ಪುಟಗಳು

ಬುಧವಾರ, ಅಕ್ಟೋಬರ್ 19, 2016

ಪುಟ್ಟ ಜೀವಂತ ಭಾರತ ಸಂಕಟದಲ್ಲಿದೆ

ಪುಟ್ಟ ಜೀವಂತ ಭಾರತ ಸಂಕಟದಲ್ಲಿದೆ


                     ಥೈಲ್ಯಾಂಡಿನ ಅರಸ 9ನೇ ರಾಮ ನಿಧನವಾಗುವುದರೊಂದಿಗೆ ರಾಜನನ್ನು ದೇವರಂತೆ ಪೂಜಿಸುವ ಥೈಲ್ಯಾಂಡ್ ದುಃಖ ಸಾಗರದಲ್ಲಿ ಮುಳುಗಿದೆ. ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷ ವಯಸ್ಸಿನ ಭೂಮಿಬಲರ ಕಿಡ್ನಿ ವೈಫಲ್ಯಗೊಂಡಿತ್ತು. ಕೆಲ ಸಮಯಗಳ ಹಿಂದೆಯೇ ವೈದ್ಯರು ಯಾವುದೇ ಆಡಳಿತಾತ್ಮಕ ಚಟುವಟಿಕೆ ನಡೆಸದಂತೆ ಅವರಿಗೆ ಸಲಹೆ ನೀಡಿದ್ದರು. ಭೂಮಿಬಲ ಅತುಲ್ಯತೇಜ 234 ವರ್ಷಗಳ ಇತಿಹಾಸವಿರುವ ಚಕ್ರಿ ರಾಜವಂಶದ ಒಂಭತ್ತನೆಯ ರಾಮ. ಭೂಮಿಬಲರ ದೊಡ್ಡಪ್ಪ ಪ್ರಜಾಧೀಪಕ್ ಅರಸು ಪೀಠದಲ್ಲಿದ್ದಾಗ, 1932ರಲ್ಲಿ ನಡೆದ ದಂಗೆ ರಾಜವಂಶದ ಅಧಿಕಾರವನ್ನು ಸೀಮಿತ ರೂಪಕ್ಕಿಳಿಸಿತು. 1935ರಲ್ಲಿ ಪ್ರಜಾಧೀಪಕ್ ಇಹಲೋಕ ತ್ಯಜಿಸಿದಾಗ ಭೂಮಿಬಲರ ಅಣ್ಣ ಒಂಬತ್ತು ವರ್ಷದ ಆನಂದ ಮಹಿದಳರನ್ನು ಸಿಂಹಾಸನದಲ್ಲಿ ಕೂರಿಸಲಾಯಿತು. 1946ರ ಜೂನ್ ನಲ್ಲಿ ಅಜ್ಞಾತ ಗುಂಡಿನ ದಾಳಿಗೆ ಆನಂದ ಬಲಿಯಾದರು. ಎಲ್ಲರ ರಾಜಕೀಯಕ್ಕೆ ತನ್ನಣ್ಣ ಬಲಿಯಾದರೆಂದು ಭೂಮಿಬಲರೇ ಒಮ್ಮೆ ಬಿಬಿಸಿಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದರು. ಹೀಗೆ ರಾಜಪಟ್ಟ ಭೂಮಿಬಲರಿಗೆ ಬಯಸದೇ ಬಂದ ಭಾಗ್ಯ.


                     1946ರಲ್ಲಿ ಅಧಿಕಾರಕ್ಕೆ ಬಂದ ಭೂಮಿಬಲ ಸ್ವಿಜರ್ ಲ್ಯಾಂಡಿನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದರು. 1948ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಅವರು ತಮ್ಮ ಬಲಗಣ್ಣದೃಷ್ಟಿಯನ್ನು ಕಳೆದುಕೊಂಡಿದ್ದರು. ಆದರೆ ಜನ್ಮತಃ ರಾಜನಾಗುವ ಅವಕಾಶವಿಲ್ಲದೆ, ಅನಿವಾರ್ಯವಾಗಿ ರಾಜನಾದ ಕಾರಣ ಜನರ ಪ್ರೀತಿಯನ್ನು ತನ್ನ ನಡೆ-ನುಡಿಗಳಿಂದಲೇ ಗಳಿಸಬೇಕಾಯಿತು ಭೂಮಿಬಲ. ತನ್ನ ಪರಿಶ್ರಮ, ಜಾಣ್ಮೆಗಳಿಂದ ದೇಶವನ್ನು ನಿಭಾಯಿಸಿದ ಆತ ರಾಜಮನೆತನದ ಘನತೆಯನ್ನು, ದೇಶದ ಸ್ವಾತಂತ್ರ್ಯ- ಸುವ್ಯವಸ್ಥೆ - ಸಾರ್ವಭೌಮತ್ವವನ್ನು ಕಾಪಾಡಿದ್ದು ಮಾತ್ರವಲ್ಲ, ಥಾಯ್ ಲ್ಯಾಂಡಿನ ಸಂಪ್ರದಾಯ-ಸಂಸ್ಕೃತಿಗಳಿಗೆ ಅಪಚಾರವಾಗದಂತೆ ಅವುಗಳನ್ನು ಉಳಿಸಿ ಬೆಳೆಸಿದರು. ಬಡವರ ಪಾಲಿಗೆ ಸಂಜೀವಿನಿಯಾಗಿ, ಆಧುನಿಕ ಬುದ್ಧನಾಗಿ ಜನರ ಪ್ರೀತಿ ಗೌರವಗಳನ್ನು ಗಳಿಸಿದರು ಎನ್ನುವುದಕ್ಕೆ ಮನೆ, ವಾಹನ, ಶಾಲಾ-ಕಛೇರಿಗಳಲ್ಲಿ ತೂಗಾಡುವ ಅವರ ಚಿತ್ರಪಠಗಳೇ ಸಾಕ್ಷಿ.


                  ಒಂಭತ್ತನೇ ರಾಮ ಎಂದಾಗ ನೆನಪಾಯಿತು ನೋಡಿ, ಅಲ್ಲೊಂದು ಪುಟ್ಟ ಭಾರತವೇ ಇದೆ! ಥಾಯ್ ಲ್ಯಾಂಡಿನ ರಾಜಧಾನಿ ಬ್ಯಾಂಕಾಕ್ ದೇವಾಲಯಗಳ ನಗರ. ವೇಶಭೂಷಣಗಳಲ್ಲಿ ಅಮೇರಿಕಾದ ಪ್ರಭಾವವಿದ್ದರೂ ತನ್ನ ಸಂಸ್ಕೃತಿ ಹಾಗೂ ಭಾಷೆಯನ್ನು ಬಿಡದ ಮಹಾನತೆ ಇಲ್ಲಿನದ್ದು. ಬ್ಯಾಂಕಾಕಿನ ವಿಶೇಷತೆಯೆಂದರೆ ಯಾವುದೇ ಭವ್ಯ ಕಟ್ಟಡವಾಗಲೀ ಅಲ್ಲಿನ ದೇವಾಲಯಗಳ ಗೋಪುರಗಳಿಗಿಂತ ಕಡಿಮೆ ಎತ್ತರದಲ್ಲೇ ಇರುತ್ತವೆ, ಇರಬೇಕು. ಬ್ಯಾಂಕಾಕಿನಲ್ಲಿ ಸುಮಾರು ಎಂಟುನೂರು ದೇವಾಲಯಗಳಿವೆ. ಪ್ರತಿಯೊಂದೂ ಶಿಲ್ಪಶಾಸ್ತ್ರಕ್ಕನುಗುಣವಾಗಿ ಅತ್ಯುಚ್ಚ ಶೈಲಿಯಲ್ಲಿ ನಿರ್ಮಿಸಿದ ಕಲಾಕೃತಿಗಳು. ಆದರೆ ಜನರು ಪಾಶ್ಚಿಮಾತ್ಯ ಉಡುಪು ಧರಿಸಿ ಪೂಜೆ ಮಾಡುವಂತಿಲ್ಲ. ದೇವಾಲಯ ಪ್ರವೇಶಿಸುವಂತಿಲ್ಲ. ದೇವತಾರ್ಚನೆಗೆಂದು ನಿಯಮಿತವಾದ ಉಡುಪುಗಳನ್ನೇ ಧರಿಸಬೇಕು. ಥಾಯ್ ಭಾಷೆಗೂ ಸಂಸ್ಕೃತಕ್ಕೂ ಬಹು ಸಾಮೀಪ್ಯ ಇರುವಂತೆ ಭಾಸವಾಗುತ್ತದೆ. ಅಲ್ಲದೆ ಥಾಯ್ ಜನರಿಗೆ ಸಂಸ್ಕೃತ ಬಹು ಚೆನ್ನಾಗಿ ಅರ್ಥವಾಗುತ್ತದೆ. ಉದಾಹರಣೆಗೆ 'ಸುದರ್ಶನ'ಕ್ಕೆ ಥಾಯ್ ಭಾಷೆಯಲ್ಲಿ ಸುದತ್ ಎನ್ನುವ ಉಚ್ಛಾರ. ಬರೆಯುವುದು ಸುದರ್ಶನವೆಂದೇ. ಹಾಗೆಯೇ ಪಾರತ್ ಎನ್ನುವ ಥಾಯ್ ಪದ ಪಾರದ ಎನ್ನುವ ಸಂಸ್ಕೃತ ಪದದ ತದ್ಭವ ರೂಪ. ಪಾರದ ಅಂದರೆ ಪಾದರಸ. ಫರ್ಸ್ಟ ಎನ್ನುವುದು 'ಪರಿಷತ್'ನ ಅಪಭೃಂಶಗೊಂಡ ರೂಪ.

                   1911ರ ತನಕ ಬ್ಯಾಂಕಾಕಿನ ಜನ ನಗರದ ಉದ್ದಗಲಕ್ಕೂ ಹರಡಿರುವ ಕಾಲುವೆಗಳ ನೀರನ್ನೇ ಬಳಸುತ್ತಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಬೇರೆ ಇರಲಿಲ್ಲ. ಅಲ್ಲಿ ಆಗ ದೊರೆಯಾಗಿದ್ದ ಆರನೆಯ ರಾಮ ಆಧುನಿಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿದ. ಅದಕ್ಕೇನು ಹೆಸರಿಡಬೇಕು ಎನ್ನುವುದರ ಬಗೆಗೆ ಚರ್ಚೆ ನಡೆಯಿತು. ಆಗ ವಜ್ರಾಯನನೆಂಬ ರಾಜಕುಮಾರ ವೇದ, ಸ್ಮೃತಿಗಳಲ್ಲಿ ಉಲ್ಲೇಖಿಸಿರುವ "ಪ್ರಪಾ" ಎನ್ನುವ ಹೆಸರು ಸೂಚಿಸಿದ. ಅದೇ ಹೆಸರಿಡಲಾಯಿತು. ಪ್ರಪಾ ಎಂದರೆ ಹಿಂದಿನ ಕಾಲದಲ್ಲಿ ಸಾರ್ವಜನಿಕವಾಗಿ ಇಡುತ್ತಿದ್ದ ನೀರಿನ ತೊಟ್ಟಿ. ತಂತಿ ವ್ಯವಸ್ಥೆಗೆ ದೂರಲೇಖ, ಮೋಟರ್ ಕಾರಿಗೆ ರಥಯಾನ್, ತುಟಿಗೆ ಬಳಿಯುವ ರಂಗಿ(ಲಿಪ್ ಸ್ಟಿಕ್)ಗೆ ಓಷ್ಠರಾಗ, ರಾಯಭಾರಿ-ರಾಜದೂತ್, ನಿರ್ಮಾಣ ಹೇಮ-ನಿಮ್ಮಿ ಹೇಮ ಹೀಗೆ ಥಾಯ್ ಭಾಷೆ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಪ್ರತಿಧ್ವನಿಸುತ್ತದೆಯಲ್ಲದೆ ಅದು ಸಂಸ್ಕೃತದಿಂದ ಉದ್ಭವಗೊಂಡಿರುವ ಸೂಕ್ಷ್ಮವನ್ನು ತಿಳಿಸುತ್ತದೆ. ಇದಕ್ಕೆ ಕಾರಣವೂ ಇದೆ. ಥಾಯ್ ಲೆಂಡಿನ ಉನ್ನತ ಶಿಕ್ಷಣದ ಮಾಧ್ಯಮ ಭಾಷೆ ಥಾಯ್. ಅಲ್ಲಿನ ಜನ ವೇಷ-ಭೂಷಣಗಳಲ್ಲಿ ಅಮೇರಿಕನ್ನರನ್ನು ಅನುಕರಿಸಿದರೂ, ರಾಜಕೀಯವಾಗಿ ಅಮೆರಿಕಾದ ಪ್ರಭಾವದೊಳಗಿದ್ದರೂ ತಮ್ಮ ಭಾಷೆ ಬಿಟ್ಟುಕೊಟ್ಟಿಲ್ಲ. ಹಾಗಾಗಿ ತಮ್ಮ ಸಂಸ್ಕೃತಿ ನಾಗರೀಕತೆಗಳನ್ನು ಉಳಿಸಿಕೊಂಡಿದ್ದಾರೆ. ಥಾಯ್ ಭಾಷೆಯ ಶೇಕಡಾ ಎಂಬತ್ತರಷ್ಟು ಪದಗಳು ಸಂಸ್ಕೃತದಿಂದ ಬಂದಿವೆ. ವಿಜ್ಞಾನ, ತಂತ್ರಜ್ಞಾನ, ಆಡಳಿತ ಹೀಗೆ ವಿಶೇಷ ರಂಗಗಳಲ್ಲಿ ಅವಶ್ಯಕವಾದರೆ ಅದಕ್ಕೆ ಆಕರವು ಸಂಸ್ಕೃತವೇ.

                   ಥಾಯ್ ಲೆಂಡಿನ ಪ್ರಮುಖ ದೇವಾಲಯಗಳಲ್ಲೊಂದು ವಾಟ ಅರುಣ ದೇವಾಲಯ. ಅಲ್ಲಿಯ ಸೂರ್ಯೋದಯವಂತೂ ಆವರ್ಣನೀಯ. ಶಿವನನ್ನು ಕಾಣಲು ಭಾಸ್ಕರನೇ ಧರೆಗಿಳಿದು ಬಂದಂತೆ. ಬಾಲ ಸೂರ್ಯ ದೇವಾಲಯವನ್ನು ಬೆಳಗುವ ಆ ದೃಶ್ಯ ಪ್ರಕೃತಿಯೂ ಪರಮಾತ್ಮನೂ ಸಹಯೋಗದಲ್ಲಿರುವಂತೆ ಅಸದೃಶ, ಅಸದಳ. ಬ್ಯಾಂಕಾಕಿನ ಬೃಹತ್ ದೇವಾಲಯಗಳೆಲ್ಲಾ ಚಕ್ರಿ ಮನೆತನದವರು ನಿರ್ಮಿಸಿರುವಂತಹ ದೇವಾಲಯಗಳು. ಅವುಗಳಲ್ಲೊಂದು ರಬ್ಬಿಂಗ್ ದೇವಾಲಯ. ಈ ದೇವಾಲಯದಲ್ಲಿ ರಾಮಾಯಣದ ಇಡೀ ಘಟನೆ ಚಿತ್ರಿತವಾಗಿದೆ. ನಾಲ್ಕುನೂರಕ್ಕೂ ಹೆಚ್ಚು ಶಿಲಾಫಲಕಗಳ ಮೇಲೆ ಇವು ಚಿತ್ರಿತವಾಗಿವೆ. ಹೆಚ್ಚುಕಡಿಮೆ ಥಾಯ್ ಜನರೆಲ್ಲರೂ ಚಿತ್ರಕಾರರೇ. ಯಾರೇ ಆದರೂ ಈ ದೇವಾಲಯದಲ್ಲಿನ ಚಿತ್ರಗಳನ್ನು ಪ್ರತಿ ಮಾಡಬಹುದು. ಈ ದೇವಾಲಯ ಪ್ರಪಂಚದ ಎಲ್ಲಾ ಭಾಗಗಳಿಗೂ ರಾಮಾಯಣದ ಚಿತ್ರಗಳನ್ನೊದಗಿಸುತ್ತದೆ. ರಾಮಾಯಣದ ಕರ್ಮಭೂಮಿ ಭಾರತದಲ್ಲೇ ಇಂತಹ ಸೌಲಭ್ಯವಿಲ್ಲ. ಚಕ್ರಿ ಮನೆತನದ ಮೊದಲ ರಾಜನ ಅಧಿಕೃತ ನಾಮಧೇಯ ರಾಮ. ತಮ್ಮ ಪೂರ್ವಿಕರ ರಾಜಧಾನಿಯಾಗಿದ್ದ ಅಯೋಧ್ಯಾ ನಗರವನ್ನು ಬಿಟ್ಟು ಬ್ಯಾಂಕಾಕನ್ನು ರಾಜಧಾನಿಯಾಗಿ ಮಾಡಿದ ಮೊದಲನೇ ರಾಮ ಅಲ್ಲಿ ನೂರಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ. ರಾಮಾಯಣವನ್ನು ಸಂಸ್ಕೃತ ಛಂದಸ್ಸಿನಲ್ಲಿ ರಚಿಸಿದ. ಆತ ರಚಿಸಿದ ರಾಮಾಯಣವೇ ಅಲ್ಲಿನ ರಾಮಾಯಣ ರೂಪಕಕ್ಕೆ ಆಧಾರ. ಪ್ರತಿ ಹೋಟಲಿನಲ್ಲೂ ರಾಮಾಯಣದ ರೂಪಕಗಳು ಕಂಡುಬರುತ್ತವೆ. ಪ್ರತಿದಿನ ರಾಮಾಯಣಕ್ಕೆ ಸಂಬಂಧಿಸಿದ ನಾಟಕಗಳು, ರೂಪಕಗಳು, ನೃತ್ಯ-ಗೀತ ರೂಪಕಗಳು ಪರಂಪಾರಗತ ಶೈಲಿ, ವಿನ್ಯಾಸ, ವರ್ಣ, ವೇಶಭೂಷಣಗಳಲ್ಲಿ ಪ್ರದರ್ಶಿಸಲ್ಪಡುತ್ತವೆ. ವಿವಿಧ ಪಾತ್ರಗಳ ಮುಕುಟಗಳಿಂದಲೇ ಆ ಪಾತ್ರವನ್ನು ಗುರುತಿಸಬಹುದು. ಅಂತಹ ಪರಿಷ್ಕೃತ ಕಲಾಕುಸುಮಗಳು ಅಲ್ಲಿನ ರಾಮಾಯಣ ರೂಪಕಗಳು. ಅಲ್ಲಿನ ಪತ್ರಿಕೆಗಳು ರಾಮಾಯಣ ಪಾತ್ರ-ಪ್ರಸಂಗಗಳ ಬಗ್ಗೆ ವಿಶೇಷ ಲೇಖನಗಳನ್ನೇ ಪ್ರಕಟಿಸುತ್ತವೆ. ಅಲ್ಲಿನ ಲಲಿತಕಲಾ ವಿಭಾಗವನ್ನು ಶಿಲ್ಪಾಧಿಕರಣ ಎನ್ನುತ್ತಾರೆ. ಅಲ್ಲಿ ಇಂದ್ರ, ಬ್ರಹ್ಮ ಮುಂತಾದ ದೇವತೆಗಳ ಪ್ರತಿಮೆಗಳೂ ನಿರ್ಮಾಣವಾಗುತ್ತವೆ. ಥಾಯ್ ಜನರ ಪ್ರತಿಮನೆಯಲ್ಲೂ ರಾಮಾಯಣಕ್ಕೆ ಸಂಬಂಧಿಸಿದ ಕಲಾಕೃತಿಗಳು ಇರುತ್ತವೆ. ಒಟ್ಟಾರೆ ಥಾಯ್ ಸಾಹಿತ್ಯ ಭಾರತದ ಪರಂಪರೆಯನ್ನು ಆದರ್ಶವಾಗಿ ಪರಿಭಾವಿಸುತ್ತದೆಯೇ ಹೊರತು ಪಾಶ್ಚಿಮಾತ್ಯ ಪರಂಪರೆಯನ್ನಲ್ಲ. ಥಾಯ್ ಲಿಪಿ ಪಲ್ಲವರ ಕಾಲದ ಭಾರತೀಯ ಲಿಪಿಯಿಂದ ರೂಪಿತವಾದ ಕಾಂಬೋಡಿಯಾ ಲಿಪಿಯನ್ನು ಬಹುಮಟ್ಟಿಗೆ ಅನುಸರಿಸಿದೆ.

                    ಥಾಯ್ಲೆಂಡಿನ ಕ್ರೀಡೆಗಳ ಅಭಿಮಾನ ದೇವತೆ ಇಂದ್ರ. ಬ್ಯಾಂಕಾಕಿನ ವಿಶಾಲ, ಸುಂದರ ಕ್ರೀಡಾಂಗಣದ ಮಹಾದ್ವಾರದಲ್ಲಿ ಐರಾವತವನ್ನೇರಿ ಹೊರಟಿರುವ ಧೀರ ಇಂದ್ರನ ಬೃಹತ್ ವಿಗ್ರಹವೊಂದಿದೆ. ಅಲ್ಲಿನ "ದೇವ ರೂಪಾವಳಿ" ಎಂಬ ಹಸ್ತಪ್ರತಿ ಶಿಲ್ಪಶಾಸ್ತ್ರ ಗ್ರಂಥದಲ್ಲಿ 300ಕ್ಕೂ ಹೆಚ್ಚು ದೇವ ದೇವಿಯರ ಚಿತ್ರಗಳಿವೆ. ಅಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ರಾಮ-ಶಿವ-ವಿಷ್ಣು-ಬ್ರಹ್ಮ ಹಾಗೂ ಅನೇಕ ತಾಂತ್ರಿಕ ವಿಗ್ರಹಗಳು ಸಾಮಾನ್ಯ. ಅಲ್ಲಿನ ಪ್ರತಿ ಹೋಟಲಿಗೂ ಒಂದೊಂದು ಅಭಿಮಾನ ದೇವತೆ ಇರುತ್ತದೆ. ಆ ದೇವತೆಗೆ ಸಂಬಂಧಿಸಿದ ಛಾಯಾ ನಾಟಕವನ್ನು ಪ್ರತಿದಿವಸ ಆಡಿಸುತ್ತಾರೆ. ಪ್ರತಿಯೊಂದು ದೇವಾಲಯದಲ್ಲಿ ಒಂದು ಋಷಿ ಸ್ಥಂಭವಿರುತ್ತದೆ. ಸ್ತಂಭದ ಕೆಳಗೆ ಆಯಾ ಋಷಿಯ ಕುಳಿತಿರುವ ಚಿತ್ರವಿರುತ್ತದೆ. ಪುರಾತನ ಧನುರ್ವೇದದ ಅನೇಕ ಹಸ್ತಪ್ರತಿಗಳಿವೆ. ನಮ್ಮಲ್ಲಿನ ತುಲಾಭಾರ ರೀತಿಯ ಝೂಲಾ ಎಂಬ ಸಮಾರಂಭ ಅಲ್ಲಿನ ದೇವಾಲಯಗಳಲ್ಲಿ ನಡೆಯುತ್ತದೆ. ಬ್ರಹ್ಮ, ವಿಷ್ಣು, ಮಹೇಶ್ವರರಲ್ಲದೆ ಹನುಮಂತ, ಪರಶುರಾಮ, ಗಣೇಶರನ್ನೂ ಆರಾಧಿಸುತ್ತಾರೆ. ನಮ್ಮ ಪುರಾಣದ ಮಣಿಮೇಖಲೆ ಅಲ್ಲಿಯೂ ಪ್ರಸಿದ್ಧಳು. ಥಾಯ್ ಲ್ಯಾಂಡಿನ ಇತಿಹಾಸ ಒಂಭೈನೂರು ಸಂಪುಟಗಳಷ್ಟಿದೆ! ಭಗವದ್ಗೀತೆಯನ್ನೂ ಥಾಯ್ ಭಾಷೆಗೆ ಅನುವಾದಿಸಲಾಗಿದೆ. ಪ್ರತಿಯೊಬ್ಬ ಕವಿ, ಪಂಡಿತ, ಅರಸರ ಐತಿಹ್ಯ ಅಲ್ಲಿ ದೊರೆಯುತ್ತದೆ. ಅಲ್ಲಿನ ರಾಷ್ಟ್ರೀಯ ಗ್ರಂಥ ಭಂಡಾರದಲ್ಲಿ ಎಲ್ಲಾ ಹಸ್ತಪ್ರತಿಗಳನ್ನು ಛಾಯಾಗ್ರಹಣ ಮಾಡಿ ಸಂಗ್ರಹಿಸಿಟ್ಟಿದ್ದಾರೆ.

                  ಪ್ರಪಂಚದಲ್ಲಿ ವಿಷ್ಣುಶಯನ, ಉತ್ಥಾನಗಳನ್ನು ಸ್ವತಃ ರಾಜನೇ ಅಭಿನಯಿಸುವ ದೇಶವೆಂದರೆ ಥಾಯ್ಲಂಡ್ ಒಂದೇ. ಅಲ್ಲಿ ರಾಜನು ಭೂಮಿಯ ಮೇಲೆ ವಿಷ್ಣುವಿನ ಪ್ರತಿನಿಧಿ ಸ್ವರೂಪ. ವರ್ಷದಲ್ಲಿ ನಿಯಮಿತ ದಿನವೊಂದರಂದು ಆತ ಶಯನ ಮಾಡುತ್ತಾನೆ. ಆರು ತಿಂಗಳ ನಂತರ ದೇವೋತ್ಥಾನ, ರಾಜನೇ ಭಾಗವಹಿಸುವ ತೆಪ್ಪೋತ್ಸವ ನಡೆಯುತ್ತದೆ ಕೂಡಾ. ಶಯನ ಉತ್ಥಾನ ಎರಡಕ್ಕೂ ವಿಶೇಷ ಸಂಗೀತವಿದೆ. ಥಾಯ್ಲೆಂಡಿನಲ್ಲಿ ಪಟ್ಟಾಭಿಷೇಕ ಮಹೋತ್ಸವ ವೈದಿಕ ಕ್ರಮದಲ್ಲೇ ಜರಗುತ್ತದೆ. ತೀರಿಕೊಂಡಾಗಲೂ "ಅಂತ್ಯೇಷ್ಟಿ" ನಡೆಸಿ, ಚಿತಾಭಸ್ಮವನ್ನು ತೀರ್ಥಗಳಲ್ಲಿ ಬಿಡುತ್ತಾರೆ.  ಭಿಕ್ಷಾಟನೆ ಅಲ್ಲಿ ಧರ್ಮಕಾರ್ಯ. ಪ್ರತಿಯೊಬ್ಬನು ತನ್ನ ಜೀವನದ ಸ್ವಲ್ಪ ಕಾಲವನ್ನಾದರೂ ದೇವಾಲಯದಲ್ಲಿ ಕಳೆದು ಭಿಕ್ಷಾಟನೆ ಮಾಡಲೇಬೇಕು. ರಾಜನೂ ಇದಕ್ಕೆ ಹೊರತಲ್ಲ. ಭಿಕ್ಷೆ ನೀಡಲೆಂದೇ ವಿಶೇಷ ಪಾತ್ರೆಗಳಿರುತ್ತವೆ. ಒಟ್ಟಾರೆ ಭಾರತೀಯ ಧರ್ಮ-ದೇವತೆಗಳು, ಶಿಲ್ಪಶಾಸ್ತ್ರ-ಧನುರ್ವೇದಾದಿಗಳು, ಭಾವ-ಭಾಷೆಗಳು ಥಾಯ್ಲೆಂಡ್ ಜನಜೀವನದ ನೆಲೆಗಟ್ಟು. ನಮ್ಮ ಪುರಾತನ ರೀತಿನೀತಿಗಳ ಪರಿಶುದ್ಧ ರೂಪ ಅಲ್ಲಿ ಸಂರಕ್ಷಿಸಲ್ಪಟ್ಟಿದೆ. ಅಲ್ಲೊಂದು ಜೀವಂತ ಭಾರತವೇ ಇದೆ.

               ಥಾಯ್ಗಳು ರಾಜನನ್ನು ದೇಶದ ಏಕತೆಯ ಸಂಕೇತವಾಗಿ, ಪ್ರೀತಿ, ಗೌರವಾದರಗಳಿಂದ ನೋಡುತ್ತಾರೆ. ಜನ ದೇವರಂತೆ ಪೂಜಿಸುವ ಅಂತಹ ಮಹಾನ್ ದೇಶದ ರಾಜ ತೀರಿಕೊಂಡಾಗ ಸಹಜವಾದ ಶೂನ್ಯಭಾವ ಆವರಿಸಿದೆ. ರಾಜ ಮನೆತನದ ನಿಯಮದಂತೆ ರಾಜಪೀಠ ವಜ್ರಲಂಗ್ ಕರ್ಣರಿಗೇ ಸಿಗಬೇಕು. ರಾಜಕೀಯ ಪರಿಣತರ ಪ್ರಕಾರ ವಜ್ರಲಂಗ್ ಕರ್ಣ ಅರಸರಾದರೂ ಅವರ ಸ್ಥಾನ ಕಲ್ಲುಶಿಲ್ಪದಂತೆ! ಥಾಯ್ ಲ್ಯಾಂಡಿನಲ್ಲಿ ರಾಜ ಬದುಕಿರುವಾಗ ಆತನ ಉತ್ತರಾಧಿಕಾರಿಯ ಬಗ್ಗೆಯಾಗಲೀ ಅಥವಾ ಆತನ ಆರೋಗ್ಯದ ಬಗ್ಗೆ ಚರ್ಚೆ ನಡೆಸುವುದು ಕಾನೂನು ರೀತ್ಯಾ ಅಪರಾಧ(lese majeste). ತನ್ನ ಮಗನನ್ನು ಉತ್ತರಾಧಿಕಾರಿ ಎಂದು ಭೂಮಿಬಲ ಹಿಂದೊಮ್ಮೆ ಘೋಷಿಸಿದ್ದರೂ ಜನತೆಯ ಒಲವು ಅವರ ಕಡೆ ಅಷ್ಟಾಗಿ ಇಲ್ಲದಿರುವುದರಿಂದ ಉತ್ತರಾಧಿಕಾರಿ ಯಾರಾಗುತ್ತಾರೆಂಬ ವಿಚಾರದಲ್ಲಿ ಗೊಂದಲಗಳೇ ತುಂಬಿವೆ. ಈ ವಿವಾದ ಸೈನ್ಯ ಹಾಗೂ ಯುವರಾಜ ವಜ್ರಲಂಗ್ ಕರ್ಣ, ಭೂಮಿಬಲರ ಮಗಳು ಮಹಾಚಕ್ರಿ ಸಿರಿಂಧರ್ಣ್ ಮಧ್ಯೆ ಸಮರಕ್ಕೆ ಕಾರಣವಾಗುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ.

               ಅರಸ ಭೂಮಿಬಲರ ನಿರ್ದೇಶನದಂತೆ ಕಳೆದ ಆಗಸ್ಟಿನಲ್ಲಿ ಹೊಸ ಸಂವಿಧಾನವನ್ನು ಸಾರ್ವಜನಿಕ ಅಭಿಪ್ರಾಯದ ಮೂಲಕ ಜಾರಿಗೆ ತರಲಾಗಿತ್ತು. ಸೇನಾ ಮುಖ್ಯಸ್ಥ, ಪ್ರಧಾನಿ ಪ್ರಯೂಧ್ ಖನೋಖಾ ನೇತೃತ್ವದ ಸೇನಾ ಸರಕಾರ ಸಂವಿಧಾನವನ್ನು ಮತ್ತೆ ಸೈನ್ಯಕ್ಕೆ ಸಹಾಯಕವಾಗುವಂತೆ, ಮುಂದೆ ಮಾರ್ಪಡಿಸಲು ಅಸಾಧ್ಯವಾಗುವಂತೆ ಬದಲಾಯಿಸಿತು. ಸಾರ್ವಜನಿಕ ಅಭಿಪ್ರಾಯ ನಾಗರಿಕ ಸರ್ಕಾರದ ಕಡೆಗಿದ್ದರೂ ಪ್ರಧಾನಿ ಹಾಗೂ ಸಂಸದರನ್ನು ಚುನಾಯಿಸದೇ ಸೈನ್ಯವೇ ನೇಮಕ ಮಾಡುವಂತೆ ಸಂವಿಧಾನವನ್ನು ಬದಲಾಯಿಸಲಾಯಿತು. ಹೀಗೆ ಜನತೆ ಚುನಾಯಿಸುವ, ಸರಕಾರದ ನೀತಿಯನ್ನು ವಿರೋಧಿಸುವ ಹಕ್ಕನ್ನು ಕಳೆದುಕೊಂಡಿತು. ತನ್ನ ಮೇಲಿನ ಭೃಷ್ಟಾಚಾರದ ಆರೋಪವನ್ನು ಮುಚ್ಚಿಹಾಕಲು 2014ರಲ್ಲಿ ಥೈಲ್ಯಾಂಡಿನ ಬೀದಿಗಳಲ್ಲಿ ದಂಗೆ ಎಬ್ಬಿಸಿದ್ದರು ಖನೋಖ. ಮಧ್ಯಂತರವಾಗಿ ಎರಡು ವರ್ಷದ ಅವಧಿಗೆಂದು ನೇಮಿಸಲ್ಪಟ್ಟ ಖನೋಖಾ ಸರಕಾರ 220 ಸಂಸದರನ್ನು ಹೊಂದಿದ್ದು ಭೃಷ್ಟಾಚಾರದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದೆ. ಶಾಶ್ವತ ಶಾಸಕಾಂಗವನ್ನು ಹೊಂದಿಲ್ಲದಿದ್ದರೂ ಚುನಾವಣೆ ನಡೆಸುವ ಯಾವುದೇ ಇರಾದೆಯೂ ಸರಕಾರಕ್ಕೆ ಇದ್ದಂತಿಲ್ಲ.

                2011ರ ಬಳಿಕ ಥಾಯ್ ಲ್ಯಾಂಡಿನಲ್ಲಿ ಚುನಾವಣೆಯೇ ನಡೆದಿಲ್ಲ. ಉದ್ಯಮಪತಿಯಾಗಿದ್ದು ರಾಜಕೀಯ ಸೇರಿ ಪ್ರಧಾನಿಯಾಗಿದ್ದ ಟೆಲಿಕಾಮ್ ಕ್ಷೇತ್ರದ ದಿಗ್ಗಜ ಬಿಲಿಯನೇರ್ ದಕ್ಷಿಣ್ ಶಿನವಾತ್ರರನ್ನು 2006ರಲ್ಲಿ ನಡೆದ ದಂಗೆಯಲ್ಲಿ ಕೆಳಕ್ಕಿಳಿಸಿದ ನಂತರ ದೇಶ ಇಬ್ಬಾಗವಾದಂತಾಗಿತ್ತು. 2014ರಲ್ಲಿ ದಕ್ಷಿಣ್ ಅವರ ತಂಗಿ ಇಂಗ್ಲುಕ್ ಶಿನವಾತ್ರರ ಸರಕಾರವನ್ನು ಪ್ರಯೂಧ್ ನೇತೃತ್ವದ ಸೇನೆ ಕಿತ್ತೆಸೆದಿತ್ತು. ಥಾಯ್ ಲ್ಯಾಂಡಿನ ಬಡ ಹಾಗೂ ಮಧ್ಯಮವರ್ಗ ಈಗಲೂ ಶಿನವಾತ್ರ ಪರಿವಾರದ ಪರವಿದ್ದು ಶ್ರೀಮಂತ ವರ್ಗ ಅವರನ್ನು ಸದಾ ವಿರೋಧಿಸುತ್ತದೆ. ಪ್ರಧಾನಿಯನ್ನು ನೇಮಿಸುವುದು ಅರಸುಮನೆತನವಾದರೂ ಶಾಸಕಾಂಗಸಭೆಯಿಂದ ಅದು ಒಪ್ಪಿತವಾಗಬೇಕು. ಕಾಲಕಾಲಕ್ಕೆ ಬದಲಾಗಿರುವ ಥಾಯ್ ಸಂವಿಧಾನದ ಪ್ರಕಾರ ಹೊಸ ರಾಜನನ್ನು ಸಂಸತ್ತು ಘೋಷಿಸಬೇಕು. ಹಾಗೆಯೇ ಥಾಯ್ ಉನ್ನತ ವರ್ಗ ಹೊಸ ರಾಜನಾಗುವವನಿಗೆ ಸರಕಾರದ ಮೇಲೆ ಹತೋಟಿಯಿದೆ ಎಂದು ವಿಶದೀಕರಿಸಬೇಕು. ಇಲ್ಲೇನೋ ದ್ವಂದ್ವ ಇರುವಂತೆ ಮೇಲ್ನೋಟಕ್ಕೇ ಅರಿವಾಗುವುದಿಲ್ಲವೇ? ಸಹಜವಾಗಿಯೇ ಖನೋಖ ತನಗೆ ಸಹಾಯಕರಾಗುವವರನ್ನೇ ಮುಂದಿನ ರಾಮನನ್ನಾಗಿ ನೇಮಿಸಲು ಉತ್ಸುಕರಾಗಿರುತ್ತಾರೆ. ಅಲ್ಲದೆ ಜನಮಾನಸದಲ್ಲಿ ಯುವರಾಜ ವಜ್ರಲಂಗ್ ಕರ್ಣರ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ದುರಾಚಾರಿ, ಲೋಭಿಯಾದ ಆತನಿಗಿಂತ ಯುವರಾಣಿ ಮಹಾಚಕ್ರಿ ಸಿರಿಂಧರ್ಣ್ ಪಟ್ಟಕ್ಕೆ ಸೂಕ್ತ ಎನ್ನುವ ಅಭಿಪ್ರಾಯ ಥಾಯ್ ಗಳಲ್ಲಿದೆ. ಯೂರೋಪಿನಲ್ಲಿ ಐಷಾರಾಮಿ ಹಾಗೂ ಸ್ವೇಚ್ಛಾ ಜೀವನ ಸಾಗಿಸುತ್ತಿದ್ದ ವಜ್ರಲಂಗ್ ಕರ್ಣರ "ಪ್ಲೇ ಬಾಯ್" ಪರಿಯ ಜೀವನವನ್ನು ಕಂಡೇ 2014ರಲ್ಲಿ ಪ್ರತ್ಯೂಧ್ ನೇತೃತ್ವದ ಸೇನೆ ಸರಕಾರದ ಮೇಲೆ ದಂಗೆಯೆದ್ದು ತನ್ನ ಹಿಡಿತವನ್ನು ಬಲಪಡಿಸಿಕೊಂಡಿತ್ತು ಎನ್ನುತ್ತಾರೆ ರಾಜಕೀಯ ಪರಿಣತರು.

              ಭೂಮಿಬಲರ ವಿರೋಧಿಗಳು ಆತ ಮಿಲಿಟರಿ ದಂಗೆಗಳ ಪರವಾಗಿದ್ದರು ಹಾಗೂ ಮಾನವ ಹಕ್ಕುಗಳ ದಮನವಾದಾಗ ಸುಮ್ಮನಿದ್ದರು ಎಂದು ಆರೋಪಿಸುತ್ತಾರೆ. 2003ರಲ್ಲಿ ಭೂಮಿಬಲ್ ಮಾದಕ ದ್ರವ್ಯಗಳ ವಿರುದ್ಧ ಕಾರ್ಯಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಕಾರ್ಯಾಚರಣೆ 2000 ವ್ಯಸನಿ ಯಾ ಬೆಂಬಲಿತರ ಹತ್ಯೆಗೆ ಕಾರಣವಾಯಿತು. ಎಂದಿನಂತೆ ಮಾನವ ಹಕ್ಕು ಹೋರಾಟಗಾರರು ಬೀದಿಗಿಳಿದು ತನಿಖೆ ನಡೆಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿಕೊಂಡರು. ಆದರೆ ಇದರಿಂದ ಜನರ ಪ್ರೀತಿಯೇನೂ ಕಡಿಮೆ ಆಗಲಿಲ್ಲ ಎನ್ನುವುದಕ್ಕೆ ಅವರ ಜನ್ಮದಿನ ಸೋಮವಾರದ ಬಣ್ಣವಾದ(ಥಾಯ್ ಪ್ರಕಾರ) ಹಳದಿ, ಪ್ರಧಾನಿ ಶಿನವಾತ್ರರ ಕೆಂಪಂಗಿಗಳ ವಿರುದ್ಧ ಸಮರದಲ್ಲಿ ಪ್ರಮುಖ ಚಿಹ್ನೆಯಾದದ್ದು, ಅವರ ಪಟ್ಟವೇರಿದ ಅರವತ್ತನೇ ವರ್ಷಾಚರಣೆ, ಎಂಬತ್ತನೇ ಜನ್ಮಾಚರಣೆಯಲ್ಲಿ ಸೇರಿದ ಜನ ಸಮೂಹವೇ ಸಾಕ್ಷಿ. ಈಗಲೂ ಶಿನವಾತ್ರ ಪರಿವಾರದ ವಿರುದ್ಧ ನಡೆದ ಎರಡೂ ದಂಗೆಗೂ ಭೂಮಿಬಲರ ಬೆಂಬಲವಿತ್ತು, ರಾಜಪರಿವಾರದ ಅಧಿಕಾರವನ್ನು ಉಳಿಸಿಕೊಳ್ಳಲು ಅವರೇ ದಂಗೆಯೇಳಲು ಕುಮ್ಮಕ್ಕು ಕೊಟ್ಟರು ಎಂದೇ ಅವರ ವಿರೋಧಿಗಳು ಹೇಳುತ್ತಾರೆ. ಆಸ್ಟ್ರೇಲಿಯನ್ ಫೈನಾನ್ಶಿಯಲ್ ರಿವ್ಯೂನ ಪತ್ರಕಾರ ಆಂಡ್ರ್ಯೂ ಮಾರ್ಷಲ್ " ಹಿಂಬಾಗಿಲಿನಿಂದ ಆಡಳಿತದ ಮೇಲೆ ಪ್ರಭಾವ ಬೀರುವ ಥೈಲ್ಯಾಂಡಿನ ಶ್ರೀಮಂತ ಪರಿವಾರಗಳಿಗೆ ಶಿನವಾತ್ರ ಕಂಟಕಪ್ರಾಯರಾಗಿರುವುದೇ 2014ರಲ್ಲಿ ಅವರ ತಂಗಿಯ ಸರ್ಕಾರವನ್ನು ವಜಾ ಮಾಡಲು ಕಾರಣ" ಎನ್ನುತ್ತಾರೆ.


                  ಮಾರ್ಷಲ್ ಪ್ರಕಾರ ವಜ್ರಲಂಗ್ ಶಿನವಾರ ಪರಿವಾರದ ಸಮೀಪವರ್ತಿಯಾಗಿರುವುದರಿಂದ ಆತ ಅರಸನಾದರೆ ಅಧಿಕಾರ ಸೂತ್ರ ಶಿನವಾರ ಕೈಗೆ ಸಿಕ್ಕು ಥಾಯ್ ಬಡಜನರ ಪಾಲಿಗೆ ಮಂಗಳದಾಯಕವಾಗಬಹುದು. ಆದರೆ ಆಗ ಇನ್ನೊಂದು ವರ್ಗ ಅಸಮಧಾನಗೊಳ್ಳುವುದು ನಿಶ್ಚಿತ. ಥಾಯ್ ಲ್ಯಾಂಡಿನ ಪರಿಸ್ಥಿತಿಯನ್ನು ಎರಡು ರೀತಿಯಲ್ಲಿ ಅವಲೋಕಿಸಬಹುದು. ಒಂದು ಕಡೆ ಸೇನೆ ತನ್ನ ಪ್ರಾಬಲ್ಯವನ್ನು ತೋರಿಸಲು ಬಯಸಿ 2014ರಲ್ಲಿ ಮತ್ತೆ ದಂಗೆಯೆದ್ದಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳು ಅಧಿಕಾರವನ್ನು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸಧ್ಯದ ಮಟ್ಟಿಗೆ ಸೇನೆ ಯಶಸ್ವಿಯಾದಂತೆ ಕಂಡರೂ ಮುಂದಿನ ದಿನಗಳಲ್ಲಿ ದಂಗೆಯಾಗಿ ಅಸ್ಥಿರತೆ ಉಂಟಾಗಲಾರದು ಎನ್ನುವಂತಿಲ್ಲ. ಜನತೆ ನಾಗರಿಕ ಸರಕಾರವನ್ನು ಬಯಸಿದ್ದರೂ ಈ ಎರಡೂ ಪಕ್ಷಗಳಿಂದ ಅದನ್ನು ಸಂಪೂರ್ಣವಾಗಿ ನಿರೀಕ್ಷಿಸುವುದು ಅಸಾಧ್ಯ. ಥಾಯ್ಗಳಿಗೆ ರಾಜನೇ ರಾಮನಾದ ಕಾರಣ ಇಬ್ಬರೂ ರಾಜನನ್ನು ಓಲೈಸುವುದು ಶತಃಸಿದ್ಧ. ಮುಂದೆ ಯಾರು ರಾಜರಾಗುತ್ತಾರೆ ಎನ್ನುವುದು ಈಗ ಯಾರ ಪ್ರಭಾವ ಹೆಚ್ಚಿದೆ ಅನ್ನುವುದನ್ನು ಅವಲಂಬಿಸಿದೆ. ಪ್ರಭಾವಿಗಳು ಮತ್ತೆ ಹಿಂಬಾಗಿಲಿನಿಂದ ಆಡಳಿತ ನಡೆಸುವುದು ನಿಶ್ಚಿತ. ತಮ್ಮ ಮಾತಿಗೆ ಒಪ್ಪದಿದ್ದಾಗ ಅವರು ದಂಗೆಯೇಳಲೂಬಹುದು. ಭೂಮಿಬಲ ತಮ್ಮ ಎಪ್ಪತ್ತು ವರ್ಷಗಳ ಆಳ್ವಿಕೆಯಲ್ಲಿ ಇಂತಹ ಅನೇಕ ದಂಗೆಗಳನ್ನು ಅಡಗಿಸಿದವರು. ಆದರೆ ಆ ಸಾಮರ್ಥ್ಯ ವಿಷಯಲೋಲುಪರಾದ ಅವರ ಮಗನಲ್ಲಿ ಇದ್ದೀತೆಂದು ನಿರೀಕ್ಷಿಸಲಾಗದು. ಹಾಗಾಗಿ ಜನ ಬಯಸಿದ ನಾಗರಿಕ ಸರ್ಕಾರ ಬಿಡಿ ಶಾಂತಿ, ಸುವ್ಯವಸ್ಥೆಗಳೇ ಮರೀಚಿಕೆಯಾಗಬಹುದು.

                     ಅತ್ತ ಅರಸನ ಸಾವಿನಿಂದ ಶೇರು ಮಾರುಕಟ್ಟೆಯೂ ಕುಸಿತ ಕಂಡಿದೆ. ಈಗಾಗಲೇ ಒಂದು ವರ್ಷ ಪರ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಅರಸನ ತಾಯಿ 1995ರಲ್ಲಿ ತೀರಿಕೊಂಡಾಗ ಎಂಟು ತಿಂಗಳ ಕಾಲ ಶವಸಂಸ್ಕಾರ ಮಾಡಿರಲಿಲ್ಲ. ಇದೇ ಪರಿಸ್ಥಿತಿಯಾದರೆ ಥೈಲ್ಯಾಂಡಿನ ಉದ್ಯಮಗಳು ನೆಲಕಚ್ಚಿ, ಮೊದಲೇ ಕೆಳಮುಖವಾಗಿರುವ ಆರ್ಥಿಕ ಪ್ರಗತಿ ಮತ್ತಷ್ಟು ಹದಗೆಡುವುದು ಖಂಡಿತ. ಪ್ರಯೂಧರ "ಯುವರಾಜ ಕೆಲ ದಿನಗಳ ಶೋಕಾಚರಣೆಯ ಬಳಿಕ ಪಟ್ಟವನ್ನಲಂಕರಿಸುವುದಾಗಿ ಹೇಳಿದ್ದಾರೆ" ಎನ್ನುವ ಪತ್ರಿಕಾಗೋಷ್ಠಿಯಲ್ಲಿನ ಮಾತು ಎಷ್ಟು ಸತ್ಯ ಎನ್ನುವುದನ್ನು ದೇವರೇ ಬಲ್ಲ. ಸೇನೆಯ ಸರ್ವಾಧಿಕಾರವನ್ನು ವಿರೋಧಿಸಿದ 120 ಜನರನ್ನು ಈಗಾಗಲೇ ಜೈಲಿಗೆ ತಳ್ಳಲಾಗಿದೆ. ರಾಜಪರಿವಾರದ ವಿರುದ್ಧ ಅವಹೇಳನ ಮಾಡಿದವರಿಗೆ ಹದಿನೈದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಕಾನೂನು ಥಾಯ್ ಸಂವಿಧಾನದಲ್ಲಿದೆ. ಏತನ್ಮಧ್ಯೆ ಏಳು ದಶಕಗಳ ಪರ್ಯಂತ ಭೂಮಿಬಲರ ಶಾಂತಿ, ಸುವ್ಯವಸ್ಥೆಯ ಆಡಳಿತ ಕಂಡಿದ್ದ ಥಾಯ್ ಲ್ಯಾಂಡಿನಲ್ಲಿ ಕಳೆದ ಮಂಗಳವಾರ ಬುಧವಾರಗಳಂದು ಮತಾಂಧ ಮುಸ್ಲಿಮರಿಂದ ಬಾಂಬ್ ದಾಳಿಯೂ ಆಗಿ ನಾಲ್ಕು ಜನ ಮೃತಪಟ್ಟಿದ್ದಾರೆ. ಒಟ್ಟಾರೆ ಪುಟ್ಟ ಜೀವಂತ ಭಾರತ ಸಂಕಟದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ