ಪುಟಗಳು

ಶುಕ್ರವಾರ, ಸೆಪ್ಟೆಂಬರ್ 30, 2016

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

            ಸೂರ್ಯ ಇನ್ನೂ ಕಣ್ಣುಬಿಟ್ಟಿರಲಿಲ್ಲ. ಬೆಳಗ್ಗೆ 4.32ರ ಹೊತ್ತಿಗೆ ಫೋನ್ ರಿಂಗಣಿಸಿ ಅತ್ತ ಕಡೆಯಿಂದ "ಸಕ್ಸಸ್" ಎನ್ನುವ ಪದ ಕೇಳಿದ್ದೇ ತಡ 56 ಇಂಚಿನ ಎದೆಯುಬ್ಬಿ ನಿಂತಿತ್ತು. ಅದೇ ಹರ್ಷದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಎರಡು ದಿವಸಗಳ ಅಷ್ಟೂ ನಿದ್ದೆಯನ್ನು ಪೂರೈಸಿ ಆತ ಎಂದಿನಂತೆ ತನ್ನ ಕಾರ್ಯದಲ್ಲಿ ಮಗ್ನನಾದ. ಯಾವುದೇ ಹೇಳಿಕೆಯಿಲ್ಲ, ಟ್ವೀಟೂ ಇಲ್ಲ;  ಆತ ನಿರ್ಲಿಪ್ತ. ಭಾರತ ಶತಶತಮಾನಗಳಿಂದ ಇಂತಹ ನಾಯಕನಿಗೆ ಕಾದಿತ್ತು.

                ಉರಿಯ ಆಘಾತಕ್ಕೆ ಇಡೀ ದೇಶವೇ ಸಿಡಿದೆದ್ದಿತ್ತು. ಐವತ್ತಾರು ಇಂಚಿನೆದೆಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಪಾಕಿಸ್ತಾನವನ್ನು ಇಲ್ಲವಾಗಿಸಿಬಿಡಿ ಎನ್ನುವ ಮಾತು ದೇಶದ ಮೂಲೆಮೂಲೆಯಿಂದ ಕೇಳಿಬಂದಿತ್ತು. ಯುದ್ಧಕ್ಕಿಳಿಯದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಹೊರಟ ಸರಕಾರದ ಪ್ರಯತ್ನಗಳು ಸಾಮಾನ್ಯಜನತೆಗೆ ಅರ್ಥವಾಗಿರಲಿಲ್ಲ. ನೇರ ಯುದ್ಧವಲ್ಲದೆ ಪಾಕಿಸ್ತಾನ ಬುದ್ಧಿಕಲಿಯದು ಎನ್ನುತ್ತಿದ್ದ ಬಹುತೇಕ ಭಾರತೀಯರ ಅಸಹನೆಗೆ ಹುಟ್ಟಿದಂದಿನಿಂದ ಸದಾ ಉಪಟಳ ಮಾಡುತ್ತಲೇ ಬಂದಿರುವ ಪಾಕಿಸ್ತಾನದ ಕಿರಿಯೇಕಿರಿಯೇ ಕಾರಣವಲ್ಲದೆ ಮತ್ತೇನಲ್ಲ. ಆದರೆ ಸರಕಾರ ಯುದ್ಧಕ್ಕೆ ಮನಸ್ಸು ಮಾಡದೇ ಇದ್ದಾಗ ಜನ ಇವರೂ ಹಿಂದಿನವರಂತೆಯೇ, ಏನೂ ಪ್ರಯೋಜನವಿಲ್ಲ ಎನ್ನುವ ಅಸಮಧಾನ ಬಹಿರಂಗವಾಗಿಯೇ ಹೊರಸೂಸಿದ್ದರು. ಕೇರಳದಲ್ಲೂ ಮೋದಿ ಯುದ್ಧದ ಬಗ್ಗೆ ಮಾತಾಡದೆ, ಬಡತನದ ವಿರುದ್ಧ ಹೋರಾಡೋಣ; ಮನುಷ್ಯತ್ವದ ವಿರುದ್ಧವಲ್ಲ ಎಂದಾಗ ಮೋದಿ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂದೇ ಎಲ್ಲಾ ಯೋಚಿಸಿದ್ದರು. ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುವ ರಾಷ್ಟ್ರಭಾವನೆಯಿಲ್ಲದ ಸಿಕ್ಯುಲರುಗಳಿಗಂತೂ ಕಳೆದ ಹತ್ತು ದಿನಗಳು ಪರ್ವಕಾಲ. ಆದರೆ ಅವರ ರಂಜಾನ್ ಮುಗಿಯುವ ಮೊದಲೇ ನಮ್ಮ ನವರಾತ್ರಿ ಸದ್ದಿಲ್ಲದೆ ಆರಂಭವಾಗಿ ಗುರುವಾರ ಸೂರ್ಯೋದಯಕ್ಕೆ ಸರಿಯಾಗಿ ವಿಜಯದಶಮಿ ವಿಜೃಂಭಿಸಿದಾಗ ಅವರಿಗೆಷ್ಟು ಉರಿದಿರಬೇಡ?

                ಪಠಾನ್ಕೋಟ್, ಉರಿ ಹೀಗೆ ಒಂದರ ಹಿಂದೊಂದರಂತೆ ಸೇನಾ ನೆಲೆಗಳ ಮೇಲೆ ದಾಳಿ ಆಗುತ್ತಿದೆ ಎಂದರೆ ಅದು ನಮ್ಮ ಗುಪ್ತಚರ ವೈಫಲ್ಯ ಎಂದು ದೂರುವ ಯಾರಿಗೂ ಇಂಥದೇ 17 ದಾಳಿಗಳನ್ನು ಸೇನೆ ವಿಫಲಗೊಳಿಸಿದ್ದು ತಿಳಿದೇ ಇಲ್ಲ. ಇರಲಿ. ಅಸಲಿಗೆ ಕಳೆದ ಹತ್ತು ದಿವಸ ಭಾರತ ಪಾಕಿಸ್ತಾನವನ್ನು ಅಕ್ಷರಃ ಕಟ್ಟಿ ಹಾಕಿತ್ತು. ಭಯೋತ್ಪಾದಕರನ್ನು ನಿಗ್ರಹಿಸಿ ಎಂದು ಮೊದಲ ಬಾರಿಗೆ ಅಮೇರಿಕಾ ಖಡಕ್ಕಾಗಿ ಎಚ್ಚರಿಕೆ ನೀಡಿತ್ತು. ಅಲ್ಲಿನ ಸಂಸತ್ತಿನಲ್ಲಿ ಪಾಕಿಸ್ತಾನದ ವಿರುದ್ಧ ಮಸೂದೆ ಮಂಡನೆಗೂ ಉಪಕ್ರಮವಾಗಿತ್ತು. ವಿಶ್ವಸಂಸ್ಥೆಯ ವೇದಿಕೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನವನ್ನು ಅಪರಾಧಿಯನ್ನಾಗಿ ಸಾಕ್ಷಿಸಮೇತ ತೋರ್ಪಡಿಸಿ ಜಗತ್ತಿನ ಮುಂದೆ ಪಾಕಿಸ್ತಾನವನ್ನು ಬೆತ್ತಲೆಯಾಗಿಸಿದರು. ಭಾರತ ಸಾರ್ಕ್ ಶೃಂಗ ಸಭೆಯನ್ನು ಬಹಿಷ್ಕರಿಸಿದಾಗ ಬಾಂಗ್ಲಾ, ಭೂತಾನ್, ಅಪ್ಘನ್ನರು ಭಾರತವಿಲ್ಲದ ಸಭೆಗೆ ತಾವೂ ಬರಲೊಲ್ಲವೆಂದರು. ಪಾಕಿಸ್ತಾನವು ತಮ್ಮ ಆಂತರಿಕ ವ್ಯವಹಾರಗಳಲ್ಲಿ ಕೈಯಾಡಿಸುತ್ತಿದೆ ಎಂದು ಬಾಂಗ್ಲಾ, ಅಫಘಾನಿಸ್ತಾನಗಳು ದೂರಿದರೆ, ಭಯೋತ್ಪಾದನೆಯ ಹೆಚ್ಚಳಕ್ಕೆ ಪಾಕಿಸ್ತಾನವೇ ಕಾರಣ ಎಂದು ಭೂತಾನ್ ದೂಷಿಸಿತು. ವಾಘಾ ಗಡಿಯ ಮೂಲಕ ಭಾರತದೊಂದಿಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಪಾಕಿಸ್ತಾನವು ಅಫಘಾನಿಸ್ತಾನಕ್ಕೆ ಅವಕಾಶ ಮಾಡಿಕೊಡದಿದ್ದರೆ, ಮಧ್ಯ ಏಷ್ಯದ ಜತೆ ವ್ಯವಹರಿಸುವುದಕ್ಕೆ ಪಾಕಿಸ್ತಾನಕ್ಕೆ ಅನುಕೂಲ ಒದಗಿಸುತ್ತಿರುವ ಅಫ್ಘನ್ ಗಡಿಯನ್ನು ಮುಚ್ಚುತ್ತೇವೆ ಎಂದು ಅಫಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗನಿ ಗುರಾಯಿಸಿದರು. ಇಸ್ರೇಲ್ ಭಾರತದ ಪರವಾಗಿ ಮಾತಾಡಿತು. ಜಪಾನ್, ದಕ್ಷಿಣ ಕೊರಿಯಾ, ಇರಾನ್, ಶ್ರೀಲಂಕಾಗಳು ಭಾರತದ ಪರವಹಿಸಿದವು. ಇಸ್ರೇಲ್ ಪ್ರಧಾನಿ ನೆತಾನ್ಯಾಹುವಂತೂ ಪಾಕಿಸ್ತಾನದ ಪ್ರಧಾನಿಯೂ ತಾನು ತಂಗುವ ಹೋಟೆಲ್ಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಹೋಟೆಲ್ ಕಾಯ್ದಿರಿಸಿದ್ದನ್ನೇ ರದ್ದು ಮಾಡಿದರು. ಹೀಗೆ ಒಟ್ಟಾರೆ ಭಾರತ ಪಾಕಿಸ್ತಾನವನ್ನು ವಿಶ್ವದಲ್ಲಿ ಒಬ್ಬಂಟಿಯನ್ನಾಗಿಸಿತ್ತು. ಅದು ಭಾರತದ ಮೊದಲ ಸರ್ಜಿಕಲ್ ಸ್ಟ್ರೈಕ್! ಅದು ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ವ್ಯೂಹಯುಕ್ತಿಯ ರಾಜತಾಂತ್ರಿಕ ಜಯ!

                ಕಾರ್ಯಾಚರಣೆಯ ವಿಚಾರ ಮೋದಿ, ಧೋವಲ್ ಹಾಗೂ ಸೈನ್ಯಾಧಿಕಾರಿಗಳ ಹೊರತಾಗಿ ಯಾರಿಗೂ ತಿಳಿದಿರಲಿಲ್ಲ. ಕಳೆದೆರಡು ದಿವಸಗಳಂದ ನಿದ್ದೆಯಿಲ್ಲದೆ ಕಾರ್ಯಾಚರಣೆಯ ರೂಪುರೇಷೆಯನ್ನು ನಿರ್ಧರಿಸಿದ ಈ ತಂಡ ಭಾರತಕ್ಕೆ ಇಷ್ಟರವರೆಗೆ ಅಸಾಧ್ಯವಾದುದನ್ನು ಸಾಧಿಸಿಯೇ ಬಿಟ್ಟಿತು. ಮಾಜಿ ಯೋಧರೊಬ್ಬರು ಭಾರತ ಮೊದಲ ಬಾರಿ ಇಸ್ರೇಲಿನಂತೆ ಕಾರ್ಯಾಚರಣೆ ಮಾಡಿದೆ ಎಂದದ್ದು ಅತಿಶಯೋಕ್ತಿಯೇನಲ್ಲ. ಉರಿ ದಾಳಿಯ ಬೆನ್ನಲ್ಲೇ ಮಿಲಿಟರಿ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ "ನಮ್ಮಿಷ್ಟದ ಸ್ಥಳ ಮತ್ತು ಸಮಯದಲ್ಲಿ ಉತ್ತರ ನೀಡುತ್ತೇವೆ" ಎಂದಾಗ ಅದರಲ್ಲಿ ಸೇನೆಗೆ ಸಂಪೂರ್ಣ ಅಧಿಕಾರ ಸಿಕ್ಕಿರುವ ಸೂಚನೆಯಿತ್ತು. ಮೋದಿ ಕೇರಳದಲ್ಲಿ ಮಾತಾನಾಡುತ್ತಾ "ರಾಜಕಾರಣಿಗಳು ಮತ್ತು ನಾಗರಿಕರಂತೆ ಸೇನೆ ಮಾತಾಡುವುದಿಲ್ಲ. ತಮ್ಮ ಕಾರ್ಯದ ಮೂಲಕವೇ ಅದು ಉತ್ತರ ಕೊಡುತ್ತದೆ" ಎಂದಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾಧ್ಯಮಗಳು, ರಾಜಕೀಯ ಪರಿಣತರು, ಅಂತಾರಾಷ್ಟ್ರೀಯ ವಿಚಾರಗಳ ಪಂಟರುಗಳಿಗೂ ಮೋದಿಯ ನಡೆಯ ಸೂಕ್ಷ್ಮತೆ ಗೋಚರಿಸಿರಲಿಲ್ಲ. ಆದರೆ ಪ್ರಧಾನಿ ಹಾಗೂ ಸೇನೆ ತಮ್ಮ ಮುಂದಿನ ಗುರಿಯನ್ನು ನಿಶ್ಚಯಿಸಿ ಅದರಲ್ಲಿ ತೊಡಗಿಕೊಂಡಿದ್ದರು. ಮಧ್ಯರಾತ್ರಿ ಹನ್ನೆರಡರೂವರೆಗೆ "ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರ"ದೊಳಗೆ ನುಗ್ಗಿ ಉಗ್ರರನ್ನು ಅಟ್ಟಾಡಿಸಿ ಕೊಂದರು ನಮ್ಮ ವೀರಯೋಧರು. ಈ ಮಿಂಚಿನ ಕಾರ್ಯಾಚರಣೆಯಲ್ಲಿ ನಲವತ್ತು ಉಗ್ರರನ್ನು ಅವರ ಎಪ್ಪತ್ತೆರಡು ಕನ್ಯೆಯರ ಜಾಗಕ್ಕೆ ಕಳುಹಿಸಿ, ಪಾಕಿಸ್ತಾನದ ಚಿಹ್ನೆ ಇರುವ ಜಿಪಿಎಸ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಸೇನೆ ಮುಂಜಾವು ನಾಲ್ಕಕ್ಕೆ ಸೇನೆ ವಾಪಸ್ಸಾಯಿತು. ಕ್ರಾಂತಿವೀರ ಭಗತ್ ಸಿಂಹನ ಜನ್ಮದಿನಕ್ಕೆ ತಾಯಿ ಭಾರತಿಗೆ ಇಂತ ಭವ್ಯ ಉಡುಗೊರೆಯಲ್ಲದೆ ಇನ್ನೇನು ಬೇಕು?

                  ಅಟ್ಟಾಡಿಸಿ ಬಡಿದದ್ದಾಗಿದೆ. ಹಾಗಂತ ಮೈಮರೆಯಲು ಸಾಧ್ಯವೇ? ಪಾಕಿಸ್ತಾನ ಈಗ ಗಾಯಗೊಂಡಿದೆ. ಗುಂಡಿನ ಮೊರೆತದ ಶಬ್ಧದ ಉತ್ಪಾದನೆಯಷ್ಟೇ ಮೆದುಳಲ್ಲಿ ಉಂಟಾಗಬಲ್ಲ ಪಾಕ್ ಯಾವ ರೀತಿ ಎರಗುತ್ತದೆ ಎಂದು ಹೇಳಲಾಗದು. ಅತ್ತ ಎಲ್ಲ ಪಕ್ಷಗಳ ಬೆಂಬಲವನ್ನೂ ಪಡೆದುಕೊಂಡ ಮೋದಿ ಮುಂದಿನ ನಡೆಗೂ ಸಿದ್ಧರಾಗಿಯೇ ಇದ್ದಾರೆ. ಗಡಿಯಂಚಿನ ಎಲ್ಲ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಸೇನೆಯನ್ನು ಸನ್ನದ್ಧವಾಗಿರಿಸಲಾಗಿದೆ. ಮುಂದೆ ಉಂಟಾಗಬಹುದಾದ ಘಾತಗಳನ್ನು ಎದುರಿಸಲು ಕಳೆದ ಹನ್ನೊಂದು ದಿವಸದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಯಾಗಿದೆ. "ನಾವು ಪಾಕಿಸ್ತಾನದ ಗಡಿಯನ್ನು ಉಲ್ಲಂಘಿಸಲೇ ಇಲ್ಲ. ಏಕೆಂದರೆ ಪಾಕ್ ಆಕ್ರಮಿತ ಕಾಶ್ಮೀರ ಅಧಿಕೃತವಾಗಿ ಭಾರತದ್ದೇ. ಅಲ್ಲಿನ ಉಗ್ರರನ್ನು ಭಾರತದ ಮಿಲಿಟರಿ ಸಂಹರಿಸಿದೆ ಅಷ್ಟೆ" ಎನ್ನುವ ಹೇಳಿಕೆ ಕೊಟ್ಟು ಜಾಗತಿಕ ವೇದಿಕೆಯಲ್ಲಿ ತಪ್ಪು ಪಾಕಿಸ್ತಾನದ್ದೇ, ಅದೇ ಕಾಶ್ಮೀರವನ್ನು ಹಿಂದೊಮ್ಮೆ ಆಕ್ರಮಿಸಿದ್ದು ಎಂದು ಬಿಂಬಿಸಲಾಗಿದೆ. ಸರ್ವಸನ್ನದ್ಧವಾಗಿ ಶತ್ರುವನ್ನು ಸರ್ವರೀತಿಯಲ್ಲೂ ಮುತ್ತಿ ಬೆಚ್ಚಿಬೀಳಿಸುವುದೆಂದರೆ ಹೀಗೆ. ಈ ಹನ್ನೊಂದು ದಿನದ ಸಿದ್ಧತೆ ಕೇವಲ ಪಾಕಿಸ್ತಾನವನ್ನು ಎದುರಿಸಲು ಮಾತ್ರವಲ್ಲ, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ನಿರ್ದೋಷಿತ್ವವನ್ನು ಸಾಬೀತು ಮಾಡುತ್ತಲೇ ಪಾಕಿಸ್ತಾನವನ್ನು ತರಿಯುವ ಸಿದ್ಧತೆಯೂ ಆಗಿತ್ತು. ಗುರುವಾರ ಬೆಳ್ಳಂಬೆಳಗ್ಗೆ ಉರಿದಾಳಿಯಾದ ಹನ್ನೊಂದು ದಿನಗಳ ಬಳಿಕ "ಉರಿದಾಳಿಗೆ ಸಂತಾಪ, ಕಳವಳ ವ್ಯಕ್ತಪಡಿಸಲು" ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಜಿತ್ ಧೋವಲ್ ಜೊತೆ ಕರೆ ಮಾಡಿ ಮಾತಾಡುತ್ತಾರೆಂದರೆ ಭಾರತದ ಈ ದಾಳಿಯ ಬಗ್ಗೆ ಅಮೇರಿಕಾಕ್ಕೆ ಗುಮಾನಿ ಬಂದಿರಲೇಬೇಕೆಂದಲ್ಲವೇ. ಆದರೆ ಇದಕ್ಕೆ ಸಿದ್ಧವಾಗಿದ್ದ ಭಾರತ ತನ್ನನ್ನು ಸಮರ್ಥಿಸಿಕೊಂಡುದುದು ಮಾತ್ರವಲ್ಲದೆ "ಅಣ್ವಸ್ತ್ರದ ವಿಚಾರದಲ್ಲಿ ಭಾರತದ ಜವಾಬ್ದಾರಿ ಬಗ್ಗೆ ಜಗತ್ತಿಗೆ ವಿಶ್ವಾಸವಿದೆ, ಆತಂಕವಿರುವುದು ಪಾಕಿಸ್ತಾನದ ಬಗ್ಗೆಯೇ" ಎಂಬ ಅಭಿಪ್ರಾಯವೂ ಹೊರಹೊಮ್ಮುವಂತೆ ಮಾಡಿತು.

                 ಪದ್ಮಾವತಿಯ ಸ್ವರ್ಗದ ದೇವತೆಗಳಿಗೆ ನರಕದ ದ್ವಾರ ತೋರಿಸಿದೆ ಭಾರತೀಯ ಸೇನೆ! ಇಂತಹ ಒಂದು ಪ್ರತೀಕಾರಕ್ಕೆ ಸೇನೆ ಕಾದಿತ್ತು. ಜನತೆ ಕಾದಿತ್ತು. ದೇಶಕ್ಕೆ ದೇಶವೇ ಕಾದಿತ್ತು. ವಿಡಂಬನೆ ಏನು ಗೊತ್ತಾ ಭಾರತ ತಿರುಗೇಟು ನೀಡಿದರೆ ಅಣ್ವಸ್ತ್ರ ಉಪಯೋಗಿಸುತ್ತೇವೆ ಎಂದು ಹೇಳಿದ್ದ ಪಾಕ್ ಇಂದು ಭಾರತ ಅಂತಹ ಕಾರ್ಯಾಚರಣೆ ನಡೆಸಿಯೇ ಇಲ್ಲ ಎಂದು ವಾದ ಹೂಡಿದ್ದು. ಇಷ್ಟರವರೆಗೆ "ಈ ದಾಳಿಯನ್ನು ನಾವು ಖಂಡಿಸುತ್ತೇವೆ. ಶಾಂತಿಯನ್ನು ಕಾಪಾಡುವ ನಮ್ಮ ಇಚ್ಛಾಶಕ್ತಿಯನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು" ಎನ್ನುವ ಅಣಿಮುತ್ತುಗಳು ಭಾರತದ ಪ್ರಧಾನಿಗಳಿಂದ ಉದುರುತ್ತಿತ್ತು. ಇದೇ ಮೊದಲ ಬಾರಿಗೆ ಪಾಕ್ ಪ್ರಧಾನಿಯೊಬ್ಬರಿಂದ ಆ ಕ್ಷೀಣ ಸ್ವರ ಹೊರಟಿದೆ. ಅನ್ಯಾಯದ ವಿರುದ್ಧ ಸೆಟೆದು ನಿಂತಾಗ ಅನ್ಯಾಯಗಾರ ತೆಪ್ಪಗಾಗುತ್ತಾನೆ ಎನ್ನುವುದಕ್ಕೆ ನಿದರ್ಶನ ಇದು. ರುಧಿರಾಭಿಷೇಕದ ಬಳಿಕ ವಾರಣಾಸಿಯಲ್ಲಿ ಗಂಗಾರತಿಯೂ ಆಗಿದೆ. ದೇಶದೆಲ್ಲೆಡೆ ಜನ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಅತ್ತ ಇರಾನ್ ಕೂಡಾ ತನ್ನ ಕೈಚಳಕ ತೋರಿದೆ! ಪಾಕಿಸ್ತಾನದ ಗಡಿಯಲ್ಲಿ ಮೋರ್ಟಾರ್ ಶೆಲ್'ಗಳನ್ನು ತೂರಿದೆ.

ಕೊನೆಯ ಮಾತು: ದೇಶದೊಳಗಿರುವ ಪಾಕ್ ಪ್ರೇಮಿಗಳ ಮೇಲೂ ಪಾಕಿಸ್ತಾನದ ಮೇಲೆ ಆದ ಇಂತಹ ಒಂದು ಕಾರ್ಯಾಚರಣೆಯ ಆಗಬೇಕಾಗಿದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ