ಪುಟಗಳು

ಶನಿವಾರ, ಡಿಸೆಂಬರ್ 29, 2018

ಪರಕೀಯ ದಾಳಿಯಿಂದ ದೇಶವನ್ನು ಮುಕ್ತಗೊಳಿಸಿ ಪ್ರಜ್ವಲಿಸಿದ ಮಾರ್ತಾಂಡ

ಪರಕೀಯ ದಾಳಿಯಿಂದ ದೇಶವನ್ನು ಮುಕ್ತಗೊಳಿಸಿ ಪ್ರಜ್ವಲಿಸಿದ ಮಾರ್ತಾಂಡ

            ಸಮಗ್ರ ಭಾರತವನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿದ ಅದ್ಭುತ ರಚನೆ ಏಕಾತ್ಮತಾ ಸ್ತೋತ್ರ. ಅಲ್ಲಿ ಭಾರತದ ಔನ್ನತ್ಯ ಸಾರುವ ಇತಿಹಾಸದ ಬಿಂದುಗಳಿವೆ. ನದಿ-ಕಂದರ-ಗಿರಿ-ಸಾಗರಗಳ ಚಿತ್ರವಿದೆ. ಋಷಿಮುನಿಗಳ, ಅರಸ-ಯೋಧರುಗಳ, ಕರ್ತೃ-ಕರ್ಮಿಗಳ, ಚಿಂತಕ-ಹೋರಾಟಗಾರರ ಚಿತ್ರಣವಿದೆ. ಅದರ ಓದು, ಹುಟ್ಟಿನಿಂದ ಇಂದಿನವರೆಗಿನ ಸಮಗ್ರ ಭಾರತವನ್ನು ಒಮ್ಮೆ ಸುತ್ತಿಬಂದ ಆವರ್ಣನೀಯ ಆನಂದವನ್ನು ಕೊಡುತ್ತದೆ. ಅಲ್ಲೊಂದು ಶ್ಲೋಕ ಈ ರೀತಿ ಇದೆ;
ಲಾಚಿದ್ ಭಾಸ್ಕರವರ್ಮಾ ಚ ಯಶೋಧರ್ಮಾ ಚ ಹೂಣಜಿತ್ |
ಶ್ರೀಕೃಷ್ಣದೇವರಾಯಶ್ಚ ಲಲಿತಾದಿತ್ಯ ಉದ್ಭಲಃ ||೨೪||
ಈ ಶ್ಲೋಕದಲ್ಲಿರುವ ಲಲಿತಾದಿತ್ಯ ಎನ್ನುವ ಹೆಸರು ನನ್ನ ಗಮನ ಸೆಳೆಯಿತು. ನಮ್ಮ ಪಠ್ಯಪುಸ್ತಕಗಳಲ್ಲಾಗಲೀ, ಇತಿಹಾಸದ ಪುಸ್ತಕಗಳಲ್ಲಾಗಲೀ ಕಾಣದ ಹೆಸರದು. ಆದರೆ ಆತ ನಾವು ಕಾಣುವುದಕ್ಕೆ ಕಾರಣನಾದ ಸೂರ್ಯನಿಗೊಂದು ದೇವಾಲಯವನ್ನೇ ನಿರ್ಮಿಸಿದ್ದ. ತನ್ನ ಕಾಲ ಬಂದಾಗ ಸಮರ್ಥವಾಗಿ ರಾಜ್ಯವಾಳಿದ. ತಾನು ಅಧಿಕಾರದಲ್ಲಿದ್ದಷ್ಟು ಕಾಲ ಭಾರತವನ್ನು ಪರಕೀಯ ದಾಳಿಯಿಂದ ರಕ್ಷಿಸಿದ. ಇನ್ನು ಸಾಕು ಎಂದು ಅರಿವಾದಾಗ ಹಿಮಾಲಯಕ್ಕೆದ್ದು ಹೊರಟ! ಹೌದು ಈ ಬಾರಿ ಅವನ ಕಥೆಯೇ!

        ಕಾಶ್ಮೀರದಲ್ಲಿ ಗೋನಂದ ಎನ್ನುವ ವಂಶದ ದೊರೆಗಳ ಆಡಳಿತ ಕ್ರಿ.ಶ. 627ರವರೆಗೆ ನಡೆದಿತ್ತು. ಈ ವಂಶದ ಕೊನೆಯ ದೊರೆ ಬಾಲಾದಿತ್ಯ. ಆತನಿಗೆ ಗಂಡು ಸಂತಾನವಿರಲಿಲ್ಲ. ಹೀಗಾಗಿ ಆತನ ಮಗಳನ್ನು ವಿವಾಹವಾದ, ಕಾಶ್ಮೀರದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಕೋಟ ವಂಶದ ದುರ್ಲಭವರ್ಧನನಿಗೆ ಕಾಶ್ಮೀರದ ಪಟ್ಟ ಒಲಿದು ಬಂತು. ಅಪಾರ ಧೈರ್ಯ-ಶೌರ್ಯಕ್ಕೆ ಹೆಸರಾಗಿದ್ದ ಕಾರ್ಕೋಟ ವಂಶಜರಿಗೆ ಸಖಸೇನ ಎಂಬ ಬಿರುದನ್ನೇ ಕಾಶ್ಮೀರದ ರಾಜರುಗಳು ದಯಪಾಲಿಸಿದ್ದರು. ದುರ್ಲಭವರ್ಧನ 36 ವರ್ಷಗಳ ಕಾಲ ರಾಜ್ಯಭಾರ ಮಾಡಿದ. ಇವನ ಮರಣಾನಂತರ ಮಗ ದುರ್ಲಭಕ 50 ವರ್ಷ ಕಾಲ ರಾಜ್ಯವಾಳಿದರೂ ಆತನ ವಿಷಯವಾಗಿ ಚಾರಿತ್ರಿಕ ವಿವರಗಳಾವುವೂ ಲಭ್ಯವಿಲ್ಲ. ದುರ್ಲಭಕನ ಮಕ್ಕಳೇ ಚಂದ್ರಾಪೀಡ (ವಜ್ರಾದಿತ್ಯ), ತಾರಾಪೀಡ (ಉದಯಾದಿತ್ಯ) ಮತ್ತು ಮುಕ್ತಾಪೀಡ (ಲಲಿತಾದಿತ್ಯ). ದುರ್ಲಭಕನ ಬಳಿಕ ಪಟ್ಟವನ್ನೇರಿದವ ಹಿರಿಯನಾದ ಚಂದ್ರಾಪೀಡ (ಕ್ರಿ.ಶ. 713). ಅರಬ್ಬರ ಆಕ್ರಮಣವನ್ನು ನಿವಾರಿಸಲು ಈತ ಚೀನಾದ ಅರಸನ ನೆರವು ಕೇಳಿದ. ಆದರೆ ಚೀನಾದಿಂದ ಇಂದಿನ ಹಾಗೆ ಅಂದೂ ಪುಡಿಗಾಸಿನ ನೆರವೂ ಸಿಗಲಿಲ್ಲ. ಆದರೂ ತನ್ನ ಸಾಮರ್ಥ್ಯದಿಂದಲೇ ದೇಶವನ್ನು ಅರಬ್ಬರ ಬರ್ಬರತೆಯಿಂದ ರಕ್ಷಿಸಿಕೊಂಡಿದ್ದ ಚಂದ್ರಾಪೀಡ. ಇವನ ಸಾಹಸವನ್ನು ಕಂಡು ಚೀನಾದ ಚಕ್ರವರ್ತಿ ಕ್ರಿ.ಶ 720ರಲ್ಲಿ ರಾಜನೆಂದು ಗೌರವಿಸಿದ್ದನ್ನು ಚೀನಾದ ಇತಿಹಾಸದ ಪುಟಗಳು ಸಾರುತ್ತವೆ. ಉತ್ತಮ, ನ್ಯಾಯಪರ ಆಡಳಿತಕ್ಕೆ ಹೆಸರಾಗಿದ್ದ ಚಂದ್ರಾಪೀಡನ ಬಗೆಗಿನ ಕಥೆಯೊಂದು ಇಂದಿಗೂ ಪ್ರಚಲಿತದಲ್ಲಿದೆ. ಒಮ್ಮೆ ಚಂದ್ರಾಪೀಡನ ಅಧಿಕಾರಿಗಳು ದೇವಸ್ಥಾನವೊಂದನ್ನು ಕಟ್ಟಲು ಒಬ್ಬ ಚಮ್ಮಾರನ ಮನೆ ಇದ್ದ ಸ್ಥಳವನ್ನು ಆರಿಸಿದರು. ಚಮ್ಮಾರ ರಾಜನ ಬಳಿ ತನ್ನ ವಿಪತ್ತಿನ ಬಗ್ಗೆ ದೂರು ಕೊಟ್ಟ. ವಿಚಾರಣೆ ನಡೆಸಿದ ರಾಜ ತನ್ನ ಅಧಿಕಾರಿಗಳ ತಪ್ಪನ್ನರಿತು ಅವರಿಗೆ ಶಿಕ್ಷೆ ವಿಧಿಸಿದ. ಚಮ್ಮಾರ ರಾಜನ ನ್ಯಾಯವನ್ನು ಮೆಚ್ಚಿ ಸ್ವತಃ ಆ ಸ್ಥಳವನ್ನು ದೇವಸ್ಥಾನಕ್ಕಾಗಿ ಬಿಟ್ಟು ಕೊಟ್ಟ. ರಾಜ ಸೂಕ್ತ ಮೌಲ್ಯ ನೀಡಿಯೇ ಆ ಜಾಗವನ್ನು ಚಮ್ಮಾರನಿಂದ ಪಡೆದುಕೊಂಡ. ಇಂತಹ ಉತ್ತಮ ಆಡಳಿತಗಾರ ಸ್ವಂತ ತಮ್ಮ ತಾರಾಪೀಡನ ಕುತಂತ್ರಕ್ಕೆ ಕೊಲೆಯಾಗಿ ಹೋದ(ಕ್ರಿ.ಶ 722). ಕ್ರೂರಿಯೂ, ಕೊಲೆಗಡುಕನೂ, ನಿರ್ದಯಿಯೂ ಆಗಿದ್ದ, ಆಡಳಿತ ಕೌಶಲ್ಯವಿಲ್ಲದ ತಾರಾಪೀಡ ಪಟ್ಟಕ್ಕೆ ಬಂದ ಮೇಲೆ ಅವನ ಕಾಟ ತಾಳಲಾರದೆ ಅನೇಕರು ದೇಶಬಿಟ್ಟು ಹೋದರು. ಕ್ರಿ.ಶ. 724ರಲ್ಲಿ ಈತ ಪಾರ್ಶ್ವವಾಯು ಪೀಡಿತನಾಗಿ ಸಾವನ್ನಪ್ಪಿದ ಬಳಿಕ ಪಟ್ಟಕ್ಕೆ ಬಂದವನೇ ಲಲಿತಾದಿತ್ಯ. ಇವನ ಆಡಳಿತದಲ್ಲಿ ಕಾಶ್ಮೀರದ ನಕ್ಷೆ, ಚಿತ್ರಣ ಎಲ್ಲವೂ ಬದಲಾದವು.

            ಲಲಿತಾದಿತ್ಯ ಸಿಂಹಾಸನವನ್ನೇರಿದಾಗ ಕಾಶ್ಮೀರದ ಸ್ಥಿತಿ ಹದಗೆಟ್ಟಿತ್ತು. ಅವನ ಅಣ್ಣನ ಕ್ರೌರ್ಯಕ್ಕೆ ಸ್ವಾಭಿಮಾನಿಗಳೆಲ್ಲಾ ಊರು ಬಿಟ್ಟು ತೆರಳಿದ್ದರು. ನಡುವೆಯೇ ರಾಜ್ಯವನ್ನು ವಶಪಡಿಸಿಕೊಳ್ಳಲು ಶತ್ರುಗಳ ಕಾಟ. ಇದರಿಂದಾಗಿ ಅವನ  ಸಂಪೂರ್ಣ ಆಡಳಿತ ಕಾಲದಲ್ಲಿ ಸದಾ ಯುದ್ಧನಿರತನಾಗಬೇಕಾದ ಅನಿವಾರ್ಯತೆ ಉಂಟಾಯಿತು. ಅದರಿಂದ ರಾಜ್ಯಕ್ಕೇ, ಆಡಳಿತಕ್ಕೇನೂ ಹಾನಿಯಾಗಲಿಲ್ಲ. ಬದಲಾಗಿ ಕಾಶ್ಮೀರ ತನ್ನ ಸುವರ್ಣಯುಗವನ್ನೇ ಕಂಡಿತು. ತನ್ನ ಶತ್ರುಗಳನ್ನು ಬಡಿಯಲು ಹೊರಟವ ಇಡೀ ಭಾರತವನ್ನು ತನ್ನ ಚಕ್ರಾಧಿಪತ್ಯಕ್ಕೆ ಒಳಪಡಿಸಿಕೊಳ್ಳುವ ದಿಗ್ವಿಜಯಕ್ಕೂ ಅಣಿಯಾದ. ಪರ್ವತವಾಸಿಗಳಾದ ದರ್ದ, ಕಾಂಬೋಜ ಮತ್ತು ತುರುಷ್ಕರನ್ನೂ ಸದೆಬಡಿದ ಬಳಿಕ ಆತ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡು ಕನೌಜಿನ ಯಶೋವರ್ಮನ ಮೇಲೆ ಜಯ ಗಳಿಸಿದ. ಯಶೋವರ್ಮನನ್ನು ಸೋಲಿಸಿದ ಬಳಿಕ ಆತನ ಸಖ್ಯವನ್ನು ಬಯಸಿದ. ಇದು ಹಿಂದೂ ಅರಸರಿಗೂ ತುರ್ಕರಿಗೂ ನಡುವಣ ಇರುವ ವ್ಯತ್ಯಾಸ. ಶತ್ರುವನ್ನು ಕ್ಷಮಿಸಿ ತನ್ನವರಲ್ಲೊಂದಾಗಿಸಿದ ರಾಜಧರ್ಮ ನೀತಿ. ಅವನ ಈ ಧರ್ಮ ಮಾರ್ಗವೇ  ಮುಂದೆ ಆತನಿಗೆ ಅರಬ್ಬರೊಂದಿಗೆ ಕಾದಾಡುವಾಗ, ಟಿಬೆಟನ್ನರನ್ನು ಮಣಿಸುವಾಗ ಸಹಾಯಕ್ಕೊದಗಿತು. ತರುವಾಯ ಆತ ಬಿಹಾರ, ಬಂಗಾಳ, ಕಾಮರೂಪ, ಒರಿಸ್ಸಾಗಳನ್ನೂ ಗೆದ್ದು ಪೂರ್ವ ಸಮುದ್ರದವರೆಗೆ ತನ್ನ ಅಧಿಪತ್ಯವನ್ನು ವಿಸ್ತರಿಸಿದ. ದಕ್ಷಿಣ ಭಾರತದಲ್ಲಿ ಪ್ರಬಲರಾಗಿದ್ದ ರಾಷ್ತ್ರಕೂಟರನ್ನು ಸೋಲಿಸಿ ಕಾಶ್ಮೀರಕ್ಕೆ ಹಿಂತಿರುಗುವಾಗ ಗುಜರಾತ್, ಕಾಠಿಯಾವಾಡ, ಮಾಳ್ವ ಮತ್ತು ಮಾರ್ವಾಡಗಳ ಮೂಲಕ ಹಾದು ಹೋಗಿ ವಲ್ಲಭಿಯ ಮೈತ್ರಕ ಮತ್ತು ಚಿತ್ತೂರಿನ ರಾಜ್ಯಗಳನ್ನು ಗೆದ್ದು ಕಾಶ್ಮೀರಕ್ಕೆ ಹಿಂತಿರುಗಿದ. ದಕ್ಷಿಣ ದಿಗ್ವಿಜಯದ ಅನಂತರ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಅನೇಕ ಯುದ್ಧಗಳನ್ನು ಕೈಕೊಂಡ.

            ಆಗ ಬಲಾಢ್ಯವಾಗಿದ್ದ ಟಿಬೆಟಿಯನ್ನರು ಲಲಿತಾದಿತ್ಯನಿಗೆ ಸವಾಲಾಗಿದ್ದರು. ಒಂದು ಕಡೆ ಟಿಬೆಟಿಯನ್ನರ ಉಪಟಳ, ಇನ್ನೊಂದೆಡೆ ಸ್ವಾತ್, ಮುಲ್ತಾನ್, ಸಿಂಧ್ ಪ್ರಾಂತ್ಯಗಳನ್ನು ಗೆದ್ದು ಹಿಂದೂಗಳನ್ನು ತರಿಯುತ್ತಾ, ಮತಾಂತರಿಸುತ್ತಾ ಮುಂದೊತ್ತಿ ಬಂದು ಕಾಶ್ಮೀರದ ಬಾಗಿಲು ತಟ್ಟುತ್ತಿದ್ದ ಅರಬ್ಬರು. ಇಬ್ಬರಿಗೂ ಪಾಠ ಕಲಿಸಬೇಕಾದರೆ ಬೃಹತ್ ಸೈನ್ಯದ ಸಂಚಯನದ ಅಗತ್ಯತೆಯ ಮನಗಂಡ ಮುಕ್ತಾಪೀಡ ಚೀನಾದ ಸಹಾಯ ಕೋರಿದ. ಆಗ ಚೀನಾದಲ್ಲಿ ತಾಂಗ್ ವಂಶ ಉತ್ತುಂಗದಲ್ಲಿದ್ದ ಕಾಲ. ಜೊತೆಗೇ ಕೇಂದ್ರ ಚೀನಾದ ಕೆಲ ಭಾಗಗಳನ್ನು ಟಿಬೆಟಿಯನ್ನರಿಗೆ ಕಳೆದುಕೊಂಡು ಟಿಬೆಟಿಯನ್ನರ ಭೀತಿಯಲ್ಲಿದ್ದ ಕಾಲ. ಚೀನಾದ ದೊರೆ ತಾನು ಲಲಿತಾದಿತ್ಯನನ್ನು ಕಾಶ್ಮೀರದ ರಾಜ ಹಾಗೂ ಗೆಳೆಯನೆಂದು ಗೌರವಿಸುತ್ತೇನೆಯೇ ಹೊರತು ಸೈನ್ಯದ ನೆರವು ನೀಡಲು ಸಾಧ್ಯವಿಲ್ಲವೆಂದ. ಉರಿದೆದ್ದ ಲಲಿತಾದಿತ್ಯ ಚೀನಾದ ಮೇಲೆ ದಂಡೆತ್ತಿ ತನ್ನ ಸಾಮಂತ ರಾಜ್ಯವನ್ನಾಗಿಸಿದ. ಇದರಿಂದ ಚೀನಾದ ಪದಾತಿದಳದ ಜೊತೆ, ಸಸಾನಿಡ್-ಚೀನೀ ಅಶ್ವಸೈನ್ಯ ಲಲಿತಾದಿತ್ಯನ ಸಹಾಯಕ್ಕೆ ಒದಗಿತು. ಈ ಸಸಾನಿಡ್ ಪರ್ಷಿಯಾವನ್ನು ಆಳುತ್ತಿದ್ದ ರಾಜವಂಶ. ಅರಬ್ಬರು ಪರ್ಷಿಯಾವನ್ನು ಆಕ್ರಮಿಸಿದಾಗ ಸಸಾನಿಡ್ ವಂಶದ ಕೊನೆಯ ದೊರೆಯ ಮಗ ಚೀನಾದ ತಾಂಗ್ ರಾಜವಂಶದ ಆಸರೆ ಪಡೆದ. ಬಹುಷಃ ಅವನಿಂದಲೇ ಸಸಾನಿಡ್ ಅಶ್ವ ಸೈನ್ಯ ಚೀನಿಯರಿಗೆ ಸಿಕ್ಕಿರುವ ಸಾಧ್ಯತೆಗಳಿವೆ. ಹೀಗೆ ಚೀನಾದ ಸೈನ್ಯ ಹಾಗೂ ಯಶೋವರ್ಮನ ಸಹಾಯದೊಂದಿಗೆ ಲಲಿತಾದಿತ್ಯ ಟಿಬೆಟಿಯನ್ನರ ಮೇಲೆ ದಂಡೆತ್ತಿ ಹೋಗಿ ತುಖಾರಿ ಸ್ಥಾನ, ಲಡಕ್ ಪ್ರಾಂತ್ಯಗಳನ್ನಲ್ಲದೆ ಸಂಪೂರ್ಣ ಟಿಬೆಟನ್ನು ವಶಪಡಿಸಿಕೊಂಡ.

           ಈಗ ಮುಕ್ತಾಪೀಡ ಅರಬ್ಬರನ್ನು ಭಾರತದಿಂದ ಕೊತ್ತೊಗೆಯಲು ಸಿದ್ಧನಾದ. ಸ್ವಾತ್, ಸಿಂಧ್, ಮುಲ್ತಾನ್ಗಳಿಂದ ಅರಬ್ಬರನ್ನು ಓಡಿಸಿದ ಲಲಿತಾದಿತ್ಯನಿಗೆ ಅಫ್ಘನ್ನಿನಲ್ಲಿ ಹಿಂದೂಗಳನ್ನು ಗೋಳುಹೊಯ್ದುಗೊಳ್ಳುತ್ತಿರುವ ವಿಚಾರ ಕಿವಿಗೆ ಬಿತ್ತು. ತಕ್ಷಣ ಅಫ್ಘನ್ನರ ಮೇಲೆ ದಾಳಿ ಮಾಡಿ ಆತ ಕಾಬೂಲನ್ನು ಗೆದ್ದ. ಇರಾನಿನ ಕೆಲ ಭಾಗಗಳನ್ನೂ ತನ್ನ ವಶವಾಗಿಸಿಕೊಂಡ. ಕಾಬೂಲಿನ ಮುಖಾಂತರ   ಅಫ್ಘನ್ನಿನ ಈಶಾನ್ಯ ಭಾಗಗಳನ್ನು, ತುರ್ಕಿಸ್ತಾನ, ಟ್ರಾನ್ಸೊಕ್ಸಿಯಾನಾ(ಆಧುನಿಕ ಉಜ್ಬೇಕಿಸ್ತಾನ್, ತಜಕಿಸ್ತಾನ್, ದಕ್ಷಿಣ ಕಿರ್ಗಿಸ್ತಾನ್ ಮತ್ತು ನೈಋತ್ಯ ಕಝಕಿಸ್ತಾನಗಳೊಂದಿಗೆ ಕೂಡಿದ ಮಧ್ಯ ಏಷ್ಯದ ಭಾಗ)ಗಳಲ್ಲಿದ್ದ ಮುಸಲರ ಸೊಕ್ಕು ಮುರಿದ. ಬುಖಾರ್ ಪ್ರಾಂತ್ಯದ ಆಡಳಿತಗಾರ ಮುಮಿನ್ ನಾಲ್ಕು ನಾಲ್ಕು ಬಾರಿ ಲಲಿತಾದಿತ್ಯನ ಕೈಯಲ್ಲಿ ಏಟು ತಿಂದ. ಬುಖಾರ ಸಂಸ್ಕೃತದ ವಿಹಾರ ಪದದಿಂದ ಬಂದಿದೆ. ಈಗಿನ ಉಜ್ಬೆಕಿಸ್ತಾನಿನಲ್ಲಿ ಈ ಪ್ರಾಂತವಿದೆ. "ತನಗೆ ಸೋತು ಶರಣಾಗತರಾದುದರ ಕುರುಹಾಗಿ ತುರುಷ್ಕರ ಅರ್ಧ ತಲೆ ಬೋಳಿಸುವಂತೆ ಲಲಿತಾದಿತ್ಯ ಆದೇಶಿಸಿದ್ದ. ಹಿಂದೆ ಆಕ್ರಮಿಸಿಕೊಂಡು ಮುಂದುವರಿದಿದ್ದ ಭಾಗಗಳಿಂದ ಮುಸ್ಲಿಮರು ಹಿಂದೆ ಹಿಂದೆ ಸರಿಯಬೇಕಾಯಿತು. ವಾಯುವ್ಯ ಭಾರತದ ಅನೇಕ ಭಾಗಗಳಿಂದಲೂ ಕಾಲು ಕೀಳಬೇಕಾಯಿತು. ಕಸಬಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳ ಜನರು ಮತ್ತೆ ವಿಗ್ರಹಾರಾಧನೆಯಲ್ಲಿ ತೊಡಗಿದರು. ಸೋತು ಓಡಿದ ಮುಸ್ಲಿಮರಿಗೆ ಎಲ್ಲಿ ಹೋಗುವುದು ಎಂಬುದೇ ಗೊಂದಲವಾದಾಗ, ಅರಬ್ಬರ ಸಾಮಂತನೊಬ್ಬ ಸರೋವರದಾಚೆಯ ಆಲ್-ಹಿಂದ್ ಬಳಿ ಅವರೆಲ್ಲಾ ಇರಲು ವ್ಯವಸ್ಥೆ ಮಾಡಿದ. ಅದನ್ನು ಅತ್ ಮೆಹಫುಜಾ(ರಕ್ಷಿತ) ಎಂದು ಹೆಸರಿಟ್ಟು ಕರೆಯಲಾಯಿತು" ಎಂದು ಮುಸ್ಲಿಂ ಇತಿಹಾಸಕಾರ ಬಿಲಾದುರಿ ಬರೆದಿದ್ದಾನೆ.(ಇಂಡಿಯನ್ ರೆಸಿಸ್ಟೆನ್ಸ್ ಟು ಅರ್ಲಿ ಮುಸ್ಲಿಂ ಇನ್ವೇಡರ್ಸ್ ಅಪ್ ಟು 1206 ಎ.ಡಿ. - ಡಾ|| ರಾಮಗೋಪಾಲ್ ಮಿಶ್ರಾ). ಮಸೂದಿ ಎಂಬ ಅರಬ್ ಇತಿಹಾಸಕಾರ "ಹಜ್ಜಾಜನು ಅರಬ್ ಸೇನಾಧಿಕಾರಿ ಅಬ್ದುಲ್ ರಹಮಾನನ ಅಧಿಕಾರವನ್ನು ವಜಾಗೊಳಿಸಿ ಬೇರೊಬ್ಬನನ್ನು ನೇಮಿಸುವುದಾಗಿ ಬೆದರಿಕೆ ಹಾಕಿದಾಗ ಅಬ್ದುಲ್ ರಹಮಾನನು ದಂಗೆಯೆದ್ದು ಹಿಂದೂರಾಜನೊಬ್ಬನ ಜೊತೆ ಹೊಂದಾಣಿಕೆ ಮಾಡಿಕೊಂಡು ಹಜ್ಜಾಜನ ವಿರುದ್ಧವೇ ಯುದ್ಧಕ್ಕೆ ಸಿದ್ಧನಾದ. ಈ ಒಪ್ಪಂದ ಕಾರ್ಯರೂಪಕ್ಕೆ ಬರದ ಕಾರಣ ಅಬ್ದುಲ್ ರಹಮಾನ್ ಆತ್ಮಹತ್ಯೆ ಮಾಡಿಕೊಂಡ. ಆದರೆ ಆ ಹಿಂದೂ ರಾಜ ಯುದ್ಧ ಮುಂದುವರೆಸಿದ. ಆತ ಪೂರ್ವ ಪರ್ಷಿಯಾವನ್ನು ವಶಪಡಿಸಿಕೊಂಡು ಟೈಗ್ರಿಸ್ ಮತ್ತು ಯುಫ್ರೆಟಿಸ್ ನಡಿಗಳ ದಡದವರೆಗೆ ಮುಂದುವರೆದಿದ್ದ. ಹಜ್ಜಾಜ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದರೂ ಆತ ಖಲೀಫನಿಗೆ ಬಗ್ಗಲಿಲ್ಲ" ಎಂದು ಬರೆದಿದ್ದಾನೆ. ಆ ಸಮಯದಲ್ಲಿ ಅಂತಹಾ ಬಲಾಢ್ಯ ಹಿಂದೂ ಅರಸನಿದ್ದದ್ದು ಲಲಿತಾದಿತ್ಯನೇ. ಕಲ್ಹಣನ ರಾಜತರಂಗಿಣಿ ಒದಗಿಸಿದ ಮಾಹಿತಿಯೂ ಇದರೊಡನೆ ತಾಳೆಯಾಗುತ್ತದೆ.

         ಪೂರ್ವ ಸಮುದ್ರ ಮಹೋದಧಿಯಿಂದ ಪಶ್ಚಿಮದ ಯುಫ್ರೆಟಿಸ್ & ಟೈಗ್ರಿಸ್ ನದಿಗಳವರೆಗೆ, ಕಜಕಿಸ್ತಾನದಿಂದ ಒರಿಸ್ಸಾ ಹಾಗೂ ರಾಷ್ಟ್ರಕೂಟರು ಆಳುತ್ತಿದ್ದ ದಕ್ಷಿಣದ ಭಾಗಗಳವರೆಗೆ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿ ಕಾಶ್ಮೀರವನ್ನು ಕೇಂದ್ರವನ್ನಾಗಿಸಿಕೊಂಡು ಮೂವತ್ತಾರು ವರ್ಷಗಳ ಕಾಲ ಏಕಚಕ್ರಾಧಿಪತಿಯಾಗಿ ಮೆರೆದ ಲಲಿತಾದಿತ್ಯ. ಅವನ ಅವಧಿಯಲ್ಲಿ ಕಾಶ್ಮೀರ ಸರ್ವಾಂಗೀಣ ಪ್ರಗತಿ ಕಂಡಿತು. ಸ್ವತಃ ಸೈನ್ಯವನ್ನು ನಡೆಸಿ ಮಾಡಿದಷ್ಟೂ ಯುದ್ಧಗಳನ್ನು ಗೆದ್ದ ಅವನು ಅಲೆಗ್ಸಾಂಡರನೊಡನೆ ಹೋಲಿಸಬೇಕಾದ ಜಗದೇಕವೀರ. ಈತನ ಕಾಲದಲ್ಲಿ ಕಾಶ್ಮೀರ ನಾನಾ ಮುಖವಾಗಿ ಪ್ರಗತಿಹೊಂದಿ ಸಂಪದ್ಭರಿತ ನಾಡಾಯಿತು. ಲಲಿತಾದಿತ್ಯ ತನ್ನ ದಂಡಯಾತ್ರೆಗಳಿಂದ ಗಳಿಸಿದ ಅಪಾರ ಐಶ್ವರ್ಯದಿಂದ ಭವನಗಳನ್ನೂ, ದೇವಾಲಯಗಳನ್ನೂ, ಸರೋವರ, ಕಾಲುವೆಗಳನ್ನೂ ನಿರ್ಮಿಸಿದ. ಮಾರ್ತಾಂಡ ಸೂರ್ಯ ದೇವಾಲಯ ಒಂದು ಸಾಕು ಅವನ ಹಿರಿಮೆಯನ್ನು ಸಾರಲು. ಯಶೋವರ್ಮನನ್ನು ಸೋಲಿಸಿದ ಬಳಿಕ ಕನೌಜನಿಂದ ಭವಭೂತಿ ಮತ್ತು ವಾಕ್ಪತಿರಾಜ ಎಂಬ ಸುಪ್ರಸಿದ್ಧ ಕವಿಗಳನ್ನು ಕಾಶ್ಮೀರಕ್ಕೆ ಆಹ್ವಾನಿಸಿ ತನ್ನ ರಾಜ್ಯದಲ್ಲೇ ನೆಲೆಸುವಂತೆ ಮಾಡಿದ. ಮಹಾಪದ್ಮವೆಂಬ ಬೃಹತ್ ಸರೋವರಕ್ಕೆ ಅನೇಕ ಕಾಲುವೆಗಳನ್ನು ಕಡಿಸಿ ಕಾಶ್ಮೀರದ ಬಹುಭಾಗವನ್ನು ನದೀ ಮಾತೃಕವನ್ನಾಗಿಸಿ ಸಸ್ಯ ಸಂಪನ್ನವಾಗಿ ಮಾಡಿದ. ಅಲ್ಲಿನ ವಿವಿಧ ರೀತಿಯ ಕಾಲುವೆಗಳ ರಚನಾಕೌಶಲ್ಯವನ್ನು ಇಂದಿಗೂ ಶಿಲ್ಪಿಗಳನ್ನು ನಿಬ್ಬೆರಗಾಗಿಸುತ್ತವೆ. ಸರಸ್ವತಿ ಅಥವಾ ಕಲ್ನೋತ್ರಿ ಹಾಗೂ ಮಧುಮತಿ ನದಿಗಳ ಸಂಗಮಸ್ಥಾನದಲ್ಲಿ ಶಾರದಿ ಗ್ರಾಮದಲ್ಲಿರುವ ಶಾರದಾಪೀಠಕ್ಕೆ ಲಲಿತಾದಿತ್ಯ ಭೇಟಿಕೊಡುತ್ತಿದ್ದ ಉಲ್ಲೇಖ ರಾಜತರಂಗಿಣಿಯಲ್ಲಿ ದಾಖಲಾಗಿದೆ.

         ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂ ಕ್ರಿ.ಶ. 711-12ರಲ್ಲಿ ಸಿಂಧ್ ಮೇಲೆ ದಾಳಿಯೆಸಗಿ ಆಕ್ರಮಿಸಿಕೊಂಡದ್ದು ಭಾರತದ ಇತಿಹಾಸದ ಅತಿಮುಖ್ಯ ಘಟನೆಗಳಲ್ಲಿ ಒಂದೆಂದು ದಾಖಲಾಗಿದೆ. ಆದರೆ ಮುಂದಿನ 2 ದಶಕಗಳಲ್ಲಿ ಭಾರತದ ಮೇಲೆ ಅರಬ್ಬರು 3 ಸಲ ದಂಡೆತ್ತಿ ಬಂದಾಗ ಮೂರು ಸಲವೂ ಅವರನ್ನು ಲಲಿತಾದಿತ್ಯ ಮುಕ್ತಾಪೀಡ ಸೋಲಿಸಿ ಓಡಿಸಿದ್ದು ಇತಿಹಾಸ ಪಠ್ಯಪುಸ್ತಕಗಳಲ್ಲಿ ದಾಖಲಾಗಲೇ ಇಲ್ಲ. ಅಶೋಕ, ಅಕ್ಬರ್, ಔರಂಗಜೇಬ, ಕೊನೆಯಲ್ಲಿ ಬ್ರಿಟಿಷ್ ಭಾರತೀಯ ಸಾಮ್ರಾಜ್ಯ ಭಾರತ ಕಂಡ ಅತಿದೊಡ್ಡ ಸಾಮ್ರಾಜ್ಯಗಳು ಎಂದು ಬ್ರಿಟಿಷರು ರಚಿಸಿದ, ಇಂದೂ ಅದೇ ಜಾಡಿನಲ್ಲಿರುವ ನಮ್ಮ ಪಠ್ಯಪುಸ್ತಕಗಳು ಹೇಳುತ್ತವೆ. ಆದರೆ ಭಾರತದ ಇತಿಹಾಸದಲ್ಲೇ ಅತ್ಯಂತ ಬೃಹತ್ತಾದ ಸಾಮ್ರಾಜ್ಯವನ್ನು ಸ್ಥಾಪಿಸಿದ ಲಲಿತಾದಿತ್ಯ ಮುಕ್ತಾಪೀಡನ ಹೆಸರೇ ಇಲ್ಲಿನ ಪಠ್ಯಪುಸ್ತಕಗಳಲ್ಲಿಲ್ಲ. ಆತ ಅರಬ್ಬರನ್ನು ಮಾತ್ರ ಸೋಲಿಸಲಿಲ್ಲ. ಚೀನಿಯರನ್ನು, ಟಿಬೆಟಿಯನ್ನರನ್ನು, ಬಲಿಷ್ಟ ಯಶೋವರ್ಮ, ರಾಷ್ಟ್ರಕೂಟ, ವಂಗ ದೇಶಾಧಿಪರನ್ನು ಜಯಿಸಿದ. ಅವನ ಸಾಮ್ರಾಜ್ಯ ಕ್ಯಾಸ್ಪಿಯನ್ ಸಮುದ್ರದಿಂದ ಮಹೋದಧಿವರೆಗೆ, ಕಜಕ್ನಿಂದ ಕರ್ಣಾಣದವರೆಗೆ ಹರಡಿತ್ತು. ಅಕ್ಬರನ ಸಾಮ್ರಾಜ್ಯ ಲಲಿತಾದಿತ್ಯನ ಸಾಮ್ರಾಜ್ಯದ ಅರ್ಧದಷ್ಟೂ ಇರಲಿಲ್ಲ. ಇಂತಹ ಬೃಹತ್ ಸಾಮ್ರಾಜ್ಯವನ್ನು ಲಲಿತಾದಿತ್ಯ ಕಟ್ಟಿದ್ದು ಮುಂದೊತ್ತಿ ಬರುತ್ತಿದ್ದ ಅರಬ್ಬರ ವಿರೋಧದ ನಡುವೆ ಎಂಬುದು ಗಮನಾರ್ಹ ಅಂಶ. ಅಂದಿನ ದಿನಗಳಲ್ಲಿ ತಾವು ಆಕ್ರಮಿಸಿಕೊಂಡ ನಾಡಲ್ಲೆಲ್ಲಾ ತಮ್ಮ ಮತವನ್ನು ಬಲವಂತವಾಗಿ ಹೇರಲು ಯತ್ನಿಸಿದ ಮುಸಲರು, ಕ್ರೈಸ್ತರಂತೆ ಲಲಿತಾದಿತ್ಯ ತನ್ನ ಆಡಳಿತದಲ್ಲಿದ್ದ ನಾಡುಗಳಲ್ಲಿ ಒಮ್ಮೆಯೂ ಮಾಡಲಿಲ್ಲ. ಲಲಿತಾದಿತ್ಯ ತನ್ನ ಜೀವಮಾನದಲ್ಲಿ ಒಮ್ಮೆಯೂ ಸೋಲು ಅನುಭವಿಸಲಿಲ್ಲ. ಅಲಿಗ್ಸಾಂಡರನನ್ನು ಬಿಟ್ಟರೆ ಇಂತಹಾ ದಾಖಲೆ ಇರುವ ಐತಿಹಾಸಿಕ ವ್ಯಕ್ತಿ ಮತ್ತೊಬ್ಬನಿಲ್ಲ. ತನ್ನ ಪಾಲಿನ ಕೆಲಸ ಇನ್ನು ಮುಗಿಯಿತು ಎಂದು ಅರಿವಾದೊಡನೆ ಲಲಿತಾದಿತ್ಯ ಮುಕ್ತಾಪೀಡ ತನ್ನ 60ನೆಯ ವಯಸ್ಸಿನಲ್ಲಿ ಭಾರತೀಯ ಜೀವನಧರ್ಮದಂತೆ ಜೀವನ್ಮುಕ್ತನಾಗುವ ದೃಷ್ಟಿಯಂತೆ ಸಿಂಹಾಸನ ತ್ಯಜಿಸಿ ಸಂನ್ಯಾಸ ಸ್ವೀಕರಿಸಿ ಹಿಮಾಲಯಕ್ಕೆ ಹೊರಟುಹೋದ. ಇಂತಹ ಮಹಾನ್ ಅರಸನ ಬಗ್ಗೆ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಒಂದಕ್ಷರವೂ ಇಲ್ಲ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ