ಪುಟಗಳು

ಬುಧವಾರ, ಅಕ್ಟೋಬರ್ 19, 2016

ಯಾರು ಮಹಾತ್ಮ? ಭಾಗ- ೧೪

ಯಾರು ಮಹಾತ್ಮ?

ಭಾಗ- ೧೪

ನಮ್ಮ ದೇಶದ ಧ್ವಜದ ಜೊತೆ ಯೂನಿಯನ್ ಜಾಕ್ ಕೂಡಾ ಇರುತ್ತದೆ ಎನ್ನುವ ವದಂತಿ ಹರಡಿತ್ತು. ಹಾಗೇನಾದರೂ ಆದಲ್ಲಿ ತಾನು ಯೂನಿಯನ್ ಜಾಕ್ ಅನ್ನು ಚೂರುಚೂರು ಮಾಡುವುದಾಗಿ ಪ್ರತಿನಿಧಿಯೊಬ್ಬ ಗಾಂಧಿಯವರಿಗೆ ಪತ್ರ ಬರೆದ. ಗಾಂಧಿ "ಯೂನಿಯನ್ ಜಾಕ್ ಯಾವ ತಪ್ಪೂ ಮಾಡಿಲ್ಲ. ತಪ್ಪು ಮಾಡಿದ್ದು ಬ್ರಿಟಿಷ್ ಸರಕಾರ. ಭಾರತ ಕಾಮನ್ ವೆಲ್ತ್ ಕೂಟದಲ್ಲಿ ಮುಂದುವರೆಯುವವರೆಗೆ ಹಿಂದಿನ ವಿರೋಧಿಗಳ ಬಗೆಗೆ ಧಾರಾಳತನ ತೋರಿಸಿ, ದೇಶದ ಧ್ವಜದ ಜೊತೆ ಯೂನಿಯನ್ ಜಾಕ್ ಉಳಿಸಿಕೊಳ್ಳುವುದರಿಂದ ಯಾವುದೇ ಹಾನಿಯಿಲ್ಲ. ಇದನ್ನು ಗೌರವದ ವಿಷಯವಾಗಿ ಪರಿಗಣಿಸಬೇಕು" ಎಂದರು(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್ ಪ್ಯಾರೇಲಾಲ್). ನಮ್ಮದೇ ಆದ ಕೇಸರಿ ಧ್ವಜ ಗಾಂಧಿಗೆ ವರ್ಜ್ಯವಾಗಿತ್ತು. ಧರ್ಮದ ಸಂಕೇತವಾದ ಸುದರ್ಶನ ಚಕ್ರ ಅವರ ದೃಷ್ಟಿಯಲ್ಲಿ ಶ್ಲಾಘನೆಗೆ ಅರ್ಹವಾದುದಾಗಿರಲಿಲ್ಲ. ನಮ್ಮ ರಿಪುಗಳ ಧ್ವಜ ಅವರ ಪಾಲಿಗೆ ಗೌರವಾರ್ಹವಾಗಿತ್ತು. ವಿದೇಶೀ ವಸ್ತುಗಳನ್ನು ಬಹಿಷ್ಕರಿಸಿ ಎಂದಿದ್ದ, ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದಿದ್ದ ಗಾಂಧಿ ಈಗ ಯೂನಿಯನ್ ಜಾಕ್ ಯಾವ ತಪ್ಪೂ ಮಾಡಿಲ್ಲ ಎನ್ನುತ್ತಿದ್ದಾರೆ! ಧ್ವಜ ಎಂದರೆ ಏನೆಂಬ ಮೂಲಭೂತ ತಿಳುವಳಿಕೆಯಾದರೂ ಅವರಿಗಿದೆಯೇ? ಎಲ್ಲರ ಪಾಲಿಗೆ ಒಳ್ಳೆಯವರಾಗಲು ಹೋದವರ ಮತಿಗೇಡಿತನವಿದಲ್ಲದೆ ಇನ್ನೇನು?

ಹಿಂದಿ ಮತ್ತು ಉರ್ದುವಿನ ಮಿಶ್ರತಳಿ ಹಿಂದೂಸ್ತಾನಿ. ಮುಸ್ಲಿಮರನ್ನು ಸಂತೈಸುವ ಏಕೈಕ ಉದ್ದೇಶದಿಂದ ಹಿಂದೂಸ್ತಾನಿ ಮಾತ್ರ ನಮ್ಮ ರಾಷ್ಟ್ರೀಯ ಭಾಷೆಯಾಗಬೇಕು ಎಂದು ಒತ್ತಾಯಿಸಿದರು ಗಾಂಧಿ. ಅವರ ಅಂಧಾಭಿಮಾನಿಗಳು ಕುರುಡುಕುರುಡಾಗಿ ಅದನ್ನು ಬೆಂಬಲಿಸಿದರು. ಹಿಂದೂಸ್ತಾನಿ ಎನ್ನುವ ಭಾಷೆಯೇ ಇಲ್ಲ ಎಂದು ದೇಶೀಯರೆಲ್ಲರಿಗೂ ಗೊತ್ತು. ಆದರೆ ಗಾಂಧಿಯ ನಿಲುವು ಹಾಗೂವರ ಅಂಧನುಕರಣೆ ಮಾಡುವವರಿಂದ ಈ ಹೈಬ್ರಿಡ್ ಭಾಷೆಯ ಬಳಕೆ ಶುರುವಾಯಿತು. ಸೂಕ್ಷ್ಮವಾಗಿ ನೋಡಿದರೆ ಗಾಂಧಿ ಉರ್ದುವನ್ನು ಹಿಂದೂಸ್ತಾನಿ ಎನ್ನುವ ಮಾರುವೇಶದಲ್ಲಿ ತರಲು ಹೊರಟಿದ್ದರು. ಪ್ರಾಯೋಗಿಕವಾಗಿ ನೋಡಿದರೆ ಹಿಂದೂಸ್ತಾನಿ ಎನ್ನುವುದು ಉರ್ದುವೇ. ಉರ್ದು ಹಿಂದಿಯ ಪರ್ಷಿಯನೀಕರಣಗೊಂಡ ಭಾಷೆ. ಮೊಘಲ್ ಸೈನಿಕರು ಬಳಸುತ್ತಿದ್ದ ಭಾಷೆ. ಆದರೆ ಬಾಬರನಿಂದ ಔರಂಗಜೇಬನವರೆಗೆ ಎಲ್ಲಾ ಮೊಘಲ್ ಅರಸರು ಬಳಸುತ್ತಿದ್ದುದು ತುರ್ಕಿ ಹಾಗೂ ಪರ್ಷಿಯನ್ ಭಾಷೆಯನ್ನು. ಭಾಷೆಯ ಗುಣಲಕ್ಷಣಗಳಾದ ವ್ಯಾಕರಣ ಹಾಗೂ ಕ್ರಿಯಾಪದಗಳ ವಿಶಿಷ್ಟ ಮಾದರಿಯನ್ನು ಉರ್ದು ಹೊಂದಿಲ್ಲ. ಹಾಗಾಗಿ ಹಿಂದಿಗೆ ವಿರುದ್ಧವಾಗಿ ಉರ್ದುವನ್ನು ತರುವ ಧೈರ್ಯ ಗಾಂಧಿಗಿರಲಿಲ್ಲ. ಉರ್ದುವನ್ನು ಹಿಂದಿಯಿಂದ ಪ್ರತ್ಯೇಕಿಸುವ ಇನ್ನೊಂದು ವಿಚಾರವೆಂದರೆ ಉರ್ದು ಪರ್ಷಿಯನ್ ಗುಣಲಕ್ಷಣಗಳನ್ನು ಉಪಯೋಗಿಸಿದರೆ, ಹಿಂದಿ ದೇವನಾಗರಿ ಲಕ್ಷಣಗಳನ್ನು ಬಳಸುತ್ತದೆ. ಹಿಂದಿಯ ಜಾಗದಲ್ಲಿ ಹಿಂದೂಸ್ತಾನಿಯನ್ನು ಬಳಸಲು ಗಾಂಧಿ ನಾಯಕತ್ವದ ಕಾಂಗ್ರೆಸ್ ಒಪ್ಪಿಗೆ ನೀಡಿತು!

"ಅಲ್ಲಾನಿಗೆ ಅರೇಬಿಕ್ ಮಾತ್ರ ಗೊತ್ತಿರುವುದೇ? ನಾವು ತುರ್ಕಿ ಭಾಷೆಯಲ್ಲಿ ಪ್ರಾರ್ಥನೆ ಮಾಡಿದರೆ ಅರ್ಥವಾಗುವುದಿಲ್ಲವೇ?" ಎಂದು ಪ್ರಶ್ನಿಸಿದ ತುರ್ಕಿಯ ಜನರು ಕಮಲ್ ಪಾಷಾನ ನೇತೃತ್ವದಲ್ಲಿ ಅರೇಬಿಕ್ ಲಿಪಿ ಅಕ್ರಮ ಎಂದು ಸಾರಿ ಅದರ ಜಾಗದಲ್ಲಿ ರೋಮನ್ ಲಿಪಿ ಅಳವಡಿಸಿಕೊಂಡರು. ತುರ್ಕಿಯ ಮುಸ್ಲಿಮರು ತುರ್ಕಿ ಭಾಷೆಯಿಂದ ಎಲ್ಲಾ ಅರೇಬಿಕ್ ಶಬ್ದಗಳನ್ನು ತೆಗೆದು ಹಾಕಿ ಶುದ್ಧಗೊಳಿಸಿದರು. ತುರ್ಕಿ ಭಾಷೆಗೆ ಕುರಾನನ್ನು ಭಾಷಾಂತರಿಸಿದರು. ಅಲ್ಲಾ ಪದವನ್ನು ತುರ್ಕಿಗೆ ತರ್ಜುಮೆ ಮಾಡಿ "ತಾರೀ" ಎಂದು ಕರೆದರು. ನಮಗೆ ನಮ್ಮ ದೇಶ ಮೊದಲು, ಇಸ್ಲಾಂ ನಂತರ ಎಂದು ಕಮಲ್ ಪಾಷಾ ಘೋಷಿಸಿದ. ತುರ್ಕಿ ಮುಸ್ಲಿಮರು ಹೊಂದಿದ್ದ ರಾಷ್ಟ್ರೀಯ ಭಾವನೆಯ ಕಿಂಚಿತ್ ಭಾಗವನ್ನಾದರೂ ಗಾಂಧಿ ಹೊಂದಿದ್ದರೆ ಅವರು ಹಿಂದೂಸ್ತಾನಿಯನ್ನು ಭಾರತೀಯರ ಮೇಲೆ ಹೇರಲು ಪ್ರಯತ್ನಿಸುತ್ತಿರಲಿಲ್ಲ. ತುರ್ಕಿಯ ಮುಸ್ಲಿಮರಿಗೆ ದೇಶ ಮೊದಲಾಯಿತು. ಆದರೆ ತುರ್ಕಿಯ ಖಿಲಾಫತನ್ನು ಬೆಂಬಲಿಸಿದ್ದ ಭಾರತದ ಮುಸ್ಲಿಮರಿಗೆ ಅರೇಬಿಕ್, ಇಸ್ಲಾಂಗಳೇ ಸರ್ವೋಚ್ಛವಾಯಿತು! ಕಮಲ್ ಪಾಷಾನ ರಾಷ್ಟ್ರೀಯ ಭಾವನೆಯ ಸ್ವಲ್ಪಾಂಶವೂ ಇಲ್ಲದ ಗಾಂಧಿ ಮಹಾತ್ಮ ಆದದ್ದು ಮಾತ್ರ ವಿಪರ್ಯಾಸವೇ ಸರಿ.

"ಹಿಂದೂ ಧರ್ಮ ಗೋಹತ್ಯೆ ನಿಷೇಧಿಸುತ್ತದೆ. ಅದು ಹಿಂದೂಗಳಿಗೆ ಮಾತ್ರವೇ ವಿನಾ ಇಡೀ ಜಗತ್ತಿಗಲ್ಲ" ಎನ್ನುತ್ತಾ ಹಿಂದೂ ಭಾವನೆಗಳನ್ನು ಅಪಮಾನಿಸಿದ ಅವರು ಗೋಹತ್ಯೆಯನ್ನು ವಿರೋಧಿಸಲಿಲ್ಲ. ಹಿಂದೂ ದೇಶವಾದರೂ ಹಿಂದೂ ಕಾನೂನುಗಳನ್ನು ಹಿಂದೂಯೇತರರ ಮೇಲೆ ಹೇರಲಾಗದು ಎಂದರು ಗಾಂಧಿ. ಗೋಹತ್ಯೆಯನ್ನು ವಿರೋಧಿಸದೆ ಇದ್ದದ್ದು ಮಾತ್ರವಲ್ಲ ಗೋವಧೆಗೂ ಗಾಂಧಿ ಒಂದು ಹಂತದಲ್ಲಿ ಬೆಂಬಲ ನೀಡಿದಂತೆ ಭಾಸವಾಗುತ್ತದೆ. "ಮುಸ್ಲಿಮರಿಂದ ಗೋವಧೆಯನ್ನು ತಡೆಗಟ್ಟಲಾಗದಿದ್ದರೆ ಹಿಂದೂಗಳು ಪಾಪವನ್ನೇನೂ ಮಾಡಿದಂತಾಗುವುದಿಲ್ಲ. ಆದರೆ ಗೋವಿನ ರಕ್ಷಣೆಯ ಭರದಲ್ಲಿ ಅವರು ಮುಸ್ಲಿಮರ ಜೊತೆ ಜಗಳವಾಡಿದರೆ ತೀವ್ರ ಪಾಪ ಮಾಡಿದಂತಾಗುತ್ತದೆ. ಗೋರಕ್ಷಣೆ ಎನ್ನುವುದು ಮುಸ್ಲಿಮರ ಜೊತೆ ವೈರತ್ವದ ಮಟ್ಟಕ್ಕೆ ಇಳಿದಿದೆ. ಗೋರಕ್ಷಣೆ ಎಂದರೆ ಮುಸ್ಲಿಮರನ್ನು ಪ್ರೀತಿಯಿಂದ ಗೆಲ್ಲುವುದೆಂದರ್ಥ. ಗೋರಕ್ಷಣೆಯ ಭರದಲ್ಲಿ ಸಂಭವಿಸಿದ ಗಲಭೆಗಳೆಲ್ಲಾ ಈ ವ್ಯರ್ಥ ಪ್ರಯತ್ನದ ಮೂರ್ಖತನ" ಎಂದರು ಗಾಂಧಿ(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್:ಪ್ಯಾರೇಲಾಲ್)

1925 ಅಕ್ಟೋಬರ್ 3ರ 'ಪ್ರತಾಪ್'ದಲ್ಲಿ(ಲಾಹೋರ್) ಗಾಂಧಿ "ಕೃಷ್ಣನ ಕುರಿತು ನನ್ನ ಮನಸ್ಸಿನಲ್ಲಿರುವ ಊಹಾತ್ಮಕ ಚಿತ್ರವೆಂದರೆ ರಾಜರ ರಾಜ ಎಂದು. ಹಿಂಸೆಯನ್ನು ಅನುಸರಿಸುವ ಇತರರಂತೆ ಮಹಾಭಾರತದ ಕೃಷ್ಣನನ್ನೂ ನಾನು ವಿಕೃತ ದೇಶಭಕ್ತ ಎನ್ನುವುದಾಗಿ ಪರಿಗಣಿಸುತ್ತೇನೆ" ಎಂದು ಬರೆದಿದ್ದರು. 1927 ಜುಲೈ 27ರ 'ಹರಿಜನ'ದಲ್ಲಿ ಗಾಂಧಿ "ರಾಮ ಅಥವಾ ಕೃಷ್ಣ ಐತಿಹಾಸಿಕ ವ್ಯಕ್ತಿಗಳಲ್ಲವಾದ್ದರಿಂದ ಅವರ ಬಗ್ಗೆ ಮಾತಾಡಲು ನನಗೆ ಇಷ್ಟವಿಲ್ಲ. ಆದರೆ ಅಬೂಬಕರ್ ಹಾಗೂ ಉಮರ್ ಹೆಸರನ್ನು ಉಲ್ಲೇಖಿಸಲು ನಾನು ತೀವ್ರಾಸಕ್ತನಾಗಿದ್ದೇನೆ. ಮಹಾನ್ ಸಾಮ್ರಾಜ್ಯದ ಚಕ್ರವರ್ತಿಗಳಾಗಿದ್ದರೂ ಅವರು ಏಕಾಂಗಿ ಜೀವನ ಸಾಗಿಸಿದರು" ಎಂದು ಬರೆದರು. ಹೀಗೆ ಮುಸ್ಲಿಮರನ್ನು ಓಲೈಸುವ ಸಲುವಾಗಿ ರಾಮ, ಕೃಷ್ಣರ ಅಸ್ತಿತ್ವವನ್ನೇ ಪ್ರಶ್ನಿಸಲೂ ಗಾಂಧಿ ಹಿಂಜರಿಯಲಿಲ್ಲ.

ದೆಹಲಿಯ ಭಂಗಾಯ್ ಕಾಲೊನಿಯ ದೇವಾಲಯದಲ್ಲಿ ಗಾಂಧಿಯ ಪ್ರಾರ್ಥನಾ ಸಭೆಗಳು ನಡೆಯುತ್ತಿತ್ತು. ಪ್ರಾರ್ಥನೆಯ ಸಮಯದಲ್ಲಿ ಪಟ್ಟು ಹಿಡಿದು ಕುರಾನ್ ವಾಕ್ಯಗಳನ್ನು ಓದತೊಡಗಿದರು. ಹಿಂದೂಗಳ ವಿರೋಧದ ನಡುವೆಯೂ ಇದು ಮುಂದುವರಿಯಿತು. ಆದರೆ ಮುಸ್ಲಿಮರ ಪ್ರತಿಭಟನೆಯ ಹೆದರಿಕೆಯಿಂದ ಅವರು ಮಸೀದಿಯಲ್ಲಿ ಗೀತಾಪಠಣದ ಧೈರ್ಯ ತೋರಲಿಲ್ಲ. ಶಿವಾಜಿಯ ಅಸಾಮಾನ್ಯ ಶಕ್ತಿ ಸಾಹಸಗಳನ್ನು, ಆತ ಹಿಂದೂ ಧರ್ಮವನ್ನು ರಕ್ಷಿಸಿದ ಪರಿಯನ್ನು ಸ್ತುತಿಸುವ ಐವತ್ತೆರಡು ಚರಣಗಳನ್ನೊಳಗೊಂಡ ಕವಿ ಭೂಷಣನ ಕೃತಿ ಶಿವಬಾವನಿ.
"ಕಾಶಿಜಿ ಕೀ ಕಳಾ ಜಾತೀ ಮಧುರಾ ಮಸ್ಜಿದ್ ಹೋತಿ
ಶಿವಾಜಿ ಜೋ ನ ಹೋತೆ ತೋ ಸುನ್ನತ್ ಹೋತೋ ಸಬ್ ಕೀ" ಎಂದು ಶಿವಾಜಿಯ ಮಹತ್ವವನ್ನು ಸಾರಿ ಹೇಳಿದ ಕಾವ್ಯವಿದು. ಅದಕ್ಕೂ ಗಾಂಧಿಯ ಕೆಟ್ಟ ದೃಷ್ಟಿ ಬಿತ್ತು. ಸಾರ್ವಜನಿಕವಾಗಿ ಶಿವಬಾವನಿಯನ್ನು ಪಠಿಸದಂತೆ ಗಾಂಧಿ ತಾಕೀತುಮಾಡಿದರು. ಶಿವಾಜಿಯನ್ನು ವಿಕೃತ ದೇಶಭಕ್ತ ಎಂದು ಕರೆದರು. ಶಿವಾಜಿ ಇತಿಹಾಸ ನೆನಪಿಸಿಕೊಳ್ಳದಂತೆ ಜನರಿಗೆ ಕರೆ ನೀಡಿದರು(ವೈ ಐ ಅಸಾಸಿನೇಟೆಡ್ ಮಹಾತ್ಮಗಾಂಧಿ - ನಾಥೂರಾಮ್ ಗೋಡ್ಸೆ; ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟಿಷನ್-ಹೊ.ವೆ.ಶೇಷಾದ್ರಿ)

ಆಡಳಿತ ನಡೆಸುವುದರಲ್ಲಿ ನಿಷ್ಣಾತವಾದ ಸರ್ಕಾರವೊಂದರ ಅಡಿಯಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಬಲಪ್ರಯೋಗ ನಡೆಸಲು ಒಂದು ಕ್ಷಣದ ಅವಕಾಶ ನೀಡುವುದು ಸಹ ಕಲ್ಪನಾತೀತ ಎಂದು 1947ರ ಆಗಸ್ಟ್ 11ರಂದು ಪ್ರಾರ್ಥನಾ ಸಭೆಯೊಂದರಲ್ಲಿ ಗಾಂಧಿ ಕರೆ ನೀಡಿದರು. "ಹಿಂದೂ ಪೊಲೀಸ್ ಮತ್ತು ಅಧಿಕಾರಿಗಳು ನ್ಯಾಯಾಡಳಿತದಲ್ಲಿ ಪಕ್ಷಪಾತಿಗಳಾಗಿದ್ದಾರೆ. ಹಿಂದೆ ಮುಸ್ಲಿಮ್ ಪೊಲೀಸ್ ಹಾಗೂ ಅಧಿಕಾರಿಗಳ ಮೇಲೆ ಯಾವ ಆರೋಪ ಹೊರಿಸಲಾಗಿತ್ತೋ ಅದನ್ನೇ ಅವರು ಈಗ ಮಾಡುತ್ತಿದ್ದಾರೆ."(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್:ಪ್ಯಾರೇಲಾಲ್). ಈ ಆರೋಪದಲ್ಲಿ ಯಾವುದೇ ಹುರುಳಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ