ಯುಗದ್ರಷ್ಟ - ಕ್ರಾಂತಿಪಥದ ಸತ್ಯ-ಸತ್ವ ದರ್ಶನ
ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ತಮ್ಮನ್ನು ಅಡಿಗಡಿಗೆ ನಡುಗಿಸಿದ 1857ರಂತಹ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಅದೇ ಸಮಯದಲ್ಲಿ ತಾಯಿ ಭಾರತಿಯ ರತ್ನಗರ್ಭದಿಂದ ಜನಿಸಿದ ಮಹರ್ಷಿ ದಯಾನಂದರು ಭಾರತೀಯರ ಜಡತೆಯನ್ನು ತೊಲಗಿಸಲು ಆರ್ಯಸಮಾಜವೆಂಬ ದೀಪವನ್ನು ಹಚ್ಚಿದರು. ಆ ದೀವಿಗೆಯ ಒಂದೊಂದು ಕಿಡಿಯೂ ಕ್ರಾಂತಿಯ ಕಿಡಿ! ಬ್ರಿಟಿಷ್ ಸರಕಾರದ ಆಶೀರ್ವಾದ ಪಡೆದು ಅವರ ಮಾತುಗಳಿಗೆ ಅನುಕೂಲಕರವಾಗಿ ನಡೆಯಬಲ್ಲ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ಸಿನದ್ದು ರಾಜಕೀಯ ಪಥವಾದರೆ ಭಾರತದ ವೇದಕಾಲೀನ ಮೌಲ್ಯಗಳನ್ನಾಧರಿಸಿ ಭಾರತದ ಪುನರ್ನಿರ್ಮಾಣ ಮಾಡಲು ಹೊರಟಿದ್ದ ಆರ್ಯ ಸಮಾಜದ್ದು ಭವ್ಯ ದೇಶಭಕ್ತ ಪಥ. ಈ ಎರಡೂ ಪಥಗಳಲ್ಲಿ ಒಂದೇ ಕುಟುಂಬದ ಬೇರೆ ಬೇರೆ ಕವಲುಗಳು ಇದ್ದಂತಹ ಉದಾಹರಣೆಗಳು ಅದೆಷ್ಟೋ? ಖೇಮ ಸಿಂಹನ ಅಗ್ರ ಪುತ್ರ ಸುರ್ಜನ ಸಿಂಹ ಬ್ರಿಟಿಷರ ಪಾದಸೇವೆ ಮಾಡುವುದರೊಂದಿಗೆ ಆ ಧಾರೆಯೇ ಭಾರತಕ್ಕೆ ವಿಷಧಾರೆಯಾದರೆ ಮಧ್ಯಮ ಅರ್ಜುನ ಸಿಂಹನ ಕ್ಷಾತ್ರ-ಬ್ರಹ್ಮತೇಜ ಕ್ರಾಂತಿಧಾರೆಯಾಗಿ ಅವನ ಪೀಳಿಗೆಯೇ ತಾಯಿ ಭಾರತಿಯ ಪಾಲಿಗೆ ಅಮೃತಧಾರೆಯಾಗಿ ಹರಿಯಿತು. ಅಂತಹ ಅಮೃತಧಾರೆಯ ಒಂದು ಬಿಂದುವೇ ಸರದಾರ ಭಗತ್ ಸಿಂಗ್!ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲವೆಂಬ ಆರ್ಯ ಸಮಾಜದ ಚಿಂತನೆಯ ಅರಿವು, ಋಷಿ ದಯಾನಂದರ ದರ್ಶನದ ಜೊತೆಜೊತೆಗೆ ಆಗುವುದರೊಂದಿಗೆ ಅರ್ಜುನ ಸಿಂಹನ ವ್ಯಕ್ತಿತ್ವವೇ ಬದಲಾಯಿತು. ದೇವಸ್ಥಾನಗಳೇ ಆರ್ಯ ಸಮಾಜದಿಂದ ದೂರವಿದ್ದ ಕಾಲದಲ್ಲಿ ಬಹುದೂರದ ಗುರುದ್ವಾರದಿಂದ ಆತ ಆರ್ಯ ಸಮಾಜದ ಭವನವನ್ನು ಪ್ರವೇಶಿಸಿದಾಗಲೇ ಕ್ರಾಂತಿಯ ಬೀಜ ಆ ಪರಿವಾರದಲ್ಲಿ ಬಿತ್ತಲ್ಪಟ್ಟಿತು! ತನ್ನ ಮೂವರು ಪುತ್ರರಿಗೂ ಬುದ್ಧಿ ಪೂರ್ವಕ ಕ್ರಾಂತಿದೀಕ್ಷೆ ನೀಡಿದ ಆತ. ದೇಶಕ್ಕಾಗಿ ನಡೆದ ಯಾವುದೇ ಕ್ರಾಂತಿಯಾದರೂ ಭಾಗವಹಿಸುತ್ತಿದ್ದ ಅರ್ಜುನನ ಅಗ್ರ ಪುತ್ರ ಕಿಶನ್ ಸಿಂಹ ತುಂಬು ಯೌವನದಲ್ಲಿ ಅಮರನಾದ! ದ್ವಿತೀಯ ಅಜಿತ್ ಸಿಂಹ ಭಾರತ ಮಾತಾ ಸೊಸೈಟಿಯ ಮುಖೇನ ಚಾಪೇಕರ್ ಸಹೋದರರು ಹಾರಿಸಿದ್ದ ಕಿಡಿಯನ್ನು ವಿದೇಶಗಳಿಗೂ ಹಬ್ಬಿಸಿ, ತಾನೂ ಗಡೀಪಾರಾಗಿ ಹೋದ! ಮೂರನೆಯವ ಸ್ವರ್ಣ ಸಿಂಹ ಕೈಕೋಳ-ಬೇಡಿಗಳ ಚದುರಂಗದಾಟದಲ್ಲಿ ಜೀವನ ಪೂರ್ತಿ ಕಳೆದ! ಅರ್ಜುನ ಸಿಂಹ ತನ್ನ ಹಿರಿಯ ಮೊಮ್ಮಕ್ಕಳಾದ ಜಗತ್-ಭಗತ್ ರನ್ನು ಅವರ ಬ್ರಹ್ಮೋಪದೇಶದ ಸಮಯದಲ್ಲಿ ಯಜ್ಞವೇದಿಕೆಯ ಮೇಲೆ ನಿಲ್ಲಿಸಿಕೊಂಡು ದೇಶದ ಬಲಿ ವೇದಿಕೆಗೆ ದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ. ಅವರಿಬ್ಬರಿಗೂ ರಾಷ್ಟ್ರೀಯ ವಿಚಾರ-ಕ್ರಾಂತಿಯ ಸಂಸ್ಕಾರ ನೀಡಿದ. ಯಜ್ಞ ಕುಂಡದಲ್ಲಿ ಅಗ್ನಿಗೆ ಆಜ್ಯವೊದಗಿತ್ತು. ಪೂರ್ಣಾಹುತಿ ಬಾಕಿ ಇತ್ತು!
ಸರದಾರ ಅರ್ಜುನ ಸಿಂಹ ಅತ್ಯಂತ ಸಾಹಸದಿಂದ ಅಂಧವಿಶ್ವಾಸ ಮತ್ತು ಪರಂಪರಾವಾದಗಳ ಜಡತೆಯಿಂದ ಮುಚ್ಚಿಹೋಗಿದ್ದ ತನ್ನ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದ. ಅಡ್ಡಾದಿಡ್ಡಿಯಾಗಿದ್ದ ಮಾರ್ಗವನ್ನು ಶುಚಿಗೊಳಿಸಿ ತನ್ನ ಮನೆಯಂಗಳದಲ್ಲಿ ಯಜ್ಞವೇದಿಕೆಗಳನ್ನು ಅಣಿ ಮಾಡಿದ. ಸರದಾರ್ ಕಿಶನ್ ಸಿಂಹ ಆ ಮನೆಯ ಅಂಗಳವನ್ನು ತೊಳೆದು ಸಾರಿಸಿ ಯಜ್ಞವೇದಿಕೆಯ ಮೇಲೆ ವಿಶಾಲವಾದ ಯಜ್ಞಕುಂಡವೊಂದನ್ನು ಸ್ಥಾಪಿಸಿದ. ಸರ್ದಾರ್ ಅಜಿತಸಿಂಹ್ ಆ ಯಜ್ಞಕುಂಡದಲ್ಲಿ ಸಮಿತ್ತುಗಳನ್ನು ಜೋಡಿಸಿ ಅದರಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿದ. ಸ್ವರ್ಣ ಸಿಂಹ ಅದನ್ನೂದಿ ಉರಿಯನ್ನೆಬ್ಬಿಸಿದ. ಅಜಿತ್ ಸಿಂಗ್ ಇಂಧನವನ್ನು ಹುಡುಕುತ್ತಾ ಹೋದಾಗ ಕಿಶನ್ ಸಿಂಹ ಅದರ ರಕ್ಷಣೆ ಮಾಡುತ್ತಿದ್ದ. 1964ನೇ ವಿಕ್ರಮ ಸಂವತ್ಸರದ ಆಶ್ವಯುಜ ಶುಕ್ಲ ತ್ರಯೋದಶಿ ಶನಿವಾರ ಬೆಳಿಗ್ಗೆ ಸೂರ್ಯ ತೇಜಸ್ಸೊಂದು ಭೂಮಿಗೆ ಬಿದ್ದಿತು! ಅದೇ ದಿನ ಚಿಕ್ಕಪ್ಪ ಅಜಿತನ ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲರೂ ಮಗುವನ್ನು "ಭಾಗ್ಯವಂತ" ಎಂದು ಕರೆದರು. ಅಂತಹ ಪರಿವಾರದ ಭಾಗ್ಯವಂತ ಭಗತ್ ಅಲ್ಲಿ ಇಲ್ಲಿ ಎಂದು ಇಂಧನವನ್ನು ಹುಡುಕದೆ ತನ್ನ ಜೀವನವನ್ನೇ ಇಂಧನವಾಗಿ ಮಾಡಿ ಆ ಯಜ್ಞಕುಂಡಕ್ಕೆ ಧುಮುಕಿದ. ಅದರ ಜ್ವಾಲೆ ದೇಶದಾದ್ಯಂತ ಹರಡಿತು. ಒಂದಿಡೀ ಪರಿವಾರ ತಾನು ಇತಿಶ್ರೀಯಾಗುವ ಮೊದಲು ಇತಿಹಾಸವನ್ನೇ ಸೃಷ್ಟಿಸಿತು. ಇದು ಭಾರತದ ಕ್ರಾಂತಿ ಪರಿವಾರವೊಂದು ಯುಗದೃಷ್ಟವಾದ ಬಗೆ. ಅದನ್ನು ವಿಸ್ತಾರವಾಗಿ ಬರೆಯಲು ಅದೇ ಪರಿವಾರದ ವೀರೇಂದ್ರ ಸಿಂಧು ಹುಟ್ಟಿ ಬರಬೇಕಾಯಿತು. ಅದನ್ನು ಕನ್ನಡಕ್ಕೆ ಅನುವಾದಿಸಲು ಬಾಬುಕೃಷ್ಣಮೂರ್ತಿಯವರಂತಹ ಸಮರ್ಥರೇ ಇಳಿದರು. ಅದು "ಯುಗದೃಷ್ಟ ಭಗತ್ ಸಿಂಗ್" ಆಗಿ ಕ್ರಾಂತಿಪಥದ ಸತ್ಯ-ಸತ್ವ ದರ್ಶನವನ್ನು ಕನ್ನಡಿಗರಿಗೀಯುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ