ಪುಟಗಳು

ಗುರುವಾರ, ಸೆಪ್ಟೆಂಬರ್ 22, 2016

ಶಿಲೆಯಲ್ಲೂ ಕಲೆಯ ಬೆಳಗಿದ ಕಲಿಯುಗದ ಅಹಲ್ಯೆ

ಶಿಲೆಯಲ್ಲೂ ಕಲೆಯ ಬೆಳಗಿದ ಕಲಿಯುಗದ ಅಹಲ್ಯೆ


                   ರಾಜಾ ಹರಿಶ್ಚಂದ್ರನ ಸತ್ಯಸಂಧತೆಗೆ ಸಾಕ್ಷೀಭೂತವಾಗಿದ್ದ ಕಾಶಿಯಲ್ಲಿ "ಸತ್ಯ ನಾಥ" ಬಟಾಬಯಲಲ್ಲಿ ನಿಂತಿದ್ದ. ಭೀಷ್ಮನ ಪರಾಕ್ರಮಕ್ಕೆ ಸಾಕ್ಷಿಯಾಗಿದ್ದ ಭೂಮಿಯಲ್ಲಿ ಔರಂಗಜೇಬನ ಮತಾಂಧತೆಯ ಎದುರು ಕ್ಷಾತ್ರವೇ ಸೊರಗಿ ಹೋಗಿತ್ತು. ವಿದ್ವಜ್ಜನರು ಆಶ್ರಯವಿಲ್ಲದೆ ನಿರ್ಗತಿಕರಾಗಿದ್ದರು. ಜನರು ಜಜಿಯಾ ತೆತ್ತು ಬದುಕುವ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆಲಯವಿಲ್ಲದೆ ದಿಗಂಬರನಾಗಿದ್ದ ಒಡೆಯನನ್ನು ಕಂಡು ಗಂಗೆ ಕಣ್ಣೀರು ಸುರಿಸುತ್ತಿದ್ದಳು. ಪಾಪಿ ಔರಂಗಜೇಬನಿಂದ ನಾಶಗೊಂಡು 70 ವರ್ಷಗಳ ಪರ್ಯಂತ ಮಣ್ಣಲ್ಲಿ ಮಣ್ಣಾಗಿದ್ದ ವಿಶ್ವನಾಥನ ಆಲಯವನ್ನು ಮತ್ತೆ ನಿರ್ಮಿಸಿ ರಾಷ್ಟ್ರೀಯ ಅಪಮಾನವೊಂದನ್ನು ಮುಕ್ತಿಗೊಳಿಸಿದಳು ಓರ್ವ ಮಹಿಳೆ! ಹೌದು, ಈ ದೇಶದ ಅದೆಷ್ಟೋ ರಾಜಮಹಾರಾಜರುಗಳಿಂದ ಸಾಧ್ಯವಾಗದೇ ಉಳಿದಿದ್ದ ಧೀರಕಾರ್ಯವನ್ನು ಮಾಡಿ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗುಳಿದ ಆ ಮಹಾಮಾತೆ ಅಹಲ್ಯಾಬಾಯಿ ಕಟ್ಟಿದ ಶಿವಾಲಯವೇ ಇಂದಿಗೂ ಕಾಶಿ ವಿಶ್ವೇಶ್ವರನ ಸದನವಾಗಿದೆ.

              ಮಧ್ಯಾಹ್ನದ ಸಮಯ. ಸುಶೀಲೆ ಭೋಜನಕ್ಕೆ ಆಗಷ್ಟೇ ಕೂತಿದ್ದಾಳೆ. ಇನ್ನೇನು ಊಟಕ್ಕೆ ಅನುವಾಗಬೇಕು ಎನ್ನುವಾಗ ಹೊರಗಿನಿಂದ “ಅಮ್ಮಾ ಬಿಕ್ಷಾಂದೇಹಿ”ಎನ್ನುವ ಕೂಗು. ಎದ್ದು ಹೊರಗೆ ಬಂದು ನೋಡಿದರೆ ಕಾಷಾಯಧಾರಿ. ತನ್ನ ಪಾಲಿನ ಅನ್ನವನ್ನು ಆತನಿಗೆ ಬಡಿಸಿದಳಾ ಗೃಹಿಣಿ. ಉಂಡು ತೃಪ್ತಿನಾದ ಸಂನ್ಯಾಸಿ, “ನಿನ್ನ ಸಂತತಿಗೆ ಶ್ರೇಯಸ್ಸುಂಟಾಗಲಮ್ಮ” ಎಂದು ಹರಸಿದ. ಸುಶೀಲೆ ಕಣ್ಣೊರೆಸಿಕೊಂಡಳು. ಮಕ್ಕಳಿಲ್ಲದ ವಿಚಾರವರಿತ ಸಂನ್ಯಾಸಿ “ ದಂಪತಿಗಳೀರ್ವರೂ ಕೊಲ್ಲಾಪೂರದ ಮಹಾಲಕ್ಷ್ಮೀದೇವಿಯ ಸೇವೆ ಮಾಡಿ, ನಿಮಗೆ ಮಕ್ಕಳಾಗುತ್ತದೆ” ಎಂದು ಹರಸಿ ಹೋದ. ಸಂನ್ಯಾಸಿಯ ಮಾತಿನಂತೆ ಆ ದಂಪತಿಗಳು ಕೊಲ್ಲಾಪುರಕ್ಕೆ ತೆರಳಿ ದೇವಿಯ ಸೇವೆಗೈದರು. ಒಂದು ರಾತ್ರಿ ದಂಪತಿಗಳಿಗೆ ಸಿರಿಯು ಕನಸಿನಲ್ಲಿ ಕಾಣಿಸಿಕೊಂಡು “ನಿಮ್ಮ ಇಷ್ಟಾರ್ಥ ನೆರವೇರುತ್ತದೆ” ಎಂದು ಅನುಗ್ರಹಿಸಿದಂತಾಯಿತು. ಸಂತೋಷಗೊಂಡ ಅವರು ಊರಿಗೆ ಹಿಂತಿರುಗಿದರು. ಲಕ್ಷ್ಮಿಯ ಕೃಪೆಯಿಂದ 1725ರ ಒಂದು ಶುಭದಿನದಂದು ಸುಶೀಲೆ ಹೆಣ್ಣು ಮಗುವನ್ನು ಪ್ರಸವಿಸಿದಳು. ಆ ಮಗುವೇ ಇತಿಹಾಸದಲ್ಲಿ ಪ್ರಸಿದ್ಧಳಾದ ಅಹಲ್ಯಾಬಾಯಿ!

                 ಅಹಲ್ಯಾಬಾಯಿ ಔರಂಗಾಬಾದಿನ ಚೌಂಡಿ ಗ್ರಾಮದ ಮಾಣಕೋಜಿ ಪಟೇಲನ ಮಗಳು. ಹಿಂದುಳಿದ ವರ್ಗದಲ್ಲಿ ಹುಟ್ಟಿದ್ದರೂ ಶಿಕ್ಷಣ - ಸಂಸ್ಕಾರದಲ್ಲಿ ಅವಳಿಗೆ ಕೊರತೆಯಾಗಲಿಲ್ಲ ಎನ್ನುವುದರಲ್ಲಿಯೇ ಆಧುನಿಕಪೂರ್ವ ಭಾರತದಲ್ಲಿ ಈಗಿನ ಸೆಕ್ಯುಲರುಗಳೆನ್ನುವಂತೆ "ತುಳಿತ" ಸಾರ್ವತ್ರಿಕವೂ, ಸರ್ವೇಸಾಮಾನ್ಯವೂ ಆಗಿರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ! ಆ ಕಾಲದಲ್ಲಿ ದೇಶದ ಯಾವುದೇ ಪ್ರಾಂತ್ಯದಲ್ಲೂ ಎಲ್ಲ ಬಗೆಯ ಆರ್ಥಿಕ-ಸಾಮಾಜಿಕ ಸ್ತರದವರಿಗೂ ಲಿಂಗಾತೀತವಾಗಿ ಆರ್ಷಸಂಸ್ಕೃತಿಯ ಅರಿವು-ಅನ್ವಯಗಳಿತ್ತು ಎನ್ನುವುದು ಇಂತಹ ಹಲವು ಉದಾಹರಣೆಗಳಿಂದ ಗೊತ್ತಾಗುತ್ತದೆ. ಧರ್ಮಪಾಲರ ಬರಹಗಳಿಂದಲೂ ಇದರ ಅರಿವಾಗುತ್ತದೆ. ಅವರು ಅಂಕಿಅಂಶಗಳ ಸಮೇತ ಆಂಗ್ಲರ ಮೊದಲಿನ ಹಾಗೂ ನಂತರದ ಭಾರತವನ್ನು ಚಿತ್ರಿಸಿಟ್ಟಿದ್ದಾರೆ. ಉತ್ತರಭಾರತದ ಪ್ರವಾಸ ಮುಗಿಸಿ ಪುಣೆಯತ್ತ ಹೊರಟಿದ್ದ ಸುಬೆದಾರ್ ಮಲ್ಹಾರಿ ರಾಯ ತನ್ನ ಸಂಗಡಿಗರ ಜೊತೆ ಚೌಂಡಿಯ ದೇವಾಲಯದಲ್ಲಿ ಆ ರಾತ್ರಿ ವಿಶ್ರಾಂತಿ ಪಡೆಯಲು ಬಂದಿದ್ದ. ಅಲ್ಲಿ ಸಾಧಾರಣ ರೂಪದ ಗಂಭೀರೆ ಅಹಲ್ಯೆಯನ್ನು ಕಂಡು ಅವಳಲ್ಲಿದ್ದ ರಾಜತೇಜಸ್ಸನ್ನು ಮನಗಂಡು ತನ್ನ ವಂಶವನ್ನು ಬೆಳಗಲು ಈಕೆ ತಕ್ಕ ಸೊಸೆಯೆಂದರಿತ. ಹೀಗೆ ಸುಯೋಗವೋ ಎನ್ನುವಂತೆ ಅಹಲ್ಯಾಬಾಯಿ ದಕ್ಷ ಮರಾಠ ನಾಯಕ, ಮಾಳವ ಸುಬೇದಾರ ಮಲ್ಹಾರೀ ರಾವ್ ಹೋಳ್ಕರನ ಮಗ ಖಂಡೇರಾಯನಿಗೆ ಪತ್ನಿಯಾದಳು. ಭೋಗಲಾಲಸಿ ಮಗನಿಂದ ರಾಜ್ಯ ಉದ್ಧಾರವಾಗದು ಎಂದು ಮನಗಂಡ ಮಲ್ಹಾರೀರಾಯ ವಿದ್ಯಾ-ವಿಕ್ರಮವಂತೆಯಾದ ಸೊಸೆಗೆ ರಾಜಕೀಯ ಶಿಕ್ಷಣ ನೀಡಿದ. ಯುದ್ಧವಿದ್ಯೆಯನ್ನೂ ಕಲಿಸಿದ. ಪಾಣಿಪತ್ ಕದನದ ಸಮಯದಲ್ಲಿ ತಾನೇ ಮುಂದೆ ನಿಂತು ಮದ್ದುಗುಂಡಿನ ವ್ಯವಸ್ಥೆ ಮಾಡಿದ್ದಳು ಅಹಲ್ಯಾಬಾಯಿ. ಆದರೆ ಮದುವೆಯಾದ ಕೆಲವೇ ಸಮಯದಲ್ಲಿ ಅಹಲ್ಯಾಬಾಯಿ ವಿಧವೆಯಾದಳು. ತನ್ನ ರಾಜಕೀಯ ಗುರು ಮಾವನನ್ನೂ ಕಳೆದುಕೊಂಡಳು. ಮಗ-ಮಗಳು-ಅಳಿಯನನ್ನೂ ಕಳೆದುಕೊಂಡು ಅಕ್ಷರಶಃ ಅನಾಥಳಾದಳು. ಇಂತಹ ದುರ್ಭರ ಸನ್ನಿವೇಶದಲ್ಲೂ ದೇಶಕ್ಕಾಗಿ ತಾನು ಬದುಕಿ ಎಲ್ಲಾ ಕಿರುಕುಳಗಳನ್ನೂ ಹತ್ತಿಕ್ಕಿ ಜಗತ್ತು ಮೂಗಿನ ಮೇಲೆ ಬೆರಳಿಡುವಂತೆ ಮೂವತ್ತುವರ್ಷಗಳ ಪರ್ಯಂತ ವಿಚಕ್ಷಣೆಯಿಂದ ರಾಜ್ಯವಾಳಿದಳು. ಮಾಳವವನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಿ ಶಾಂತಿ-ಸೌಖ್ಯ-ಸಾಂಸ್ಕೃತಿಕ ನಗರಿಯನ್ನಾಗಿಸಿದಳು.

                ಪತಿ ಹಾಗೂ ಮಾವನನ್ನೂ ಕಳೆದುಕೊಂಡು ದುಃಖಿತಳಾಗಿದ್ದ ಅಹಲ್ಯಾಬಾಯಿಗೆ ಮತ್ತೊಂದು ಸುದ್ದಿ ಬರಸಿಡಿಲಿನಂತೆ ಎರಗಿತು. ಮಗ ಮಾಲೇರಾಯ ಕಾಯಿಲೆ ಬಿದ್ದು ತೀರಿಕೊಂಡ. ಆಗ ಗಂಗಾಧರ ಯಶವಂತರಾಯ “ಹೆಂಗಸಾದ ನೀವು ರಾಜ್ಯಭಾರ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಯಾವುದಾದರೂ ಒಬ್ಬ ಹುಡುಗನನ್ನು ದತ್ತು ತೆಗೆದುಕೊಳ್ಳಿ. ಅವನು ದೊಡ್ಡವನಾಗುವವರೆಗೆ ನಾನೇ ರಾಜ್ಯವನ್ನು ಆಳುತ್ತಿರುತ್ತೇನೆ” ಎಂದು ಕುಟಿಲತೆಯಿಂದ ರಾಜ್ಯವನ್ನು ಕಬಳಿಸಲು ನೋಡಿದ. ಆದರೆ ಅಹಲ್ಯಾಬಾಯಿ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲಿಲ್ಲ. ಈ ಅವಮಾನದಿಂದ  ಯಶವಂತರಾಯನಿಗೆ ಪಿತ್ತ ನೆತ್ತಿಗೇರಿತು. ಇವಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಪೇಶ್ವೆ ಮಾಧವರಾಯನ ತಮ್ಮ ರಘುನಾಥರಾಯನಿಗೆ ಗುಟ್ಟಾಗಿ “ಹೋಳ್ಕರನ ಈ ರಾಜ್ಯಕ್ಕೆ ಈಗ ಗಂಡು ವಾರಸುದಾರರಿಲ್ಲ. ನೀವು ಇದನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದು. ಆದಷ್ಟು ಬೇಗ ಬನ್ನಿ” ಎಂದು ಪತ್ರ ಬರೆದ. ಹಿಂದುಮುಂದು ಯೋಚಿಸದ ರಘುನಾಥರಾಯ ಕೂಡಲೇ ಸೈನ್ಯ ಸಮೇತ ಹೊರಟುಬಿಟ್ಟ. ಆಗ ಅಹಲ್ಯಾಬಾಯಿಯ ನಂಬಿಕಸ್ಥ ದಿವಾನ ತುಕ್ಕೋಜಿರಾವ್ ಹೋಳ್ಕರ್ ಉತ್ತರಭಾರತದಲ್ಲಿ ಯುದ್ಧಕ್ಕೆ ತೆರಳಿದ್ದ. ಧೃತಿಗೆಡದ ಅಹಲ್ಯಾಬಾಯಿ ಯುದ್ಧಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿದಳು. ತಾನೇ ಸ್ವತಃ ನಿಂತು ತರಬೇತಿ ನೀಡಿದ ಮಹಿಳಾ ಪಡೆಯನ್ನು ಯುದ್ಧಕ್ಕೆ ಅಣಿಗೊಳಿಸಿದಳು. ಅಕ್ಕಪಕ್ಕದ ಸೀಮೆಯವರಾದ ಭೋಂಸ್ಲೆ, ಗಾಯಕವಾಡ್ ರಾಜರುಗಳಿಗೆ ಸಹಾಯ ಯಾಚಿಸಿ ಪತ್ರಗಳನ್ನು ಬರೆದಳು. ಇತ್ತ ರಘುನಾಥರಾಯನಿಗೂ ಒಂದು ಪತ್ರ ಬರೆದು, “ಮೀಸೆ ಹೊತ್ತ ಗಂಡಸರಿಗೆ ಹೆಣ್ಣೊಬ್ಬಳ ಬಳಿ ಕಾದಾಟ ಶೋಭೆಯೇ? ಹೆಣ್ಣೊಬ್ಬಳಿಂದ ಸೋತರೆ ನೀವು ಯಾರಿಗೂ ಮುಖ ತೋರಿಸುವಂತಿಲ್ಲ. ನೀವು ಬದುಕಿರುವವರೆಗೂ ಆ ಕೆಟ್ಟ ಕಳಂಕ ನಿಮಗೆ ಅಂಟಿಯೇ ಇರುತ್ತದೆ. ಹಾಗಾಗಿ ಯೋಚಿಸಿಯೇ ಮುಂದೆ ಬರುವುದೊಳಿತು” ಎನ್ನುತ್ತಾ ಚಾಣಾಕ್ಷ ತಂತ್ರವೊಂದನ್ನು ಉಪಯೋಗಿಸಿದಳು. ಈ ಪತ್ರ ರಘುನಾಥರಾಯನ ಜಂಘಾಬಲವನ್ನೇ ಉಡುಗಿಸಿತು. ಅಹಲ್ಯಾಬಾಯಿಯ ಸೇನಾ ಸಿದ್ಧತೆಯನ್ನು ಕೇಳಿದ್ದ ಹಾಗೂ ಅವಳ ರಣವಿಕ್ರಮದ ಅರಿವಿದ್ದ ಆತ ಮರ್ಯಾದೆ ಉಳಿಸಿಕೊಳ್ಳುವುದೇ ಮೇಲೆಂದು ಭಾವಿಸಿ ಅಹಲ್ಯಾಬಾಯಿಗೆ “ನಿಮ್ಮ ಮಗನ ಸಾವಿನಿಂದ ದುಃಖವಾಗಿದೆ. ಸಮಾಧಾನ ಹೇಳುವುದಕ್ಕಾಗಿಯೇ ನಾವು ಬಂದದ್ದು. ಆದರೆ ನೀವು ತಪ್ಪು ತಿಳಿದಿರುವಂತಿದೆ” ಎಂದು ಉತ್ತರಿಸಿದ. ರಘುನಾಥರಾಯನ ಈ ರೀತಿಯ ಶರಣಾಗತಿಯಿಂದ ಅಹಲ್ಯಾಬಾಯಿಯ ಕೀರ್ತಿ ಉತ್ತುಂಗಕ್ಕೇರಿತು.

                ಅಹಲ್ಯಾಬಾಯಿ ಯುದ್ಧಗಳನ್ನು ಆದಷ್ಟು ಮುಂದೂಡುತ್ತಿದ್ದಳು. ಯುದ್ಧದಿಂದ ವಿನಾಶ, ಜನಸಾಮಾನ್ಯರು ಕಷ್ಟಕ್ಕೆ ಈಡಾಗುತ್ತಾರೆ ಎಂದು ತಿಳಿದಿದ್ದಳು. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ರಣಚಂಡಿಯಾಗುತ್ತಿದ್ದಳು. ಸ್ವಯಂ ರಣರಂಗಕ್ಕಿಳಿಯುತ್ತಿದ್ದ ಈ ತರುಣಿ ಚಂದ್ರಚೂಡ, ರಾಘೋಬಾರನ್ನು ದಿಟ್ಟತನದಿಂದ ಎದುರಿಸಿ ಬಡಿದಟ್ಟಿದಳು. ದಾಳಿಯೆಸಗಿದ ಚಂದ್ರಾವತದ ರಾಜಪುತ್ರರನ್ನು ಒದ್ದೋಡಿಸಿದಳು. ಸ್ತ್ರೀಶಕ್ತಿಯ ಪಡೆಯೊಂದನ್ನು ಕಟ್ಟಿದಳು. ಇಂದೋರಿನಿಂದ ಪುರಾಣ ಪ್ರಸಿದ್ಧ ಮಾಹಿಷ್ಮತಿ(ಮಹೇಶ್ವರ)ಗೆ ಬಂದು ಆ ಊರನ್ನು ಭವ್ಯ ದೇಗುಲಗಳಿಂದ, ಸ್ನಾನಘಟ್ಟಗಳಿಂದ, ವಿವಿಧ ಉದ್ಯಮ-ಅಭಿವೃದ್ಧಿ ಕಾರ್ಯಗಳಿಂದ ಅಲಂಕರಿಸಿದಳು. ಅವಳದ್ದು ಚಾಣಾಕ್ಷ-ಆದರ್ಶ ಪ್ರಜಾಪಾಲನೆ. ಕ್ಷಾತ್ರಧರ್ಮಕ್ಕೆ ಚ್ಯುತಿ ತಾರದ ಆಡಳಿತ. ಪ್ರಜೆಗಳಿಗೆ ಚೋರರ ಭಯವಿರಲಿಲ್ಲ. ದುಷ್ಟ ಅಧಿಕಾರಿಗಳ ತೊಂದರೆಯೂ ಇರಲಿಲ್ಲ. ದೀನದಲಿತರಿಗೆ ಅನ್ನಾಶ್ರಯ, ವಿದ್ವಜ್ಜನರಿಗೆ ಗೌರವ, ಅನವಶ್ಯಕ ಕರಭಾರವಿಲ್ಲದ ದಕ್ಷ ಆಡಳಿತ, ವೈಯುಕ್ತಿಕ ಶುದ್ಧ ಚಾರಿತ್ರ್ಯದ ಸರಳ ಜೀವನ ಹೀಗೆ ಸನಾತನ ಧರ್ಮಕ್ಕೆ ಕಿರೀಟಪ್ರಾಯವಾದ ಆಡಳಿತ ಅವಳದ್ದು. ಸ್ತ್ರೀಧನ, ವಿಧವಾ ಸೌಕರ್ಯ, ದತ್ತುಸ್ವೀಕಾರಕ್ಕೆ ಅವಳು ಮಾಡಿದ ಕಾನೂನುಗಳು ಸರ್ವಕಾಲಕ್ಕೂ ಅನುಕರಣೀಯ. ಅವಳ ಪ್ರಜಾವಾತ್ಸಲ್ಯ, ಸ್ವಯಂ ಬೇಹುಗಾರಿಕೆ, ಪ್ರಾಮಾಣಿಕ ಅಧಿಕಾರಿಗಳ, ಸೇವಕರ ಮೇಲಿನ ಔದಾರ್ಯ-ಹಿತಚಿಂತನೆಗಳು ದಂತಕಥೆಗಳೇ ಆಗಿ ಹೋಗಿವೆ. ತಾಯಿಯಂತೆ ಅವಳು ರಾಜ್ಯವನ್ನು ಪರಿಪಾಲಿಸಿದಳು. ದರೋಡೆಕೋರರನ್ನೂ ಚತುರೋಪಾಯಗಳಂದ ಮಣಿಸಿ ಸಂಸ್ಕರಿಸಿ ನಾಗರಿಕರನ್ನಾಗಿಸುತ್ತಿದ್ದಳು. ಕಳ್ಳರ ನಿಯಂತ್ರಣ ಮಾಡುವ ವೀರನಿಗೆ ಮಗಳು ಮುಕ್ತಾಬಾಯಿಯನ್ನು ಧಾರೆಯೆರೆಯುವುದಾಗಿ ಸಾರಿ ಅದರಂತೆ ನಡೆದು ವಿಕ್ರಮ ತೋರಿದ ಸಾಮಾನ್ಯ ಯೋಧ ಯಶವಂತರಾಯನನ್ನು ಅಳಿಯನನ್ನಾಗಿಸಿಕೊಂಡ ರಾಜಕೀಯ ಚತುರಮತಿ ಆಕೆ. ನ್ಯಾಯ ನಿರ್ಣಯದಲ್ಲಂತೂ ಆಕೆ ಅಸಮಾನಳು.

                    ಒಮ್ಮೆ ಶ್ರೀಮಂತ ವಿಧವೆಯೊಬ್ಬಳು ತನ್ನ ಅಪಾರ ಸಂಪತ್ತಿಗೆ ವಾರಸುದಾರನನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದಾಗ ಅಧಿಕಾರಿಗಳು ಅದಕ್ಕೆ ಅನುಮತಿಸಲಿಲ್ಲ. ತನ್ನ ಆಸ್ತಿಯ ಒಂದಂಶವನ್ನು ಸರ್ಕಾರಕ್ಕೆ ನೀಡಿದರೆ ಮಾತ್ರ ಆಕೆ ದತ್ತು ತೆಗೆದುಕೊಳ್ಳಬಹುದೆಂದು ಅವರ ನಿರ್ಧಾರವಾಗಿತ್ತು. ಬೇರೆ ದಾರಿ ಕಾಣದ ಆ ವಿಧವೆ ಈ ವಿಷಯವನ್ನು ರಾಣಿಯ ದರ್ಬಾರಿನಲ್ಲಿ ಪ್ರಸ್ಥಾಪಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಂಡಳು. ದತ್ತು ತೆಗೆದುಕೊಳ್ಳಲು ಅನುಮತಿ ನೀಡಬಹುದೆಂದೂ, ಆದರೆ ಸರ್ಕಾರಕ್ಕೆ ಆ ವಿಧವೆಯ ಸಂಪತ್ತಿನಲ್ಲಿ ಕೆಲವಂಶವನ್ನು ಸಲ್ಲಿಸಬೇಕೆಂದು ಆಸ್ಥಾನದಲ್ಲಿ ನೆರೆದಿದ್ದ ಎಲ್ಲ ಅಧಿಕಾರಿಗಳ ಅಭಿಪ್ರಾಯವಾಗಿತ್ತು. ಆದರೆ ಅಹಲ್ಯಾಬಾಯಿ ಅವರ ಸಲಹೆಯನ್ನು ಒಪ್ಪದೆ, ವಿಧವೆಗೆ ಸ್ವಾಭಾವಿಕವಾಗಿ ಅವಳ ಗಂಡನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕಿರುವುದರಿಂದ ಸರ್ಕಾರಕ್ಕೆ ಅದರಲ್ಲಿ ಭಾಗ ಪಡೆಯುವ ಯಾವ ಅಧಿಕಾರವೂ ಇಲ್ಲವೆಂದೂ, ಆ ವಿಧವೆ ತನ್ನಿಷ್ಟದಂತೆ ದತ್ತು ಪಡೆಯಬಹುದೆಂದೂ ಆದೇಶಿಸಿದಳು. ರಾಣಿಯ ನ್ಯಾಯ ತೀರ್ಮಾನದಿಂದ ಪ್ರಭಾವಿತಳಾದ ಆ ಮಹಿಳೆ ತನ್ನ ಸಮಸ್ತ ಸಂಪತ್ತನ್ನು ರಾಣಿಯೇ ವಹಿಸಿಕೊಂಡು ಅದನ್ನು ಜನೋಪಕಾರಿ ಕೆಲಸಗಳಿಗೆ ವಿನಿಯೋಗಿಸಬೇಕೆಂದೂ, ತಾನು ದತ್ತು ತೆಗೆದುಕೊಳ್ಳುವ ವಿಚಾರದಿಂದ ಹಿಂದೆ ಸರಿದಿರುವುದಾಗಿ ನುಡಿದಳು. ವಿಧವೆಯ ಮಾತನ್ನು ಕೇಳಿದ ಎಲ್ಲ ಸಭಾಸದರೂ, ಸ್ವತಃ ರಾಣಿಯೂ ಆಶ್ಚರ್ಯ ಚಕಿತರಾದರು. ರಾಣಿಯು ವಿಧವೆಯ ಮಾತನ್ನು ಒಪ್ಪದೆ, ಆ ಆಸ್ತಿಗೆ ಅವಳೇ ಒಡೆಯಳಾಗಿರುವುದರಿಂದ ಅದನ್ನು ಅವಳಿಷ್ಟ ಬಂದಂತೆ ಸದ್ವಿನಿಯೋಗ ಮಾಡಬಹುದೆಂದು ತಿಳಿಸಿದಳು. ರಾಣಿಯ ಮಾತುಗಳಿಂದ ಪ್ರಭಾವಿತಳಾದ ವಿಧವೆ ತನ್ನ ಸಂಪತ್ತನ್ನು ಸಮಾಜೋಪಯೋಗಿ ಕಾರ್ಯಗಳಿಗೆ ಬಳಸಿ ಎಲ್ಲರ ಗೌರವಾದರಕ್ಕೆ ಪಾತ್ರಳಾದಳು. ಇಂತಹ ಹಲವು ನಿದರ್ಶನಗಳು ಅಹಲ್ಯಾಬಾಯಿಯ ನ್ಯಾಯಪರತೆಗೆ ಸಾಕ್ಷಿಯಾಗಿವೆ.

                 ಅಹಲ್ಯಾ ಬಾಯಿಯ ಮಗ ಮಾಲೋಜಿ ಮಹಾಕ್ರೂರಿಯಾಗಿದ್ದ. ಅವನೊಮ್ಮೆ ಮುದ್ದು-ಮುಗ್ಧ ಕರುವಿನ ಮೇಲೆ ತನ್ನ ರಥವನ್ನು ಹಾಯಿಸಿಬಿಟ್ಟ. ತನ್ನ ಕರುವನ್ನು ಕಳೆದುಕೊಂಡ ಹಸು ತ್ವರಿತ ನ್ಯಾಯಕ್ಕಾಗಿ ಕಟ್ಟಿದ್ದ ಗಂಟೆಯ ಹಗ್ಗವನ್ನು ಎಳೆದೇ ಬಿಟ್ಟಿತು. ಮಾತು ಬಾರದ ಗೋಮಾತೆ ಮಾತಿಗೆ ಮೀರಿದ ವೇದನೆಯನ್ನು ಘಂಟಾನಾದದ ಮೂಲಕ ವ್ಯಕ್ತಪಡಿಸಿತ್ತು! ತಕ್ಷಣ ಹೊರಬಂದು ನೋಡಿ ಆಶ್ಚರ್ಯಗೊಂಡು ಗೋವಿನ ಮಾಲಕನ ಮೂಲಕ ನಿಜ ವಿಷಯ ಅರಿತ ಅಹಲ್ಯೆಯ ಮುಖದಿಂದ ಅಗ್ನಿವರ್ಷದಂತಹ ಆಜ್ಞೆಯೇ ಹೊರಹೊಮ್ಮಿತು. ಆಕೆ "ಮಾಲೋಜಿಯ ಕೈ-ಕಾಲು ಕಟ್ಟಿ, ಕರುವಿನ ಪ್ರಾಣಹರಣವಾದ ಸ್ಥಳದಲ್ಲಿಯೇ ಕೆಡವಿ, ಯಾವ ರಥವೇರಿ ಆ ಘೋರ ಕೃತ್ಯವನ್ನಾತ ನಡೆಸಿದ್ದನೋ ಅದೇ ರಥವನ್ನು ಆತನಮೇಲೆ ಹರಿಸಬೇಕೆಂದು" ಆಜ್ಞಾಪಿಸಿದಳು. ಯಾರೂ ರಾಜವಂಶದ ಕುಡಿಯ ಕೊಲೆಗೆ ಒಪ್ಪದಿದ್ದಾಗ ತಾನೇ ರಥವೇರಿ ಹಾಯಿಸಲು ಮುಂದಾದಳು. ಏನಾಶ್ಚರ್ಯ...ತನ್ನ ಕರುವನ್ನು ಕಳೆದುಕೊಂಡು ಅತೀವ ದುಃಖಗೊಳಗಾಗಿ ನ್ಯಾಯ ಬೇಡಿದ್ದ ಅದೇ ಗೋಮಾತೆ ರಥಕ್ಕೆ ಅಡ್ಡಲಾಗಿ ನಿಂತುಕೊಂಡಿತು. ಏನೋ ಕಾಕತಾಳೀಯ ಇರಬೇಕೆಂದು ಮತ್ತೆ ಮತ್ತೆ ಯತ್ನಿಸಲಾಗಿಯೂ ಗೋಮಾತೆ ಅಡ್ಡಬಂದು ರಾಜಕುಮಾರನನ್ನು ರಕ್ಷಿಸಿತು. ಆ ಸ್ಥಳಕ್ಕೆ ಇಂದಿಗೂ ಆಡಾ ಬಜಾರ್ ಎಂದು ಕರೆಯಲಾಗುತ್ತಿದೆ. ಹೀಗೆ ತನ್ನ ಮಗನೆಂಬ ಮಮಕಾರವನ್ನು ಬದಿಗಿಟ್ಟು ವಜ್ರಕಠೋರ ನಿರ್ಧಾರವನ್ನು ಕೈಗೊಂಡು ಸ್ವತಃ ಮಾಡಿ ತೋರಿಸಿದ ನ್ಯಾಯತಪರತೆ ಅವಳದ್ದು.

                  ಕೃಷಿ, ಗೋರಕ್ಷೆ, ವಾಣಿಜ್ಯಕ್ಕೆ ಒತ್ತಾಸೆಯಾಗಿ ಅದ್ಭುತ ದಂಡನೀತಿಯಿಂದ ಪ್ರಜಾನುರಾಗಿಯಾಗಿ, ಸುಸಜ್ಜಿತ ಸೈನ್ಯ, ಸದಾ ತುಂಬಿತುಳುಕುವ ಬೊಕ್ಕಸದಿಂದ ಮಾಳವ ಪ್ರಾಂತವನ್ನು ಶ್ರೀಮಂತಗೊಳಿಸಿದಳು. ಅಹಲ್ಯಾಬಾಯಿಯು ಮಾವ ಕುಳಿತ ಚಿನ್ನದ ಸಿಂಹಾಸನದ ಮೇಲೆ ಕೂರದೆ ನೆಲಹಾಸಿಗೆಯ ಮೇಲೆ ಕುಳಿತು ರಾಜಸಭೆಯನ್ನು ನಡೆಸುತ್ತಿದ್ದಳು. ತನ್ನ ಖಾಸಗಿ ಬೊಕ್ಕಸಕ್ಕೆ ಸೇರಿದ ಹದಿನಾರು ಕೋಟಿ ರೂಪಾಯಿಗಳೆಲ್ಲವನ್ನೂ ದೇಶಹಿತಕ್ಕೆ ವಿನಿಯೋಗಿಸಿದ ಕರ್ಮಯೋಗಿನಿಯಾಕೆ. ಪುಣೆಯ ದರ್ಬಾರಿನಲ್ಲಿ ಅವಳ ಮಾತಿಗೆ ಸದಾ ಪ್ರಥಮ ಪ್ರಾಶಸ್ತ್ಯವಿರುತ್ತಿತ್ತು. ಇಡಿಯ ಮರಾಠವಾಡೆ ಆಕೆಯನ್ನು ತಾಯಿಯಂತೆ ಆರಾಧಿಸುತ್ತಿತ್ತು. ಸಂಸ್ಥಾನವೊಂದರ ಅಧಿಕಾರಿಣಿಯಾಗಿದ್ದರೂ ಬಿಳಿಯ ಸೀರೆ ಧರಿಸಿ, ಭಸ್ಮ ಬಳಿದು ನಿಸ್ಪೃಹಳಾಗಿ ಸಂನ್ಯಾಸಿನಿಯಂತೆ ಜೀವನ ಸಾಗಿಸಿದ ತಪಸ್ವಿನಿ ಅವಳು. ಅಹಲ್ಯಾಬಾಯಿ ತನ್ನ ಮುಖಸ್ತುತಿಯನ್ನು ಎಂದೂ ಇಷ್ಟಪಡುತ್ತಿರಲಿಲ್ಲ. ಒಮ್ಮೆ ಪಂಡಿತ್ ಕುಶಾಲಿ ರಾಮ್ ಅಹಲ್ಯಾಬಾಯಿಯ ಧರ್ಮ ಕಾರ್ಯಗಳು ಮತ್ತು ಅವಳ ಸದ್ಗುಣಗಳ ವರ್ಣನೆಯುಳ್ಳ 'ಅಹಲ್ಯಾಬಾಯಿ ಕಾಮಧೇನು' ಎಂಬ ಹಲವು ಸಾವಿರ ಪದ್ಯಗಳ ಕೃತಿರಚಿಸಿ ಅವಳ ಸಮ್ಮುಖದಲ್ಲಿ ಓದಲು ತೊಡಗಿದಾಗ ನನ್ನ ಬಗ್ಗೆ ಬರೆದು ಜೀವನವನ್ನೇಕೆ ವ್ಯರ್ಥ ಮಾಡುತ್ತಿ. ದೇವರ ಬಗ್ಗೆ ಬರೆ ಎಂದು ಬುದ್ಧಿವಾದ ಹೇಳಿದಳು. ಪಂಡಿತ ಹೊರಟುಹೋದ ಬಳಿಕ ಆ ಕೃತಿಯನ್ನು ನರ್ಮದೆಯಲ್ಲಿ ಬಿಸುಟಲು ಆಜ್ಞಾಪಿಸಿದಳು. ಸಂಸ್ಕೃತ, ಮರಾಠಿ, ಹಿಂದಿಗಳಲ್ಲಿ ಪಾಂಡಿತ್ಯ ಹೊಂದಿದ್ದು, ರಾಜ್ಯದ ಸರ್ವಸ್ವವೂ ಶಿವಾರ್ಪಣೆಯೆಂದುಸುರಿ ತಾನು ಹೊರಡಿಸುವ ಆಜ್ಞೆಗಳೆಲ್ಲದರ ಮೇಲೆ "ಶ್ರೀಶಂಕರ" ಎಂದು ಸಹಿ ಮಾಡುತ್ತಿದ್ದಳಾಕೆ. ಸರ್ವ ಮತ-ಸಂಪ್ರದಾಯಗಳನ್ನೂ, ಕವಿಪಂಡಿತರನ್ನು, ಕಲೆಸಾಹಿತ್ಯಗಳನ್ನು ಪೋಷಿಸಿ ಬೆಳೆಸಿದಳು. ಕಾಶಿಯಲ್ಲಿ ಬ್ರಹ್ಮಪುರಿಯೆಂಬ  ಮಹಾ ಅಗ್ರಹಾರವನ್ನೇ ಸ್ಥಾಪಿಸಿ ಆಜೀವ ಪರ್ಯಂತ ಅಶನ-ವಸನ-ಸಂಭಾವನೆಗಳ ವ್ಯವಸ್ಥೆ ಮಾಡಿದಳು. ಸಂಸ್ಕೃತ ಪಾಠ ಶಾಲೆಗಳನ್ನು ಪ್ರಾರಂಭಿಸಿದಳು.

                ರಾಷ್ಟ್ರದ ಎಲ್ಲಾ ಪ್ರಮುಖ ನಗರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಅಹಲ್ಯಾಬಾಯಿಯ ಅಧಿಕಾರಿಗಳೂ, ಆಶ್ರಯಸ್ಥಾನಗಳೂ ಇದ್ದವೆಂದರೆ ಅವಳ ದೂರದೃಷ್ಟಿ ಅರಿವಾದೀತು. ಆಸೇತುಹಿಮಾಚಲದ ಎಲ್ಲಾ ಪುಣ್ಯಕ್ಷೇತ್ರಗಳಲ್ಲೂ ಮಂದಿರ-ಧರ್ಮಛತ್ರ-ಸತ್ರ-ಸ್ನಾನಘಟ್ಟಗಳನ್ನು ನಿರ್ಮಾಣ ಮಾಡಿದಳು. ನರ್ಮದಾ ಪರಿಕ್ರಮಕ್ಕೆ ಇವಳ ಯೋಗದಾನ ಅಪರಿಮಿತ. ಅವಳು ನಿರ್ಮಿಸಿದ ಕೆರೆ, ಬಾವಿ, ಕಟ್ಟೆ-ಅಣೆಕಟ್ಟು, ಮಂಟಪ, ತೋಪುಗಳು ಲೆಖ್ಖವಿಲ್ಲದಷ್ಟು. ಶಿವರಾತ್ರಿಯಂತಹ ವಿಶೇಷ ದಿನಗಳಂದು ಗಂಗೋತ್ರಿಯಿಂದ ಗಂಗಾಜಲವನ್ನು ತಂದು ಎಲ್ಲಾ ದೇವಾಲಯಗಳಲ್ಲೂ ಅಭಿಷೇಕಗೈಯ್ಯುವ ವ್ಯವಸ್ಥೆಯನ್ನು ಅವಳು ರೂಪಿಸಿದ್ದಳು. ಗೋ, ಬ್ರಾಹ್ಮಣ, ಯಾತ್ರಿಕ, ಸಾಧು-ಸಂತರಿಗೆ ಆಶ್ರಯತಾಣಗಳನ್ನು ನಿರ್ಮಿಸಿದಳು. ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಗೋಮಾಳಗಳ ವ್ಯವಸ್ಥೆ, ಪ್ರಾಣಿ-ಪಕ್ಷಿಗಳಿಗಾಗಿ ಕಾಳು-ಹುಲ್ಲು-ನೀರುಗಳ ವ್ಯವಸ್ಥೆ ಮಾಡಿದ್ದಳು. ಜಲಚರಗಳ ಆಹಾರಕ್ಕೆ ಕೆರೆಕಟ್ಟೆಗಳಿಗೆ ಮೂಟೆ ಮೂಟೆ ಆಹಾರವನ್ನು ಸುರಿಸುತ್ತಿದ್ದಳು. ತನ್ನ ಸ್ವಂತ ಹಣದಿಂದ ಫಸಲಿಗೆ ಬಂದ ಹೊಲಗಳನ್ನು ಕೊಂಡು ಅವುಗಳನ್ನು ಪಕ್ಷಿಗಳಿಗಾಗಿ ಬಿಡುತ್ತಿದ್ದಳು. ದನಕರುಗಳು ಸಂಜೆ ಹಟ್ಟಿಗೆ ತೆರಳುವ ದಾರಿಯಲ್ಲಿ ನೀರು, ಹುಲ್ಲುಗಳನ್ನು ಒದಗಿಸಲು ಏರ್ಪಾಡು ಮಾಡಿದ್ದಳು. ಮೀನುಗಳಿಗಾಗಿ ನರ್ಮದಾ ನದಿಯಲ್ಲಿ  ಪ್ರತಿದಿನವೂ ಅಕ್ಕಿಯನ್ನು ಹಾಕುತ್ತಿದ್ದಳು. ಇರುವೆಗಳಿಗೆ ಸಿಹಿಹಿಟ್ಟಿನಗುಳಿಗೆಗಳನ್ನು ಸಿದ್ಧಪಡಿಸಿದ್ದಳೆಂದರೆ ಆಕೆ ಎಂತಹ ಸೂಕ್ಷ್ಮಮತಿಯಾಗಿರಬೇಕು. ಅಗಲವಾದ ರಸ್ತೆಗಳನ್ನು ಮಾಡಿಸಿ ಸಾಲುಮರಗಳನ್ನೂ, ಹಣ್ಣಿನ ಗಿಡಗಳನ್ನೂ ನೆಡಿಸಿದಳು. ಹೀಗೆ ಮತಾಂಧತೆಯಿಂದ ಜರ್ಝರಿತಗೊಂಡಿದ್ದ ದೇಶಕ್ಕೆ ಧೈರ್ಯ-ಸಾಂತ್ವನಗಳನ್ನು ನೀಡಿದಳು ಈ ಕಲಿಯುಗದ ಅಹಲ್ಯೆ. ಇವಳ ಕಾರಣದಿಂದ ಹಿಂದೂಗಳು ಜೆಜಿಯಾ, ತೀರ್ಥಯಾತ್ರಾಕರ, ತೀರ್ಥಸ್ನಾನಕರಗಳಿಂದ ಮುಕ್ತರಾಗಿ ಪುಣ್ಯಕ್ಷೇತ್ರ ದರ್ಶನ ಮಾಡುವಂತಾಯಿತು. ನಮ್ಮ ಕಲೆ-ಸಾಹಿತ್ಯ-ಉತ್ಸವ-ಸಂಸ್ಕೃತಿಗಳು ಪುನರುತ್ಥಾನಗೊಂಡವು.

                 ನರ್ಮದೆ, ಕ್ಷಿಪ್ರಾ ನದಿಗಳ ಮೂಲ ಪ್ರದೇಶದಲ್ಲಿ, ಅನೇಕ ಯಾತ್ರಾ ಸ್ಥಳಗಳಲ್ಲಿ  ಹಲವಾರು ಛತ್ರಗಳನ್ನೂ ದಾನ ಕೊಡುವ ಅಂಗಡಿಗಳನ್ನೂ ಕಟ್ಟಿಸಿದಳು. ಸೌರಾಷ್ಟ್ರದ ಸೋಮನಾಥ, ಗಯೆಯ ವಿಷ್ಣು, ಕಾಶಿ ವಿಶ್ವೇಶ್ವರಾಲಯಗಳನ್ನು ಜೀರ್ಣೊದ್ದಾರಗೊಳಿಸಿದಳು. ಕಲ್ಕತ್ತೆಯಿಂದ ಕಾಶಿಯವರೆಗಿನ ರಸ್ತೆಯನ್ನು ಸರಿಪಡಿಸಿದಳು. ಭಾರತೀಯ ಸಂಸ್ಕೃತಿಕೋಶದಲ್ಲಿ ಅವಳು ಕಟ್ಟಿಸಿದ ದೇವಾಲಯಗಳು, ಜೀಣೋದ್ಧಾರ ಮಾಡಿಸಿರುವ ದೇವಾಲಯಗಳು, ನಿತ್ಯಪೂಜೆಗಾಗಿ ನೀಡಿರುವ ಶಾಶ್ವತ ಉಂಬಳಿಗಳ ಪಟ್ಟಿಯೇ ಇದೆ. ಅವಳು ತೆಗೆದಿರಿಸಿರುವ ಹಣದಲ್ಲಿ ಇಂದಿಗೂ ಶಿವರಾತ್ರಿ, ಏಕಾದಶಿಗಳಂದು ಕೇಂದ್ರ ಸರ್ಕಾರದ ಮುಖಾಂತರ ಪ್ರತಿ ರಾಜ್ಯಕ್ಕೂ ಗಂಗಾಜಲ ವಿತರಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಾಣ ಮಾಡಿಸಿದಳು. ಪ್ರಮುಖವಾಗಿ ಭಾರತದ ದ್ವಾದಶ ಜ್ಯೋತಿರ್ಲಿಂಗಗಳ ದೇವಾಲಯಗಳನ್ನು ಜೀಣೋದ್ಧಾರ ಮಾಡಿದಳು. ಮತಾಂಧ ಮೊಘಲರ ದುರಾಡಳಿತ, ಹಿಂದೂ ವಿರೋಧಿ ನೀತಿಗೆ ತನ್ನದೇ ರೀತಿಯ ಉತ್ತರ ಕೊಟ್ಟಳು. ಮಹೇಶ್ವರದಲ್ಲಿ ಅಹಲ್ಯಾಬಾಯಿಗೆ ದೇವಾಲಯವನ್ನೂ ನಿರ್ಮಿಸಲಾಗಿದೆ. ವಿಷ್ಣುಗಯಾದಲ್ಲೂ ಇವಳ ಮೂರ್ತಿಯಿದ್ದು ಪ್ರತಿನಿತ್ಯ ಪೂಜಿಸಲ್ಪಡುತ್ತಿದ್ದಾಳೆ. ಕೇಂದ್ರ ಸರ್ಕಾರ ಇವಳ ಗೌರವಾರ್ಥವಾಗಿ 1996ರಲ್ಲಿ ಇವಳ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಸ್ತ್ರೀಶಕ್ತಿಯ ಪ್ರಶಸ್ತಿಗಳಲ್ಲಿ ಅಹಲ್ಯಾಬಾಯಿ ಹೋಳ್ಕರ್ ಪ್ರಶಸ್ತಿಯನ್ನೂ ಸ್ಥಾಪಿಸಿದೆ. ಇಂದೋರ್ನ ವಿಶ್ವವಿದ್ಯಾಲಯಕ್ಕೆ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಇಂದೋರ್ ವಿಮಾನ ನಿಲ್ದಾಣಕ್ಕೆ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ