ಪುಟಗಳು

ಶುಕ್ರವಾರ, ಅಕ್ಟೋಬರ್ 28, 2016

ತಾಯಿ ಭಾರತಿಗೆ ಆರತಿ ಬೆಳಗಿದ ಅಗ್ನಿಶಿಖೆ

ತಾಯಿ ಭಾರತಿಗೆ ಆರತಿ ಬೆಳಗಿದ ಅಗ್ನಿಶಿಖೆ

           ಉತ್ತರ ಐರ್ಲೆಂಡಿನ ಡಂಗನಾನ್. 1867 ಅಕ್ಟೋಬರ್ 28. ನೊಬೆಲ್ ಕುಟುಂಬದ ಸಂತೋಷ ಮುಗಿಲು ಮುಟ್ಟಿತ್ತು. ಅನುಪಮ ಖನಿಯೊಂದು ಭುವಿಗಿಳಿಯಿತು. ಹೊಳೆಯುವ ನೀಲ ಕಂಗಳು, ಬಾಲ ಸೂರ್ಯ ಕಿರಣಗಳಂತೆ ಮಿನುಗುವ ಕೆಂಗೂದಲನ್ನು ಪಡೆದು ಮೈದುಂಬಿ ಬೆಳೆಯಿತು. ಅಜ್ಜ ಉಗ್ರ ರಾಷ್ಟ್ರಭಕ್ತ. ಅಪ್ಪ ದೀನ-ರೋಗಿಗಳಿಗೆ ಸದಾ ಸಹಾಯ ಮಾಡುತ್ತಿದ್ದ ಧರ್ಮೋಪದೇಶಕ. ಅಪ್ಪನ ಈಶ ಭಕ್ತಿ, ತಾತನ ದೇಶಭಕ್ತಿ ಅವಳಲ್ಲಿ ಮೇಳೈಸಿತು. ಅವಳ ನಿಷ್ಪಕ್ಷಪಾತ ಸೇವೆ ಕಂಡು ಮತಾಂತರಿಗಳ ಕಣ್ಣುರಿಯಿತು. ಅವಳ ಬಗೆಗೆ ಅಪಪ್ರಚಾರವೂ ನಡೆಯಿತು. ರೇಗಿದ ಆಕೆ ಪತ್ರಿಕೆಗಳಿಗೆ ಹರಿತವಾದ ಲೇಖನಗಳನ್ನು ಬರೆದು ಚರ್ಚು-ಪಾದ್ರಿಗಳ ಕುತಂತ್ರವನ್ನು ಬಯಲಿಗೆಳೆದಳು. ಐರ್ಲೆಂಡಿನಂಥ ಅಪ್ಪಟ ಕ್ರೈಸ್ತ ದೇಶದಲ್ಲಿ ಆ ಕಾಲದಲ್ಲಿ ಇಂತಹುದೊಂದು ಪ್ರಕರಣ ಸಾಧ್ಯವೇ? ಹೌದು, ಇಂತಹ ಪ್ರಕರಣವೊಂದು ನಡೆದಿತ್ತು. ಆಕೆ ಮಾರ್ಗರೆಟ್ ನೊಬೆಲ್! ಅಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಅದೇ "ಭಗಿನಿ ನಿವೇದಿತಾ" ಎಂದಾಕ್ಷಣ ಆ ಅಗ್ನಿಶಿಖೆಯ ಚಿತ್ರ ಅಂತಃಪಟಲದಲ್ಲಿ ಹಾದು ಹೋದೀತು.

              ಈ ಪ್ರಕರಣದ ಬಳಿಕ ಆಕೆಗೆ ಕ್ರೈಸ್ತ ಮತದ ಮೇಲಿನ ನಂಬಿಕೆ ಹೊರಟು ಹೋಯಿತು. ಚರ್ಚಿನ ದಾರಿ ಮರೆತು ಹೋಯಿತು. ಆತ್ಮ ಸಮಾಧಾನದ ದಾರಿ ತೋರುವ ಗುರುವಿಗಾಗಿ ಮನ ತಹತಹಿಸಿತು. ಅವಳ ಮನಸ್ಸಿನಲ್ಲಿ ವಿಚಾರಗಳ ಬಿರುಗಾಳಿಯೇ ಎದ್ದಿತು. ಅವಳೇ "ನಾನು ಕ್ರೈಸ್ತ ಮತದಲ್ಲಿ ಹುಟ್ಟಿದೆ. ಆಂಗ್ಲ ಹುಡುಗಿಯರಂತೆಯೇ ಶಿಕ್ಷಣವನ್ನು ಪಡೆದೆ. ಕ್ರೈಸ್ತ ಮತದ ಸಿದ್ಧಾಂತಗಳನ್ನು ನನಗೆ ಎಳವೆಯಿಂದಲೇ ಅರೆದು ಕುಡಿಸಲಾಗಿತ್ತು. ಹದಿನೆಂಟನೆಯ ವಯಸ್ಸಿಗೆ ಕ್ರಿಶ್ಚಿಯನ್ ಸಿದ್ಧಾಂತಗಳ ಮೇಲೆ ನನಗೆ ಸಂದೇಹ ಹೆಚ್ಚಾಯಿತು. ಅವು ಸುಳ್ಳು ಹಾಗೂ ಅಸಂಗತಗಳ ಮಿಶ್ರಣ ಎಂದು ನನಗನಿಸತೊಡಗಿತು. ಅದರ ಮೇಲಿನ ಶೃದ್ಧೆಯೇ ಹೊರಟು ಹೋಯಿತು. ಮನಃಶಾಂತಿ ಸಿಗಲಿಲ್ಲ. ಹೀಗೆಯೇ ಸತ್ಯವನ್ನು ಅರಸುತ್ತಾ ಏಳು ವರ್ಷ ಕಳೆದೆ" ಎಂದು ಬರೆದಿದ್ದಾಳೆ. 1895ರ ನವೆಂಬರಿನಲ್ಲಿ ಆಕೆಯ ಕಲಾವಿದ ಮಿತ್ರನೊಬ್ಬ ಲಂಡನ್ನಿಗೆ ಹಿಂದೂ ಸಂನ್ಯಾಸಿಯೊಬ್ಬರು ಬಂದಿರುವುದಾಗಿಯೂ, ಅವರ ಉಪನ್ಯಾಸಕ್ಕೆ ತಾನು ಹೋಗುವುದಾಗಿ ತಿಳಿಸಿದ. ಆಕೆಯನ್ನೂ ಆಹ್ವಾನಿಸಿದ. ಮಾರ್ಗರೆಟ್ ಅಷ್ಟೇನು ಮನಸ್ಸಿಲ್ಲದಿದ್ದರೂ ಕುತೂಹಲಗೊಂಡು ಅಲ್ಲಿಗೆ ಧಾವಿಸಿದಳು.

               ಎದುರಿಗೆ ಕೆಂಗಾವಿಯ ನಿಲುವಂಗಿ ತೊಟ್ಟ ತೇಜಃಪುಂಜ ಮಖಮಂಡಲ ಅರೆನಿಮೀಲಿತ ನೇತ್ರದ ಪುರುಷಪುಂಗವನೊಬ್ಬ ಕುಳಿತಿದ್ದ. ಆತನ ಬಳಿಯ ಅಗ್ಗಿಷ್ಟಿಕೆಯಲ್ಲಿ ಅಗ್ನಿ ಜ್ವಲಿಸುತ್ತಿತ್ತು. ಆತನ ನಿರರ್ಗಳ ವಾಗ್ಝರಿ, ರಮ್ಯ ಮನೋಹರ ಸ್ವರ, ಸಂಸ್ಕೃತ ಶ್ಲೋಕಗಳ ಉಚ್ಛಾರಕ್ಕೆ ಆಕೆ ಬೆರಗಾದಳು. ಸೂರ್ಯ ನಡುನೆತ್ತಿಗೆ ಬಂದು ದಿಗಂತದಲ್ಲಿ ಸರಿದೂ ಹೋದ. ನಕ್ಷತ್ರಗಳೂ ಕಾಣಿಸಿಕೊಂಡವು. ಮಾಂತ್ರಿಕ ಸ್ವರ ಹೊರಡುತ್ತಲೇ ಇತ್ತು. ಮಾರ್ಗರೆಟಳ ಆತ್ಮ ಅದಕ್ಕೆ ಮಿಡಿಯುತ್ತಲೇ ಸ್ತಬ್ಧವಾಗಿ ಕುಳಿತಿತ್ತು. "ಗೊಡ್ಡು ವಿಚಾರಧಾರೆಯ ತಮಸ್ಸಿನಿಂದ ನಿರಾಶೆಗೊಂಡಿದ್ದ ನಮ್ಮ ಮನಸ್ಸಿಗೆ ಆತ ಸಾಂತ್ವನ ನೀಡಿದ. ನಿರರ್ಥಕ ಸೈದ್ಧಾಂತಿಕ ವಾದವನ್ನು ಧಾರ್ಮಿಕ ಸತ್ವದ ತಿರುಳಿನಿಂದ ಪ್ರತ್ಯೇಕಿಸಿ ನಮ್ಮ ಅಂಜಿಕೆಯನ್ನು ಹೋಗಲಾಡಿಸಿ ಬೌದ್ಧಿಕ-ತಾತ್ವಿಕ ಅಭಿವ್ಯಕ್ತಿಯನ್ನು ಆ ಭವ್ಯ ವ್ಯಕ್ತಿತ್ವ ಪ್ರಸಾದಿಸಿ ಇರುಳ ಜಗತ್ತಿಗೆ ಬೆಳಕನ್ನುಣಿಸಿತು" ಎಂದಿದ್ದಾಳೆ ಮಾರ್ಗರೆಟ್. "ನನ್ನ ದೇಶದ ಮಹಿಳೆಯರ ಸೇವೆಗೆ ಒಂದಷ್ಟು ಯೋಜನೆ ಹಾಕಿಕೊಂಡಿದ್ದೇನೆ. ಅದನ್ನು ಕಾರ್ಯರೂಪಕ್ಕೆ ತರಲು ನೀನು ನೆರವಾಗಬಲ್ಲೆ ಎಂದನಿಸುತ್ತದೆ" ಎಂದ ಗುರು ವಿವೇಕಾನಂದರ ಮಾತು ಮರಳುಗಾಡಿನಲ್ಲಿ ದಾಹದಿಂದ ನರಳುತ್ತಿದ್ದವಳಿಗೆ ಹಿನ್ನೀರಿನ ಒರತೆ ಸಿಕ್ಕಂತಾಯಿತು. ವಿವೇಕಾನಂದರನ್ನು ಕಾಡಿಬೇಡಿ ಭಾರತಕ್ಕೆ ತೆರಳುವುದನ್ನು ನಿಶ್ಚಯಿಸಿಯೇ ಬಿಟ್ಟಳು. 1897 ಡಿಸೆಂಬರ್ ಕೊನೆಯ ಭಾಗ. ತುಂತುರು ಮಳೆ, ದಟ್ಟವಾಗಿ ಕವಿದಿದ್ದ ಮಂಜುವಿನ ನಡುವೆ ಮಾರ್ಗರೆಟಳನ್ನು ಹೊತ್ತಿದ್ದ ಹಡಗು ಬಂಧುಗಳ ಕಣ್ಣಿಂದ ಚಿಕ್ಕದಾಗಿ, ಚುಕ್ಕಿಯಾಗಿ ಮರೆಯಾಗಿ ಹೋಯಿತು. ತುಂಬು ಹರೆಯದ ಸುಶಿಕ್ಷಿತ, ಪ್ರತಿಭಾವಂತೆ ಹುಡುಗಿ ಪದತಲದಲ್ಲಿ ಬಿದ್ದಿದ್ದ ಭೋಗಭಾಗ್ಯಗಳನ್ನು ಒದ್ದು ಹೊರಟಿದ್ದಳು. ಅವಳ ತಾಯಿಗೆ ಹಿಂದೆ ಧರ್ಮಗುರು ನುಡಿದ ಭವಿಷ್ಯ ನೆನಪಾಯಿತು. ಮರಣಶಯ್ಯೆಯಲ್ಲಿ ಪತಿ ನುಡಿದ ಕಡೆಯ ನುಡಿಯೂ ಜ್ಞಾಪಕಕ್ಕೆ ಬಂತು..."ದೇವರ ಕರೆಬಂದಾಗ ಕಳುಹಿಕೊಡು. ಮಹತ್ಕಾರ್ಯವನ್ನೇ ಸಾಧಿಸುತ್ತಾಳೆ"

             1898ರ ಮಾರ್ಚ್. ಮಾತೆ ಶಾರದಾ ದೇವಿ ಹಳ್ಳಿಯಿಂದ ಕಲ್ಕತ್ತೆಗೆ ಬಂದಿದ್ದರು. ಮಾರ್ಚ್ 17ರಂದು ಅವರನ್ನು ನೋಡಲೆಂದು ಮಾರ್ಗರೆಟ್ ಕಲ್ಕತ್ತೆಗೆ ಧಾವಿಸಿದಳು. ಮಾತೆ ಮಾರ್ಗರೆಟ್ ನೊಬೆಲಳನ್ನು ಹತ್ತಿರವೇ ಕೂರಿಸಿಕೊಂಡರು. "ಮಗಳೇ" ಎಂದರು. ಒಂದೇ ತಟ್ಟೆಯಲ್ಲಿ ಫಲಾಹಾರ ಸ್ವೀಕರಿಸಿದರು. ಕಲ್ಪನೆಗೂ ನಿಲುಕದ ಘಟನೆ. ಎಲ್ಲರಿಗೂ ಅಚ್ಚರಿ. ಹಿಂದೂವೊಬ್ಬಳು ಅದರಲ್ಲೂ ಸಂಪ್ರದಾಯಸ್ಥ ವೃದ್ಧೆ ಬ್ರಾಹ್ಮಣಿ ಹಿಂದೂವಲ್ಲದವಳೊಬ್ಬಳ ಜೊತೆ ಒಂದೇ ತಟ್ಟೆಯಲ್ಲಿ ತಿನ್ನುವುದು! ಉಳಿದವರು ಅಂತಿರಲಿ, ಸ್ವತಃ ವಿವೇಕಾನಂದರೆ ಆಶ್ಚರ್ಯಚಕಿತರಾದರು. ಕಲ್ಕತ್ತೆಯ ಬಂದರಿನಲ್ಲಿ ಸಂನ್ಯಾಸಿಯೊಬ್ಬ ಮಾರ್ಗರೆಟಳನ್ನು ಸ್ವಾಗತ ಕೋರಿ ಅರ್ಪಿಸಿದ ಪುಷ್ಪಾಹಾರಕ್ಕೆ ಘಮಘಮಿಸುವ ಪರಿಮಳ ಬಂದಿತ್ತು. ತವರಿಗೆ ಮರಳಿದ ಮಗಳನ್ನು ತಾಯಿ ಭಾರತಿ ಬರಸೆಳೆದು ಬಿಗಿದಪ್ಪಿ ಹೂಮುಡಿಸಿ ಹರಸಿದಂತಾಯಿತು.

             ನೀಲಾಂಬರ ಮುಖರ್ಜಿಯವರ ಉದ್ಯಾನದಲ್ಲಿದ್ದ ಆಶ್ರಮದಲ್ಲಿ, ದೇವಮಂದಿರದ ಸಭಾಂಗಣದಲ್ಲಿ ಮುಂಜಾವಿನ ಮಂಜಿನ ನಡುವೆ ಸ್ವಾಮಿ ವಿವೇಕಾನಂದರಿಂದ ದೀಕ್ಷೆಯನ್ನು ಸ್ವೀಕರಿಸಿದಳು. ಹಳೆಯದ್ದನ್ನೆಲ್ಲಾ ವರ್ಜಿಸಿ ಪರಮೇಶ್ವರನ ಪದತಲದಲ್ಲಿ ಸರ್ವಸ್ವವನ್ನೂ ನಿವೇದಿಸಿ ನವಜನ್ಮ ಪಡೆದು ಗುರುವಿನೆದುರು ನಿಂತಾಗ ಗುರುವಿನ ಅಂತಃಕರಣದಿಂದ ಸಹಜಪ್ರೇರಿತವಾಗಿ ನಿವೇದಿತಾ ಎನ್ನುವ ಅರ್ಥಗರ್ಭಿತ ನಾಮವೊಂದು ಹೊರಬಂತು. ಹೀಗೆ ಮಾರ್ಗರೆಟ್ ನಿವೇದಿತಾ ಆದಳು. ಕಲ್ಕತ್ತಾದ ಸ್ಟಾರ್ ರಂಗಮಂದಿರದಲ್ಲಿ ವಿವೇಕಾನಂದರ ಸಮ್ಮುಖದಲ್ಲಿ "ರಾಮಕೃಷ್ಣ ಸಂಘ"ದ ಉದ್ಘಾಟನೆಯ ಸಮಾರಂಭದಲ್ಲಿ ನಿವೇದಿತಾ ಮಾಡಿದ ಮೊದಲ ಭಾಷಣ ಪ್ರತಿಯೊಬ್ಬ ಭಾರತೀಯ ಕೇಳಿ, ಅರಿಯಬೇಕಾದ ಭಾಷಣ. "ಸಹಸ್ರಾರು ವರ್ಷಗಳ ಅಕ್ಷುಣ್ಣ ಪರಂಪರೆಯ ಸಂಜಾತರಾದ ನೀವು ಜಗದ್ವಂದ್ಯವಾದ ಆಧ್ಯಾತ್ಮಿಕ ರತ್ನಗಳನ್ನು ಕಾಪಿಟ್ಟುಕೊಂಡು ಬಂದಿರುವಿರಿ. ನಾನಿಂದು ಅಂತಹ ಪುಣ್ಯಭೂಮಿಗೆ, ಈ ಪಾವನ ಭೂಮಿಯ ಸೇವೆಗಾಗಿ ನಿಮ್ಮ ಪದತಲದಲ್ಲಿ ಕುಳಿತು ಜೀವನದ ಓನಾಮ ಕಲಿಯಲು ಬಂದಿದ್ದೇನೆ. ನನಗೆ ನೆರವಾಗಿ, ಆಶೀರ್ವದಿಸಿ..." ನಿವೇದಿತೆಯ ಮಾತು ನಿರರ್ಗಳವಾಗಿ ಸಾಗಿತ್ತು. ಪ್ರೇಕ್ಷಕರ ಕರತಾಡನ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

                1898ರಲ್ಲಿ ನಿವೇದಿತಾ, ರವೀಂದ್ರನಾಥ ಟಾಗೋರರನ್ನು ಭೇಟಿಯಾದಾಗ ಅವರು ತಮ್ಮ ಪುತ್ರಿಯ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೇಳಿಕೊಂಡರು. "ಠಾಕೂರ್ ಮನೆತನ ಹೆಮ್ಮಕ್ಕಳೆಲ್ಲರನ್ನೂ ಮೇಡಂಗಳನ್ನಾಗಿ ಮಾಡಬೇಕೆನ್ನುವ ಸನ್ನಾಹವಿದೇನು?" ಎನ್ನುವ ಕಿಡಿನುಡಿಯೊಂದು ನಿವೇದಿತಾಳಿಂದ ಹೊರಬಿತ್ತು. ನಮ್ಮ ದೇಶದ ವೈಶಿಷ್ಟ್ಯಗಳನ್ನು ಪರಕೀಯ ಭಾಷೆಗಳ ಮೂಲಕ ಅರಿಯಲು ಸಾಧ್ಯವಿಲ್ಲ. ಭಾರತೀಯರು ತಮ್ಮ ಮಕ್ಕಳ ಮನಸ್ಸು ಪಕ್ವಗೊಳ್ಳುವ ಮೊದಲೇ ಅದನ್ನು ಪರಕೀಯರಿಗೆ ಮಾರುವಷ್ಟು ಪಾಶ್ಚಾತ್ಯ ದಾಸರಾಗಿದ್ದುದು ಅವಳಿಗೆ ಬೇಸರ ತರಿಸಿತು. ಏತನ್ಮಧ್ಯೆ ನಿವೇದಿತಾ ಕಾಳಿಕಾ ಮಾತೆಯ ಭಕ್ತಳಾದಳು. ಕಾಳಿ ಮಾತೆಯ ಬಗ್ಗೆ ಭಾಷಣ ಮಾಡುತ್ತಾ "ಪ್ರಕೃತಿಯೊಡನೆ ಒಂದಾಗಲು ಹಿಂದುಗಳಲ್ಲಿರುವ ಉತ್ಕಟತೆಯೇ ಕಾಳಿಕಾ ಪೂಜೆ. ಸಮಸ್ತ ಸೃಷ್ಟಿಯೂ ಒಂದೇ ಎನ್ನುವ ಅರಿವು ಇದರಿಂದ ಮೂಡುತ್ತದೆ" ಎಂದಳು. ಇದರಿಂದ ಹಿಂದೂಗಳಿಗೆ ಆಕೆ ತಮ್ಮವಳೆಂಬ ಭಾವ ಮೊಳೆಯಲಾರಂಭಿಸಿತು. ಬಂದ ಒಂದು ವರುಷದೊಳಗೆ ಕಾಳಿಯ ಭಕ್ತೆಯಾದ ನಿವೇದಿತೆಯ ಕಾಳಿಯ ಪೂಜೆ ಕೆಲವು ಬ್ರಹ್ಮಸಮಾಜಿಗಳಿಗೆ ಸರಿಬರಲಿಲ್ಲ. ಅವರಲ್ಲೊಬ್ಬ ಒಂದು ದಿನ "ನೀವು ಮೂರ್ತಿಪೂಜೆ ಮಾಡುವುದಾದರೂ ಅದರಿಂದೇನೂ ಅಡ್ಡಿಯಿಲ್ಲ. ಆದರೆ ಆ ಮಹಾಭಯಾನಕವಾದ ಅಸಹ್ಯ ಹುಟ್ಟಿಸುವ ಕಾಳಿ ಮೂರ್ತಿಯನ್ನೇ ಪೂಜಿಸಬೇಕೇಕೆ?" ಎಂದು ಪ್ರಶ್ನಿಸಿದ. ಅದಕ್ಕೆ ನಿವೇದಿತಾ "ನನಗೆ ಯಾವ ವಿಗ್ರಹದ ಮೇಲೂ ಪ್ರೀತಿಯಿಲ್ಲ. ಆದರೆ ಕಾಳಿ ನನ್ನಲ್ಲಿ ಇರುವ ಪ್ರಮಾಣದಲ್ಲಿ ನಿಮ್ಮಲ್ಲೂ ಇದ್ದಾಳೆ. ಅಂದ ಮೇಲೆ ಅದರಲ್ಲಿ ಅಸಹ್ಯಪಟ್ಟುಕೊಳ್ಳುವುದೇನಿದೆ?" ಎಂದಾಗ ಆತ ಉಸಿರೆತ್ತಲಿಲ್ಲ.

              ಒಂದು ರಾತ್ರಿ ನಿವೇದಿತಾ ಇನ್ನೇನು ಊಟಕ್ಕೆ ಕುಳಿತುಕೊಳ್ಳುವವಳಿದ್ದಳು. ಅಷ್ಟರಲ್ಲಿ ಮಹಿಳೆಯ ರೋದನವೊಂದು ಕೇಳಿತು. ಅದನ್ನನುಸರಿಸಿ ಹೋದ ನಿವೇದಿತೆಗೆ ಸಾವಿನ ಅಂಚಿನಲ್ಲಿದ್ದ ಹೆಣ್ಣುಮಗುವಿನ ಪಕ್ಕದಲ್ಲಿ ಕುಳಿತು ಚಿಕ್ಕವಯಸ್ಸಿನ ಮಹಿಳೆಯೊಬ್ಬಳು  ರೋದಿಸುತ್ತಿದ್ದ ದೃಶ್ಯ ಗೋಚರಿಸಿತು. ನಿವೇದಿತಾ ಆ ತಾಯಿಯ ಪಕ್ಕದಲ್ಲಿ ಹೋಗಿ ಕುಳಿತಳು. ಕುಸಿಯುತ್ತಿದ್ದ ಆಕೆಗೆ ತನ್ನ ತೋಳಲ್ಲಿ ಆಶ್ರಯ ಕೊಟ್ಟಳು. "ನನ್ನ ಮಗಳು...ನನ್ನ ಮಗಳು.." ಎಂದು ಆ ತಾಯಿ ಚೀರಿದಾಗ "ನಿನ್ನ ಮಗುವನ್ನು ಜಗನ್ಮಾತೆ ಎತ್ತಿಕೊಂಡಿದ್ದಾಳೆ...ಸುಮ್ಮನಿರು" ಎಂದು ಸಮಧಾನಿಸಿದಳು. ಈ ಘಟನೆಯ ಬಳಿಕ ಆಕೆಯನ್ನು ತಮ್ಮ ಮನೆಯೊಳಗೆ ಸೇರಿಸಲು ಹಿಂಜರಿಯುತ್ತಿದ್ದವರೂ ಆಕೆಯನ್ನು ತಮ್ಮ ಜೊತೆಯಾಗಿಸಿಕೊಂಡರು. ಏತನ್ಮಧ್ಯೆ ನಿವೇದಿತಾ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನಾರಂಭಿಸಿದಳು. ಆಕೆಯ ಸ್ನೇಹಿತೆಯೊಬ್ಬಳು "ನಾನು ಶಾಲೆಗೆ ಹಣ ನೀಡುತ್ತೇನೆ. ಆದರೆ ಶಾಲೆಯ ಶಿಕ್ಷಣವನ್ನು ಕ್ರೈಸ್ತಪದ್ದತಿಗೆ ಬದಲಿಸಬೇಕು" ಎಂದಾಗ "ನಿನ್ನ ಚಿಕ್ಕಾಸೂ ಬೇಡ. ಕಾಳಿ ದಾರಿ ತೋರುವಳು" ಎನ್ನುತ್ತಾ ಸಿಡಿದಳು. ಶಾಲೆಯಲ್ಲಿ ಪ್ರತಿ ಪುಷ್ಯಮಾಸದಲ್ಲಿ ಸರಸ್ವತಿ ಪೂಜೆ ನೆರವೇರಿಸುತ್ತಿದ್ದಳು. ಸ್ವತಃ ರೇಶ್ಮೆ ಸೀರೆ ಉಟ್ಟು, ಹಣೆಗೆ ಕುಂಕುಮದ ಬೊಟ್ಟಿಟ್ಟು ದೊಡ್ಡದೊಂದು ಮಡಕೆಯಲ್ಲಿ ಸ್ವತಃ ಗಂಗಾಜಲ ತಂದು ಸರಸ್ವತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಳು. ಎರಡು ದಿನದ ಪೂಜೆಯ ಬಳಿಕ ವಿಜೃಂಭಣೆಯಿಂದ ಸರಸ್ವತಿ ವಿಗ್ರಹದ ವಿಸರ್ಜನೆ ನಡೆಯುತ್ತಿತ್ತು. ತನ್ನ ಶಿಷ್ಯೆಯರು ತಯಾರಿಸಿದ ಸ್ವದೇಶೀ ವಸ್ತುಗಳನ್ನು ಪ್ರದರ್ಶನಗಳಿಗೆ ಕಳುಹಿಕೊಡುತ್ತಿದ್ದಳು. 1906ರಲ್ಲಿ ಕಲಕತ್ತೆಯ ಕಾಂಗ್ರೆಸ್ ಅಧಿವೇಶನದಲ್ಲಿ ನಿವೇದಿತೆ ಪ್ರದರ್ಶಿಸಿದ ವಜ್ರದ ಸಂಕೇತ, ವಂದೇಮಾತರಂ ಘೋಷವಾಕ್ಯವಿದ್ದ ರಾಷ್ಟ್ರಧ್ವಜ ಅವಳು ತನ್ನ ಶಿಷ್ಯೆಯರಿಂದ ತಯಾರಿಸಿದ್ದೇ! 1899ರಲ್ಲಿ ಕಲ್ಕತ್ತಾ ನಗರ ಪ್ಲೇಗಿಗೆ ಬಲಿಯಾದಾಗ ಕಾಲಿಗೆ ಚಕ್ರ ಕಟ್ಟಿಕೊಂಡು ರೋಗಿಗಳ ಶುಶ್ರೂಷೆಗೆ ತೊಡಗಿದಳು. ತಾತ್ಕಾಲಿಕ ಔಷಧಾಲಯವನ್ನೂ ತೆರೆದಳು. ಕೈಯಲ್ಲಿ ಪೊರಕೆ ಹಿಡಿದು ಬೀದಿಯನ್ನೆಲ್ಲಾ ಸ್ವಚ್ಛಗೊಳಿಸಿದಳು. ಕಸದ ರಾಶಿಗಳ ಮೇಲೆ ಕ್ರಿಮಿನಾಶಕಗಳನ್ನೂ ಸ್ವತಃ ಹಾಕುತ್ತಿದ್ದಳು.

             ಸ್ವಾಮಿ ವಿವೇಕಾನಂದರ ಪ್ರಕಾರ ಹಿಂದೂಸ್ಥಾನಕ್ಕಾಗಿ ಕೆಲಸ ಮಾಡುವ ವ್ಯಕ್ತಿ ಹಿಂದೂವೇ ಆಗಬೇಕು. ಹಿಂದೂ ಪದ್ದತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಚಾರ-ವಿಚಾರ, ಆಹಾರ-ವಿಹಾರ ಯೋಚನೆ-ಯಾಚನೆಗಳೆಲ್ಲದರಲ್ಲೂ ಹಿಂದೂ ದೃಷ್ಟಿಯಿರಬೇಕು. "ನಿನ್ನ ಯೋಚನೆ, ಅವಶ್ಯಕತೆ, ಕಲ್ಪನೆ, ನಡತೆ ಎಲ್ಲವೂ ಹಿಂದುತ್ವದಿಂದ ಓತಪ್ರೋತವಾಗಬೇಕು. ನಿನ್ನ ಜೀವನದ ಒಳಗು-ಹೊರಗುಗಳೆಲ್ಲಾ ಸಂಪ್ರದಾಯನಿಷ್ಠ ಬ್ರಾಹ್ಮಣ ಬ್ರಹ್ಮಚಾರಿಯ ಬಾಳಿನಂತೆಯೇ ಆಗಬೇಕು. ನಿನ್ನಲ್ಲಿ ಉತ್ಕಟ ಹಂಬಲವಿದ್ದಲ್ಲಿ ಅದಕ್ಕೆ ಬೇಕಾದ ದಾರಿ ತಾನಾಗಿ ಗೋಚರವಾಗುತ್ತವೆ. ಅದಕ್ಕಾಗಿ ನೀನು ನಿನ್ನ ಭೂತಕಾಲವನ್ನು ಮರೆಯಬೇಕು. ಅದರ ಕಿಂಚಿತ್ತೂ ನೆನಪು ನಿನ್ನಲ್ಲಿ ಉಳಿಯಬಾರದು" ಎಂದಿದ್ದರು ವಿವೇಕಾನಂದರು. ಪ್ರಲೋಭನೆಗಳನ್ನು ಹತ್ತಿರ ಸುಳಿಯಲು ಬಿಡಬೇಡ ಎಂದಿದ್ದರವರು. ಈ ಎಲ್ಲವನ್ನೂ ಅಕ್ಷರಶಃ ಪಾಲಿಸಿದಳು ನಿವೇದಿತಾ. 1901ರಲ್ಲಿ ಆಕೆ ಇಂಗ್ಲೆಂಡಿಗೆ ಹೋದಾಗ ಅವಳ ಭಾಷಣಗಳಿಗೆ ಜನ ಇರುವೆಗಳಂತೆ ಮುತ್ತತೊಡಗಿದರು. ಅವಳ ವಾಣಿಯಲ್ಲಿ ಮೊಳಗುತ್ತಿದ್ದ ಭಾರತದ ಮಹೋಜ್ವಲ ಜನಜೀವನ ಬೆಳಕಿನ ಮುಂದೆ ಮಿಷನರಿಗಳು ವರ್ಣಿಸುತ್ತಿದ್ದ ಅನಾಗರಿಕ ಭಾರತದ ಚಿತ್ರ ತಲೆಕೆಳಗಾಯಿತು.

             1902 ಜುಲೈ 5ರಂದು ವಿವೇಕಾನಂದರೇ ನಿರ್ದೇಶಿಸಿದ್ದ ಗಂಗಾತೀರದ ಬಿಲ್ವವೃಕ್ಷದಡಿಯಲ್ಲಿ ಚಿತೆ ಸಿದ್ಧವಾಗಿತ್ತು. ಮೂಕಳಾಗಿ ಕೂತಿದ್ದ ನಿವೇದಿತೆ ಇನ್ನೇನು ಚಿತೆಗೆ ಬೆಂಕಿ ಸೋಕಿಸಬೇಕು ಅನ್ನುವಾಗ "ಅವರು ಕೊನೆಯಲ್ಲಿ ಹಾಕಿಕೊಂಡಿದ್ದ ಬಟ್ಟೆ ಅದು. ಅದನ್ನೂ ಸುಟ್ಟು ಬಿಡುತ್ತೀರಾ" ಎಂದು ಪಕ್ಕದಲ್ಲಿದ್ದ ಸ್ವಾಮಿ ಸದಾನಂದರನ್ನು ಕೇಳಿದಳು. ಸದಾನಂದರು ತೆಗೆದುಕೊಡಲೇ ಎಂದಾಗ ಅಷ್ಟು ಜನರೆದುರಿಗೆ ಅದನ್ನು ತೆಗೆಯುವುದು ಉಚಿತವಲ್ಲವೆನಿಸಿ ಸುಮ್ಮನಾದಳು. ಸಂಜೆಯ ಮಬ್ಬಿನಲ್ಲಿ ಯಾರೋ ಅವಳನ್ನು ಹಿಡಿದೆಳೆದಂತಾಯಿತು. ಹಿಂತಿರುಗಿ ನೋಡಿದಾಗ ಧಗಧಗಿಸುತ್ತಿದ್ದ ಚಿತೆಯಿಂದ ಬಟ್ಟೆಯ ಚೂರೊಂದು ಹಾರಿಬಂದು ಬಿದ್ದಿತ್ತು. ಅವಳು ಆಸೆಪಟ್ಟು ನೋಡುತ್ತಿದ್ದ ಬಟ್ಟೆಯ ಚೂರು! ಗುರುವಿನ ಜೀವನಾದರ್ಶಗಳ ಪ್ರೇರಣೆ ನೀಡುವ ಸ್ಮೃತಿಚಿಹ್ನೆ. ತನ್ನ ಪ್ರಖರ ಚಟುವಟಿಕೆ ಮಠದ ಪ್ರಶಾಂತ ವಾತಾವರಣಕ್ಕೆ ಧಕ್ಕೆ ತರಬಾರದೆಂಬ ಉದ್ದೇಶದಿಂದ ರಾಷ್ಟ್ರೀಯ ವಿಚಾರಧಾರೆಯ ಮೂಲಕ ರಾಷ್ಟ್ರಜಾಗೃತಿ ನಿರ್ಮಿಸಲು ಸ್ವತಂತ್ರಳಾಗಿ ಹೊರಬಿದ್ದಳು.

              ಬ್ರಿಟಿಷರಿಂದ ಭಾರತ ಒಂದಾಯಿತು ಎನ್ನುವವರಿಗೆ 1902ರಲ್ಲಿ ನಿವೇದಿತಾ ಮದರಾಸಿನಲ್ಲಿ ಮಾಡಿದ ಭಾಷಣ ಉತ್ತರವೀಯುತ್ತದೆ.
"ಹಿಂದೂಸ್ಥಾನದ ಏಕತೆ ಮೂಲಭೂತವಾದುದು. ಶಕ್ತಿಪೂರ್ಣವಾದುದು. ಉಜ್ವಲ ಭವಿತವ್ಯವೂ ಅದಕ್ಕಿದೆ. ಮೂಲಭೂತ ಏಕತೆ ಇಲ್ಲ ಎನ್ನುವುದಾದರೆ ಹೊರಗಿನವರಾರೂ ಅದನ್ನು ತಂದುಕೊಡಲಾರರು. ನಮ್ಮ ಮೂಲಭೂತ ಏಕತೆ ಹೊರಗಿನವರಾರೂ ನಮಗೆ ಕಲಿಸಿಕೊಟ್ಟದ್ದಲ್ಲ. ಸಮಾನ ಪರಂಪರೆ, ಸಮಾನ ಪರಿಶ್ರಮ, ಸಮಾನ ಆಸೆ ಆಕಾಂಕ್ಷೆಗಳ ಆಧಾರದ ಮೇಲೆ ಈ ರಾಷ್ಟ್ರ ಮತ್ತೆ ಭವ್ಯ ಭವಿತವ್ಯವನ್ನು ಪಡೆಯಲಿದೆ." ಭಾರತೀಯ ಮುಸ್ಲಿಮರು ನಿವೇದಿತಾಳ ಮಾತನ್ನು ಅರ್ಥೈಸಿಕೊಳ್ಳಬೇಕು. "ಮನಸಿನಲ್ಲಿ ಅರಬಿಸ್ತಾನದ ಕನಸು ಕಾಣುತ್ತಾ ಕೂರುವುದು ಹಿಂದೂಸ್ಥಾನದ ಮುಸಲ್ಮಾನರ ಕರ್ತವ್ಯವಾಗಬಾರದು. ಹಿಂದೂಸ್ಥಾನದ ಜೊತೆ ನಿಮ್ಮ ಸಂಬಂಧ ಜೋಡಿಸಿಕೊಳ್ಳುವುದು ನಿಮ್ಮ ಕರ್ತವ್ಯ. ಭಾರತದ ಜೊತೆ ನಿಮಗೆ ರಕ್ತಸಂಬಂಧವಿದೆ. ಇಲ್ಲಿರುವ ಜನರ ಔದಾರ್ಯದಿಂದ ಇದು ನಿಮ್ಮೆಲ್ಲರ ಮನೆಯಾಗಿದೆ. ಅಂದ ಮೇಲೆ ನೀವು ಇಲ್ಲಿನ ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಒಂದಾಗಲೇಬೇಕು."

            ಜಗದೀಶ ಚಂದ್ರ ಬೋಸರ ಸಂಶೋಧನೆಗೆ, ಪುಸ್ತಕಗಳ ಪ್ರಕಟಣೆಗೆ ನೆರವು ನೀಡಿದ್ದು ನಿವೇದಿತಾಳೇ. ನನ್ನ ಸಂಶೋಧನೆಯಲ್ಲಿ ಅತೀ ಹೆಚ್ಚು ನೆರವಾದ ದೇವತೆ ಎಂದರೆ ನಿವೇದಿತೆ ಎಂದಿದ್ದಾರೆ ಜಗದೀಶರು. ಪಾಶ್ಚಾತ್ಯಪ್ರಭಾವಕ್ಕೊಳಗಾದ ಅವನೀಂದ್ರರ ಕಲಾ ಪ್ರತಿಭೆಯನ್ನು ಶುದ್ಧ ಭಾರತೀಯ ಶೈಲಿಗೆ ಬದಲಾಯಿಸಿದ ಕೀರ್ತಿ ನಿವೇದಿತಾಳದ್ದು. ರಮಾನಂದ ಚಟರ್ಜಿಯವರಿಗೆ ಇಂಗ್ಲೀಷ್ ಮಾಸಪತ್ರಿಕೆ ಹೊರಡಿಸಲೂ ಪ್ರೇರಣೆಯಾದಳು. ಸ್ವದೇಶೀ ವಸ್ತುಗಳನ್ನು ಸ್ವತಃ ಕೈಗಾಡಿಯಲ್ಲಿ ತುಂಬಿಕೊಂಡು ಮನೆಮನೆಗೆ ಮಾರಿದಳು. ಕರ್ಜನನ ಭಾರತ ವಿರೋಧಿ ಭಾಷಣವನ್ನು ಹಾಗೂ ಅದನ್ನು ಬಾಯಿಚಪ್ಪರಿಸಿಕೊಂಡು ಕೇಳಿದ ಭಾರತೀಯರನ್ನು ವ್ಯಂಗ್ಯಭರಿತ ಲೇಖನದಿಂದ ಚುಚ್ಚಿದಳು. ಬರೋಡಾದಲ್ಲಿದ್ದ ಅರವಿಂದರನ್ನು ಬಂಗಾಳಕ್ಕೆ ಬಂದು ರಾಷ್ಟ್ರೀಯ ಚಳುವಳಿಯ ನಾಯಕತ್ವ ವಹಿಸಲು ಕೇಳಿಕೊಂಡಳು. ಭಾರತೀಯರ ಚಿತ್ರಕಾರರಿಗೆ ಧ್ಯಾನ ಮಾಡಿ ಚಿತ್ರ ರಚಿಸುವಂತೆ ಪ್ರೇರೇಪಿಸುತ್ತಿದ್ದಳು. ಹಳ್ಳಿಹಳ್ಳಿಗೂ ಹೋಗಿ ರೈತರೊಂದಿಗೆ ಬೆರೆಯುತ್ತಿದ್ದಳು. ಸಮಾಜದ ಎಲ್ಲಾ ಸ್ತರಗಳ ಜನರ ಪ್ರೀತಿಯನ್ನು ಗಳಿಸಿದ್ದಳು.

                ಯುಗಾಂತರ ಪತ್ರಿಕೆಯ ಕಛೇರಿಗೆ ಮುತ್ತಿಗೆ ಹಾಕಿ ವಿವೇಕಾನಂದರ ತಮ್ಮ ಭೂಪೇಂದ್ರನನ್ನು ಬಂಧಿಸಿದಾಗ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಇಪ್ಪತ್ತುಸಾವಿರ ರೂಪಾಯಿ ಕೇಳಿತು. ನಿವೇದಿತೆ ತಕ್ಷಣ ಅಷ್ಟೂ ಹಣವನ್ನೂ ಕೊಟ್ಟು ಭೂಪೇಂದ್ರನನ್ನು ಬಿಡಿಸಿಕೊಂಡು ಬಂದಳು. ನಿಬ್ಬೆರಗಾದ ಜನ ಸಮೂಹ "ಭಗಿನಿ ನಿವೇದಿತಾ" "ಭಗಿನಿ ನಿವೇದಿತಾ" ಎಂದು ಉದ್ಗರಿಸಿತು. ಅವಳು ಛಾಪೇಕರ್ ಸಹೋದರರ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದದ್ದು ಈ ಅವಧಿಯಲ್ಲೇ. ಪಾಶ್ಚಾತ್ಯ ಸಾಹಿತ್ಯಕ್ಕೆ ಬದಲಾಗಿ ಉನ್ನತಿಗೊಯ್ಯುವ ಶಕ್ತಿಯಿರುವ ಪೌರ್ವಾತ್ಯ ವಾಞಯವನ್ನು ಓದಬೇಕೆಂದು ಭಾರತೀಯರನ್ನು ಪ್ರೇರೇಪಿಸುತ್ತಿದ್ದಳು. ಪ್ರಾಚೀನ ಭಾರತೀಯ ಗೃಹಜೀವನದ ಸರಳತೆ, ಪರಿಶುದ್ಧತೆ ಹಾಗೂ ಘನತೆಗಳನ್ನು ಅಳವಡಿಸಿಕೊಳ್ಳಲು ಗೋಗರೆಯುತ್ತಿದ್ದಳು. ಪಶ್ಚಿಮದ ಬೆಡಗು, ದುಂದುಗಾರಿಕೆ ಹಾಗೂ ಶಿಕ್ಷಣ ಭಾರತೀಯ ನಡವಳಿಕೆ, ರೀತಿ-ನೀತಿಗಳನ್ನು ಹಾಳುಗೆಡವದಂತೆ ಎಚ್ಚರವಹಿಸಿ ಎನ್ನುತ್ತಿದ್ದಳು. ಸಮಾರಂಭವೊಂದರ ಬಹುಮಾನ ವಿತರಣೆಗೆ ಅತಿಥಿಯಾಗಿ ಹೋದ ಆಕೆಗೆ ಅದು ಕ್ರಿಕೆಟ್ ಆಟಗಾರರಿಗೆ ಎಂದು ತಿಳಿದಾಗ ಭೋಂಸ್ಲೆ ರಾಜರ ರಾಜಧಾನಿಯಲ್ಲಿ ಮರಾಠರ ಶೌರ್ಯ ಸಾಹಸ್ಗಳ ಪ್ರದರ್ಶನವಿರಬಹುದೆಂಬ ಆಸೆಯಿಂದ ಬಂದರೆ ಭವಾನಿಯ ಖಡ್ಗವನ್ನೂ ಮರೆತೂ ಪರಕೀಯರ ಆಟಗಳನ್ನು ಪ್ರೋತ್ಸಾಹಿಸುವ ನಿಮಗೆ ನಾಚಿಕೆಯಾಗಬೇಕೆಂದು ಉಗಿದು ಬಂದಿದ್ದಳು. ಪೂರ್ವಬಂಗಾಳ ಪ್ರವಾಹದುರಿಯಲ್ಲಿ ಸಿಲುಕಿದಾಗ ಜೀವ ಸವೆಸಿ ಸೇವೆ ಮಾಡಿದಳು. ಶವಗಳಿಗೂ ಚೈತನ್ಯವೆರೆದು ನಿದ್ರಿಸುತ್ತಿದ್ದ ಜನಾಂಗಕ್ಕೆ ಆತ್ಮಗೌರವ ಕಲಿಸಿಕೊಟ್ಟ ಸ್ವದೇಶಪ್ರೇಮ ದೀಕ್ಷೆಯ ದೇವಾಲಯವದು. ಬೇಡುವುದಲ್ಲ, ಸಾಮೂಹಿಕ ಕ್ರಾಂತಿಯಾಗಬೇಕು; ಪ್ರಾಣಾರ್ಪಣೆಯ ಇಚ್ಛೆ ಪ್ರಕಟಗೊಳ್ಳಬೇಕು ಎಂದು ಹಿಂದೂಸ್ಥಾನವನ್ನು ಬಡಿದೆಬ್ಬಿಸಿದ ಅಗ್ನಿಶಿಖೆಯದು. ಕೈಯಲ್ಲಿ ರುದ್ರಾಕ್ಷಿಯ ಮಾಲೆ ತಿರುಗುತ್ತಿತ್ತು. ಆತ್ಮದೀಪದ ಹೊನ್ನರಶ್ಮಿ ಕಣ್ಣುಗಳಲ್ಲೊಮ್ಮೆ ಮಿಂಚಿತು. ಕೀರ್ತಿ, ಭೋಗಗಳಿಂದ ಮೈಮರೆಯದ ಆ ಜೀವ ನಿರಂತರ ಸೂರ್ಯೋದಯವನ್ನು ಕಾಣಲು ಅಮರವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ