ಪುಟಗಳು

ಮಂಗಳವಾರ, ನವೆಂಬರ್ 29, 2016

ಯಾರು ಮಹಾತ್ಮ? ಭಾಗ-೨೬

ಯಾರು ಮಹಾತ್ಮ?
ಭಾಗ-೨೬


          ಬಸವಳಿದಿತ್ತು ಬ್ರಿಟನ್. ಎರಡನೇ ವಿಶ್ವಯುದ್ಧದಲ್ಲಿ ಅದು ಗೆಲುವನ್ನೇನೋ ಪಡೆದಿತ್ತು. ಆದರೆ ಯುದ್ಧಕ್ಕೆ ಮುನ್ನ ಸೂರ್ಯ ಮುಳುಗದ ನಾಡಾಗಿದ್ದ ಬ್ರಿಟನ್ನಿನಲ್ಲಿ ಯುದ್ಧದ ತರುವಾಯ ಅಕ್ಷರಶಃ ಕತ್ತಲು ಆವರಿಸಿತ್ತು. ಕಲ್ಲಿದ್ದಲು ಉತ್ಪಾದನೆ ದಶಕಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು. ಹಾಗಾಗಿ ಬ್ರಿಟನ್ನಿನ ಹಲವು ಭಾಗಗಳಲ್ಲಿ ದಿನದ ಬಹುತೇಕ ಸಮಯ ವಿದ್ಯುತ್ತೇ ಇರುತ್ತಿರಲಿಲ್ಲ. ವಿಜಯವೇನೋ ಸಿಕ್ಕಿತ್ತು. ಆದರೆ ಆ ವಿಜಯಕ್ಕಾಗಿ ಬ್ರಿಟನ್ ತೆತ್ತ ಬೆಲೆ ಅಪಾರ! ಲಂಡನ್ನಿನ ಬೀದಿಗಳು ಗಬ್ಬು ನಾರುತ್ತಿದ್ದವು. ಕೈಗಾರಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ಬೊಕ್ಕಸ ಬರಿದಾಗಿತ್ತು. ಸಾಲ ತುಂಬಲೂ ಹಣ ಇಲ್ಲದಂತಾಗಿತ್ತು. ಇಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದರು. ಬೀದಿಗಳು ಬಿಕೋ ಅನ್ನುತ್ತಿದ್ದವು. ಜನರು ಕಳಾಹೀನರಾಗಿದ್ದರು. ಜನರ ಅಶನ ವಸನಾದಿಗಳು ಎಂಟು ವರ್ಷಗಳ ಯುದ್ಧದ ಪರಿಣಾಮವನ್ನು ಸಾರಿ ಹೇಳುತ್ತಿದ್ದವು.

          ಸತತ ಎಂಟನೇ ವರ್ಷವೂ ಸರಕಾರ ಕೊಡಮಾಡುವ ಪಡಿತರದಲ್ಲೇ ಬದುಕಬೇಕಾದ ಅನಿವಾರ್ಯ ಅಸಹಾಯಕ ಸ್ಥಿತಿಯಲ್ಲಿ ಲಂಡನ್ನಿಗರಿದ್ದರು. ಆಹಾರ, ಇಂಧನ, ಪಾನೀಯ, ವಿದ್ಯುತ್, ಶೂ ಹಾಗೂ ಬಟ್ಟೆಗಳಿಗಾಗಿ ಜನ ಪಡಿತರವನ್ನೇ ಆಶ್ರಯಿಸಿದ್ದರು. ಆಟಿಕೆಗಳ ಮೇಲೆ ಸರಕಾರ ನೂರು ಶೇಖಡಾ ಖರೀದಿ ತೆರಿಗೆ ವಿಧಿಸಿತ್ತು. ಲಂಡನ್ನಿನ ಯಾವ ಅಂಗಡಿಯನ್ನು ನೋಡಿದರೂ "ಇಲ್ಲ" ಎನ್ನುವ ಒಕ್ಕಣೆಯುಳ್ಳ ಬೋರ್ಡುಗಳೇ ರಾರಾಜಿಸುತ್ತಿದ್ದವು. ಆಲೂಗಡ್ಡೆ, ಮಾಂಸ, ಸಿಗರೇಟಿಗೂ ತತ್ವಾರ ಉಂಟಾಗಿತ್ತು. ಬ್ರಿಟನ್ ಅರ್ಥಶಾಸ್ತ್ರಜ್ಞ ಜಾನ್ ಮೇಯ್ನಾರ್ಡ್ 1946ರಲ್ಲಿ ಹೇಳಿದ್ದ "ನಮ್ಮದು ಬಡ ದೇಶ. ಅದರಂತೆ ಬದುಕುವುದನ್ನು ಕಲಿಯಬೇಕಾಗಿದೆ" ಎನ್ನುವ ಮಾತುಗಳೇ ಸದಾ ಬ್ರಿಟಿಷರ ತಲೆಯಲ್ಲಿ ಗುಂಯ್ಗುಡುತ್ತಿದ್ದವು. 1947ರ ಹೊಸವರ್ಷದ ಬೆಳಗನ್ನು ಚಹಾ ಹೀರುವ ಮೂಲಕ ಸ್ವಾಗತಿಸೋಣವೆಂದರೆ ಒಂದು ಲೋಟ ಬಿಸಿ ನೀರಿಗೂ ಇಂಗ್ಲೆಂಡಿಗರಿಗೆ ತತ್ವಾರವಾಗಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)

          ಮಹಾಯುದ್ಧದ ಸಂದರ್ಭವನ್ನು ವೀರ ಸಾವರ್ಕರ್ ಸಲಹೆಯಂತೆ ಸದುಪಯೋಗಪಡಿಸಿಕೊಂಡು ರಾಸ್ ಬಿಹಾರಿ ಬೋಸರಿಂದ ಸೇನಾಧಿಪತ್ಯ ಪಡೆದು ಸುಭಾಷ್ ಬ್ರಿಟಿಷರನ್ನು ಒದ್ದೋಡಿಸಲು ಭಾರತದತ್ತ ಮುನ್ನುಗ್ಗುತ್ತಿದ್ದರು. ಶತಮಾನಗಳಿಂದಲೂ ಮತ್ತೆ ಮತ್ತೆ ಎದ್ದು ಬರುತ್ತಿದ್ದ ಕ್ರಾಂತಿಯ ಕಿಡಿ, ಸುಭಾಷ್ ಹಾಗೂ ಐ.ಎನ್.ಎ.ಯ ಭಯ ಹಾಗೂ ಅದರಿಂದ ಭಾರತೀಯ ಸೇನೆಯಲ್ಲಿ ಎದ್ದ ಕಿಚ್ಚು, ಮಹಾಯುದ್ಧದಿಂದ ಇಂಗ್ಲೆಂಡಿನಲ್ಲಿ ಉಂಟಾಗಿದ್ದ ದುರ್ಭರ ಸನ್ನಿವೇಶ ಬ್ರಿಟಿಷರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದವು. "ಸಶಸ್ತ್ರ ಕ್ರಾಂತಿ ಮತ್ತು ಇತಿಹಾಸದ ಶಕ್ತಿಗಳಿಂದ ಹೊರದಬ್ಬಿಸಿಕೊಳ್ಳುವ ಬದಲು ಭಾರತವನ್ನು ತ್ಯಜಿಸುವುದೇ ಮೇಲು" ಎನ್ನುವ ನಿರ್ಣಯಕ್ಕೆ ಅನಿವಾರ್ಯವಾಗಿ ಬರಲೇಬೇಕಾಯಿತು. ಇದು ವಾಸ್ತವ. ವಿಪರ್ಯಾಸವೆಂದರೆ ಅಸಂಗತ, ಅಸಮರ್ಪಕ, ಅರೆಬೆಂದ ವಿಚಾರಧಾರೆಯ, ನಿರ್ದಿಷ್ಟ ಗುರಿಯಿಲ್ಲದ, ನಿರ್ಣಾಯಕವೂ ಅಲ್ಲದ ಗಾಂಧಿಯ ಚಳವಳಿಗಳೇ ಸ್ವಾತಂತ್ರ್ಯಕ್ಕೆ ಕಾರಣ ಎನ್ನುವ ಇತಿಹಾಸದ ವಿರೂಪವೇ ಎಲ್ಲೆಡೆ ನರ್ತಿಸುತ್ತಿದೆ.

             ಸುಭಾಷರ ಸಾಹಸ ಹಾಗೂ ಬಳಿಕದ ಐ.ಎನ್.ಎ ಸೈನಿಕರ ವಿಚಾರಣೆ ಭಾರತೀಯ ಸೈನಿಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿತ್ತು. ದೇಶವಾಸಿಗಳು ಸಿಡಿದೆದ್ದಿದ್ದರು. ಐ.ಎನ್.ಎ ವಿಚಾರಣೆ ಖಂಡಿಸಿ 1946ರಲ್ಲಿ ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತಿತರ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ವೈಸ್ ರಾಯ್ ನಿರ್ಣಯದಂತೆ ಐ.ಎನ್.ಎ ಯ ಸೈನಿಕರ ಗಡೀಪಾರು ಶಿಕ್ಷೆಯನ್ನು ರದ್ದುಮಾಡಿ ಕ್ಷಮಾದಾನ ನೀಡಲಾಯಿತು. ಅದೇ ಸಂದರ್ಭದಲ್ಲಿ ರಾಯಲ್ ನೇವಿಯ 3000 ಸೈನಿಕರು ಬಂಡೆದ್ದರು. ಬಾಂಬೆ ಸಿಗ್ನಲ್ ಶಾಲೆಯ ಸೈನಿಕರು ಬ್ರಿಟಿಷ್ ಕಮಾಂಡರುಗಳು ಭಾರತದ-ರಾಷ್ಟ್ರೀಯತೆಯ ವಿರುದ್ಧ ಮಾಡುತ್ತಿದ್ದ ಅವಹೇಳನಕರವಾದ ತಾತ್ಸಾರದ ನುಡಿಗಳು, ವೇತನ, ಅಸಮರ್ಪಕ ಆಹಾರ ಹಾಗೂ ಜನಾಂಗೀಯ ಪಕ್ಷಪಾತದ ವಿರುದ್ಧ 1945 ಆಗಸ್ಟಿನಲ್ಲಿ ಉಪವಾಸ ಶುರು ಮಾಡಿದರು. ಆ ಸಂದರ್ಭದಲ್ಲಿ ಕಮಾಂಡರ್ ಕಿಂಗ್ ಎನ್ನುವ ಉಸ್ತುವಾರಿ ಅಧಿಕಾರಿಯೊಬ್ಬ ಸೈನಿಕರನ್ನು ಉದ್ದೇಶಿಸಿ ಅವರ ಬಗ್ಗೆ, ಅವರ ಹೆತ್ತವರ ಬಗ್ಗೆ ಅಸಭ್ಯ ಭಾಷೆಯಲ್ಲಿ ಮಾತಾಡಿದ. ಮುಷ್ಕರ ಎಪ್ಪತ್ನಾಲ್ಕು ಹಡಗುಗಳಿಗೆ, ಇಪ್ಪತ್ತು ಸಾಗರ ನೆಲೆಗಳಿಗೆ ಹಬ್ಬಿತು. ಮೂರೇ ದಿನಗಳಲ್ಲಿ ಬ್ರಿಟಿಷ್ ಆಡಳಿತ ಭಾರತೀಯ ಸೇನೆಯ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು. ನೌಕಾದಳದ ಸೈನಿಕರು ಇಪ್ಪತ್ತು ಹಡಗುಗಳ ಮೇಲೆ ನಿಯಂತ್ರಣ ಸಾಧಿಸಿದರು. ಸೇನಾ ಕಾವಲುಗಾರರ ಮೇಲೆ ಗುಂಡು ಹಾರಿಸಲು ಸಿದ್ಧರಾದರು. ಗನ್ ಹಾಗೂ ವಿಮಾನಗಳನ್ನು ವಶಪಡಿಸಿಕೊಳ್ಳಲಾಯಿತು. ಅಡ್ಮಿರಲ್ ಗಾಡ್ ಫ್ರೇಯ ಮನವೊಲಿಸುವ ಮಾತುಗಳೂ ವಿಫಲವಾದವು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮಾತನ್ನು ಲೆಕ್ಕಿಸದೆ ಪ್ರತಿಭಟನೆ ಆರಂಭವಾಯಿತು. ಜನ ಬ್ಯಾಂಕ್, ಅಂಚೆಕಛೇರಿ, ಪೊಲೀಸ್ ಠಾಣೆ, ಸರಕಾರೀ ಕಛೇರಿಗಳ ಲೂಟಿಗೆ ತೊಡಗಿದರು. ಪೊಲೀಸರಿಂದ ಪರಿಸ್ಥಿತಿಯ ನಿಯಂತ್ರಣ ಸಾಧ್ಯವಾಗದೆ ಸೈನ್ಯವನ್ನು ಕರೆಸಲಾಯಿತು. "ಕಂಡಲ್ಲಿ ಗುಂಡು ಹಾರಿಸಿ" ಎನ್ನುವ ನಿರ್ದೇಶನದಿಂದ ಇನ್ನೂರಕ್ಕೂ ಹೆಚ್ಚು ಜನರ ಆಹುತಿಯಾಯಿತು. ಈ ಮುಷ್ಕರಕ್ಕೆ ಬೆಂಬಲ ನೀಡಿ ರೈಲ್ವೇ ಸಿಬ್ಬಂದಿ ತಮ್ಮ ಕಾರ್ಯ ಸ್ಥಗಿತಗೊಳಿಸಿದರು.(ದಿ ಟ್ರಾನ್ಸ್ ಫರ್ ಆಫ್ ಪವರ್ - ವಿ.ಪಿ. ಮೆನನ್)(ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

           ಅಂಬಾಲಾ, ಕರಾಚಿ, ಮದ್ರಾಸ್, ಕಲ್ಕತ್ತಾ ಹಾಗೂ ರಂಗೂನ್'ಗಳಲ್ಲೂ ಮುಂಬಯಿ ಪ್ರತಿಭಟನೆ ಪ್ರತಿಧ್ವನಿಸಿತು. ಇದು ಭೂ ಸೇನೆ ಹಾಗೂ ವಾಯುದಳದ ಮೇಲೂ ಪರಿಣಾಮ ಬೀರಿತು. ವಾಯುದಳದ ಸೈನಿಕರು ದಂಗೆಯೆದ್ದರು. ನೌಕಾದಳದ ಸಿಬ್ಬಂದಿ ಕೆಲಸ ನಿಲ್ಲಿಸಿದರು. ಪೊಲೀಸರಲ್ಲೂ ದೇಶಭಕ್ತರ ಅನೇಕ ಭೂಗತ ಜಾಲಗಳಿದ್ದವು. ಬಿಹಾರ ಕಾನ್ ಸ್ಟೇಬಲ್ ರಮಾನಂದ ತಿವಾರಿ ಅಂತಹ ದೇಶಭಕ್ತ ಪೊಲೀಸರ ಬಹುದೊಡ್ಡ ಜಾಲವನ್ನು ಹೆಣೆದಿದ್ದ ಪ್ರಮುಖರಲ್ಲೊಬ್ಬ. ಅನೇಕ ಕಡೆ ಪೊಲೀಸರ ಬಂಡಾಯವೂ ಆರಂಭವಾಯಿತು. ನೌಕಾದಳದ ಮುಷ್ಕರವನ್ನು ಕಮಾಂಡರ್-ಇನ್-ಚೀಫ್ ಖಂಡಿಸಿದಾಗ ಇಂಡಿಯನ್ ಸಿಗ್ನಲ್ ಕಾರ್ಪ್ಸ್'ನ 200 ಸಿಬ್ಬಂದಿ ಜಬಲ್ಪುರದಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಸರ್ಕಾರ ವಿಜಯ ದಿನ ಆಚರಿಸಲು ಮುಂದಾದಾಗ ದೆಹಲಿಯಲ್ಲಿ ಭಾರೀ ಗಲಭೆಗಳು ನಡೆದವು. ಹೀಗೆ 1946ರಲ್ಲಿ ಇಡೀ ಭಾರತ ಕ್ರಾಂತಿಯ ವಾತಾವರಣದಿಂದ ಕೂಡಿತ್ತು. ಪೊಲೀಸ್ ಹಾಗೂ ಸೈನ್ಯದಲ್ಲಿ ಬಂಡಾಯಗಳು ನಡೆದವು. 1946ರ ಫೆಬ್ರವರಿಯಲ್ಲಿ ಮುಂಬೈಯ ಹನ್ನೊಂದು ನೌಕಾನೆಲೆಗಳ ಇಪ್ಪತ್ತು ಸಾವಿರ ರೇಟಿಂಗ್ ಹಾಗೂ ಎಲ್ಲಾ ಬಂದರುಗಳಲ್ಲಿದ್ದ ಯೂನಿಯನ್ ಜಾಕ್ ಧ್ವಜವನ್ನು ಕೆಳಗಿಳಿಸಲಾಯಿತು. ದೇಶದಲ್ಲಿ ಎದ್ದ ಕ್ರಾಂತಿಯ ಜ್ವಾಲೆಗೆ ಬ್ರಿಟಿಷರ ನಾಲಗೆಯ ಪಸೆ ಆರತೊಡಗಿತು.(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟಿಷನ್ - ಹೊ.ವೆ. ಶೇಷಾದ್ರಿ; ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

            ಸೈನ್ಯವನ್ನು, ಪೊಲೀಸ್ ಪಡೆಯನ್ನು ನಂಬುವಂತಿಲ್ಲವಾದ್ದರಿಂದ ನೇರವಾಗಿ ದಂಗೆಯನ್ನು ದಮನಿಸಹೊರಟರೆ ತಮಗೆ ಕ್ರಾಂತಿ ಜ್ವಾಲೆ ತಮ್ಮನ್ನೇ ಆಪೋಶನ ತೆಗೆದುಕೊಳ್ಳಬಹುದೆಂದು ಅರಿತ ಸರ್ಕಾರ ಬಂಡಾಯಕ್ಕೆ ಕೊನೆಹಾಡುವಂತೆ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗಿಗೆ ಮನವಿ ಮಾಡಿತು. ಅದರಂತೆ ಜಿನ್ನಾ ಹಾಗೂ ಗಾಂಧಿ ದಂಗೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವಂತೆ, ದಂಗೆಯಲ್ಲಿ ಭಾಗವಹಿಸಿದ್ದವರು ಶರಣಾಗುವಂತೆ ಕರೆ ನೀಡಿದರು. ತಮ್ಮನ್ನು ಜನತೆಯಿಂದ ಪ್ರತ್ಯೇಕಿಸಿದ ತಥಾಕಥಿತ ನಾಯಕರ ಕುತಂತ್ರದಿಂದ ಬೇಸತ್ತ ನೌಕಾಪಡೆ ಮುಷ್ಕರ ನಿಲ್ಲಿಸುವಂತೆ ಕರೆ ನೀಡಿತು. ತಮಗೆ ವಿಶ್ವಾಸದ್ರೋಹ ಎಸಗಲಾಯಿತು ಎಂಬ ಭಾವನೆ ಅವರಲ್ಲುಂಟಾಯಿತು. ತಿದಿಯೂದಿ ಬೆಂಕಿಯ ಝಳಕ್ಕೆ ನಡುಗುವ, ಕ್ರಾಂತಿಯ ಬಿರುಗಾಳಿಗೆ ಆಶ್ರಯ ಹುಡುಕುವ, ತಮ್ಮ ಆಸೆಗಳಿಗಾಗಿ ದೇಶೀಯರನ್ನು ಬಲಿಕೊಟ್ಟು ಪರದೇಶಿಗಳ ಕಾಲ್ನೆಕ್ಕುವ ನಾಯಕರ ಬಗ್ಗೆ ಅವರಿಗೆ ಅಸಹ್ಯ ಉಂಟಾಯಿತು. ಹೀಗೆ ಸ್ವಾತಂತ್ರ್ಯದ ಮಹತ್ವದ ಘಟ್ಟವಾದ ಸೇನಾ ಬಂಡಾಯಕ್ಕೂ ಹಿಂದಿನಿಂದ ಇರಿದ ಹಿರಿಮೆ ಗಾಂಧಿಯದ್ದು!


           ಬ್ರಿಟಿಷ್ ಸರಕಾರ ಮೂವರು ಸಂಪುಟ ಸಚಿವರ(ಲಾರೆನ್ಸ್, ಕ್ರಿಪ್ಸ್, ಅಲೆಗ್ಸಾಂಡರ್) ನಿಯೋಗವನ್ನು ಭಾರತಕ್ಕೆ ಕಳುಹಿತು. ಈ ಆಯೊಗದ ಸಮೀಕ್ಷೆಯನ್ನು ಆಧಾರವಾಗಿರಿಸಿ ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ "ಭಾರತದ ಇತಿಹಾಸದಲ್ಲಿ 1946 ಮಹತ್ವದ ವರ್ಷವಾಗಲಿದೆ. ಮುಂದಿನ ಕೆಲ ತಿಂಗಳಲ್ಲಿ ನಾವು ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು ಮುಂದೆ ಹೆಜ್ಜೆ ಹಾಕಲಿದ್ದೇವೆ. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ" ಎಂದು ಘೋಷಿಸಿದ. ಭಾರತವನ್ನು ತ್ಯಜಿಸುವ ಬಗ್ಗೆ ಬ್ರಿಟಿಷರು ತಯಾರಾಗಿದ್ದರು ಎನ್ನುವುದನ್ನು ಈ ಮಾತು ಪ್ರತಿಧ್ವನಿಸಿತ್ತು. ಹಾಗೆಯೇ "ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು..." ಎನ್ನುವ ವಾಕ್ಯ ವಿಭಜನೆಯ ಮುನ್ಸೂಚನೆಯನ್ನೂ ಕೊಟ್ಟಿತ್ತು! ಆದರೆ ವಿಭಜನೆಗೆ ಮಹಾತ್ಮ ಎಂದು ಕರೆಸಿಕೊಂಡಾತನೇ ಬೆಂಬಲ ಕೊಟ್ಟದ್ದು ಮಾತ್ರ ಚೋದ್ಯ! ಅತ್ತ ಆಟ್ಲಿ "ಭಾರತದಲ್ಲಿ ರಾಷ್ಟ್ರೀಯತೆಯ ಗಾಳಿ ಜೋರಾಗಿ ಬೀಸುತ್ತಿದೆ. ಸ್ಪಷ್ಟ ಹಾಗೂ ನಿರ್ದಿಷ್ಟ ಕ್ರಮ ಕೈಗೊಳ್ಳಲು ಇದು ಸಕಾಲ" ಎಂದು ಹೌಸ್ ಆಫ್ ಕಾಮನ್ಸಿನಲ್ಲಿ ಹೇಳಿಕೆ ನೀಡಿದ. ಹೀಗೆ ನಾವು ಮೆಟ್ಟಿದವರೇ ನಮ್ಮನ್ನು ತಟ್ಟಿ-ಮೆಟ್ಟಿ-ಹೊರಗಟ್ಟುವ ಮೊದಲೇ ಜಾಗ ಖಾಲಿ ಮಾಡುವುದೊಳ್ಳೆಯದು ಎಂಬ ನಿರ್ಧಾರಕ್ಕೆ ಸೂರ್ಯ ಮುಳುಗದ ನಾಡಿನ ನಾಯಕರುಗಳು ಬಂದಿದ್ದರು!

        ಇಷ್ಟೆಲ್ಲಾ ಇತಿಹಾಸದ ಕಟು ವಾಸ್ತವಗಳಿದ್ದರೂ ಇಂದಿಗೂ ಗಾಂಧಿ ಬಂದ ನಂತರ(1914-15) ಸ್ವಾತಂತ್ರ್ಯ ಹೋರಾಟ ಶುರುವಾಯಿತು . ಗಾಂಧಿಯ ನೇತೃತ್ವದ ಹೋರಾಟದಿಂದಾಗಿಯೇ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಎಂದು ಈ ಜಗತ್ತಿನ ಬಹು ದೊಡ್ಡ ವರ್ಗ ಭಾವಿಸುತ್ತದೆ. ತಿರುಚಿದ ಭಾರತದ ಪ್ರಾಚೀನ ಇತಿಹಾಸದಂತೆ ಭಾರತದ ಆಧುನಿಕ ಇತಿಹಾಸವೂ ಕುತಂತ್ರದಿಂದಲೇ ಹೆಣೆಯಲ್ಪಟ್ಟಿದೆ. ಅದೇ ನಮ್ಮ ಶೈಕ್ಷಣಿಕ ಪಠ್ಯಗಳಲ್ಲಿ ಶೇಖರಣೆಗೊಂಡು ಪ್ರತಿಯೊಂದು ಪೀಳಿಗೆ ಅದನ್ನೇ ಉರು ಹೊಡೆದು ಅದೇ ಸತ್ಯವೆಂದು ಭ್ರಮಿಸಿ ಹೊರಳಾಡುತ್ತಿದೆ. ತಾಯಿ ಭಾರತಿಯ ಮೈಗೆ ಹಲವು ಗಾಯಗಳನ್ನು ಮಾಡಿ ರಕ್ತ ಸೋರುವಂತೆ ಮಾಡಿದ ರಾಜಕಾರಣಿಯೊಬ್ಬನನ್ನು ಮಹಾತ್ಮ ಪಟ್ಟಕ್ಕೆ ಏರಿಸಿದ ಇತಿಹಾಸದ ವಿರೂಪದಲ್ಲಿ ಅಸಂಖ್ಯ ಹಿಂದೂಗಳ ಆಕ್ರಂದನ ಮರೆಯಾಗಿ ಹೋಗಿದೆ. ಆಗಸ್ಟ್ ಹದಿನೈದು ಅಂದರೆ ಸಾಕು ಲಕ್ಷಾಂತರ ಭಗಿನಿಯರ ಕರುಳು ಕಿತ್ತು ಬರುವ ಆಕ್ರಂದನ ಕೇಳಿಸುತ್ತದೆ. ತನ್ನ ಕಣ್ಣೆದುರಲ್ಲೇ ಅತ್ಯಾಚಾರಕ್ಕೊಳಗಾದ ತಾಯಿಯ-ಮಗಳ-ಪತ್ನಿಯ-ಸಂಬಂಧಿಯ ಕಂಡು ಅಸಹಾಯಕನಾದ ಹಿಂದೂವಿನ ಮೂಕ ವೇದನೆ ಕಣ್ಣ ಮುಂದೆ ಬರುತ್ತದೆ. ಧರ್ಮದ ಉಳಿವಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಬಲಿದಾನಿಯ ಭಾವ ಸ್ಪುರಿಸುತ್ತದೆ. ಕೆಲವೊಮ್ಮೆ ಅನ್ನಿಸುವುದಿದೆ 1857ರ ಸಂಗ್ರಾಮ ಯಶಸ್ವಿಯಾಗುತ್ತಿದ್ದರೆ...? ಸ್ವಾತಂತ್ರ್ಯ ವೀರ ಸಾವರ್ಕರ್ ಅಂಡಮಾನ್ ಕರಿನೀರ ಕತ್ತಲ ಕೂಪದೊಳಗೆ ಬೀಳದಿರುತ್ತಿದ್ದರೆ...? ಸುಭಾಷರು ಕಣ್ಮರೆಯಾಗಿರದಿರುತ್ತಿದ್ದರೆ...? ಭಾರತದ ಇತಿಹಾಸವೇ ಬದಲಾಗುತ್ತಿತ್ತು ಅಲ್ಲವೇ? ಮಹತ್ವದ ಘಟ್ಟದಲ್ಲಿ ಅದ್ವಿತೀಯನಾದ, ಪರಾಕ್ರಮಿಯಾದ, ಧರ್ಮ-ನೀತಿ:ಬ್ರಾಹ್ಮ-ಕ್ಷಾತ್ರ ಭೀರು ನಾಯಕನ ಕೊರತೆ ಭಾರತಕ್ಕೆ ಎಂದೆಂದೂ ಕಾಡುತ್ತಿರುವುದೇಕೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ