ಪುಟಗಳು

ಬುಧವಾರ, ನವೆಂಬರ್ 9, 2016

ಯಾರು ಮಹಾತ್ಮ? ಭಾಗ- ೨೨

ಯಾರು ಮಹಾತ್ಮ?

ಭಾಗ- ೨೨

        ಮುಸ್ಲಿಂ ಲೀಗಿನ ವಿಭಜನೆಯ ಬೇಡಿಕೆಗೆ ಗಾಂಧಿ ವಿರೋಧ ವ್ಯಕ್ತಪಡಿಸುತ್ತಾ ತೀವ್ರವಾಗಿ ಪ್ರತಿಕ್ರಿಯಿಸಿದರು. "ಐತಿಹಾಸಿಕವಾಗಿ ವಿಭಜನೆ ಎನ್ನುವುದು ಸುಳ್ಳು ಹಾಗೂ ಸೈದ್ಧಾಂತಿಕವಾಗಿಯೂ ವಿಕಾರವಾದದ್ದು. ದೇವರು ಒಂದಾಗಿ ಸೃಷ್ಟಿಸಿದ ಈ ದೇಶವನ್ನು ವಿಭಜಿಸುವುದು ಮಾನವರಿಂದ ಸಾಧ್ಯವಿಲ್ಲ." "ಒಂದು ವೇಳೆ ಮುಸ್ಲಿಮರು ವಿಭಜನೆಯ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಖಡ್ಗದ ಮೊನೆಯಿಂದ ಬೆದರಿಸಿದರೂ ನಾನು ವಿಭಜನೆಗೆ ಒಪ್ಪಲಾರೆ. ದೇಶವನ್ನು ತುಂಡು ಮಾಡುವ ಮುನ್ನ ಅವರು ನನ್ನ ದೇಹವನ್ನು ತುಂಡುಮಾಡಬೇಕಾಗುತ್ತದೆ. ನಾವೆಲ್ಲರೂ ಇದೇ ರೀತಿ ವರ್ತಿಸಿದರೆ ದೇವರೇ ಅವರ ಖಡ್ಗವನ್ನು ತುಂಡರಿಸುತ್ತಾನೆ." "ವಿಭಜನೆ ಎನ್ನುವುದು ಮಿಥ್ಯೆ. ನನ್ನ ಇಡೀ ಆತ್ಮ ಈ ಕಲ್ಪನೆ ವಿರುದ್ಧ ಸಿಡಿದೇಳುತ್ತದೆ. ವಿಭಜನೆಗೆ ಒಪ್ಪುವುದೆಂದರೆ ನಾನು ದೇವರನ್ನೇ ನಿರಾಕರಿಸಿದಂತೆ. ಇದನ್ನು ತಡೆಯಲು ಅಹಿಂಸೆಯ ಎಲ್ಲಾ ಮಾರ್ಗಗಳನ್ನೂ ನಾನು ಉಪಯೋಗಿಸುತ್ತೇನೆ. ಹಿಂದೂಗಳು ಮತ್ತು ಮುಸ್ಲಿಮರು ಒಂದು ದೇಶವಾಗಿ ಬಾಳಲು ಶತಮಾನಗಳ ಕಾಲ ಮಾಡಿದ ಕಾರ್ಯವನ್ನು ನಾಶಗೊಳಿಸಿದಂತೆಯೇ" "ಭಾರತವನ್ನು ಎರಡಾಗಿಸುವುದು ಅರಾಜಕ ಸ್ಥಿತಿಗಿಂತ ಹೇಯವಾದುದು. ಭಾರತವನ್ನು ಎರಡು ಶತಮಾನಗಳಿಗಿಂತಲೂ ಅಧಿಕ ಕಾಲವಾಳಿದ ಮೊಘಲರೂ ಸಹ ಮಾಡದ್ದನ್ನು ನೀವು ಮಾಡಲಾಗದು." "ಇದರಲ್ಲಿ ಕಚ್ಚಾಟದ ಮತ್ತಷ್ಟು ಸಾಧ್ಯತೆ ವಿನಾ ಮತ್ತೇನೂ ನನಗೆ ಕಾಣಿಸುತ್ತಿಲ್ಲ." "ಬೇಕಾದರೆ ಇಡೀ ದೇಶ ಹೊತ್ತಿ ಉರಿಯಲಿ ಒಂದಿಂಚು ಪಾಕಿಸ್ತಾನಕ್ಕೂ ನಾವು ಒಪ್ಪುವುದಿಲ್ಲ" ಹೀಗೆಲ್ಲಾ ಅಣಿಮುತ್ತು ಉದುರಿಸಿ ಭಾರತದ ವಿಭಜನೆಯನ್ನು ಸ್ಪಷ್ಟ, ಕಟು ಶಬ್ಧಗಳಲ್ಲಿ ವಿರೋಧಿಸಿದ್ದ ಗಾಂಧಿ ಕೆಲವೇ ದಿನಗಳಲ್ಲಿ ತಮ್ಮ ಅಭಿಪ್ರಾಯ ಬದಲಿಸಿಕೊಂಡದ್ದು ಮಾತ್ರ ವಿಪರ್ಯಾಸ.('ಹರಿಜನ'ದ ವಿವಿಧ ಸಂಚಿಕೆಗಳು; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್)

          ದೇಶವಿಭಜನೆಯನ್ನು ಖಂಡತುಂಡವಾಗಿ ವಿರೋಧಿಸಿದ್ದ ಗಾಂಧಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದರು. "ದೇಶ ವಿಭಜನೆ ಕುರಿತು ಕಾರ್ಯಕಾರಿ ಸಮಿತಿ ತೆಗೆದುಕೊಂಡ ನಿರ್ಣಯವನ್ನು ಅಂಗೀಕರಿಸಲು ನಾನು ಶಿಫಾರಸು ಮಾಡುತ್ತೇನೆ. ಸಂವಿಧಾನದ ಪ್ರಕಾರ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯು ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡಿದೆ. ಕಾರ್ಯಕಾರಿ ಸಮಿತಿ ಎಐಸಿಸಿ ಪರವಾಗಿ ಪ್ರಾಮಿಸರಿ ನೋಟಿನ ಮೇಲೆ ಸಹಿ ಮಾಡಿದರೂ ಎಐಸಿಸಿ ಅದನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳಲೇಬೇಕಾಗುತ್ತದೆ. ಕಾರ್ಯಕಾರಿ ಸಮಿತಿ ಈಗಾಗಲೇ ತೆಗೆದುಕೊಂಡ ನಿರ್ಧಾರವನ್ನು ಎಐಸಿಸಿ ಬದಲಾಯಿಸಲು ಸಾಧ್ಯವಿಲ್ಲ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಅರೇ ಕಾಂಗ್ರೆಸ್ ಏನು ಇಡೀ ಭಾರತವೇ? ಸಂವಿಧಾನವಿದ್ದರೆ ಅದು ಕಾಂಗ್ರೆಸ್ಸಿಗಾಯಿತು. ಆ ಸಂವಿಧಾನವನ್ನು ಇಡೀ ಭಾರತಕ್ಕೇಕೆ ಅನ್ವಯಿಸಬೇಕು? ಕಾರ್ಯಕಾರಿ ಸಮಿತಿ ನೇಮಿಸುವ ಮುನ್ನ ಕಾಂಗ್ರೆಸ್ಸ್ ದೇಶೀಯರ ಅನುಮತಿ ಪಡೆದುಕೊಂಡಿದೆಯೇ? ಕೆಲವೇ ಕೆಲವು ಸಾವಿರ ಸದಸ್ಯರನ್ನೊಳಗೊಂಡ ಪಕ್ಷವೊಂದು ಮೂವತ್ತಮೂರು ಕೋಟಿ ಜನತೆಯ ಭವಿಷ್ಯವನ್ನು ನಿರ್ಧರಿಸಬೇಕೆ? ಅಷ್ಟು ಜನರ ಮಾನ, ಪ್ರಾಣ, ಧನಗಳನ್ನು ಕಾಂಗ್ರೆಸ್ ಮರಳಿಸುತ್ತದೆಯೇ? ಅಷ್ಟು ಜನರ ಭಾವನೆಗೂ ಬೆಲೆ ಕೊಡದ ಪಕ್ಷ ಹೇಳಿದ ಮಾತಿಗೆ ಹೂಂಗುಟ್ಟಿದ ಈ ದೇಶದ ಕ್ಷಾತ್ರವಿಹೀನತೆಯ ಪರಮಾವಧಿಯೇ!

          "ನಾನು ಅಸಹಾಯಕ. ನಾನು ಮುಸ್ಲಿಮ್ ಲೀಗ್ ಅಧ್ಯಕ್ಷನಾಗಿದ್ದರೆ ಪಾಕಿಸ್ತಾನವನ್ನು ಪರದೆ ಮೇಲೆ ಮೂಡಿಸಿ ಅದರ ಸರಿಹೋಲಿಕೆಯಿಲ್ಲದ ಸೌಂದರ್ಯವನ್ನು ಆಕರ್ಷಕಗೊಳಿಸಿ ವರ್ಣಿಸುತ್ತಿದ್ದೆ. ಈವರೆಗಿನ ಬೆಳವಣಿಗೆಯಂತೆ ಭಾರತದ ವಿಭಜನೆ ನಿಶ್ಚಿತ. ಜನರು ಇದರ ಬಗ್ಗೆ ದುಃಖಿಸುವುದು ಬೇಡ. ಪಾಕಿಸ್ತಾನ ರಚನೆಗೆ ಕಾಂಗ್ರೆಸ್ಸಿನ ವಿರೋಧವಿತ್ತು. ನನ್ನದೂ. ಹೀಗಿದ್ದರೂ ವಿಭಜನೆಯ ನಿರ್ಣಯವನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಲು ನಿಮ್ಮ ಮುಂದೆ ನಿಂತಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಆಶ್ವಾಸನೆ ಕೊಟ್ಟು ಏನನ್ನೂ ಮಾಡದೆ ಆಮೇಲೆ ಅದು ಹಾಗೆಯೇ ಆಗಬೇಕು ಬೇರೆ ದಾರಿ ಇಲ್ಲ ಎನ್ನುವ ಇಂದಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಗಾಂಧಿಯದ್ದೇ ಅಂತ ಅನ್ನಿಸುವುದಿಲ್ಲವೇ? ತನ್ನಿಂದಾಗದಿದ್ದ ಮೇಲೆ ಮೊದಲು ಹೇಳಿಕೆ ಯಾಕೆ ಕೊಡಬೇಕಿತ್ತು? ಆಡಿಯೂ ಮಾಡದವ...! ಅದರಲ್ಲೂ ಸಮಜಾಯಿಷಿ ಕೊಡುವಾಗ ಪಾಕಿಸ್ತಾನವನ್ನು ಹೊಗಳುವ ಪರಿ ಕೇಳಿ ಅದರಿಂದಾಗಿಯೇ ಪ್ರಾಣ-ಮಾನ ಕಳಕೊಂಡ ಹಿಂದೂವಿಗೆ ಉರಿಯದಿರುತ್ತದೆಯೇ?

           ಹೇಗೂ ಭಾರತದ ವಿಭಜನೆಯ ವಿರುದ್ಧ ನೀವಿದ್ದೀರಿ. ಹಾಗಾಗಿ ವಿಭಜನೆ ತಪ್ಪಿಸಲು ನೀವೇಕೆ ಆಮರಣಾಂತ ಉಪವಾಸ ಕೂರಬಾರದು ಎನ್ನುವ ಒಕ್ಕಣೆಯುಳ್ಳ ಟೆಲಿಗ್ರಾಂಗಳು, ಪತ್ರಗಳು ಗಾಂಧಿಗೆ ಬರತೊಡಗಿದವು. ಆಗ ಗಾಂಧಿ "ಇಂತಹ ವಿಷಯಗಳನ್ನು ಹಗುರವಾಗಿ ಅಥವಾ ಯಾರದೋ ಸೂಚನೆಯಂತೆ ಅಥವಾ ದುಡುಕಿನ ಅಲ್ಲದೆ ಕೋಪದಿಂದ ತೆಗೆದುಕೊಳ್ಳಬಾರದು. ಕಾಂಗ್ರೆಸ್ ನನ್ನ ದೃಷ್ಟಿಕೋನದ ಜೊತೆ ಭಿನ್ನಾಭಿಪ್ರಾಯ ಹೊಂದಿತ್ತು ಎನ್ನುವ ಕಾರಣಕ್ಕೆ ಉಪವಾಸ ಮಾಡಬೇಕೇ?" ಎಂದು ಪ್ರಶ್ನಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್).  ಭಳಿರೇ ಮುದುಕ! ಅಂದರೆ ಗಾಂಧಿ ಹಗುರವಾದ ವಿಚಾರಗಳಿಗಷ್ಟೇ ಉಪವಾಸ ಕೂರುವವರೇ? ಮುಸ್ಲಿಮರ ಸಣ್ಣ ತೊಂದರೆಯಾದರೂ ಉಪವಾಸ ಕೂರುತ್ತಿದ್ದಾತನಿಗೆ ವಿಭಜನೆಯನ್ನು ವಿರೋಧಿಸಿ ಉಪವಾಸ ಕೂರಬೇಕು ಅನ್ನಿಸಲಿಲ್ಲ. ಜನರು ಹೇಳಿದಾಗಲೂ ಆ ಬಯಕೆ ಮೂಡಲಿಲ್ಲ. ಅಂದರೆ ಹಿಂದೂಗಳಿಗೆ ಅನ್ಯಾಯವಾಗುವ ವಿಚಾರವನ್ನು ವಿರೋಧಿಸಿ ಉಪವಾಸ ಕೂರಲು ಗಾಂಧಿಗೆ ಮನಸ್ಸಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಎಂತಹ ಬೂಟಾಟಿಕೆ! ಅಂದು ಸುಭಾಷರು ತನ್ನ ಅಭ್ಯರ್ಥಿ ಪಟ್ಟಾಭಿಯೆದುರು ಬಹುಮತದಿಂದ ಗೆದ್ದಾಗ ತನಗಿಷ್ಟವಾಗದೆ ಅದು ತನ್ನ ಸೋಲು ಎಂದು ಬಹಿರಂಗವಾಗಿ ಹೇಳಿ ತನ್ನ ಅಭಿಪ್ರಾಯ-ವ್ಯಕ್ತಿ-ಕ್ರಿಯೆಯನ್ನು ಹೇರಹೊರಟ ಗಾಂಧಿಗೆ ಇಂದು ದೇಶ ಇಬ್ಬಾಗವಾಗಲು ಕಾಂಗ್ರೆಸ್ ಕೊಟ್ಟ ಒಪ್ಪಿಗೆ ತನ್ನ ಸೋಲು ಅಂತ ಅನ್ನಿಸಲಿಲ್ಲ. ಈವತ್ತು ಆತ ಕಾಂಗ್ರೆಸ್ ಮೇಲೆ ತನ್ನ ಅಭಿಪ್ರಾಯ ಹೇರಲು ಅನುವಾಗಲಿಲ್ಲ. ಎಂತಹ ಸ್ವಾರ್ಥ! ಗಾಂಧಿಯ ಈ ಇಬ್ಬಂದಿತನವೇ ವಿಭಜನೆಗೆ ಅವರ ಒಪ್ಪಿಗೆಯಿತ್ತು, ಅದಕ್ಕಾಗಿ ಶತಾಯಗತಾಯ ಪ್ರಯತ್ನಿಸಿದರು ಎನ್ನುವ ಅನುಮಾನ ಬರಲು ಕಾರಣ!

           "ಆತುರದಿಂದ ನಾನು ಉಪವಾಸ ಮಾಡುವುದಾದರೆ ಅದಕ್ಕೆ ಕಾರಣಗಳು ಬೇಕಾಗುತ್ತವೆ. ಆಮರಣಾಂತ ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕಾಗುತ್ತದೆ. ಆದರೆ ನನ್ನ ಸುತ್ತಲೂ ಬೆಂಕಿಯ ಧಗೆ ಇರುವುದರಿಂದ ತಾಳ್ಮೆ ಹಾಗೂ ದೃಢಚಿತ್ತದಿಂದ ಇದ್ದು ಸತ್ಯದ ಆತ್ಯಂತಿಕ ಗೆಲುವಿನ ಬಗ್ಗೆ ನನಗಿರುವ ಅಚಲ ನಂಬಿಕೆಯನ್ನು ಸಾಬೀತು ಮಾಡಬೇಕೆಂದು ಮನಗಂಡಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಹಾಗಾದರೆ ಉಪವಾಸ ಮಾಡಲು ದೇಶವಿಭಜನೆ ಕಾರಣ ಆಗುವುದಿಲ್ಲವೆ? ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕು ಎಂದರೆ ಯಾರನ್ನು ತನ್ನ ಶಿಷ್ಯ ನೆಹರೂವನ್ನೋ? ಅಥವಾ ಪ್ರತ್ಯೇಕ ದೇಶ ಕೇಳಿದ ಮುಸ್ಲಿಮರನ್ನೋ? ವಿಭಜನೆಯೆಂಬ ಬೆಂಕಿಯ ಧಗೆ, ಹಿಂದೂಗಳ ಚಿತೆಯ ಉರಿ ಇನ್ನೂ ಇರುವಾಗ ಮಾತ್ರ ಗಾಂಧಿ ತಾಳ್ಮೆ ಮತ್ತು ದೃಢಚಿತ್ತದಿಂದ ಇರಬಲ್ಲರು! ಈ ಸತ್ಯ ಯಾವುದು? ಮುಸ್ಲಿಮರಿಗೆ ಹಾಗೂ ನೆಹರೂವಿಗೆ ಅಧಿಕಾರ ಹಸ್ತಾಂತರಿಸುವುದೇ? ಅದರ ಗೆಲುವೆಂದರೆ ವಿಭಜನೆ ಆಗಬೇಕೆಂಬುದೇ? ಈಗಿನ ಎಡಪಂಥೀಯರ ರೀತಿಯ ಯಾರಿಗೂ(ಅವರಿಗೂ) ಅರ್ಥವಾಗದ ಮಾತುಗಳನ್ನಾಡಿ ಗಾಂಧಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ!

           ದೇಶವನ್ನು ತುಂಡರಿಸುವ ಮೊದಲು ನನ್ನ ದೇಹ ತುಂಡರಿಸಿ ಎನ್ನುವ ಮಾತನ್ನು ನೀವು ಈ ಮೊದಲು ಹೇಳಿದ್ದೀರಲ್ಲವೆ ಎಂದೊಬ್ಬ ಪತ್ರಿಕಾ ಪ್ರತಿನಿಧಿ ನೆನಪಿಸಿದಾಗ "ಈ ಆರೋಪವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನಾನು ಹೇಳಿಕೆ ನೀಡುವಾಗ ಸಾರ್ವಜನಿಕ ಅಭಿಪ್ರಾಯವನ್ನೇ ಧ್ವನಿಸುತ್ತಿದ್ದೇನೆ ಎಂದು ನಂಬಿದ್ದೆ. ಆದರೆ ಸಾರ್ವಜನಿಕ ಅಭಿಪ್ರಾಯವೇ ನನ್ನ ವಿರುದ್ಧವಾಗಿರುವಾಗ ನಾನದನ್ನು ನಿರ್ಬಂಧಿಸಬೇಕೆ?" ಎಂದು ಕೀಟಲೆಯ ಧ್ವನಿಯಲ್ಲಿ ಹೇಳಿದರು. ಅರೇ ಗಾಂಧಿಯ ಸ್ವಂತ ಅಭಿಪ್ರಾಯ ಸಾರ್ವಜನಿಕ ಅಭಿಪ್ರಾಯವಾದದ್ದು ಹೇಗೆ? ಕೋಟ್ಯಾಂತರ ದೇಶೀಯರ ಅಭಿಪ್ರಾಯ ವಿಭಜನೆ ಆಗಬಾರದೆಂದಿರುವಾಗ ಸಾರ್ವಜನಿಕ ಅಭಿಪ್ರಾಯ ಗಾಂಧಿಗೆ ವಿರುದ್ಧವಾಗಿರುವುದು ಹೇಗೆ? ಅಂದರೆ ಗಾಂಧಿಯ ಅಭಿಪ್ರಾಯ ಹಿಂದೆಯೂ ವಿಭಜನೆ ಆಗಬೇಕೆಂಬುದೇ ಆಗಿತ್ತೇ? ಅಲ್ಲಾ ಗಾಂಧಿಯ ದೃಷ್ಟಿಯಲ್ಲಿ ಸಾರ್ವಜನಿಕರೆಂದರೆ ಕಾಂಗ್ರೆಸ್ಸೇ? ಅಥವಾ ಕಾಂಗ್ರೆಸ್ ನೇಮಿಸಿದ ಕಾರ್ಯಕಾರಿ ಸಮಿತಿಯೇ? ಅಥವಾ ಪ್ರತ್ಯೇಕತೆಯ ಬೀಜ ಬಿತ್ತಿದ ಮುಸ್ಲಿಂ ಲೀಗೇ? ಆಗ ವಿಭಜನೆಗೆ ಒಪ್ಪಿದ್ದವರು ಅಧಿಕಾರದಾಹಿ ಕಾಂಗ್ರೆಸ್ಸಿಗರು ಹಾಗೂ ಪ್ರತ್ಯೇಕತವಾದಿ ಮುಸ್ಲಿಮರು ಹಾಗೂ ಗಾಂಧಿ ಮಾತ್ರ! ಹೀಗೆ ಗಾಂಧಿಯ ಈ ಹೇಳಿಕೆಯನ್ನು ಆ ಕಾಲದ ಸನ್ನಿವೇಶದೊಂದಿಗೆ ಸಮೀಕರಿಸಿ ನೋಡಿದಾಗ ಬಹುಸಂಖ್ಯೆಯ ಜನರ ಅಭಿಪ್ರಾಯವನ್ನು ಬದಿಗೆ ತಳ್ಳಿ ತಮ್ಮ ತಮ್ಮ ಸ್ವಾರ್ಥಸಾಧನೆಗೆ ದೇಶವನ್ನು ಛಿದ್ರಗೊಳಿಸಲು ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ತನ್ನ ಅನುಯಾಯಿಗಳೊಂದಿಗೆ ತಯಾರಾಗಿದ್ದ ಎಂದೇ ಭಾಸವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ