ಪುಟಗಳು

ಬುಧವಾರ, ನವೆಂಬರ್ 23, 2016

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

            ನಮ್ಮ ಚರಿತ್ರೆಯ ಗ್ರಂಥಗಳಲ್ಲಿ ಆಕ್ರಮಣಕಾರರನ್ನೇ ವೈಭವೀಕರಿಸಲಾಗಿದೆ. ನಮ್ಮ ಅರಸರು ಅಸಮರ್ಥರೂ, ಭೋಗಲಾಲಸಿಗಳೂ ಆಗಿದ್ದು ತಮ್ಮ ಸುತ್ತ ನಡೆಯುತ್ತಿದ್ದ ಹುನ್ನಾರವನ್ನು, ಶತ್ರುಗಳ ಆಕ್ರಮಣವನ್ನು ಅಂದಾಜಿಸದೆ, ಶತ್ರುಗಳಿಗೆ ಪ್ರತ್ಯುತ್ತರ ನೀಡಲು ಸಿದ್ಧರಾಗದೆ ಉಪೇಕ್ಷಿಸಿ ತಮ್ಮ ಹಾಗೂ ಪ್ರಜೆಗಳ ವಿನಾಶಕ್ಕೆ ಕಾರಣೀಭೂತರಾದರು ಎನ್ನುವ ಅಭಿಪ್ರಾಯವನ್ನೇ ಸಾಮಾನ್ಯ ಜನತೆಯಲ್ಲಿ ರೂಪಿಸುವ ರೀತಿಯಲ್ಲೇ ನಮ್ಮ ಇತಿಹಾಸದ ಪಠ್ಯಗಳು ಬರೆಯಲ್ಪಟ್ಟಿವೆ. ಆದರೆ ವಾಸ್ತವ ಆ ರೀತಿ ಇತ್ತೇ ಎಂದು ಕೇಳಿದರೆ ಇತಿಹಾಸಕಾರರ ಕುತಂತ್ರಗಳು ಒಂದೊಂದೇ ಬಯಲಾಗುತ್ತವೆ. ಈ ಇತಿಹಾಸಕಾರರು ಆಕ್ರಮಕರ ಮತಾಂಧತೆ, ದಬ್ಬಾಳಿಕೆ, ಮತಾಂತರ, ಲಂಪಟತೆ, ಕ್ರೌರ್ಯ ಹಾಗೂ ಪ್ರಾಯೋಜಿತ ನರಮೇಧವನ್ನು ಮುಚ್ಚಿಡುವುದರ ಜೊತೆಜೊತೆಗೆ ನಮ್ಮ ರಾಜರ ಶೌರ್ಯ, ಪ್ರತಾಪ, ಸಂಘಟಿತ ಪ್ರಯತ್ನಗಳನ್ನೂ ಮುಚ್ಚಿಟ್ಟರು. ತಮ್ಮದೇ ಸ್ವಾರ್ಥ, ಅಧಿಕಾರ ದಾಹ ಹಾಗೂ ಅಂತಃಕಲಹಗಳಲ್ಲಿ ಮುಳುಗಿದ್ದ ಕೆಲ ರಾಜರೂ ಇದ್ದರು. ಅದರ ಜೊತೆಯಲ್ಲೇ ವಿದೇಶಿಯರ ದಾಳಿಯನ್ನು ಧೀರೋದಾತ್ತವಾಗಿ ಎದುರಿಸಿ ದೇಶದ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದವರೂ ಅನೇಕರಿದ್ದರು ಎನ್ನುವ ಸತ್ಯ ಮರೆಯಾಯಿತು.

            ಕ್ರಿ.ಶ. ಹತ್ತನೇ ಶತಮಾನದವರೆಗೂ ಕಾಬೂಲಿನವರೆಗೆ ಭಾರತ ಹಿಂದೂಗಳ ಆಳ್ವಿಕೆಗೇ ಒಳಪಟ್ಟಿತ್ತು. ಆಗ ಕಾಬೂಲಿ(ಕುಭ)ನ ರಾಜನಾಗಿದ್ದವನು ಜಯಪಾಲ. ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿದ್ದ ಕಪಿಲ, ಪೂರ್ವ ಪಂಜಾಬುಗಳವರೆಗೆ ಅವನ ರಾಜ್ಯ ಹಬ್ಬಿತ್ತು. ಆಗ ಹರಿ-ರುದ್ರರ ಹೆಸರಿನಿಂದ ನಿರ್ಮಾಣವಾಗಿದ್ದ ಹರ್ತ್(ಪಶ್ಚಿಮ ಅಪ್ಘಾನಿಸ್ಥಾನ), ಗಾಂಧಾರ(ಕಂದಹಾರ್) ಹಾಗೂ ಗಜನಿಗಳನ್ನು ಸೇರಿಸಿದ ಪ್ರಾಂತ್ಯವನ್ನು ಆಳುತ್ತಿದ್ದವ ಸಬಕ್ತಜಿನ್ ಎಂಬ ಮುಸ್ಲಿಮ್ ಗುಲಾಮ ರಾಜ. ಷಾಹಿಗಳ ಗಡಿ ಪ್ರದೇಶಗಳು ಹಾಗೂ ಪರ್ವತ ಶಿಖರಗಳಲ್ಲಿದ್ದ ಕೋಟೆಗಳ ಮೇಲೆ ದಾಳಿ ಮಾಡಿ ಸಬಕ್ತಜಿನ್ ಲೂಟಿಮಾಡತೊಡಗಿದಾಗ ಕಿಡಿಕಿಡಿಯಾದ ಷಾಹಿ ಜಯಪಾಲ ತನ್ನ ಪ್ರಬಲ ಗಜಬಲದೊಂದಿಗೆ ಪ್ರತ್ಯಾಕ್ರಮಣ ಮಾಡಿದ. ಸೋಲು ಖಚಿತಗೊಂಡಾಗ ಸಬಕ್ತಜಿನ್ ಅಧರ್ಮದ ದಾರಿ ಹಿಡಿದ. ಜಯಪಾಲನ ಸೈನ್ಯ ಬೀಡುಬಿಟ್ಟ ಸ್ಥಳ ಪರ್ವತವೊಂದರ ತಪ್ಪಲಾಗಿತ್ತು. ಆ ಪರ್ವತಾಗ್ರದಿಂದ ಸ್ವಚ್ಛ ಶುಭ್ರ ಜಲಧಾರೆಯೊಂದು ಹರಿದು ಬರುತ್ತಿತ್ತು.ಆ ಜಲಧಾರೆಗೆ ಯಾರಾದರೂ ಕಶ್ಮಲಗಳನ್ನು ಹಾಕಿದರೆ ಕೂಡಲೇ ಕತ್ತಲು ಕವಿದು ಸುಂಟರಗಾಳಿ ಬೀಸುವುದು, ಬೆಟ್ಟದ ಬಂಡೆಗಳು ಒಡೆದು ಬೀಳುವುದು, ಧಾರಾಕಾರ ಮಳೆ ಸುರಿಯುವಂತಹ ಅವಘಡಗಳುಂಟಾಗುತ್ತಿದವು. ಇದನ್ನು ಅರಿತ ಸಬಕ್ತಜಿನ್ ಅಶುದ್ಧ ವಸ್ತುಗಳನ್ನು ಆ ನೀರಿನಲ್ಲಿ ಹಾಕಿಸಿದ. ಕೂಡಲೇ ಪ್ರಳಯಕಾಲದಲ್ಲಿ ಉಂಟಾಗುವಂತೆ ಉತ್ಪಾತಗಳು ಉಂಟಾದವು. ಕುಂಭದ್ರೋಣ ಮಳೆ, ಉರುಳಿ ಬರುತ್ತಿರುವ ಬಂಡೆ, ಅಚಾನಕ್ಕಾಗಿ ಭಾರೀ ಶಬ್ಧದಿಂದ ಬೀಳುತ್ತಿರುವ ವೃಕ್ಷಗಳು, ದಟ್ಟವಾಗಿ ಹಬ್ಬಿದ್ದ ಕಪ್ಪು ಧೂಮದಿಂದ ಜಯಪಾಲನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಹಲವು ಸೈನಿಕರು ಸತ್ತು, ತಂದಿದ್ದ ಆಹಾರ ಪದಾರ್ಥಗಳು ನಷ್ಟವಾಗಿ ಯುದ್ಧ ಮುಂದುವರಿಸುವುದು ಅಸಾಧ್ಯವಾದಾಗ ಜಯಪಾಲ ಸಂಧಿಗಾಗಿ ರಾಯಭಾರಿಯನ್ನು ಕಳುಹಿದ. ಐವತ್ತು ಆನೆಗಳು, ಕೆಲವು ಕೋಟೆಗಳನ್ನು ವಶಕ್ಕೊಪ್ಪಿಸುವುದರ ಕರಾರಿನ ಮೇಲೆ ಸಬಕ್ತಜಿನ್ ಸಂಧಿಗೆ ಒಪ್ಪಿಕೊಂಡ. ಒಂದು ಚಿಕ್ಕ ಕೋಟೆಯನ್ನು ಕೊಡಲು ಜಯಪಾಲ ನಿರಾಕರಿಸಿದಾಗ ಸಿಟ್ಟಿಗೆದ್ದ ಸಬಕ್ತಜಿನ್ ಸೈನ್ಯ ತೆಗೆದುಕೊಂಡು ದಂಡೆತ್ತಿ ಬಂದು ಯುದ್ಧದಲ್ಲಿ ಜಯಪಾಲನನ್ನು ಸೋಲಿಸಿ ಲಂಘೂನ್ ನಗರದವರೆಗೆ ಜಯಪಾಲನ ರಾಜ್ಯವನ್ನು ಆಕ್ರಮಿಸಿಕೊಂಡ. ಇದು ಮಹಮ್ಮದೀಯ ಚರಿತ್ರೆಕಾರ ಆಲ್ ಉತ್ಖಿ ತನ್ನ "ತಾರೀಖ್ ಯಾಮಿನಿ"ಯಲ್ಲಿ ಬರೆದ ಕಥೆ!

               ಆದರೆ ಈ ಸೋಲಿನಿಂದ ಜಯಪಾಲನೇನೂ ಹತಾಷನಾಗಲಿಲ್ಲ. ಸಬಕ್ತಜಿನ್'ಗೆ ಶರಣಾಗಲೂ ಇಲ್ಲ. ತನ್ನ ಸೈನ್ಯವನ್ನು ಬಲಪಡಿಸಿದ. ಸುತ್ತಲ ಹಿಂದೂ ರಾಜರು ಅವನ ಸಹಾಯಕ್ಕಾಗಿ ತಮ್ಮ ಸೈನ್ಯವನ್ನು ಕಳುಹಿದರು. ಇಸ್ಲಾಂ ದುರಾಕ್ರಮಣವನ್ನು ತಡೆಯಲು ಹಿಂದೂ ರಾಜರು ಐಕ್ಯಮತ್ಯವನ್ನು, ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿರುವುದು ಈ ರಾಷ್ಟ್ರದ ಹೆಮ್ಮೆಯ ಚರಿತ್ರೆಯಲ್ಲವೇ? ಆದರೆ ನಮ್ಮ ಇತಿಹಾಸಕಾರರಿಗೆ ಒಂದಿಬ್ಬರು ಸ್ವಾರ್ಥಿ ರಾಜರ ಮೋಸವೇ ಚರಿತ್ರೆಯಾಗಿ ಕಂಡಿದುದು ಮಾತ್ರ ವಿಪರ್ಯಾಸ. ಆದರೆ ನಮ್ಮ ಇತಿಹಾಸಕಾರರಿಗೆ ಜಯಪಾಲನಿಗೆ ಹಿಂದೂ ರಾಜರು ಸಹಾಯ ಮಾಡಿರುವ ಬಗ್ಗೆ ಅನುಮಾನವೆದ್ದುಬಿಟ್ಟಿತು. ಶತ್ರುಪಕ್ಷದ ಇತಿಹಾಸಕಾರನೇ(ಫಿರಿಸ್ತಾ) ಬರೆದಿರುವುದು ಸತ್ಯಕ್ಕೆ ದೂರ ಎಂದು ನಿರ್ಧರಿಸಿಬಿಟ್ಟರು. ಸಹಾಯ ಮಾಡಿರುವ ರಾಜರುಗಳು ಬಗ್ಗೆ ಫಿರಿಸ್ತಾ ಕೊಟ್ಟಿರುವ ಅಲ್ಪ ಉಲ್ಲೇಖಗಳಿಂದ ಇದನ್ನು ರುಜುವಾತು ಮಾಡಲು ಸಾಧ್ಯವಿಲ್ಲ, ಸಾಕ್ಷ್ಯಾಧಾರಗಳು ಸಾಕಾಗುವುದಿಲ್ಲ ಎಂದು ಒಂದೇ ಏಟಿಗೆ ಈ ಅಂಶವನ್ನು ತೊಡೆದು ಹಾಕಿಬಿಟ್ಟರು. ಕಟ್ಟುವುದಕ್ಕಿಂತ ಕೆಡಹುವುದು ಸುಲಭವಲ್ಲವೇ! ಆಲ್ ಉತ್ಖಿ ಹೇಳಿದ ಆಲಿಕಲ್ಲು ಸಹಿತದ ಕುಂಭದ್ರೋಣ ಮಳೆಯ, ಪ್ರಕೃತಿ ವೈಪರೀತ್ಯದ ಕಥೆಯನ್ನು ನಂಬಿದವರಿಗೆ ಫಿರಿಸ್ತಾ ಹೇಳಿದ ಓರಗೆಯ ಹಿಂದೂರಾಜರು ಸಹಾಯ ಮಾಡಿದರು ಎನ್ನುವ ಸಾಲುಗಳು ಅನುಮಾನಕ್ಕೆ ಕಾರಣವಾದದ್ದು ಚೋದ್ಯವೇ ಸರಿ. ಸಬಕ್ತಜಿನನ ಮಾಯದಾಟಕ್ಕೆ ಬೆದರಿ ಕಂಗಾಲಾಗಿ ಶರಣು ಬಂದು ಸಂಧಿ ಮಾಡಿಕೊಂಡು ಷರತ್ತುಗಳಿಗೆ ಒಪ್ಪಿದಂತೆ ನಟಿಸಿ ಹಿಂತಿರುಗಿ ಹೋಗಿ ಕೊಟ್ಟ ಮಾತಿಗೆ ತಪ್ಪಿದನೆಂದೂ, ಪರಿಣಾಮ ಕ್ರುದ್ಧನಾದ ಸಬಕ್ತಜಿನ್ ದಂಡೆತ್ತಿ ಬರಲು ಸೋತು ವಿಶಾಲ ಭೂಪ್ರದೇಶವನ್ನು ಕಳೆದುಕೊಂಡನೆಂಬ ಕಥೆಯನ್ನು ಯಾವುದೇ ಅನ್ಯ ಸಾಕ್ಷ್ಯ ಕೇಳದೆ ನಂಬಿದವರಿಗೆ ಹಿಂದೂಗಳು ಒಗ್ಗಟ್ಟಾಗಿ ಹೋರಾಡಿದ ಘಟನೆಗೆ ಮಾತ್ರ ಸಾಕ್ಷ್ಯ ಕಡಿಮೆಯಾಯಿತು. ಶತ್ರು ಪಕ್ಷದ ಇತಿಹಾಸಕಾರ ರಾಜರ ಹೆಸರು ಹೇಳಿದರೆ ಸಾಲದೆ? ಅವನು ಅವರ ವಂಶವೃಕ್ಷವನ್ನೇ ಬರೆಯಬೇಕೇ? ಓರಗೆಯ ಹಿಂದೂ ರಾಜರು ಸಹಾಯ ಮಾಡಿದರೂ, ಧೀರೋದಾತ್ತವಾಗಿ ಸೆಣಸಿದರೂ ಸಬಕ್ತಜಿನನ ಕುತಂತ್ರಗಳೆದುರು ಷಾಹಿ ಜಯಪಾಲನ ಧರ್ಮಯುದ್ಧ ನಡೆಯಲಿಲ್ಲ. ಪೇಷಾವರದವರೆಗಿನ ಭೂಮಿ ಸಬಕ್ತಜಿನನ ವಶವಾಯಿತು. ಜಯಪಾಲ ಪಂಜಾಬಿಗೆ ಸೀಮಿತಗೊಳ್ಳಬೇಕಾಯಿತು.

           ಸಬಕ್ತಜಿನನ ಬಳಿಕ ಬಂದ ಗಜನಿ ಮಹಮ್ಮದ್ ಭಾರತದ ಮೇಲೆ ಸಾಲುಸಾಲು ದಂಡಯಾತ್ರೆಯನ್ನೇ ಕೈಗೊಂಡ. ಹದಿನೇಳು ಸಾವಿರ ಅಶ್ವಾರೋಹಿಗಳೊಡನೆ ಬಂದು ಜಯಪಾಲನನ್ನೂ, ಅವನ ಪುತ್ರ-ಪೌತ್ರರನ್ನು ಸೆರೆಯಲ್ಲಿರಿಸಿದ. ಎರಡೂವರೆ ಲಕ್ಷ ದಿನಾರುಗಳನ್ನು, 25 ಆನೆಗಳನ್ನು ತನಗೊಪ್ಪಿಸಿದರೆ ಜಯಪಾಲನನ್ನು ಬಿಡುಗಡೆ ಮಾಡುವುದಾಗಿ ಷರತ್ತು ಹಾಕಿದಾಗ ಜಯಪಾಲನ ಮಗ ಆನಂದಪಾಲ ಆ ಮೊತ್ತವನ್ನು ಕೊಟ್ಟು ತಂದೆ ಹಾಗೂ ಬಂಧುಗಳನ್ನು ಬಿಡಿಸಿಕೊಂಡ. ಸಾಲು ಸಾಲು ಸೋಲುಗಳಿಂದ ಅವಮಾನಿತನಾದ ಜಯಪಾಲ ಅದನ್ನು ಸಹಿಸಲಾರದೆ ಚಿತೆಯನ್ನು ಸಿದ್ಧಪಡಿಸಿ ತನ್ನ ಕೈಯಿಂದಲೇ ಬೆಂಕಿ ಹಚ್ಚಿಕೊಂಡು ಸಜೀವವಾಗಿ ದಹನವಾದ. ಅವನ ನಂತರ ಪಟ್ಟವೇರಿದ ಆನಂದಪಾಲನಿಗೂ ಗಜನಿಯ ಕೈಯಲ್ಲಿ ಸೋಲುಗಳೇ ಆದವಂತೆ. ಇದು ನಮ್ಮ ಎಲ್ಲಾ ಚರಿತ್ರೆಯ ಗ್ರಂಥಗಳಲ್ಲಿ ಕಂಡುಬರುವ ಆಲ್ ಉತ್ಖಿಯ ಗ್ರಂಥದಿಂದ ಉತ್ಖನನ ಮಾಡಿರುವ ಕಥೆಗಳು. ಇದನ್ನೂ ನಂಬಿ ಬಿಟ್ಟ ಬಗೆಯಂತೂ ವಿಚಿತ್ರ. ಮೊದಲೆರಡು ಬಾರಿ ಸಬಕ್ತಜಿನನ ಎದುರು ಸೋತು ಸೆರೆ ಸಿಕ್ಕು ಷರತ್ತುಗಳಿಗೆ ಬಗ್ಗಿದರೂ ಅವಮಾನವಾಗದ ಜಯಪಾಲನಿಗೆ ಅವನ ಮಗನ ಎದುರುಂಟಾದ ಸೋಲು ಅಪಮಾನಕರವಾಗಿ ಕಂಡಿತೇ? ಆಲ್ ಉತ್ಖಿಯೇ ಹೇಳಿದ ಹಾಗೆ ಮೊದಲು ಕೊಟ್ಟ ಮಾತಿಗೆ ತಪ್ಪಿ ನಡೆದ ವಚನಭೃಷ್ಟನಾಗಿದ್ದ ಪಕ್ಷದಲ್ಲಿ ಇನ್ನೊಮ್ಮೆ ಅಂತಹುದೇ ಪರಿಸ್ಥಿತಿಯಲ್ಲಿ ಅದೇ ರೀತಿಯ ಚಾಣಾಕ್ಷತೆಯನ್ನು ಯಾಕೆ ತೋರಿಸಲಿಲ್ಲ? ಒಂದೋ ಮೊದಲಿನದ್ದು ಸುಳ್ಳಾಗಿರಬೇಕು ಅಥವಾ ಎರಡನೆಯದ್ದು! ಮೊದಲನೆಯದ್ದು ಸುಳ್ಳಾಗಿದ್ದರೆ ಜಯಪಾಲ ಮೊದಲ ಬಾರಿಗೆ ಸೋತದ್ದರ ಮೇಲೂ ಸಂದೇಹ ಬರುತ್ತದಲ್ವೇ? ಎರಡನೆಯ ಬಾರಿ ಸೋತು ಚಿತೆಯೇರುವ ಹೊತ್ತಲ್ಲಿ ಅವನ ಓರಗೆಯ ರಾಜರು ಹೆಚ್ಚೇಕೆ ಅವನ ಸ್ವಂತ ಮಗ ಅಂತಹ ದೇಶ-ಧರ್ಮಕ್ಕಾಗಿ ಹೋರಾಡಿದ ಅಂತಹ ಪರಾಕ್ರಮಶಾಲಿಯನ್ನು ಈ ಕಾರ್ಯದಿಂದ ತಡೆಯಲಿಲ್ಲವೇಕೇ? ಶತ್ರು ಪಕ್ಷದ ಚರಿತ್ರೆಕಾರರ ಕಥೆಗಳನ್ನೆಲ್ಲಾ ಒಪ್ಪಿದವರಿಗೆ ನೈಜದಂತೆ ಮೇಲ್ನೋಟಕ್ಕೆ ಕಾಣುವ ಘಟನೆಗಳನ್ನು ಒಪ್ಪಲು ಕಷ್ಟವಾಗುವುದೇಕೆ?

            ಜಯಪಾಲನ ಮಗ ಆನಂದಪಾಲ ಮಹಾಶೂರನೂ, ವಿದ್ಯಾವಂತನೂ, ಕಲೋಪಾಸಕನೂ ಆಗಿದ್ದ. ಪಾಣಿನಿಯ ಅಷ್ಟಾಧ್ಯಾಯಿಗೆ ಸಮನಾದ "ಶಿಷ್ಯ-ಹಿತ-ವೃತ್ತಿ" ಎನ್ನುವ ವ್ಯಾಕರಣ ಗ್ರಂಥ ರಚಿಸಿದ ಉಗ್ರಭೂತಿಯ ಆಶ್ರಮದಲ್ಲಿ ಉಳಿದು ವಿದ್ಯಾಭ್ಯಾಸ ಮಾಡಿದ್ದ ಛಲಗಾರನಾತ. ಉಗ್ರಭೂತಿಯ ವ್ಯಾಕರಣ ಗ್ರಂಥವನ್ನು ತನ್ನ ರಾಜ್ಯದಲ್ಲಿ ಪ್ರಚುರಪಡಿಸಿದ ಗುರು ಸೇವಕನೀತ. ಎಲ್ಲಾ ಚರಿತ್ರೆಕಾರರು ಉಲ್ಲೇಖಿಸಿರುವ ಇನ್ನೊಂದು ಅಂಶವೆಂದರೆ ಜಯಪಾಲನ ಪುತ್ರ ಆನಂದಪಾಲನೂ ಗಜನಿಯ ಕೈಯಲ್ಲಿ ಸೋತು ಹೋದ ಎನ್ನುವುದು. ದಿಟವೇ. ಆದರೆ ಸಂಪೂರ್ಣವಲ್ಲ. ಒಂದು ವೇಳೆ ಆನಂದಪಾಲನಿಗೂ ಗಜನಿಯ ಎದುರು ಸಾಲುಸಾಲು ಅಪಜಯಗಳು ಪ್ರಾಪ್ತಿಯಾಗಿದ್ದರೆ ಅದೇ ಆನಂದಪಾಲ ಗಜನಿಗೆ "ನಿನ್ನ ರಾಜ್ಯದ ಮೇಲೆ ತುರ್ಕರು ದಂಡೆತ್ತಿ ಬಂದಿದ್ದಾರೆಂದೂ, ಖುರಾಸಾನ್ ಪ್ರಾಂತ್ಯವನ್ನು ಆಕ್ರಮಿಸಿದ್ದಾರೆಂದೂ ಕೇಳಿದ್ದೇನೆ. ನೀನು ಬಯಸಿದರೆ 5000 ಅಶ್ವದಳ, ಹತ್ತು ಸಾವಿರ ಪದಾತಿ, ಶತಗಜಗಳೊಡನೆ ನಾನೇ ನಿನ್ನ ಸಹಾಯಕ್ಕೆ ಬರುತ್ತೇನೆ. ಇಲ್ಲವೇ ಇದರ ಎರಡರಷ್ಟು ಬಲದೊಡನೆ ಮಗನನ್ನು ಕಳುಹುತ್ತೇನೆ. ನಾನು ಈ ಸಹಾಯ ಮಾಡುವುದು ನಿನ್ನ ಅನುಗ್ರಹಕ್ಕಾಗಿ ಅಲ್ಲ. ನಿನ್ನನ್ನು ಸಂಪೂರ್ಣವಾಗಿ ಸೋಲಿಸಿದ ಗೌರವ ನನಗಲ್ಲದೆ ಬೇರಾರಿಗೂ ದಕ್ಕಕೂಡದು ಎನ್ನುವ ನನ್ನ ಆಶಯಕ್ಕಾಗಿ!" ಎಂದು ಯಾಕೆ ಪತ್ರ ಬರೆಯುತ್ತಿದ್ದ? ಈ ಪತ್ರದ ಉಲ್ಲೇಖವಿರುವುದು ಮಹಮದ್ ಗಜನಿಯ ಆಪ್ತ ಆಲ್-ಬೆರೂನಿಯ ತಾರಿಖ್-ಉಲ್-ಹಿಂದ್'ನಲ್ಲಿ. ಇದರರ್ಥ ಆನಂದಪಾಲ ಹಿಂದೆ ಗಜನಿಯನ್ನು ಸಂಪೂರ್ಣವಾಗಿ ಸೋಲಿಸಿದ್ದಾನೆ ಎಂದಲ್ಲವೇ? ಈ ವಿಷಯದಲ್ಲಿ ಆಲ್ಬೆರೂನಿ ಸುಳ್ಳು ಹೇಳಲೂ ಆಸ್ಪದವಿಲ್ಲ. ಆ ರೀತಿ ಮಾಡಿದ್ದರೆ ಅವನ ತಲೆ ಉಳಿಯುತ್ತಿರಲಿಲ್ಲ. ಗಜನಿ ಅಷ್ಟು ದಯನೀಯವಾಗಿ ಸೋತು ಹೋತದ್ದು ಯಾವ ಯುದ್ಧದಲ್ಲಿ? ಗಜನಿಯ ಹದಿನೇಳು ದಂಡಯಾತ್ರೆಗಳಲ್ಲಿ ಅದು ಎಷ್ಟನೆಯದ್ದು? ನಮ್ಮ ಚರಿತ್ರೆಕಾರರು ಮುಚ್ಚಿಟ್ಟದ್ದು ಎಂತಹಾ ಭವ್ಯ ಇತಿಹಾಸವನ್ನು! ಮಹಮ್ಮದ್ ತನ್ನ ಪುಟ್ಟ ಸೈನ್ಯದ ಬಲದಿಂದ ಕಾಫಿರರ ಎಂತಹಾ ಬಲಾಢ್ಯ ಸೈನ್ಯವನ್ನಾದರೂ ಅಲ್ಲಾನ ಕೃಪೆಯಿಂದ ಗೆದ್ದನೆಂಬ ಮುಸ್ಲಿಂ ಆಸ್ಥಾನ ಬರಹಗಾರರ ಕಥೆಗಳನ್ನು ಚರಿತ್ರೆಯ ಗ್ರಂಥಗಳಿಗೆ ಯಥಾವತ್ ಭಟ್ಟಿ ಇಳಿಸಿದ ನಮ್ಮ ಸೆಕ್ಯುಲರ್ ಇತಿಹಾಸಕಾರರು ಮಾಡಿದ್ದು ಐತಿಹಾಸಿಕ ದ್ರೋಹವಲ್ಲವೇ?

           ಇದು ನಮ್ಮ ಇತಿಹಾಸಕಾರರ ದ್ರೋಹದ ಕಥೆಯಾಯಿತು. ಈ ಆನಂದಪಾಲನ ಭೋಳೇತನಕ್ಕೆ ಏನು ಹೇಳೋಣ? ತನ್ನ ತಂದೆಯ ಆತ್ಮಾಹುತಿಗೆ ಕಾರಣನೆನ್ನಲಾದ, ಯುದ್ಧದಲ್ಲಿ ಕುತಂತ್ರವನ್ನೇ ಉಪಯೋಗಿಸುತ್ತಿದ್ದ ಮತಾಂಧ ಮದಾಂಧನನ್ನು ಕೈಗೆ ಸಿಕ್ಕಿದರೂ ಕೊಲ್ಲದೇ ಬಿಟ್ಟ ಆನಂದಪಾಲನ ಕ್ರಮ ಹುಚ್ಚುತನವಲ್ಲದೆ ಇನ್ನೇನು? ತಾನೊಬ್ಬನೇ ಗಜನಿಯನ್ನು ಗೆದ್ದೆನೆಂಬ ಗೌರವ ಶಾಶ್ವತವಾಗಿ ಉಳಿಯಬೇಕೆಂಬ ಕಾರಣಕ್ಕೆ ಇನ್ನಾರಾದರೂ ಯುದ್ಧಕ್ಕೆ ಬಂದರೆ ಗಜನಿ ಸೋಲಬಾರದೆನ್ನುವ ಕಾರಣಕ್ಕೆ ಅವನಿಗೆ ಒತ್ತಾಸೆಯಾಗಿ ನಿಲ್ಲುವ ಅವನ ಅಹಂ ಅವನಿಗೇ ಮುಳುವಾಯಿತು. ತನಗೆ ಸಹಾಯ ಮಾಡಬಂದ ಆನಂದಪಾಲನನ್ನು ಗಜನಿ ನಡೆಸಿಕೊಂಡದ್ದಾದರೂ ಹೇಗೆ? ಮುಲ್ತಾನನ್ನು ಆಳುತ್ತಿದ್ದ ದಾವೂದನ ಮೇಲೆ ದಾಳಿ ಮಾಡಲು ನನ್ನ ಸೈನ್ಯವನ್ನು ನಿನ್ನ ರಾಜ್ಯದ ಮೂಲಕ ಕೊಂಡು ಹೋಗಲು ಅನುಮತಿ ಕೊಡು ಎಂದು ಮಹಮ್ಮದ್ ಕೇಳಿದಾಗ ದಾವೂದನೊಂದಿಗೆ ಮೊದಲಿನಿಂದಲೂ ತನಗಿದ್ದ ಸ್ನೇಹ ಸಂಬಂಧದ ಕಾರಣ ಆನಂದಪಾಲ ಅನುಮತಿ ನಿರಾಕರಿಸಿದ. ಒಂದು ವೇಳೆ ಆನಂದಪಾಲ ಹಿಂದೆ ಗೆದ್ದಿಲ್ಲವೆಂದಿದ್ದರೆ ಈ ಅನುಮತಿ ಕೇಳುವ ಪ್ರಸಂಗವೂ ಬರುತ್ತಿರಲಿಲ್ಲ ಅಲ್ಲವೇ? ಕೆರಳಿದ ಗಜನಿ ಸಕಲ ಸೈನ್ಯದೊಂದಿಗೆ ದಂಡೆತ್ತಿ ಬಂದ. ಅಪಾಯವನ್ನು ಗ್ರಹಿಸಿದ ಉಜ್ಜಯಿನಿ, ಗ್ವಾಲಿಯರ್, ಕನೋಜ್, ಕಲಿಂಜರ್, ಅಜ್ಮೀರಗಳ ದೊರೆಗಳು ಆನಂದ ಪಾಲನಿಗೆ ಬೆಂಬಲವಾಗಿ ದೊಡ್ಡ ಪ್ರಮಾಣದ ಸೈನ್ಯವನ್ನು ಕಳುಹಿಕೊಟ್ಟರು. ನಲವತ್ತು ದಿನಗಳ ಕಾಲ ಎರಡೂ ಪಕ್ಷಗಳು ಶಿಬಿರದಲ್ಲೇ ಉಳಿದವು. ಈ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳ ಸ್ತ್ರೀಯರು, ಪುರುಷರು ತಂತಮ್ಮ ಬೆಳ್ಳಿ,ಬಂಗಾರದ ಒಡವೆಗಳನ್ನು ಮಾರಿ, ಆಭರಣಗಳನ್ನು ಕರಗಿಸಿ ಶತ್ರುಗಳನ್ನು ಎದುರಿಸಲು ಯಥಾಶಕ್ತಿ ನಿಧಿಯನ್ನು ಒಟ್ಟುಗೂಡಿಸಿಕೊಟ್ಟರು. ಇಂತಹ ಅಭೂತಪೂರ್ವ ರಾಷ್ಟ್ರಪ್ರೇಮ, ಐಕ್ಯತೆ ವಿಜೃಂಭಿಸಿದ್ದರೂ, ಸ್ವತಃ ಮಹಾಶೂರನಾಗಿದ್ದ ಆನಂದಪಾಲನೇ ಮಹಾ ಸೇನೆಯ ನೇತೃತ್ವ ವಹಿಸಿದ್ದಾಗ್ಯೂ ವಿಧಿ ಬೇರೊಂದು ಬಗೆಯಿತು. ಮಹಮ್ಮದ್ ತ್ವರಿತವಾಗಿ ದಾಳಿ ಮಾಡುವ ತನ್ನ ನುರಿತ ಬಿಲ್ಲುಗಾರರನ್ನು ಒಮ್ಮೆಲೇ ದಾಳಿ ಮಾಡುವಂತೆ ಪ್ರೇರೇಪಿಸಿದ. ಅವರೆಲ್ಲಾ ಕ್ಷಣಾರ್ಧದಲ್ಲಿ ಸತ್ತು ಬಿದ್ದರು. ಹೊತ್ತು ಕಳೆಯುತ್ತಿದ್ದಂತೆ ಮಹಮ್ಮದನ ಕಡೆಯ ಅತಿರಥ ಮಹಾರಥರೆಲ್ಲಾ ನೆಲಕ್ಕೊರಗಿದರು. ಇನ್ನೇನು ಸೋತು ನೆಲಕ್ಕಚ್ಚಿ ತನ್ನ ಪಾಡು ನಾಯಿಪಾಡಾಗುತ್ತದೆ ಎನ್ನುವಾಗ ಮಹಮ್ಮದ ತನ್ನ ಕಡೆಯ ಆಯ್ದ ಸೈನಿಕರಿಗೆ ನೇರವಾಗಿ ಆನಂದಪಾಲ ಕುಳಿತ ಆನೆಯ ಮೇಲೆ ದಾಳಿ ಮಾಡುವಂತೆ ಕಳುಹಿದ. ಶತ್ರು ಸೈನಿಕರ ಈಟಿಗೆ ಆನಂದಪಾಲ ಕುಳಿತಿದ್ದ ಆನೆ ಗಾಯಗೊಂಡು ಓಡಲಾರಂಭಿಸಿದಾಗ ರಾಜನೇ ಪಲಾಯನ ಮಾಡುತ್ತಿದ್ದಾನೆಂದು ಅರಿತ ಅವನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಮೊದಲೇ ಧೂರ್ತನಾಗಿದ್ದ ಗಜನಿ ಈ ಗೊಂದಲದ ಪರಿಸ್ಥಿತಿಯನ್ನು ತನಗೆ ಅನುಕೂಲಕರವಾಗುವಂತೆ ಬಳಸಿ ಯುದ್ಧದಲ್ಲಿ ಜಯಶಾಲಿಯಾದ. ಪರಾಭವಗೊಂಡ ಸೈನ್ಯವನ್ನು ಹಿಂದೂ ರಾಜರಂತೆ ಕ್ಷಮಿಸಿ ಬಿಟ್ಟುಬಿಡದೆ ಅವರ ಬೆನ್ನ ಹಿಂದೆ ಬಿದ್ದು ಬೇಟೆಯಾಡಿ ಇಪ್ಪತ್ತು ಸಾವಿರ ಸೈನಿಕರ ಮಾರಣಹೋಮ ಮಾಡಿದ. ಹೀಗೆ ತಾನು ಸೋಲಿಸಿದೆ ಎಂದು ಗರ್ವಪಟ್ಟ ಶತ್ರುವಿನ ಕೈಯಲ್ಲೇ ಆನಂದಪಾಲ ಸೋಲಲ್ಪಟ್ಟ. ಐವತ್ತು ಗಜ ಹಾಗೂ ಪ್ರತಿವರ್ಷ ಸುಲ್ತಾನನ ಸೇವೆ ಮಾಡಲು ಎರಡು ಸಾವಿರ ಜನರನ್ನು ಸರಬರಾಜು ಮಾಡುವ ಸಂಧಿಯೊಂದಿಗೆ ಸಾಮಂತನಾಗಿಬಿಟ್ಟ. ಮುಂದಿನ ಭಾರತವೀರರು ಈ ಘಟನೆಯಿಂದ ಪಾಠ ಕಲಿಯಬೇಕಿತ್ತು. ಹೀಗೆ ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...ಆದರೆ ಇತಿಹಾಸಕಾರರ ತಿರುಚುವಿಕೆಗೆ ಸಿಲುಕಿ ಮಣ್ಣಾಗಿ ಹೋದ!

             ಈ ಸೋಲಿನ ನಂತರ ಷಾಹಿಗಳು ತಮ್ಮ ರಾಜಧಾನಿಯನ್ನು ನಂದನಕ್ಕೆ ಬದಲಿಸಿಕೊಂಡರಾದರೂ ಗಜನಿಗೆ ಅಡಿಗಡಿಗೆ ತಡೆಯಾಗಿ ನಿಂತರು. ಆನಂದಪಾಲನ ಮಗ ತ್ರೀಲೋಚನಪಾಲ ಕ್ರಿ.ಶ 1013ರಲ್ಲಿ ಕಾಶ್ಮೀರದ ಪ್ರಧಾನಿಯ ಸಹಾಯ ಪಡೆದು ಗಜನಿಯನ್ನು ದಿಟ್ಟವಾಗಿ ಎದುರಿಸಿದ. ಹಲವು ದಿನಗಳವರೆಗೆ ಯುದ್ಧ ನಡೆಯಿತು. ಇಲ್ಲೂ ಮೋಸದಿಂದ ಗಜನಿ ಜಯಶಾಲಿಯಾದ. ಆತನ ಮಗ ಭೀಮಪಾಲ ಲೋಹರ ಅಥವಾ ಲೋಹಕೋಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ ವೇಳೆಯಲ್ಲಿ(ಕ್ರಿ.ಶ.1015) ಗಜನಿ ಹರಸಾಹಸ ಪಟ್ಟರು ಆತನ ಕೂದಲು ಕೊಂಕಿಸಲಾಗಲಿಲ್ಲ. ಹೇಗೋ ಬಚಾವಾದ ಗಜನಿ ನಿರಾಶನಾಗಿ ತನ್ನ ಊರು ಸೇರಿಬಿಟ್ಟ. ಷಾಹಿಗಳು ಲೋಹರಾದಿಂದ ಆಚೆಗೆ ಗಜನಿಯನ್ನು ಹೋಗಗೊಡಲೇ ಇಲ್ಲ. ಅತ್ತ ಗಜನಿಗೂ ಅವರನ್ನು ಲೋಹರಾದಿಂದ ನಿರ್ಮೂಲನೆಗೊಳಿಸಲಾಗಲಿಲ್ಲ. ಆದರೆ ಸತತ ಯುದ್ಧಗಳ ಬಳಿಕ 1021ರಲ್ಲಿ ತ್ರಿಲೋಚನಪಾಲ ಹಾಗೂ 1026ರಲ್ಲಿ ಭೀಮಪಾಲನನ್ನು ಕೊಲೆಗೈದ ಗಜನಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಿದ. ವರ್ಷಗಳ ಬಳಿಕ ಆಲ್ಬೆರೂನಿ ಬರೆಯುತ್ತಾನೆ- "ಷಾಹಿಗಳ ರಾಜವಂಶ ಈಗ ನಿರ್ನಾಮವಾಗಿದೆ. ಆದರೆ ತಾವಿದ್ದಷ್ಟು ದಿನ ಪರಮ ವೈಭವದಿಂದ ಪರಾಕ್ರಮದಿಂದ ಬದುಕಿದ ಷಾಹಿಗಳು ಉದಾತ್ತ ಮನೋಭಾವವನ್ನು, ಉದಾತ್ತ ಗುಣಧರ್ಮವನ್ನೂ ಹೊಂದಿದ್ದ ಮಹಾಪುರುಷರಾಗಿದ್ದರು." ಸುಮಾರು ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿದ ಷಾಹಿ ರಾಜವಂಶ ಮಾತೃಭೂಮಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಸಮರ್ಪಿಸಿತು. ಭಾರತೀಯ ಅರಸರು ವಿದೇಶೀ ಆಕ್ರಮಣದ ವಿರುದ್ಧ ಸೆಟೆದು ನಿಲ್ಲಲಿಲ್ಲ ಎಂದು ಹೇಳಿದ ಮೂರ್ಖರಿಗೆ ಇದು ಅರ್ಥವಾದೀತೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ