ಹಿಂದುತ್ವ: ಸಾವರ್ಕರ್ ಪರಿಕಲ್ಪನೆಯಲ್ಲಿ ಅರಳಿದ ರಾಷ್ಟ್ರೀಯತೆ
"ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದುರಿತಿಸ್ಮೃತಃ||"
ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಹಿಂದೂ ಯಾರೆನ್ನುವುದಕ್ಕೆ ಸಾವರ್ಕರ್ ಕೊಟ್ಟ ಸ್ಪಷ್ಟ ವಿವರಣೆಯಿದು. ಈ ನಿಟ್ಟಿನಲ್ಲಿ ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ ಆದಿಯಾಗಿ ಭಾರತೀಯ ಮತಾವಲಂಬಿಗಳೆಲ್ಲಾ ಹಿಂದೂಗಳೇ. ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ,ಭಾರತವೇ ಅವರಿಗೆ ಮಾತೃಭೂಮಿ. ಈ ವ್ಯಾಖ್ಯೆಯನ್ನು ಸರಕಾರ ಒಪ್ಪಿಕೊಂಡು ಮುಂಬರುವ ಸರಕಾರೀ ಜನಗಣತಿಯಲ್ಲಿ ಹಿಂದೂ ಜನಸಂಖ್ಯೆಯನ್ನು ನಮೂದಿಸುವಲ್ಲಿ "ಹಿಂದುತ್ವವನ್ನು" ಗುರುತಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು ಸಾವರ್ಕರ್.
ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಬಹುವಾಗಿ ಪ್ರಶಂಸಿಸಿ ಒಪ್ಪಿಕೊಂಡಿದ್ದರು ಅಂಬೇಡ್ಕರ್. ಸಾವರ್ಕರರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವವರನ್ನು ಕೋಮುವಾದಿಗಳೆಂದು ಜರೆಯುವ ಆಷಾಢಭೂತಿಗಳ ಅಮಲು ಇಳಿಸುವ ಇನ್ನೊಂದು ವಿಚಾರವೆಂದರೆ ಇದೇ ವ್ಯಾಖ್ಯೆಯನ್ನು ಅಂಬೇಡ್ಕರ್ ಕೂಡಾ ಬಳಸಿಕೊಂಡಿರುವುದು. ಸಾವರ್ಕರ್ ಭಾರತದಲ್ಲಿದ್ದ ಜನರನ್ನು ಈ ಆಧಾರದಲ್ಲಿ ಕೇವಲ ವರ್ಗೀಕರಣ ಮಾತ್ರ ಮಾಡಿ ಇಡುವುದಿಲ್ಲ. ಅವರು ಅಧಿಕಾರ ಯಾರ ಕೈಯಲ್ಲಿ ಇರಬೇಕೆನ್ನುವುದನ್ನೂ ನೇರವಾಗಿ ಹೇಳಿದ್ದರು. ಭಾರತವನ್ನು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಸಾವರ್ಕರ್ ಹಿಂದೂಗಳಿಗೆ ಪ್ರಧಾನ ಸ್ಥಾನಮಾನಗಳಿರಬೇಕೆಂದೂ ಉಳಿದ ಸೆಮೆಟಿಕ್ ಮತಗಳವರು ಹಿಂದೂಗಳೊಂದಿಗೆ ಸಹಕಾರದಿಂದ ಬಾಳಬೇಕೆನ್ನುವುದು ಸಾವರ್ಕರ್ ಪ್ರತಿಪಾದನೆಯಾಗಿತ್ತು. ಸಾವರ್ಕರರದ್ದು ರಾಷ್ಟ್ರೀಯವಾದದ ರಾಜಕಾರಣ. ವೈಯುಕ್ತಿಕ ಅಥವಾ ಸಾಮೂಹಿಕ ಲಾಭಗಳಿಗಂದೂ ರಾಷ್ಟ್ರೀಯತೆಯ ಜೊತೆ ರಾಜೀ ಮಾಡಿಕೊಂಡವರಲ್ಲ ಅವರು. ಅವರ ಹಿಂದುತ್ವದ ವ್ಯಾಖ್ಯೆ ಅವೈದಿಕ ಮತಗಳನ್ನು ಹಿಂದೂ ಜನಾಂಗದಲ್ಲಿ ಸೇರಿಸಿಕೊಂಡರೂ ಅದು ಹಿಂದೂ ಯಾರೆಂಬ ಪ್ರಾಚೀನ ವ್ಯಾಖ್ಯೆಗೇನೂ ಧಕ್ಕೆ ಎಸಗಿಲ್ಲ. ವೇದಗಳಲ್ಲಿ ಉಲ್ಲೇಖಿತವಾದ ರಾಷ್ಟ್ರ-ರಾಷ್ಟ್ರೀಯತೆಯ ವ್ಯಾಖ್ಯೆಯೂ ಸಾವರ್ಕರ್ ರಾಷ್ಟ್ರೀಯತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೊಟ್ಟ ಹಿಂದುತ್ವದ ವ್ಯಾಖ್ಯೆಯೂ ಏಕರೂಪದವು. ಹಿಂದುತ್ವ ಮತ್ತು ರಾಷ್ಟ್ರೀಯತೆ ಬೇರೆಬೇರೆಯಲ್ಲ. ಸಾವರ್ಕರರ ವ್ಯಾಖ್ಯೆ ಈ ದೇಶವನ್ನು "ರಾಷ್ಟ್ರ"ವಾಗಿ ಸ್ವೀಕರಿಸದ ಪ್ರತಿಯೊಬ್ಬರನ್ನೂ ಹಿಂದುತ್ವದಿಂದ ಪ್ರತ್ಯೇಕಿಸಿತು. ಈ ಅಂಶವನ್ನು "ಸಾವರ್ಕರರದ್ದೂ ಒಂದು ರೀತಿಯ ದ್ವಿರಾಷ್ಟ್ರ ಸಿದ್ಧಾಂತ. ಇದರಿಂದ ದೇಶದೊಳಗೇ ಹಿಂದೂ- ಮುಸ್ಲಿಂ ಎನ್ನುವ ಎರಡು ದೇಶಗಳನ್ನು ನಿರ್ಮಿಸುವ ಅಪಾಯವಿದೆ" ಎಂದು ವಿಶ್ಲೇಷಿಸಿದ ಅಂಬೇಡ್ಕರ್ ಆಗಲೀ ಅವರನ್ನೇ ಆಧಾರವಿರಿಸಿದ ಇನ್ನುಳಿದವರಾಗಲೀ ಗಮನಿಸದೇ ಹೋದರು. ವ್ಯಕ್ತಿಯೊಬ್ಬ ಈ ದೇಶವನ್ನು ತನ್ನ ರಾಷ್ಟ್ರವಾಗಿ ಪೂಜಿಸದೇ ಇದ್ದರೇ ಆತ ರಾಷ್ಟ್ರೀಯ ಹೇಗಾದಾನು? ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ರಾಷ್ಟ್ರವೆಂದರೆ ಸಂಸ್ಕೃತಿಯ ಪ್ರವಾಹ. "ರಾಷ್ಟ್ರ" ಎಂದರೇನೆಂದು ಅರಿತವರಿಗಷ್ಟೇ ಸಾವರ್ಕರ್ ಪ್ರತಿಪಾದಿಸಿದ "ಹಿಂದುತ್ವ " ಸಿದ್ಧಾಂತ ಅರ್ಥವಾದೀತು. ಹಾಗಂತ ಅಲ್ಲಿ ಉಳಿದ ಮತಗಳೆಡೆಗಿನ ದ್ವೇಷಕ್ಕೆ ಅವಕಾಶವಿಲ್ಲ. ಆದರೆ ಉಳಿದ ಮತಗಳು ಆಕ್ರಮಣಕ್ಕೆ ಬಂದಾಗ ಅದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅಂದರೆ ಅದು ಕೇವಲ "ಅಹಿಂಸಾ ಪರಮೋ ಧರ್ಮ" ಎಂದು ಆಚರಿಸುವುದಿಲ್ಲ. "ಧರ್ಮ ಹಿಂಸಾ ತಥೈವಚಾ" ಎನ್ನುವುದನ್ನೂ ಅರಿತು ಆಚರಿಸುತ್ತದೆ. ದುಷ್ಟ ದಮನವನ್ನೂ ಶಿಷ್ಟ ರಕ್ಷಣೆಯನ್ನೂ ಮಾಡಿ ಸಮಾಜದಲ್ಲಿ ಶಾಂತಿಯನ್ನು ತರುತ್ತದೆ.
ಸಾವರ್ಕರ್ ಸೆಮೆಟಿಕ್ ಮತಗಳನ್ನು ಹೊರಗಿಟ್ಟುದುದಕ್ಕೆ ಕಾರಣವಿಲ್ಲದೆ ಇಲ್ಲ. ಈ ಮತಾವಲಂಬಿಗಳು ಎಂದಿಗೂ ಭಾರತವನ್ನು ತಮ್ಮ ಮಾತೃಭೂಮಿಯೆಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳಲಾರರು. ಅವರಿಗೆ ದೇಶಕ್ಕಿಂತ ತಮ್ಮ ಮತವೇ ಶ್ರೇಷ್ಠ. ರಾಷ್ಟ್ರ ಎನ್ನುವ ಪರಿಕಲ್ಪನೆಯೇ ಅವರಿಗಿಲ್ಲ. ಹಾಗಾಗಿ "ಭಾರತ"ದಲ್ಲಿ ಅವರ ಸ್ಥಾನ ಎಂದಿಗೂ ಹೊರಗಿನವರದ್ದೇ! ಜಿನ್ನಾ, ಇಕ್ಬಾಲ್ ಮುಸ್ಲಿಂ ಲೀಗನ್ನು ಬಳಸಿಕೊಂಡು ಮುಸ್ಲಿಮರಿಗೆ ಪ್ರತ್ಯೇಕ ಜಾಗ ಕೊಡಬೇಕು ಎಂದು ನೇರ ಕಾರ್ಯಾಚರಣೆಗೆ ಇಳಿದಾಗ ಅವರನ್ನು ಖಂಡತುಂಡವಾಗಿ ವಿರೋಧಿಸಿದರು ಸಾವರ್ಕರ್. ಬಹುಷಃ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಭಾರತದ ಸಂವಿಧಾನದಲ್ಲಿ ಸೆಮೆಟಿಕ್ ಮತಾನುಯಾಯಿಗಳಿಗಿಂತಲೂ ಹಿಂದೂಗಳಿಗೇ ಪ್ರಧಾನ ಸ್ಥಾನಮಾನವಿರಬೇಕೆಂದು ಗಟ್ಟಿಸ್ವರದಲ್ಲಿ ಪ್ರತಿಪಾದಿಸಿದ ರಾಜಕೀಯ ನಾಯಕ ಸಾವರ್ಕರ್ ಒಬ್ಬರೇ! ಬೆರಳು ತೋರಿಸಿದರೆ ಹಸ್ತ ನುಂಗುವ ಮುಸ್ಲಿಮರು, ಕ್ರೈಸ್ತರ ಮನೋವೃತ್ತಿಯನ್ನು ಸಾವರ್ಕರ್ ಅರ್ಥಮಾಡಿಕೊಂಡಷ್ಟು ನಿಖರವಾಗಿ ಯಾರೂ ಅರ್ಥಮಾಡಿಕೊಂಡಿರಲಿಲ್ಲ. ಹಾಗಾಗಿಯೇ ಭಾರತ ರಾಷ್ಟ್ರವಾಗಿ ಉಳಿಯಬೇಕಾದರೆ ಹಿಂದೂಗಳಿಗೇ ಪ್ರಧಾನ ಸ್ಥಾನಮಾನ ನೀಡಬೇಕೆಂದು ಸಾವರ್ಕರ್ ಪ್ರತಿಪಾದಿಸಿದರು. "ನೀವು ಬಂದರೆ ನಿಮ್ಮ ಜೊತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ವಿರೋಧಿಸಿದರೆ ನಿಮ್ಮನ್ನು ಎದುರಿಸಿ ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ ಎಂದ ಸಾವರ್ಕರ್ ಮಾತನ್ನು ಉಳಿದ ನಾಯಕರು ಅನುಕರಿಸಿದ್ದರೆ ಭಾರತಕ್ಕೆ ಈ ದುಃಸ್ಥಿತಿ ಬರುತ್ತಿರಲಿಲ್ಲ. ಹಿಂದೂಗಳಿಗೆ ಭಾರತದ ಸಂವಿಧಾನದಲ್ಲಿ ಪರಮಾಧಿಕಾರ ನೀಡಬೇಕೆಂದು ಪ್ರತಿಪಾದಿಸಿದಾಗ, ಅಂಬೇಡ್ಕರ್ ಇದರಿಂದ ಬಹುಸಂಖ್ಯಾತರು ತಮ್ಮ ಭಾಷೆ, ಧರ್ಮ, ಸಂಸ್ಕೃತಿಯನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಅಪಾಯವಿರುತ್ತದೆ ಎಂದಿದ್ದರು. ಆದರೆ ಸಹಸ್ರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿಲ್ಲ, ಅಲ್ಪಸಂಖ್ಯಾತರ ಮೇಲೆ ಯಾವುದೇ ರೀತಿಯ ಅಧಿಕಾರ ಚಲಾಯಿಸಿಲ್ಲ, ಅದು ಹಿಂದೂ ಮನೋಭೂಮಿಕೆಯಲ್ಲಿಯೇ ಇಲ್ಲ ಎನ್ನುವುದನ್ನು ಮರೆತರು ಅಂಬೇಡ್ಕರ್. ಮುಸ್ಲಿಮ, ಕ್ರೈಸ್ತರ ಕೈಗೆ ಅಧಿಕಾರ ಸಿಕ್ಕರೆ ಕೆಲವೇ ಸಮಯದಲ್ಲಿ ಅವರು ದೇಶವನ್ನು ಕುಟಿಲತೆಯಿಂದ ಒಡೆಯುವ ಅಪಾಯವನ್ನು ಸಾವರ್ಕರ್ ಮನಗಂಡಿದ್ದರು. ಅಲ್ಲದೆ ಮೀಸಲಾತಿಯಂತಹ ಸೌಲಭ್ಯಗಳನ್ನು ಈ ಜನಾಂಗಕ್ಕೆ ಕೊಟ್ಟುದುದರಿಂದ ಇಂದು ಉಂಟಾಗಿರುವ ಅನರ್ಥವನ್ನೂ, ರಾಜಕಾರಣಿಗಳ ಸೆಕ್ಯುಲರ್-ಮತಬ್ಯಾಂಕ್ ರಾಜಕಾರಣವನ್ನೂ, ಹಿಂದೂಗಳನ್ನು ಎರಡನೆ ದರ್ಜೆಯನ್ನಾಗಿಸಿರುವ ಅವರ ಕುತಂತ್ರವನ್ನು ಸಾವರ್ಕರ್ ಅಂದೇ ಅರ್ಥೈಸಿಕೊಂಡಿದ್ದರೆನಿಸುತ್ತದೆ.
"ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ" ಎಂದಿದ್ದರು ಸಾವರ್ಕರ್. ಸೈನ್ಯವನ್ನು ಹಿಂದೂಕರಣಗೊಳಿಸುವುದೇನೋ ಸರಿ, ರಾಜಕೀಯವನ್ನೇಕೆ ಸೈನಿಕೀಕರಣಗೊಳಿಸಬೇಕು? ಸಾವರ್ಕರ್ ಸೈನ್ಯಾಡಳಿತವನ್ನು ಹೇರಿ ಎನ್ನುತ್ತಿದ್ದಾರೆಯೇ? ಸಾವರ್ಕರರದ್ದು ಕಮ್ಯೂನಿಸ್ಟ್ ಚಿಂತನೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇದು ವೇದಗಳಲ್ಲಿ ಉಲ್ಲೇಖಿಸಿದ, ಸನಾತನ ಧರ್ಮ ಆಚರಿಸಿಕೊಂಡು ಬಂದ, ಮಾನವ ಸಹಜ ಧರ್ಮವಾದ "ಕ್ಷಾತ್ರ"ವೇ ಈ ಮಾತಿನ ಮೂಲ. ಅಧಿಕಾರಕ್ಕೆ ಬರುವವನಲ್ಲಿ ಕ್ಷಾತ್ರ ಗುಣ ಇರಲೇಬೇಕು. ಅನ್ಯಾಯವನ್ನು ಹತ್ತಿಕ್ಕಿ, ಅಸಹಾಯಕರನ್ನು ರಕ್ಷಿಸಿ ಧರ್ಮ ಸಂಸ್ಕೃತಿಗಳನ್ನು ಉಳಿಸುವ ಕ್ಷಾತ್ರ ತೇಜವಿರಬೇಕು. ಸಾವರ್ಕರರ ಮಾತಿನ ಮೊದಲಾರ್ಧವನ್ನು ದ್ವಿತೀಯಾರ್ಧದೊಂದಿಗೆ ಸಮ್ಮಿಳಿತಗೊಂಡರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಹಾಗಾಗಿಯೇ ತನ್ನನ್ನು ಭೇಟಿಯಾದ ಸುಭಾಷರನ್ನು "ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತಾ ಕುಸಿದಿರುವಾಗ ನಿಮ್ಮಂಥ ಮೇಧಾವಿ ನಾಯಕ ಹಳೆಯ ಬ್ರಿಟಿಷ್ ಸ್ಮಾರಕಗಳನ್ನು ಕೆಡಹುವ ಜುಜುಬಿ ಕೆಲಸಗಳನ್ನು ಮಾಡಿ ಸೆರೆ ಸೇರುವುದರಿಂದೇನು ಲಾಭ? ಹಲ ಸಾವಿರ ಉನ್ಮತ್ತರು ಕಣ್ಣೆದುರೇ ದಮನ ನಡೆಸುತ್ತಿರುವಾಗ ಹಿಂದೆಂದೋ ಸತ್ತವರ ಪ್ರತಿಮೆಗಳನ್ನು ಕೆಡಹುವುದರಿಂದುಂಟಾಗುವ ಸಮಾಧಾನ ಕಳಪೆಯದೇ ಅಲ್ಲವೇ? ಸೆರೆಯಲ್ಲಿರಬೇಕಾದವರು ಬ್ರಿಟಿಷರೇ ಹೊರತು ನಾವಲ್ಲ. ಸಶಸ್ತ್ರ ಬಂಡಾಯ ಅಸಾಧ್ಯವೇನಲ್ಲ. ಸೇನೆಗೆ ಹಿಂದೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕೆಂದು ನಾನು ಹಿಂದಿನಿಂದ ಹೇಳುತ್ತಾ ಬಂದಿರುವುದು ಇದಕ್ಕೆ ಸಿದ್ಧತೆಯಾಗಿಯೇ ಅಲ್ಲವೇ?" ಎಂದು ಸಶಸ್ತ್ರ ಬಂಡಾಯಕ್ಕೆ ಪ್ರೇರೇಪಿಸಿದರು ಸಾವರ್ಕರ್. "ರಾಸ್ ಬಿಹಾರಿ ಬೋಸ್ ಕಳೆದ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆನಿಂತು ಸಶಸ್ತ್ರ ಸೈನ್ಯವೊಂದನ್ನು ಕಟ್ಟಲು ಶ್ರೀಗಣೇಶ ಹಾಡಿದ್ದಾರೆ. ನೀವೂ ಅವರಂತೆ ಜರ್ಮನಿ, ಇಟಲಿಯಲ್ಲಿ ಯುದ್ಧ ಕೈದಿಗಳಾಗಿರುವ ಭಾರತೀಯರ ಸಶಸ್ತ್ರ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ. ಜಪಾನ್ ಹಾಗೂ ಜರ್ಮನಿ ನಿಮ್ಮನ್ನು ಬೆಂಬಲಿಸುತ್ತವೆ. ಅವರ ಸಹಾಯ ದೊರೆತೊಡನೆ ಬರ್ಮಾ ಅಥವಾ ಬಂಗಾಳಕೊಲ್ಲಿ ಕಡೆಯಿಂದ ಆಕ್ರಮಣ ಮಾಡಿ. ಇಂತಹ ಯಾವುದಾದರೂ ಸಾಹಸ ನಡೆಯದೆ ಭಾರತ ಮುಕ್ತವಾಗಲಾರದು. ನನ್ನ ದೃಷ್ಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಾಹಸ ಕೈಗೊಳ್ಳಲು ಸಮರ್ಥರಾದ ಇಬ್ಬರು ಮೂವರ ಪೈಕಿ ನೀವು ಒಬ್ಬರು" ಎಂದು ಸುಭಾಷರಿಗೆ ಧೈರ್ಯ ತುಂಬಿ ಸುಭಾಷರ ಮುಂದಿನ ಯೋಜನೆಗೆ ರೂಪುರೇಷೆ ಒದಗಿಸಿದರು. ದೇಹ ಕರಿನೀರ ರೌರವದಿಂದ ಜರ್ಝರಿತಗೊಂಡಿದ್ದರೂ, ವೃದ್ದಾಪ್ಯದಿಂದ ಶಿಥಿಲಗೊಂದಿದ್ದರೂ ಅವರ ಮನಸ್ಸು ಕುಸಿದಿರಲಿಲ್ಲ. INA ಕಟ್ಟಿದ ಸುಭಾಷ್ ಸಿಂಗಾಪುರದಿಂದ ಮಾಡಿದ "ಫ್ರೀ ಇಂಡಿಯಾ ರೇಡಿಯೋ ಭಾಷಣದಲ್ಲಿ ಸ್ಮರಿಸಿದ್ದು ಸಾವರ್ಕರರನ್ನೇ - "ರಾಜಕೀಯ ಪ್ರಬುದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ವೀರ ಸಾವರ್ಕರ್ ಸೇನೆಗೆ ಸೇರಿ ಎಂದು ತರುಣರನ್ನು ಹುರಿದುಂಬಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ಅವರ ಮಾತಿನಂತೆ ಭಾರತ ರಾಷ್ಟ್ರೀಯ ಸೇನೆಗೆ ಬೇಕಾದ ತರುಣ ತಂಡ ಸಿದ್ಧಗೊಂಡಿದೆ."
ಸಾವರ್ಕರರ ಹಿಂದುತ್ವದ ಚಿಂತನೆ ಕೇವಲ ಮುಸಲ್ಮಾನ ಮಾನಸಿಕತೆಗೆ ಪ್ರತಿಕ್ರಿಯೆಯಲ್ಲ. ಅದು ಈ ದೇಶ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ವೇದೋಲ್ಲೇಖಿತ ಚಿಂತನೆಯೂ ಹೌದು. ಭಾರತೀಯ ದೃಷ್ಠಿಯಿಂದ ನೋಡದೆ ಸೆಕ್ಯುಲರ್ ದೃಷ್ಠಿಯಿಂದ ನೋಡುವವರಿಗೆ ಹಿಂದೂಗಳು ಹಾಗೂ ಹಿಂದೂಯೇತರರು ತಂತಮ್ಮ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ರಕ್ಷಿಸಿಕೊಂಡು ಒಂದೇ ದೇಶದೊಳಗೆ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ಬಾಳಬೇಕೆಂಬುದು ಸಾವರ್ಕರ್ ಪ್ರತಿಪಾದನೆ ಅಂತನ್ನಿಸಬಹುದು. ಪ್ರಧಾನ ಜನಾಂಗಕ್ಕೆ ಪರಮಾಧಿಕಾರ ಕೊಡುವುದರಿಂದ ಎರಡು ಜನಾಂಗಗಳು ಪರಸ್ಪರ ಪ್ರೀತಿ ಗೌರವದಿಂದ, ಹೊಂದಾಣಿಕೆಯಿಂದ ಬದುಕಲು ಸಾಧ್ಯವಿಲ್ಲ ಎಂದು ಆಲೋಚಿಸುವ ಸೆಕ್ಯುಲರ್ ಚಿಂತಕರಿಗೆ ಅಲ್ಪ ಸಂಖ್ಯಾತ ಜನಾಂಗಕ್ಕೆ ಸಮಾನ ಅಥವಾ ಹೆಚ್ಚಿನ ಅಧಿಕಾರ ಕೊಟ್ಟ ಬಳಿಕವೂ ಆ ಜನಾಂಗಗಳು ಹಿಂದೂಗಳೊಟ್ಟಿಗೆ ಹೊಂದಾಣಿಕೆಯಿಂದ ಬದುಕಿಲ್ಲ/ಬದುಕುತ್ತಿಲ್ಲ ಎನ್ನುವುದು ಮರೆತು ಹೋಗಿದೆ. ಗಾಂಧಿ ಅಂತಾರಾಷ್ಟ್ರೀಯ ಸಮಸ್ಯೆಯನ್ನು(ಖಿಲಾಫತ್ ಚಳುವಳಿ) ಸ್ವಾತಂತ್ರ್ಯ ಚಳುವಳಿಗೆ ವೃಥಾ ತಳುಕು ಹಾಕಲು ಯತ್ನಿಸಿದರು. ಮುಸ್ಲಿಮರನ್ನು ಓಲೈಸಿ ಹಿಂದೂ ಮುಸ್ಲಿಂ ಐಕ್ಯ ಸಾಧಿಸಲು ಮೂರ್ಖ ಪ್ರಯತ್ನ ನಡೆಸಿಯೂ ಮುಸ್ಲಿಮರ ಕಣ್ಣಲ್ಲಿ ಕಾಫಿರರಾಗಿಯೇ ಉಳಿದರು. ಇನ್ನು ಉಳಿದ ನಾಯಕರ ಪಾಡೇನು? ಗಾಂಧಿ ಕ್ರಿಸ್ತನ ಚಂತನೆಯನ್ನು ಹಿಂದೂ ಧರ್ಮಕ್ಕೆ ಎರವಲು ತಂದು ಅಹಿಂಸೆಯ ನಾಟಕವಾಡಿದರೆ, ಸಾವರ್ಕರ್ ಕಾಯಾ ವಾಚಾ ಮನಸಾ "ಅಹಿಂಸಾ ಪರಮೋ ಧರ್ಮ, ಧರ್ಮ ಹಿಂಸಾ ತಥೈವಚಾ" ಎಂದು ಆಚರಿಸಿದರು. ವಿಪರ್ಯಾಸ ಹಾಗೂ ವಿಷಾದವೆಂದರೆ ಭಾರತದ ರಾಜಕಾರಣ ಸಾವರ್ಕರರ ಸನಾತನ ಚಿಂತನೆಯನ್ನು ಅನುಸರಿಸುವ ಬದಲು ಗಾಂಧಿಯ ಸೆಕ್ಯುಲರ್, ನಾಟಕದ, ಸ್ವಜನಪಕ್ಷಪಾತದ, ಸ್ವಹಿತದ ರಾಜಕಾರಣವನ್ನು ತನ್ನದಾಗಿಸಿಕೊಂಡಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ