ಯಾರು ಮಹಾತ್ಮ?
ಭಾಗ- ೫
1942ರ ಆಗಸ್ಟ್ 8ರಂದು ಮಧ್ಯರಾತ್ರಿ ಬಾಂಬೆ ಮೀಟಿಂಗ್ ಹಾಲಿನಲ್ಲಿ ಒಂದಷ್ಟು ಜನ ಒಟ್ಟು ಸೇರಿದ್ದರು. ಎಂದಿನ ಶೈಲಿಯಲ್ಲಿ ತುಂಡು ಬಟ್ಟೆ ತೊಟ್ಟು ಬಂದ ಫಕೀರನೊಬ್ಬ ಉದ್ರಿಕ್ತಗೊಂಡು ಭಾಷಣ ಮಾಡಲಾರಂಭಿಸಿದ. "ಈ ಕ್ಷಣವೇ ನನಗೆ ಸ್ವಾತಂತ್ರ್ಯ ಬೇಕು. ಇಂದೇ ಈ ರಾತ್ರಿಯೇ. ಸಾಧ್ಯವಾದರೆ ರಾತ್ರಿ ಕಳೆದು ಬೆಳಗಾಗುವುದರ ಒಳಗೆಯೇ" ಎಂದು ಘೋಷಣೆ ಮಾಡಿಬಿಟ್ಟ. ಬೆಂಬಲಿಗರು ಉಘೇ ಉಘೇ ಎಂದರು. "ಇಲ್ಲೊಂದು ಸಂಕ್ಷಿಪ್ತ ಮಂತ್ರವಿದೆ. ಮಾಡು ಇಲ್ಲವೇ ಮಡಿ. ನಾವು ಭಾರತವನ್ನು ಸ್ವತಂತ್ರಗೊಳಿಸಬೇಕು. ಇಲ್ಲವಾದಲ್ಲಿ ಈ ಪ್ರಯತ್ನದಲ್ಲಿ ಪ್ರಾಣಾರ್ಪಣೆ ಮಾಡಬೇಕು. ನಮ್ಮ ಗುಲಾಮಗಿರಿ ದೀರ್ಘಕಾಲದವರೆಗೆ ಮುಂದುವರಿಯುವುದನ್ನು ನೋಡಲು ನಾವು ಇರಬಾರದು." ಬೆಳಗಾಗುವುದರೊಳಗೆ ಆತ ಪಡೆದದ್ದು ಸ್ವಾತಂತ್ರ್ಯವಲ್ಲ ಬದಲಿಗೆ ಬ್ರಿಟಿಷ್ ಕಾರಾಗ್ರಹಕ್ಕೆ ಮತ್ತೊಂದು ಆಮಂತ್ರಣ! ಆತ ಬೇರಾರು ಅಲ್ಲ ಮೋಹನದಾಸ ಕರಮಚಂದ ಗಾಂಧಿ!
ಹೀಗೆ "ಮಾಡು ಇಲ್ಲವೇ ಮಡಿ" ಹೋರಾಟಕ್ಕೆ "ಮಾಡುವುದೇನು" ಎನ್ನುವುದರ ಸ್ಪಷ್ಟತೆಯೇ ಇರಲಿಲ್ಲ. ಈಗ ಪ್ರಚಾರಕ್ಕೋಸ್ಕರ ಕೆಲ ಸಂಘಟನೆಗಳು ಮಾಡುವ ಪ್ರತಿಭಟನೆ-ಮುಷ್ಕರಗಳಂತೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ! ಯಾರು, ಏನು, ಎಲ್ಲಿ, ಎತ್ತ ಎನ್ನುವ ಸಂಬಂಧವೇ ಇಲ್ಲದೇ ಮಾತು ಓತಪ್ರೋತವಾಗಿ ಹರಿದಿತ್ತು. ಜನ ಗುಂಪಿನಲ್ಲಿ ಗೋವಿಂದ ಎಂದಿದ್ದರು. ಯಾವುದೇ ರೂಪುರೇಷೆಗಳಿಲ್ಲದೆ ಪರಿಣಾಮದ ಸ್ಪಷ್ಟತೆಯೂ ಇಲ್ಲದೆ ಸುಸಜ್ಜಿತ ಸಂಘಟನೆಯೂ ಇಲ್ಲದೆ ಘೋಷಣೆ ಮಾಡಿಯಾಗಿತ್ತು. ಬ್ರಿಟಿಷರು ಎಗರಾಡಿದವರನ್ನು ಜೈಲಿಗೆ ತಳ್ಳಿ ಮೂರೇ ವಾರಗಳಲ್ಲಿ ಪರಿಸ್ಥಿತಿಯನ್ನು ತಮ್ಮ ಹತೋಟಿಗೆ ತಂದುಕೊಂಡರು. ಈ ನಡುವೆ ಗಾಂಧಿಯ ತಂತ್ರವನ್ನೇ ಉಪಯೋಗಿಸಿಕೊಂಡು ಆಟವಾಡಿದ ಮುಸ್ಲಿಂ ಲೀಗ್ ಮಹಾಯುದ್ಧದಲ್ಲಿ ಬ್ರಿಟಿಷರ ಜೊತೆ ಸೇರಿ ತನಗೆ ಬೇಕಾದುದನ್ನು ಪಡೆದುಕೊಂಡಿತು!
"ಕೊಲ್ಲುವುದು ಹಿಂಸೆ, ಕೊಲ್ಲಲ್ಪಡುವುದು ಅಹಿಂಸೆ" ಇದೇ ಗಾಂಧಿಯ ಅಹಿಂಸಾ ಸಿದ್ಧಾಂತ. ಹಿಂದೂಗಳು ಮುಸ್ಲಿಮರನ್ನು ಕೊಲ್ಲುವುದು ಹಿಂಸೆ. ಅದೇ, ಹಿಂದೂಗಳು ಮುಸ್ಲಿಮರಿಂದ ಹತ್ಯೆಗೀಡಾದರೆ ಅದು ಅಹಿಂಸೆ. ಗಾಂಧಿ ಬಣ್ಣಿಸಿದ್ದೇ ಹಾಗೆ... "ಹಿಂದೂಗಳು ಪುಕ್ಕಲರು, ಮುಸ್ಲಿಮರು ಭಯಪಡಿಸುವವರು". ನಿಜವಾದ ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಹುಲಿ ಮತ್ತು ಆಡು ಪರಸ್ಪರ ಸ್ನೇಹದಿಂದ ಬಾಳುತ್ತವೆ. ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ವ್ಯಾಘ್ರ-ಅಜಗಳೆರಡು ಪರಸ್ಪರರ ಜೊತೆ ಆಡುತ್ತಿದ್ದವಂತೆ. ಭಗವಾನ್ ರಮಣ ಮಹರ್ಷಿಗಳ ಆಶ್ರಮದಲ್ಲಿ ಹಾವು ಹೆಡೆಯೆತ್ತಿ ನರ್ತಿಸುವಾಗ ನವಿಲು ತನ್ನ ತುರಾಯಿ ಪ್ರದರ್ಶಿಸುತ್ತಾ ಆಡುತ್ತಿತ್ತು. ಅಹಿಂಸೆಯ ಶಕ್ತಿ ಅದು. "ನಿಜವಾದ ಅಹಿಂಸಾ ಸಾಧಕನ ಶಕ್ತಿ ಅದು!" ಆದರೆ ಗಾಂಧಿ ತನ್ನವರಿಗೆ ಅಹಿಂಸೆಯನ್ನು ಬೋಧಿಸುತ್ತಾ ಇದ್ದಾಗಲೇ ಅವರ ಕಣ್ಣೆದುರೇ ಸಾವಿರಾರು ಹಿಂದೂಗಳು ಮುಸ್ಲಿಮರಿಂದ ಹತರಾದರು. ಅದನ್ನು ನೋಡಿಯೂ ಗಾಂಧಿ ತನ್ನ ಅರ್ಥಹೀನ ಅಹಿಂಸೆಯನ್ನು ಬೋಧಿಸುತ್ತಾ ಕುಳಿತರು. ಅಹಿಂಸಾ ವ್ಯಕ್ತಿಗಳ ಸಾನ್ನಿಧ್ಯದಲ್ಲಿ ಹಿಂಸೆ ಮರೆತು ಅಹಿಂಸೆಯೇ ನೆಲೆಯಾಗುತ್ತದೆ ಆದರೆ ಗಾಂಧಿ ಎನ್ನುವ ಅಹಿಂಸಾ ಸಾಧಕನ(?) ಎದುರು ಹಾಗಾಗಲಿಲ್ಲ. ಎರಡರಲ್ಲಿ ಒಂದು ಮಾತ್ರ ಸತ್ಯವಾಗಲು ಸಾಧ್ಯ. ಮೊದಲನೆಯದಕ್ಕೆ ಸಹಸ್ರ ಸಹಸ್ರ ನಿದರ್ಶನಗಳಿದ್ದು, ಅದನ್ನು ಜಗತ್ತೇ ಒಪ್ಪಿಕೊಂಡಿದೆ. ಹಾಗಾದರೆ ಗಾಂಧಿಯ ಅಹಿಂಸೆ ಎನ್ನುವುದರಲ್ಲೇ ಏನೋ ದೋಷವಿರಲೇಬೇಕು. ಗ್ ಈ ಎರಡು ರೀತಿಯ ಅಹಿಂಸೆಗಳಲ್ಲಿನ ವ್ಯತ್ಯಾಸವನ್ನು ಅರಿತವರಿಗೆ ಗಾಂಧಿಯ ಅಹಿಂಸೆ ಎಷ್ಟು ಟೊಳ್ಳು ಎನ್ನುವುದು ಅರ್ಥವಾದೀತು. ಹಾಗೆಯೇ ಗಾಂಧಿಯನ್ನು ಅಹಿಂಸಾಸಾಧಕ, ಅವರ ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿತೆಂದು ದೊಡ್ಡ ಗಂಟಲಲ್ಲಿ ಅರಚಾಡುವ ಪ್ರತಿಯೊಬ್ಬ ಗಾಂಧಿವಾದಿಯೂ ಅಹಿಂಸೆ ಎಂದರೇನೆಂದು ಪ್ರಥಮತಃ ಅರಿತುಕೊಳ್ಳುವುದು ಐತಿಹಾಸಿಕ-ಸಾಮಾಜಿಕ ದೃಷ್ಟಿಯಿಂದ ಬಹಳ ಒಳ್ಳೆಯದು. ಕಣ್ಣೆದುರಿನಲ್ಲೇ ಅಸಂಖ್ಯ ಹಿಂದೂಗಳು ಮುಸ್ಲಿಮರಿಂದ ಹತ್ಯೆಗೊಳಗಾದರು ಎನ್ನುವುದರಲ್ಲೇ ಗಾಂಧಿಯ ಅಹಿಂಸೆ ಕೇವಲ ಬಹಿರಂಗ ಪ್ರತಿಪಾದನೆಯಷ್ಟೇ, ಆಂತರಂಗಿಕವಾಗಿ ಅವರು ಆಚರಿಸಿದ್ದು ಹಿಂಸೆಯನ್ನೇ ಎನ್ನುವುದು ವೇದ್ಯವಾಗುತ್ತದೆ. ಮನಸ್ಸಿನಲ್ಲಿ ಹಿಂಸೆಯ ವಿಚಾರಗಳನ್ನು ತುಂಬಿಕೊಂಡು ಗಾಂಧಿ ಅಹಿಂಸೆಯನ್ನು ಮುಖವಾಡವಾಗಿ, ರಾಜಕೀಯ ತಂತ್ರಗಾರಿಕೆಯಾಗಿ, ಆಯುಧವಾಗಿ ಬಳಸಿದರು. ಹೀಗೆ ಅವರ ಅಹಿಂಸಾ ಪ್ರತಿಜ್ಞೆಯು ಮಿಥ್ಯೆಯ ಪ್ರಮಾಣವಾಗಿ, ಆಷಾಢಭೂತಿಯ ಸ್ಲೋಗನ್ ಆಗಿ, "ರಾಷ್ಟ್ರ"ಕ್ಕೆ ಮೋಸವಾಗಿ ಮತ್ತು ಸ್ವಯಂವಂಚನೆಯಾಗಿ ಮಾರ್ಪಟ್ಟಿತು. ಇಂತಹ ವ್ಯಕ್ತಿ ಮಹಾತ್ಮ ಹೇಗಾಗುತ್ತಾರೆ?
ಗಾಂಧಿ ಹಿಂದೂಗಳನ್ನು ದುರ್ಬಲಗೊಳಿಸುತ್ತಾ, ಮುಸ್ಲಿಮರು ನಮ್ಮವರನ್ನು ಕೊಲ್ಲುತ್ತಿದ್ದಾಗಲೂ ಸುಮ್ಮನೆ ಸಹಿಸಿಕೊಳ್ಳಿ ಎಂದು ಹೇಳಿದುದನ್ನೇ "ಅಹಿಂಸೆ" ಎಂದು ಈ ದೇಶದಲ್ಲಿ ಇಂದಿಗೂ ನಂಬಲಾಗುತ್ತದೆ. ಈ ದೇಶದಲ್ಲಿ ಸೆಕ್ಯುಲರ್ ಎನ್ನುವ ಪದ ಬಂದದ್ದೂ, ಈಗ ಬಳಕೆಯಾಗುತ್ತಿರುವುದೂ ಹಾಗೆಯೇ! ಪ್ರತಿಯೊಂದು ಭಯೋತ್ಪಾದನಾ ದಾಳಿ ನಡೆದಾಗಲೂ ಭಯೋತ್ಪಾದಕರಿಗೆ ಧರ್ಮವಿಲ್ಲ ಎನ್ನುವ ವ್ಯರ್ಥಾಲಾಪವೂ ಈ ಅರೆಬೆಂದ ಅಹಿಂಸೆಯ ಫಲವೇ! ಹಿಂಸೆಯನ್ನು ಅಹಿಂಸೆ ಎಂದು ಪ್ರತಿಪಾದಿಸುದುದರಲ್ಲೇ ಗಾಂಧಿಗೆ ಅಹಿಂಸೆಯ ಬಗ್ಗೆ ಇದ್ದ ಪ್ರಾಥಮಿಕ ತಿಳುವಳಿಕೆಯ ದೋಷ ಎದ್ದು ಕಾಣುತ್ತದೆ. ಯೋಗವಿದ್ಯಾಚಾರ್ಯ ಪಂಚಶಿಕು ಅಹಿಂಸೆಯನ್ನು ಹೀಗೆ ವ್ಯಾಖ್ಯಾನಿಸುತ್ತಾನೆ...
"ಯಥಾ ಯಥಾ ವ್ರತಾನಿ ಬಹೂನಿ ಸಮಾಧಿತ್ಸತೆ
ತಥಾ ತಥಾ ಕೃತಭ್ಯೋ ಹಿಂಸಾ ನಿದಾನೇಭ್ಯೋ ನಿವರ್ತಮಾನ
ಸ್ತಮೇವ ಅವದತರೂಪಾಂ ಅಹಿಂಸಾ ಕರೋತಿ"
- ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅನೇಕ ವ್ರತಗಳು/ಪ್ರಗತಿಯ ಒಂದೊಂದೇ ಹೆಜ್ಜೆಗಳನ್ನಿಡುತ್ತಾರೆ. ಆ ಆಚರಣೆಯ ಹಾದಿಯಲ್ಲಿ ಹಿಂಸೆಯ ಕಾರಣೋತ್ಪಾದಕ ಕೆಲಸಗಳನ್ನು ತ್ಯಜಿಸುತ್ತಾರೆ. ಮತ್ತು ಪರಿಪೂರ್ಣ ಅಹಿಂಸೆಯನ್ನು ಆಚರಿಸುತ್ತಾರೆ. ಅಹಿಂಸೆಯ ಆಚರಣೆ ಪ್ರತಿಯೊಬ್ಬನೂ ತನ್ನಲ್ಲೇ ತಾನು ಮಾಡಿಕೊಳ್ಳಬೇಕಾದ ಪರಿವರ್ತನೆ! ರಾಮಕೃಷ್ಣ ಪರಮಹಂಸರು ತಾನು ಇತರರಿಗೆ ಬೋಧಿಸುವ ಮುಂಚೆ ಅದೆಷ್ಟೇ ಸಣ್ಣ ವಿಷಯವಾಗಿರಲಿ ಅದನ್ನು ತಾನು ಮೊದಲು ಅಳವಡಿಸಿಳ್ಳುತ್ತಿದ್ದರು. ಮಹಾತ್ಮರೆಂದರೆ ಹಾಗೆ. ಆದರೆ ಗಾಂಧಿ ತಾನೇ ಸರಿಯಾಗಿ ಪಾಲಿಸದ ತನ್ನ ಅರೆಬೆಂದ ಅಹಿಂಸೆಯನ್ನು ಇತರರಿಗೆ ಮೊದಲು ಬೋಧಿಸುತ್ತಿದ್ದರು! ತನ್ನೆಲ್ಲೇ ಪರಿವರ್ತನೆ ಆಗದೆ ಇತರರಿಗೆ ಬೋಧನೆ! ಯಾವ ಸೀಮೆಯ ಮಹಾತ್ಮ? ಬ್ರಿಟಿಷರು ಭಾರತವನ್ನು ಯುಕ್ತಿಯಿಂದ ವಶಪಡಿಸಿಕೊಂಡು ಖಡ್ಗದ ಬಲದಿಂದ ಆಳಿದರು. ಅಂತಹವರನ್ನು ಅದೇ ಬಗೆಯ ಯುಕ್ತಿ-ಸಾಹಸಗಳಿಂದ ನಿವಾರಿಸಬೇಕಲ್ಲದೆ ಅಹಿಂಸೆಯ ಮೂರ್ಖವಿಚಾರದಿಂದಲೇ? ಹಿಂಸೆಯನ್ನೇ ಮೈಗೂಡಿಸಿಕೊಂಡ ನರಾಧಮರ ಎದುರು ಅಹಿಂಸೆ ಫಲಕಾರಿಯಾಗಬೇಕಾದರೆ ಆತ ಭಗವಾನ್ ರಮಣರಂತೆ, ಪ್ರಾಚೀನ ಋಷಿಮುನಿಗಳಂತೆ ನಿಜವಾದ ಅಹಿಂಸಾ ಸಾಧಕನಾಗಿರಬೇಕು.
ಒಂದು ಗಣದ ಸೇನಾ ಮುಖ್ಯಸ್ಥನೊಬ್ಬ ಬುದ್ಧನ ಶಿಷ್ಯನಾಗಲು ದೀಕ್ಷೆ ಸ್ವೀಕರಿಸಬಯಸಿ ಬಂದ. ನೀನು ಯಾವ ಕಾರಣಕ್ಕೆ ನೀನು ಭಿಕ್ಷುವಾಗಲು ಬಯಸಿದ್ದೀಯೇ ಎಂದು ಬುದ್ಧ ಆತನನ್ನು ಪ್ರಶ್ನಿಸಿದ್ದ. ಆಗ ಆತ " ಶತ್ರುಗಳು ನಮ್ಮ ರಾಜ್ಯದ ಮೇಲೆ ದಂಡೆತ್ತಿ ಬಂದಿದ್ದಾರೆ. ನಾನೀಗ ನಮ್ಮ ಸೈನ್ಯವನ್ನು ಮುನ್ನಡೆಸಬೇಕಾಗಿದೆ. ಆದರೆ ಯುದ್ಧದಿಂದ ಎರಡೂ ಪಕ್ಷದಲ್ಲಿ ರಕ್ತಪಾತ ಮತ್ತು ಹಿಂಸೆ ಉಂಟಾಗುತ್ತದೆ. ಅದು ಪಾಪದ ಕೆಲಸ ಎಂದು ನನಗನಿಸುತ್ತದೆ. ಹೀಗಾಗಿ ನಾನು ನನ್ನ ಜವಾಬ್ದಾರಿ ತ್ಯಜಿಸಿ ನಿಮ್ಮ ರೀತಿ ಶಾಂತಿ-ಅಹಿಂಸೆಯ ಹಾದಿಯಲ್ಲಿ ಸಾಗಲು ಬಯಸಿ ಬಂದಿದ್ದೇನೆ" ಎಂದ. ಬುದ್ಧ ಆತನನ್ನು ಸಮಾಧಾನಪಡಿಸುತ್ತಾ ಹೇಳುತ್ತಾನೆ, "ನೀನು ಇಲ್ಲಿಗೆ ಬಂದೆ ಎನ್ನುವ ಕಾರಣಕ್ಕೆ ಶತ್ರುಗಳು ತಮ್ಮ ಆಕ್ರಮಣವನ್ನೇನೂ ನಿಲ್ಲಿಸುವುದಿಲ್ಲ. ಒಂದು ವೇಳೆ ಮುಗ್ಧ ಜನರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ನೀನು ತ್ಯಜಿಸಿದ್ದೇ ಆದರೆ ಆ ಹಿಂಸೆಯ ಪಾಪವೆಲ್ಲಾ ನಿನ್ನ ತಲೆಗೇ ಸುತ್ತಿಕೊಳ್ಳುತ್ತದೆ. ಸಜ್ಜನರು ಹಾಗೂ ಪ್ರಾಮಾಣಿಕ ಜನರನ್ನು ಕಾಪಾಡುವುದೇ ಧರ್ಮ. ಹಾಗಾಗಿ ಹಿಂತಿರುಗಿ ಹೋಗಿ ನಿನ್ನ ಹೊಣೆಗಾರಿಕೆಯನ್ನು ನಿಭಾಯಿಸು". ಬುದ್ಧನ ಅಹಿಂಸೆ ಇದು! ಬುದ್ಧ ಇಲ್ಲಿ ಎರಡು ಅಂಶವನ್ನು ಎತ್ತಿ ಹಿಡಿಯುತ್ತಾನೆ. ಒಂದು ನಾಯಕನಾದವ ಹೇಗಿರಬೇಕು, ಅವನ ಕರ್ತವ್ಯಗಳೇನು ಎನ್ನುವುದು; ಎರಡನೆಯದ್ದು ನೈಜ ಅಹಿಂಸೆ ಎಂದರೆ ಹೇಗಿರಬೇಕು ಎನ್ನುವುದು. ಗಾಂಧಿಯ ಅಹಿಂಸೆಗೂ ಬುದ್ಧನ ಅಹಿಂಸೆಗೂ ಅಜಗಜಾಂತರ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ