಶಕಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆಯ ಕೊನೆಗೆ, ಪುಣ್ಯಕ್ಕೆ, "ಆ ಪುಸ್ತಕದಲ್ಲಿ ಇಸ್ಲಾಮಿಗೆ ಅವಹೇಳನವಾಗುವಂಥಾದ್ದು ಏನೂ ಇಲ್ಲ. ಪುಸ್ತಕದಲ್ಲಿನ ಅರ್ಥಗಳು ಮೂಲಕ್ಕೆ ನಿಷ್ಠವಾಗಿವೆ. " ಎಂಬ ತೀರ್ಪು ಬಂತು. ಆದರೆ ಮುಸ್ಲಿಮರ ಮತೀಯ ನಂಬಿಕೆಗೆ ಧಕ್ಕೆ ಉಂಟುಮಾಡಿದೆ ಎಂಬ ನೆಪವೊಡ್ಡಿ ಆಗಿನ ಕೇಂದ್ರ ಸರಕಾರ ಆ ಪುಸ್ತಕವನ್ನು ನಿಷೇಧಿಸಿತು. ಈ ದೇಶದಲ್ಲಿ ಹಿಂದೂಗಳು ಅಸಹಿಷ್ಣುಗಳು ಎಂದು ಕಳೆದ ಆರು ವರ್ಷಗಳಿಂದ ಬೊಬ್ಬೆ ಹಾಕಲಾಗುತ್ತಿದೆ. ಆದರೆ ನಿಜವಾದ ಅಸಹಿಷ್ಣುಗಳು ಯಾರು, ನಿಜವಾದ ಅಸಹನೆ ಯಾರಲ್ಲಿದೆ ಎಂದು ಇತಿಹಾಸವನ್ನು, ವರ್ತಮಾನವನ್ನು ಸೆಕ್ಯುಲರ್ ಪರದೆಯನ್ನು ಸರಿಸಿದ ಕಣ್ಣಿನಿಂದ ವೀಕ್ಷಿಸಿದರೆ ಅರಿವಾದೀತು. ಅಂದ ಹಾಗೆ ಆ ಪುಸ್ತಕದ ಹೆಸರು “ ಅಂಡರ್ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್”. ಬರೆದವರು ಶ್ರೀ ರಾಮಸ್ವರೂಪರು. ಛಲ ಬಿಡದ ಆ ಪ್ರಕಾಶಕ ಶ್ರೀ ಸೀತಾರಾಮ ಗೋಯಲ್. ಆಧುನಿಕ ಭಾರತದ ಬೌದ್ಧಿಕ ನವಕ್ಷತ್ರಿಯರು.
ಹರ್ಯಾಣದ ಬಡ ಕುಟುಂಬವೊಂದರಲ್ಲಿ 1921ರ ಅಕ್ಟೋಬರ್ 16ರಂದು ಸೀತಾರಾಮ ಗೋಯಲರ ಜನನವಾಯಿತು. ಹದಿನೆಂಟನೇ ಶತಮಾನದ ಪೂರ್ವಾರ್ಧದಲ್ಲಿ, ಅನಕ್ಷರಸ್ಥರಾಗಿದ್ದರೂ ಹದಿನೆಂಟು ಸಾವಿರ ಪದ್ಯಗಳನ್ನು ರಚಿಸಿ ಹಾಡುತ್ತಿದ್ದ ಸಂತ ಗರೀಬದಾಸರ ಪ್ರಭಾವ ಗೋಯಲರ ಪೂರ್ವಿಕರ ಮೇಲಾಗಿತ್ತು. ಆ ಪದ್ಯಗಳಿಂದಲೇ ಗೋಯಲರ ಪೂರ್ವಿಕರ ಸುಪ್ರಭಾತವಾಗುತ್ತಿತ್ತು. ಅವರ ತಂದೆ ಓದುತ್ತಿದ್ದ ಗುರು ಗ್ರಂಥ್ ಸಾಹೇಬ್, ಕಬೀರ, ಗುರು ನಾನಕ್, ರವಿದಾಸ್, ನಾಮದೇವ, ಧನ್ನ ಮುಂತಾದ ಸಂತರ ಕತೆಗಳು ಬಾಲಕ ಗೋಯಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟವು. ಅಂತೆಯೇ ಸೂಫಿ ಸಂತರ ಕತೆಗಳೂ ಅವರನ್ನು ಪ್ರಭಾವಿಸಿದವು. ಕ್ರಾಂತಿಕಾರಿ ಜತೀಂದ್ರನಾಥ ದಾಸರ ಪಾರ್ಥಿವ ಶರೀರದ ಮೆರವಣಿಗೆ, ಉಪ್ಪಿನ ಸತ್ಯಾಗ್ರಹ, ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗರ ಬಲಿದಾನಗಳು ಬಾಲಕ ಗೋಯಲ್‍ಗೆ ನಮ್ಮ ದೇಶಕ್ಕೊದಗಿರುವ ದುಃಸ್ಥಿತಿಯನ್ನು ಅರಿವಿಗೆ ತಂದುಕೊಟ್ಟಿತು.
ಗೋಯಲರಿದ್ದ ಹಳ್ಳಿಯಲ್ಲಿ ಆರ್ಯ ಸಮಾಜದ ಪ್ರಭಾವ ಬಹಳವಿತ್ತು. ನಿರ್ಗುಣ ಪರಂಪರೆಯ ಗರೀಬದಾಸರ ಶಿಷ್ಯರಾದ ಕಾರಣ ಆ ಪರಂಪರೆಯ ಪ್ರಭಾವವೇ ಅವರ ಪರಿವಾರದ ಮೇಲೆ ಬಹಳವಿದ್ದು ಗಂಡಸರು ಮೂರ್ತಿಪೂಜೆಯಲ್ಲಿ ಅಷ್ಟಾಗಿ ಭಾಗವಹಿಸುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಾಗಿ ಜೈಲು ವಾಸ ಅನುಭವಿಸಿದ್ದಲ್ಲದೆ, ಹರಿಜನೋದ್ಧಾರಕ್ಕಾಗಿ ಶ್ರಮಿಸುತ್ತಿದ್ದ ಅವರ ಸಮುದಾಯದ ಓರ್ವ ವ್ಯಕ್ತಿಯ ಜೀವನಾದರ್ಶಗಳು ಗೋಯಲರ ಮೇಲೆ ಗಾಢ ಪ್ರಭಾವನ್ನುಂಟುಮಾಡಿತು. "ಸತ್ಯಾರ್ಥ ಪ್ರಕಾಶ"ದ ಪ್ರಖರ ವಿಚಾರಗಳು ಗೋಯಲರ ವಿಚಾರ ಧಾರೆಗೆ ಇನ್ನಷ್ಟು ಪಕ್ವತೆಯನ್ನು ತಂದುಕೊಟ್ಟಿತು. ರೋಮಾರೋಲಾ ಬರೆದ ಶ್ರೀರಾಮಕೃಷ್ಣ ಪರಮಹಂಸರ, ವಿವೇಕಾನಂದರ ಜೀವನ ಚರಿತ್ರೆಗಳು ಅವರನ್ನು ಅಧ್ಯಾತ್ಮದತ್ತ ಸೆಳೆದವು. ನ್ಯೂ ಟೆಸ್ಟ್ ಮೆಂಟಿನ ಕ್ರಿಸ್ತನ ಉಪದೇಶದ ಭಾಗ ಅವರಿಗೆ ಎಷ್ಟು ಇಷ್ಟ ಆಯಿತೆಂದರೆ ಆತ ಕ್ರಿಸ್ತನ ಭಾವಚಿತ್ರವೊಂದನ್ನು ತಂದು ತನ್ನ ಕೊಠಡಿಯಲ್ಲಿ ಪರಮಹಂಸ, ವಿವೇಕಾನಂದ, ರಾಮತೀರ್ಥರ ಚಿತ್ರಗಳ ಜೊತೆ ತೂಗು ಹಾಕಿದರು!
ಓದುವ ಹುಚ್ಚಿನ ಜೊತೆಗೆ ಗಾಂಧೀವಾದದ ಹುಚ್ಚೂ ಬಾಲಕ ಗೋಯಲರಿಗೆ ಹತ್ತಿತು. ವಿದ್ಯಾರ್ಜನೆಯ ದಿನಗಳಲ್ಲಿ ಗಾಂಧೀವಾದಿ ಎಂದು ಕರೆಸಿಕೊಳ್ಳಲು ಅವರಿಗೆ ಹೆಮ್ಮೆಯಾಗುತ್ತಿತ್ತು. ಹರಿಜನ ಆಶ್ರಮವೊಂದರಲ್ಲಿ ಕೆಲವು ತಿಂಗಳು ಸ್ವಯಂಸೇವಕನಾಗಿಯೂ ದುಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿಚಯ ಅವರಿಗಾದದ್ದೂ ಇದೇ ಸಮಯದಲ್ಲೇ. ಗಾಂಧಿ ಸಮೂಹ, ಸಮಾಜವಾದವನ್ನು ಅಪ್ಪಿಕೊಂಡಾಗ ಗೋಯಲರಿಗೆ ಭ್ರಮನಿರಸನವಾಯಿತು. ಹೆರಾಲ್ಡ್ ಲಸ್ಕಿಯ “ಕಮ್ಯೂನಿಸಂ”, ಎಡ್ಗರ್ ಸ್ನೋ ರಚಿಸಿದ “ರೆಡ್ ಸ್ಟಾರ್ ಓವರ್ ಚೈನಾ” ಅವರನ್ನು ಎಡಪಂಥೀಯತೆಯತ್ತ ಸೆಳೆಯಿತು. ಮಾರ್ಕ್ಸನ "ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ” ಓದಿದ ಮೇಲಂತೂ ಉಸಿರು ಬಿಗಿಹಿಡಿಯುವಂತಾಯಿತವರಿಗೆ. ಶ್ರೇಣೀಕೃತ ವ್ಯವಸ್ಥೆಯನ್ನು ತೊಡೆದುಹಾಕಿ ಸರ್ವಸಮಾನತೆ ಮೂಡಿಸಬೇಕು ಎಂಬ ಇಚ್ಛೆ ಅವರಲ್ಲಿ ಬಲವಾಗುತ್ತಾ ಸಾಗಿತು. ಬಾಲ್ಯದಲ್ಲಿ ಗರೀಬ್‍ದಾಸರ ನಿರ್ಗುಣ ಪಂಥದ ಭಕ್ತರಾಗಿದ್ದ ಆತ ಇಪ್ಪತ್ತೆರಡರ ವಯಸ್ಸಿನ ಹೊತ್ತಿಗೆ ಕಮ್ಯೂನಿಸ್ಟಿನ ಭಕ್ತರಾಗಿ ಬದಲಾಗಿದ್ದರು!
ಪ್ರತ್ಯೇಕ ರಾಷ್ಟ್ರಕ್ಕಾಗಿ ಹಪಹಪಿಸುತ್ತಿದ್ದ ಮುಸ್ಲಿಮ್ ಲೀಗ್, ತನ್ನ ಕಾರ್ಯ ಸಾಧನೆಗಾಗಿ 1946ರ ಆಗಸ್ಟ್ 16ರಂದು “ನೇರ ಕಾರ್ಯಾಚರಣೆ ದಿನ” ಹೆಸರಲ್ಲಿ ಬಂಗಾಳದಲ್ಲಿ ರಕ್ತದ ಹೊಳೆ ಹರಿಸಿತು. ಹಿಂದೂಗಳ ಮನೆ-ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಹಿಂದೂ ಹೆಂಗಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು. ಅಬಾಲವೃದ್ಧರಾದಿಯಾಗಿ ಹಿಂದೂಗಳನ್ನು ಕತ್ತರಿಸಿ ಬೀದಿ ಬೀದಿಗಳಲ್ಲಿ ಚೆಲ್ಲಲಾಯಿತು. ರಸ್ತೆರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿಹೋದವು. ಬಂಗಾಳದ ನದಿ, ಕಾಲುವೆಗಳು ರಕ್ತದಿಂದ ಕೆಂಪಾದವು. ಮೂರು ದಿನಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಹಿಂದೂಗಳು ಕೊಲೆಯಾಗಿ ಹೋದರು. ಲಕ್ಷಕ್ಕೂ ಹೆಚ್ಚುಮಂದಿ ಪ್ರಾಣ-ಮಾನ ಭಯದಿಂದ ಕೋಲ್ಕತ್ತಾವನ್ನು ಬಿಟ್ಟು ತೆರೆಳಬೇಕಾಯಿತು. ಗುಂಪು ಗಲಭೆ, ದೊಂಬಿಗಳ ರಕ್ಕಸನೃತ್ಯಕ್ಕೆ ಗೋಯಲ್ ಸಾಕ್ಷಿಯಾದರು. ನಾಸ್ತಿಕನಾದರೂ ಮುಸ್ಲಿಮರು ಅವರಿಗೇನು ರಿಯಾಯಿತಿ ತೋರಲಿಲ್ಲ. ಉಳಿದ ಹಿಂದೂಗಳಂತೆ ಅವರು ಕೂಡ ತನ್ನ ಹೆಂಡತಿ ಮತ್ತು ಒಂದು ವರ್ಷದ ಮಗುವನ್ನು ಎತ್ತಿಕೊಂಡು ಗಲ್ಲಿಯಿಂದ ಗಲ್ಲಿಗೆ, ಕೇರಿಯಿಂದ ಕೇರಿಗೆ ಜೀವಭಯದಿಂದ ಓಡಬೇಕಾಯಿತು. ಒಬ್ಬ ಗೋಪಾಲ್ ಮುಖ್ಯೋಪಾಧ್ಯಾಯರು ಇಲ್ಲದಿರುತ್ತಿದ್ದರೆ ಕೋಲ್ಕತ್ತಾ, ಹೂಗ್ಲಿ ಸೇರಿದಂತೆ ಬಂಗಾಳದ ಬಹುಭಾಗ ಇಸ್ಲಾಮ್ ಮಯವಾಗಿ ಪಾಕಿಸ್ತಾನದ ಭಾಗವಾಗಿ ಬಿಡುತ್ತಿದ್ದವು!
ಗೋಯಲರ ವೈಚಾರಿಕ ವಿಕಾಸಕ್ಕೆ ಕಾರಣರಾದವರು ಅವರ ಸ್ನೇಹಿತ ರಾಮಸ್ವರೂಪರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಜೊತೆಯಾಗಿದ್ದ ಈ ಇಬ್ಬರೂ ದಿಗ್ಗಜಗಳ ನಡುವೆ ಘನಘೋರ ಚರ್ಚೆಗಳಾಗುತ್ತಿದ್ದವು. ರಾಮಸ್ವರೂಪರು ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಪ್ರಚಲಿತ ಹಾಗೂ ಐತಿಹಾಸಿಕ ಘಟನೆಗಳನ್ನು ವಿಶ್ಲೇಷಿಸುತ್ತಿದ್ದರೆ, ಗೋಯಲರ ವಿಚಾರ ವಿಮರ್ಷೆಗೆ ಕಮ್ಯೂನಿಸ್ಟ್ ಸಿದ್ಧಾಂತವೇ ಅಡಿಪಾಯವಾಗಿತ್ತು. ಗೋಯಲ್ ಯಾವುದನ್ನೂ ಕುರುಡಾಗಿ ನಂಬುತ್ತಿರಲಿಲ್ಲ, ಒಪ್ಪುತ್ತಿರಲಿಲ್ಲ. ಆಳವಾದ ಅಧ್ಯಯನ, ಪರಾಮರ್ಶೆಗಳಿಂದಲೇ ಖಚಿತ ಅಭಿಪ್ರಾಯಕ್ಕೆ ಬರುತ್ತಿದ್ದರು. 1948ರ ವೇಳೆಗೆ ಕಮ್ಯೂನಿಸ್ಟ್ ಪಕ್ಷವನ್ನೇ ಸೇರಲು ಹೊರಟಿದ್ದ ಗೋಯಲ್‍ರಿಗೆ, ಕಮ್ಯೂನಿಸ್ಟ್ ಪಕ್ಷ ನಿಷೇಧವಾದ ಕಾರಣ ಅದು ಸಾಧ್ಯವಾಗಲಿಲ್ಲ. ವಿಧಿ ಅವರಿಂದ ಬೇರೊಂದನ್ನು ಬಯಸಿತ್ತು. ಅವರ ಸಂಸ್ಕೃತದ ಪ್ರಾಧ್ಯಾಪಕರೊಬ್ಬರಿಂದ “ಆರ್ಯರು ಭಾರತವನ್ನು ಆಕ್ರಮಿಸಿ ದ್ರಾವಿಡರನ್ನು ದಕ್ಷಿಣಕ್ಕೆ ಓಡಿಸಿದರು ಎಂಬ ಪಶ್ಚಿಮದ ವಾದಸರಣಿಯು ಮೋಸದ್ದು" ಎಂದು ಅರಿವಾದಾಗ ಗೋಯಲ್ ಆಘಾತಕ್ಕೆ ಒಳಗಾಗಿಬಿಟ್ಟರು. ಬ್ರಿಟಿಷರು ಬರೆಸಿ ಶಾಲೆಗಳಲ್ಲಿ ಉರು ಹೊಡೆಸುತ್ತಿದ್ದ ಸುಳ್ಳು ಇತಿಹಾಸ ಉಂಟುಮಾಡಿದ್ದ ಮೋಡಿಯಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ.
ಮಾನವೀಯತೆಯನ್ನು ಮರೆತ ಕಮ್ಯೂನಿಸ್ಟ್ ಸ್ಟಾಲಿನ್ನನ ರಷ್ಯಾದ ಪ್ರಭುತ್ವ ನಿರ್ದೇಶಿತ ಬಂಡವಾಳಶಾಹೀ ಭಯೋತ್ಪಾದನೆಯ ಹುನ್ನಾರ ಅವರಿಗೆ ಈಗ ಅರ್ಥವಾಗಿತ್ತು. ಇಂತಹಾ ವೈಚಾರಿಕ ಗೊಂದಲದ ಸ್ಥಿತಿಯಲ್ಲಿ ಗೋಯಲರಿಗೆ ಮಾರ್ಗದರ್ಶನ ಮಾಡಿದ್ದು ಗೆಳೆಯ ರಾಮಸ್ವರೂಪರ ವಿಚಾರಧಾರೆಯೇ. ತಾನು ಇದುವರೆಗೆ ಕಲಿತದ್ದು, ನಂಬಿದ್ದೆಲ್ಲವೂ ಕಮ್ಯುನಿಸ್ಟರು ತಮ್ಮ ಸಿದ್ಧಾಂತ ಪ್ರಸಾರಕ್ಕಾಗಿ ಸೃಷ್ಟಿಸಿದ ಕಟ್ಟುಕತೆಗಳು ಎಂಬುದನ್ನು ತಿಳಿದ ಮೇಲೆ ಗೋಯಲ್ ಮರು ಅಧ್ಯಯನಕ್ಕೆ ಕೂತರು. ಗೋಯಲ್‍ರ “ಹೌ ಐ ಬಿಕೇಮ್ ಎ ಹಿಂದು” ಕೃತಿಯು ಅವರ ಈ ವೈಚಾರಿಕ ಪಯಣವನ್ನು ಕಟ್ಟಿಕೊಟ್ಟಿದೆ. ಆರ್ಯಸಮಾಜದಿಂದ ಗಾಂಧೀವಾದದೆಡೆಗೆ, ಗಾಂಧೀವಾದದಿಂದ ಎಡವಾದಕ್ಕೆ, ಅಲ್ಲಿಂದ ಭಾರತೀಯತೆಗೆ ಗೋಯಲರ ಪಯಣದ ಹಾದಿಯನ್ನು ಈ ಕೃತಿ ಬಹು ಚೆನ್ನಾಗಿ ಚಿತ್ರಿಸಿದೆ.
ವಸ್ತುನಿಷ್ಟವಾಗಿ ಬರೆಯುವವರೇ ವಿರಳ. ಅದರಲ್ಲೂ ಸೆಕ್ಯುಲರುಗಳು ಮುಚ್ಚಿಡುವ ಸತ್ಯವನ್ನು ತೆರೆದಿಡುವವರಂತೂ ಮತ್ತೂ ವಿರಳ. ಆ ವಿರಳಾತಿ ವಿರಳರಲ್ಲಿ ಇಂದಿಗೂ ಭಯಾನಕವೆಂದೇ ಸಮಾಜ, ಸರಕಾರ ಭಾವಿಸುವ ಸತ್ಯಗಳನ್ನು ನೇರವಾಗಿ, ಸರಳ ಭಾಷೆಯಲ್ಲಿ ಬರೆದವರಲ್ಲಿ ಸೀತಾರಾಮ ಗೋಯಲ್ ಪ್ರಮುಖರು. ಕೃತಕತೆಯ ನಯನಾಜೂಕುಗಳೂ ಅವರದ್ದಲ್ಲ. ಸತ್ಯವನ್ನು ಬರೆದ ಮೇಲೆ ಅದರಿಂದ ತನಗೊದಗಬಹುದಾದ ಅಪಾಯದ ಅರಿವಿದ್ದೂ ನಿರ್ಭೀತಿಯಿಂದ ಸತ್ಯ ಹೇಳಿದ ಬೌದ್ಧಿಕ ನಿಷ್ಠುರ ಅವರು. ಈ ಕಾರಣದಿಂದಲೇ ಅವರ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಲು ಹಿಂದು ಮುಂದು ನೋಡಿದವರೇ ಹೆಚ್ಚು. ಆಗ ಗೋಯಲ್ ತಮ್ಮ ಗೆಳೆಯರೊಬ್ಬರ ನೆರವಿನಿಂದ ಭಾರತಿ ಸಾಹಿತ್ಯ ಸದನ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಪುಸ್ತಕಗಳನ್ನು ಪ್ರಕಟಿಸತೊಡಗಿದರು. ಭಾರತವನ್ನು ಆಕ್ರಮಿಸಿ ಆಳಿದವರ ವಿಕೃತಿಗಳನ್ನು ಎಡವಾದಿಗಳು ತಿರುಚಿ ವೈಭವೀಕರಿಸಿದುದನ್ನು, ಗೋಯಲ್ ಐತಿಹಾಸಿಕ ದಾಖಲೆಗಳನ್ನಿಟ್ಟು ಬಯಲಿಗೆಳೆದರು. ಆರ್ಯ ಆಕ್ರಮಣವಾದದ ಪೊಳ್ಳುತನವನ್ನು ಸಾಕ್ಷಿ ಸಮೇತ ಬಯಲಿಗೆಳೆದರು. 1982ರಲ್ಲಿ ರಾಮಸ್ವರೂಪರೊಂದಿಗೆ, ದೆಹಲಿಯಲ್ಲಿ “ವಾಯ್ಸ್ ಆಫ್ ಇಂಡಿಯಾ” ಸಂಸ್ಥೆಯನ್ನು ಸ್ಥಾಪಿಸಿದ ಗೋಯಲ್ ಅದರ ಮುಖಾಂತರ ಇತಿಹಾಸದ ನಿಜ ಚಿತ್ರಣವನ್ನು ದಾಖಲಿಸಿದರು. ಕೆ.ಎಸ್. ಲಾಲ್, ಕೊನ್ರಾಡ್ ಎಲ್ಸ್ಟ್, ಡೇವಿಡ್ ಫ್ರಾಲಿ (ವಾಮದೇವ ಶಾಸ್ತ್ರೀ), ಶ್ರೀಕಾಂತ ತಲಗೇರಿ, ನವರತ್ನ ಎಸ್. ರಾಜಾರಾಮ್ ಮುಂತಾದ ವಿದ್ವಾಂಸರ ಮಹತ್ತ್ವದ ಗ್ರಂಥಗಳು ಈ ಸಂಸ್ಥೆಯ ಮುಖಾಂತರ ಬೆಳಕು ಕಂಡವು.
“ಕಮ್ಯುನಿಸ್ಟ್ ಪಾರ್ಟಿ ಇನ್ ಚೈನಾ – ಎ ಸ್ಟಡಿ ಇನ್ ಟ್ರೀಸನ್”, “ದ ಚೈನಾ ಡಿಬೇಟ್ – ಹೂಮ್ ಷಲ್ ವಿ ಬಿಲೀವ್”, “ಚೈನಾ ಈಸ್ ರೆಡ್ ವಿದ್ ಪೆಸೆಂಟ್ಸ್ ಬ್ಲಡ್”, “ರೆಡ್ ಬ್ರದರ್ ಆರ್ ಯೆಲ್ಲೋ ಸ್ಲೇವ್?”, “ಮೈಂಡ್ ಮರ್ಡರ್ ಇನ್ ಮಾವೋ ಲ್ಯಾಂಡ್” ಮುಂತಾದ ಪುಸ್ತಕಗಳನ್ನು 1953ರಲ್ಲೇ ಬರೆದು ಭಾರತದ ಮುಂದಿನ ಶತ್ರು ಚೀನಾ ಎನ್ನುವುದನ್ನು ಸ್ಪಷ್ಟ ದನಿಯಲ್ಲಿ ಆತ ಹೇಳಿದ್ದರು. "ಮಾರ್ಕ್ಸ್ ವಾದ ಹಾಗೂ ಅದರಿಂದ ಹುಟ್ಟಿಕೊಂಡ ವಾದಗಳೆಲ್ಲವೂ ಸೆಕ್ಯುಲರಿಸಮ್ಮಿನ ಇನ್ನೊಂದು ರೂಪ; ಕಮ್ಯುನಿಸಂ ಎಂಬುದು ಮಿದುಳು, ಹೃದಯಗಳಿಲ್ಲದ ರಾಕ್ಷಸ. ರಿಲಿಜನ್‍ಗಳ ಅತ್ಯಂತ ಆಳದಲ್ಲಿರುವ ಮೂಲಭೂತ ಗುರಿ ಒಂದೇ – ವಿಸ್ತರಣೆ. ಚೀನಾದಲ್ಲಿ ಕಮ್ಯುನಿಸ್ಟ್ ಸರಕಾರ ಮಾಡುತ್ತಿರುವುದೂ ಅದನ್ನೇ. ಮತವನ್ನು ಅಫೀಮು ಎನ್ನುತ್ತಾ, ಹಿಂದುತ್ವವನ್ನು ಮುಕ್ತವಾಗಿ ದ್ವೇಷಿಸುತ್ತಾ ಇಸ್ಲಾಂ ಹಾಗೂ ಕ್ರೈಸ್ತ ಮತಗಳೊಟ್ಟಿಗೆ ಗುಪ್ತ ಪ್ರಣಯ ನಡೆಸುವ ನಾಚಿಕೆಗೇಡಿನ ಮತವೇ ಮಾರ್ಕ್ಸ್ ವಾದ. ಈ ಮೂರರ ಮೂಲ ಬೈಬಲ್ಲಿನಲ್ಲೇ ಇದೆ. ಲೆನಿನ್, ಸ್ಟಾಲಿನ್, ಮಾವೋಗಳು ನಡೆಸಿದ ಹತ್ಯಾಕಾಂಡದ ಬಗೆಗೆ ಚಕಾರ ಎತ್ತದವರು ಉಳಿದೆರಡು ಮತಗಳ ದೌರ್ಜನ್ಯವನ್ನೂ ತಡೆಯುವವರಲ್ಲ. ಹಿಂದೂಗಳನ್ನು ಎದುರಿಸಬೇಕಾಗಿ ಬಂದಾಗ ಇವು ಮೂರೂ ಪರಸ್ಪರ ಕೈಜೋಡಿಸುತ್ತವೆ." ಎಂದು ಸ್ಪಷ್ಟ ಶಬ್ಧಗಳಲ್ಲಿ ಮಾರ್ಕ್ಸ್ ವಾದದ ಹಾಗೂ ಅದರ ಜೊತೆ ಕೈಜೋಡಿಸಿರುವ ಇಸ್ಲಾಂ, ಕ್ರೈಸ್ತ ಮತಾಂಧತೆಯ ಕುತಂತ್ರವನ್ನು ಬಯಲಿಗೆಳೆದಿದ್ದರು.
ಅಂತರ್ಯದಲ್ಲಿ ಕಮ್ಯೂನಿಷ್ಟನಾಗಿದ್ದು, ರಷ್ಯಾದ ಸಮಾಜವಾದೀ ಆರ್ಥಿಕ ನೀತಿಯನ್ನು ಭಾರತದಲ್ಲಿ ಹೇರಿ ಈ ದೇಶವನ್ನು ಸರ್ವನಾಶಗೈದ ನೆಹರೂರ ಆರ್ಥಿಕ ನೀತಿಯನ್ನು ಖಂಡತುಂಡವಾಗಿ ವಿರೋಧಿಸಿದವರಲ್ಲಿ ಗೋಯಲ್ ಅಗ್ರಗಣ್ಯರು. ನೆಹರೂ ಅವರ ಕಮ್ಯೂನಿಸ್ಟ್ ಪ್ರೀತಿ, ರಷ್ಯಾ- ಚೀನಾದ ಮೇಲಿನ ಕುರುಡು ನಂಬಿಕೆ, ಅದರಿಂದಾಗಿ ದೇಶಕ್ಕಾದ ನಷ್ಟ, ಪಾಕಿಸ್ತಾನದ ಜೊತೆಗಿನ ಅವರ ಚೆಲ್ಲಾಟ ಕುರಿತಂತೆ ಆರ್ಗನೈಸರ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಗೋಯಲ್ ಬರೆದರು. ಇದೇ ಕಾರಣಕ್ಕೆ 62ರ ಚೀನಾ ಯುದ್ಧದ ಸಮಯದಲ್ಲಿ ಗೋಯಲರನ್ನು ಜೈಲಿಗಟ್ಟಿದ್ದರು ನೆಹರೂ. ಮಾತ್ರವಲ್ಲ ಅವರ ಪಾಸ್ ಪೋರ್ಟ್ ಅರ್ಜಿಯನ್ನೂ ತಿರಸ್ಕರಿಸುವಂತೆ ಆದೇಶಿಸಿದ್ದರು. ಕಮ್ಯೂನಿಸಮ್ಮನ್ನು ವಿರೋಧಿಸಿದ್ದಕ್ಕಾಗಿ ನೆಹರೂ ಆಡಳಿತದ ಕೆಂಗಣ್ಣಿಗೆ ಗುರಿಯಾಗಿ ಬದುಕುಳಿಯಲು ಅವರು ಭಾರೀ ಹೋರಾಟವನ್ನೇ ಮಾಡಬೇಕಾಯಿತು.
"ಹಿಂದೂ ಧರ್ಮಶಾಸ್ತ್ರಗಳು ಆತತಾಯಿಗಳನ್ನು ಶಿಕ್ಷಿಸು ಎನ್ನುತ್ತವೆ. ಆದರೆ ಸೆಮೆಟಿಕ್ ಮತಗಳಲ್ಲಿ ಅನ್ಯ ಮತೀಯರನ್ನು ಕೊಲ್ಲುವ, ಅವರ ಆಸ್ತಿಗೆ ಬೆಂಕಿಯಿಕ್ಕುವ, ಅವರ ಸ್ತ್ರೀಯರನ್ನು ಅಪಹರಿಸಿ ಅತ್ಯಾಚಾರಗೈಯುವ, ಅವರ ಭೂಮಿಯನ್ನು ಕಬಳಿಸುವವನನ್ನು ಹೊಗಳಿ ಆತನಿಗೆ ಸ್ವರ್ಗದಲ್ಲಿ ಸಿಗುವ ಸವಲತ್ತುಗಳನ್ನು ವರ್ಣಿಸುತ್ತವೆ. ಅಂತಹುವುದಕ್ಕೆ ಬೆಂಬಲ ಕೊಡುವವರನ್ನೇ ಸೂಫಿಗಳು, ಸಾಧುಗಳು, ಪ್ರವಾದಿಗಳು ಎಂಬ ಬಿರುದುಗಳಿಂದ ವರ್ಣಿಸಲಾಗುತ್ತದೆ. ಯಾರು ಇವುಗಳನ್ನು ವಿರೋಧಿಸುತ್ತಾರೋ ಅವರನ್ನು ಶಿಕ್ಷಿಸಬೇಕು ಎಂದು ಈ ಮತಗ್ರಂಥಗಳು ಹೇಳುತ್ತವೆ. ಅವರ ಆಚರಣೆಗಳನ್ನು ಗುರುತಿಸಿದ ಹಿಂದೂಗಳಿಗೆ ಅವುಗಳ ಹಿಂದಿರುವ ಉದ್ದೇಶಗಳು ಗೋಚರಿಸಲೇ ಇಲ್ಲ. ಅವರ ಈ ಉಗ್ರ ನಡವಳಿಕೆಗಳು ಅವರ ಗ್ರಂಥಗಳಲ್ಲಿ ಬೋಧಿಸಲ್ಪಟ್ಟಿಲ್ಲ, ನಿಜವಾದ ಇಸ್ಲಾಂ, ಕ್ರಿಸ್ತ ಚಿಂತನೆಗಳನ್ನು ಅವರಿಗೆ ಹೇಳಿದಲ್ಲಿ ಅವರನ್ನು ಸರಿದಾರಿಗೆ ತರಬಹುದು ಎನ್ನುವ ವಿಚಾರಗಳನ್ನು ಕೆಲವು ಹಿಂದೂ ನಾಯಕರೇ ಹಿಂದೂಗಳ ತಲೆಯಲ್ಲಿ ತುಂಬಿದರು. ಇಂತಹಾ ವಿಚಿತ್ರ ಭ್ರಮೆಯ ಪ್ರಮುಖ ಮೂರ್ತಿವೆತ್ತ ರೂಪವೇ ಗಾಂಧಿ! ಈ ಭ್ರಮೆಯ ಮುಂದುವರಿದ ರೂಪವೇ ಇಂದಿನ "ಸರ್ವಧರ್ಮ ಸಮಭಾವದ ಸೆಕ್ಯುಲರಿಸಂ"! ಅಲ್ಲದೇ ಕ್ರೈಸ್ತ, ಇಸ್ಲಾಮ್ ಮತಗಳ ಕುರುಡು ನಂಬಿಕೆಗಳಿಗೆ ದೈವತ್ವವನ್ನೂ ಆರೋಪಿಸಲಾಯಿತು. ಅವುಗಳನ್ನು ಪ್ರಶ್ನಿಸಿದವರನ್ನು ಕಾನೂನಿನ ಕುಣಿಕೆಯಲ್ಲಿ ಬಿಗಿಯಲಾಯಿತು". ಇಂತಹಾ ವಿಶ್ಲೇಷಣೆ ಗೋಯಲರಲ್ಲದೆ ಮತ್ಯಾರು ಮಾಡಲು ಸಾಧ್ಯ?
ರಾಷ್ಟ್ರೀಯತೆಯ ದನಿಯನ್ನು ಬಲಗೊಳಿಸಲು ಶಿವಾಜಿಯ ಕುರಿತು ಪುಸ್ತಕ ಬರೆದ ಮೊದಲಿಗರು ಆತ. ಸೆಮೆಟಿಕ್ ಮತಗಳನ್ನು ವಿಶ್ಲೇಷಿಸುತ್ತಾ ಗೋಯಲ್ ಸಾಲು ಸಾಲು ಪುಸ್ತಕಗಳನ್ನೇ ಬರೆದರು. ಭಾರತದಲ್ಲಿನ ಸೆಕ್ಯುಲರಿಸಮ್ ಹೇಗೆ ಇವುಗಳೊಂದಿಗೆ ಸೇರಿ ಹಿಂದೂಗಳಿಗೆ ಅನ್ಯಾಯವೆಸಗಿ ಭಾರತವನ್ನು ಸಾಂಸ್ಕೃತಿಕ, ಧಾರ್ಮಿಕ ಹಾಗೂ ನೈತಿಕವಾಗಿ ದುರ್ಬಲವಾಗಿಸುತ್ತಿದೆ ಎನ್ನುವುದನ್ನು ಅವರಷ್ಟು ನೇರವಾಗಿ ವಿಶ್ಲೇಷಿಸಿದವರಿಲ್ಲ. ಮುಸ್ಲಿಂ ಪ್ರತ್ಯೇಕತಾವಾದಕ್ಕೆ ಕಾರಣಗಳು, ಅವುಗಳ ಪರಿಣಾಮಗಳನ್ನು ಕುರಿತು ಬರೆಯುವಾಗ ಮುಸ್ಲಿಂ ರಾಜರುಗಳು, ಸೂಫಿ ಸಂತರು, ಮುಸ್ಲಿಂ ರಾಜಕಾರಣಿಗಳು, ಕಾಂಗ್ರೆಸ್ಸಿನ ಒಳಗಿದ್ದು ಭಾರತೀಯತೆಯ ಸೋಗು ಹಾಕಿದ ಎಲ್ಲಾ ಮತಾಂಧರ ಜನ್ಮ ಜಾಲಾಡಿದರು. ಮುಚ್ಚು ಮರೆ ಮಾಡದೇ ಜಿಹಾದ್ ಬಗ್ಗೆ ನೇರವಾಗಿ ಹೇಳಿಕೊಳ್ಳುತ್ತಿದ್ದ ಮತಾಂಧ ಪಡೆ ಆಧುನಿಕ ವೈಚಾರಿಕತೆ ಬೆಳೆದಂತೆ ಹೇಗೆ ಮೃದು ಮಾತಿನ ನಾಟಕೀಯ ಅಲಂಕಾರವನ್ನು ತನ್ನದಾಗಿಸಿಕೊಂಡು ಹಿಂದೂಗಳನ್ನು ಯಾಮಾರಿಸುತ್ತಿದೆ ಎನ್ನುವುದನ್ನು ವಿವರವಾಗಿ ಬರೆದರು. ಸೆಕ್ಯುಲರಿಸಮ್ಮಿನ ಅಡಿಯಲ್ಲಿ ಹೇಗೆ ಹಿಂದೂಗಳು ಮುಸ್ಲಿಮರಿಗಿಂತ, ಕ್ರೈಸ್ತರಿಗಿಂತ ಕಡಿಮೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎನ್ನುವುದನ್ನೂ ವಿಮರ್ಷಿಸಿದರು. ರಾಜಕೀಯವಾಗಿ ಈ ಎಲ್ಲಾ ಶಕ್ತಿಗಳು ಬಲಿಷ್ಟವಿದ್ದ ಕಾಲದಲ್ಲಿ ಹೀಗೆ ನೇರವಾಗಿ ಬರೆಯುವುದು ಅಷ್ಟು ಸುಲಭವೂ ಆಗಿರಲಿಲ್ಲ ಎನ್ನುವುದನ್ನು ಗಮನಿಸಿದರೆ ಈ ಬರಹಗಳ ಮಹತ್ವ ಅರ್ಥವಾದೀತು. ಅದರಲ್ಲೂ ಪ್ರವಾದಿಯ ಬಗ್ಗೆ ಒಂದಕ್ಷರ ನುಡಿದರೆ ಕತ್ತು ಕೊಯ್ಯುವ ಮತಾಂಧರಿರುವಾಗ, ಸರ್ಕಾರಗಳು, ವ್ಯವಸ್ಥೆ ಅವರ ಪರವಾಗಿರುವಾಗ, ನ್ಯಾಯಾಲಯಗಳ ಪ್ರಕ್ರಿಯೆ ಆಮೆಗತಿಯಲ್ಲಿರುವಾಗ ಅವರ ಈ ಕಾರ್ಯ ಹರಸಾಹಸವೇ ಸರಿ. ಅಂಡರ್ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್ ಪ್ರಕಟಿಸಿದ ಮೇಲೆ ಹದಿನೈದು ವರ್ಷ ನ್ಯಾಯಾಲಯಕ್ಕೆ ಅವರು ಅಲೆಯಬೇಕಾಯಿತು. ಬಳಿಕವೂ ಸರಕಾರದಿಂದ ಅದರ ಮೇಲಿದ್ದ ನಿಷೇಧ ಕೊನೆಗೊಳ್ಳಲಿಲ್ಲ. "ದ ಕಲಕತ್ತಾ ಕುರಾನ್ ಪೆಟಿಷನ್” ಪ್ರಕಟಿಸಿದಾಗ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಕೂಗೆದ್ದಿತು. “ದ ಡೆಡ್ ಹ್ಯಾಂಡ್ ಆಫ್ ಇಸ್ಲಾಮ್” ಪುಸ್ತಕದ ಕುರಿತಂತೆ ಇಲ್ಲಿನ ವ್ಯವಸ್ಥೆ ಹನ್ನೊಂದು ವರ್ಷ ಅವರನ್ನು ನ್ಯಾಯಾಲಯಕ್ಕೆ ಅಲೆದಾಡಿಸಿತು.
"ಕ್ರೈಸ್ತಮತವು ಬಲಶಾಲಿ ಪರಭಕ್ಷಕ ಸಾಮ್ರಾಜ್ಯಶಾಹೀ ವ್ಯವಸ್ಥೆ ಅಷ್ಟೇ. ಅದು ಎಂದಿಗೂ ಧರ್ಮವಾಗಿರಲಿಲ್ಲ. ಹಿಂದೂ ಧರ್ಮ ಮತ್ತು ಕ್ರೈಸ್ತ ಮತಗಳ ನಡುವಿನ ಘರ್ಷಣೆ ಪರಸ್ಪರ ವಿರುದ್ಧವಾದ ಜೀವನ ಪಥಗಳ, ಚಿಂತನೆಗಳ ಮುಖಾಮುಖಿ. ಇನ್ನೂ ನಿಖರವಾಗಿ ಹೇಳಬೇಕೆಂದರೆ ಅದು ದೈವೀ ಮತ್ತು ಅಸುರೀ ಶಕ್ತಿಗಳ ನಡುವಿನ ಸಂಗ್ರಾಮ" ಇದು ಕ್ರೈಸ್ತ ಮತದ ಬಗೆಗಿನ ಅವರ ಸ್ಪಷ್ಟ ಅಭಿಪ್ರಾಯ. ಮೊದಮೊದಲು ನೇರವಾಗಿಯೇ ಕಾರ್ಯಾಚರಿಸುತ್ತಿದ್ದ ಕ್ರೈಸ್ತ ಮತಾಂಧ ಪಡೆ ಹಿಂದೂಗಳಿಂದ ವಿರೋಧ ಬಂದ ತಕ್ಷಣ, ಮಧುರ ಮಾತುಗಳೊಂದಿಗೆ ಆಮಿಷವೊಡ್ಡಲು ತಯಾರಾಯಿತು. ಕ್ರೈಸ್ತ ಮತಶಾಸ್ತ್ರವನ್ನು ಭಾರತೀಯತೆಗೆ ಅನ್ವಯವಾಗುವಂತೆ ವ್ಯಾಖ್ಯಾನಿಸಲು ಆರಂಬಿಸಿತು. ಕ್ರೈಸ್ತ ಮತಾಂತರಿಗಳು ತಮಗೆ ಅಡ್ಡ ಬಂದವರನ್ನು ಕೋಮುವಾದಿಗಳು, ಹಿಂದೂ ನಾಝಿಗಳು ಎಂದು ಕರೆದರು. ಅದಕ್ಕೆ ಜಾತ್ಯಾತೀತರೂ ದನಿ ಸೇರಿಸಿದರು. ಪರಸ್ಪರರ ರಕ್ಷಣೆಗೆ ಸ್ಥಳೀಯವಾದ ಸಂಘ, ಸಂವಾದಗಳೂ ಹುಟ್ಟಿಕೊಂಡವು. ಗಾಂಧಿಯವರಂತೂ ಕ್ರೈಸ್ತ ಮತವೂ ಹಿಂದೂ ಧರ್ಮದಷ್ಟೇ ಮಹಾನ್ ಧರ್ಮ ಎಂದು ಘೋಷಿಸಿಬಿಟ್ಟರು! ಹೆಚ್ಚೇಕೇ, ಕ್ರೈಸ್ತರಿಗೆ ಹಿಂದೂಗಳನ್ನು ಮತಾಂತರಿಸುವ ಹಕ್ಕನ್ನು ಸಂವಿಧಾನವೇ ಕೊಟ್ಟುಬಿಟ್ಟಿತು! ಬರಬರುತ್ತಾ ಗಾಂಧಿವಾದಿಗಳು ಕ್ರೈಸ್ತ ಮತ ಪ್ರಚಾರ ಕೇಂದ್ರಗಳ ಚಟುವಟಿಕೆಯಲ್ಲಿ ಸಕ್ರಿಯವಾಗಿ ಅಥವಾ ನಿಷ್ಕ್ರಿಯವಾಗಿ ಭಾಗವಹಿಸಲಾರಂಭಿಸಿದರು. ಅಲ್ಲದೆ ಈ ಮತಾಂತರ ಕೇಂದ್ರಗಳು ಹೆಣ್ಣುಮಕ್ಕಳ ಮಾರಾಟ ಕೇಂದ್ರಗಳಾಗಿ ಬೆಳೆದವು. ಭಾರತೀಯರೂ ಗೌರವಿಸುವ ಮದರ್ ಥೆರೇಸಾ ಸಿಸ್ಟರ್ಸ್ ಆಫ್ ಚಾರಿಟಿ ಎಂಬ ಹೆಣ್ಣು ಗುಲಾಮರ ಜಾಲಕ್ಕೆ ಅಧಿಪತಿಯಾಗಿದ್ದರು. ಬಡ ಕುಟುಂಬಗಳಿಗೆ ಹಣಕೊಟ್ಟು ಹೆಣ್ಣುಮಕ್ಕಳನ್ನು ಖರೀದಿಸಿ ಅವರನ್ನು "ಯೇಸುಕ್ರಿಸ್ತನ ವಧುಗಳನ್ನಾಗಿಸಿ" ಗುಲಾಮರಂತೆ ಅಹರ್ನಿಶಿ ದುಡಿಸಲಾಗುತ್ತಿತ್ತು. ಹೀಗೆ ಗೋಯಲರು ಮತಾಂತರಿಗಳ ಕೃತ್ಯದ ಬಗೆಗೆ ನಿಯೋಗೀ ಸಮಿತಿ ವರದಿ ಹಾಗೂ ಫಣಿಕ್ಕರ್ ಅವರ "ಏಷ್ಯಾ ಆಂಡ್ ವೆಸ್ಟರ್ನ್ ಡಾಮಿನೆನ್ಸ್" ಮುಂತಾದ ನಿಖರ ಆಕರಗಳನ್ನು ಅವಲಂಬಿಸಿ, ಸ್ವತಃ ಚರ್ಚುಗಳ ಅಪಸವ್ಯಗಳನ್ನು ಕಂಡು ತಮ್ಮ "ಹುಸಿ-ಜಾತ್ಯಾತೀತವಾದ", "ಅಭಿವ್ಯಕ್ತಿ ಸ್ವಾತಂತ್ರ್ಯ" ಮುಂತಾದ ಪುಸ್ತಕಗಳಲ್ಲಿ ಮತಾಂತರಿಗಳ ಹುನ್ನಾರಗಳನ್ನು ಬಯಲಿಗೆಳೆದಿದ್ದಾರೆ. ಭಾರತದ ಜನರ ಬಡತನವನ್ನೂ ಅನಾರೋಗ್ಯವನ್ನೂ ಬಳಸಿಕೊಳ್ಳುವುದರ ಮೂಲಕ ಥೆರೇಸಾ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುವ ಧನಸಂಪನ್ಮೂಲ, ಆಕೆಯ ಮತಾಂಧತೆ ಹಾಗೂ ಆಕೆ ಮಾಡುತ್ತಿದ್ದ ಮತಾಂತರ ಕಾರ್ಯಗಳ ಬಗ್ಗೆ ವಿಸ್ತಾರವಾಗಿ ಬರೆದರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವವರೇ ಇರಲಿಲ್ಲ. ಇಂತಹಾ ಬೌದ್ಧಿಕ ಕ್ಷತ್ರಿಯನನ್ನೂ ಮತಾಂತರಿಸಲು ಬಿಹಾರಿನ ಹಜಾರಿಬಾಗಿನ ಕ್ಯಾಥೋಲಿಕ್ ಚರ್ಚಿನ ಪಾದ್ರಿಯೊಬ್ಬ ಪ್ರಯತ್ನಿಸಿದ್ದ!
ಗೋಯಲರ ಇನ್ನೊಂದು ಮಹತ್ವದ ಕೆಲಸ ಎಂದರೆ ಬೃಹತ್ ಭಾರತದಾದ್ಯಂತ ಮತಾಂಧತೆಯ ಕತ್ತಿಗೆ ನಲುಗಿ ನಾಶವಾದ, ಮಸೀದಿಗಳಾಗಿ ಬದಲಾದ ದೇವಾಲಯಗಳ ಬಗ್ಗೆ ಬರೆದದ್ದು. “ಹಿಂದೂ ಟೆಂಪಲ್ಸ್ – ವಾಟ್ ಹ್ಯಾಪನ್ಡ್ ಟು ದೆಮ್?” ಹಾಗೂ "ಇಸ್ಲಾಮ್ vis-a-vis ಹಿಂದೂ ಟೆಂಪಲ್ಸ್"(ಇಸ್ಲಾಮ್ ಆಕ್ರಾಂತ ಹಿಂದೂ ದೇವಾಲಯಗಳು) ಮುಂತಾದ ಪುಸ್ತಕಗಳಾಗಿ ಅವು ಹೊರಬಂದವು. ಉತ್ತರದ ಸಿಂಕಿಯಾಂಗ್ ಮತ್ತು ಟ್ರಾನ್ಸೊಕ್ಸಿಯಾನಾಗಳಿಂದ ದಕ್ಷಿಣದ ಕನ್ಯಾಕುಮಾರಿಯ ತನಕ, ಪಶ್ಚಿಮದಲ್ಲಿ ಇಂದಿನ ಇರಾನಿನ ಸೀಸ್ತಾನ್ ಪ್ರಾಂತ್ಯದಿಂದ ಪೂರ್ವದ ಅಸ್ಸಾಮಿನವರೆಗೆ ಸುಮಾರು 1100 ವರ್ಷಗಳಲ್ಲಿ 154 ಕಡೆ ಹಿಂದೂ ದೇವಾಲಯಗಳ ಮೇಲೆ "ಸತತವಾಗಿ" ಆದ ದಾಳಿಗಳು, ಅದರಿಂದ ಸುದೀರ್ಘ ಕಾಲ ಹಿಂದೂ ಸಂಸ್ಕೃತಿಯ ತೊಟ್ಟಿಲಾಗಿ ಜಗತ್ತಿನ ಕಣ್ಣು ಕೋರೈಸುತ್ತಿದ್ದ ಈ ಪ್ರದೇಶವು, ದೇವಾಲಯಗಳು ಹಾಗೂ ವಿಹಾರಗಳ ಚೆಲ್ಲಾಡಿದ ಅವಶೇಷಗಳಿಂದ ತುಂಬಿ ಹೋದ ಕರುಣಾಜನಕ ಘಟನೆಗಳು ಇವುಗಳಲ್ಲಿವೆ. ಮಧ್ಯಕಾಲದಲ್ಲಿ ಇಲ್ಲೆಲ್ಲಾ ನಿರ್ಮಾಣಗೊಂಡವೆನ್ನಲಾದ ಮಸೀದಿ-ಮಝರ್-ಝಯಾರತ್-ದರ್ಗಾಗಳೆಲ್ಲಾ ನಾಶಪಡಿಸಲಾದ ಮಠ-ಮಂದಿರಗಳ ಜಾಗಗಳಲ್ಲೇ ಅವುಗಳದೇ ಅವಶೇಷಗಳಿಂದ ನಿರ್ಮಿಸಲ್ಪಟ್ಟವು ಎಂಬ ಸೂರ್ಯ ಸತ್ಯವನ್ನು ಗೋಯಲ್ ಜಗತ್ತಿನ ಎದುರು ತೆರೆದಿಟ್ಟರು. ಗೋಯಲರು ತಮ್ಮ ಮೊದಲ ಸಂಪುಟದಲ್ಲಿ ಕೊಟ್ಟ ವಿವರವೇ ಸುಮಾರು ಎರಡು ಸಾವಿರ ಇಂತಹಾ(ದೇವಸ್ಥಾನಗಳನ್ನು ಒಡೆದು ಹಾಕಿ ಅವುಗಳ ಅಡಿಪಾಯದ ಮೇಲೆ ಮಸೀದಿ ಕಟ್ಟಿದ) ಪ್ರಕರಣಗಳನ್ನು! ಆ ದೇವಾಲಯಗಳನ್ನು ಕಟ್ಟಿದ ರಾಜ, ಕೆಡಹಿದ ಮತಾಂಧ, ಅವುಗಳ ಕಾಲ ಎಲ್ಲವನ್ನೂ ವಿವರವಾಗಿ ನಮೂದಿಸಿದರು. ಆದರೇನು? ಇವೆಲ್ಲಾ ಯಾವುದೇ ಪಠ್ಯಪುಸ್ತಕಗಳಿಗೆ ಆಕರಗಳಾಗಲಿಲ್ಲ. ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಇವುಗಳ ಬಗೆಗೆ ಚರ್ಚೆ, ಸಂವಾದಗಳೂ ನಡೆಯಲಿಲ್ಲ.ಯಾವುದೇ ಸರಕಾರೀ ಗ್ರಂಥಾಲಯಗಳಿಗೂ ಈ ಪುಸ್ತಕಗಳು ಹೋಗದಂತೆ ವ್ಯವಸ್ಥಿತವಾಗಿ ತಡೆಹಿಡಿಯಲಾಯಿತು. ಹೆಚ್ಚೇಕೇ, ಯಾವುದೇ ಪತ್ರಿಕೆಗಳೂ ಇವುಗಳ ಬಗ್ಗೆ ವಿಮರ್ಶೆ ಬರೆಯುವ ಗೋಜಿಗೆ ಹೋಗಲಿಲ್ಲ; ಆ ಯೋಗ್ಯತೆಯೂ ಪತ್ರಿಕೆಗಳಿಗೆ ಇಲ್ಲ ಬಿಡಿ!
ಇಂತಹಾ ಅಪರೂಪದ ಬೌದ್ಧಿಕ ಕ್ಷತ್ರಿಯನ ಜನ್ಮ ಶತಮಾನೋತ್ಸವದ ವರ್ಷವಿದು. ಅವರ ಬಗ್ಗೆ, ಅವರು ಬರೆದುದರ ಬಗ್ಗೆ, ಅವರ ಜೀವನ ಪಯಣದ ಬಗ್ಗೆ ಬರೆದಷ್ಟೂ ಮುಗಿಯದು. ಕಳೆದೆರಡು ಶತಮಾನಗಳಲ್ಲಿ ಪಾಶ್ಚಾತ್ಯರು, ಕಮ್ಯೂನಿಸ್ಟರು, ಕಾಂಗ್ರೆಸ್ಸಿಗರು ವಿರೂಪಗೊಳಿಸಿದ್ದ "ಭಾರತೀಯ ಇತಿಹಾಸ"ವನ್ನು ಸರಿದಾರಿಗೆ ತರಲು ಅಪಾರವಾಗಿ ಶ್ರಮಿಸಿದ, ಸೋದರ ಮತಗಳಾದ ಇಸ್ಲಾಂ, ಕಮ್ಯೂನಿಸ್ಟ್ ಹಾಗೂ ಕ್ರೈಸ್ತಮತಗಳ ಕುತಂತ್ರ, ದ್ರೋಹಗಳನ್ನು ಬಯಲಿಗೆಳೆದ ಅವರನ್ನು ಈ ದೇಶದ ವ್ಯವಸ್ಥೆ ನಡೆಸಿಕೊಂಡ ಪರಿ ಮಾತ್ರ ನ್ಯಾಯಯುತವಾಗಿರಲಿಲ್ಲ. ಅವರನ್ನು ಮನುವಾದಿ, ಉಗ್ರಚಿಂತಕ, ಮೂಲಭೂತವಾದಿ ಎಂದು ಸದಾಕಾಲ ಜರೆಯಲಾಯಿತು. ದಾಖಲೆಗಳನ್ನೇ ಆಧಾರವಾಗಿಟ್ಟೂ ಬರೆದವನನ್ನು ವಿಶ್ವವಿದ್ಯಾಲಯಗಳ ಮೆಟ್ಟಿಲು ಹತ್ತದಂತೆ ತಡೆಯಲಾಯಿತು. ಪೊಳ್ಳು ಇತಿಹಾಸಕಾರರೆಲ್ಲಾ ಸರಕಾರದ ಸವಲತ್ತು ಪಡೆದು, ವಿಮಾನಗಳಲ್ಲಿ ವಿದೇಶ ಯಾನ ಮಾಡುತ್ತಾ ಈ ದೇಶಕ್ಕೇ ಕೇಡು ಬಗೆಯುತ್ತಿದ್ದರೆ ಗೋಯಲರು ದೆಹಲಿಯ ಸುಡುವ ಬೆಂಕಿಯಲ್ಲಿ ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ನೆಹರೂ ಎಂಬ ಕಮ್ಯೂನಿಷ್ಟನಂತೂ ಅವರ ಜೀವನವನ್ನು ನರಕಮಯವನ್ನಾಗಿ ಮಾಡಿಬಿಟ್ಟ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ