ಜಗವ ಕೋರೈಸಿದ ಕೋಲ್ಮಿಂಚು
ಭಾರತವೆಂಬ ನಾಡು ಬಗೆದಷ್ಟು ಮೊಗೆದು ಕೊಡುವ ಬೀಡು. ಯಾವುದನ್ನು ಅರಸಿ ಯಾರೇ ಬಂದರೂ ಅವರಿಗೆ ಬೇಕಾದುದನ್ನು ದಯಪಾಲಿಸಿದ ಸಂಪದ್ಭರಿತ ರಾಷ್ಟ್ರ ಇದು. ಆಧ್ಯಾತ್ಮಿಕತೆಯನ್ನು ಅರಸಿ ಬಂದವರಿಗೆ ಇದು ಗುರುವಾಯಿತು; ವಿವಿಧ ಶ್ರೇಣಿಗಳಿದ್ದೂ, ಎಷ್ಟೇ ಕುಟಿಲ ತಂತ್ರಗಳನ್ನು ಉಪಯೋಗಿಸಿದರೂ ಒಡೆಯದ ಇಲ್ಲಿನ ಸಾಮಾಜಿಕ ವ್ಯವಸ್ಥೆ ಹಲವರಿಗೆ ಅಧ್ಯಯನದ ವಸ್ತುವಾಯಿತು; ಸಂಪತ್ತನ್ನೇ ಲೂಟಿ ಮಾಡಲು ಬಂದವರಿಗೂ ಇದು ತನ್ನ ಎದೆಯನ್ನೇ ಬಗೆದಿಟ್ಟಿತು! ದಾಸ್ಯದ ಅವಧಿಯ ದುಸ್ತರ ಸನ್ನಿವೇಶದಲ್ಲೂ ಇಲ್ಲಿ ಕ್ಷಾತ್ರ ಮೆರೆಯಿತು; ಆಧ್ಯಾತ್ಮಿಕತೆಯ ಔನ್ನತ್ಯ ತಲುಪಿದ ಯೋಗಿಗಳ ಮುಂದೆ ಹಲವರು ನತಮಸ್ತಕರಾದರು; ಕೊಳ್ಳೆ ಹೊಡೆದಷ್ಟು ಮುಗಿಯದ ಸಂಪನ್ಮೂಲ ಕಾಣಿಸಿಕೊಂಡಿತು! ಅಂತಹಾ ಒಂದು ಕೋಲ್ಮಿಂಚೇ ಕೋಲಾರದ ಚಿನ್ನದ ಗಣಿ!
ಮತಾಂಧ, ರಕ್ಕಸ ಪ್ರವೃತ್ತಿಯ ಟಿಪ್ಪುವೆಂಬ ಇಲಿಯನ್ನು ಬೇಟೆಯಾಡಿದ ಬಳಿಕ ಈಸ್ಟ್ ಇಂಡಿಯಾ ಕಂಪನಿ ಆಗಿನ ಮೈಸೂರು ರಾಜ್ಯದ ಗಡಿಯನ್ನು ಗುರುತಿಸಲು ಎಚ್.ಎಂ. 33ನೇ ರೆಜಿಮೆಂಟಿನ ಲೆಫ್ಟಿನೆಂಟ್ ಜಾನ್ ವಾರೆನ್ ನನ್ನು 1802ರಲ್ಲಿ ನೇಮಿಸಿತು. ಆ ಸಮಯದಲ್ಲೇ ಎರ್ರಕೊಂಡ ಗುಡ್ಡದ (ಕೆ.ಜಿ.ಎಫ್. ನಿಂದ 15 ಕಿ.ಮೀ.) ಬಳಿ ಬಂಗಾರ ಸಿಗುತ್ತದೆ, ಕೆಲವು ಸ್ಥಳೀಯರು ಅಲ್ಲಿ ಚಿನ್ನವನ್ನು ಅಗೆದು ತೆಗೆಯುತ್ತಿದ್ದಾರೆ ಎಂಬ ವದಂತಿ ಅವನ ಕಿವಿಗೆ ಬಿತ್ತು. ಅದರ ವಿವರಗಳನ್ನು ಸಂಗ್ರಹಿಸಲೆಂದು ಕೋಲಾರಕ್ಕೆ ತೆರಳಿದ ಆತ ಅಲ್ಲಿನ ಚಿನ್ನವನ್ನು ತೋರಿಸಿದವರಿಗೆ ಪಾರಿತೋಷಕ ಕೊಡುವ ಬಗ್ಗೆ ಡಂಗುರ ಸಾರಿದ. ತುಸು ಸಮಯದಲ್ಲಿ ಹಳ್ಳಿಗನೊಬ್ಬ ಎತ್ತಿನ ಗಾಡಿಯಲ್ಲಿ ಕಲ್ಲುಮಣ್ಣನ್ನು ಹೇರಿಕೊಂಡು ಬಂದು ವಾರೆನ್ ಎದುರೇ ಅದನ್ನು ತೊಳೆದು ತೋರಿಸಿದಾಗ ಅದು ಫಳಫಳ ಹೊಳೆದು ಅವನ ಕಣ್ಣು ಕೋರೈಸಿತ್ತು; ಬ್ರಿಟಿಷ್ ಸಾಮ್ರಾಜ್ಯದ್ದೂ! ಆತ ಮರುಕ್ಷಣವೇ 1804ರ ಏಷಿಯಾಟಿಕ್ ಜರ್ನಲ್ನಲ್ಲಿ ಇದರ ಕುರಿತು ವರದಿಯೊಂದನ್ನು ಪ್ರಕಟಿಸಿದ. ವರದಿ ಮಾಡಿ ಆತ ಸುಮ್ಮನೆ ಕೂರಲಿಲ್ಲ. ಮಾರಿಕುಪ್ಪಂ ಮತ್ತು ಉರಿಗಾಂನಲ್ಲಿ ಚಿನ್ನ ಸಿಕ್ಕಿದೆಯೆಂಬ ವದಂತಿಯನ್ನು ಕೇಳಿ ಆತ ಆ ಪ್ರದೇಶದಲ್ಲಿ ಅನ್ವೇಷಣೆ ನಡೆಸಿದ. ಅವನ ಗಮನಕ್ಕೆ ಬಂದ ವಿಚಾರವೆಂದರೆ ಪರಿಯ ಎನ್ನುವ ಜನಾಂಗ ಅಲ್ಲಿ ಗಣಿಗಾರಿಕೆ ನಡೆಸುವಲ್ಲಿ ಪರಿಣತಿ ಪಡೆದಿತ್ತು. ಕೂಲಿಯಾಳುಗಳು 30 ಅಡಿ ಆಳದವರೆಗೆ ಇಳಿಯುತ್ತಿದ್ದರು. ಸಿಕ್ಕಿದ ಅದುರನ್ನು ಹೆಂಗಸರು ಅರೆದು ಜಾಲಿಸುತ್ತಿದ್ದರು. ಹನ್ನೆರಡು ಮಂದಿ ಕೆಲಸ ಮಾಡಿದರೆ ಒಂದು ದಿನದಲ್ಲಿ ಒಂದು ಗುಂಡಿ ತೆಗೆಯಬಹುದಾಗಿತ್ತು. ಆದರೆ ಅವರು ಬೇಸಗೆಯಲ್ಲಿ ಮಾತ್ರ ಗಣಿಗಾರಿಕೆ ನಡೆಸಬೇಕಾಗಿ ಬರುತ್ತಿತ್ತು. ಆಗ ಕೋಲಾರಕ್ಕೆ ಗಣಿಗಾರಿಕೆ ಮಾಡಲು ಬೇಕಾಗಿದ್ದ ಹಗ್ಗ, ಬುಟ್ಟಿ, ಕಂದೀಲು, ಕಟ್ಟಿ ಇವುಗಳ ಬೆಲೆ ದುಬಾರಿಯಾಗಿದ್ದರಿಂದ(ಇದು ಟಿಪ್ಪುವಿನ ಕೊಡುಗೆ) ಬೇರಾರಿಗೂ ಇದು ಆಕರ್ಷಕ ಉದ್ದಿಮೆಯಾಗಿ ಕಂಡಿರಲಿಲ್ಲ. ವಾರೆನ್ ಹತ್ತೆನ್ನರಡು ಕೂಲಿಕಾರರೊಡನೆ ಮಾರಿಕುಪ್ಪಮ್ಗೆ ತೆರಳಿ ಹಳೆಯಗಣಿಯಿಂದ ಅದುರನ್ನು ತೆಗೆದು ಅರೆದು ಪುಡಿ ಮಾಡಿಸಿದ. ಅದನ್ನು ಜಾಲಿಸಿ ಮೂವತ್ತು ಪಗೋಡ ತೂಕದಷ್ಟು ಚಿನ್ನವನ್ನು ಸಂಗ್ರಹಿಸಿದ ವಾರೆನ್, ಅದರ ಪರಿಶುದ್ಧತೆಯನ್ನು ತಿಳಿಯಲು ಮದ್ರಾಸಿನ ಟಂಕಸಾಲೆಗೆ ಕಳಿಸಿದ. ಅಲ್ಲಿಂದ ಇದು ಉತ್ತಮ ಗುಣಮಟ್ಟದ ಚಿನ್ನವೆಂದು ವರದಿ ಬಂತು. ಹಳ್ಳಿಗರ ಚಿನ್ನವನ್ನು ತೆಗೆಯಲು ಬಳಸಿದ ವಿಧಾನದಿಂದ, 56ಕೆಜಿಯಷ್ಟು ನಿಕ್ಷೇಪದಿಂದ ಸುಮಾರು ಒಂದು ಗ್ರೈನ್ ನಷ್ಟು ಚಿನ್ನವನ್ನು ಅಲ್ಲಿ ತೆಗೆಯಬಹುದು; ಸರ್ಕಾರ ಈ ಪರಿಶೋಧನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಆತ ಶಿಫಾರಸು ಮಾಡಿದ. ಆದರೆ ಸರ್ಕಾರ ಆಗ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಆದರೆ ಅಷ್ಟು ಹೊತ್ತಿಗೆ ಜಗದಾದ್ಯಂತ ಇದರ ಸುದ್ದಿ ಹಬ್ಬಿ ಹಲವರ ಬಾಯಲ್ಲಿ ನೀರೂರಿತ್ತು. ಹಲವು ದರೋಡೆಕೋರರು ದಾಳಿಯಿಟ್ಟು ವಿಫಲರಾದರು. ಕೆಲವರು ತಮ್ಮದೇ ಗುಂಪುಕಟ್ಟಿಕೊಂಡು ಬಂದು ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಬೇಕಾಯಿತು. 1860ರವರೆಗೆ ಹಲವಾರು ರೀತಿಯ ಅಧ್ಯಯನ ಕೈಗೊಂಡು, ಗಣಿಗಾರಿಕೆ ನಡೆಸುವ ವಿಧಾನಗಳನ್ನು ಬ್ರಿಟಿಷರು ಪ್ರಯೋಗಿಸಿದರಾದರೂ ಅದು ಫಲ ಕಾಣಲಿಲ್ಲ. ಬ್ರಿಟಿಷ್ ಸೇನೆಯಲ್ಲಿದ್ದ ಮೈಕೇಲ್ ಫಿಟ್ಜ್ ಗೆರಾಲ್ಡ್ ಲಾವೆಲ್ ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದ ಐರಿಷ್ ಯೋಧ. ಆತ ಆಗಷ್ಟೇ ನ್ಯೂಝಿಲ್ಯಾಂಡಿನಲ್ಲಿ ಮಾವೋರಿ ಯುದ್ಧ ಮುಗಿಸಿ ಬಂದಿದ್ದ. ವಿಪರೀತ ಓದುವ ಹುಚ್ಚಿದ್ದ ಆತನಿಗೆ ವಾರೆನ್ ವರದಿ ಕಣ್ಣಿಗೆ ಬಿತ್ತು. ಮಾವೋರಿ ಯುದ್ಧದಲ್ಲಿ ಭಾಗವಹಿಸಿದ್ದಾಗ ನಡೆಸಿದ್ದ ಚಿನ್ನದ ಗಣಿಗಾರಿಕೆಯ ಅನುಭವ ಆತನಲ್ಲಿ ಸಾಹಸವೊಂದಕ್ಕೆ ಅಣಿಯಾಗಲು ಪ್ರೇರೇಪಿಸಿತು. 1871ರಲ್ಲಿ ಎತ್ತಿನ ಬಂಡಿಯಲ್ಲಿ ಕೋಲಾರಕ್ಕೆ ಬಂದಿಳಿದ ಆತ ಹಲವು ಸಂಭಾವ್ಯ ಗಣಿಗಳನ್ನು ಗುರುತಿಸಿಕೊಂಡ. ಚಿನ್ನದ ನಿಕ್ಷೇಪದ ಕುರುಹುಗಳೂ ಅವನಿಗೆ ಸಿಕ್ಕವು. ಎರಡು ವರ್ಷಗಳ ಸತತ ಅಧ್ಯಯನದ ಬಳಿಕ 1873ರಲ್ಲಿ ಗಣಿಗಾರಿಕೆಗೆ ಅನುಮತಿ ಬೇಡಿ ಆತ ಮೈಸೂರು ಮಹಾರಾಜರಿಗೆ ಪತ್ರ ಬರೆದ. ಆದರೆ ಚಿನ್ನದ ಗಣಿಗಾರಿಕೆಗೆ ಕಾರ್ಯಸಾಧುವಲ್ಲ ಎಂದು ನಂಬಿದ್ದ ಅಧಿಕಾರಿಗಳು ಕಲ್ಲಿದ್ದಲು ತೆಗೆಯಲಷ್ಟೇ ಆತನಿಗೆ ಅನುಮತಿ ಕೊಟ್ಟರು. "ನನ್ನ ಹುಡುಕಾಟದಲ್ಲಿ ನಾನು ಯಶಸ್ವಿಯಾದೆನೆಂದರೆ ಸರಕಾರಕ್ಕೂ ಅದೊಂದು ಘನತೆಯ ವಿಚಾರವಾಗಿರುತ್ತದೆ. ಒಂದು ವೇಳೆ ನಾನು ಯಶಸ್ವಿಯಾಗದಿದ್ದರೂ ಸರಕಾರಕ್ಕೆ ಅದರಿಂದ ನಷ್ಟವೇನೂ ಇಲ್ಲ" ಎಂದು ಸರಣಿ ಪತ್ರಗಳ ಮೂಲಕ ಮನವಿ/ಮನವರಿಕೆ ಮಾಡಿದ ಆತ 1875ರಲ್ಲಿ ಚಿನ್ನದ ಗಣಿಗಾರಿಕೆಗೆ ಅನುಮತಿ ಗಿಟ್ಟಿಸಲು ಯಶಸ್ವಿಯಾದ. ಅವನು ಆರಿಸಿದ ಒಂದು ಕ್ಲಿಪ್ತ ಪ್ರದೇಶದಲ್ಲಿ ಚಿನ್ನ ತೆಗೆಯಲು ಇಪ್ಪತ್ತು ವರ್ಷಗಳ ಗುತ್ತಿಗೆ ನೀಡಲು ಸರ್ಕಾರ ಒಪ್ಪಿತು. ಅವನು ಉರಿಗಾಂ ಬಳಿ ತೋಡುದಾರಿ ತೆಗೆಸಿದ. ಲಾವೆಲ್ಗೆ ಗಣಿಗಾರಿಕೆಯಲ್ಲಿ ಅಲ್ಪಸ್ವಲ್ಪ ಅನುಭವವಿತ್ತೇ ಹೊರತು ತಜ್ಞತೆಯಿರಲಿಲ್ಲ; ಹಣವೂ ಇರಲಿಲ್ಲ. ಹಾಗಾಗಿ ಅವನ ಸಾಹಸ ನಿಕ್ಷೇಪದ ಅನ್ವೇಷಣೆಗಷ್ಟೇ ಸೀಮಿತವಾಯಿತು. ಆದರೆ ಅವನ ಅನ್ವೇಷಣಾ ದೃಷ್ಟಿ ಹಾಗೂ ಗಣಿಗಾರಿಕೆಯೆಂಬ ಅಪಾಯಕಾರಿ ಸಾಹಸ ಎಫ್. ಇ. ಪೆನ್ನಿಯ "ಲಿವಿಂಗ್ ಡೇಂಜರಸ್ಲಿ" ಎಂಬ ಕಾದಂಬರಿಗೆ ಮೂಲಸ್ತ್ರೋತವಾಗಿ ಆತನನ್ನು ಜನಪ್ರಿಯಗೊಳಿಸಿತು. ಆದರೆ ಬಂಡವಾಳದ ಕೊರತೆಯಿಂದ ತನ್ನ ಉದ್ಯಮವನ್ನು ಹೆಚ್ಚು ಮುಂದುವರೆಸಲಾರದೆ ಆತ 1877ರಲ್ಲಿ ಮದ್ರಾಸಿನ ಮೇಜರ್ ಜನರಲ್ ಡಿ ಲಾ ಪೋರ್ ಬಿಯರ್ಸ್ಫರ್ಡ್, ಮೆಕೆಂಜಿ, ಸರ್ ವಿಲಿಯಂ ಮತ್ತು ಕೋಲ್ ವಿಲಿಯಂ ಆರ್ಬುತ್ನಾಟರಿಗೆ ತನ್ನ ಹಕ್ಕನ್ನು ಮಾರಿದ. ಅವರು ಅನಂತರ ಕೋಲಾರ ಕನ್ಸೆಸಷನರೀಸ್ ಕಂಪೆನಿ ಲಿಮಿಟೆಡ್ ಎಂಬ ಸಂಸ್ಥೆ ರಚಿಸಿಕೊಂಡು ಕೆಲಸ ಮುಂದುವರಿಸಿದರು.
ಈ ಕಂಪೆನಿ ಐದು ಸಾವಿರ ಪೌಂಡ್ ಬಂಡವಾಳ ಹೂಡಿತು. ಆಸ್ಟ್ರೇಲಿಯದಿಂದ ಇಬ್ಬರು ಗಣಿ ತಜ್ಞರನ್ನು ಕರೆಸಿಕೊಂಡು ಗಣಿ ಕೆಲಸ ಪ್ರಾರಂಭಿಸಿತು. ಸ್ವಲ್ಪಕಾಲದ ಅನಂತರ ಅವರ ಪ್ರಯತ್ನಕ್ಕೆ ಫಲ ದೊರಕಿತು. ಮದ್ರಾಸಿನ ಉರಿಗಾಂ ಕಂಪನಿ ಲಿ. ಸ್ಥಾಪಿತವಾಗಿ ಕೆಲಸ ಮಾಡತೊಡಗಿದ ಮೇಲೆ ಇನ್ನೂ ಹಲವಾರು ಕಂಪನಿಗಳು ಆರಂಭವಾದುವು. ವೈನಾಡಿನಲ್ಲಿ ಚಿನ್ನದ ಉದ್ಯಮದಲ್ಲಿ ಕೈಸುಟ್ಟುಕೊಂಡ ಅನೇಕ ಮಂದಿ ಇಲ್ಲಿಗೆ ದೌಡಾಯಿಸಿದರು. 1881ರ ವೇಳೆಗೆ ಅಲ್ಲಿ 11 ಕಂಪನಿಗಳಿದ್ದುವು. ಇವುಗಳಲ್ಲಿ ತೊಡಗಿಸಿದ್ದ ಬಂಡವಾಳ 13,00,000 ಫೌಂ. ಮುಂದೆ ಹೂಡಿಕೆದಾರರ ಒತ್ತಡದಿಂದಾಗಿ ಜಾನ್ ಟೈಲರನ ಕಂಪೆನಿಗೆ ಗಣಿಗಾರಿಕೆಯ ಅವಕಾಶ ಸಿಕ್ಕಿತು. ಗಣಿಗಾರಿಕಾ ತಂತ್ರಜ್ಞರನ್ನು ತನ್ನ ಜೊತೆಗೆ ಕರೆದುಕೊಂಡು ಬಂದ ಈ ಕಂಪೆನಿ ನೂತನ ವಿಧಾನಗಳನ್ನು ಅಳವಡಿಸಿಕೊಂಡು ಅಪಾರ ಪ್ರಮಾಣದ ಚಿನ್ನವನ್ನು ತೆಗೆಯಿತು. ಮೈಸೂರು ಗಣಿಯನ್ನು ಮರುಪರಿಶೀಲಿಸಿದ ಕ್ಯಾಪ್ಟನ್ ಪ್ಲಮರ್ ಎಂಬ ತಜ್ಞ, ಪುರಾತನರು ಹಾಗೆಯೇ ಉಳಿಸಿದ್ದ ಭಾಗದಲ್ಲಿ ಗಣಿ ಮಾಡಿದಾಗ ಒಂದು ಟನ್ ಅದುರಿನಲ್ಲಿ ನಾಲ್ಕು ಔನ್ಸ್ ಚಿನ್ನ ಸಿಕ್ಕಿತು. ಅಲ್ಲಿಂದೀಚೆಗೇ ಈ ಉದ್ಯಮ ಲಾಭಪ್ರದವಾದ್ದು. 1894-95ರ ವೇಳೆಗೆ ಅಲ್ಲಿ ಒಟ್ಟು 13 ಕಂಪನಿಗಳು 35,00,000 ಪೌಂಡ್ಸ್ ಬಂಡವಾಳ ತೊಡಗಿಸಿದ್ದುವು. 1886-87ರ ಚಿನ್ನದ ಉತ್ಪನ್ನ ರೂ.8,88,606 ಮೌಲ್ಯದ 16,325 ಔನ್ಸ್ಗಳು!
ಮುಂದಿನ ಮುಕ್ಕಾಲು ಶತಮಾನ ನಡೆದದ್ದು ಅಗಾಧ ಪ್ರಮಾಣದ ಲೂಟಿ! ಭಾರತ ಸ್ವಾತಂತ್ರ್ಯಗೊಂಡಾಗ ಈ ಸಂಸ್ಥೆಗಳು ತಮ್ಮ ಆಡಳಿತ ಕೇಂದ್ರವನ್ನು ಲಂಡನ್ನಿನಿಂದ ಭಾರತಕ್ಕೆ ವರ್ಗಾಯಿಸಿದವು. ಮೈಸೂರು ಸರ್ಕಾರ ಈ ಕೈಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಿದ್ದು 1956ರಲ್ಲಿ. ಇದಕ್ಕಾಗಿ ವಿದೇಶೀ ಕಂಪನಿಗಳಿಗೆ ನೀಡಲಾದ ಹಣ ರೂ.1,64,00,000. ಆ ಹೊತ್ತಿಗೆ ಅಪಾರ ಪ್ರಮಾಣದ ಚಿನ್ನ ಹೊರಹೋಗಿತ್ತು. 1962ರಲ್ಲಿ ಕೇಂದ್ರ ಸರ್ಕಾರ ಇದನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಚಿನ್ನದಗಣಿ ಬೆಳೆದಂತೆಲ್ಲಾ ಮಾರಿಕುಪ್ಪಮ್ ಮೈಸೂರು ಮೈನ್ಸ್, ನಂದಿದುರ್ಗಮ್ ಮೈನ್ಸ್, ಉರಿಗಾಂ ಮೈನ್ಸ್, ಪಾಲಕ್ಕಾಡು ಮೈನ್ಸ್ ಮತ್ತು ಚಾಂಪಿಯನ್ ರೀಫ್ ಮೈನ್ಸ್ ಮುಂತಾದುವುಗಳಲ್ಲಿ ಗಣಿ ಕೆಲಸಗಳು ನಡೆದವು. 2000ಕ್ಕಾಗುವಾಗ ಊರಿಗಾಂ ಮೈನ್ಸ್ 13,000 ಅಡಿಗಳಷ್ಟು ಆಳಕ್ಕೆ ಹೋಗಿ ಪ್ರಪಂಚದಲ್ಲೇ 2ನೆಯ ಅತೀ ಆಳದ ಗಣಿಗಾರಿಕೆಯ ಸ್ಥಾನ ಪಡೆದುಕೊಂಡಿತು. ಮುಂದೆ ಚಿನ್ನ ತೆಗೆಯುವ ಖರ್ಚು ಸಿಗುವ ಚಿನ್ನದ ಮೌಲ್ಯಕ್ಕಿಂತ ಹೆಚ್ಚಾಗುತ್ತಾ ಸಾಗುತ್ತಿದ್ದಂತೆ 2001ರಲ್ಲಿ ಅನಿವಾರ್ಯವಾಗಿ ಗಣಿಗಾರಿಕೆಯನ್ನು ಸ್ಥಗಿಸಗೊಳಿಸಬೇಕಾಯಿತು.
ಕೋಲಾರದ ಚಿನ್ನದ ಗಣಿಯಲ್ಲಿ ಎಂದಿನಿಂದ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ನಿಖರ ಇತಿಹಾಸ ದೊರಕುವುದಿಲ್ಲ. ಸಿಂಧೂ ನಾಗರಿಕತೆಯ ಸಮಯದಿಂದಲೂ ಇಲ್ಲಿಂದ ಚಿನ್ನ ರಫ್ತಾಗುತ್ತಿದೆ ಎಂದು ಕೆಲ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಗುಪ್ತರು ಇಲ್ಲಿನ ಚಾಂಪಿಯನ್ ರೀಫಿನಲ್ಲಿ ಐವತ್ತು ಮೀಟರ್ ಆಳದವರೆಗೆ ಗಣಿಗಾರಿಕೆ ನಡೆಸಿದ್ದರು; ಚೋಳರೂ ಇಲ್ಲಿಂದ ಚಿನ್ನ ತೆಗೆದಿದ್ದರು; ವಿಜಯನಗರದವರೂ ತೆಗೆದಿದ್ದರು ಎನ್ನುವ ಅಂತೆಕಂತೆಗಳಿವೆ. ಇದ್ದರೂ ಇರಬಹುದು. ಆದರೆ ಆಧಾರಗಳು ಸಿಗುವುದಿಲ್ಲ.
ಸಂಪದ್ಭರಿತ ಭಾರತಕ್ಕೆ ಕೀರ್ತಿ ಎಂಬ ಬಂಗಾರದ ತಿಲಕವನ್ನಿಟ್ಟಿದ್ದು ಕೋಲಾರ ಚಿನ್ನದ ಗಣಿ. ಬರೋಬ್ಬರಿ 150 ವರ್ಷಗಳ ಕಾಲ ಬಗೆ ಬಗೆದು ಚಿನ್ನವನ್ನು ಇಡೀ ವಿಶ್ವಕ್ಕೆ ಕೊಟ್ಟಿತದು. ಆದರೆ ಬ್ರಿಟಿಷರು ಅಲ್ಲಿ ಕಟ್ಟಿದ್ದು ಹೊಸತೊಂದು ವಸಾಹತನ್ನೇ! ಜಾನ್ ಟೈಲರ್ ಈ ನೂತನ ವಸಾಹತುಶಾಹಿ ಗಣಿಗಾರಿಕೆಗೆ ಮೂಲ ಕಾರಣನಾದ. ತಮಿಳುನಾಡಿನ ಧರ್ಮಪುರಿ, ಸೇಲಂ, ಈರೋಡಿನಿಂದ ಕಾರ್ಮಿಕರನ್ನು ಇಲ್ಲಿಗೆ ಕರೆದುಕೊಂಡು ಬಂದ ಬ್ರಿಟಿಷರು ಅವರನ್ನು ಜೀತದಾಳುಗಳಂತೆ ಶೋಷಿಸಿದರು. ಯಾವುದೇ ರಕ್ಷಣಾ ಕವಚಗಳಿಲ್ಲದೆ, ಸರಿಯಾದ ಸವಲತ್ತುಗಳಿಲ್ಲದೆ ಅವರನ್ನು ಗಣಿಹೊಂಡಗಳೊಳಕ್ಕೆ ಇಳಿಸಿದರು. ಅಲ್ಲೊಂದು ನಗರವೇ ನಿರ್ಮಾಣವಾಯಿತು. ಆದರೆ ಸೌಲಭ್ಯಗಳೆಲ್ಲಾ ಸಿಕ್ಕಿದ್ದು ಬ್ರಿಟಿಷರಿಗೆ. ಕಾರ್ಮಿಕರಿಗೆ ದಕ್ಕಿದ್ದು ಸುಡುಬಿಸಿಲು, ಗಣಿಹೊಂಡದೊಳಗಿನ ಬಿಸಿ ಅಷ್ಟೇ! ಚಿನ್ನದ ಗಣಿಗಾರಿಕೆಯ ಜೊತೆ ಜೊತೆಗೆ ಪೂರ್ವ-ಪಶ್ಚಿಮದ ಬೆರಕೆ ಸಂಸ್ಕೃತಿಯೊಂದು ಅಲ್ಲಿ ಶುರುವಾಗಿ ಮಿನಿ ಇಂಗ್ಲೆಂಡ್ ಎಂದೇ ಕರೆಯಲ್ಪಟ್ಟಿತು. ಬ್ರಿಟಿಷರಿಗೆ ಬಂಗಲೆಗಳು, ಕಾರ್ಮಿಕರಿಗೆ ಶೆಡ್ಡುಗಳು! ಒಂದೊಂದು ಶೆಡ್ಡಿನಲ್ಲೂ ಒಂದಕ್ಕಿಂತ ಹೆಚ್ಚು ಪರಿವಾರಗಳು ಬಾಳಬೇಕಾದ ಅನಿವಾರ್ಯ ಪರಿಸ್ಥಿತಿ. ಅದರ ಮೇಲೆ ನಿತ್ಯ ಇಲಿಗಳ ದಾಳಿ. ಅಲ್ಲಿನ ಕಾರ್ಮಿಕರು ವರ್ಷವೊಂದಕ್ಕೆ ಕನಿಷ್ಟ 50ಸಾವಿರ ಇಲಿಗಳನ್ನು ಕೊಲ್ಲುತ್ತಿದ್ದರಂತೆ! 55 ಡಿಗ್ರೀ ಸೆಲ್ಷಿಯಸ್ ಗಿಂತಲೂ ಹೆಚ್ಚು ತಾಪಮಾನದಲ್ಲಿ ನಿತ್ಯ ಕೆಲಸ! 1893ರಲ್ಲಿ ಕೋಲಾರ ಚಿನ್ನದ ಗಣಿಗೆ ರೈಲುಮಾರ್ಗವೂ ನಿರ್ಮಾಣವಾಯಿತು. ಬ್ರಿಟಿಷರು ಬಂದು ರೈಲು ಮಾರ್ಗ ನಿರ್ಮಿಸಿದರು ಎಂದು ಹೊಗಳುವವರು ಬ್ರಿಟಿಷರು ಯಾಕೆ ನಿರ್ಮಿಸಿದರು ಎಂದು ತಮ್ಮನ್ನೇ ತಾವು ಪ್ರಶ್ನೆ ಕೇಳಿಕೊಂಡರೆ ರೈಲು ಮಾರ್ಗಗಳನ್ನು ನಿರ್ಮಿಸಿದ ಔಚಿತ್ಯ ತಿಳಿಯುತ್ತದೆ. ಶಿವನ ಸಮುದ್ರ ಜಲವಿದ್ಯುತ್ ಸ್ಥಾವರದಿಂದ ಉತ್ಪನ್ನವಾದ ವಿದ್ಯುತ್ ಮೊದಲು ಬೆಳಗಿದ್ದು ಕೋಲಾರದ ಚಿನ್ನದ ಗಣಿಯನ್ನು. ಮುಂದುವರೆದ ದೇಶಗಳು ಈ ಕ್ಷೇತ್ರದಲ್ಲಿ ಶೈಶವಾವಸ್ಥೆಯಲ್ಲಿದ್ದಾಗಲೇ ಪ್ರಪಂಚದಲ್ಲೇ ಅತ್ಯಂತ ಉದ್ದದ ಹೈ ವೋಲ್ಟೇಜ್ ಮಾರ್ಗವನ್ನು ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿಯವರೆಗೆ ನಿರ್ಮಿಸಲಾಗಿತ್ತು! 1930ರಲ್ಲಿ ಕಾರ್ಮಿಕರಿಗೆ ಗುರುತಿನ ಸಂಖ್ಯೆ ನೀಡಿ, ತಾಮ್ರದ ತಗಡಿನಲ್ಲಿ ಗುರುತಿನ ಪಟ್ಟಿಯನ್ನು ಸಿದ್ಧಪಡಿಸಿ ಕಬ್ಬಿಣದ ಬಳೆಯಲ್ಲಿ ಒಂದು ಕೈಗೆ ಬೇಡಿಯಂತೆ ತೊಡಿಸಲಾಗುತ್ತಿತ್ತು. ಇವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತಿತ್ತು. ಜೀತದಾಳುಗಳಂತೆ ಕೈಗಳಿಗೆ ಹಾಕಿರುವ ಪಟ್ಟಿಗಳನ್ನು ತೆಗೆಯಬೇಕೆಂದು ಹಾಗೂ ತೀವ್ರವಾದ ಚಳಿಯಿಂದ ತಪ್ಪಿಸಿಕೊಳ್ಳಲು ಜಾಗಬೇಕೆಂದೂ ಒತ್ತಾಯಿಸಿ ಬೇಡಿಕೆಯನ್ನು ಮುಂದಿಟ್ಟು ಕೆ. ಆರ್. ಷಣ್ಮುಗಂ ಚೆಟ್ಟಿಯಾರ್ ನೇತೃತ್ವದಲ್ಲಿ 24 ದಿನಗಳ ಕಾಲ ಹೋರಾಟ ನಡೆಯಿತು. ಗೋಲಿಬಾರು ನಡೆದು 44 ಜನರಿಗೆ ತೀವ್ರ ಗಾಯಗಳಾದವು. ಈ ಭಾರಿ ಹೋರಾಟದ ನಂತರ ಕೈಗಳಿಗೆ ಹಾಕಿದ್ದ ಬೇಡಿಯಂತಹ ಪಟ್ಟಿಗಳನ್ನು ತೆಗೆಯಲಾಯಿತು. ಬಳಿಕವೂ ಹಲವು ಹೋರಾಟಗಳು ನಡೆದವಾದರೂ ಫಲಪ್ರದವಾಗಲಿಲ್ಲ. ಗಣಿಗಾರಿಕೆಯ ಸ್ಥಳದಲ್ಲಿನ ಧೂಳಿನಿಂದ ಸಿಲಿಕಾಸಿಸ್ ಎಂಬ ಖಾಯಿಲೆಗೆ ಬಲಿಯಾದ, ಗಣಿಯೊಳಗಿನ ಸ್ಫೋಟ, ಅಪಘಾತಗಳಿಗೆ ಸಿಕ್ಕಿ ಸತ್ತವರ, ಜೀವಚ್ಛವವಾದ ಕಾರ್ಮಿಕರ ಸಂಖ್ಯೆಗೆ ಲೆಖ್ಖವೇ ಇಲ್ಲ. ಶ್ವಾಸಕೋಶವನ್ನು ಧೂಳು ಹೊಕ್ಕು ಉಸಿರಾಟದ ತೊಂದರೆಯ ಸಹಿತ ಕಂಡು ಕೇಳರಿಯದ ಕಾಯಿಲೆಗೆ ತುತ್ತಾದವರಿಗೆ ಕನಿಷ್ಟ ವೈದ್ಯಕೀಯ ಸೌಲಭ್ಯವೂ ಕಂಪೆನಿಗಳಿಂದ ಸಿಗುತ್ತಿರಲಿಲ್ಲ. ಆಳಕ್ಕೆ ಇಳಿದರೆ ಹೆಣ, ಮೇಲೆ ಬಂದರೆ ಹಣ; ಇದು ಕೆಜಿಎಫ್ ಕಾರ್ಮಿಕ ವಲಯದಲ್ಲಿ ಜನಜನಿತವಾಗಿದ್ದ ಮಾತು! ನಾಯಿಗಳಿಗೂ, ಸ್ಥಳೀಯರಿಗೂ ಪ್ರವೇಶವಿಲ್ಲ ಎಂಬ ಫಲಕಗಳು ಬ್ರಿಟಿಷ್ ಬಂಗಲೆಗಳ ಮುಂದೆ ತೂಗುತ್ತಿದ್ದವು!
ಅಲ್ಲಿ ಗಣಿಗಾರಿಕೆ ನಡೆದು ಹೊರಹಾಕಿದ ಟೈಲಿಂಗ್ ಡಂಪ್ ಎಂದು ಕರೆಯುವ ಸೈನೈಡ್ ರಾಶಿಗಳನ್ನು ಯುಪಿಎ ಸರಕಾರ 2013ರಲ್ಲಿ ಆಸ್ಟ್ರೇಲಿಯಾದ ಕಂಪೆನಿಯೊಂದಕ್ಕೆ ಧಾರೆ ಎರೆಯಲು ಹವಣಿಸಿತ್ತು. ಇಲ್ಲಿ ಇಂತಹ 38 ಮಿಲಿಯನ್ ಟನ್ ಸೈನೈಡ್ ಗುಡ್ಡಗಳು ಇವೆ. ಒಂದು ಟನ್ ಸೈನೈಡ್ ಗುಡ್ಡೆದಿಂದ 0.7 ಗ್ರಾಂ ಚಿನ್ನ ತೆಗೆಯಬಹುದು. ಇದಕ್ಕಾಗಿ ಗಣಿ ಅಗೆಯಬೇಕಾಗಿಲ್ಲ. ಅದನ್ನು ಅರೆದು ಸೋಸಿದರೆ ಸಾಕು ಲಾಭವೋ ಲಾಭ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ