ಯಾರು ಮಹಾತ್ಮ?
ಭಾಗ- ೧೬
ಖಿಲಾಫತ್ತಿನ ಕಿತಾಪತಿಗಳನ್ನು ಈಗಾಗಲೇ ನೋಡಿದ್ದೇವೆ. 1920 ಜೂನ್ 9ರಂದು ಅಲಹಾಬಾದಿನಲ್ಲಿ ನಡೆದ ಖಿಲಾಫತ್ ಸಮ್ಮೇಳನದಲ್ಲಿ ಅಸಹಕಾರದ ವಿಷಯವಾಗಿ ರಚನೆಯಾದ ಕಾರ್ಯಕಾರಿ ಸಮಿತಿಯಲ್ಲಿದ್ದ ಏಕೈಕ ಹಿಂದೂ ಗಾಂಧಿ! ಮುಂದಿನ ತಿಂಗಳು ಆಗಸ್ಟ್ ಒಂದರಿಂದ ಖಿಲಾಫತ್ ಆಂದೋಲನ ಶುರು ಮಾಡುತ್ತೇವೆಂದು ವೈಸ್ ರಾಯ್ ಗೆ ನೋಟಿಸ್ ನೀಡಿದ್ದು ಯಾವುದೇ ಖಿಲಾಫತರಲ್ಲ, ಬದಲಿಗೆ ಗಾಂಧಿ. ಭಾರತದ ರಾಜಕೀಯ ಧುರೀಣನಾಗಿ ಕಾರ್ಯಾರಂಭಿಸಿದ ಕೂಡಲೇ ದೇಶಕ್ಕೆ ಆರು ತಿಂಗಳೊಳಗೆ ಸ್ವರಾಜ್ಯ ತಂದುಕೊಡುವುದಾಗಿ ಭರವಸೆ ನೀಡಿದರು ಗಾಂಧಿ. (ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ - ಡಾ. ಬಿ.ಆರ್. ಅಂಬೇಡ್ಕರ್). ಹೀಗೆ ಆಶ್ವಾಸನೆ ಕೊಟ್ಟು ವಾಸನೆ ಬರಿಸುವ ಭಾರತದ ಇಂದಿನ ರಾಜಕಾರಣಿಗಳ ಗುರು ಗಾಂಧಿ ಎನ್ನಬಹುದು. "ಎರಡೂ ಸಮುದಾಯಗಳು ಏಕತೆ ಸಾಧಿಸಲು ಖಿಲಾಫತ್ ಜೀವಮಾನದಲ್ಲೇ ಒಂದು ಸದವಕಾಶ ಕಲ್ಪಿಸಿದೆ. ಹಿಂದೂಗಳು ಮುಸ್ಲಿಮರ ಜೊತೆ ಶಾಶ್ವತ ಗೆಳೆತನ ಸಂಪಾದಿಸಬೇಕು ಎಂದಾದರೆ, ಇಸ್ಲಾಮ್ ಗೌರವ ಸ್ಥಾಪಿಸುವ ಪ್ರಯತ್ನದಲ್ಲಿ ನಾಶ ಹೊಂದಲೂ ತಯಾರಾಗಿರಬೇಕು." ಎಂದು ಗಾಂಧಿ ಸ್ಪಷ್ಟಪಡಿಸಿದರು. (ಇಂಡಿಯಾ ಆಂಡ್ ಪಾಕಿಸ್ತಾನ - ವಿ.ಬಿ. ಕುಲಕರ್ಣಿ). "ಇಸ್ಲಾಂ ರಕ್ಷಣೆಗಾಗಿ ಷರತ್ತುಬದ್ಧ ಮತ್ತು ಪೂರ್ಣಹೃದಯದ ಸೇವೆ ನೀಡುವುದರಲ್ಲಿಯೇ ಹಿಂದೂ ಧರ್ಮದ ರಕ್ಷಣೆ, ಸುರಕ್ಷಿತತೆಯೂ ಅಡಗಿದೆ ಎನ್ನುವುದನ್ನು ಹಿಂದೂಗಳು ಮನವರಿಕೆ ಮಾಡಿಕೊಳ್ಳಬೇಕು" ಎಂದು ಘೋಷಿಸಿದರು ಗಾಂಧಿ.(ಗಾಂಧಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ).
ರೌಲತ್ ಕಾಯ್ದೆ ವಿರುದ್ಧ ನಡೆದ ಸತ್ಯಾಗ್ರಹ ಪ್ರಚಾರದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವುದೇ ಘರ್ಷಣೆ ನಡೆಯಲಿಲ್ಲ. ಆದರೂ ಪ್ರಮಾಣ ತೆಗೆದುಕೊಳ್ಳುವಂತೆ ಗಾಂಧಿ ತಮ್ಮ ಬೆಂಬಲಿಗರಿಗೆ ಸೂಚಿಸಿದರು. ಇದು ಆರಂಭದಿಂದಲೇ ಹಿಂದೂ ಮುಸ್ಲಿಮ್ ಐಕ್ಯತೆ ಬಗ್ಗೆ ಅವರೆಷ್ಟು ಹಠವಾದಿಯಾಗಿದ್ದರು ಎನ್ನುವುದನ್ನು ತೋರಿಸುತ್ತದೆ.(ಪಾಕಿಸ್ತಾನ ಆರ್ ಪಾರ್ಟಿಷನ್ ಆಫ್ ಇಂಡಿಯಾ-ಡಾ. ಬಿ.ಆರ್. ಅಂಬೇಡ್ಕರ್). ವಿವೇಕ ಉಳ್ಳ ಯಾರಾದರೂ ಹಿಂದೂ ಮುಸ್ಲಿಮ್ ಐಕ್ಯತೆಗಾಗಿ ಈ ರೀತಿ ವರ್ತಿಸುತ್ತಾರೆಯೇ. ಅಷ್ಟಕ್ಕೂ ಹಿಂದೂ ಮುಸ್ಲಿಮರ ಮಧ್ಯೆ ಐಕ್ಯತೆ ಹಿಂದಾದರೂ ಎಲ್ಲಿತ್ತು? ರಾಷ್ಟ್ರೀಯತೆ, ರಾಷ್ಟ್ರ ಎಂದರೆ ತಾಯಿ ಎನ್ನುವ ಭಾವನೆಯೇ ಇಲ್ಲದ ಇಸ್ಲಾಂ ಮತೀಯರು ಹಿಂದೂಗಳೊಂದಿಗೆ ಎಂದಾದರೂ ಒಂದಾಗಿದ್ದರೆ? ಒಂದಾಗಲು ಸಾಧ್ಯವೇ? ಎಲ್ಲೋ ಒಂದೆರಡು ಕಡೆ ಕೆಲವೇ ಜನರನ್ನು ಗುಂಪಿನಲ್ಲಿ ಆಗಿರಬಹುದಾದುದನ್ನು ಸಾರ್ವತ್ರಿಕವಾಗಿ ಅನುಸರಿಸಲು ಹೋದ ಮೂರ್ಖತನವಿದು. ಇಲ್ಲದೆ ಇದ್ದುದನ್ನು ಕಲ್ಪಿಸಿಕೊಂಡವರ ಸಾಲಿಗೆ ಗಾಂಧಿಯೂ ಸೇರಿದರು ಅಷ್ಟೇ ಎನ್ನಬಹುದು. ಈ ಮೂರ್ಖತನದ ಪರಿಣಾಮಗಳನ್ನು ಈ ದೇಶ ಅದೆಷ್ಟು ಕಂಡಿಲ್ಲ?
ಬರೇ ಇಷ್ಟೇ ಆಗಿದ್ದರೆ ಯಾವುದೇ ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ. 1920 ಸೆಪ್ಟೆಂಬರ್ 8ರಂದು ಯಂಗ್ ಇಂಡಿಯಾದಲ್ಲಿ ಗಾಂಧಿ ಬರೆದ ಲೇಖನವನ್ನೋದಿದರೆ ಎಂತಹವನಿಗಾದರೂ ರಕ್ತ ಕುದಿಯಬೇಕು. "ದೇವರೊಬ್ಬನೇ ಶ್ರೇಷ್ಠ ಬೇರಾರೂ ಅಲ್ಲ ಎನ್ನುವುದನ್ನು ಬಿಂಬಿಸಲು ಹಿಂದೂ ಮತ್ತು ಮುಸ್ಲಿಮರು ಇಬ್ಬರೂ ಉತ್ಸಾಹದಿಂದ "ಅಲ್ಲಾ ಹೋ ಅಕ್ಬರ್" ಎಂದು ಘೋಷಣೆ ಹಾಕಬೇಕು." ಅಂಬೇಡ್ಕರ್ ತಮ್ಮ "ಪಾಕಿಸ್ತಾನ್ ಆರ್ ಪಾರ್ಟೀಷನ್ ಆಫ್ ಇಂಡಿಯಾ"ದಲ್ಲಿ ಇದನ್ನು "ಇದು ನಮ್ಮ ಅಲ್ಪತನದ ಒಪ್ಪಿಗೆ" ಎಂದು ವಿಶ್ಲೇಷಿಸಿದ್ಡಾರೆ. ಒಂದು ಕಡೆ ವಿದೇಶೀ ವಸ್ತುಗಳ ದಹನ ಚಳುವಳಿ ನಡೆಯುತ್ತಿದ್ದಾಗ, ಗಾಂಧಿ ಅದನ್ನು ಬಡವರಿಗೆ ಹಂಚಬಹುದಲ್ವೇ ಎಂದಿದ್ದರು. ಮುಂದೆ ಇದೇ ಗಾಂಧಿ ವಿದೇಶೀ ವಸ್ತುಗಳ ದಹನದ ಚಳುವಳಿ ಕೈಗೊಂಡರು ಎನ್ನುವುದು ಮಾತ್ರ ಚೋದ್ಯ! ಆದರೆ ಖಿಲಾಫತ್ ಸಂದರ್ಭದಲ್ಲಿ ಅತ್ತ ವಿದೇಶೀ ವಸ್ತುಗಳ ದಹನ ನಡೆಯುತ್ತಿರುವಾಗ ಇತ್ತ ಗಾಂಧಿ, ಮುಸ್ಲಿಮರು ವಿದೇಶೀ ವಸ್ತ್ರಗಳನ್ನು ತುರ್ಕಿಯ ತಮ್ಮ ಸಹೋದರರಿಗೆ ಕಳುಹಿಸಲು ಒಪ್ಪಿಗೆ ನೀಡಿದರು. ಹಿಂದೂಗಳ ಬಗ್ಗೆ ಗಾಂಧಿಯದ್ದು ಯಾವಾಗಲೂ ಬಿಗಿ ನಿಲುವು. ಅದೇ ಮುಸ್ಲಿಮರ ಬಗ್ಗೆ ಸದಾ ಮೃದು ಭಾವನೆ ಹಾಗೂ ಅವರು ಹೇಗೆ ಮಾಡಿದರೂ ಸರಿ ಎನ್ನುವ ಭಾವನೆ ಅವರ ಹೃದಯದಲ್ಲಿರುತ್ತಿತ್ತು.(ಪಾಕಿಸ್ತಾನ್ ಆರ್ ಪಾರ್ಟೀಷನ್ ಆಫ್ ಇಂಡಿಯಾ - ಡಾ. ಬಿ.ಆರ್. ಅಂಬೇಡ್ಕರ್)
ಉತ್ತರಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮುನ್ಷಿರಾಮ್ ಎಂಬಾತ ಸ್ವಾಮಿ ದಯಾನಂದ ಸರಸ್ವತಿಯವರನ್ನು ಭೇಟಿಯಾಗಿ ಅವರಿಂದ ಪ್ರಭಾವಿತಗೊಂಡು ಆರ್ಯ ಸಮಾಜ ಸೇರಿದ್ದರು. 1887ರಲ್ಲಿ ವಕೀಲರಾದ ಆದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸ ಹೀಗೆ ನಾಲ್ಕೂ ಆಶ್ರಮಗಳನ್ನು ಪೂರೈಸಿದರು. ತಮ್ಮ ಹೆಸರನ್ನು ಶೃದ್ಧಾನಂದ ಎಂದು ಬದಲಾಯಿಸಿಕೊಂಡರು. 1902ರಲ್ಲಿ ಹರಿದ್ವಾರದಲ್ಲಿ ಮೊದಲ ಗುರುಕುಲ ಸ್ಥಾಪಿಸಿದ ಅವರು ತಮ್ಮ ಬಳಿಯಿದ್ದ ಸುಮಾರು ನಲವತ್ತು ಸಾವಿರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ತಮ್ಮ ಪುತ್ರರ ಆಸ್ತಿಯೆಲ್ಲವನ್ನು ಅದಕ್ಕೆ ನೀಡಿ ಅಲ್ಲಿ ಅವಿಶ್ರಾಂತ ಸೇವೆ ಸಲ್ಲಿಸಿದರು. 1917ರಲ್ಲಿ ಸಂನ್ಯಾಸ ಸ್ವೀಕರಿಸಿದರು. ರಾಷ್ಟ್ರೀಯತೆಯ ಪ್ರಚಾರಕರಾಗಿ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯನ್ನು ವಿರೋಧಿಸುತ್ತಿದ್ದ ಆತ, ಹಿಂದೂ ದೇಶದ ಬಲವರ್ಧನೆಗೆ ಸರ್ವಸ್ವವನ್ನೂ ತ್ಯಾಗ ಮಾಡಿದರು. ಗಾಂಧಿಯವರು ನಾಗರಿಕ ಹಾಗೂ ಅಹಿಂಸಾತ್ಮಕ ಅಸಹಕಾರ ಎನ್ನುವ ಆಂದೋಲನ ಕೈಗೊಂಡಾಗ ಅದಕ್ಕೆ ಧುಮುಕಿದ ಶೃದ್ಧಾನಂದರು ಅಸಂಖ್ಯ ಹಿಂಬಾಲಕರನ್ನೂ ಪಡೆದರು. ಆಂದೋಲನದ ವೇಳೆ ಬ್ರಿಟಿಷ್ ಸೈನಿಕರ ಗುಂಡಿಗೆ ಎದೆಯೊಡ್ಡಿ ಮುಂದುವರಿದ ವೀರ ಅವರು. ಗಲಭೆಯಲ್ಲಿ ಮೃತಪಟ್ಟವರಿಗಾಗಿ ಜಾಮಾ ಮಸೀದಿಯಲ್ಲಿ ಪ್ರಾರ್ಥನೆ ಕೈಗೊಂಡಿದ್ದಾಗ ಆ ಮಸೀದಿಯಲ್ಲಿ ಪ್ರವಚನ ನೀಡಿದ ಕಾವಿಧಾರಿ ಸಂತ ಶೃದ್ಧಾನಂದ! ದೆಹಲಿಯಲ್ಲಿ ರೌಲತ್ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆತ ಅನೇಕ ಚಳವಳಿಗಳನ್ನು ಯಶಸ್ವಿಯಾಗಿ ಸಂಘಟಿಸಿದರು. ಚೌರಿಚೌರಾ ಘಟನೆಯ ಬಳಿಕ ಗಾಂಧಿ ಅಸಹಕಾರ ಆಂದೋಲನವನ್ನು ಹಿಂದಕ್ಕೆ ತೆಗೆದುಕೊಂಡಾಗ "ಆತ್ಮಸಾಕ್ಷಿ ಎನ್ನುವುದು ನಿಮ್ಮೊಬ್ಬರ ಸ್ವತ್ತಲ್ಲ. ನನಗೂ ಆತ್ಮಸಾಕ್ಷಿ ಇದೆ" ಎಂದು ನೇರವಾಗಿ ಖಾರವಾಗಿ ಗಾಂಧಿಗೆ ಪತ್ರ ಬರೆದಿದ್ದರು. ಹೀಗೆ 1922 ಮಾರ್ಚ್ 12ರಂದು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ನಿಜಾರ್ಥದಲ್ಲಿ ಸಂನ್ಯಾಸಿಯಾದರು ಶೃದ್ಧಾನಂದ.
"ದಿ ಲಿಬರೇಟರ್" ವಾರಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಲೇಖನಗಳು ಮುಂದೆ ಅವರ ಇಪ್ಪತ್ತನೇ ಸ್ಮೃತಿದಿವಸದಂದು "ಇನ್ ಸೈಡ್ ಕಾಂಗ್ರೆಸ್" ಎನ್ನುವ ಹೆಸರಲ್ಲಿ ಪುಸ್ತಕ ರೂಪದಲ್ಲಿ ಹೊರಬಂತು. ಅವರು ಕಾಂಗ್ರೆಸ್ಸಿನಲ್ಲಿದ್ದಾಗಿನ ನಡೆದ ಘಟನೆಗಳ ಗುಚ್ಛವದು. ಅವರು ಹೇಳುತ್ತಾರೆ - "ಬ್ರಿಟಿಷ್ ಸರಕಾರದ ಜೊತೆ ಶಾಂತಿ ಸ್ಥಾಪಿಸಿಕೊಳ್ಳದಂತೆ ಕಾಬೂಲ್ ಸುಲ್ತಾನನನ್ನು ಆಗ್ರಹಿಸುವ ಸಂದೇಶ ಕಳುಹಿಸಲು ರಾಜಕೀಯ ನಾಯಕರು ತನ್ನನ್ನು ಬಳಸಿಕೊಂಡರು ಎಂದು ಮೌಲಾನಾ ಅಲಿ ಆಕ್ಷೇಪಿಸುತ್ತಿದ್ದರು. ಅದು ಜಾಣತನದ ಹೆಜ್ಜೆಯಾಗಿರಲಿಲ್ಲ ಎಂದು ನಾನೂ ಹೇಳಿದೆ. ಆ ಸಂದರ್ಭದಲ್ಲಿ ಸುಮ್ಮನಿದ್ದ ಅವರು ಆನಂದ ಭವನ ತಲುಪುತ್ತಿದ್ದಂತೆ ನನ್ನನ್ನು ಪಕ್ಕಕ್ಕೆ ಕರೆದು ತಮ್ಮ ಕೈಚೀಲದಿಂದ ಕಾಗದವೊಂದನ್ನು ತೆಗೆದು ಓದಲು ಕೊಟ್ಟರು. "ಅಹಿಂಸಾತ್ಮಕ ಅಸಹಕಾರ ಆಂದೋಲನದ ಜನಕನ ಕೈಬರಹದಲ್ಲಿದ್ದ ಅದನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಇದು ಪ್ರಾಯಶಃ ಅಲಿ ಸಹೋದರರನ್ನು ಮುಜುಗರದ ಸನ್ನಿವೇಶಕ್ಕೆ ಸಿಲುಕಿಸುವ ಮೂಲಕ ಗಾಂಧಿ ಮಾಡಿದ ನಾಲ್ಕನೇ ಹಿಮಾಲಯದಂತಹ ಪ್ರಮಾದ."
ಅಲಿ ಸಹೋದರರೇನೂ ಸಾಚಾಗಳಲ್ಲ. ಆದರೆ ಲೇಖನದ ಉದ್ದೇಶ ಅವರ ಕುರಿತಾದ ವಿಮರ್ಶೆಯಲ್ಲ. ಇದು ಮಹಾತ್ಮನ ನಡೆಯ ಬಗ್ಗೆ. ಭಾರತದಲ್ಲಿ ಶಾಂತಿ, ಅಹಿಂಸೆ ಎಂದು ಬಡಬಡಿಸುವ ಮಹಾತ್ಮ ಕಾಬೂಲಿನ ಸುಲ್ತಾನನಿಗೆ ಬ್ರಿಟಿಷರೊಂದಿಗೆ ಶಾಂತಿಯಿಂದಿರಬೇಡ ಎನ್ನುತ್ತಿದ್ದಾರೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ