ಪುಟಗಳು

ಗುರುವಾರ, ನವೆಂಬರ್ 10, 2016

ಯಾರು ಮಹಾತ್ಮ? ಭಾಗ- ೨೩

ಯಾರು ಮಹಾತ್ಮ?
ಭಾಗ- ೨೩


          ವಿಭಜನೆಯ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸುವ ಹೊತ್ತಲ್ಲೇ ವಿಭಜನೆ ವಿರುದ್ಧ ಹೋರಾಟ ಆರಂಭಿಸುವಂತೆ ಆಗ್ರಹಿಸುವಂತಹ ಅನೇಕ ಪತ್ರಗಳು ಗಾಂಧಿಗೆ ಬರತೊಡಗಿದವು. ಬ್ರಿಟಿಷರು ತಾವು ಭಾರತವನ್ನು ವಶಕ್ಕೆ ತೆಗೆದುಕೊಳ್ಳುವಾಗ ಸೃಷ್ಟಿಸಿದ್ದ ಸ್ಥಿತಿಯನ್ನೇ ಈಗ ಮರುಸೃಷ್ಟಿಸಿದ್ದಾರೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರೊಂದಿಗೆ ಜಗಳ ನಡೆಸುವಂತೆ ಮಾಡಿ ತಾವು ತೆರಳುತ್ತಿದ್ದಾರೆ. ನೀವು ವಿಭಜನೆ ವಿರುದ್ಧ ಹೋರಾಟವನ್ನು ಪ್ರಾರಂಭಿಸುವುದಾದಲ್ಲಿ ನಾನು ಗೌರವಯುತವಾಗಿ ಒಂದು ಲಕ್ಷ ಶಿಸ್ತುಬದ್ಧ ಕಾರ್ಯಕರ್ತರನ್ನು ಒದಗಿಸಬಲ್ಲೆ. ಅವರು ಅಹಿಂಸೆಯ ದೀಕ್ಷೆ ತೊಟ್ಟವರಲ್ಲದಿದ್ದರೂ ನಿಮ್ಮ ಸೂಚನೆಗಳನ್ನು ತಮ್ಮದೇ ನೀತಿ ಸಂಹಿತೆಯಂತೆ ವಿಶ್ವಾಸದಿಂದ ಪಾಲಿಸುತ್ತಾರೆ ಎನ್ನುವುದು ಒಂದು ಪತ್ರದ ಒಕ್ಕಣೆಯಾಗಿತ್ತು. ಆದರೆ ಇಅದಕ್ಕೆ ಗಾಂಧಿ "ವಿಭಜನೆಯಂದ ನನ್ನಷ್ಟು ದುಃಖಕ್ಕೀಡಾಗುವವರು ಬೇರೆ ಯಾರೂ ಇಲ್ಲ. ಆದರೆ ಇದರ ವಿರುದ್ಧ ಹೋರಾಟ ನಡೆಸುವ ಯಾವುದೇ ಇರಾದೆ ನನಗಿಲ್ಲ. ಕಾಂಗ್ರೆಸ್ ಯಾವಾಗ ವಿಭಜನೆಯನ್ನು ತನಗಿಷ್ಟವಿಲ್ಲದಿದ್ದರೂ ಕಾಂಗ್ರೆಸ್ ಅಂಗೀಕರಿಸಿತೋ ಅಂತಹ ಕಾಂಗ್ರೆಸ್ ವಿರುದ್ಧವೂ ನಾನ್ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಅಂತಹ ಹೆಜ್ಜೆಯೂ ಕಲ್ಪನಾತೀತ. ಬ್ರಿಟಿಷರು ವಿಭಜನೆಯನ್ನು ಪ್ರೋತ್ಸಾಹಿಸಿಲ್ಲ. ಹಾಗಾಗಿ ಅವರ ವಿರುದ್ಧ ನಿಮ್ಮ ದಾಳಿಯನ್ನೂ ನಾನು ಒಪ್ಪುವುದಿಲ್ಲ" ಎಂದು ಪ್ರತಿಕ್ರಿಯಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಹಾಗಾದರೆ ಗಾಂಧಿಯ ಪ್ರಕಾರ ದೇಶ ವಿಭಜನೆಗೆ ಜವಾಬ್ದಾರರು ಯಾರು? ಇದು ನುಣುಚಿಕೊಳ್ಳುವ ಕುತಂತ್ರ ಬುದ್ಧಿಯಲ್ಲವೇ? ಅತ್ತ ಕಾಂಗ್ರೆಸ್ ಕಾರ್ಯಕಾರಿಣಿಯ ತೀರ್ಮಾನದ ವಿರುದ್ಧವೂ ಹೋರಾಟ ಮಾಡುವುದಿಲ್ಲ. ಇತ್ತ ಬ್ರಿಟಿಷರ ವಿರುದ್ಧವೂ! ಕಾಂಗ್ರೆಸ್ ವಿರುದ್ಧ ಹೋರಾಟ ಕಲ್ಪನಾತೀತ. ಲಕ್ಷಾಂತರ ಜನರ ಬೆಂಬಲವಿದ್ದು, ಅಸಂಖ್ಯ ಪತ್ರಗಳು ಹೋರಾಟ ಕೈಗೊಳ್ಳುವಂತೆ ಗೋಗರೆದಾಗಲೂ ಗಾಂಧಿಗೆ ವಿಭಜನೆ ವಿರುದ್ಧ ಹೋರಾಡುವ ಮನಸ್ಸಿಲ್ಲವೆಂದಾದರೆ ಗಾಂಧಿಗೆ ವಿಭಜನೆಗೆ ಪೂರ್ಣಸಹಮತವಿತ್ತು ಎಂದೇ ಅರ್ಥವಲ್ಲವೇ? ಜನ ಪಾಕಿಸ್ತಾನ ರಚನೆ ವಿರುದ್ಧ ಹೋರಾಡಬೇಕೆಂದು ನೇರವಾಗಿ ಹೇಳಿದ್ದರು. ಗಮನಿಸಿ, ಬಹುಷಃ ಇದೇ ಕಾರಣಕ್ಕಾಗಿ ಗಾಂಧಿ ಮುಸ್ಲಿಮ್ ಲೀಗ್ ಹೆಸರನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಿಲ್ಲ.

        "ಕಾರ್ಯಕಾರಿ ಸಮಿತಿಯ ದೇಶ ವಿಭಜನೆಯ ನಿರ್ಣಯವನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಕೆಡುಕಿನ ಸಲಹೆ ಬರಬಹುದು. ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಗೆ ಇದನ್ನು ಮಾಡುವ ಅಧಿಕಾರವಿದೆ. ಆದರೆ ಅವರ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯು ನಿರ್ಣಯ ಕೈಗೊಂಡಿದೆ ಮತ್ತು ಆ ನಿರ್ಣಯದ ಪರವಾಗಿ ನಿಲ್ಲುವದು ತಮ್ಮ ಕರ್ತವ್ಯ ಎಂಬುದನ್ನು ಸದಸ್ಯರು ತಿಳಿದುಕೊಳ್ಳಬೇಕು" "ನಿರ್ಣಯಕ್ಕೆ ಸಂಬಂಧಿಸಿ ಕಾರ್ಯಕಾರಿ ಸಮಿತಿ ಹೊರತುಪಡಿಸಿ ಇನ್ನೆರಡು ಪಕ್ಷಗಳಿವೆ - ಬ್ರಿಟಿಷ್ ಸರಕಾರ ಮತ್ತು ಮುಸ್ಲಿಮ್ ಲೀಗ್. ಆ ಹಂತದಲ್ಲಿ ಎಐಸಿಸಿ ನಿರ್ಣಯವನ್ನು ವಿರೋಧಿಸಿದರೆ ಜಗತ್ತು ಏನೆಂದು ತಿಳಿದುಕೊಳ್ಳುತ್ತದೆ? ಎಲ್ಲಾ ಪಕ್ಷಗಳು ವಿಭಜನೆಯ ಯೋಜನೆಯನ್ನು ಒಪ್ಪಿಕೊಂಡಿವೆ. ಕಾಂಗ್ರೆಸ್ ತನ್ನ ಮಾತಿನಿಂದ ಹಿಂದೆ ಸರಿಯುವುದು ಸೂಕ್ತವಾಗಲಾರದು."(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಮುಸ್ಲಿಮ್ ಲೀಗ್ ಹಾಗೂ ಬ್ರಿಟಿಷರು ಒಪ್ಪಿಕೊಂಡ ಮಾತ್ರಕ್ಕೆ ಕಾಂಗ್ರೆಸ್ ಹಾಗೂ ದೇಶದ ಜನತೆ ವಿಭಜನೆಯನ್ನು ಒಪ್ಪಿಕೊಳ್ಳಬೇಕೇ? ಜಗತ್ತಿನಲ್ಲಿ ಕಾಂಗ್ರೆಸ್ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಎನ್ನುವ ಉದ್ದೇಶಕ್ಕಾಗಿ ಭಾರತವನ್ನು ಹಾಳುಗೆಡವಬೇಕೇ? ಗಾಂಧಿಯನ್ನು ಮಹಾತ್ಮ ಎಂದು ಪೂಜಿಸುವ ಯಾರೂ ಗಾಂಧಿಯ ಇಂತಹ ಕುಟಿಲ ನೀತಿಗಳನ್ನು ತಿಳಿದಿರುವುದಿಲ್ಲ. ತಿಳಿದಿದ್ದರೂ ಹೇಳುವುದಿಲ್ಲ. ಸಾರ್ವಜನಿಕವಾಗಿ ಒಪ್ಪುವುದೂ ಇಲ್ಲ. ಅವಕಾಶವಾದ!

          "ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಕಾಂಗ್ರೆಸ್ ತಿರಸ್ಕರಿಸಿದರೆ ಆಗ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಮೇಲೆ ಅವಿಶ್ವಾಸ ಸೂಚಿಸುತ್ತದೆ. ಇದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಹಾಗೂ ಹೊಸನಾಯಕರನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಹೊಸ ನಾಯಕ ಸರ್ಕಾರದ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರ್ಣಯವನ್ನು ವಿರೋಧಿಸುವವರು ಅಂಥ ನಾಯಕಗಣವನ್ನು ಹುಡುಕಿಕೊಳ್ಳುವ ವಿಶ್ವಾಸ ಹೊಂದಿದ್ದರೆ ಮತ್ತು ಬಹುಮತ ಸದಸ್ಯರು ಇದೇ ದೃಷ್ಟಿಕೋನ ಹೊಂದಿದ್ದರೆ ಎಐಸಿಸಿ ನಿರ್ಣಯವನ್ನು ತಿರಸ್ಕರಿಸಬಹುದು"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಗಾಂಧಿಯ ದೃಷ್ಟಿಯಲ್ಲಿ ಈಗಿರುವ ಕಾಂಗ್ರೆಸ್ಸಿಗರನ್ನು ಬಿಟ್ಟು ಬೇರೆ ನಾಯಕರೇ ಇಲ್ಲವೇ? ಅಪ್ರತಿಮ ಕ್ಷತ್ರಿಯರನ್ನು ಕಂಡ ಈ ನಾಡಿನಲ್ಲಿ ನಾಯಕರಿಗೆ ಬರಗಾಲವೇ? ಇದು ಜನರನ್ನು ವಿಭಜನೆಗೆ ಒಪ್ಪಿಸುವ ಕುಟಿಲತೆಯಷ್ಟೇ! ಇಲ್ಲೇ ಒಂದು ಒಳಸುಳಿಯಿದೆ! ಪರೋಕ್ಷವಾಗಿ ತಮ್ಮ ಶಿಷ್ಯ ನೆಹರೂವಿಗಿಂತ ಉತ್ತಮ ನಾಯಕರಿಲ್ಲ ಅಥವಾ ನೆಹರೂಗಲ್ಲದೆ ಬೇರ್ಯಾರಿಗೂ ಅಧಿಕಾರ ಸಿಗಬಾರದು ಎನ್ನುವ ಭಾವವನ್ನು ಗಾಂಧಿ ಪ್ರಕಟಿಸುತ್ತಿದ್ದಾರೆಯೇ? ಮುಂದೆ ನಡೆದ ಎಲ್ಲಾ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ.

        "ಭಾರತ ವಿಭಜನೆಯನ್ನು ಅದಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು  ಐರ್ಲೆಂಡಿನಲ್ಲಿರುವ ಭಾರತೀಯರು ಬಲವಾಗಿ ವಿರೋಧಿಸುತ್ತಾರೆ. ಬ್ರಿಟಿಷರು ಐರ್ಲೆಂಡನ್ನು ತ್ಯಜಿಸುವಾಗ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ಇದರ ಪರಿಣಾಮವಾಗಿ ಈಗ ಉತ್ತರ ಹಾಗೂ ದಕ್ಷಿಣ ಐರ್ಲೆಂಡಿನ ಜನರು ದೇವಾಲೆರಾ ನೇತೃತ್ವದಲ್ಲಿ ವಿಭಜನೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ವಿಭಜನೆಗೆ ಒಪ್ಪಿಕೊಂಡರೆ ಭಾರತಕ್ಕೂ ಇದೇ ಗತಿ. ನಿಮ್ಮ ಸಮರ್ಥ ನಾಯಕತ್ವ ಹಾಗೂ ಮಾರ್ಗದರ್ಶನ ಪಡೆದಿರುವ ಭಾರತ ವಿಭಜನೆಯನ್ನು ಅಂಗೀಕರಿಸುವ ಮೂಲಕ ರಾಜಕೀಯ ಆತ್ಮಹತ್ಯೆಗೆಳಸುವುದಿಲ್ಲ ಎಂದು ಇಲ್ಲಿನ ಎಲ್ಲಾ ಹಿಂದೂಗಳು ಹಾಗೂ ಮುಸ್ಲಿಮರು ನಂಬಿದ್ದೇವೆ" ಎನ್ನುವ ವಿಚಾರವುಳ್ಳ ಪತ್ರವೊಂದನ್ನು ಡಬ್ಲಿನ್ನಿನ ಗಾಂಧಿಯ ಸ್ನೇಹಿತರೊಬ್ಬರು ಬರೆದರು. ಪ್ರತಿಕ್ರಿಯೆಯಾಗಿ ಗಾಂಧಿ "ನನ್ನಲ್ಲಿ ಅಸಹಾಯಕ ಭಾವವುಂಟಾಗುತ್ತಿದೆ. ಭಾರತ ಮತ್ತು ಐರ್ಲೆಂಡ್ ಮಧ್ಯೆ ಸಮಾನಾಂತರ ರೇಖೆ ಎಳೆಯಬಹುದೇ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಒಪ್ಪಂದಕ್ಕೆ ಬಂದಿವೆ. ನೈಜ ಸ್ಥಿತಿ ಹೀಗಿರುವಾಗ ಅದನ್ನೇ ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ಮಾಡಲು ನಾನು ಪ್ರಯತ್ನಿಸುತ್ತೇನೆ" ಎಂದು ಉತ್ತರಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಗಾಂಧಿ ಮಾತು ಮತ್ತು ಕೃತಿಗೆ ಎಷ್ಟು ಅಜಗಜಾಂತರ. ಅವರ ಬೋಧನೆಗಳಲ್ಲಿ ಬಂದ ಉನ್ನತಾದರ್ಶಗಳ್ಯಾವುವೂ ಕ್ರಿಯೆಯಲ್ಲಿ ಕಾಣಲೇ ಇಲ್ಲ.

         ಗಾಂಧಿ ತಮ್ಮ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಹಾಗಾಗಿ ಕಾರ್ಯಕಾರಿ ಸಮಿತಿಯ ನಿರ್ಣಯದ ವಿರುದ್ಧ ದನಿಯೆತ್ತಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕವಾಗಿ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ತಾವು ಸಮಿತಿಯ ನಿರ್ಣಯದ ಬಗ್ಗೆ ಅಭಿಪ್ರಾಯಭೇದ ಹೊಂದಬಹುದು ಎಂದೂ ಹೇಳಿದರು. ಆದರೆ ಮುಂದಿನ ಎಐಸಿಸಿ ಸಭೆಯಲ್ಲೇ ವಿಭಜನೆಯ ಪರವಾಗಿ ನಿಂತರು.  "ಕೆಲವೊಮ್ಮೆ ಮನಸ್ಸಿಗೆ ಹಿಡಿಸದಿದ್ದರೂ ಕೆಲವು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆ ಹಂತದಲ್ಲಿ ದೇಶದ ಶಾಂತಿ ಮುಖ್ಯ ಎನ್ನುವುದನ್ನು ಸದಸ್ಯರು ಮರೆಯಬಾರದು. ದೇಶದಲ್ಲಿ ಕ್ಷಿಪ್ರ ಕ್ರಾಂತಿ ಅಥವಾ ಉತ್ಕ್ರಾಂತಿಯ ಮಾತಾಡುವವರು ಈ ನಿರ್ಣಯವನ್ನು ಆಚೆಗೆಸೆಯುವ ಮೂಲಕ ಇದನ್ನು ಸ್ಥಾಪಿಸಲು ಶಕ್ತರಿರಬಹುದು. ಆದರೆ ಅವರಿಗೆ ದೇಶದ ಹಾಗೂ ಕಾಂಗ್ರೆಸ್ಸಿನ ಅಧಿಕಾರ ಕೈಗೆ ತೆಗೆದುಕೊಳ್ಳುವ ಶಕ್ತಿ ಸಾಮರ್ಥ್ಯ ಇದೆ ಎನ್ನುವುದು ಸಂಶಯ. ನನಗೇನಾದರೂ ಶಕ್ತಿಯಿದ್ದಲ್ಲಿ ಏಕಾಕಿಯಾಗಿ ಬಂಡಾಯ ಘೋಷಿಸುತ್ತಿದ್ದೆ. ನಾನು ಕಾರ್ಯಕಾರಿ ಸಮಿತಿಯ ಪರವಾಗಿ ಬೇಡುತ್ತಿಲ್ಲ. ಎಐಸಿಸಿಯು ನಿರ್ಣಯದ ಸಾಧಕಬಾಧಕಗಳನ್ನು ಅಳೆದುನೋಡಬೇಕು. ನಿರ್ಣಯದ ಲಾಭದ ಮನವರಿಕೆಯಾಗದಿದ್ದರೆ ಅದನ್ನು ಒಪ್ಪಬಾರದು. ಇಂತಹ ನಿರ್ಣಯ ದೇಶದಲ್ಲಿ ಗಲಭೆಗೆ ಕಾರಣವಾಗುತ್ತದೆಂದಾದರೆ ಅದನ್ನು ತಿರಸ್ಕರಿಸಬಹುದು. ಆದರೆ ಕಾರ್ಯಕಾರಿ ಸಮಿತಿಯ ಸದಸ್ಯರು 'ಹೆಮ್ಮೆಯ ದಾಖಲೆ ಹೊಂದಿದ, ದೇಶದ ಹಳೆಯ ಮತ್ತು ಅನುಭವಿ ಸೇವಕರು, ಕಾಂಗ್ರೆಸ್ಸಿನ ಬೆನ್ನುಲುಬಾಗಿದ್ದವರು' ಎಂದೂ ಮರೆಯಬಾರದು. ಈ ಹಂತದಲ್ಲಿ ಅವರ ಬದಲು ಬೇರೆಯವರನ್ನು ತರುವುದು ಸಾಧ್ಯವಾಗದಿದ್ದಲ್ಲಿ ಅದು ಅತಿ ಅವಿವೇಕದ ಕೆಲಸವಾಗುತ್ತದೆ. ಯಾವುದನ್ನು ಅಂಗೀಕರಿಸಲಾಗಿದೆಯೋ ಅದು ಉತ್ತಮವೇನಲ್ಲ. ಆದರೆ ಮುಂದೆ ಅದರಿಂದ ಒಳ್ಳೆಯದಾಗಬಹುದು. ಕೆಲವೊಮ್ಮೆ ತಪ್ಪಿನಿಂದಲೂ ಒಳ್ಳೆಯದಾಗುತ್ತದೆ. ತಂದೆಯ ತಪ್ಪಿನಿಂದಾಗಿ ರಾಮ ವನವಾಸಕ್ಕೆ ಹೋದರೂ ರಾವಣನ ಅಂತ್ಯಕ್ಕೆ ಅದು ಕಾರಣವಾಯಿತಲ್ಲವೇ. ಹಾಗೆಯೇ ದೋಷಪೂರಿತ ಯೋಜನೆಯಿಂದ ಒಳ್ಲೆಯದನ್ನು ಹೊರತೆಗೆಯಲು ಎಐಸಿಸಿ ಸಮರ್ಥವಾಗಿದೆ. ಬಂಗಾರವನ್ನು ಕೂಡಾ ಹೊಲಸಿನಿಂದಲೇ ಆಯ್ದು ತೆಗೆಯಲಾಗುತ್ತದೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ವ್ಹಾವ್...ಗಾಂಧಿ ವಿಭಜನೆಯನ್ನು ರಾಮಾಯಣಕ್ಕೆ ಹೋಲಿಸುತ್ತಿದ್ದಾರೆ! ಎಐಸಿಸಿಯನ್ನು ರಾಮನಿಗೆ! ರಾಮ ದೇವಾಂಶ ಸಂಭೂತ. ವಿಭಜನೆಯ ಪರಿಣಾಮವನ್ನು ಒಳ್ಳೆಯ ಕ್ರಿಯೆಯಾಗಿಸಲು ಕಾಂಗ್ರೆಸ್ ಅಥವಾ ಗಾಂಧಿಯೇನು ದೇವರೇ? ಕಾರ್ಯಕಾರಿ ಸಮಿತಿಯ ಸದಸ್ಯರು ಕಾಂಗ್ರೆಸ್ಸಿನ ಬೆನ್ನುಲುಬಾದ ಮಾತ್ರಕ್ಕೆ ಅವರು ಶ್ರೇಷ್ಠರೇ? ಅವರು ಹೇಳಿದ್ದು ವೇದವಾಕ್ಯವೇ? ಅನುಭವಿ ಸೇವಕರಿಂದೇನು ತಪ್ಪು ಘಟಿಸದೇ? ಉತ್ಕ್ರಾಂತಿಯ ಮಾತಾಡುವವರ ಸಾಮರ್ಥ್ಯವನ್ನು ಪ್ರಶ್ನಿಸುವ ಗಾಂಧಿಗೆ ತನ್ನ ಅನುಭವಿ ಸೇವಕರ ಮೇಲೆ ಅಗಾಧ ವಿಶ್ವಾಸ! ವಿಭಜನೆಯನ್ನು ವಿರೋಧಿಸುತ್ತಲೇ ಅದನ್ನು ಸಮರ್ಥಿಸುತ್ತಾ ಜನರ ಮೇಲೆ ಹೇರುವ ಈ ವೃದ್ಧನಿಗೆ ಇಂದಿನ ರಾಜಕಾರಣಿಗಳು ಕಾಲಿಗಡ್ಡಬಿದ್ದರೆ ಆಶ್ಚರ್ಯವೇನಿಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ