ಪುಟಗಳು

ಶನಿವಾರ, ಡಿಸೆಂಬರ್ 15, 2018

ಕ್ಷಮಿಸಬೇಕು, ದೇಶದ್ರೋಹಿಗಳನ್ನಲ್ಲ!

ಕ್ಷಮಿಸಬೇಕು, ದೇಶದ್ರೋಹಿಗಳನ್ನಲ್ಲ!


             ಒಂದು ಕಡೆ ಮೊಘಲರು, ಇನ್ನೊಂದು ಕಡೆ ಆಂಗ್ಲರು, ಮತ್ತೊಂದು ಕಡೆ ಪೋರ್ಚುಗೀಸರು, ಮಗದೊಂದು ಕಡೆ ಜಂಜೀರಾದ ಸಿದ್ದಿಗಳು. ಏಕಕಾಲದಲ್ಲಿ ಈ ನಾಲ್ವರೊಡನೆ ಹೋರಾಡುತ್ತಲೇ ಒಂಬತ್ತು ವರ್ಷ ರಾಜ್ಯವಾಳಿ ಶಿವಾಜಿಯಿಂದ ಸ್ಥಾಪಿಸಲ್ಪಟ್ಟಿದ್ದ ಸಾಟಿಯಿಲ್ಲದ ಹಿಂದೂ ಮಹಾ ಸಾಮ್ರಾಜ್ಯವನ್ನು ಪೋಷಿಸಿದ್ದ ಸಂಭಾಜಿ. ಆ ಸಮಯಕ್ಕೆ ಸಂಭಾಜಿಯ ಭಾವ ಗಜೋಜಿ ಶಿರ್ಕೆ ಮೊಗಲ್ ಸರದಾರ್ ಮುಕರಾಬ್ ಖಾನನಿಗೆ ಸಂಭಾಜಿ ತಂಗಿದ್ದ ಸಂಗಮೇಶ್ವರವೆಂಬ ದುರ್ಭೇದ್ಯ ಕೋಟೆಗೆ ಸ್ವಯಂ ತಾನೇ ದಾರಿ ತೋರಿಸುತ್ತಾ ಕರೆದುಕೊಂಡು ಹೋದ. ಲಕ್ಷಾಂತರ ಸೈನಿಕರನ್ನು ಹೊಂದಿದ್ದೂ ಒಬ್ಬ ಮೊಘಲ್ ಸಾಮ್ರಾಟ ಔರಂಗಜೇಬ ಸಾಧಿಸಲಾಗದ ಕಾರ್ಯ ನಂಬಿಕೆ ದ್ರೋಹಿ, ದೇಶದ್ರೋಹಿಯೊಬ್ಬನಿಂದ ಸುಲಲಿತವಾಗಿ ನಡೆದು ಹೋಯಿತು. ಮುಂದೆ ಸಂಭಾಜಿಯ ಕಣ್ಣುಗಳನ್ನು ಕಿತ್ತು, ನಾಲಿಗೆಯನ್ನು ತುಂಡರಿಸಿ, ದೇಹದ ಒಂದೊಂದೇ ತುಂಡನ್ನು ಕಡಿದು ಅವನೆದುರೇ ನಾಯಿಗಳಿಗೆಸೆದು ಚಿತ್ರಹಿಂಸೆ ಕೊಟ್ಟು ಕೊಂದ ಔರಂಗಜೇಬನಂತಹ ಪರಮ ಕ್ರೂರಿಯ ಹೆಸರನ್ನೂ ಈ ದೇಶದ ರಸ್ತೆಗಳಿಗಿಟ್ಟದ್ದು ಇತಿಹಾಸ. ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದು ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಮುಂದೆ ಚಿಸ್ತಿಗೊಂದು ಗೋರಿ ಕಟ್ಟಲಾಯಿತು. ಇವತ್ತಲ್ಲಿ ಅನ್ನ ನೀರು ಕೊಟ್ಟ ದೇಶಕ್ಕೆ ದ್ರೋಹ ಬಗೆದ ವಿಶ್ವಾಸಘಾತುಕನಿಗೆ ಹಿಂದೂಗಳೂ ಚಾದರ ಅರ್ಪಿಸುತ್ತಿದ್ದಾರೆ!

                ಇತಿಹಾಸದಿಂದ ಈ ದೇಶೀಯರು ಪಾಠ ಕಲಿತಿಲ್ಲ. ದ್ರೋಹಿಗಳೂ ಹುಟ್ಟುತ್ತಿದ್ದಾರೆ, ಕ್ಷಮಿಸುವವರೂ, ಗೋರಿ ಕಟ್ಟಿ ಪೂಜಿಸುವವರೂ! ಮಣಿಶಂಕರ ಅಯ್ಯರ್ ಎಂಬ ಕೊಳಕು ಮನುಷ್ಯನ ನೆನಪಿರಬೇಕಲ್ಲ. "ಕೊಳಕು ಮನುಷ್ಯ" ಎಂಬ ಪದ ಪ್ರಯೋಗ ಸುಮ್ಮನೆ ಮಾಡಿದ್ದಲ್ಲ. ಆತ ಮಾಡಿರೋ ಘನ ಕಾರ್ಯಗಳಿಗೆ ಹೋಲಿಸಿದರೆ ಈ ಹೆಸರು ಏನೇನೂ ಅಲ್ಲ! ಸ್ವಾತಂತ್ರ್ಯ ವೀರ ಎಂದು ಜಗತ್ತೇ ಕೊಂಡಾಡಿದ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್. ಶತ್ರು ಪಾಳಯಕ್ಕೆ ನುಗ್ಗಿ ಶತ್ರುವಿನೊಡನೆ ಯುದ್ಧ, ಸಾಗರ ಈಜಿದ ಸಾಹಸ, ಅಂಡಮಾನಿನ ಕರಿ ನೀರ ಶಿಕ್ಷೆ, ಅಸಂಖ್ಯ ಯೋಧರಿಗೆ ಸ್ಪೂರ್ತಿ, ಅದ್ಭುತ ಸಾಹಿತ್ಯ, ಇತಿಹಾಸ ರಚನೆ, ಸಮಾಜ ಸುಧಾರಣೆ ಹೀಗೆ ಪಟ್ಟಿ ಮಾಡಿದಷ್ಟು ಬೆಳೆಯುವ ಸಾಧನೆಗಳ ಪಾರಿತೋಷಕ ಹೊತ್ತ ವೀರ ಸಾವರ್ಕರರ ಧ್ಯೇಯವಾದವನ್ನು ಉದ್ಘೋಷಿಸುವ ಅಂಡಮಾನಿನ ಸ್ಮೃತಿಸ್ತಂಭದ ಮೇಲಿದ್ದ ಅಜರಾಮರ ಕವಿತೆಯ ಸಾಲನ್ನು ಕಿತ್ತು ಹಾಕಿದ ದೇಶದ್ರೋಹಿ ಈ ಮಣಿಶಂಕರ ಅಯ್ಯರ್. ಅಂಡಮಾನಿನ ಕರಿನೀರ ರೌರವದಿಂದಲೂ ಕೊಂಕದ ಸಾವರ್ಕರರ ದೇಶಭಕ್ತಿಗೆ ಗುಲಾಮನೊಬ್ಬನ ಹೀನ ಕಾರ್ಯದಿಂದ ಅವಮಾನವಾಯಿತು.

                 2010ರಲ್ಲಿ ಭಾರತ ಆತಿಥ್ಯ ವಹಿಸಿದ್ದ ಕಾಮನ್ವೆಲ್ತ್ ಕ್ರೀಡಾಕೂಟ ಹಾಳಾದ್ರೇ ಒಳ್ಳೇದು ಎಂದಿದ್ದ ಈ ಮನುಷ್ಯ. ಮುಂಬಯಿ ಸ್ಫೋಟದ ರೂವಾರಿ ಯಾಕೂಬ್ ಮೆನನ್ನಿಗೆ ಗಲ್ಲುಶಿಕ್ಷೆ ಕೊಡಬಾರದೆಂದು ಮನವಿ ಸಲ್ಲಿಸಿದ ದಾನವ ಹಕ್ಕು ಹೋರಾಟಗಾರರ ಪಟ್ಟಿಯಲ್ಲಿ ಇವನ ಹೆಸರೂ ಇತ್ತು. ಭಾರತಕ್ಕೆ ಯೋಜನೆಯಿಂದಲೂ, ಪ್ರಕರಣದಿಂದಲೂ ಭಾರೀ ನಷ್ಟವನ್ನುಂಟುಮಾಡಿದ್ದ ಅಮೆರಿಕಾದ ಬೃಹತ್ ವಿದ್ಯುತ್ ಉತ್ಪಾದನಾ ಕಂಪೆನಿ ಎನ್ರಾನ್ ವಿರುದ್ಧದ ಪ್ರಕರಣದಲ್ಲಿ ವಾದಿಸುತ್ತಿದ್ದ ವಕೀಲ ಹರೀಶ್ ಸಾಳ್ವೆಯನ್ನು ಬದಲಿಸಿ ಪಾಕಿಸ್ತಾನದ ವಕೀಲ ಖವಾರ್ ಖುರೇಷಿಯನ್ನು ನೇಮಿಸಲಾಗಿತ್ತು. ಇದರ ಹಿಂದೆ ಇದ್ದವರು ಆಗಿನ ಸಚಿವರುಗಳಾದ ಸಲ್ಮಾನ್ ಖುರೇಷಿ, ಚಿದಂಬರಂ, ಮಣಿಶಂಕರ್ ಐಯ್ಯರ್ ಮತ್ತು ಶರದ್ ಪವಾರ್! ಮಯನ್ಮಾರ್ ಗಡಿಯಲ್ಲೊಂದು ಸರ್ಜಿಕಲ್ ಸ್ಟ್ರೈಕ್ ನಡೆದಾಗ "ಮಯನ್ಮಾರಿನ ಗಡಿಯೊಳಗೆ ನುಗ್ಗಲು ಪೌರುಷದ ಆವಶ್ಯಕತೆಯೇ ಇಲ್ಲ. ಹಸುಗೂಸೇ ಸಾಕಾಗುತ್ತದೆ. ಇದು ಭಾರತ-ಪಾಕ್ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುತ್ತದೆ. ಪಾಕಿಸ್ಥಾನದ ಬಳಿಯೂ ಅಣ್ವಸ್ತ್ರಗಳಿವೆ ಎಂಬುದನ್ನು ಮರೆಯಬಾರದು" ಎಂದು ತನ್ನ ಲೇಖನದಲ್ಲಿ ಪ್ರಧಾನಿ ಮೋದಿಯವರನ್ನು, ದೇಶದ ಸೈನಿಕರನ್ನು ಲೇವಡಿ ಮಾಡಿದ್ದ ಅಯ್ಯರ್.  ಕಳೆದ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಅಹ್ಮದ್ ಪಟೇಲನನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಲು ಪಾಕಿಸ್ತಾನದ ಸಹಾಯ ಪಡೆಯುವ ಸಂಚು ಹೂಡಲಾಗಿತ್ತು. ಆ ಸಮಾಲೋಚನೆ ನಡೆದುದು ಮಣಿಶಂಕರ್ ಅಯ್ಯರ್ ಮನೆಯಲ್ಲೇ! ಪಾಕಿಸ್ತಾನದ ಮಾಜಿ ರಾಯಭಾರಿ ಖುರ್ಷಿದ್ ಮಹಮದ್ ಖಸೂರಿಯೊಡನೆ ನಡೆದ ಈ ಸಮಾಲೋಚನೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಕೂಡಾ ಭಾಗಿಯಾಗಿದ್ದರು. ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಕೆಳಗಿಳಿಸಲು ಕಾಂಗ್ರೆಸ್ಸಿನ ಗೆಲುವಿಗೆ ಸಹಾಯ ಯಾಚನೆ ಮಾಡಿದ್ದ ತುಚ್ಛ ರಾಜಕಾರಣಿ ಮಣಿಶಂಕರ ಅಯ್ಯರ್. ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರಮಾಣದಲ್ಲಿ ಪಾಕಿಸ್ತಾನವನ್ನೂ ಪ್ರೀತಿಸುತ್ತೇನೆ ಎನ್ನುವ ಮಣಿಶಂಕರ ಅಯ್ಯರ್ ಈ ನಡೆ ಹೊಸದೇನೂ ಅಲ್ಲ. ಆದರೆ ಈ ದೇಶದ ಅನ್ನ ತಿಂದು ತನ್ನ ವೈಯುಕ್ತಿಕ ಲಾಭಕ್ಕೋಸ್ಕರ ಶತ್ರು ದೇಶದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಯಾವ ಗಜೋಜಿ ಶಿರ್ಕೆಯ ದೇಶದ್ರೋಹಕ್ಕಿಂತಲೂ ಕಡಿಮೆಯದೇನಲ್ಲ.

                    ನವಜೋತ್ ಸಿಂಗ್ ಸಿಧು. ಕ್ರಿಕೆಟ್ ಆಟಗಾರನಾಗಿ ಪಡೆದಿದ್ದ ಮಾನವನ್ನು ರಾಜಕೀಯ ಆಟದಲ್ಲಿ ಹರಾಜು ಹಾಕುತ್ತಿರುವ ವಿಫಲ ವ್ಯಕ್ತಿ. ಅಷ್ಟೇ ಆಗಿದ್ದರೆ ಕ್ಷಮಿಸಿಬಿಡಬಹುದಿತ್ತು. ಭಾರತದಿಂದ ಯಾರೂ ಹೋಗದಿದ್ದ ಸಂದರ್ಭದಲ್ಲಿ ಇಮ್ರಾನ್ ಖಾನನ ಪ್ರಧಾನಿ ಪದಗ್ರಹಣ ಕಾರ್ಯಕ್ರಮಕ್ಕೆ ಹೋದ ಭಂಡ ಈತ. ಅಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಾಜ್ವಾನನ್ನು ತಬ್ಬಿಕೊಂಡ. ಪಾಕಿಸ್ಥಾನದ ಸೇನಾ ಮುಖ್ಯಸ್ಥರು ತನ್ನ ಕಿವಿಯಲ್ಲಿ ಶಾಂತಿ ಮಂತ್ರವನ್ನು ಜಪಿಸಿದರು ಎನ್ನುವ ಹೇಳಿಕೆಯಂತೂ ಸಿಧುವಿನ ನಗುವಿನಷ್ಟೇ ಹಾಸ್ಯಾಸ್ಪದ. ಇತ್ತೀಚೆಗೆ ಮತ್ತೊಮ್ಮೆ ಪಾಕಿಗೆ ತೆರಳಿ ಕರ್ತಾರ್ ಪುರ ಕಾರಿಡಾರ್ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಧು, ಅಲ್ಲಿ ಅಮೃತಸರ ಸಮೀಪ ನಿರಂಕಾರಿ ಭವನದ ಮೇಲೆ ನಡೆದ ಗ್ರೆನೇಡ್ ದಾಳಿಯ ರೂವಾರಿ, ಖಲಿಸ್ತಾನೀ ಉಗ್ರ, ಲಷ್ಕರೆ ತೊಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಜತೆಗೆ ಸಂಪರ್ಕವುಳ್ಳ ಗೋಪಾಲ್ ಸಿಂಗ್ ಚಾವ್ಲಾ ಜತೆ ಫೋಟೊ ತೆಗೆಸಿಕೊಂಡ. ಸಿಧುವಿಗೆ ರಾಜಕೀಯದಲ್ಲಿ ಅನ್ನ ಕೊಟ್ಟಿದ್ದು ಬಿಜೆಪಿ. ಆತ ಅನ್ನ ಕೊಟ್ಟವರಿಗೆ ಮಾತ್ರ ವಿಶ್ವಾಸಘಾತ ಮಾಡಿದ್ದಲ್ಲ. ಇಡೀ ದೇಶಕ್ಕೆ ನಂಬಿಕೆ ದ್ರೋಹ ಬಗೆದಿದ್ದಾನೆ; ಈ ದ್ರೋಹ ಚಿಸ್ತಿಯ ಘಾತುಕತನಕ್ಕಿಂತ ಕಡಿಮೆಯದೇನಲ್ಲ.

                   ರಾಹುಲ್ ಗಾಂಧಿ ಹೇಳಿದ್ದಕ್ಕೆ ತಾನು ಹೋದೆ ಎನ್ನುವ ಸಿಧುವಿನ ಹೇಳಿಕೆ ಸಂಪೂರ್ಣ ಕಾಂಗ್ರೆಸ್ಸನ್ನೇ ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ; ಅದರ ಬೆಂಬಲಿಗ ಮಾಧ್ಯಮಗಳು ಮಾಡುತ್ತಿರುವುದೂ ಅದನ್ನೇ. ಸಾಗರದಲ್ಲಿ ಪಾಕಿಸ್ಥಾನದ ಅಕ್ರಮ ದೋಣಿಯೊಂದನ್ನು ಭಾರತೀಯ ನೌಕಾಪಡೆ ಹೊಡೆದುರುಳಿದ್ದನ್ನು ಅಪರಾಧ ಎಂದು ಈ ಗುಲಾಮರು ಬಡಬಡಿಸಿ ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ಘೋಷಿಸಿದರು. ಭಾರತೀಯ ಸೈನ್ಯ ಮಯನ್ಮಾರ್ ಗಡಿಯಲ್ಲಿ ಬಂಡುಕೋರರನ್ನು ಬಗ್ಗುಬಡಿದ ಸುದ್ದಿಗೆ ದೇಶಕ್ಕೆ ದೇಶವೇ ಹೆಮ್ಮೆ ಪಡುತ್ತಿದ್ದರೆ ಸಿಎನ್ಎನ್-ಐಬಿಎನ್ ಎಂಬ ಮತಿಗೆಟ್ಟ ಚಾನಲ್ ಪಾಕಿಸ್ಥಾನದ ಮಾಜಿ ಸರ್ವಾಕಾರಿ ಮುಷರಫ್ನನ್ನು ಕರೆದು ಕೂರಿಸಿ ಅಭಿಪ್ರಾಯವನ್ನು ಕೇಳುತ್ತಿತ್ತು. ಮೋದಿ ಪ್ರಧಾನಿಯಾದ ಬಳಿಕ ಶತಾಯಗತಾಯ ಮೋದಿಯನ್ನು ಹಣಿಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಟಾಲಂ ಮೋದಿ ಧರಿಸಿದ ಬಟ್ಟೆ, ಹೋದ ಮಾರ್ಗ, ಆಡಿದ ಮಾತುಗಳೆಲ್ಲವನ್ನೂ ಟೀಕಿಸುತ್ತಾ ಕೊನೆಗೆ ಮೋದಿ ಆಳುವ ದೇಶವನ್ನೂ ಟೀಕಿಸುತ್ತಾ ಬಹಿರಂಗವಾಗಿಯೇ ದೇಶದ ಶತ್ರುಗಳ ಜೊತೆ ಸೇರಿ ಮೋದಿಯನ್ನು ಮಣಿಸಲು ನೋಡುತ್ತಿದೆ. ಕ್ರಾಂತಿಕಾರಿಗಳನ್ನು ಬ್ರಿಟೀಷರಿಗೆ ಹಿಡಿದುಕೊಟ್ಟು ಅಧಿಕಾರ ಹೊಡೆದುಕೊಂಡವರ ಬುದ್ಧಿ ಇನ್ನೂ ಬದಲಾಗಿಲ್ಲ.

                    ಈ ದೇಶದ ನ್ಯಾಯಾಂಗ ವ್ಯವಸ್ಥೆ ಹೇಗಿದೆಯೆಂದರೆ ಇಲ್ಲಿ ದೇಶದ್ರೋಹಿಯನ್ನು, ಅವನ ಕಾರ್ಯವನ್ನು ಖಂಡಿಸುವವನ ಮೇಲೆ ಕೇಸು ದಾಖಲಾಗುತ್ತದೆ. ದೇಶದ್ರೋಹಿ, ವೇದಿಕೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಷಣ ಕುಟ್ಟುತ್ತಾ, ಮಾಧ್ಯಮಗಳಲ್ಲಿ ಜನರನ್ನು ರಂಜಿಸುತ್ತಾ, ಉಗ್ರರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಾ ರಾಜಾರೋಷವಾಗಿ ಓಡಾಡುತ್ತಿರುತ್ತಾನೆ. ಕ್ಷಣ ಕಾಲದಲ್ಲಿ ಇತಿಹಾಸ ಮರೆಯುವ ಹಿಂದೂ ಇಂತಹವರಿಗೆ ಗೋರಿ ಕಟ್ಟಿದರೆ ಚಾದರ ತಲೆಯ ಮೇಲೆ ಹೊತ್ತು ಅರ್ಪಿಸಲು ಸಿದ್ಧನಾಗಿರುತ್ತಾನೆ! ನಟರನ್ನೇ ನಿಜವಾದ ಹೀರೋಗಳೆಂದು ಭ್ರಮಿಸಿ ಪ್ರತಿಮೆ ಕಟ್ಟುವ ಜನಕ್ಕೆ ದೇಶಪ್ರೇಮ ಬರಿಯ ಆಗಸ್ಟ್ ಹದಿನೈದಕ್ಕಷ್ಟೇ ಸೀಮಿತವಾಗಿಬಿಡುತ್ತದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ