ಪುಟಗಳು

ಮಂಗಳವಾರ, ಆಗಸ್ಟ್ 4, 2020

ಇಂದಿರಾರ ಸ್ವಯಂ ವೈಭವೀಕರಣದ ಕಾಲಪಾತ್ರ

ಇಂದಿರಾರ ಸ್ವಯಂ ವೈಭವೀಕರಣದ ಕಾಲಪಾತ್ರ


ಪ್ರಪಂಚವೇ ವಿಚಿತ್ರ. ಯಾವುದೂ ಶಾಶ್ವತವಲ್ಲ ಎಂಬ ಅರಿವಿದ್ದೂ ಅಶಾಶ್ವತವಾದುದರ ಹಿಂದೆ ಬಿದ್ದೇ ಜೀವಿಸುವುದು ಜೀವಿಯ ಸಹಜ ಗುಣವಾಗಿ ಬಿಟ್ಟಿದೆ. ಒಂದಷ್ಟು ಹಣ ಮಾಡುವುದು, ಬಳಿಕ ಅಧಿಕಾರಕ್ಕಾಗಿ ಹಪಹಪಿಸುವುದು, ಅಧಿಕಾರವನ್ನು ಉಳಿಸಿಕೊಳ್ಳಲು ಒಂದಷ್ಟು ಜನರಿಗೆ ಹಣ ಹಂಚಿ ತನ್ನವರನ್ನಾಗಿಸಿಕೊಳ್ಳುವುದು, ಮತ್ತೆ ಹಣ ಮಾಡುವುದು, ಪ್ರಸಿದ್ಧಿಗಾಗಿ ಹಪಹಪಿಸುವುದು; ಇಷ್ಟು ಹೇಳಿದ ತಕ್ಷಣ ನೆನಪಾಗುವುದು ರಾಜಕಾರಣಿಗಳು. ಆದರೆ ಇದನ್ನೂ ಮೀರಿಸಿದ ದಾಹವುಳ್ಳ ಕುಟುಂಬವೊಂದು ಈ ದೇಶದ ಆಡಳಿತವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಡಿದ ಆಟಗಳು ಎಂತಹವನಿಗಾದರೂ ಹೇಸಿಗೆ ಹುಟ್ಟಿಸುವಂತಹವು. ಅದು ಅಧಿಕಾರಕ್ಕಾಗಿ, ಹಣಕ್ಕಾಗಿ, ಹೆಸರಿಗಾಗಿ ಆಡದ ಆಟವಿಲ್ಲ, ಹೂಡದ ಹೂಟವಿಲ್ಲ. ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕೆಂದು ಜೀವಂತವಿರುವಾಗಲೇ ತಮ್ಮ ಪ್ರತಿಮೆಗಳ ಸ್ಥಾಪನೆ, ವಿವಿಧ ವಿಶ್ವವಿದ್ಯಾಲಯಗಳು, ಸರಕಾರಿ ಯೋಜನೆಗಳು, ವಿಜ್ಞಾನ-ಕೈಗಾರಿಕ ಸಂಸ್ಥೆಗಳು, ವಿಮಾನ ನಿಲ್ದಾಣ, ಕ್ರೀಡಾಂಗಣ, ಪ್ರಶಸ್ತಿಗಳಿಗೆಲ್ಲಾ ತಮ್ಮ ಹೆಸರು ಇರಿಸಿ, ತಮಗೆ ತಾವೇ ಭಾರತ ರತ್ನದಂತಹಾ ಅತ್ಯುನ್ನತ ಪ್ರಶಸ್ತಿಗಳನ್ನೂ ಕೊಡಿಸಿಕೊಂಡ ಅದ್ಭುತ ಸಾಧನೆ ಆ ಕುಟುಂಬದ್ದು! 

  ಕೇಂದ್ರ ಸರಕಾರದ 12 ಯೋಜನೆಗಳು; ರಾಜ್ಯ ಸರಕಾರಗಳ 52 ಯೋಜನೆಗಳು; 98 ವಿಶ್ವವಿದ್ಯಾಲಯಗಳು; 6 ಬಂದರು & ವಿಮಾನ ನಿಲ್ದಾಣಗಳು; 66 ಪ್ರಶಸ್ತಿ ಮತ್ತು ವಿದ್ಯಾರ್ಥಿ ವೇತನಗಳು, 47 ವಿವಿಧ ಕ್ರೀಡೆ, ಕ್ರೀಡಾಂಗಣ, ಕ್ರೀಡಾ ಪುರಸ್ಕಾರಗಳು; 15 ವಿವಿಧ ಉದ್ಯಾನ, ಪಕ್ಷಿಧಾಮ, ಅಭಯಾರಣ್ಯಗಳು; 39 ಆಸ್ಪತ್ರೆಗಳು ಹಾಗೂ ವೈದ್ಯಕೀಯ ವಿದ್ಯಾಲಯಗಳು, 37 ಸಂಶೋಧನಾ ಸಂಸ್ಥೆಗಳು & ಸಮ್ಮೇಳನಗಳು, 74 ರಸ್ತೆ, ಭವನ, ಜಾಗಗಳಿಗೆ ಅದೇ ಕುಟುಂಬದ ಮೂವರ(ನೆಹರೂ, ಇಂದಿರಾ, ರಾಜೀವ್) ಹೆಸರು ಇಡಲಾಗಿದೆ. ಇವೆಲ್ಲವೂ ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಕ್ಷೇತ್ರಗಳು! ಹಣ ಜನರದ್ದು, ಹೆಸರು ಆ ಕುಟುಂಬದ್ದು! 2004-2014ರ ನಡುವೆಯಂತೂ ಈ ಹೆಸರಿಡುವ ಪ್ರಕ್ರಿಯೆಯಂತೂ ಸಭ್ಯತೆಯ ಗಡಿಯನ್ನೂ ಮೀರಿತು. ಇವೆಲ್ಲವನ್ನೂ ಮೀರಿಸಿದ, ಈಗಿನ ಪೀಳಿಗೆಗೆ ತಿಳಿದಿರದ ಅಸಭ್ಯವೂ, ದುರಾಚಾರವೂ ಆದಂತಹ ಪ್ರಕರಣವೊಂದು ಇಂದಿರಾ ಅವಧಿಯಲ್ಲಿ ನಡೆದಿತ್ತು. ಅದು ಇಂದಿರಾ ಗಾಂಧಿಯ "ಟೈಮ್ ಕ್ಯಾಪ್ಸೂಲ್" ಅಥವಾ ಸಮಯ ಸಂಪುಟ!

ಏನಿದು ಟೈಮ್ ಕ್ಯಾಪ್ಸೂಲ್? ಸಮಯ ಸಂಪುಟ ಅಂದರೆ ಮಿಶ್ರಲೋಹ, ಪಾಲಿಮರ್ ಹಾಗೂ ಪೈರೆಕ್ಸ್ ಗಳಿಂದ ಮಾಡಲ್ಪಟ್ಟ ನಿರ್ವಾತ ಕರಂಡಕ ಅಥವಾ ಸಂಪುಟ. ಯಾವುದೇ ಬಗೆಯ ಹವಾಮಾನ ಪರಿಸ್ಥಿತಿ ಅಥವಾ ವೈಪರೀತ್ಯಗಳನ್ನು ಇದು ತಾಳಿಕೊಳ್ಳಬಲ್ಲುದು. ಭೂಮಿಯ ಕೆಳಗೆ ಇದನ್ನು ಹೂತು ಹಾಕಿದರೂ ಸಾವಿರಾರು ವರ್ಷಗಳವರೆಗೆ ಹಾನಿಗೊಳಗಾಗದೇ ಉಳಿಸಿಕೊಳ್ಳಬಹುದಾದಂತಹ ಮುಚ್ಚಿದ ಪಾತ್ರೆ ಇದು. ಅಂದರೆ ಮುಂದಿನ ಜನಾಂಗಗಳಿಗೆ ಉಪಯೋಗವಾಗಬಲ್ಲಂತಹಾ ಅಥವಾ ಸಾರ್ವಕಾಲಿಕವಾಗಿಯೂ ಉಪಯೋಗಿಸಲ್ಪಡುವಂತಹಾ ಮಾಹಿತಿಯನ್ನೋ, ಸೂತ್ರವನ್ನೋ ಈ ಸಂಪುಟದಲ್ಲಿರಿಸಿ ಭೂಮಿಯಾಳದಲ್ಲಿ ಹುಗಿಯಬಹುದು. ಆ ಜನಾಂಗ ಇದನ್ನು ಗಿಟ್ಟಿಸಿಕೊಳ್ಳುವಲ್ಲಿ ತಜ್ಞವಾಗಿದ್ದರೆ ಉತ್ಖನನ ಮಾಡಿ ಈ ಮಾಹಿತಿಯನ್ನು ತನ್ನದಾಗಿಸಿಕೊಳ್ಳಬಹುದು. ಹೀಗೆ ಈ ಪಾತ್ರೆ ಒಂದು ಸಮಯದ ಚೌಕಟ್ಟಿನಿಂದ ಇನ್ನೊಂದಕ್ಕೆ ಮಾಹಿತಿಯನ್ನು ಸಾಗಿಸುವ ಸಂಪುಟದಂತೆ ಕಾರ್ಯ ನಿರ್ವಹಿಸುವ ಕಾರಣ ಅದಕ್ಕೆ ಟೈಮ್ ಕ್ಯಾಪ್ಸುಲ್ ಎಂದು ಹೆಸರು. 

ಮಾಹಿತಿಯನ್ನು ಹುದುಗಿಸಿಡುವುದೇನೂ ಹೊಸದಾದ ವಿಚಾರವಲ್ಲ. ಅದು ಪುರಾತನ ಭಾರತೀಯ ಪದ್ದತಿ. ಯಜ್ಞದ ಬಗೆಗಿನ ಮಾಹಿತಿಯನ್ನು ಯಜ್ಞಕುಂಡದಲ್ಲಿ ಹುದುಕಿಸಿಡುವುದು ಅದನ್ನು ಸಮರ್ಥನಾದವ ತೆಗೆಯುವುದು ತಂತ್ರವಿದ್ಯೆ. ವೈದ್ಯವಿದ್ಯೆ, ಜೀವ, ಭೌತ, ಖಗೋಳ.....ಬದುಕಿನ ವಿದ್ಯೆ, ಬ್ರಹ್ಮವಿದ್ಯೆಯಾದಿಯಾಗಿ ಎಲ್ಲಾ ವಿದ್ಯೆಗಳನ್ನು ಹುದುಗಿಸಿಟ್ಟ ವೇದಗಳು;  ಗಣಿತೀಯ ಸಮಸ್ಯೆಗಳನ್ನು ಬಿಡಿಸುವ ಸೂತ್ರವನ್ನು ಕಾವ್ಯಗಳಲ್ಲಿ ಕಟ್ಟಿಡುವುದು; ರಹಸ್ಯ ವಿಚಾರಗಳನ್ನು ಗೂಢವಾಗಿಸಿ ಸಂರಕ್ಷಿಸಿಡುವ ಎನ್ ಕ್ರಿಪ್ಶನ್; ಖಗೋಳ ವಿಸ್ಮಯಗಳನ್ನು, ಇತಿಹಾಸವನ್ನು ಪೌರಾಣಿಕ ಕಥೆಗಳ ಮೂಲಕ ಕಟ್ಟಿಕೊಟ್ಟು ಸಮರ್ಥನೂ ಸಂಯಮಿಯೂ ಮಾತ್ರ ತಿಳಿಯುವಂತೆ ಮಾಡಿದ ಕ್ರಮಗಳಿಗೆ ಹೋಲಿಸಿದರೆ ಈ ಪ್ರಕ್ರಿಯೆಯೇನೂ ಅಂತಹಾ ಮಹತ್ತಾದುದೇನಲ್ಲ. ಆದರೂ ಲೌಕಿಕ ಜಗತ್ತಿಗೆ ಸಹಾಯ ಮಾಡುವಂತಹಾ ತಂತ್ರವಂತೂ ಹೌದು.ಪ್ರಸಕ್ತ ಕಾಲದ ಮಹತ್ವದ ಘಟನೆಗಳು, ವ್ಯಕ್ತಿಯೊಬ್ಬನ ಸಾಧನೆಗಳು, ಇತಿಹಾಸದ ಬಗೆಗಿನ ಮಾಹಿತಿ, ಬಗೆಬಗೆಯ ಜ್ಞಾನ-ತಂತ್ರಜ್ಞಾನದ ಮಾಹಿತಿಗಳು ಹೀಗೆ ಯಾವುದೇ ಪ್ರಮುಖ ವಿಚಾರಗಳನ್ನು ಇದರಲ್ಲಿ ಸಂಗ್ರಹ ಮಾಡಿ ಹುದುಗಿಸಿಡಬಹುದು. ಹುದುಗಿಸಿಟ್ಟ ಮಾಹಿತಿಯು ಸತ್ಯವಾಗಿದ್ದರೆ ಮುಂದೆ ಉತ್ಖನನ ಮಾಡಿದವರಿಗೆ ಅದರ ಪ್ರಯೋಜನವಾಗಬಹುದು. ಆದರೆ ಸುಳ್ಳಾದರೆ...? ತಂತ್ರಜ್ಞಾನವೋ, ಸಂಶೋಧನಾತ್ಮಕ ವಿವರಗಳೋ ಸುಳ್ಳಾದರೆ ಅಷ್ಟೇನೂ ಹಾನಿಯಾಗಲಿಕ್ಕಿಲ್ಲ. ಸರಿಯಾದ ಪಥವನ್ನು, ಜ್ಞಾನವನ್ನು ಆ ಜನಾಂಗದ ಬುದ್ಧಿವಂತರು ಕಂಡುಕೊಂಡು ಅದರ ಪೊಳ್ಳುತನವನ್ನು ಬಯಲು ಮಾಡಬಹುದು. ಆದರೆ ಇತಿಹಾಸದ ಕುರಿತಾದ ಮಾಹಿತಿಯು ಸುಳ್ಳಾಗಿದ್ದರೆ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಸಾಧ್ಯತೆಯೇ ಇಲ್ಲ ಎನ್ನಬಹುದು. ಇಂದಿರಾಗಾಂಧಿ ಮಾಡಿದ್ದೂ ಅದನ್ನೇ. ಸ್ವಯಂ ವೈಭವೀಕರಣದ ಸುಳ್ಳು ಇತಿಹಾಸವನ್ನು ಇದರೊಳಗೆ ಅಡಗಿಸಿಟ್ಟದ್ದು. ಒಂದು ಒಳ್ಳೆಯ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡದ್ದು.

ಟೈಮ್ ಕ್ಯಾಪ್ಸೂಲು ಭಾರತಕ್ಕೇನೂ ಹೊಸದಲ್ಲ. ಇತ್ತೀಚೆಗೆ ಜನವರಿ 4, 2019ರಂದು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಧಿವೇಶನದ ಎರಡನೇ ದಿನದಂದು ಪಂಜಾಬ್‌ನ ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿವಿಯ ಆವರಣದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಟೈಮ್ ಕ್ಯಾಪ್ಸೂಲ್ ಒಂದನ್ನು ನೆಲದಾಳದಲ್ಲಿ ಹುದುಗಿಸಲಾಯಿತು. ಹಲವು ನೋಬೆಲ್ ಪ್ರಶಸ್ತಿ ವಿಜೇತರೂ, ಪ್ರಸಿದ್ಧ ವಿಜ್ಞಾನಿಗಳೂ ಭಾಗವಹಿಸಿದ್ದ ಸಮಾರಂಭವದು. ಸ್ಮಾರ್ಟ್ ಫೋನ್, ಸ್ಥಿರ ದೂರವಾಣಿ, ವಿಸಿಆರ್, ಸ್ಟಿರಿಯೊ ಪ್ಲೇಯರ್, ಸ್ಟಾಪ್ ವಾಚ್, ಹಾರ್ಡ್ ಡಿಸ್ಕ್, ಮೌಸ್, ಲ್ಯಾಪ್‌ಟಾಪ್, ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್, ಮದರ್ ಬೋರ್ಡ್, ಸಾಕ್ಷ್ಯಚಿತ್ರಗಳು, ಕ್ಯಾಮೆರಾ, ವಿಜ್ಞಾನ-ಪಠ್ಯ ಪುಸ್ತಕಗಳು, ರಿಯೊಸ್ಟಾಟ್, ರಿಫ್ರೆಕ್ಟರೋಸ್ಕೋಪ್ ಮತ್ತು ಡಬಲ್ ಮೈಕ್ರೋಸ್ಕೋಪ್ನಂತಹ ಉಪಕರಣಗಳು, ಮಂಗಳಯಾನ್, ಬ್ರಹ್ಮೋಸ್ ಕ್ಷಿಪಣಿ, ತೇಜಸ್ ಫೈಟರ್ ಜೆಟ್ ಗಳ ಪ್ರತಿಕೃತಿಗಳು, ವರ್ಚುವಲ್ ರಿಯಾಲಿಟಿ ಗ್ಲಾಸ್, ಇಂಡಕ್ಷನ್ ಕುಕ್‌ಟಾಪ್ ಮುಂತಾದುವುಗಳನ್ನು ಏರ್ ಪ್ಯೂರಿಫೈಯರ್ ಜೊತೆಗೆ ಇದರೊಳಗೆ ಇಡಲಾಗಿದೆ.

ಎಪ್ಪತ್ತರ ದಶಕದಲ್ಲಿ ಭೂಸುಧಾರಣೆ, ಬ್ಯಾಂಕುಗಳ ರಾಷ್ಟ್ರೀಕರಣ, ರಾಜರ ಸ್ವಂತ ವೆಚ್ಚಕ್ಕೆ ಸರಕಾರದ ಬೊಕ್ಕಸದಿಂದ ಕೊಡುವ ಹಣವನ್ನು ನಿಲ್ಲಿಸಿದ್ದು, ಅದಕ್ಕಿಂತಲೂ ಪ್ರಮುಖವಾಗಿ 1971ರ ಯುದ್ಧದಲ್ಲಿ ಪಾಕಿಸ್ತಾನ್ದ ವಿರುದ್ಧದ ಭರ್ಜರಿ ಗೆಲುವು ಜನಸಾಮಾನ್ಯರ ನಡುವೆ ಇಂದಿರಾ ಗಾಂಧಿಯ ಪ್ರಭೆಯನ್ನು ಎತ್ತರಕ್ಕೆ ಒಯ್ದಿತ್ತು. ಕಾಂಗ್ರೆಸ್ಸಿನ ಗುಲಾಮರಂತೂ ಹೋದಲ್ಲಿ ಬಂದಲ್ಲಿ "ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ" ಎನ್ನುವ ಘೋಷಣೆಯನ್ನು ಹಾಕಲು ಶುರುವಿಟ್ಟುಕೊಂಡಿದ್ದರು. ಸ್ವಪಕ್ಷೀಯರಲ್ಲದೆ ವಿರೋಧ ಪಕ್ಷದವರೂ ಇಂದಿರಾರ ಗತ್ತು ಗೈರತ್ತಿಗೆ ಭಯಭೀತರಾಗಿದ್ದರು. ಇಂತಹಾ ಸಮಯವನ್ನೇ "ಇಂದಿರಾ ಗಾಂಧಿ ಟೈಮ್ ಕ್ಯಾಪ್ಸುಲ್"ನ ಮೂಲಕ ತನ್ನ ಇತಿಹಾಸವನ್ನು ಪರಿಶುದ್ಧ ಮಾಡಿಡುವ ಕೆಲಸಕ್ಕೆ ಇಂದಿರಾ ಆಯ್ಕೆ ಮಾಡಿಕೊಂಡರು.

ಈ ಕಾರ್ಯಕ್ಕೆ ಭಾರತ ಸ್ವಾತಂತ್ರ್ಯಗೊಂಡ 25ನೇ ವರ್ಷಾಚರಣೆ ಇಂದಿರಾ ಗಾಂಧಿಗೆ ವರವಾಗಿ ಪರಿಣಮಿಸಿತು. 1973ರಲ್ಲಿ ದೇಶದ ಸ್ವಾತಂತ್ರ್ಯದ 25ನೇ ವರ್ಷಾಚರಣೆಯನ್ನು ಗುರುತಿಸಲು “ಸ್ವಾತಂತ್ರ್ಯಾ ನಂತರದ ಭಾರತ” ಎಂಬ ವಿಷಯದ ಕುರಿತು 10,000 ಪದಗಳ ಪ್ರಬಂಧವನ್ನು ಬರೆಯಲು ಕಾಂಗ್ರೆಸ್ ನಿಷ್ಠಾವಂತರ ಒಂದು ಸಣ್ಣ ಗುಂಪನ್ನು ನಿಯೋಜಿಸಿದರು ಇಂದಿರಾ. ಈ ಪ್ರಬಂಧವನ್ನು ಮೈಕ್ರೊ-ಫಿಲ್ಮ್‌ಗಳು ಮತ್ತು ಇತರ ದಾಖಲೆಗಳ ಜೊತೆಗೆ ಪೈರೆಕ್ಸ್ ಗಾಜಿನ ನಿರ್ವಾತ ಕೊಳವೆಯೊಳಗೆ ಹಾಕಿ ಮುಚ್ಚಲಾಯಿತು. ಬಳಿಕ ಅದನ್ನು ಭದ್ರವಾಗಿ ತಾಮ್ರದ ಕೊಳವೆಯೊಳಗೆ ಹಾಕಿ, ಮತ್ತೆ ಆ ತಾಮ್ರದ ಕೊಳವೆಯನ್ನು ಸ್ಟೈನ್ ಲೆಸ್ ಸ್ಟೀಲ್ ಕೊಳವೆಯೊಳಗೆ ಹಾಕಲಾಯಿತು. ಪರಿಣಾಮವಾಗಿ ಸುಮಾರು 5000 ವರ್ಷಗಳವರೆಗೆ ಹಾನಿಯಾಗದೆ ಉಳಿಯುವ ಕ್ಷಮತೆ ಅದಕ್ಕೆ ಬಂತು. ಇದನ್ನು ದೆಹಲಿಯ ಕೆಂಪು ಕೋಟೆಯ ಮುಂದೆ 1973 ರ ಆಗಸ್ಟ್ 15 ರಂದು ಬಹಳ ಆಡಂಬರದಿಂದ ಭೂಮಿಯಾಳಕ್ಕೆ ಹೂಳಲಾಯಿತು.



ಈ ಉಪಕ್ರಮವು ಶ್ಲಾಘನೀಯವೇ ಆದರೂ ಪ್ರಬಂಧದಲ್ಲಿದ್ದ ವಿಚಾರಗಳು ಹಾಗೂ ಸರಕಾರ ನಡೆದುಕೊಂಡ ರೀತಿ ಶ್ಲಾಘನೆಗೆ ಅರ್ಹವಾದುದಾಗಿರಲಿಲ್ಲ. ಅಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಪದೇ ಪದೇ ವಿನಂತಿಸಿದರೂ ಪ್ರಬಂಧದಲ್ಲಿನ ವಿವರಗಳನ್ನು ಇಂದಿರಾ ಗಾಂಧಿ ಸರಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಲಿಲ್ಲ. ಮುಂದಿನ ಪೀಳಿಗೆಗೆ ರವಾನಿಸಲಾಗುವ ಈ ವಿಚಾರಗಳನ್ನು ನಿಜವಾದ ಇತಿಹಾಸಕಾರರಿಂದ ಬರೆಯಿಸದೆ ಇಂದಿರಾಗೆ ನಿಷ್ಠರಾಗಿದ್ದ ಗುಂಪಿನಿಂದಲೇ ಏಕೆ ಬರೆಯಿಸಿದಿರಿ ಎಂಬ ಪ್ರಶ್ನೆಗೆ ಸರಕಾರದಿಂದ ಸಮರ್ಪಕ ಉತ್ತರವೇ ದೊರಕಲಿಲ್ಲ. ಇಂದಿರಾರ ವರ್ಚಸ್ಸನ್ನು ತಗ್ಗಿಸುವ ವಿಚಾರ ಸಿಗದೇ ಕುಗ್ಗಿ ಹೋಗಿದ್ದ ಪ್ರತಿಪಕ್ಷಗಳು ಇದನ್ನು ಸದನದೊಳಗೂ, ಜನಸಮುದಾಯದ ನಡುವೆಯೂ ಚರ್ಚೆಗೆ ತಂದು, ವಿವಿಧ ವೇದಿಕೆಗಳು ಹಾಗೂ ಬುದ್ಧಿ ಜೀವಿಗಳ ಮೂಲಕ ಪ್ರಶ್ನಿಸಿ ಬಗೆಬಗೆಯಲ್ಲಿ ಯತ್ನಿಸಿದರೂ ಇಂದಿರಾ ತನ್ನ ನಿಲುವಿನಿಂದ ಒಂದಿನಿತೂ ಜಗ್ಗಲಿಲ್ಲ. ಈ ವಿಷಯ ಲೋಕಸಭೆಯಲ್ಲಿ ಚರ್ಚೆಗೂ ಬಂತು. ದಿವಂಗತ ಶ್ರೀ ವಾಜಪೇಯಿ, ಶ್ಯಾಮನಂದನ್ ಮಿಶ್ರಾ ಸೇರಿದಂತೆ ಪ್ರತಿಪಕ್ಷ ನಾಯಕರು ವಿಷಯಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸರ್ಕಾರವನ್ನು ಕೋರಿದರು. 5000 ವರ್ಷಗಳ ಕಾಲ ಸಂರಕ್ಷಿಸಲ್ಪಟ್ಟು ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸಲ್ಪಡುವ ವಿಚಾರಗಳನ್ನು ರಹಸ್ಯವಾಗಿ ಇಡುವುದೇಕೆ ಎಂದು ಪ್ರಶ್ನಿಸಿದರು.  ಆದರೆ ಸರಕಾರ ಅದನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿ ನುಣುಚಿಕೊಂಡಿತು. 

ಆದರೆ 1973ರ ಡಿಸೆಂಬರ್ ವೇಳೆಗೆ ಕೆಲವು ಅಧಿಕಾರಿಗಳು ಅನಧಿಕೃತವಾಗಿ ಈ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ಸೋರಿಕೆ ಮಾಡುವುದರೊಂದಿಗೆ ಇಂದಿರಾಳ ಪ್ರಯತ್ನ ವ್ಯರ್ಥವಾಗಲು ಶುರುವಿಟ್ಟುಕೊಂಡಿತು. ಈ ಟೈಮ್ ಕ್ಯಾಪ್ಸೂಲಿಗೆ "ಕಾಲ ಪಾತ್ರ" ಎಂದು ಹೆಸರಿಡಲಾಗಿತ್ತು. ಪ್ರಬಂಧವನ್ನು ಸಿದ್ಧಪಡಿಸಿದವರು ಐ.ಸಿ.ಎಚ್.ಆರ್. ನಲ್ಲಿದ್ದ ಇಂದಿರಾ ಚೇಲಾಗಳು. ಹಸ್ತಪ್ರತಿಯನ್ನು ಸಿದ್ಧಪಡಿಸುವ ಹೊಣೆಗಾರಿಕೆಯಿದ್ದುದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಇತಿಹಾಸದ ಪ್ರಾಧ್ಯಾಪಕ ಎಸ್.ಕೃಷ್ಣಸ್ವಾಮಿ ಅವರಿಗೆ. ಅದರ ಚೌಕಟ್ಟು, ವಿಷಯಗಳು ಹೇಗಿರಬೇಕೆಂದು ಸೂಚಿಸಿದ್ದು ಭಾರತೀಯ ಇತಿಹಾಸವನ್ನು ತಿರುಚಿದವರಲ್ಲಿ ಅಗ್ರಗಣ್ಯರಾದ, ಮಾರ್ಕ್ಸ್ ವಾದಿ, ಐಸಿಎಚ್‌ಆರ್‌ನ ಸ್ಥಾಪಕ ಅಧ್ಯಕ್ಷ ಪ್ರೊ.ರಾಮ್ ಸರನ್ ಶರ್ಮಾ ಮತ್ತು ಐಸಿಎಚ್‌ಆರ್ ಸದಸ್ಯ, ನೆಹರೂ ಜೀವನಚರಿತ್ರೆಕಾರ ಡಾ.ಸರ್ವಪಲ್ಲಿ ಗೋಪಾಲ್! ಇದಲ್ಲದೆ ಹಲವಾರು ಇಂದಿರಾ ಚೇಲಾಗಳು ಇದರಲ್ಲಿ ಭಾಗಿಯಾಗಿದ್ದು ಅಂತಿಮ ನಿರೂಪಣೆಯು ಐಸಿಎಚ್ಆರ್ ನದಾಗಿತ್ತು. ವಿ.ಕೆ.ರಾಮಚಂದ್ರನ್ ಅವರ 1974 ರ "ಸಾಮಾಜಿಕ ವಿಜ್ಞಾನಿ" ಎಂಬ ಪ್ರಬಂಧ ಟೈಮ್ ಕ್ಯಾಪ್ಸೂಲಿನೊಳಗಿದ್ದ ರಹಸ್ಯ ಮಾಹಿತಿ ಹೇಗೆ ಸಾರ್ವಜನಿಕವಾಯಿತೆಂದು ವಿವರಿಸುತ್ತದೆ. ಕೆಂಪು ಕೋಟೆಯಲ್ಲಿ ನಡೆದ ಸಮಾರಂಭದ ಬಳಿಕ, ಕೃಷ್ಣಸ್ವಾಮಿ ಸಿದ್ಧಪಡಿಸಿದ ಪ್ರಬಂಧವನ್ನು ಸಾರ್ವಜನಿಕ ಸಂಗ್ರಹಾಗಾರ(ಆರ್ಕೈವ್ಸ್)ದ ಆಯುಕ್ತರೂ, ಪ್ರಸಿದ್ಧ ಇತಿಹಾಸಕಾರರೂ ಆಗಿದ್ದ ಟಿ.ಬದ್ರಿನಾಥ್ ಅವರ ಅಭಿಪ್ರಾಯ ಕೇಳಲು ಕಳುಹಿಸಿದ್ದರು. ಆತ ಇದು ಐತಿಹಾಸಿಕ ಸಂಗತಿಗಳನ್ನು ತಪ್ಪಾಗಿ ನಿರೂಪಿಸಿದೆ ಎಂದು ಬಹಿರಂಗವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡುವಾಗ ಬದ್ರಿನಾಥ್ ನಿಜ ಇತಿಹಾಸದಿಂದ ಸುಳ್ಳು ಇತಿಹಾಸದೆಡೆಗಿನ ಪಯಣ ಚಿಕ್ಕದಾಗಿರುತ್ತದೆ. ಅಲಂಕಾರಿಕವೂ ಆಗಿರುತ್ತದೆ. ಆದರದು ಸುಳ್ಳಿನ ಕಂತೆಯಾಗಿರುತ್ತದೆ ಎನ್ನುತ್ತಾ ಕಾವ್ಯಾತ್ಮಕವಾಗಿ ಇಂದಿರಾ ಟೈಮ್ ಕ್ಯಾಪ್ಸೂಲಿನ ವಿವರಗಳನ್ನು ಬಹಿರಂಗಪಡಿಸುತ್ತಾ ಸಾಗಿದರು. ಅಧಿಕೃತ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೃಷ್ಣಸ್ವಾಮಿಯನ್ನು ಎಳೆದೊಯ್ಯಲಾಯಿತಾದರೂ ಈ ವಿಚಾರ ಸಾರ್ವಜನಿಕ ಚರ್ಚೆಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 1974 ರ ಅಕ್ಟೋಬರ್‌ನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಾಲಿಟ್‌ಬ್ಯುರೊ ಸದಸ್ಯ ಪಿ.ರಾಮಮೂರ್ತಿ ಆ ಸುರುಳಿಯ ಪಠ್ಯದ ಪ್ರತಿಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವಾಗ, "ಇದನ್ನು ಓದುವಾಗ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯ ವರದಿಯಂತೆ ಭಾಸವಾಗುತ್ತಿದೆ. ಇದು ಭಾರತೀಯರಿಗೆ ಮಾಡಿದ ಅವಮಾನ" ಎಂದಿದ್ದರು. ಇಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಆ ಗುಂಪನ್ನು ಹೊರತುಪಡಿಸಿ ಬೇರೆ ಯಾರಿಗೂ ಸಿಗದ ಪಠ್ಯ ಮಾರ್ಕ್ಸ್ ವಾದಿಯೊಬ್ಬನಿಗೆ ಹೇಗೆ ಸಿಕ್ಕಿತು? ಆ ಗುಂಪಿನಲ್ಲಿ ಮಾರ್ಕ್ಸ್ ವಾದಿ ರಾಮ್ ಸರನ್ ಶರ್ಮಾ ಕೂಡಾ ಇದ್ದರು. ಅವರಿಂದಲೇ ಸಿಕ್ಕಿತೆಂದೇ ಊಹಿಸೋಣ. ಹಾಗಿದ್ದರೆ ಅಲ್ಲಿ ಮಾರ್ಕ್ಸ್ ವಾದಿಗಳಿಗೆ ಅಪ್ರಿಯವಾದದ್ದೇನೋ ಇರಬೇಕು. ಭಾರತದ ಇತಿಹಾಸವನ್ನು ತಿರುಚುವಲ್ಲಿ ಯಾವಾಗಲೂ ಕಾಂಗ್ರೆಸ್ಸಿನ ಜೊತೆಯಾಗಿರುವ ಮಾರ್ಕ್ಸ್ ವಾದಿಗಳಿಗೆ ಈ ಬಾರಿ ತಮಗೇನೂ ದಕ್ಕಿಲ್ಲ ಎಂಬ ಸಿಟ್ಟಿರಬೇಕು! ಅಥವಾ ಕಾಂಗ್ರೆಸ್-ಮಾರ್ಕ್ಸ್ ವಾದಿಗಳಿಬ್ಬರೂ ಜನರನ್ನು ಮೂರ್ಖರನ್ನಾಗಿಸಲು ಮಾಡಿದ ಕಸರತ್ತು ಈ ಪತ್ರಿಕಾಗೋಷ್ಠಿಯಾಗಿರಬಹುದು.  ಸ್ವಾತಂತ್ರ್ಯಾನಂತರದ ಭಾರತದ ಪಯಣಕ್ಕಿಂತಲೂ ನೆಹರೂ, ಇಂದಿರಾರ ಸಾಧನೆಗಳ ಸ್ವಯಂವೈಭವೀಕರಣದ ಪಠ್ಯಗಳನ್ನು ಆ ಪ್ರಬಂಧ ಹೊಂದಿದ್ದ ಮಾಹಿತಿ ಹೊರಬೀಳುತ್ತಿದ್ದಂತೆ ಅದು ಜನಸಾಮಾನ್ಯರನ್ನು ಕೆರಳಿಸಿತು.

ಮುಂದಿನ ವರ್ಷಗಳಲ್ಲಿ, ಇಂದಿರಾ ಗಾಂಧಿ ರಾಷ್ಟ್ರದ ವಿವಿಧ ಭಾಗಗಳಲ್ಲಿ ಇಂತಹ ಹಲವಾರು ಟೈಮ್  ಕ್ಯಾಪ್ಸುಲ್‌ಗಳನ್ನು ಭೂಮಿಯೊಳಕ್ಕೆ ಹುಗಿದರು. ತುರ್ತುಪರಿಸ್ಥಿತಿಯ ಸಮಯದಲ್ಲಂತೂ ಪ್ರತೀವಾರ ಒಂದೊಂದು ಟೈಮ್  ಕ್ಯಾಪ್ಸುಲ್ ನ್ನು ದೇಶದ ವಿವಿಧ ಕಡೆ ಹೂಳಲಾಯಿತು. ಅವೆಲ್ಲದರಲ್ಲಿ ಭವಿಷ್ಯದ ಇತಿಹಾಸಕಾರರನ್ನು ದಾರಿ ತಪ್ಪಿಸುವ, ನೆಹರೂ ಕುಟುಂಬವನ್ನು ವೈಭವೀಕರಿಸಿದ ವಿಚಾರಗಳೇ ತುಂಬಿದ್ದವು.

ಇಂದಿರಾ ಹೂತು ಹಾಕಿದ್ದ ವಿಕೃತಿಗೊಂಡ ಇತಿಹಾಸವನ್ನು ಪತ್ತೆಹಚ್ಚಿ ಮರುಮೌಲ್ಯಮಾಪನ ಮಾಡುವ ಭರವಸೆಯನ್ನು ಜನರಿಗಿತ್ತು ತುರ್ತು ಪರಿಸ್ಥಿತಿಯ ಬಳಿಕ ಅಧಿಕಾರಕ್ಕೆ ಬಂದ ಜನತಾ ಸರಕಾರ ಈ ಟೈಮ್ ಕ್ಯಾಪ್ಸೂಲುಗಳನ್ನು ತೆಗೆದು ಸಂಪೂರ್ಣ ನಾಶ ಮಾಡುವ ಅಥವಾ ಅವುಗಳಲ್ಲಿ ನಿಜವಾದ ಮಾಹಿತಿಯನ್ನು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಡಿಸೆಂಬರ್ 1977ರಂದು ಕೆಂಪುಕೋಟೆಯ ಮುಂದೆ ಮೂವತ್ತೆರಡು ಅಡಿ ಆಳದಲ್ಲಿ ಹೂತು ಹಾಕಿದ್ದ ಈ ತಿರುಚಿದ ಇತಿಹಾಸವುಳ್ಳ ಟೈಮ್ ಕ್ಯಾಪ್ಸೂಲನ್ನು ಜನತಾ ಸರಕಾರ ಹೊರತೆಗೆಯಿತು.

ಆದರೆ ಬಳಿಕ ಆ ಕ್ಯಾಪ್ಸೂಲ್ ಏನಾಯಿತೆಂದು ಯಾರಿಗೂ ತಿಳಿದಿಲ್ಲ. ಹೊರತೆಗೆದ ಕ್ಯಾಪ್ಸೂಲಿನಲ್ಲಿದ್ದ ವಿವರಗಳನ್ನು ಜನತಾ ಸರಕಾರವೂ ಬಿಚ್ಚಿಡಲಿಲ್ಲ. ಆ ಕ್ಯಾಪ್ಸೂಲ್ ಏನಾಯಿತೆಂದೂ ತಿಳಿಯಲಿಲ್ಲ. ಜನತಾ ಸರಕಾರ ಕೆಲವೇ ಸಮಯದಲ್ಲಿ ಬಿದ್ದು ಹೋದ ಕಾರಣ ಎಲ್ಲಾ ಟೈಮ್ ಕ್ಯಾಪ್ಸೂಲುಗಳನ್ನು ತೆಗೆಯಲೂ ಅದರಿಂದ ಸಾಧ್ಯವಾಗಲಿಲ್ಲ. ದಶಕಗಳಿಂದ ಹಲವಾರು ಕಾರ್ಯಕರ್ತರು ಮತ್ತು ಇತಿಹಾಸಕಾರರು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. 2012ರಲ್ಲಿ    ಮನುಷಿ ಪತ್ರಿಕೆಯ ಮಧುಕೀಶ್ವರ್ ಅವರು ಪ್ರಧಾನ ಮಂತ್ರಿಗಳ ಕಚೇರಿಯಿಂದ ಇಂದಿರಾ ಗಾಂಧಿ ಟೈಮ್ಸ್ ಕ್ಯಾಪ್ಸೂಲ್ ಅನ್ನು ಹೂತು ಹಾಕಿದ ನಿಖರವಾದ ದಿನಾಂಕ ಮತ್ತು ಸ್ಥಳದ ಮಾಹಿತಿ ಕೋರಿದಾಗ, ಪಿಎಂಒ ತನ್ನ ಬಳಿ ಯಾವುದೇ ವಿವರಗಳಿಲ್ಲ ಎಂದಿತು. ಆಕೆ ಕೇಂದ್ರ ಮಾಹಿತಿ ಆಯೋಗದ ಮೊರೆ ಹೊಕ್ಕಾಗ ಅದು  "ಪಿಎಂಒ ಅಥವಾ ಸರ್ಕಾರದ ಬೇರೆ ಇಲಾಖೆಗಳಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದು ನಿಜಕ್ಕೂ ಬಹಳ ವಿಚಿತ್ರ. ಟೈಮ್ ಕ್ಯಾಪ್ಸೂಲ್ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡುವುದನ್ನು ಸಂಪೂರ್ಣವಾಗಿ ನಿರಾಕರಿಸುವುದನ್ನು ಒಪ್ಪಲಿಕ್ಕಾಗದು. ಪ್ರಧಾನಿ ಕಛೇರಿಯು ಈ ಬಗ್ಗೆ ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿ ಪತ್ತೆ ಹಚ್ಚಬೇಕು" ಎಂದು ಮಧುಕೀಶ್ವರ್ ಪರವಾಗಿ ತೀರ್ಪು ನೀಡಿತು. ಪತ್ತೆ ಹಚ್ಚಲು ಏನು ಇರಲಿಲ್ಲವೆಂದಲ್ಲ. ಸರಕಾರಕ್ಕೆ ಹಳೆಯ ಚರ್ಚೆಯನ್ನು ಪುನರುಜ್ಜೀವನಗೊಳಿಸಿ ತನ್ನ ಕಾಲ ಮೇಲೆ ಚಪ್ಪಡಿ ಹಾಕಿಕೊಳ್ಳುವುದು ಬೇಕಿರಲಿಲ್ಲ. ಹೀಗೆ ಈ ಚರ್ಚೆ ಈಗ ನಿಂತಿದೆ. ಹಲವು ಶತಮಾನಗಳ ಬಳಿಕ ಯಾವುದೋ ಒಂದು ಜನಾಂಗ ಆ ಕ್ಯಾಪ್ಸೂಲುಗಳನ್ನು ಹೊರತೆಗೆಯಬಹುದು. ಆಗ ನಾವಿರುವುದಿಲ್ಲ. ಆದರೆ ನೆಹರೂ-ಇಂದಿರಾರ ಪೊಳ್ಳು ವೈಭವಗಳು ಶಾಶ್ವತವಾಗಿ ಜೀವಿಸುತ್ತವೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ