ಪುಟಗಳು

ಶನಿವಾರ, ಜನವರಿ 3, 2015

ಹುಲಿಚರ್ಮ ಧರಿಸಿದ ಮಾತ್ರಕ್ಕೆ ಗುಳ್ಳೆನರಿ ಹುಲಿಯಾಗುವುದೇ?ಹುಲಿಚರ್ಮ ಧರಿಸಿದ ಮಾತ್ರಕ್ಕೆ ಗುಳ್ಳೆನರಿ ಹುಲಿಯಾಗುವುದೇ?
           
         
  ಅಧಿಕಾರ ಪಡೆಯಲು ರಾಜಕಾರಣಿಯಾದವ ಯಾವೆಲ್ಲಾ ಆಟ ಆಡುತ್ತಾನೆ ಎನ್ನುವುದು ಸೃಷ್ಟಿಸಿದ ಬ್ರಹ್ಮನಿಗೂ ತಿಳಿದಿರಲಾರದೇನೋ! ಮತ ಪಡೆಯುವ ಸಲುವಾಗಿ "ಮತ"ವನ್ನೇ ಬದಲಾಯಿಸಿದವರನ್ನೂ ಭಾರತ ಕಂಡಿದೆ! ಅಧಿಕಾರಕ್ಕೋಸ್ಕರ ಸಮಾಜವನ್ನು ಜಾತಿ-ಮತಗಳ ಆಧಾರದಲ್ಲಿ ಒಡೆಯುವುದೆಲ್ಲಾ ಮಾಮೂಲಿ. ಸದಾ ಒಂದಿಲ್ಲೊಂದು ರೀತಿಯಲ್ಲಿ ಅಧಿಕಾರದಲ್ಲಿದ್ದು ಈಗ ಅಧಿಕಾರ ಕಳೆದುಕೊಂಡದ್ದು ಮಾತ್ರವಲ್ಲದೇ ಸರ್ವನಾಶವಾಗುವತ್ತ ಸಾಗುತ್ತಿರುವ ಕಾಂಗ್ರೆಸ್ ಎಂಬ ಪಕ್ಷ ಮತ್ತೆ ಅಧಿಕಾರಕ್ಕೇರಲು ಹೊಸದೊಂದು ಉಪಾಯ ಕಂಡುಕೊಂಡಿದೆ. ಏನಿಲ್ಲಾ, ಕಾಂಗ್ರೆಸಿಗೆ ಅಚಾನಕ್ಕಾಗಿ ಹಿಂದೂಗಳ ಮೇಲೆ "ಪ್ರೀತಿ" ಹುಟ್ಟಿದೆ! ಅರೆ, ಇಷ್ಟರವರೆಗೆ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಿಗೂ ಕಡೆಯಾಗಿ ನೋಡುತ್ತಿದ್ದ ಕಾಂಗ್ರೆಸಿಗರಿಗೆ ಆತುರಾತುರವಾಗಿ ಹಿಂದೂಗಳ ನೆನಪಾದದ್ದು ಹೇಗೆ? "ಘರ್ ವಾಪಸಿಯೇ?"

            ಲೋಕಸಭಾ ಚುನಾವಣೆಯಲ್ಲಿ ತಮ್ಮ ಯುವರಾಜನ ಪ್ರಾಯದಷ್ಟು ಸ್ಥಾನ ಗಳಿಸಿದ ಕಾಂಗ್ರೆಸಿಗರಿಗೆ ಅತ್ತ ಅಧಿಕಾರವೂ ಸಿಗಲಿಲ್ಲ, ಇತ್ತ ವಿರೋಧ ಪಕ್ಷ ಸ್ಥಾನವೂ! ಮುಂದೆ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್, ಜಮ್ಮು ಕಾಶ್ಮೀರಾದಿಯಾಗಿ ಎಲ್ಲೆಲ್ಲೂ ಮುಖಭಂಗವೇ! ಅಲ್ಲದೆ ದೇಶದಲ್ಲಿನ ಒಟ್ಟು ಶಾಸಕರ ಸಂಖ್ಯೆಯಲ್ಲೂ ಭಾಜಪಾವೇ ಮೇಲುಗೈ ಸಾಧಿಸಿರುವಾಗ, ತನ್ನ ಯುವರಾಜ ಕಾಲಿಟ್ಟಲ್ಲೆಲ್ಲಾ ಮಗುಚಿ ಬೀಳುತ್ತಿರುವ ಕಾಂಗ್ರೆಸಿಗೆ ಗೆಲ್ಲುವುದು ಬಿಡಿ ಅಸ್ತಿತ್ವ ಉಳಿಸಿಕೊಳ್ಳುವುದೇ ಪ್ರಶ್ನೆಯಾಗುಳಿದಿದೆ. ಇಷ್ಟರವರೆಗೆ ತಾನೇ ಅಲ್ಪಸಂಖ್ಯಾತರ ರಕ್ಷಕ ಎಂದು ಬೀಗುತ್ತಿದ್ದ ಪಕ್ಷಕ್ಕೆ ಅಲ್ಪಸಂಖ್ಯಾತರೇ "ಕೈ" ಕೊಟ್ಟಾಗ ಜೀವ ಉಳಿಸಿಕೊಳ್ಳಲು ಹಿಂದೂಗಳ ನೆನಪಾಗಿದೆ. ಕಾಂಗ್ರೆಸಿನ ಹಿಂದೂ ವಿರೋಧಿ ಧೋರಣೆ ಹಾಗೂ ಅತಿಯಾದ ಅಲ್ಪಸಂಖ್ಯಾತರ ಓಲೈಕೆಯೇ ಸೋಲಿಗೆ ಕಾರಣ ಎಂದು ಹೆಚ್ಚಿನ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದಾಗ ಬಗ್ಗೆ ಎಐಸಿಸಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಹಿಂದೂ ಮತಗಳನ್ನು ಸೆಳೆಯುವ ಸಲುವಾಗಿ ಹಿಂದೂ ಸಂಘಟನೆಯೊಂದನ್ನು ಆರಂಭಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದರ ರೂಪುರೇಷೆಗಳನ್ನು ನಿರ್ಧರಿಸಿರಲಿಲ್ಲ. ಇದರಿಂದ ಉತ್ಸಾಹಿತಗೊಂಡ ಪುತ್ತೂರಿನ ಕಾಂಗ್ರೆಸಿಗರು ಹಿಂದೂ ಸಂಘಟನೆಯೊಂದನ್ನು ರಚಿಸಿದ್ದಾರೆ. ಮಾತ್ರವಲ್ಲ ವಿಶ್ವ ಹಿಂದೂ ಪರಿಷತ್ತಿಗೆ ಪರ್ಯಾಯವಾಗಿ ಭಾರತೀಯ ಹಿಂದೂ ಪರಿಷತ್ ಎಂಬ ಹೆಸರಿಡಲಾಗಿದೆ. ಜನವರಿ 14ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಈ ಸಂಘಟನೆಗೆ ಚಾಲನೆ ದೊರೆಯಲಿದ್ದು ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಸತೀಶ್ ನಾಯಕರನ್ನು ಇದರ ಸಂಚಾಲಕರನ್ನಾಗಿ ನೇಮಿಸಲಾಗಿದೆ.

         ಪ್ರಶ್ನೆಗಳು ತುಂಬಾ ಇವೆ. ವಿಶ್ವ ಹಿಂದೂ ಪರಿಷತ್ತಿಗೆ ಪರ್ಯಾಯವಾಗಿ ತಾವು ಸಂಘಟನೆ ಮಾಡುತ್ತಿದ್ದೇವೆ ಎನ್ನುವ ಈ ಮೂರ್ಖರಿಗೆ ವಿಹಿಂಪ ಬಗ್ಗೆ ತಿಳಿದಿರುವುದಾದರೂ ಏನು? ವಿಹಿಂಪ ಏನು ಭಾಜಪಾದ ಆಸ್ತಿಯೇ? ಭಾಜಪಾ ಹುಟ್ಟುವ ಮೊದಲೇ ವಿಹಿಂಪ ಜನ್ಮತಾಳಿತ್ತು ಎನ್ನುವ ವಿಚಾರ ಇವರಿಗೆ ತಿಳಿದಿದೆಯೇ? ಆರೋಗ್ಯ, ಶಿಕ್ಷಣ, ಸ್ವಉದ್ಯೋಗ, ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ನಿವಾರಣೆ ಹೀಗೆ ಸುಮಾರು 32000ಕ್ಕೂ ಹೆಚ್ಚು ಸೇವಾಕಾರ್ಯಕ್ರಮಗಳನ್ನು ಮಾಡುತ್ತಿರುವ ವಿಹಿಂಪವನ್ನು ಭಾಜಪಾಕ್ಕೆ ಸೀಮಿತಗೊಳಿಸುವ ಕಾರ್ಯ ಮೂರ್ಖತನವಲ್ಲದೇ ಇನ್ನೇನು? ಹಿಂದೂ ಸಮಾಜೋತ್ಸವ ಎಂದರೆ ಭಾಜಪಾ ಸಭೆಯಂತಾಗಿದೆ ಎನ್ನುವ ಕಾಂಗ್ರೆಸ್ಸಿಗರ ಮಾನಸಿಕತೆ ಎಷ್ಟು ಸಂಕುಚಿತವಾದದ್ದು? ಹಿಂದೂ ಸಮಾಜೋತ್ಸವಕ್ಕೆ ತಮ್ಮದೇ ಪಕ್ಷದ ಕಾರ್ಯಕರ್ತರು, ಪುಢಾರಿಗಳು, ಭಾಜಪಾಕ್ಕೆ ಮತ ಹಾಕದವರೂ ಹೋಗುತ್ತಾರೆ ಎನ್ನುವುದನ್ನು ಇವರು ಮರೆತಂತಿದೆ. ಈ ರೀತಿಯ ಹಿಂದೂ ಸಂಘಟನೆ ಹುಟ್ಟು ಹಾಕಲು ಹೊರಟಿರುವವರಿಗೆ "ಹಿಂದೂ" , "ಹಿಂದೂ ಸಮಾಜೋತ್ಸವ" ಪದಗಳೇ ಅರ್ಥವಾಗಿಲ್ಲ, ಇನ್ನು ಇವರು ಆರಂಭಿಸುವ ಸಂಘಟನೆ ಹೇಗಿರಬಹುದು? ಮಂದಿರ, ದೇವಾಲಯಗಳ ಅಭಿವೃದ್ಧಿಯಲ್ಲಿ ಕಾಂಗ್ರೆಸ್ಸಿಗರ ಪಾತ್ರ ಹಿರಿದು ಎನ್ನುವ ಸಂಘಟಕರಿಗೆ ಮಂದಿರಗಳ ಹುಂಡಿಯಿಂದ ತೆಗೆತೆಗೆದು ಹಜ್ ಯಾತ್ರೆಗೆ, ಚರ್ಚುಗಳಿಗೆ ತಮ್ಮದೇ ಸರಕಾರ ಸುರಿದದ್ದು ಮರೆತೇ ಹೋಗಿದೆ. ತಮ್ಮದೇ ಸರಕಾರ ಹಿಂದೂಗಳ ನಂಬಿಕೆಗಳನ್ನೆಲ್ಲಾ ಮೌಢ್ಯ ಎಂದು ನಿಷೇಧಿಸ ಹೊರಟಿದ್ದು ನೆನಪಿಗೇ ಬರುವುದಿಲ್ಲ! ತಮ್ಮದೇ ಪಕ್ಷದ ಮುಖ್ಯಮಂತ್ರಿ, ಲಕ್ಷಾಂತರ ಹಿಂದೂಗಳ ಮಾರಣಹೋಮ ಮಾಡಿದ ಮತಾಂಧನ ಜನ್ಮ ದಿನಾಚರಣೆಯನ್ನು ಆಚರಿಸಲು ಹೊರಟದ್ದನ್ನಾದರೂ ನೆನಪಿಡಬೇಕಿತ್ತಲ್ಲವೇ? ಇತಿಹಾಸದಲ್ಲಿ, ವರ್ತಮಾನದಲ್ಲೂ ಮಂದಿರ, ದೇವಾಲಯಗಳ ಮೇಲಾದ ದಾಳಿಯನ್ನು ಸಮರ್ಥನೆ ಮಾಡಿಕೊಂಡವರು, ದೇವಾಲಯಗಳ ಮೇಲೆ ದಾಳಿ ಮಾಡಿದವರನ್ನು "ನಾಯಕರಂತೆ" ಪಠ್ಯಪುಸ್ತಕಗಳಲ್ಲೆಲ್ಲಾ ತುಂಬಿಸಿದವರು, ದೇವಾಲಯ ನಾಶದ ಕುರುಹುಗಳನ್ನೆಲ್ಲಾ ನಾಶ ಮಾಡಿ ಇತಿಹಾಸವನ್ನೇ ತಿರುಚಿದವರು ಎಷ್ಟು ಮಂದಿರಗಳಿಗೆ ದೇಣಿಗೆ ಕೊಟ್ಟರೇನು, ದೇವಾಲಯಗಳನ್ನು ಅಭಿವೃದ್ಧಿಪಡಿಸಿದರೇನು? ಭಾಹಿಂಪದ ಸಂಘಟಕರೊಬ್ಬರು ಹೇಳುತ್ತಾರೆ "ಕಾಂಗ್ರೆಸ್ಸಿನೊಳಗೆ ಹಿಂದೂ ಸಂಘಟನೆ ರಚಿಸಿದರೆ ಇತರ "ಧರ್ಮೀಯರಿಗೆ" ಬೇಸರವಾಗಬಹುದು ಎಂಬ ನಂಬಿಕೆಯಿತ್ತು. ಅದನ್ನು ಮೀರಿ ಭಾಹಿಂಪವನ್ನು ರಚಿಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಭಾಹಿಂಪಕ್ಕೆ ಬೆಂಬಲ ನೀಡಿದೆ. ಆದರೆ ಕಾಂಗ್ರೆಸ್ಸಿಗೂ ಭಾಹಿಂಪಕ್ಕೂ ಯಾವುದೇ ಸಂಬಂಧವಿಲ್ಲ" ಎಂದು. ಈಗ ಆ ಇತರ "ಧರ್ಮೀಯರಿಗೆ" ನೋವಾಗುವುದಿಲ್ಲವೇ? ಕಾಂಗ್ರೆಸಿನ ಹೈಕಮಾಂಡ್ ಬೆಂಬಲ ಪಡೆದು, ಕಾಂಗ್ರೆಸ್ಸಿನಲ್ಲಿರುವ ಹಿಂದೂಗಳನ್ನು ಒಗ್ಗೂಡಿಸಲು ಕಾಂಗ್ರೆಸ್ಸಿನವರೇ ಮಾಡಿದ ಸಂಘಟನೆಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲವೆಂದರೆ ಇದಕ್ಕಿಂತ ಹಾಸ್ಯಾಸ್ಪದವಾದದ್ದು ಇನ್ನೇನಿದೆ?

             ನೈಜ ಹಿಂದುತ್ವವನ್ನೇ ಪ್ರತಿಪಾದಿಸುವುದು ನಮ್ಮ ಗುರಿ ಎನ್ನುವ ಸಂಘಟಕರಿಗೆ ಕೆಲವು ಪ್ರಶ್ನೆಗಳಿವೆ. ಅವರ ಪ್ರಕಾರ "ನೈಜ ಹಿಂದುತ್ವ" ಎಂದರೇನು? ಪ್ರೀತಿಯ ಹೆಸರಿನಲ್ಲಿ ಹಿಂದೂ ಹುಡುಗಿಯರನ್ನು ಮತಾಂತರಿಸಿ ಭೋಗದ ವಸ್ತುವಾಗಿಸುವ ಲವ್ ಜಿಹಾದ್, ಸೆಕ್ಸ್ ಜಿಹಾದ್, ಹಿಂದೂ ಹುಡುಗಿಯರನ್ನು ಬಲಾತ್ಕರಿಸುವ ರೇಪ್ ಜಿಹಾದ್ ಇವುಗಳ ಬಗ್ಗೆ ಇವರ ನೈಜ ಹಿಂದುತ್ವ ಏನು ಹೇಳುತ್ತೆ? ಇದನ್ನು ತಡೆಯಲು ಯಾವ ಕ್ರಮ ಕೈಗೊಳ್ಳುತ್ತೆ? ಸ್ವಪಕ್ಷೀಯರೇ ಅಂತಹುದ್ದೊಂದು ನಡೆಯುತ್ತಿಲ್ಲ ಎಂದು ಹೇಳುವುದನ್ನು ಇವರು ಹೇಗೆ ವಿರೋಧಿಸುತ್ತಾರೆ? ಇವರ ಪಕ್ಷದವರಿಂದ ಅಥವಾ ಪಕ್ಷವನ್ನು ಓಲೈಸುವ ಮಾಧ್ಯಮಗಳಿಂದ ಹಿಂದೂ ಸಾಧು ಸಂತರ ಮೇಲಾಗುವ ತೇಜೋವಧೆಯನ್ನು ಇವರು ನಿಲ್ಲಿಸುತ್ತಾರೆಯೇ? ಹಿಂದೂಗಳಿಗೆ ಪೂಜನೀಯವಾದ ಗೋಮಾತೆಯ ಹತ್ಯೆಯನ್ನು ತಮ್ಮ ಸರಕಾರದ ಮೂಲಕ ನಿಷೇಧಿಸುತ್ತಾರೋ? ಕಪಟ, ಕೃತ್ತಿಮ, ಬಲವಂತದಿಂದ ಹಿಂದೂಗಳನ್ನು ಮತಾಂತರಿಸುವ "ಬದಲಾಯಿಸುವ ಶಕ್ತಿ" ಹಾಗೂ ಅವರಿಗೆ ಹೊರದೇಶಗಳಿಂದ ಹರಿದು ಬರುವ ಅಪಾರ ಪ್ರಮಾಣದ ಹಣದ ಬಗ್ಗೆ ಇವರ ಅಭಿಪ್ರಾಯವೇನು? ಸಮಾನ ನಾಗರಿಕ ಸಂಹಿತೆ ಅಳವಡಿಸುವ ಬಗ್ಗೆ ಮತಾಂತರ ನಿಷೇಧಗಳ ಬಗ್ಗೆ ಇವರೇನು ಹೇಳುತ್ತಾರೆ? ಇಷ್ಟರವರೆಗೆ ತಮ್ಮ ಮತಬ್ಯಾಂಕ್ ಭದ್ರವಾಗಿಸಿಕೊಳ್ಳಲು ತಮಗೆ ಬೇಕಾದಂತೆ ತಿರುಚಿದ ಇತಿಹಾಸವನ್ನು ಸರಿಯಾಗಿ ಬರೆಯಲು ಸಹಾಯ ಮಾಡುತ್ತಾರೋ? ಅದಕ್ಕಿಂತಲೂ ಮಖ್ಯವಾಗಿ ಸ್ವ ಇಚ್ಛೆಯಿಂದ ಮಾತೃಧರ್ಮಕ್ಕೆ ಮರಳುವವರನ್ನು ಸ್ವಾಗತಿಸಲು ಸಿದ್ಧವೇ?

           ಕೇವಲ ಮತಕ್ಕಾಗಿ ರಾಜಕೀಯ ಪಕ್ಷಗಳು ಈ ರೀತಿಯ ಸಂಘಟನೆ ಹುಟ್ಟು ಹಾಕುವುದು ಎಷ್ಟು ಸರಿ? ನಾಳೆ ಇನ್ನೊಂದು ಪಕ್ಷ ಇದೇ ರೀತಿ ಇನ್ನೊಂದು ಹಿಂದೂ ಸಂಘಟನೆಯನ್ನು ಆರಂಭಿಸುತ್ತದೆ, ನಾಡಿದ್ದು ಮಗದೊಂದು...ಹೀಗೆ ಪ್ರತಿಯೊಂದು ಪಕ್ಷ ಈ ರೀತಿ ಸಂಘಟನೆಗಳನ್ನು ಮಾಡಿ ತಮ್ಮನ್ನು ಒಡೆಯುವ ಹುನ್ನಾರವನ್ನು ಅರ್ಥ ಮಾಡಿಕೊಳ್ಳದಿದ್ದಲ್ಲಿ ಹಿಂದೂಗಳು ಮತ್ತದೇ ಹಿಂದಿನ ಶತಮಾನಗಳ ದು:ಸ್ಥಿತಿಗೆ ಜಾರುತ್ತಾರೆ.  ಹಿಂದೂಗಳು ಸುಮ್ಮನಿರುತ್ತಾರೆಂದರೆ ಅವರನ್ನು ಯಾವ ರೀತಿ ಬೇಕಾದರೂ ತಮ್ಮ ಉದ್ದೇಶಸಾಧನೆಗೆ ಬಳಸಿಕೊಳ್ಳಬಹುದು ಎನ್ನುವ ರಾಜಕಾರಣಿಗಳ ದುರ್ನೀತಿ ರೇಜಿಗೆ ಹುಟ್ಟಿಸುತ್ತಿದೆ. ಹಿಂದೂಗಳ ಸಹಿಷ್ಣುತೆ, ದಿವ್ಯಮೌನಗಳೇ ಹಿಂದೂಗಳಿಗೆ ಶಾಪವಾಗಿ ಕಾಡುತ್ತಿದೆ!

          ಯಾವುದೇ ತತ್ವ ಹಾಗೂ ಬದ್ಧತೆಯಿಲ್ಲದೇ ಹುಟ್ಟುವ ಸಂಘಟನೆಗಳು ಬಹುಕಾಲ ಬಾಳಲಾರವು. ಸಂಘಟನೆಯನ್ನು ಹುಟ್ಟುಹಾಕಿದ ನಂತರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಸಂಘಟನೆ ಎಷ್ಟು ಕಾಲ ಬದುಕೀತು? ಆಮ್ ಆದ್ಮಿ ಪಕ್ಷದ ದುರವಸ್ಥೆಯೇ ಇತ್ತೀಚಿನ ನಿದರ್ಶನ! ಇದರಿಂದ ಕಾಂಗ್ರೆಸ್ ಕೂಡಾ ಹೊರತಲ್ಲ. ಬರೇ ಮತಬ್ಯಾಂಕಿಗಾಗಿ ಈ ರೀತಿಯ ಕೆಲಸಗಳನ್ನು ಮಾಡಿದರೆ ಜನ ಚಪ್ಪಲಿಯಿಂದ ಹೊಡೆಯುವ ದಿನ ದೂರವಿಲ್ಲ. ಒಂದು ವೇಳೆ ಕಾಂಗ್ರೆಸಿಗರಿಗೆ ನಿಜವಾಗಿಯೂ ಹಿಂದೂಗಳ ಮೇಲೆ ಪ್ರೀತಿ ಹುಟ್ಟಿದೆ ಎಂದಾದರೆ ಒಂದು ರೀತಿಯಿಂದ ಹಿಂದೂಗಳಿಗೆ ಒಳ್ಳೆಯದೆ. ಹಿಂದೂ ವೋಟ್ ಬ್ಯಾಂಕ್ ರೂಪುಗೊಳ್ಳುವುದರ ಜೊತೆಯಲ್ಲಿ ಇಷ್ಟರವರೆಗೆ ತಮ್ಮ ಮೇಲಾಗಿರುವ ಐತಿಹಾಸಿಕ-ಧಾರ್ಮಿಕ-ರಾಜಕೀಯ-ಸಾಮಾಜಿಕ-ಆಡಳಿತಾತ್ಮಕವಾದ ಎಲ್ಲಾ ಅಸಮಾನತೆಗಳನ್ನು ನಿವಾರಿಸಿಕೊಳ್ಳುವ ಸುಲಭ ಅವಕಾಶವೊಂದು ಹಿಂದೂಗಳಿಗೆ ಸಿಗಲಿದೆ. ಅಂದ ಹಾಗೆ ವಿಹಿಂಪಕ್ಕೆ ಪರ್ಯಾಯವಾಗಿ ಆರಂಭಿಸುವುದೆಂದು ಹೇಳಲಾಗುತ್ತಿರುವ ಭಾಹಿಂಪ "ಪರಾವರ್ತನ" ಮಾಡುವಾಗ ಇಷ್ಟರವರೆಗೆ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದ್ದ ಸೆಕ್ಯುಲರುಗಳ ಮುಖವನ್ನೊಮ್ಮೆ ನೋಡುವ ಹಂಬಲ ಮೂಡುತ್ತಿದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ