ಪುಟಗಳು

ಮಂಗಳವಾರ, ನವೆಂಬರ್ 8, 2016

ಯಾರು ಮಹಾತ್ಮ? ಭಾಗ- ೨೧

ಯಾರು ಮಹಾತ್ಮ?
ಭಾಗ- ೨೧


            ಒಂದು ಕಾಲದಲ್ಲಿ ಗಾಂಧಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಭೇಟಿ ಕೊಟ್ಟಿದ್ದರು. ಜಾತಿಯ ಲವಲೇಶವೂ ಇಲ್ಲದ ಶಾಖೆಯ ಸ್ವಯಂಸೇವಕರನ್ನು ಕಂಡು ಆಶ್ಚರ್ಯಚಕಿತರಾಗಿ ಸಂಘದ ಶಿಸ್ತು, ಸೇವೆ, ಸಮಾನತೆಯ ಗುಣಗಳನ್ನು ಹಾಡಿ ಹೊಗಳಿದ್ದರು. ವಿಭಜನೆಯ ಬಳಿಕ ಗಾಂಧಿ ನಿರಾಶ್ರಿತರ ಶಿಬಿರವೊಂದಕ್ಕೆ ಭೇಟಿ ನೀಡಿದಾಗ ಗಾಂಧಿಯ ತಂಡದ ಸದಸ್ಯರೊಬ್ಬರು "ನಿರಾಶ್ರಿತರ ಶಿಬಿರದಲ್ಲಿ ರಾ.ಸ್ವ.ಸಂ.ದ ಕಾರ್ಯಕರ್ತರು ಉತ್ತಮ ಸೇವೆ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ, ಶಿಸ್ತು, ಧೈರ್ಯ ಹಾಗೂ  ಸಾಮರ್ಥ್ಯಗಳು ಶ್ಲಾಘನೀಯ" ಎಂದು ಬಾಯಿ ತುಂಬಾ ಹೊಗಳಿದರು. ಆಗ ಗಾಂಧಿ "ಹಿಟ್ಲರನ ನಾಝಿಗಳು ಹಾಗೂ ಮುಸೊಲಿನಿಯ ಬೆಂಬಲಿಗ ಫ್ಯಾಸಿಸ್ಟ್'ಗಳು ಕೂಡಾ ಹೀಗೆ ಮಾಡಿದ್ದಾರೆ ಎನ್ನುವುದನ್ನು ಮರೆಯಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. (ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ಹೀಗೆ ಸಂಘದ ಸೇವಾಕಾರ್ಯವನ್ನು ಗಮನಿಸದೆ ಅದನ್ನು ಕೋಮುವಾದಿ ಎಂದು ಜರೆಯುವ, ಫ್ಯಾಸಿಸ್ಟ್ ಎಂದು ಕೂಗಾಡುವ, ಸಂಘಿಗಳನ್ನು ನಾಝಿಗಳಿಗೆ ಹೋಲಿಸುವ ಇಂದಿನ ಸೆಕ್ಯುಲರುಗಳ ಪಾಲಿಗೆ ಗಾಂಧಿ ಪಿತಾಮಹ ಎನ್ನಬಹುದು.

                      ಕಾಂಗ್ರೆಸ್ ಅಧಿಕಾರಕ್ಕಾಗಿ ಬ್ರಿಟಿಷರ ಜೊತೆ ಹೊಂದಾಣಿಕೆಗೆ ಸಿದ್ಧವಾದಾಗ ಅಂದರೆ ವಿಭಜನೆಗೆ ಕಾಂಗ್ರೆಸ್ ಒಪ್ಪಿಕೊಂಡಾಗ ಶರತ್ ಚಂದ್ರ ಬೋಸ್ ಕಾಂಗ್ರೆಸ್ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದರು. ಮುಂದೆ ಸೆಪ್ಟೆಂಬರಿನಲ್ಲಿ ಶರತ್ ಬಾಬು ತಮ್ಮನ್ನು ಭೇಟಿಯಾದಾಗ ಗಾಂಧಿ "ರಾಜಾಜಿ ಸೂತ್ರಗಳ ಜೊತೆ ನಾನು ಮುಂದಿಟ್ಟ ಸೂತ್ರಗಳನ್ನು ಕೇವಲ ಜಿನ್ನಾ ಒಬ್ಬರು ಒಪ್ಪಿಕೊಳ್ಳುತ್ತಿದ್ದರೂ ಇವನ್ನೆಲ್ಲಾ ತಪ್ಪಿಸಬಹುದಿತ್ತು. ಬ್ರಿಟಿಷರು ಬಿಟ್ಟು ಹೋದ ಬಳಿಕ ಸಾಮೂಹಿಕ ನಾಯಕತ್ವ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದರೆ ನಾನು ಮುಸ್ಲಿಮ್ ಲೀಗಿಗೆ ಸರ್ಕಾರ ರಚಿಸಲು ಆಹ್ವಾನಿಸುತ್ತಿದ್ದೆ. ನಾನು ಸೂಚಿಸಿದರೆ ಕಾಂಗ್ರೆಸ್ ಮಂತ್ರಿಗಳು ಮುಸ್ಲಿಮ್ ಲೀಗಿಗೆ ಅವಕಾಶ ಬಿಟ್ಟು ಕೊಡಲೇಬೇಕು. ನಾನು ನೇತೃತ್ವ ವಹಿಸಿದರೆ ನನ್ನ ಆದೇಶಗಳನ್ನು ಪಾಲಿಸಲು ಸಿದ್ಧರಿರುವುದಾಗಿ ನೆಹರೂ ಹಾಗೂ ಪಟೇಲರು ಹೇಳಿದ್ದಾರೆ." ಎಂದು ಅವರನ್ನು ಸಮಾಧಾನಿಸಲು ಯತ್ನಿಸಿದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ವಾಸ್ತವದಲ್ಲಿ ಅವರ ಮಾತನ್ನು ಅವಲೋಕಿಸಿದರೆ ಗಾಂಧಿ ಸಂಪೂರ್ಣ ಭಾರತವನ್ನು ಮುಸ್ಲಿಂ ಲೀಗಿಗೆ ಮಾರುವ ಸಂಚು ಹೂಡಿದ್ದರೆಂಬುದು ಸ್ಪಷ್ಟ. ಇಲ್ಲದಿದ್ದಲ್ಲಿ ದೇಶ ಎನ್ನುವ ಭಾವನೆ ಇರದಿದ್ದವರಿಗೆ, ಪ್ರತ್ಯೇಕವಾದಿ, ಮತಭ್ರಾಂತ, ಗೂಂಡಾ ಹಾಗೂ ಕಳ್ಳರಿಗೆ ಅಧಿಕಾರ ಕೊಡುವ ಮಾತನ್ನಾಡುತ್ತಿದ್ದರೇ? ಒಟ್ಟಾರೆಯಾಗಿ ಗಾಂಧಿಗೆ ಹಿಂದೂಗಳು ಶಾಂತಿ-ಸಮಧಾನದಿಂದ ಬದುಕುವುದು ಇಷ್ಟವಿರಲಿಲ್ಲವೆಂದೇ ಅನ್ನಿಸುತ್ತದೆ. ಅತ್ತ ವಿಭಜನೆಗೆ ಒಪ್ಪಿಕೊಡುವುದಿಲ್ಲ ಎಂದು ಹೇಳಿ ಲಕ್ಷಾಂತರ ಹಿಂದೂಗಳ ಪ್ರಾಣ-ಮಾನ ಹರಣವಾಗುವಾಗ ಸುಮ್ಮನಿದ್ದು ಎಲ್ಲಾ ಮುಗಿದ ಮೇಲೆ ವಿಭಜನೆಗೆ ಒಪ್ಪಿಕೊಂಡರು. ಇತ್ತ ವಿಭಜನೆಯಾಗದಿದ್ದಲ್ಲಿ ಮುಸ್ಲಿಮರಿಗೇ ಆಳಲು ಅವಕಾಶ ಮಾಡಿಕೊಡುವ ಮಾತನ್ನಾಡುತ್ತಿದ್ದಾರೆ. ಗಾಂಧಿಯ ದೇಶಭಕ್ತಿಯ ಮೇಲೂ ಸಂಶಯ ಮೂಡುತ್ತಿದೆ. ಅಸಲಿಗೆ ಗಾಂಧಿ ದೇಶ, ರಾಷ್ಟ್ರವೆಂದರೆ ಏನೆಂದು ತಿಳಿದುಕೊಂಡಿದ್ದಾರೆ?

                  1947 ಆಗಸ್ಟ್ 13ರಂದು ಗಾಂಧಿ ಕಲ್ಕತ್ತಾದ ಬೇಲಿಯ ಘಟ್ಟದ ಕೊಳಕು ಪ್ರದೇಶದಲ್ಲಿದ್ದ ಹೈದರಿ ಮ್ಯಾನ್ಶನ್ ಎನ್ನುವ ಮುಸ್ಲಿಮ್ ಮನೆಗೆ ಹೊರಟರು. ಗಾಂಧಿಯ ಇರುವಿಕೆಗಾಗಿ ಅದನ್ನು ಸ್ವಚ್ಛಗೊಳಿಸಲಾಯಿತು. ಈ ಸುದ್ದಿ ಕೇಳಿದ ಉದ್ರಿಕ್ತ ಗುಂಪೊಂದು ಗಾಂಧಿಗೆ ಘೇರಾವ್ ಹಾಕಿತು. "ನೀವೇಕೆ ಇಲ್ಲಿ ಬಂದಿರಿ? ನಾವು ತೊಂದರೆಯಲ್ಲಿದ್ದಾಗ ಬರಲಿಲ್ಲ. ಈಗ ಮುಸ್ಲಿಮರು ಹೇಳಿದ ಮಾತ್ರಕ್ಕೆ ಇಷ್ಟೆಲ್ಲಾ ಗದ್ದಲ ಮಾಡಲಾಗುತ್ತಿದೆ. ಹಿಂದೂಗಳು ತೊರೆದು ಹೋದ ಪ್ರದೇಶಕ್ಕೆ ನೀವೇಕೆ ಭೇಟಿ ಕೊಡಲಿಲ್ಲ?" ಎಂದು ಆ ಯುವಕರು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಸ್ವಲ್ಪ ಹೊತ್ತಿನಲ್ಲಿ ಸುಹ್ರಾವರ್ದಿಯ ಕಾರು ಅಲ್ಲಿಗೆ ಬಂತು. ಪರಿಸ್ಥಿತಿ ಗಂಭೀರವಾಯಿತು. ಸುಹ್ರಾವರ್ದಿಯನ್ನು ರಕ್ಷಿಸಲು ಗಾಂಧಿ ತಮ್ಮನ್ನು ಭೇಟಿಯಾಗಲು ಗುಂಪಿನ ಪ್ರತಿನಿಧಿಗಳನ್ನು ಕಳುಹಿಸಲು ಒಪ್ಪಿಸುವಂತೆ ತಮ್ಮ ಬೆಂಬಲಿಗರನ್ನು ಅಟ್ಟಿದರು. ಜನ ಶಾಂತರಾಗಿ ಸುಹ್ರಾವರ್ದಿಯನ್ನು ಹೋಗಗೊಟ್ಟರು. ಪ್ರತಿಭಟನೆ ಮುಂದುವರಿದಿತ್ತು. "ಗಾಂಧಿ ಗೋ ಬ್ಯಾಕ್" ಘೋಷಣೆ ಮುಗಿಲು ಮುಟ್ಟಿತ್ತು. ಪ್ರತಿನಿಧಿಗಳು "ಕಳೆದ ವರ್ಷ ಇದೇ ಸಮಯಕ್ಕೆ ನೇರ ಕಾರ್ಯಾಚರಣೆ ಘೋಷಿಸಿದ ಸಂದರ್ಭದಲ್ಲಿ ನೀವು ನಮ್ಮ ರಕ್ಷಣೆಗೆ ಬರಲಿಲ್ಲ. ಈಗ ಮುಸ್ಲಿಮರಿಗೆ ಏನೋ ಸಣ್ಣ ತೊಂದರೆ ಆದ ಕೂಡಲೇ ಅವರ ರಕ್ಷಣೆಗೆ ಧಾವಿಸಿ ಬಂದಿರಿ. ನೀವಿಲ್ಲಿ ಬರುವುದು ನಮಗೆ ಬೇಕಿಲ್ಲ. ಹಿಂತಿರುಗಿ ಹೋಗಿ" ಎಂದು ಏರುಧ್ವನಿಯಲ್ಲಿ ಗಾಂಧಿಗೆ ಹೇಳಿದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ಮುಸ್ಲಿಮರಿಗೆ ಸಣ್ಣ ಗಾಯವಾದರೂ ತಕ್ಷಣ ಓಡುವ ಹಿಂದೂಗಳ ಕಗ್ಗೊಲೆಯಾದರೂ ನಿರ್ಲಕ್ಷಿಸುವ ಇಂದಿನ ರಾಜಕಾರಣಿಗಳಿಗೆ ಗಾಂಧಿಯೇ ಪಿತಾಮಹ ಎಂದರೆ ತಪ್ಪೇ?

                    ಗಾಂಧಿ ತಮಗೆ ಬಂದ ಕೊಡುಗೆಗಳನ್ನು ಸ್ವತಃ ಹರಾಜಿಗೆ ಹಾಕುತ್ತಿದ್ದರು. ಅವರಿಗೆ ಹಣ ತುಂಬಿದ ಪರ್ಸ್ ಕಾಣಿಕೆಯಾಗಿ ಬರುವುದು ಮಾಮೂಲಾಗಿತ್ತು. ಕೆಲವು ಸಲ ಬೆಳ್ಳಿ ಪೆಟ್ಟಿಗೆಯಲ್ಲಿ ಉಡುಗೊರೆಗಳೂ ದೊರೆಯುತ್ತಿದ್ದವು. ಕೆಲವೊಮ್ಮೆ ತಮಗೆ ಕಾಣಿಕೆ ನೀಡಿದವರಿಗೇ ಆ ವಸ್ತುಗಳನ್ನು ಮಾರುತ್ತಿದ್ದರು. ತಮ್ಮ ಕೊರಳಿಗೆ ಹಾಕುವ ಹೂಮಾಲೆಗಳನ್ನೂ ಅವರು ಹರಾಜಿಗೆ ಹಾಕುತ್ತಿದ್ದರು. ಗಾಂಧಿ ಸ್ನೇಹಿತರು ಆತನನ್ನು ಬನಿಯಾ ಎಂದೇ ಚುಡಾಯಿಸುತ್ತಿದ್ದರು. ಮಹಿಳೆಯರು ಧರಿಸುವ ಆಭರಣಗಳನ್ನು ತೆಗೆದುಕೊಡುವಂತೆ ಮುಲಾಜಿಲ್ಲದೆ ಅವರ ಎದುರಿಗೇ ಅಂದುಬಿಡುತ್ತಿದ್ದರು. "ನನ್ನ ಸ್ವೀಟ್ ಹಾರ್ಟ್'ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಸುಮಾರು ಹತ್ತು ವರ್ಷದ ಬಾಲೆ ರಾಣಿಬಾಲಾ. ಆಕೆಯ ವಯಸ್ಸು ಕೇಳುವ ಧೈರ್ಯ ನಾನು ಮಾಡಿಲ್ಲ. ನಾನು ಆಕೆ ಜೊತೆಗೆ ಎಂದಿನಂತೆ ಆಟವಾಡುತ್ತಿದ್ದೆ. ಅವಳ ಕೈಲಿದ್ದ ಆರು ಬಂಗಾರದ ಬಳೆಗಳತ್ತ ಕದ್ದುಮುಚ್ಚಿ ನೋಡುತ್ತಿದ್ದೆ. ಅವಳ ಕೋಮಲ ಕರಗಳಿಗೆ ಅವು ಭಾರೀ ಹೊರೆ. ಅವಳ ಚೆಂದದ ಕೈಗಳು ಇಳಿದು ಹೋಗುತ್ತವೆ ಎಂದು ಅವಳಿಗೆ ವಿವರಿಸಿದೆ." ಎಂದು ತಮ್ಮ ಪ್ರವಾಸವೊಂದರ ಸಂದರ್ಭದಲ್ಲಿ ಉದ್ಗರಿಸಿದ್ದರು. ಬಿಹಾರದ ಕರಗ್ದೆಯಲ್ಲಿ ಮಹಿಳಾ ಸಭೆಯಲ್ಲಿ "ನನ್ನ ಸಭೆಯ ಕೆಲವು ಸುಂದರ ಪ್ರೇಕ್ಷಕರು ಭಾರಿ ಆಭರಣಗಳನ್ನು ಅಲಂಕರಿಸಿಕೊಳ್ಳುವುದನ್ನು ನೋಡಿ ನನಗೆ ಸಹಿಸಲಾಗುತ್ತಿಲ್ಲ. ಇದರಿಂದ ಸೌಂದರ್ಯ ಹೆಚ್ಚುವುದಿಲ್ಲ. ಬದಲಾಗಿ ಅಸ್ವಸ್ಥತೆಯನ್ನೇ ಉಂಟು ಮಾಡುತ್ತದೆ" ಎಂದು ಹೇಳಿದ್ದೇ ತಡ ರಾಶಿರಾಶಿ ಒಡವೆ ಅವರ ಕಾಲ ಬಳಿ ಬಂದು ಬಿತ್ತು. ಲೂಯಿ ಫಿಶರ್ ತನ್ನ ಸ್ನೇಹಿತನ ವಿನಂತಿಯಂತೆ ಗಾಂಧಿಯ ಸಹಿ ಇರುವ ಭಾವಚಿತ್ರ ತರುವ ಸಲುವಾಗಿ ಗಾಂಧಿಯಲ್ಲಿ ಸಹಿಗಾಗಿ ವಿನಂತಿಸಿದಾಗ ನೀವು ಹರಿಜನ ನಿಧಿಗೆ ಇಪ್ಪತ್ತು ರೂಪಾಯಿ ಕೊಟ್ಟರೆ ಮಾತ್ರ ಎಂದರು ಗಾಂಧಿ. ಫಿಶರ್ ಹತ್ತು ರೂಪಾಯಿಯಷ್ಟೇ ಕೊಡುತ್ತೇನೆಂದಾಗ ಒಪ್ಪಿಕೊಂಡರು. ಫಿಶರ್ ಈ ಪ್ರಸಂಗವನ್ನು ಗಾಂಧಿಯ ಮಗ ದೇವದಾಸರಿಗೆ ಹೇಳಿದಾಗ "ಬಾಪು ಐದು ರೂಪಾಯಿಗೂ ಸಹಿ ಮಾಡುತ್ತಿದ್ದರು" ಎಂದಾತ ಪ್ರತಿಕ್ರಿಯಿಸಿದರು(ದಿ ಲೈಫ್ ಆಫ್ ಮಹಾತ್ಮ ಗಾಂಧಿ: ಲೂಯಿಸ್ ಫಿಶರ್)

                     ಮದ್ರಾಸಿನಲ್ಲಿ ಬೆಳಗ್ಗೆ ಬಂಗಲೆಯೊಂದರಿಂದ ಹೊರಬಂದ ಗಾಂಧಿ ಕಾರನ್ನೇರಿ ಹೊರಟಾಗ ಯುವಕನೊಬ್ಬ ತಡೆದು ಸಹಿ ಮಾಡುವಂತೆ ವಿನಂತಿಸಿದ. ಗಾಂಧಿ ನೂರು ರೂಪಾಯಿ ಕೊಡುವಂತೆ ಹೇಳಿದರು. ಆ ವಿದ್ಯಾರ್ಥಿ ತನ್ನಲ್ಲಿ ಐದೇ ರೂಪಾಯಿ ಇರುವುದಾಗಿ ಹೇಳಿದ. ಗಾಂಧಿ ಅದನ್ನೂ ಎಡಗೈಯಲ್ಲಿ ಪಡೆದು ಸಹಿ ಹಾಕಿ "ನನ್ನಿಂದ ಐದು ರೂಪಾಯಿಗೆ ಸಹಿ ಪಡೆದ ಮೊದಲ ವ್ಯಕ್ತಿ ನೀನು. ಇಷ್ಟರವರೆಗೆ ನೂರು ರೂಪಾಯಿಗಂತ ಕಡಿಮೆಗೆ ನಾನು ಸಹಿ ಹಾಕಿಲ್ಲ. ನೀನು ಅದೃಷ್ಟವಂತ" ಎಂದು ನಾಚಿಕೆಯಿಲ್ಲದೆ ಹೇಳಿದರು. ಇಲ್ಲೊಂದು ವಿಚಾರ ಗಮನಿಸಿ ಸರಳತೆಯ ಮೂರ್ತಿ ಬಂಗಲೆಯಲ್ಲಿ ಉಳಿದುಕೊಳ್ಳುತ್ತಿತ್ತು, ಕಾರನ್ನೆರಿ ಸಂಚಾರ ಮಾಡುತ್ತಿತ್ತು! ರಾಜ ಮಹೇಂದ್ರಿ ರೈಲ್ವೇ ನಿಲ್ದಾಣದಲ್ಲಿ ಗಾಂಧಿ ರೈಲ್ವೇ ಕಂಪಾರ್ಟ್ ಮೆಂಟಿನಿಂದ ಹೊರಗೆ ಕೈ ಚಾಚಿದಾಗ ವ್ಯಕ್ತಿಯೊಬ್ಬ ಕಿತ್ತಳೆ ಹಣ್ಣನ್ನಿರಿಸಿದ. ಗಾಂಧಿ "ಪೈಸಾ ಕಿ ಬಾತ್ ಹೈ, ಔರ್ ದೂಸ್ರಾ ನಹಿ" ಎಂದರು. ಸಮರ್ಲಕೋಟದಲ್ಲಿ ಮಹಿಳೆಯೊಬ್ಬಳು ಗಾಂಧಿ ಕೊರಳಿಗೆ ಮಾಲೆ ಹಾಕಿದಾಗ ಅವಳ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ಕೊಡುವಂತೆ ಆಗ್ರಹಿಸಿದರು. ಅಂಕಲಪಲ್ಲಿಯಲ್ಲಿ ವೈಷ್ಣವ ಜನತೋ ಹಾಡಿದ ಬಾಲಕಿಗೆ ನಿನ್ನ ಕೈಯಲ್ಲಿರುವ ಆಭರಣಗಳನ್ನು ಕೊಟ್ಟರೆ ಹಾಡು ಕೇಳಿದ್ದಕ್ಕಿಂತ ಹೆಚ್ಚು ಸಂತೋಷವಾಗುತ್ತದೆ ಎಂದು ಕಸಿದುಕೊಂಡರು. ವಿಶಾಖಪಟ್ಟಣಂನಲ್ಲಿ ತನಗೆ ಮಾಲಾರ್ಪಣೆ ಮಾಡಿದ ಹುಡುಗಿಯಲ್ಲೂ ಬಳೆಗಳನ್ನು ಕೊಡಲು ಒತ್ತಾಯಿಸಿದರು. ಹುಡುಗಿಯ ತಂದೆ ಒಂಭತ್ತು ಬಳೆಗಳನ್ನು ತಂದು ಆಯ್ದುಕೊಳ್ಳಿ ಎಂದಾಗ ಅಷ್ಟೂ ನನ್ನವೇ ಎಂದರು. ಆತ ಎಲ್ಲವೂ ಅಲ್ಲ, ಒಂದು ಮಾತ್ರ ಎಂದು ಪ್ರತಿಕ್ರಿಯಿಸಿದ. ಅಜ್ಜಿಯೊಬ್ಬಳು ಎರಡು ಚಿನ್ನದ ಬಳೆ ನೀಡಿ ಸಂದೇಶ ಕೊಡುವಂತೆ ಕೇಳಿಕೊಂಡಾಗ ಸಂದೇಶ ಕೊಡಬೇಕೆಂದಾದರೆ ಹಣ ನೀಡೆಂದರು ಗಾಂಧಿ. ಆಕೆ ತನ್ನಲ್ಲಿದ್ದ ಚಿನ್ನದ ಸರ ತೆಗೆದು ಕೊಟ್ಟಳು. ಅದು ಗಾಂಧಿಯ ಕತ್ತು ಸೇರಿತು. 1947ರಲ್ಲಿ ಗಾಂಧಿ ಜನ್ಮದಿನದಂದು ಗುಜರಾತಿಗರು ಅವರಿಗೆ ತಾವು ಸಂಗ್ರಹಿಸಿದ ಪರ್ಸ್ ಕೊಡಲು ಕಾರ್ಯಕ್ರಮ ಏರ್ಪಡಿಸಿದಾಗ ಗಾಂಧಿ ಫ್ಲೂದಿಂದ ಬಳಲುತ್ತಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸರ್ದಾರ್ ಪಟೇಲ್ "ನಿಮ್ಮ ಅತಿ ಆಸೆಗೆ ಕೊನೆಯೇ ಇಲ್ಲ. ಒಂದು ಪರ್ಸನ್ನು ತೆಗೆದುಕೊಳ್ಳಲು ಮೃತ್ಯುಶಯ್ಯೆಯಿಂದಲೂ ಎದ್ದು ಹೋಗಲು ನೀವು ತಯಾರು" ಎಂದು ಗೇಲಿ ಮಾಡಿದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್; ಗಾಂಧೀಜಿ ಇನ್ ಆಂಧ್ರಪ್ರದೇಶ - ತೆಲುಗು ಅಕಾಡೆಮಿ). ಇವೆಲ್ಲಾ ಕೆಲವು ನಿದರ್ಶನಗಳು. ಗಾಂಧಿ ಜನರಿಂದ ಒತ್ತಾಯ ಪೂರ್ವಕವಾಗಿ ಅವರ ಆರ್ಥಿಕ ಸಾಮರ್ಥ್ಯ ನೋಡದೆ ಹಣ ಮತ್ತು ಒಡವೆಗಳನ್ನು ಸ್ವೀಕರಿಸಿದರು. ಅವು ಎಲ್ಲಿ ಬಳಕೆಯಾದವು? ಹರಿಜನರೋದ್ಧಾರಕ್ಕೋ, ಖಾದಿಗೋ ಅಥವಾ ಇನ್ನಾವುದಕ್ಕೋ ಎನ್ನುವ ವಿಷಯವಿಲ್ಲಿ ಪ್ರಧಾನವಲ್ಲ. ಗಾಂಧಿಯ ಈ ನಡವಳಿಕೆ ತಥಾಕಥಿತ ರಾಷ್ಟ್ರೀಯ ನಾಯಕನೊಬ್ಬನಿಗೆ ಶೋಭೆ ತರುವಂತಹದ್ದಲ್ಲ. ಅದರಲ್ಲೂ ಮಹಾತ್ಮ ಎಂದು ಕರೆಸಿಕೊಂಡಾತನಿಗೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ