ಪುಟಗಳು

ಬುಧವಾರ, ನವೆಂಬರ್ 23, 2016

ಯಾರು ಮಹಾತ್ಮ? ಭಾಗ-೨೫

ಯಾರು ಮಹಾತ್ಮ?

ಭಾಗ-೨೫

 
                  ಬೇಡುವುದು ಹಾಗೂ ಬ್ರಿಟಿಷರನ್ನು ಸಂತೋಷಗೊಳಿಸುವ ಕ್ರಮದ ಮೂಲಕ ಕಾಂಗ್ರೆಸ್ ಭಿಕ್ಷುಕರ ಪಕ್ಷವಾಗುವ ಮಟ್ಟಕ್ಕೆ ಇಳಿಯುವುದನ್ನು  ತಿಲಕರು ಎಂದೂ ಬಯಸುತ್ತಿರಲಿಲ್ಲ(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ತಿಲಕರ ಬಳಿಕ ಕಾಂಗ್ರೆಸ್ ಬ್ರಿಟಿಷರ ಮುಂದೆ ಮಂಡಿಯೂರಿತು.  1939ರಲ್ಲಿ ಬೋಸ್ ಗಾಂಧಿಯ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ ಗೆದ್ದರು. "ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಕೂಡಲೇ ಹೋರಾಟ ಕೈಗೆತ್ತಿಕೊಳ್ಳಬೇಕು. ಭಾರತವನ್ನು ತೊರೆಯಲು ಬ್ರಿಟಿಷರಿಗೆ ಅಂತಿಮ ಗಡುವು ನೀಡಬೇಕು" ಎಂದು ಅವರು ಘೋಷಿಸಿದರು. ಅಲ್ಲದೆ ಕೆಲವು ಕಾಂಗ್ರೆಸ್ ನಾಯಕರು ಬ್ರಿಟಿಷ್ ಸಾಮ್ರಾಜ್ಯಶಾಹಿ ಜೊತೆ ಶಾಮೀಲಾಗಿದ್ದಾರೆ ಎಂದೂ ಆಪಾದಿಸಿದರು. ಈ ಮಾತು ಗಾಂಧಿಯನ್ನು ಕುರಿತೇ ಹೇಳಿದುದಾಗಿತ್ತು.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ಬ್ರಿಟಿಷರ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಪಕ್ಷ ಸಿದ್ಧವಿತ್ತು. "ಗೌರವಯುತ ಒಪ್ಪಂದ ಸಾಧ್ಯವಾಗುವುದಾದರೆ ಬ್ರಿಟಿಷರ ಜೊತೆ ರಾಜಿಗೆ ನಾವು ಸಿದ್ಧ" ಎನ್ನುವುದು ಗಾಂಧಿಯ ನಿಲುವಾಗಿತ್ತು(ಲೈಫ್ ಹಿಸ್ಟರಿ ಆಫ್ ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ).

               ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಭೂತಪೂರ್ವ ಕಾಣಿಕೆ ನೀಡಿದ ಸಶಸ್ತ್ರ ಹೋರಾಟವನ್ನು ಗಾಂಧಿ ಟೀಕಿಸಿದರು. ಅದನ್ನು ವ್ಯರ್ಥಗೊಳಿಸಲು ತಮ್ಮಿಂದಾದ ಪ್ರಯತ್ನ ಮಾಡಿದರು. "ಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸುವುದಕ್ಕಿಂತ ಸಾವಿರ ವರ್ಷವಾದರೂ ಸರಿ, ಅಹಿಂಸಾ ವಿಧಾನದಿಂದ ಸ್ವಾತಂತ್ರ್ಯ ಗಳಿಸುವುದೇ ಮೇಲು" ಎನ್ನುತ್ತಿದ್ದರವರು. ದೇಶೀಯರನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕಿಂತ ತಮ್ಮ ತಥಾಕಥಿತ ಅಹಿಂಸಾ ಸಿದ್ಧಾಂತವೇ ಅವರಿಗೆ ಮುಖ್ಯವಾಯಿತು. ಕ್ರಾಂತಿಕಾರಿಗಳನ್ನು ತಮಗೆ ಸಿಕ್ಕ ವೇದಿಕೆ ಹಾಗೂ ಮಾಧ್ಯಮಗಳ ಮೂಲಕ ಖಂಡಿಸುತ್ತಾ ದೂಷಿಸುತ್ತಿದ್ದರು ಗಾಂಧಿ. ಈ ಕದನ ಕಲಿಗಳಿಗೆ ದೇಶೀಯರ ಹೃದಯದಲ್ಲಿ ಅಗಾಧ ಬೆಂಬಲ ಇದ್ದಾಗ್ಯೂ ಗಾಂಧಿ ಕ್ರಾಂತಿಕಾರಿಗಳಿಗೆ ಪ್ರೇರಣಾ ಸ್ತ್ರೋತರಾದ ಶಿವಾಜಿ, ರಾಣಾ ಪ್ರತಾಪ, ಗುರು ಗೋವಿಂದ ಸಿಂಗರಂತಹ ಮಹಾಪುರುಷರನ್ನು ಟೀಕಿಸಲು ಆರಂಭಿಸಿದರು. ಅವರನ್ನು "ಹಾದಿ ತಪ್ಪಿದ ದೇಶಭಕ್ತರು" ಎಂದೂ ಜರೆದರು. ಸರಕಾರ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸತೊಡಗಿದಾಗ ಪ್ರತಿರೋಧ ಬಿಡಿ, ಕನಿಷ್ಟ ಸಂತಾಪವನ್ನೂ ವ್ಯಕ್ತಪಡಿಸಲಿಲ್ಲ.

               ಕಾಂಗ್ರೆಸ್ಸಿನ ಮಂದಗಾಮಿ ನಡೆಯನ್ನು ಬೋಸ್ ಯಾವಾಗಲೂ ಉದಾಸೀನ ಭಾವ ಎನ್ನುವಂತೆ ಲೇವಡಿ ಮಾಡುತ್ತಿದ್ದರು. ಬ್ರಿಟಿಷರ ವಿರುದ್ಧ ಕೆಂಡಕಾರುವ ಹೇಳಿಕೆ ನೀಡುತ್ತಿದ್ದ ಅವರನ್ನು ಕಂಡರೆ ಸಹಜವಾಗಿಯೇ "ತನ್ನದೇ ನಡೆಯಬೇಕು" ಎನ್ನುವ ಭಾವದ ಗಾಂಧಿ ಹಾಗೂ ಅವರ ಅನುಯಾಯಿಗಳಿಗೆ ಸದಾ ಇರಿಸುಮುರಿಸು ಉಂಟಾಗುತ್ತಿತ್ತು. ಬೋಸ್ ಗಾಂಧಿ ನೇತೃತ್ವದ ಅಭ್ಯರ್ಥಿಯ ವಿರುದ್ಧ ಭಾರೀ ಅಂತರದಿಂದ ಗೆದ್ದು ಎರಡನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗುವುದರೊಂದಿಗೆ ಈ ವಿರಸ ತಾರಕಕ್ಕೇರಿತು. ತ್ರಿಪುರಾ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿ ಭಾಗವಹಿಸದೆ ಹಠ ಸಾಧಿಸಿದರು. ಪೂರ್ತಿ ಕೀಟಲೆಯ ಉಪವಾಸದ ಮೂಲಕ ರಾಜ್ ಕೋಟದಲ್ಲಿ ಪ್ರತಿಯಾಗಿ ಷೋ ನಡೆಸಿದರು. ಬೋಸ್ ಮೇಲಿನ ದ್ವೇಷದಿಂದ ಹನ್ನೆರಡು ಜನರನ್ನು ಕಾರ್ಯಕಾರಿಣಿಗೆ ರಾಜೀನಾಮೆ ನೀಡುವಂತೆ ಮಾಡಿದರು ಗಾಂಧಿ. ಅವರಲ್ಲಿ ಈ ಕಚ್ಛೆಹರುಕ ನೆಹರೂವೂ ಒಬ್ಬ. ಗಾಂಧಿ ಬೋಸ್ ಜೊತೆ ಕೆಲಸ ಮಾಡಲು ಒಪ್ಪಲಿಲ್ಲ. ಸುಭಾಷರನ್ನು  ಬಗೆಬಗೆಯಾಗಿ ನಿಂದಿಸಿದರು. ಇದೆಲ್ಲದರಿಂದ ಬೇಸತ್ತ ಸುಭಾಷರು ಅಧ್ಯಕ್ಷ ಸ್ಥಾನಕ್ಕೂ, ಕಾರ್ಯಕಾರಿಣಿಗೂ ರಾಜೀನಾಮೆ ನೀಡಿ ಹೊರನಡೆದರು. ಬೋಸ್ ತಾವಾಗಿ ಹೊರ ಹೋದ ಮೇಲೂ ಗಾಂಧಿಗೆ ಅವರ ಮೇಲಿನ ದ್ವೇಷ ಕಡಿಮೆಯಾಗಲಿಲ್ಲ. ಬೋಸ್'ರನ್ನು ಕಾಂಗ್ರೆಸ್ಸಿನಿಂದ ಉಚ್ಛಾಟಿಸಲಾಯಿತು. ಮೂರು ವರ್ಷಗಳವರೆಗೆ ಅವರು ಯಾವುದೇ ಸಾರ್ವಜನಿಕ ಸಂಸ್ಥೆಗಳಿಗೆ ಆಯ್ಕೆಯಾಗುವ ಹಕ್ಕನ್ನು ಕಸಿದುಕೊಳ್ಳಲಾಯಿತು. (ಇಂಡಿಯನ್ ಪೊಲಿಟಿಕಲ್ ಟ್ರಡಿಷನ್ಸ್ - ಎಚ್.ಎಚ್. ದಾಸ್ & ಪಿ.ಎಸ್.ಎನ್. ಪಾತ್ರೋ)(ನೇತಾಜಿ ಸುಭಾಷ್ ಚಂದ್ರ ಬೋಸ್ - ತಾತ್ಸೋ ಹಯಾಶಿದಾ)

               ಗಾಂಧಿಯ ನೇತೃತ್ವದಲ್ಲಿ 1942ರಲ್ಲಿ ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿತು. ಆಂದೋಲನಕ್ಕೆ ಚಾಲನೆ ಸಿಗುವ ಮುನ್ನವೇ ಸರ್ಕಾರ ಕಾಂಗ್ರೆಸ್ಸಿನ ಬಹುತೇಕ ನಾಯಕರನ್ನು ಬಂಧಿಸಿತು. ಕಾಂಗ್ರೆಸ್ಸಿನ ಇನ್ನೊಂದು ವರ್ಗ ಭೂಗತವಾಯಿತು. ಗಾಂಧಿಯ ಕಾರ್ಯತಂತ್ರವನ್ನು ಅನುಸರಿಸಿ ಜೈಲಿಗೆ ಹೋಗುವ ಬದಲು ಸಂಪರ್ಕ ಹಾಳುಗೆಡಹುವುದು, ಬೆಂಕಿ ಹಚ್ಚುವುದು, ಲೂಟಿ, ಕೊಲೆಗಳ ಮೂಲಕ ಸರ್ಕಾರಕ್ಕೆ ಗರಿಷ್ಟ ಹಾನಿಯನ್ನುಂಟು ಮಾಡುವುದು ಅವರ ಉದ್ದೇಶವಾಗಿತ್ತು. ಬಿಹಾರ ಹಾಗೂ ಆಸುಪಾಸಿನಲ್ಲಿ ಸುಮಾರು 900 ರೈಲ್ವೇ ನಿಲ್ದಾಣಗಳಿಗೆ ಬೆಂಕಿ ಹಚ್ಚಲಾಯಿತು. ಅನೇಕ ಸಮಯದವರೆಗೆ ಆಡಳಿತಯಂತ್ರ ಸ್ಥಬ್ಧಗೊಂಡಿತ್ತು. ಇವೆಲ್ಲವೂ ಗಾಂಧಿಯ ಅಹಿಂಸಾ ವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದ್ದವು. ಗಾಂಧಿ ಇವನ್ನು ಸಮರ್ಥಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ವಿರೋಧಿಸಿದರೆ ದೇಶೀಯರ ತಾತ್ಸಾರಕ್ಕೆ, ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತಿತ್ತು. ಸಮರ್ಥಿಸಿದರೆ ಅವರ ಅಹಿಂಸಾವಾದದ ಪೊಳ್ಳುತನ ಬಯಲಾಗುತ್ತಿತ್ತು. ಗಾಂಧಿ 'ಮಾಡು ಇಲ್ಲವೇ ಮಡಿ' ಕರೆ ನೀಡಿದ್ದನ್ನು ಜನ ಹಿಂಸಾತ್ಮಕ್ಕೆ ಹೋರಾಟಕ್ಕೆ ನಡೆದ ಅನುಮತಿ ಎಂದೇ ತಿಳಿದುಕೊಂಡರು. ಹಾಗೂ ಎಲ್ಲಾ ರೀತಿಯ ಹಿಂಸಾ ಚಟುವಟಿಕೆಗೆ ಮುಂದಾದರು. ಹೀಗೆ ಆಂದೋಲನ ಆರಂಭವಾದ ಕೆಲವೇ ವಾರಗಳಲ್ಲಿ ಗಾಂಧಿಯ ಅಹಿಂಸಾ ಸಿದ್ಧಾಂತ ಮಣ್ಣುಗೂಡಿತು. 1943ರಲ್ಲಿ ಲಾರ್ಡ್ ಲಿಲಿನ್ತೋ ಗಾಂಧಿಗೆ ಬರೆದ ಪತ್ರದಲ್ಲಿ "ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧಿಯ ಬೆಂಬಲಿಗರು ನಡೆಸಿದ ಹಿಂಸಾಚಾರಗಳನ್ನು ಒಪ್ಪಿಕೊಳ್ಳುವಂತೆ ಅಥವಾ ನಿರಾಕರಿಸುವಂತೆ" ಸವಾಲು ಹಾಕಿದ. ಆಗ ಗಾಂಧಿ ಬಲವಂತವಾಗಿ ಹಿಂಸೆಯನ್ನು ಖಂಡಿಸಬೇಕಾಯಿತು. ಅಂದರೆ ತಮ್ಮ ಗೊಡ್ಡು ವಿಚಾರಗಳ ಗೆಲುವಿಗಾಗಿ ಸ್ವಾತಂತ್ರ್ಯ ಹೋರಾಟವನ್ನೂ ವಿರೋಧಿಸುವ ನಿಲುವಿಗೂ ಗಾಂಧಿ ಬಂದಿದ್ದರು! ತಮ್ಮದೇ ಅಹಿಂಸಾ ಮಾದರಿಯ ಹೋರಾಟಗಳು ಒಂದರ ಹಿಂದೆ ಒಂದು ವಿಫಲವಾಗುತ್ತಿದ್ದರೂ, ಅಹಿಂಸೆಯ ಹೋರಾಟವೇ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಹಿಂಸಾತ್ಮಕವಾಗಿ ಬದಲಾಗಿದ್ದರೂ ಗಾಂಧಿ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟವನ್ನು ಪ್ರೋತ್ಸಾಹಿಸಲೇ ಇಲ್ಲ.

                     ಅತ್ತ ಸುಭಾಷ್, ರಾಸ್ ಬಿಹಾರಿ ಬೋಸರಿಂದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗಿನ ನೇತೃತ್ವವನ್ನು ವಹಿಸಿಕೊಂಡು ಐ.ಎನ್.ಎ ಕಟ್ಟಿ ಭಾರತದತ್ತ ದಾಳಿಗೆ ಮುಂದುವರಿಯುತ್ತಿರುವುದನ್ನು ಗಾಂಧಿ ಹಾಗೂ ಅವರ ಶಿಷ್ಯ ನೆಹರೂ ವಿರೋಧಿಸಿದರು. ಸುಭಾಷರು ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಅವರ ವಿರುದ್ಧ ಖಡ್ಗ ಹಿಡಿದು ಹೋರಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಉತ್ತರ ಕುಮಾರ ನೆಹರೂ "ನಿಮ್ಮ ಯುದ್ಧಾಪರಾಧಿ ಸುಭಾಷ್ ಬೋಸ್'ಗೆ ರಷ್ಯಾ ಆಶ್ರಯ ನೀಡಿದೆ. ವಿಚಾರಿಸಿಕೊಳ್ಳಿ" ಎಂದು ಪತ್ರವನ್ನೂ ಬರೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ತನ್ನದೇ ದೇಶೀಯನನ್ನು ಯುದ್ಧಾಪರಾಧಿ ಎಂದು ಕರೆದು, ಆತನ ವಿರುದ್ಧ ಕತ್ತಿ ಮಸೆದದ್ದು ಮಾತ್ರವಲ್ಲ, ಆತನಿಗೆ ಇಂತಹವರು ಆಶ್ರಯ ಕೊಟ್ಟಿದ್ದಾರೆ, ವಿಚಾರಿಸಿಕೊಳ್ಳಿ ಎಂದಾತ ಈ ದೇಶದ ಮೊದಲ ಪ್ರಧಾನಿಯಾದ! "ಬೋಸ್ ಶೂರತನ ವೈಭವೀಕರಿಸುವ ಪ್ರಚಾರ ಮತ್ತಷ್ಟು ನಡೆದಲ್ಲಿ, ಹೂವಿನ ಗುಚ್ಛ ನೀಡಿದಂತೆ ದೇಶದ ನಾಯಕತ್ವವನ್ನು ಅವರಿಗೆ ನೀಡಲು ದಾರಿ ಮಾಡಿದಂತೆ" ಎಂದು ಗಾಂಧಿಗೆ ಮೌಂಟ್ ಬ್ಯಾಟನ್ ಎಚ್ಚರಿಕೆ ನೀಡಿದ್ದ.(ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ)

                   ಅಲ್ಲಾ, ಮೌಂಟ್ ಬ್ಯಾಟನ್ ಗಾಂಧಿಗೆ ಯಾಕೆ ಎಚ್ಚರಿಕೆ ಕೊಡಬೇಕು? ಮೌಂಟ್ ಬ್ಯಾಟನ್ ಸುಭಾಷರಿಗೂ ಗಾಂಧಿಗೂ ಸಮಾನ ವೈರಿಯಲ್ಲವೇ? ಹಾಗಿದ್ದಲ್ಲಿ ಆತ ಗಾಂಧಿಗೆ ಯಾಕೆ ಈ ರೀತಿ ಎಚ್ಚರಿಕೆ ಕೊಡುತ್ತಾನೆ? ಆತ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದ ಎನ್ನೋಣವೇ? ನಾಯಕರ ಮಧ್ಯೆ ಅದರಲ್ಲೂ ಸುಭಾಷರು ಹಾಗೂ ಗಾಂಧಿಯ ನಡುವೆ ಒಡಕು ತರುವುದರಿಂದ ಆತನಿಗೇನೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಗಾಂಧಿ - ಸುಭಾಷರ ನಡುವಿನ ಒಡಕು ಹಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಅಲ್ಲದೆ ಸುಭಾಷರನ್ನು ಹತ್ತಿಕ್ಕಲು ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಹಲವು ರೀತಿಯಲ್ಲಿ ಪ್ರಯತ್ನಿಸಿದ್ದರು ಗಾಂಧಿ. ಸುಭಾಷರ ಸ್ವಾತಂತ್ರ್ಯ ಹೋರಾಟಕ್ಕೇ ಇತಿಶ್ರೀ ಹಾಡಲೂ ಗಾಂಧಿ ಪ್ರಯತ್ನಿಸಿದ್ದರು. ಈ ಎಲ್ಲಾ ಬಿಂದುಗಳನ್ನು ರೇಖೆಗಳೊದಿಗೆ ಜೋಡಿಸಿದಾಗ ಅದು ಕೊನೆಗೆ ಹೋಗಿ ನಿಲ್ಲುವುದು ಸ್ವಾರ್ಥ-ಅಧಿಕಾರ ದಾಹ-ಪ್ರಸಿದ್ಧಿಯ ಹುಚ್ಚು ಎನ್ನುವ ಮೂರು ಅಂಶಗಳ ವ್ಯಕ್ತಿತ್ವಕ್ಕೆ! ಅಂದರೆ ಗಾಂಧಿ ಅಧಿಕಾರಕ್ಕೋಸ್ಕರ ಬ್ರಿಟಿಷರ ಜೊತೆ ಕೈ ಮಿಲಾಯಿಸಿದ್ದರು, ತಮಗೆ ಅಥವಾ ತಮಗೆ ಬೇಕಾದವರಿಗೆ ಅಧಿಕಾರವನ್ನು ಹಸ್ತಾಂತರಿಸಲು ನಾಟಕವಾಡುತ್ತಿದ್ದರು ಎನ್ನುವ ಅರ್ಥ ಇದರಿಂದ ಹೊರಹೊಮ್ಮುತ್ತದಲ್ಲವೇ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ