ಪುಟಗಳು

ಬುಧವಾರ, ಜನವರಿ 7, 2015

ಗೀತಗಾನ



            ಭಗವದ್ಗೀತೆ ಯುದ್ಧವನ್ನು-ಹಿಂಸೆಯನ್ನು ಪ್ರಚೋದಿಸುತ್ತದೆ ಎನ್ನುವವರು ಗೀತೆಯನ್ನು ಓದಿಲ್ಲ, ಓದಿದರೂ ಅದರ ಸಾರವನ್ನು ಅರಿತುಕೊಂಡಿಲ್ಲ ಎನ್ನಬೇಕಾಗುತ್ತದೆ.
"ಭೀಷ್ಮ ದ್ರೋಣ ತಟಾ ಜಯದ್ರಥ ಜಲಾ ಗಾಂಧಾರ ನೀಲೋಪಲಾ
ಶಲ್ಯಗ್ರಾಹವತೀ ಕೃಪೇಣ ವಹಿನೀ ಕರ್ಣೇನ ವೇಲಾಕುಲಾ|
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ"
ಭಗವದ್ಗೀತೆಯ ಧ್ಯಾನ ಶ್ಲೋಕದಲ್ಲಿ ಕುರುಕ್ಷೇತ್ರವನ್ನು ಮಹಾನದಿಗೆ ಹೋಲಿಸಲಾಗಿದೆ. ಭೀಷ್ಮ ದ್ರೋಣರನ್ನು ನದಿಯ ದಡಗಳಿಗೆ ಹೋಲಿಸಲಾಗಿದೆ. ಜಯದ್ರಥನೇ ನೀರು, ಕೌರವರು ಕಲ್ಲುಬಂಡೆಗಳು, ಶಲ್ಯನು ನಕ್ರ, ಕೃಪನು ಸೆಳವು, ಕರ್ಣ ಮೇರೆ ಮೀರುವ ನೆರೆ. ಅಶ್ವತ್ಥಾಮ,ವಿಕರ್ಣರು ಘೋರ ಮೊಸಳೆಗಳು. ದುರ್ಯೋಧನನು ಇದರ ಸುಳಿ. ಇಂತಹ ಭಯಂಕರ ನದಿಯನ್ನು ಪಾಂಡವರು ಶ್ರೀಕೃಷ್ಣನ ಸಹಾಯದಿಂದ ದಾಟಿದರು. ಅಂದರೆ ಇದು ಕೇವಲ ಭೌತಿಕ ಯುದ್ಧ ಕಥನದ ಬಗ್ಗೆ ಇದು ಹೇಳುವುದಿಲ್ಲ. ಮಾನಸಿಕ ಯುದ್ಧವನ್ನು ಗೆದ್ದು ವಿಜಯೀಯಾಗುವ ಬಗೆಯನ್ನೂ ಹೇಳುತ್ತದೆ. ಅಲ್ಲಿ ಕೌರವಾದಿಗಳು ವಿವಿಧ ಮನಃಕ್ಲೇಶಗಳು ಅಥವಾ ಸಾಧನೆಗೆ ಅಡ್ಡಿಪಡಿಸುವ ವಿಚಾರಗಳು. ಮನುಷ್ಯ ಜೀವನವಿಡೀ ಕುರುಕ್ಷೇತ್ರ ಸಂಗ್ರಾಮವೇ. ಅಂತಹ ಸಂಗ್ರಾಮ ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿ ಸದಾ ನಡೆದಿರುತ್ತದೆ. ಬಾಹ್ಯಯುದ್ಧ ಅದರ ವ್ಯಾವಹಾರಿಕ ಅಭಿವ್ಯಕ್ತಿ. ಬಾಹ್ಯಯುದ್ಧದಲ್ಲಿ ವ್ಯಕ್ತಿಗಳ ಪಾತ್ರಕ್ಕಿಂತ ಹೆಚ್ಚಾಗಿ ಪ್ರಭುತ್ವದ ಪಾತ್ರವಿರುತ್ತದೆ. ಪ್ರಭುವಾದವ ಧರ್ಮ ನೆಲೆಸುವಂತೆ ಮಾಡಬೇಕು. ಆತನೇ ದಾರಿ ತಪ್ಪಿದಾಗ ಯುದ್ಧ ಅನಿವಾರ್ಯವಾಗುತ್ತದೆ. ಶಾಂತಿ ಸ್ಥಾಪನೆಗೆ ಯುದ್ಧ ಅನಿವಾರ್ಯವಾದಾಗ ಯುದ್ಧದಿಂದ ವಿಮುಖವಾಗುವುದೂ ಪಾಪಕಾರಿಯೇ!

               ಭಗವದ್ಗೀತೆ ಪ್ರೇರಣೆಯಾದಷ್ಟು ಬಹುಷಃ ಯಾವ ಗ್ರಂಥವೂ "ಮನುಷ್ಯ"ರಾದವರಿಗೆ ಪ್ರೇರಣೆ ಕೊಟ್ಟಿಲ್ಲವೆನ್ನಬೇಕು. ಕೆಲವು ಉದಾಹರಣೆಗಳು:
*ಏಳು ವರ್ಷಗಳ ಹಿಂದೆ(2007) ಕಾಶಿಯ ಒಂದು ದೇವಾಲಯಕ್ಕೆ ಸಂಬಂಧಿಸಿದ ಮೊಕದ್ದಮೆಯೊಂದರಲ್ಲಿ ತೀರ್ಪು ನೀಡುತ್ತ ಅಲಹಬಾದ್ ಹೈಕೋರ್ಟಿನ ನ್ಯಾಯಾಧೀಶ ಭಗವದ್ಗೀತೆಯನ್ನು "ರಾಷ್ಟ್ರೀಯ ಧರ್ಮಶಾಸ್ತ್ರಗ್ರಂಥ" ಎಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
*"ಭಗವದ್ಗೀತಾಗಾನಂ ಲೋಗರ
ಚೇತ:ಕ್ಲೇಶಗಳ ಕಳೆದು ಶಾಂತಿಯ ಕುಡುಗುಂ" ಎಂದರು ಡಿವಿಜಿ.
* ತೋಲೋಲಿಂಗ್ ಪರ್ವತ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 31 ವರ್ಷದ ಪದ್ಮಪಾಣಿ ಆಚಾರ್ಯ ಕಾರ್ಗಿಲ್ ಯುದ್ಧದಲ್ಲಿ ಪ್ರಾಣತೆತ್ತು ವೀರಸ್ವರ್ಗ ಸೇರುವ ಒಂದುವಾರ ಮುನ್ನ ತಂದೆಗೆ ಬರೆದ ಪತ್ರದಲ್ಲಿ "ಶತ್ರುಗಳ ಆಕ್ರಮಣಕ್ಕೆ ನಾವು ಸಿದ್ಧರಾಗುತ್ತಿದ್ದೇವೆ. ನೀವು ಯಾರೂ ಚಿಂತೆ ಮಾಡುವುದು ಬೇಡ ಯುದ್ಧದಲ್ಲಿ ಏನು ಆಗುತ್ತದೆ ಎನ್ನುವುದು ನಮ್ಮ ಕೈಗಳಿಗೆ ಮೀರಿದ್ದು. ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ್ದಾನಲ್ಲಾ "ಹತೋ ವಾ ಪ್ರಾಪ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್| ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ|| - ಸತ್ತರೆ ಸ್ವರ್ಗ, ಗೆದ್ದರೆ ಕೀರ್ತಿ - ರಾಜ್ಯ; ಹೀಗಿರುವಾಗ ಚಿಂತೆಯೇಕೆ?" ಎಂದಿದ್ದ. ಆಚಾರ್ಯ ವೀರಮರಣವನ್ನಪ್ಪುವ ವೇಳೆ ಆತನ ಧರ್ಮಪತ್ನಿ ತುಂಬು ಗರ್ಭಿಣಿ!

*ಟರ್ಕಿಯ ಪ್ರಧಾನಿ Bulent Ecevitಗೆ ವಿಷಮ ಸ್ಥಿತಿಯಲ್ಲಿ ನೆರವಾದದ್ದು ಗೀತೆ. ಆತ ಗೀತೆಯ ಅನೇಕ ಭಾಗಗಳನ್ನು ಸ್ವತಃ ಸ್ಥಳೀಯ ಭಾಷೆಗೆ ಅನುವಾದಿಸಿದ್ದ.
* ವಂದೇಮಾತರಂ ದೃಷ್ಟಾರ ಬಂಕಿಮರಿಗೆ ಅಂತ್ಯಕಾಲದಲ್ಲಿ ಕಾಯಿಲೆ ಬಿದ್ದು ಮಲಗಿದ್ದಾಗ ಔಷಧಿಯಾದದ್ದು ಇದೇ ಗೀತೆ!
*ಭಗವದ್ಗೀತೆಯ ಮೊದಲ ಆಂಗ್ಲ ಅನುವಾದ ಮಾಡಿದವನು ಚಾರ್ಲ್ಸ್ ವಿಲ್ಕಿನ್ಸ್, 230 ವರ್ಷಗಳ ಹಿಂದೆ.
* ವಾಲ್ಟ್ ವ್ಹಿಟ್ ಮನ್, ಮ್ಯಾಥ್ಯೂ ಅರ್ನಾಲ್ಡ್'ನಂತಹ ಚಿಂತಕರು, ವರ್ಡ್ಸ್ ವರ್ತ್, ಯೀಟ್ಸ್, ಎಲಿಯೆಟ್'ನಂತಹ ಕವಿಗಳೂ, ಅಮೇರಿಕಾದ ತತ್ವಶಾಸ್ತ್ರಜ್ಞ ರಾಲ್ಫ್ ವಾಲ್ಡೋ ಎಮರ್ಸನ್ ಹೀಗೆ ಗೀತೆಯಿಂದ ಪಾಶ್ಚಾತ್ಯ ವಿದ್ವತ್ ಗಡಣವೇ ಪ್ರಭಾವಿತವಾಗಿತ್ತು, ಪ್ರಭಾವಿಸಲ್ಪಡುತ್ತಿದೆ, ಪ್ರಭಾವಿಸಲ್ಪಡುತ್ತದೆ!
*ಹೆನ್ರಿ ಥೋರೋನಂತೂ "ಅನಾಸಕ್ತಿ ಯೋಗ" ಉಪಾಸಕನಾದ.
ಹೀಗೆ ಉದಾಹರಣೆ ಕೊಡುತ್ತಾ ಹೋದರೆ ಅದೇ ಒಂದು ಗ್ರಂಥವಾದೀತೇನೋ! ಆದರೆ ನಮ್ಮಲ್ಲಿನ ಸೆಕ್ಯುಲರುಗಳಿಗೆ ಗೀತೆಯ ಮಹತ್ವ ತಿಳಿಸಲು ಭಗವಾನ್ ಶ್ರೀಕೃಷ್ಣನೇ ಬರಬೇಕೇನೋ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ