ಪುಟಗಳು

ಸೋಮವಾರ, ಅಕ್ಟೋಬರ್ 3, 2016

ಯಾರು ಮಹಾತ್ಮ? ಭಾಗ- ೭

ಯಾರು ಮಹಾತ್ಮ?
ಭಾಗ- ೭


                  ಅರವಿಂದರು ತಮ್ಮ "ಇಂಡಿಯಾಸ್ ರೀಬರ್ತ್"ನಲ್ಲಿ "ಭಾರತದ ದೌರ್ಬಲ್ಯಕ್ಕೆ ಮುಖ್ಯ ಕಾರಣ ವಿಷಯನಿಷ್ಠತೆ, ಬಡತನ, ಧರ್ಮ ಅಥವಾ ಆಧ್ಯಾತ್ಮಿಕತೆಯ ಕೊರತೆಯಲ್ಲ, ಯೋಚನಾಶಕ್ತಿಯ ಕೊರತೆ, ಮಾತೃಭೂಮಿಯ ಅರಿವಿನ ಬಗ್ಗೆ ಪಸರಿಸಿದ ಅಜ್ಞಾನ ಕಾರಣ. ವೈಚಾರಿಕ ಅಸಾಮರ್ಥ್ಯ, "ಅಲೋಚನಾ ಭಯ"ವನ್ನು ಎಲ್ಲೆಲ್ಲೂ ಕಾಣುತ್ತಿದ್ದೇನೆ" ಎಂದಿದ್ದಾರೆ. ರಾಜಕೀಯವನ್ನು ಆಧ್ಯಾತ್ಮೀಕರಣಗೊಳಿಸಲು ಬಯಸಿದ ಗಾಂಧಿ ಅಹಿಂಸಾರೀತಿಯ ಸತ್ಯಾಗ್ರಹ ಎಂಬ ತೇಪೆ, ಹರತಾಳ, ಮಂದ ಪ್ರತಿರೋಧದಂತಹ ಟಾಲ್ ಸ್ಟಾಯ್ ವಾದವನ್ನು ಬಳಸಿದ್ದೇ ಎಲ್ಲಾ ಅನರ್ಥಕ್ಕೂ ಕಾರಣವಾಯಿತು. ಭಗವದ್ಗೀತೆಯ ಮೇಲೆ ಅವರು ಮಾಡಿದ್ದ ವ್ಯಾಖ್ಯಾನವನ್ನು ಪಂಡಿತರೊಬ್ಬರು ಗಂಭೀರವಾಗಿ, ಆಧಾರಸಹಿತವಾಗಿ ಖಂಡಿಸಿದಾಗ ಗಾಂಧಿ ಆಶ್ಚರ್ಯಚಕಿತ ಹಾಗೂ ಕ್ರುದ್ಧರಾಗಿ ಅವರ ಟೀಕೆಗೆ ಉತ್ತರವನ್ನೇ ನೀಡಲಿಲ್ಲ(ಇಂಡಿಯಾಸ್ ರೀಬರ್ತ್, ಶ್ರೀ ಅರವಿಂದರು). ಅಂದರೆ ತಾವು ಮಾಡಿದ್ದೇ ಸರಿ ಎನ್ನುವ ಹುಂಬವಾದವಿದಲ್ಲವೇ. ವಿಪರ್ಯಾಸವೆಂದರೆ ಈ ತಪ್ಪುವ್ಯಾಖ್ಯಾನವನ್ನೇ ಅವರು ದೇಶದ ಜನತೆಯ ಮೇಲೆ ಹೇರಲು ಪ್ರಯತ್ನಿಸಿದರು. ಮುಂದೆ ಅದೇ ಗಾಂಧೀವಾದವೆಂಬ ಹಳಸಲು ವಾದವಾಗಿ ದೇಶೀಯರನ್ನು ನಿರ್ವೀರ್ಯರನ್ನಾಗಿಸಿತು.

ಆರ್ಯಸಮಾಜವನ್ನು ನಿರ್ಮಿಸಿ ಕ್ರೈಸ್ತ-ಮುಸಲರ ಮತಾಂತರಗಳಿಗೆ ವೈದಿಕ ರೀತಿಯಲ್ಲೇ ಬುದ್ಧಿಕಲಿಸಿ, ಜ್ಞಾನ ಮಾರ್ಗದಿಂದ ಡಾಂಭಿಕತೆಯತ್ತ ತೆರಳುತ್ತಿದ್ದ, ಮೌಢ್ಯಗಳನ್ನೇ ಸಂಸ್ಕೃತಿಯ ಮೌಲ್ಯಗಳಾಗಿ ಬಿಂಬಿಸುತ್ತಿದ್ದವರನ್ನು ಮರಳಿ ವೇದಗಳತ್ತ ಹೊರಳುವಂತೆ ಮಾಡಿದ ಸ್ವಾಮಿ ದಯಾನಂದ ಸರಸ್ವತಿಯವರನ್ನೂ ಬಿಡಲಿಲ್ಲ ಗಾಂಧಿ. ಕಾಲ್ಪನಿಕ ಪೂಜೆಯನ್ನು ತೆಗೆದುಹಾಕಿದ ದಯಾನಂದರು ವೇದಗಳ ವಿಗ್ರಹಾರಾಧನೆಯನ್ನು ಸ್ಥಾಪಿಸಿದರು ಎಂದು ಗಾಂಧಿ ಟೀಕಿಸಿದರು. ಆದರೆ ಇದೇ ಗಾಂಧಿ ತಾವು ಚರಕ, ಸತ್ಯಾಗ್ರಹಗಳ ಮೂಲಕ ಮಾಡಿದ್ದೂ ವಿಗ್ರಹಾರಾಧನೆಯನ್ನೇ ಎನ್ನುವುದನ್ನು ಮರೆತರು. ಹಾಗೆಯೇ ಆರ್ಯ ಸಮಾಜಿಗಳನ್ನು ಟೀಕಿಸಿದ ಗಾಂಧಿ ಇಸ್ಲಾಂ, ಕ್ರೈಸ್ತ ಮುಂತಾದ ಸೆಮೆಟಿಕ್ ಮತಗಳನ್ನು ಟೀಕಿಸಲೇ ಇಲ್ಲ. ಕುರಾನ್, ಅಲ್ಲಾ, ಮಸೀದಿ, ಬೈಬಲ್, ಶಿಲುಬೆ, ಚರ್ಚುಗಳೂ ವಿಗ್ರಹಾರಾಧನೆಯೇ ಅಲ್ಲವೇ?

ಗಾಂಧಿಯವರ ಬಗ್ಗೆ ಹೇಳುವಾಗ ಅರವಿಂದರು ಹೇಳುತ್ತಾರೆ, "ವಿಪರೀತ ಚಿಂತಿಸುವ ಹಾಗೂ ಚಿಂತನೆಗಳೊಂದಿಗೆ ವ್ಯಸ್ತನಾಗಿರುವ ನಾಯಕ ಜೀವನದ ವಾಸ್ತವಗಳನ್ನು ತನ್ನ ಚಿಂತನೆಗಳ ಚೀಲದಲ್ಲಿ ತುಂಬಲು ಪ್ರಯತ್ನಿಸುತ್ತಿರುತ್ತಾನೆ. ಹೀಗಾಗಿ ಯಶಸ್ಸು ಅವನಿಗೆ ಮರೀಚಿಕೆಯಾಗಿಬಿಡುತ್ತದೆ. ಆದರೆ ಯಶಸ್ಸಿನ ಗುರಿ ಹಾಕಿಕೊಂಡಿರುವ ನಾಯಕ ಉಪಾಯಗಳ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುವುದಿಲ್ಲ. ಆತ ತನ್ನ ಕಾರ್ಯದ ಶಕ್ತಿಯತ್ತ ಮತ್ತು ಯಶಸ್ಸಿನತ್ತ ಮುನ್ನಡೆವ ಹಾದಿಯನ್ನು ಅಂತರ್ಬೋಧೆಯ ಮೂಲಕ ಅರಿಯುತ್ತಾನೆ. ಶಕ್ತಿ ಮತ್ತು ಕಾಲದ ಸಂಯೋಜನೆಯನ್ನು ಆತ ಬಲ್ಲವನಾಗಿರುತ್ತಾನೆ. ಭಾರತದ ರಾಜಕೀಯ ನಾಯಕರು ಬರೇ ಐಡಿಯಾಗಳಲ್ಲಿ ಮುಳುಗಿ ಹೋಗಿದ್ದಾರೆ. ಗಾಂಧಿಯವರ ಖಿಲಾಫತ್ ಪ್ರತಿಭಟನೆಯನ್ನು ನಮ್ಮವರು ಹಿಂದುಮುಂದು ನೋಡದೆ ಅಂಗೀಕರಿಸಿದರು. ಸಾಮಾನ್ಯ ಮನುಷ್ಯನೊಬ್ಬನಿಗೂ ತಿಳಿದಿರುವ ವಾಸ್ತವವನ್ನು ಮರೆಮಾಚಿ ಹಿಂದೂಗಳ ಸರ್ವನಾಶಕ್ಕೆ ಕಾರಣರಾದರು. ವಾಸ್ತವಗಳನ್ನು ಯಾವಾಗಲೂ ನೇರವಾಗಿ ಎದುರಿಸಬೇಕು. ನೈಜ ಸ್ಥಿತಿಯನ್ನು ಮರೆಮಾಚುವ ಮೂಲಕವಲ್ಲ". "ಅಸಹಕಾರ ಆಂದೋಲನವು ದೇಶಕ್ಕೆ ಚೈತನ್ಯವನ್ನು ತುಂಬಲಿಲ್ಲವೇ?" ಎನ್ನುವ ಶಿಷ್ಯನೊಬ್ಬನ ಪ್ರಶ್ನೆಗೆ ಅರವಿಂದರ ಪ್ರತಿಕ್ರಿಯೆ ಆ ಹೋರಾಟದ ನೈಜತೆಯನ್ನು ಪಾರದರ್ಶಕಗೊಳಿಸಿವೆ. "ನೀವು ಅದನ್ನು ಚೇತನ ಎಂದು ಕರೆಯುತ್ತೀರಾ? ಅದು ಸುಳ್ಳನ್ನು ಆಧರಿಸಿತ್ತು. ಹೀಗಿರುವಾಗ ಅದರಿಂದ ಏನಾದರೂ ಸಾಧನೆಯಾಗುತ್ತದೆ ಎನ್ನುವ ನಿರೀಕ್ಷೆಯೇ ತಪ್ಪು. ನೂಲುವಿಕೆಯಂದ ಸ್ವರಾಜ್ಯ ಪ್ರಾಪ್ತಿಯಾಗಬೇಕು ಎನ್ನುವ ಮಿಥ್ಯಾದರ್ಶಗಳಿಂದ ಏನಾದರೂ ಸಾಧನೆ ಸಾಧ್ಯವೇ? ಬಂಗಾಲದಲ್ಲಿ ಸ್ವದೇಶೀ ಆಂದೋಲನದ ಸಮಯದಲ್ಲಿ ದೇಶಕ್ಕೆ ಕೆಲಮಟ್ಟಿಗಿನ ಚೈತನ್ಯ ಸಿಕ್ಕಿತು. ಬಂಗಾಲ ಏನನ್ನು ಸಾಧಿಸಿತು ಎನ್ನುವುದಕ್ಕಿಂತ ಬಂಗಾಲ ಆ ಚಳವಳಿಗೆ ಮುನ್ನ ಏನಾಗಿತ್ತು ಎನ್ನುವುದನ್ನು ಅರಿಯಬೇಕು. ಅಂದು ನಾವುಕೊಟ್ಟ ಮಾದರಿ, ಆದರ್ಶಗಳು ಇಂದು ಕುಲಗೆಟ್ಟಿವೆ. ಆ ವಿರೂಪಗೊಂಡ ಮಾದರಿಗಳನ್ನು ಇಂದು ತೆಗೆದುಕೊಂಡು ಮತ್ತಷ್ಟು ವಿರೂಪಗೊಳಿಸಲಾಗುತ್ತಿದೆ. ಗಾಂಧಿ ಎಂತಹಾ ವ್ಯಕ್ತಿಯೆಂದರೆ ಒಂದು ಹಂತದವರೆಗೆ ಪ್ರಯತ್ನದಿಂದ ಮುಂದುವರೆಯುತ್ತಾರೆ. ಆದರೆ ಪ್ರತಿಕ್ರಿಯೆಯಲ್ಲಿ ಬಹಳ ಹಿಂದುಳಿಯುತ್ತಾರೆ. ಸತ್ಯಾಗ್ರಹ ಆಂದೋಲನ ಗಾಂಧಿ ಮತ್ತು ಅಂತಹ ಕೆಲವೇ ವ್ಯಕ್ತಿಗಳಿಗಾಗಿತ್ತು. ಇಡೀ ದೇಶದ ಜನತೆಯನ್ನು ಒಳಗೊಳ್ಳುವ ಇರಾದೆ ಅದಕ್ಕಿರಲಿಲ್ಲ.  ಗಾಂಧಿ ಚರಕಾವನ್ನು ಧಾರ್ಮಿಕ ನಂಬಿಕೆಯ ವಸ್ತುವಾಗುವಂತೆ ಮಾಡಿದರು. ಯಾರು ನೂಲುವುದಿಲ್ಲವೋ ಅವರನ್ನು ಕಾಂಗ್ರೆಸ್ಸಿನಿಂದ ಹೊರಗಿಟ್ಟರು. ಅವರದೇ ಬೆಂಬಲಿಗರಲ್ಲಿ ಎಷ್ಟು ಮಂದಿ ನೂಲುವ ಆದರ್ಶದಲ್ಲಿ ನಂಬಿಕೆ ಇರಿಸಿದ್ದರು. ಕೆಲವೇ ಆಣೆಗಳ ಸಲುವಾಗಿ ಅಪಾರ ಶಕ್ತಿಯನ್ನು ವ್ಯರ್ಥಗೊಳಿಸುವುದು ಅವಾಸ್ತವಿಕ."

ಒಂದು ಕಾಲದಲ್ಲಿ ಹತ್ತಿಬಟ್ಟೆಗಳನ್ನು ಜಗತ್ತಿನಾದ್ಯಂತ ರಫ್ತು ಮಾಡುತ್ತಿದ್ದ ಭಾರತ ಬ್ರಿಟಿಷರ ಅಧಿಪತ್ಯದ ನಂತರ ಬಟ್ಟೆಗಳನ್ನು ಬ್ರಿಟನ್ನಿನ ಕಾರ್ಖಾನೆಗಳಿಂದ ಖರೀದಿ ಮಾಡುವಂತಾಯಿತು. ಆಂಗ್ಲರ ಮೊದಲಿನ ಹಾಗೂ ಬಳಿಕದ ಭಾರತದ ಶೈಕ್ಷಣಿಕ, ಔದ್ಯಮಿಕ ಸ್ಥಿತಿಗತಿಗಳ ಬಗ್ಗೆ ಆಸಕ್ತರು ಧರ್ಮಪಾಲರ ಗ್ರಂಥಗಳಿಂದ ನೋಡಬಹುದು. ವಿಪರ್ಯಾಸವೆಂದರೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಉದ್ಯಮವನ್ನು ಜಗತ್ತಿನ ರಾಷ್ಟ್ರಗಳು ತಮ್ಮ ಅಧಿಪತ್ಯಕ್ಕೆ ಒಳಪಡಿಸಿದ್ದಾಗ ಗಾಂಧಿ ಮತ್ತೆ ನೂಲಲು ಹೊರಟದ್ದು ಮಾತ್ರವಲ್ಲದೇ ದೇಶಕ್ಕೂ ಅದನ್ನು ಹೇರಹೊರಟರು. ಕಾಲಕ್ಕೆ ತಕ್ಕಂತೆ ನಮ್ಮ ತಾಂತ್ರಿಕತೆಯಲ್ಲಿ ಬದಲಾವಣೆ ಮಾಡದಿದ್ದರೆ ದೇಶ ಉಳಿಯುವುದೇ? ನಮಗೆ ನಮ್ಮದೇ ಪ್ರಾಚೀನ ವೃತ್ತಿ,  ಔದ್ಯಮಿಕ ಕ್ಷೇತ್ರಗಳೆಲ್ಲವೂ ಬೇಕು ನಿಜ. ಆದರೆ ಯಾವುದೂ ನಿಂತನೀರಾಗಿರಬಾರದು. ಹಾಗಿದ್ದಲ್ಲಿ ದೇಶ ಕತ್ತಲಕೂಪಕ್ಕೆ ಜಾರುತ್ತದೆ. ನಮ್ಮ ಗುಡಿಕೈಗಾರಿಕೆಗಳೆಲ್ಲಾ ಬೇಕಿದ್ದವು. ಆದರೆ ಅವುಗಳನ್ನು ಉತ್ಪಾದಿಸುವ ತಾಂತ್ರಿಕತೆಯನ್ನು ಕಾಲಕ್ಕೆ ತಕ್ಕಂತೆ ಉನ್ನತೀಕರಿಸಿಕೊಳ್ಳದಿದ್ದರೆ ಅವುಗಳೆಲ್ಲಾ ಬೇರೆಯವರ ಪಾಲಾಗದಿರುತ್ತದೆಯೇ?.

ಗಾಂಧಿ ಎಲ್ಲವನ್ನು ಸಾಮಾನ್ಯೀಕರಣಗೊಳಿಸಲು ಯತ್ನಿಸಿದರು. ಹೋರಾಟವನ್ನು ಮಂದಗೊಳಿಸಿದರು, ನೂಲದವರನ್ನು ಕಾಂಗ್ರೆಸ್ಸಿನಿಂದ ಹೊರಗಟ್ಟಿದರು, ಎಲ್ಲರಿಗೂ ಬ್ರಹ್ಮಚರ್ಯ ಪಾಲಿಸುವಂತೆ ಒತ್ತಾಯಪಡಿಸಿದರು(ಯಾರೂ ಅನುಕರಿಸಲಿಲ್ಲ; ಅದು ಬೇರೆ ಮಾತು). ಅದಕ್ಕೆ ಅವರ ತಪ್ಪು ಗ್ರಹಿಕೆ, ಜ್ಞಾನದ ಅಭಾವ ಅಥವಾ ಆಧ್ಯಾತ್ಮಿಕತೆಯ ಕೊರತೆ, ಕ್ರೈಸ್ತ-ಜೈನ ಮತಗಳ ಪ್ರಭಾವ ಎಲ್ಲವೂ ಕಾರಣ. ಗಾಂಧಿ ಒಬ್ಬ ಆಧ್ಯಾತ್ಮವ್ಯಕ್ತಿ ಎನ್ನುವವರು ಗಾಂಧಿಯ ಬಗ್ಗೆ ಬ್ರಹ್ಮಜ್ಞಾನಿ ರಮಣಮಹರ್ಷಿಗಳು, ಯೋಗದರ್ಶನವನ್ನಿತ್ತ  "ಮೇರುಪ್ರಜ್ಞೆ" ಯೋಗಿ ಅರವಿಂದರು ಗಾಂಧಿಯ ಬಗ್ಗೆ ಹೊಂದಿದ್ದ ಅಭಿಪ್ರಾಯವನ್ನು ತಿಳಿಯಬೇಕು. ಅಷ್ಟೇ ಅಲ್ಲ ಗಾಂಧಿಯನ್ನು ಆಧ್ಯಾತ್ಮಸಾಧಕ ಎನ್ನುವವರ್ಯಾರಿಗೂ ಅವಧೂತಪರಂಪರೆಯ ಬಗ್ಗೆ ಬಿಡಿ, ಆಧ್ಯಾತ್ಮಸಾಧನೆಯ ಕೆಲವು ಮೆಟ್ಟಿಲನ್ನೇರಿದವರ ಬಗ್ಗೆ ಅಂದರೆ ಆಧ್ಯಾತ್ಮದ ಬಗ್ಗೆ ತಿಳಿದಿಲ್ಲ ಎಂದೇ ಹೇಳಬೇಕು. ಬರಿಯ ಪ್ರಾರ್ಥನೆ, ಗೀತಾ ಪಠಣ, ಕುರಾನ್ ಪಠಣ, ಅಹಿಂಸೆಯನ್ನೇ ಅಧ್ಯಾತ್ಮ ಎನ್ನುವುದಿದ್ದರೆ ಇಡೀ ವಿಶ್ವ ಆಧ್ಯಾತ್ಮ ಸಾಧಕರಿಂದ ತುಂಬಿತುಳುಕುತ್ತಿದೆ! ಕಾಂಗ್ರೆಸ್ಸಿನ ತಮ್ಮ ಅನುಯಾಯಿಗಳೇ ತಮ್ಮ ಮಾತನ್ನು ಕೇಳದಿದ್ದಾಗ ಗಾಂಧಿಯೇ ಸ್ವತಃ ತಮಗೆ ತಪಶ್ಚರ್ಯೆಯ ಕೊರತೆಯಿದೆ ಎಂದು ಅಲವತ್ತುಕೊಂಡಿದ್ದರು.

ಗಾಂಧಿ ಬರೇ ಎರಡು ಮನಸ್ಸಲ್ಲ ಮೂರು ಅಥವಾ ನಾಲ್ಕು ಮನಸ್ಸು ಹೊಂದಿದ್ದರು. ನಿರ್ದಿಷ್ಟ ಸಂದರ್ಭದಲ್ಲಿ ಯಾವ ಮನಸ್ಸು ಎತ್ತರದಲ್ಲಿರುತ್ತದೋ ಅದರಂತೆ ನಿರ್ಣಯ. ಉಳಿದವು ಅದರ ಜೊತೆಗೂಡುತ್ತವೆ. ಇದಷ್ಟೇ ಆದರೆ ಹಾನಿಯೇನಿರಲಿಲ್ಲ. ಬದಲಾಗಿ ಅವರ ಆಯ್ಕೆಗೆ ಒಂದು ಕೇಂದ್ರ ಪ್ರಕಾಶ ಇದ್ದರೆ ಮತ್ತು ಆಯಾ ಸನ್ನಿವೇಶಕ್ಕೆ, ಸಮಯಕ್ಕೆ ತಕ್ಕಂತೆ ನಿರ್ಧಾರ ಕೈಗೊಂಡಿದ್ದರೆ ಇದರಿಂದ ಲಾಭವೇ ಆಗುತ್ತಿತ್ತು. ಅಂಥದೊಂದಿದೆ ಮತ್ತು ಅದು ದೇವರು ಎಂದು ಗಾಂಧಿ ಯೋಚಿಸುತ್ತಾರೆ. ಆದರೆ ಅದು ಅವರ ಮನಸ್ಸಿನ ನಿರ್ಣಯ ಮತ್ತು ತಪ್ಪು ನಿರ್ಣಯವಾಗಿರುತ್ತದೆ.(ಇಂಡಿಯಾಸ್ ರೀಬರ್ತ್, ಶ್ರೀ ಅರವಿಂದರು) ಗಾಂಧಿ ಕಠಿಣ ಮನೋಸ್ಥೈರ್ಯ ಹೊಂದಿರುವ ವ್ಯಕ್ತಿಯಾಗಿದ್ದರು. ಆದರೆ ವಿವೇಚನಾ ವ್ಯಕ್ತಿಯಾಗುವ ಭರದಲ್ಲಿ ಅದನ್ನು ಹಾಳುಗೆಡವಿದರು. ಮಾತ್ರವಲ್ಲ ಅದನ್ನು ಆತ್ಮಬಲ ಎಂದು ತಪ್ಪಾಗಿ ಕರೆದರು. ಅವರೆಂದೂ ತಮ್ಮ ಜೀವನದಲ್ಲಿ ತಾರ್ಕಿಕರಾಗಿರಲಿಲ್ಲ. ಮುಂದೆಯೂ ಆಗುತ್ತಾರೆ ಎಂದು ನನಗನಿಸುವುದಿಲ್ಲ. ವಿವೇಚನೆಯ ಜಾಗದಲ್ಲಿ ಅವರು ಹೊಂದಿದ್ದುದು ಅನುದ್ದೇಶಪೂರ್ವಕ ವಿತಂಡವಾದ. ತಾನು ಮುಂದೇನು ಮಾಡುತ್ತೇನೆ ಎನ್ನುವ ಕುರಿತು ಅವರಿಗೇ ಸ್ಪಷ್ಟತೆ ಇರಲಿಲ್ಲ ಎಂದಿದ್ದಾರೆ ಅರವಿಂದರು.

ಸಂಬಂಧವಿಲ್ಲದವರಿಗೆ, ಅರಿಯಲು ಅಸಮರ್ಥರಾದವರಿಗೆ ಮತ್ತು ತಮ್ಮ ಮಾಹಿತಿಯಿಂದಾಗಿ ಯಾರು ಶತ್ರುಗಳಂತೆ/ನಾಶಮಾಡುವರಂತೆ ವರ್ತಿಸುತ್ತಾರೋ ಅಂಥವರಿಗೆ ನಮ್ಮ ಯೋಜನೆಗಳನ್ನು ತಿಳಿಸುವ ಅವಶ್ಯಕತೆಯಿಲ್ಲ. ಜಗತ್ತಿನ ಎದುರು ಬೆತ್ತಲಾಗುವಂತೆ ಅಥವಾ ನಮ್ಮ ಹೃದಯ ಹಾಗೂ ಮನಸ್ಸನ್ನು ಸಾರ್ವಜನಿಕ ಪರಿವೀಕ್ಷಣೆಗೆ ತೆರೆದಿಡಬೇಕು ಎಂದು ಯಾವ ನೈತಿಕ ಅಥವಾ ಧಾರ್ಮಿಕ ಕಾನೂನು ಕೂಡಾ ಆಜ್ಞಾಪಿಸುವುದಿಲ್ಲ. ರಹಸ್ಯ ಕಾಪಾಡುವುದು ಪಾಪ ಎಂಬರ್ಥದಲ್ಲಿ ಗಾಂಧಿ ಮಾತಾಡುತ್ತಿದ್ದರು. ಆದರೆ ಅವರ ಅನೇಕ ಅತಿರೇಕಗಳಲ್ಲೊಂದಾಗಿತ್ತು.(ಇಂಡಿಯಾಸ್ ರೀಬರ್ತ್, ಶ್ರೀ ಅರವಿಂದರು). ಎಂಟು ಕೋಟಿ ಮುಸ್ಲಿಮರು ಪ್ರತ್ಯೇಕ ದೇಶದ ಬೇಡಿಕೆ ಮುಂದಿಟ್ಟರೆ ಆಗ ಹಿಂದೂಗಳು ಒಪ್ಪಲೇಬೇಕಾಗುತ್ತದೆ ಎಂದು ಗಾಂಧಿ ಪತ್ರಿಕಾ ಪ್ರತಿನಿಧಿಯೊಬ್ಬನಿಗೆ ಹೇಳಿದ್ದರು(1940 ಮೇ). ಇದರ ಬಗ್ಗೆ ಅರವಿಂದರು ತಮ್ಮ ಶಿಷ್ಯರಲ್ಲೊಬ್ಬರಲ್ಲಿ "ಗಾಂಧಿ ಪ್ರತಿಪಕ್ಷದ ಬೇಡಿಕೆಗೆ ಬಹುತೇಕ ಮಣಿದಿದ್ದಾರೆ. ಮೊದಲೇ ಮಣಿದರೆ ಪ್ರತಿಪಕ್ಷ ತನ್ನ ಬೇಡಿಕೆಗೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇದರರ್ಥ ಅಲ್ಪಸಂಖ್ಯಾತರು ಆಳಬೇಕು, ಬಹುಸಂಖ್ಯಾತರು ಅಧೀನಕ್ಕೊಳಪಡಬೇಕು. ಇದು ಅಲ್ಪಸಂಖ್ಯಾತರಿಗೆ "ನೀವು ನಮ್ಮ ಸೇವಕರು. ನಮ್ಮ ಮಾತೇ ಕಾನೂನು. ನೀವದನ್ನು ಪಾಲಿಸಬೇಕಷ್ಟೇ" ಎಂದು ಹೇಳಲು ಅವಕಾಶವಿತ್ತಂತೆ. ಇದು ವಿಚಿತ್ರ ಮನೋಭಾವ. ಈ ರೀತಿಯ ಜನರು ಸ್ವಲ್ಪ ಕ್ರ್ಯಾಕ್ ಎಂದು ನನ್ನ ಭಾವನೆ"(ಇಂಡಿಯಾಸ್ ರೀಬರ್ತ್, ಶ್ರೀ ಅರವಿಂದರು)

ಜರ್ಮನಿಯಲ್ಲಿ ಕೆಲವರು ಅನುಸರಿಸಿದ ಅಹಿಂಸಾ ಮಾರ್ಗ ವಿಫಲವಾಯಿತು. ಆಗ ಗಾಂಧಿ ಅದು ಹಿಟ್ಲರನ ಹೃದಯ ಕರಗಿಸುವಷ್ಟು ಶಕ್ತಿಯುತವಾಗಿರಲಿಲ್ಲ ಎಂದರು(ಜನವರಿ 1939). ಇತ್ತ ಆ ಸಮಯದಲ್ಲಿ ಗಾಂಧಿಯ ಅಹಿಂಸೆ ಬ್ರಿಟಿಷರ ಮನಕರಗಿಸುವುದರ ಬದಲು ಸುಭಾಷರನ್ನು ಕಾಂಗ್ರೆಸ್ಸಿನಿಂದ ಹೊರಹಾಕಿತ್ತು. ಏನೇ ಸಾಧನೆಯಾಗದಿದ್ದರೂ ತನ್ನ ಮಾರ್ಗವೇ ಶ್ರೇಷ್ಠ ಎನ್ನುವ ಇಂತಹ ಆಷಾಢಭೂತಿಯನ್ನು ಮಹಾತ್ಮ ಎಂದಿದ್ದಾರಲ್ಲಾ! ಈ ಪ್ರಕರಣ ಸಂದರ್ಭದಲ್ಲಿ ಅರವಿಂದರು ಗಾಂಧಿಯ ನೈಜತೆಯನ್ನು ಬಗೆದು ತೋರಿಸಿದ್ದಾರೆ. "ಗಾಂಧಿ ತಮ್ಮ ಆತ್ಮಾಭಿಮಾನವನ್ನು ತೃಪ್ತಿಪಡಿಸಲು ಬಯಸಿದ್ದರು. ಅವರೇನಾದರೂ ರಷ್ಯನ್ನರು ಅಥವಾ ನಾಝಿಗಳ ಜೊತೆ ವ್ಯವಹರಿಸುವುದಾಗಿದ್ದರೆ, ಬಹಳ ಹಿಂದೆಯೇ ಗಾಂಧಿಯನ್ನು ತಮ್ಮ ದಾರಿಯಿಂದ ಆಚೆಗೆ ಸರಿಸುತ್ತಿದ್ದರು. ನಾನು ನಿನ್ನನ್ನು ಸಹಿಸುವುದಿಲ್ಲ ಎನ್ನುವ ತತ್ವವಿರುವ ಮತೀಯರ ಜೊತೆಗೆ ಶಾಂತಿಯುತವಾಗಿ ಬಾಳುವುದು ಹೇಗೆ? ಮುಸ್ಲಿಮರು ಹಿಂದೂಗಳನ್ನು ಮತಾಂತರಿಸುತ್ತಲೇ ಇರಬಹುದು. ಹಿಂದೂಗಳು ಮುಸ್ಲಿಮರನ್ನು ಮತಾಂತರಿಸಬಾರದು ಎನ್ನುವ ತತ್ವದ ತಳಹದಿಯ ಮೇಲೆ ಐಕ್ಯತೆ ಸಾಧಿಸಲು ಸಾಧ್ಯವಿಲ್ಲ. ಮುಸ್ಲಿಮರನ್ನು ಓಲೈಸುವ ಬದಲು ಹಿಂದೂಗಳು ರಾಷ್ತ್ರಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಏಕತೆ ತಾನೇತಾನಾಗಿ ಸಾಧಿತವಾಗುತ್ತಿತ್ತು."

ಗಾಂಧಿಯ ಬಗ್ಗೆ ಬರೆಯುವಾಗ ಅರವಿಂದರ ಅಭಿಪ್ರಾಯ ತೆಗೆದುಕೊಂಡುದುದೇಕೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಬಹುದು. ಅರವಿಂದರು ಆ ಕಾಲದ ಆಗುಹೋಗುಗಳನ್ನು ಬಹಳ ಹತ್ತಿರದಿಂದ ನೋಡಿದ ಮೇರುವ್ಯಕ್ತಿ. ಅರವಿಂದರು ಗಾಂಧಿಗಿಂತ ಮುಂಚೆಯೇ ರಾಷ್ಟ್ರೀಯತಾ ಆಂದೋಲನವನ್ನು ಪ್ರಭಾವಿಸಿದ ವ್ಯಕ್ತಿ. ಸ್ವತಃ ಕ್ರಾಂತಿಕಾರಿಯಾಗಿದ್ದು, ಕ್ರಾಂತಿಸಂಘಟನೆ ಹುಟ್ಟುಹಾಕಿದ್ದ ಅವರು ಬಂಗಾಳ ಮಾತ್ರವಲ್ಲದೆ ದೇಶದೆಲ್ಲೆಡೆಯ ಕ್ರಾಂತಿಕಾರಿಗಳ ಮಾರ್ಗದರ್ಶಕರೂ ಆಗಿದ್ದರು. ದುರ್ಗೆ ಬೇರೆಯಲ್ಲ ತಾಯಿ ಭಾರತಿ ಬೇರೆಯಲ್ಲ ಎಂದು ಪ್ರಚುರಪಡಿಸಿದ ಭವಾನಿಮಂದಿರದ ಅಧ್ವರ್ಯು ಅವರು. ಭಾರತಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲ, ಆಧ್ಯಾತ್ಮಿಕ ಸ್ವಾತಂತ್ರ್ಯವೂ ಬೇಕು; ಪುರಾತನ ಭಾರತದ ಜ್ಞಾನ-ಕ್ರಿಯಾಶೀಲತೆಗಳು ಇಂದಿನ ಭಾರತೀಯರಲ್ಲೂ ಮೇಳವಿಸಿ ಭಾರತ ಜಗದ್ಗುರುವಾಗಬೇಕೆಂದು ಪ್ರತಿಪಾದಿಸಿದವರು ಅವರು. ಅದಕ್ಕಿಂತಲೂ ಮುಖ್ಯವಾಗಿ ಬ್ರಹ್ಮ ಸಾಕ್ಷಾತ್ಕಾರಗೊಳಿಸಿಕೊಂಡ "ಸುಪ್ತಮೇರುಪ್ರಜ್ಞೆ" ಅವರಾದುದರಿಂದಲೇ ಅವರ ಮಾತುಗಳಿಗೆ ಹೆಚ್ಚಿನ ತೂಕವಿದೆ. ಹಾಗೆಯೇ ಜಗತ್ತನ್ನೇ ತನ್ನ ಮೌನದಿಂದಲೇ ಸೆಳೆದು ಬೆಳಗಿದ, ಇಂದಿಗೂ ಜಗತ್ತಿನ ಮೂಲೆಮೂಲೆಯಿಂದ ಆಧ್ಯಾತ್ಮಪಿಪಾಸುಗಳನ್ನು ಆಕರ್ಷಿಸುತ್ತಿರುವ ಅರುಣಾಚಲದ ಆತ್ಮಜ್ಯೋತಿ ಭಗವಾನ್ ರಮಣಮಹರ್ಷಿಗಳು ಗಾಂಧಿಯ ಆಧ್ಯಾತ್ಮ ಬೂಟಾಟಿಕೆ ಎಂದೇ ಹೇಳಿದ್ದಾರೆ. ಅದಕ್ಕೆ ಸರಿಯಾಗಿ ಗಾಂಧಿ ಒಂದೇ ಒಂದು ಸಲವೂ ರಮಣರನ್ನು ಸ್ವತಃ ಎದುರುಗೊಳ್ಳದೆ ತಮ್ಮ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳಲು ತಮ್ಮ ಶಿಷ್ಯ ರಾಜಾಜಿಯನ್ನು ಕಳುಹಿಕೊಡುತ್ತಿದ್ದರು. ಇದರ ಮೇಲೂ ಅರವಿಂದರು ಹಾಗೂ ರಮಣ ಮಹರ್ಷಿಗಳನ್ನು ಪ್ರಶ್ನಿಸುವವರನ್ನು ಅಜ್ಞಾನದಲ್ಲಿ ತೊಳಲಾಡುತ್ತಿರುವವರು ಎನ್ನಬಹುದಷ್ಟೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ