ಯಾರು ಮಹಾತ್ಮ?
ಭಾಗ- ೨೦
ಗಾಂಧಿಯ ಪರಮ ಶಿಷ್ಯ ನೆಹರೂ 1955ರಲ್ಲಿ ತಮ್ಮ ಜೊತೆ ನಡೆದ ಖಾಸಗಿ ಮಾತುಕತೆಯಲ್ಲಿ ಗಾಂಧಿಯನ್ನು ಮುದಿ ಆಷಾಢಭೂತಿ ಎಂದು ಜರೆದಿದ್ದರು ಎಂದು ಆಗಿನ ಕೆನಡಾದ ವಿದೇಶಾಂಗ ಸಚಿವ ಲೆಸ್ಟರ್ ಪಿಯರ್ಸನ್ ತಮ್ಮ "ಮೆಮರಿಸ್" ನಲ್ಲಿ ಬರೆದಿದ್ದಾರೆ. ಜಿನ್ನಾ ಪಾಲಿಗೆ ಗಾಂಧಿ ಗುಳ್ಳೆ ನರಿಯಂತೆ ಕಂಡರು. ಮುಸ್ಲಿಮರ ಓಲೈಕೆ ಮಾಡಿಯೂ ಅವರು ಮುಸ್ಲಿಮರಿಗೆ "ಚರಿತ್ರಹೀನ ಮುಸ್ಲಿಮನಿಗಿಂತಲೂ ಕೀಳಾಗಿ" ಕಂಡರು. 1915ರಲ್ಲೇ ಅನಿಬೆಸೆಂಟ್ "ದೇಶದ ಈಗಿನ ಪರಿಸ್ಥಿತಿಯಲ್ಲಿ ಅಹಿಂಸಾ ಆಯುಧ ಪ್ರಯೋಜನಕ್ಕೆ ಬರದು. ಗಾಂಧಿಯ ಪ್ರತಿಭಟನಾ ಪದ್ದತಿಯನ್ನು ದೇಶೀಯರು ಅನುಸರಿಸುವುದಿಲ್ಲ" ಎಂದು ನೇರವಾಗಿ ನುಡಿದಿದ್ದರು(ಗಾಂಧೀಜಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ). 1937ರಲ್ಲಿ ಆಂಧ್ರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಕುರಿತ ಸಭೆಯೊಂದರಲ್ಲಿ ಮದ್ದೂರಿ ಅನ್ನಪೂರ್ಣಯ್ಯ "ಗಾಂಧಿ ಯಾವಾಗಲೂ ಶರಣಾಗಿದ್ದೇ ಬಿಟ್ಟರೆ ಯಶಸ್ಸು ಗಳಿಸಿದ್ದೇ ಇಲ್ಲ. ಸ್ವಾತಂತ್ರ್ಯ ಧ್ವಜವನ್ನೇ ಕೆಳಗಿಳಿಸಿರುವ ಅವರ ನಿಷ್ಪ್ರಯೋಜಕ ಹೋರಾಟಕ್ಕೆ ನಾವು ಬೆಂಬಲ ಕೊಡುವುದಿಲ್ಲ. ಗಾಂಧಿ ಕಾಂಗ್ರೆಸ್ಸಿಗಿಂತ ದೊಡ್ದವರೇನಲ್ಲ" ಎಂದು ಗಾಂಧಿ ನಾಯಕತ್ವವನ್ನು ಕಟು ಶಬ್ಧದಲ್ಲಿ ಟೀಕಿಸಿದ್ದರು. (ಗಾಂಧೀಜಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ)"ದೇಶದ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಗಾಂಧಿ ಅಳವಡಿಸಿಕೊಂಡ ಕಾರ್ಯಕ್ರಮಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅವು ಉತ್ತಮ ಪದ್ದತಿಗಳು ಎಂದು ನನಗನಿಸಲಿಲ್ಲ. ಹೇಗೆ ಮತ್ತು ಯಾವಾಗ ತಮ್ಮ ಹೋರಾಟ ಮಾರ್ಪಾಡಾಗಿ ನೈಜ ಗುರಿಯತ್ತ ಸಾಗುತ್ತದೆ ಎಂದು ಸ್ವತಃ ಗಾಂಧಿಗೇ ಅರಿವಿಲ್ಲ" ಎಂದಿದ್ದರು ಸುಭಾಷ್(ಇಂಡಿಯನ್ ಸ್ಟ್ರಗಲ್, ಸುಭಾಷ್ ಚಂದ್ರ ಬೋಸ್). 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಬಾರಿಗೆ ಗಾಂಧಿಯ ವಿರೋಧದ ನಡುವೆಯೂ ಚುನಾಯಿತರಾದಾಗ ತಮ್ಮ ಭಾಷಣದಲ್ಲಿ "ಅನೇಕ ಕಾಂಗ್ರೆಸ್ ನಾಯಕರು ವಸಾಹತುಶಾಹಿ ಜೊತೆ ಕೈಮಿಲಾಯಿಸಿದ್ದಾರೆ" ಎಂದು ನೇರವಾಗಿ ಆರೋಪಿಸಿದ್ದರು ಸುಭಾಷ್.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರಿಖ್ ಅಲಿ).
ಸರೋಜಿನಿ ನಾಯ್ಡು ಗಾಂಧಿಯನ್ನು ಪ್ರೀತಿ ಹಾಗೂ ವ್ಯಂಗ್ಯ ಮಿಶ್ರಿತವಾಗಿ "ಮಿಕ್ಕಿ ಮೌಸ್" ಎನ್ನುತ್ತಿದ್ದರು. ಗಾಂಧಿ ಬುದ್ಧನೂ ಅಲ್ಲ ಏಸುವೂ ಅಲ್ಲ ಎನ್ನುತ್ತಿದ್ದ ಆಕೆ ಗಾಂಧಿಯನ್ನು ಸಂತ ಎಂದು ಒಪ್ಪುತ್ತಿರಲಿಲ್ಲ. "ಗಾಂಧಿಯನ್ನು ಬಡತನದಲ್ಲಿಡಲು ನಮಗೆ ಬಹಳ ಖರ್ಚಾಗುತ್ತಿದೆ. ಈ ವೃದ್ಧನನ್ನು ಬಡತನದಲ್ಲಿಡಲು ಎಷ್ಟು ಖರ್ಚಾಗುತ್ತಿದೆ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ" ಎಂದು ಗಾಂಧಿಯ ಮುಂದೆಯೇ ಕಾಂಗ್ರೆಸ್ಸಿನ ಸಭೆಯಲ್ಲಿ ಹೇಳಿದ್ದರಾಕೆ. (ದಿ ನೆಹರೂಸ್ ಆಂಡ್ ಗಾಂಧೀಸ್-ತಾರಿಖ್ ಅಲಿ; ರೆಮಿನಿಸೆನ್ಸಸ್ ಆಫ್ ದಿ ನೆಹರೂ ಏಜ್-ಎಂ.ಓ. ಮಥಾಯ್). ಗಾಂಧಿಗೆ ಅತ್ಯಂತ ನಿಕಟವರ್ತಿಯಾಗಿದ್ದ ಸರೋಜಿನಿ ನಾಯ್ಡು ಅವರಿಂದಲೇ ಈ ಮಾತು ಬಂದಿರುವುದರಿಂದ ಇದನ್ನು ಅಲ್ಲಗೆಳೆಯಲಾಗದು. ಆ ದುರ್ಭೀಕ್ಷ ಕಾಲದಲ್ಲಿ ದುಬಾರಿಯಾಗಿದ್ದ ಶೇಂಗಾ ಹಾಗೂ ಆಡಿನ ಹಾಲನ್ನೇ ಗಾಂಧಿ ಪ್ರತಿನಿತ್ಯ ಉಪಯೋಗಿಸುತ್ತಿದ್ದರು. ಹೀಗೆ ಬಡತನದಲ್ಲಿ ಕಾಣಿಸಿಕೊಳ್ಳಲು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದಾತನನ್ನು ಸರಳತೆಯ ಮಹಾಮೂರ್ತಿ ಎಂದು ಕರೆದುದು ಎಷ್ಟು ಹಾಸ್ಯಾಸ್ಪದ! ತನ್ನ ಸರಳ ಜೀವನಕ್ಕೆ ವಿಪರೀತ ಖರ್ಚಾಗುತ್ತಿದ್ದರೂ ಉಳಿದವರಿಗೆ ಸರಳತೆಯ ಆದರ್ಶ ಬೋಧಿಸಿದರು ಗಾಂಧಿ. ಮೌಂಟ್ ಬ್ಯಾಟನ್ನಿಗೂ ಸರಳತೆ ಬೋಧಿಸ ಹೊರಟರು. ತುಂಡುಬಟ್ಟೆ ತೊಟ್ಟ ಮಾತ್ರಕ್ಕೆ ಸರಳತೆಯ ಮೂರ್ತಿ ಎಂದು ನಮ್ಮವರು ನಂಬಿ ಬಿಟ್ಟರಲ್ಲಾ? ಈ ಕುರುಡಾಗಿ ನಂಬುವ ನಮ್ಮವರ ಮನೋಭಾವವೇ ದೇಶವನ್ನು ಅಂದೂ ಇಂದೂ ದುಃಸ್ಥಿತಿಗೆ ದೂಡಿದ್ದು.
ದೇಶವಿಭಜನೆಯ ಸಮಯದಲ್ಲಿ ನಡೆದ ಗಲಭೆಗಳ ಹಿಂದೆ ಸುಭಾಷರ "ಫಾರ್ವಾರ್ಡ್ ಬ್ಲಾಕ್" ಸದಸ್ಯರ ಕೈವಾಡವಿದೆ ಎಂದು ಸುಭಾಷರ ಅಣ್ಣ ಶರತ್ ಬೋಸರ ಬಳಿ ನೇರವಾಗಿ ಆಪಾದಿಸಿದರು ಗಾಂಧಿ. ಇಸ್ಲಾಮ್ ಬಗ್ಗೆ ಆಕರ್ಷಣೆಯೇ ಇರದಿದ್ದ, ನಮಾಜ್ ಮಾಡದೆ, ದಿನಾಲೂ ಗಡ್ದ ಬೋಳಿಸುತ್ತಿದ್ದ, ಕುರಾನ್-ಅಲ್ಲಾ-ಮುಲ್ಲಾಗಳನ್ನು ದ್ವೇಷಿಸುತ್ತಿದ್ದ, ನಿತ್ಯ ಕುಡಿಯುತ್ತಾ ಹಂದಿ ಮಾಂಸ ತಿನ್ನುತ್ತಿದ್ದ ವ್ಯಕ್ತಿ ಜಿನ್ನಾ. ತಿಲಕರ ಶಿಷ್ಯನಾಗಿ ಅಪ್ಪಟ ರಾಷ್ಟ್ರೀಯವಾದಿಯಾಗಿದ್ದ ಆತ ಮುಸ್ಲಿಮರಿಗೆ ಪ್ರತ್ಯೇಕ ಕೋಮುವಾರು ಪ್ರಾಂತ್ಯಗಳನ್ನು ನೀಡುವುದನ್ನೂ ವಿರೋಧಿಸಿದ್ದ. ಆದರೆ ಗಾಂಧಿಯ ವಿಧಾನಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣದಿಂದ ಆತನಿಗೆ ಕಾಂಗ್ರೆಸ್ಸಿನಲ್ಲಿ ಯಾವುದೇ ಮನ್ನಣೆ ಸಿಗಲಿಲ್ಲ. ಪ್ರತ್ಯೇಕತಾವಾದಿ, ಉನ್ಮತ್ತ, ಮತಾಂಧ ಮುಸ್ಲಿಮರನ್ನೇ ಆ ಸಮುದಾಯದ ನಾಯಕರು ಎಂದು ಗಾಂಧಿ ನೇತೃತ್ವದ ಕಾಂಗ್ರೆಸ್ ಬಿಂಬಿಸುತ್ತಾ ಜಿನ್ನಾರಂತಹ ರಾಷ್ಟ್ರೀಯವಾದಿ ಮುಸ್ಲಿಮ್ ನಾಯಕರನ್ನು ಮೂಲೆಗೆ ತಳ್ಳಿತು. ಇದರಿಂದ ಬೇಸತ್ತ ಜಿನ್ನಾ ಕೆಲ ಕಾಲ ಅಜ್ಞಾತವಾಸಿಯಾದರು. ಈ ಸಮಯವನ್ನು ಸದುಪಯೋಗಪಡಿಸಿಕೊಂಡ "ಸಾರೇ ಜಹಾಂಸೆ ಅಚ್ಛಾ" ಕರ್ತೃ ಮಹಮ್ಮದ್ ಇಕ್ಬಾಲ್ ಪತ್ರಗಳ ಸುರಿಮಳೆಯನ್ನೇ ಬರೆದು ಜಿನ್ನಾರನ್ನು ಕೋಮುವಾದಿಯಾಗಿ ಬದಲಾಯಿಸಿ, ಮುಸ್ಲಿಂ ಲೀಗ್ ನೇತೃತ್ವ ವಹಿಸಿಕೊಂಡು ಪಾಕಿಸ್ತಾನದ ಜನಕನಾಗುವಂತೆ ಮಾಡಿದ. ಹೀಗೆ ದೇಶ ವಿಭಜನೆಯ ಹಿಂದೆ ಪ್ರತ್ಯಕ್ಷವಾಗಿ ಮಾತ್ರವಲ್ಲ, ಪರೋಕ್ಷವಾಗಿಯೂ ಗಾಂಧಿ ಕಾರಣರಾದರು.
ತೆಲುಗು ಕವಿ ವೆಂಕಟ ಕವುಲು ತಮ್ಮ ಕಾಮೇಶ್ವರಿ ಶತಕಮ್ ನಲ್ಲಿ "ಗಾಂಧಿ ಸ್ವಭಾವ ಸಿದ್ಧಾಂತಗಳಿಗೆ ಸರಿ ಹೊಂದುವುದಿಲ್ಲ. ಅವರನ್ನು ನಂಬಿ ಹಿಂದೂಗಳು ಪೂರ್ತಿಯಾಗಿ ಹಾಳಾಗಿದ್ದಾರೆ. ನೂರು ಅಂಧರು ಒಬ್ಬ ಅಂಧನನ್ನು ಹಿಂಬಾಲಿಸುವಂತಾಗಿದೆ ದೇಶದ ಪರಿಸ್ಥಿತಿ" ಎಂದು ಟೀಕಿಸಿರುವುದು ಆಗಿನ ಪರಿಸ್ಥಿತಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ.
1947 ಸೆಪ್ಟೆಂಬರಿನಲ್ಲಿ ಗಾಂಧಿ ಮುಸ್ಲಿಮರ ಪರವಾಗಿ ಉಪವಾಸ ಕೂತಾಗ ಪ್ರಫುಲ್ಲ ಘೋಷ್ "ಮಂತ್ರಿಮಂಡಲವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಉಪವಾಸಕ್ಕೆ ಮುಂದಾದ ನೀವು ಬಹಳ ಅನ್ಯಾಯ ಮಾಡಿದ್ದೀರಿ" ಎಂದು ಆಕ್ಷೇಪಿಸಿದರು. ಸುಮಾರು ಹೊತ್ತು ನಡೆದ ಈ ಚರ್ಚೆಯ ಕೊನೆಗೆ ಘೋಷ್ "ಮುಸ್ಲಿಮರು ತಮ್ಮ ಮತದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿರುವಾಗ ಹಿಂದೂಗಳಿಗೆ ನೀವು ಅಹಿಂಸೆಯನ್ನು ಪಾಲಿಸಲು ಹೇಳುತ್ತಿದ್ದೀರಿ. ಹಾಗಾಗಿಯೇ ಹಿಂದೂಗಳು ನಿಮ್ಮನ್ನು ಶತ್ರುವೆಂದು ಪರಿಗಣಿಸಿದ್ದಾರೆ" ಎಂದು ಕುಪಿತರಾಗಿ ನುಡಿದರು. ಆಗ ಗಾಂಧಿ "ನನ್ನ ಉಪವಾಸ ಎರಡೂ ಸಮುದಾಯದವರಿಗೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ. ಬೇರೆ ಯಾವುದೇ ರೀತಿಯಲ್ಲಿ ನನ್ನನ್ನು ಗೆಲುವಿನಿಂದ ಇಡಲಾಗದೆಂದು ಹಿಂದೂಗಳಿಗೆ ಅನ್ನಿಸಿದಾಕ್ಷಣ ಕಲ್ಕತ್ತಾದಲ್ಲಿ ಶಾಂತಿ ನೆಲೆಸುತ್ತದೆ" ಎಂದು ಒರೆದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಮುಸ್ಲಿಮರು ಹಿಂಸೆ ನಿಲ್ಲಿಸಬೇಕೆಂದೇನು ಇಲ್ಲ. ಹಿಂದೂಗಳು ಪ್ರತಿಕ್ರಿಯೆ ತೋರಬಾರದು ಎನ್ನುವುದಷ್ಟೇ ಗಾಂಧಿಯ ಉದ್ಡೇಶವಾಗಿತ್ತು. ಫ್ರಾನ್ಸ್ ಲೇಖಕರಾದ ಕಾಲಿನ್ಸ್ ಹಾಗೂ ಲ್ಯಾಪಿಯೆರ್ ತಮ್ಮ "ಫ್ರೀಡಮ್ ಅಟ್ ಮಿಡ್ ನೈಟ್" ನಲ್ಲಿ ನಿಶ್ಯಸ್ತ್ರ ಹಾಗೂ ಅಸಹಾಯಕರ ಆಯುಧವೆನಿಸಿದ ಉಪವಾಸ ಆ ಮೋಸಗಾರ ವ್ಯಕ್ತಿಯ ಕೈಯಲ್ಲಿ ಪ್ರಬಲ ಅಸ್ತ್ರವಾಯಿತು ಎಂದಿದ್ದಾರೆ.
ಗಾಂಧಿ 1948 ಜನವರಿಯಲ್ಲಿ ಮುಸ್ಲಿಮರ ಪರವಾಗಿ ಅವರೇ ಹೇಳಿದಂತೆ ಹಿಂದೂಗಳ ವಿರುದ್ಧವಾಗಿ ಉಪವಾಸ ಆರಂಭಿಸಿದಾಗ ನೆಹರೂ ಇದರಿಂದ ಗಾಂಧಿ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಎಂದು ಹೆದರಿದರು. ಆಗ ಪಟೇಲ್ "ಗಾಂಧಿ ಸಾವಿನಿಂದ ಯಾರಿಗೂ ಪ್ರಯೋಜನವಾಗದು. ಇಡೀ ಜಗತ್ತಿನ ಎದುರು ಗಾಂಧಿ ಹಿಂದೂಗಳಿಗೆ ಮಸಿ ಹಚ್ಚಲು ನಿರ್ಧರಿಸಿದಂತಿದೆ. ಅದೇ ಅವರ ಉದ್ದೇಶವಾಗಿದ್ದರೆ ಇಲ್ಲಿ ನಾನು ಮಾಡುವಂಥದ್ದೇನೂ ಇಲ್ಲ" ಎಂದಿದ್ದರು.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರಿಖ್ ಅಲಿ).
"ನೀವು ಉಪವಾಸ ಮಾಡುವಾಗ ನಿಮ್ಮ ಪ್ರಾಣಕ್ಕೇನಾದರೂ ಅಪಾಯವಾದರೆ ಇಡೀ ದೇಶ ಹೊತ್ತಿ ಉರಿಯುವುದಿಲ್ಲವೇ?" ಎಂದು ಯಾರೋ ಕೇಳಿದರು. ಆಗ ಗಾಂಧಿ " ಆ ಸಾಧ್ಯತೆಯಿದೆ. ಆದರೆ ಆ ರೀತಿ ಆಗುವ ಮೊದಲೇ ನಾನು ಭಗವಂತನ ಸಮ್ಮುಖದಲ್ಲಿ ಇರುತ್ತೇನೆ" ಎಂದುತ್ತರಿಸಿದರು. ಒಬ್ಬ ನಾಯಕನಾಡುವ ಮಾತೇ ಇದು? ಪೂರ್ವಾಪರ, ಪರಿಣಾಮಗಳನ್ಯಾವುದನ್ನೂ ಯೋಚಿಸದೆ ಗಾಂಧಿ ಮುನ್ನುಗ್ಗುತ್ತಿದ್ದರು ಎನ್ನುವುದಕ್ಕೆ ನಿದರ್ಶನವಿದು.
1947ರ ಜನವರಿಯಲ್ಲಿ ಪ್ರಾರ್ಥನಾ ಸಭೆಯೊಂದರಲ್ಲಿ "ಕಾಂಗ್ರೆಸ್ ಸಹೋದ್ಯೋಗಿಗಳ ಮೇಲಿದ್ದ ಹಿಡಿತವನ್ನು ನಾನು ಕಳೆದುಕೊಂಡಿದ್ದೇನೆ. ಆತ್ಮದ ಪರಿಪೂರ್ಣ ಶ್ರೇಷ್ಠತೆ ವಿಚಾರದಲ್ಲಿ ನನ್ನ ಮಾತುಗಳು ಶಕ್ತಿ ಕಳೆದುಕೊಂಡಿವೆ. ನನಗೆ ತಪಶ್ಚರ್ಯದ ಕೊರತೆಯಿದೆ. ನನ್ನನ್ನು ಆವರಿಸಿರುವ ವಿಶ್ವಾಸವನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡಲು ತಪಸ್ಸಿನ ಅವಶ್ಯಕತೆಯಿದೆ" ಎಂದು ಹಲುಬಿದರು(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಗಾಂಧಿಗೆ ಅರ್ಥವಾಗುವಾಗ ಬಹಳಷ್ಟು ತಡವಾಯಿತು! ಗಾಂಧಿಯನ್ನು ಆಧ್ಯಾತ್ಮಿಕ ವ್ಯಕ್ತಿ ಎಂದವರೂ ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಬೇಕು. ತನ್ನನ್ನೇ ನಿಯಂತ್ರಿಸಿಕೊಳ್ಳಲಾಗದವನು ಸಮಾಜವನ್ನು ನಿಯಂತ್ರಿಸಲು ಹೊರಟಿದ್ದಾನೆ! ತನ್ನ ಹಿಂಬಾಲಕರನ್ನೇ ಅಂಕೆಯಲ್ಲಿಟ್ಟುಕೊಳ್ಳಲಾಗದವನನ್ನು ನಾಯಕ ಎಂದು ಕರೆಯಲಾಗುತ್ತದೆ! ವಿಪರ್ಯಾಸ! ಗಾಂಧಿ ತಮಗೆ ಆವರಿಸಿರುವುದು ಪರಮಶ್ರೇಷ್ಠ ಎಂದು ತಿಳಿದು ಅದನ್ನು ಇತರರ ಮೇಲೆ ಹೇರ ಹೊರಟಿದ್ದಾರೆ! ಅದು ಸತ್ಯವೇ? ಪ್ರಸಕ್ತ ಸಮಾಜಕ್ಕೆ ಸಾಧುವೇ? ಅದರಿಂದ ದೇಶಕ್ಕೇನಾದರೂ ಹಾನಿಯಾಗಬಲ್ಲುದೇ? ಒಳ್ಳೆಯದಾಗುವುದಾದರೆ ಏನಾದೀತು? ಹಾಳಾಗುವುದಿದ್ದರೆ ಏನು? ಇಂತಹ ಯಾವುದೇ ನಿಷ್ಕರ್ಷೆ ಮಾಡದೆ ಮನಸ್ಸಿಗೆ ಬಂದುದನ್ನೆಲ್ಲಾ ಸಮಾಜದ ಮೇಲೆ ಹೇರ ಹೊರಟರೆ ಮತ್ತೇನಾಗುತ್ತದೆ? ಈ ತಲೆಕೆಟ್ಟ ವಿಚಾರಗಳನ್ನೆಲ್ಲಾ ಕುರುಡಾಗಿ ಈ ಸಮಾಜ ಒಪ್ಪಿಕೊಳ್ಳುತ್ತದಲ್ಲಾ ಅದಕ್ಕೇನನ್ನಬೇಕು? ತನ್ನಿಂದಾಗದಿದ್ದಾಗ ತಪಶ್ಚರ್ಯೆಯ ಕೊರತೆಯಂತೆ! ಇಷ್ಟರವರೆಗೆ ಕ್ರೈಸ್ತರ ರೀತಿ ಪ್ರಾರ್ಥನೆ ಮಾಡುತ್ತಿದ್ದ ವ್ಯಕ್ತಿಗೆ ಈಗ ತಪಸ್ಸಿನ ನೆನಪಾಗಿದೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ