ಪುಟಗಳು

ಶುಕ್ರವಾರ, ಜನವರಿ 16, 2015

ನೀರ್ಗಲ್ಲ ನಾಡಿನ ಹೃದಯಗಳಲ್ಲಿ ಭಾರತದ ಬಗ್ಗೆ ಅನುರಾಗ ತುಂಬಿದೆನೀರ್ಗಲ್ಲ ನಾಡಿನ ಹೃದಯಗಳಲ್ಲಿ ಭಾರತದ ಬಗ್ಗೆ ಅನುರಾಗ ತುಂಬಿದೆ
  
            ಬೇಸಿಗೆಯಲ್ಲೂ ನೀರು ಹೆಪ್ಪುಗಟ್ಟಿಯೇ ಇರುವ ಸ್ಥಳ ಸೈಬೀರಿಯಾ. ಮಹಾಯುದ್ಧದ ಸಂದರ್ಭದಲ್ಲಿ ರಾಜಕೀಯ ಕೈದಿಗಳನ್ನು ಇಲ್ಲೇ ಬಂಧಿಸಿಡಲಾಗುತ್ತಿತ್ತು. ಒಂದು ರೀತಿಯ ನರಕಸದೃಶ ಜಾಗವೇ ಸರಿ. ಇಲ್ಲಿನ ಒಂದು ಸ್ಥಳ ಉಲಾನ್-ಉಡೆ. ಇದು ಬುರ್ಯಾತ್ ಅಟನಾಮಸ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ಕಿನ ರಾಜಧಾನಿ. ಇಲ್ಲಿಗೂ ಭಾರತಕ್ಕೂ ಸಂಬಂಧವಿದೆ. ಈ ನೀರ್ಗಲ್ಲ ನಾಡಿನ ಜನರ ಹೃದಯದಲ್ಲಿ ಭಾರತದ ಬಗ್ಗೆ ಅನುರಾಗದ ಭಾವನೆಗಳಿವೆ. ಈ ಪ್ರದೇಶದ ಕೇಂದ್ರ ಭೌಗೋಳಿಕ ಬಿಂದು ಬೈಕಲ್ ಸರೋವರ. ಒಂದು ಕಾಲದಲ್ಲಿ ಬೈಕಲ್ ಸರೋವರದ ಪರಿಸರದಲ್ಲಿ 33 ಮಠಗಳಿದ್ದವು. ಅವುಗಳಲ್ಲಿ ಅಧ್ಯಯನ ನಳಂದದ ಪರಂಪರೆಯಲ್ಲಿಯೇ ಸಾಗಿತ್ತು. ಅಲ್ಲಿ ನಾಲ್ಕು ಶಾಖೆಗಳಿರುತ್ತಿದ್ದವು. ವೇದಾಂತ, ತಂತ್ರ,  ಜ್ಯೋತಿಷ್ಯ ಅಥವಾ ಕಾಲಚಕ್ರ, ಆಯುರ್ವೇದ ಇವೇ ನಾಲ್ಕು ಶಾಖೆಗಳು! ನಳಂದವಳಿದು ಶತಮಾನಗಳು ಉರುಳಿದ ನಂತರವೂ ಸೈಬೀರಿಯಾ, ಮಂಗೋಲಿಯಾ, ಟಿಬೆಟ್'ಗಳಲ್ಲಿ ಮಠವಿಶ್ವವಿದ್ಯಾಲಯ ಪರಂಪರೆ ಉಳಿದುಕೊಂಡಿತ್ತು. ಅಲ್ಲಿನ ಪಠ್ಯ ಪುಸ್ತಕಗಳು ಸಂಸ್ಕೃತದಿಂದ ಅನುವಾದ ಇಲ್ಲವೇ ಪ್ರಭಾವಿತವಾಗಿರುವಂತಹವು. ರಷ್ಯಾದ ವಿಜ್ಞಾನ ಅಕಾಡೆಮಿಯ ಸೈಬೀರಿಯನ್ ಶಾಖೆಯಲ್ಲಿ ಇಂತಹ ಹಲವು ಗ್ರಂಥಗಳನ್ನು ರಕ್ಷಿಸಿಟ್ಟಿದ್ದಾರೆ. ಆದರೆ ಕಮ್ಯೂನಿಸ್ಟ್ ಕ್ರಾಂತಿಯ ಮದ ಇವೆಲ್ಲ ಮಠ ವಿಶ್ವವಿದ್ಯಾಲಯಗಳನ್ನು ನಾಶ ಮಾಡಿತು. ಇತ್ತೀಚೆಗೆ ಎರಡು ಮಠಗಳನ್ನು ಪುನರ್ರೂಪಿಸಿದ್ದಾರೆ.
             ಬುರ್ಯಾತರ ಭಾಷೆಯ ಮೂಲ ಸಂಸ್ಕೃತ. ನಮ್ಮ ದೇವ-ದೇವತೆಯರ ಹೆಸರುಗಳು ಅನುವಾದಿತಗೊಂಡು ಇಂದು ಅಪಭೃಂಶವಾಗಿ ಚಾಲ್ತಿಯಲ್ಲಿವೆ. ಸೋಕ್ತೋ ಅನ್ನುವ ಹೆಸರು ಚೋಕ್ತೋ ಎಂಬ ಪದದ ಅಪಭೃಂಶ. ಈ ಚೋಕ್ತೋ ಅಂದರೆ ಸಂಸ್ಕೃತದಲ್ಲಿ "ಶಾಂತ ಕಾಳಿ" ಎಂದು. ಹಾಗೆಯೇ ಬಲದಾನ್ ಜಾಫ್ ಅಂದರೆ ಶ್ರೀದೇವಿ ರಕ್ಷಿತ; ಜಂಬಾಲ್ ದೊರ್ಜೆ-ಮಂಜು ಶ್ರೀ ವಜ್ರ..ಹೀಗೆ ಮೂಲ ಸಂಸ್ಕೃತವೇ. ಬುರ್ಯಾತರಿಗೆ ಗಂಗೆಯೆಂದರೆ ಪೂಜ್ಯ ಭಾವ. ಅವರು ಬೈಕಲ್ ಸರೋವರದ ಜಲವನ್ನೇ ಪವಿತ್ರ ಮಂತ್ರಗಳಿಂದ ಸಂಸ್ಕರಿಸಿ ಗಂಗಾಜಲದಂತೆ ತಮ್ಮ ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ. ಬೈಕಲ್ ಸರೋವರದ ನೀರು ಹರಳುಗಲ್ಲುಗಳೊಡನೆ ಇಟ್ಟರೆ ಹತ್ತು ವರ್ಷಗಳ ಕಾಲ, ಬರಿದೇ ಇಟ್ಟರೆ ಐದು ವರ್ಷಗಳ ಕಾಲ ಕೆಡದೇ ಇರುತ್ತೆ. ಅವರು ಭಾರತದಿಂದ ಯಾರಾದರೂ ಗಂಗಾಜಲ ಒಯ್ದರೆ ಪವಿತ್ರ ಪಾತ್ರದಲ್ಲಿಯೇ ಸಂಸ್ಕೃತ ಮಂತ್ರಗಳನ್ನು ಉಚ್ಛರಿಸಿ ಸ್ವೀಕರಿಸುತ್ತಾರೆ. ನಮ್ಮಲ್ಲಿ ನಮ್ಮ ಕೊಳಕನ್ನೆಲ್ಲಾ ಗಂಗೆಗೆಸೆದು ಬಿಡುತ್ತೇವೆ.

            ಇವಾಲ್ ಜಿನ್ಸ್ಕಿ ಎನ್ನುವ ಮಠ 1940ರಲ್ಲಿ ಪುನರ್ನಿರ್ಮಿತವಾಯಿತು. ಹಸಿರ ಸಿರಿಯ ಮಧ್ಯೆಯಿದೆ ಬುದ್ಧ ದೇವಾಲಯದಲ್ಲಿ ಪ್ರತಿದಿನ ವಾದ್ಯಗೋಷ್ಠಿಗಾನ ನಡೆಯುತ್ತದೆ. ಪ್ರತಿಯೊಂದು ದೇವತೆಗೂ ವಿಶಿಷ್ಟ ಸಂಗೀತ ಕ್ರಮವಿದೆ. ದೇವಾಲಯಗಳಲ್ಲಿ ಮಹಾಕಾಲನ ಸ್ತುತಿಯನ್ನು ವಾದ್ಯಗೋಷ್ಠಿಯೊಂದಿಗೆ ನುಡಿಸಲಾಗುತ್ತದೆ. ಮಹಾಕಾಲ ಬುರ್ಯಾತರಿಗೆ ಪ್ರಿಯ ದೇವತೆ. ಸ್ತುತಿಯು ಸಂಸ್ಕೃತ ಅಥವಾ ಬುರ್ಯಾತ್ ಭಾಷೆಯಲ್ಲಿರುತ್ತದೆ. ಅತಿಥಿಗಳಿಗೆ ಮಧುಪರ್ಕವನ್ನಿತ್ತು ಸತ್ಕರಿಸುತ್ತಾರೆ. ಅವರ, ತಾರೆಯ ಬಗೆಗಿನ ಶ್ಲೋಕವೊಂದು ಹೀಗಿದೆ. ತಾರೆಯ ರೌದ್ರ ರೂಪವನ್ನು ಮನೋಜ್ಞವಾಗಿ ನಿರೂಪಿಸಿರುವ ಶ್ಲೋಕವಿದು,
ನಮಃ ಕರತಲಾಘಾತ ಚರಣಾಹತ ಭೂತಲೇ|
ಭ್ರುಕುಟೀಕೃತ ಹೂಂಕಾರ ಸಪ್ತಪಾತಾಲ ನಾಶಿನೀ||
ನಮಃ ಶಿವೇ ಶುಭೇ ಶಾಂತೇ, ಶಾಸ್ತ ನಿರ್ವಾಣ ಗೋಚರೇ|
ಸ್ವಾಹಾ ಪ್ರಣಮ್ಯ ಸಂಯುಕ್ತೇ ಮಹಾಪಾತಕನಾಶಿನೀ||

ಶಿವ ಶಕ್ತಿ ಸಮನ್ವಯವನ್ನು ಕುರಿತ ಇನ್ನೊಂದು ಶ್ಲೋಕ;
ನಮಸ್ತ್ರಿತಲ ವಿನ್ಯಾಸೇ ಶಿವಶಕ್ತಿ ಸಮನ್ವಿತೇ|
ಗ್ರಹ ವೇತಾಳ ಯಕ್ಷಾದ್ಯ ನಾಶಿನೀ ಪ್ರವರೇ ತುರೇ||
ಈ ತಾರಾ ಸ್ತ್ರೋತ್ರ ಮಾತ್ರವಲ್ಲ, ಇಂತಹ ಏಳುಸಾವಿರ ಕೃತಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ ಬುರ್ಯಾತರು. ಇವೆಲ್ಲವೂ ರಷ್ಯಾದ ವಿಜ್ಞಾನ ಅಕಾಡೆಮಿಯ ಸೈಬೀರಿಯಾ ವಿಭಾಗದಲ್ಲಿ ಸುರಕ್ಷಿತವಾಗಿವೆ.

              ಚೊಕಿ ಒಟ್ಸೆರ್(ಸಂಸ್ಕೃತದಲ್ಲಿ ಧರ್ಮರಶ್ಮಿ) ಎಂಬಾತ ಪಾಣಿನಿಯ ವ್ಯಾಕರಣವನ್ನು ಆಧಾರವಾಗಿಟ್ಟುಕೊಂಡು ಬುರ್ಯಾತ್ ವ್ಯಾಕರಣ ಬರೆದ. ಪಾಣಿನಿಯ ಅಷ್ಟಾಧ್ಯಾಯೀ, ಅದರ ಟೀಕೆಯಾದ ಪ್ರಕ್ರಿಯಾ ಕೌಮುದೀಯನ್ನು ಬುರ್ಯಾತ್ ಭಾಷೆಗೆ ಹಲವು ಶತಮಾನಗಳ ಹಿಂದೆಯೇ ಅನುವಾದಿಸಲಾಗಿದೆ. ತದನಂತರ ಬುರ್ಯಾತೀ ಭಾಷೆಯಲ್ಲಿಯೇ ಇವುಗಳ ಮೇಲೆ ಅಸಂಖ್ಯ ಪರಿಚಯ ಗ್ರಂಥಗಳೂ, ಟೀಕಾಗ್ರಂಥಗಳು ಬಂದಿವೆ. ಅಲ್ಲದೆ ಸಂಸ್ಕೃತ-ಟಿಬೆಟ್-ಬುರ್ಯಾತ್ ಭಾಷೆಗಳ "ಮಹಾವ್ಯುತ್ಪತ್ತಿ" ಶಬ್ಧಕೋಶವೂ ರಚನೆಯಾಗಿದೆ. ಅದರಲ್ಲಿ 9565 ಪದಗಳೂ, ಪದ ಸಮೂಹಗಳು, ಪದಗುಚ್ಛಗಳೂ ಇವೆ. ಬುರ್ಯಾತೀ ಭಾಷೆಯಂತೂ ಸಂಸ್ಕೃತದ ಮಾದರಿಯ ಚೌಕಟ್ಟಿನಲ್ಲೇ ಎರಕಗೊಂಡ ಭಾಷೆ. ಈ ಭಾಷೆಯಲ್ಲಿ ಸಂಸ್ಕೃತದಂತೆಯೇ ಅರ್ಥ ಭೇದಗಳನ್ನು, ವಿವಿಧ ಅರ್ಥ ಛಾಯೆಗಳನ್ನು ಸೂಚಿಸಲು ಪ್ರತ್ಯಯವು ಉಪಯೋಗಿಸಲ್ಪಡುತ್ತದೆ. ಬುರ್ಯಾತಿ ಭಾಷೆಯ ಮೊದಲ ರಮ್ಯಕಾವ್ಯ ಸಂಸ್ಕೃತದಿಂದ ಅನುವಾದಗೊಂಡ ಮೇಘದೂತ. 1967-68ರ ಸುಮಾರಿಗೆ ತಮ್ಮ ಪೂರ್ವಿಕರ ಧರ್ಮವನ್ನು ಅನುಸರಿಸುವವರ ಸಂಖ್ಯೆ ಐದುಲಕ್ಷವಿತ್ತು. ಇದು ಬೌದ್ಧ-ತಾಂತ್ರಿಕ-ಶೈವ ಹೀಗೆ ಹತ್ತು ಹಲವು ಮತ-ಸಂಸ್ಕೃತಿಗಳ ಮಿಶ್ರಣ. ಆದರೆ ಅವರಿಗೆ ಭಾರತವೇ ಪುಣ್ಯಭೂಮಿ. ಸಂಸ್ಕೃತವೇ ದೇವಭಾಷೆ; ಮಂತ್ರಗಳನ್ನು ಸಂಸ್ಕೃತದಲ್ಲಿಯೇ ಪಠಿಸಬೇಕು; ಬಾಲ್ಯದ ಸಂಸ್ಕಾರಗಳು ಪ್ರತೀ ಮಗುವಿಗೂ ಆಗಬೇಕು.
             ಆಯುರ್ವೇದವು ಬುರ್ಯಾತೀಯರ ಜೀವನದ ಒಂದು ಅಂಗ. ಅವರು ಅದನ್ನು ರಾಷ್ಟ್ರೀಯ ವೈದ್ಯ ಎನ್ನುತ್ತಾರೆ. ಸೈಬೀರಿಯಾದಿಂದ ಇದು ಐರೋಪ್ಯ ರಷ್ಯಾಕ್ಕೂ ಪ್ರಸರಿಸಿದೆ. ಸ್ವತಃ ಸ್ಟಾಲಿನ್, ಪದ್ಮಯೇವ್ ಎಂಬ "ರಾಷ್ಟ್ರೀಯ ವೈದ್ಯ" ವಿಶಾರದನಿಂದ ಚಿಕಿತ್ಸೆ ಪಡೆದಿದ್ದ. ಆದರೆ ಈ ವೈದ್ಯನ ಸಾವಿನೊಂದಿಗೆ ಆಯುರ್ವೇದವೂ ನಶಿಸಿತು. ಈಗ ಕೆಲವು ವರ್ಷಗಳಿಂದ ಅದರ ಬಗ್ಗೆ ವ್ಯಾಪಕ ಸಂಶೋಧನೆಗಳು ಆರಂಭವಾಗಿದೆ. ವಾಗ್ಭಟನ ಅಷ್ಟಾಂಗ ಹೃದಯದಲ್ಲಿ ಸೂಚಿಸಿರುವ ಮೂಲಿಕೆ, ಖನಿಜ ಮತ್ತು ಪ್ರಾಣಿಯ ಚಿತ್ರಸಹಿತ ವಿವರಣೆಯುಳ್ಳ ಗ್ರಂಥ, ಸುಶ್ರುತ ಸೂಚಿಸಿರುವ ಅಂಗಾಂಗ ವಿವರಗಳು ಹಾಗೂ ಶಸ್ತ್ರಚಿಕಿತ್ಸೆಯ ಕುರಿತಾದ ಗ್ರಂಥಗಳು ಸಿಕ್ಕಿವೆ. ಅಷ್ಟಾಂಗ ಹೃದಯದ ಭಾಷಾಂತರವೂ ಇದೆ. ಸ್ವಸ್ತಿವಾಚನ ಕಾಯಾ,ವಾಚಾ,ಮನಸ್ಸುಗಳಿಗೆ ಸಂಬಂಧಿಸಿದ ಬೇರೆಬೇರೆ ಮಂತ್ರಗಳಿಂದ ನಡೆಯುತ್ತದೆ. ವರ್ಣಚಿತ್ರಕ್ಕೂ ಪ್ರಾಣಪ್ರತಿಷ್ಠೆ ಮಾಡುತ್ತಾರೆ. ಆದರೆ ವರ್ಣಚಿತ್ರವನ್ನು ಬಿಡಿಸುವಾಗ ಎಡೆಬಿಡದೇ ಮಂತ್ರಪಠಣ ನಡೆಯುತ್ತದೆ. ಪ್ರತಿ ಅಂಗವನ್ನೂ ವಿಶೇಷ ದಿನದಂದೇ ಚಿತ್ರಿಸಲಾಗುತ್ತದೆ. ಅದಕ್ಕೆ ಚಿನ್ನದ ಲೇಪನವಿರುತ್ತದೆ. ಎಲ್ಲಾ ದೇವ ದೇವಿಯರೂ ಕಮಲದ ಮೇಲೆ ಕುಳಿತಂತೆ ಚಿತ್ರಿತರಾಗಿದ್ದಾರೆ ಅಥವಾ ಕೆತ್ತಲ್ಪಟ್ಟಿದ್ದಾರೆ. ಅಜಿನ್ಸ್ಕಿ ಮಠ ಪಾಂಡಿತ್ಯದ ಉನ್ನತ ಮಟ್ಟಕ್ಕೆ ಪ್ರಸಿದ್ಧವಾಗಿದ್ದು ಸೈಬೀರಿಯಾದ ನಳಂದಾವಾಗಿತ್ತು. ವರ್ಷಪೂರ್ತಿ ನೀರ್ಗಲ್ಲುಗಳಿಂದ ತುಂಬಿರುವ ಸೈಬೀರಿಯಾದ ಜನರಿಗೆ ಭಾರತವೆಂದರೆ ದೇವತ್ವದ ಮೂರ್ತರೂಪ. ಗಾಢಾಂಧಕಾರದಲ್ಲಿ ಬೆಳಗುವ ದಿವ್ಯ ಪ್ರಭೆ. ಅಲ್ಲಿನ ಧರ್ಮ-ಕಲೆ-ಸಾಹಿತ್ಯ-ಸಂಗೀತ-ಜನಜೀವನವೆಲ್ಲಾ ಭಾರತದಿಂದಲೇ  ಪ್ರಭಾವಿತವಾಗಿದೆ. ಸುಂದರ ರಂಜನಾ ಲಿಪಿಯಲ್ಲಿ ಬರೆದಿರುವ ಮಂತ್ರಗಳ ಘೋಷವು ನೀರ್ಗಲ್ಲುಗಳಿಗೆ ಬಡಿದು ಪ್ರತಿಧ್ವನಿತವಾಗುತ್ತದೆ. ಅಲ್ಲಿನ ವಿಶಾಲತೆಯಲ್ಲಿ ಮಹಾಕಾಲನೇ ಸರ್ವವ್ಯಾಪಿಯಾಗಿದ್ದಾನೆ.
ಆಧಾರ: ಅಂತಾರಾಷ್ಟ್ರೀಯ ಭಾರತೀಯ ಸಂಸ್ಕೃತಿ ಅಕಾಡೆಮಿಯ ನಿರ್ದೇಶಕರಾಗಿದ್ದ ಡಾ|| ಲೋಕೇಶಚಂದ್ರರ ಉಪನ್ಯಾಸ ಮಾಲಿಕೆ ಯ ಕನ್ನಡಾನುವಾದ ಗಡಿಯಾಚೆಯ ಗುಡಿಗಳು - ಎನ್ ಪಿ ಶಂಕರನಾರಾಯಣರಾವ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ