ಪುಟಗಳು

ಶುಕ್ರವಾರ, ಜನವರಿ 16, 2015

ಯೋಜನಾ ಆಯೋಗಕ್ಕೊಂದು ನವ ನೀತಿ, ದೇಶದಭ್ಯುದಯದ ಹೊಸ ರೀತಿ



ಯೋಜನಾ ಆಯೋಗಕ್ಕೊಂದು ನವ ನೀತಿ, ದೇಶದಭ್ಯುದಯದ ಹೊಸ ರೀತಿ
              ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಸ್ವಾತಂತ್ರ್ಯ ದಿನಾಚರಣೆಯ ದಿನ ಯೋಜನಾ ಆಯೋಗದ ಬದಲು ನೂತನ ಪರ್ಯಾಯ ವ್ಯವಸ್ಥೆಯೊಂದನ್ನು ತರಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಈಗ ಕೇಂದ್ರ ಸರ್ಕಾರ ಯೋಜನಾ ಆಯೋಗದ ಹೆಸರನ್ನು `ನೀತಿ ಆಯೋಗವೆಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ. ಮೂಲಕ ಆಯೋಗಕ್ಕೆ ಹೊಸ ರೂಪ ಕೊಡುವ ಕಾರ್ಯಕ್ಕೆ ನಮೋ ಸರ್ಕಾರ ಮುಂದಾಗಿದೆ. ದೇಶದ ಆರ್ಥಿಕತೆಗೆ ದಶಕಗಳಿಂದ ಮಾರ್ಗದರ್ಶನ ನೀಡುತ್ತಿದ್ದ ಯೋಜನಾ ಆಯೋಗದ ಮರು ನಾಮಕರಣ ಮಾಡಿರುವುದು ಸೃಜನಾತ್ಮಕವಾಗಿ ಯೋಚನೆ ಮಾಡುವ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಕೇಂದ್ರ ಸರ್ಕಾರ ತೆಗೆದುಕೊಂಡ ಮೊದಲ ಕ್ರಮವಾಗಿದೆ.
              ಬಹುಷಃ ಯೋಜನಾ ಆಯೋಗ ಅಂದರೆ ಎಲ್ಲರಿಗೂ ತಿಳಿಯಲಿಕ್ಕಿಲ್ಲ. ಆದರೆ ಪಂಚವಾರ್ಷಿಕ ಯೋಜನೆಗಳು ಎಂದಾಗ ಪ್ರತಿಯೊಬ್ಬರಿಗೂ ತಿಳಿದು, ಕ್ಯಾಕರಿಸಿ ಉಗಿಯುವಂತಹ ತಿರಸ್ಕಾರ ಭಾವ ಹೆಚ್ಚಿನವರಲ್ಲಿ ಕಂಡೀತು. ಅಂತಹ ಮೌಲ್ಯವಿದೆ ಅವುಗಳಿಗೆ. ಪ್ರತಿಯೊಬ್ಬರು ಈ ಯೋಜನೆಗಳನ್ನು ತಮ್ಮ ಶೈಕ್ಷಣಿಕ ಜೀವನದಲ್ಲಿ ಉರು ಹೊಡೆದು ಬಂದವರೇ. ಪಠ್ಯ ಪುಸ್ತಕಗಳಲ್ಲಿ ಭವ್ಯ ಪದಗಳಿಂದ ಕಟ್ಟಿ ವರ್ಣಿಸಿದ ಈ ಯೋಜನೆಗಳೆಲ್ಲಾ ಪಠ್ಯಪುಸ್ತಕ್ಕಷ್ಟೇ ಸೀಮಿತಗೊಂಡವು. ಯೋಜನೆಗೆಂದು ಮೀಸಲಿಟ್ಟ ಅಪಾರ ಪ್ರಮಾಣದ ಜನರ ತೆರಿಗೆ ಹಣ ಆಳಿದ ಸರಕಾರಗಳ ಅದರಲ್ಲೂ ಮುಖ್ಯವಾಗಿ ಒಂದು ವಂಶದ ಆರ್ಥಿಕ ಮೂಲವಾಯಿತು. ಪ್ರತಿಯೊಂದು ಪಂಚವಾರ್ಷಿಕ ಯೋಜನೆಗಳಲ್ಲೂ ಅವೇ ಕೃಷಿ, ಕೈಗಾರಿಕೆ, ಶಿಕ್ಷಣ, ನೀರಾವರಿ,........ ಮುಂತಾದ ಕ್ಷೇತ್ರಗಳಿಗೇ ಹಿಂದಿನ ಯೋಜನೆಗಳನ್ನೇ ಮುಂದುವರಿಸಲಾಗುತ್ತಿತ್ತು. ನಿರ್ದಿಷ್ಟ ಗುರಿಯೂ ನಿಗದಿಯಾಗುತ್ತಿತ್ತು. ಅಪಾರ ಪ್ರಮಾಣದ ಹಣವನ್ನೂ ಸುರಿಯಲಾಗುತ್ತಿತ್ತು. ಆದರೆ ಯಾವ ಯೋಜನೆಯೂ ನಿಗದಿತ ಗುರಿಯನ್ನು ಸಾಧಿಸುವುದಿರಲಿ ಅದರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಮುಂದಿನ ಐದು ವರ್ಷಗಳಿಗೆ ಮತ್ತದೇ ಯೋಜನೆಗಳು...ಹೇಗೆ ಓದಿ ತಲೆಕೆಟ್ಟಿತ್ತೋ, ಹಾಗೆಯೇ ಅವುಗಳ ಅನುಷ್ಠಾನವನ್ನು ಕಣ್ಣಾರೆ ಕಂಡು ಈ ದೇಶದ ಜನರ ಸಹನೆಯ ಕಟ್ಟೆ ಒಡೆದು ದೇಶದ ಪಶ್ಚಿಮದಿಂದ ತೂರಿಬರುತ್ತಿದ್ದ ಕಿರಣದ ಕಡೆಗೆ ಜನರ ಆಶಾಭಾವನೆ ತಿರುಗಿ ಜಗತ್ತು ನೋಡನೋಡುತ್ತಿರುವಂತೆ ಅದನ್ನು ಪ್ರಜ್ವಲಿಸುವ ಜ್ಯೋತಿಯನ್ನಾಗಿಸಿದರು. ಅದು ಇಂದು ಕತ್ತಲೆಯನ್ನೆಲ್ಲಾ ಹೊಡೆದೋಡಿಸುತ್ತಾ ಬರುತ್ತಿದೆ. ಅದರ ಪ್ರಖರ ಬೆಳಕಿಗೆ ಯೋಜನಾ ಆಯೋಗವೆಂಬ ಭೃಷ್ಟಾಚಾರದ ಸರಪಳಿ ಇಂದು ತುಂಡಾಗಿ ಬಿದ್ದಿದೆ.
ಯೋಜನಾ ಆಯೋಗ ಸೋವಿಯತ್ ಪಳಿಯುಳಿಕೆ
               ಭಾರತದಲ್ಲಿ ಯೋಜನಾ ಆಯೋಗ ಆರಂಭವಾದದ್ದು 1950 ಮಾರ್ಚ್ 15ರಂದು ಜವಾಹರ್ ಲಾಲ್ ನೆಹರೂ ಪ್ರಧಾನಿಯಾಗಿದ್ದಾಗ. ಅದಕ್ಕೆ ಸಂವಿಧಾನದ ಮಾನ್ಯತೆಯೂ ಇರಲಿಲ್ಲ, ಅದು ಯಾವುದೇ ಸಂಸತ್ತಿನ ಕಾನೂನಿನಿಂದಲೂ ರಚಿಸಲ್ಪಟ್ಟಿಲ್ಲ. ಸ್ವತಂತ್ರ ಭಾರತ ಒಕ್ಕೂಟಕ್ಕೆ ಯಾವ ಮಾದರಿಯ ಆಡಳಿತ ವ್ಯವಸ್ಥೆ ಇರಬೇಕು ಅನ್ನುವ ಹುಡುಕಾಟ, ಚರ್ಚೆಯಾಗುತ್ತಿದ್ದ ಕಾಲದಲ್ಲಿ, ರಷ್ಯಾದಲ್ಲಿದ್ದ, ಎಲ್ಲವನ್ನು ಮಾಸ್ಕೊದಲ್ಲಿ ಕೂತು ಯೋಜಿಸುವ ಆನಂತರ ರಷ್ಯಾದೆಲ್ಲೆಡೆ ಜಾರಿಗೆ ತರುವಂತಹ, ಕೇಂದ್ರಿಕೃತವಾದ ವ್ಯವಸ್ಥೆಯನ್ನು, ಕಮ್ಯೂನಿಷ್ಟ್ ವಿಚಾರಧಾರೆಯನ್ನು ಕಮ್ಯೂನಿಷ್ಟರಿಕ್ಕಿಂತಲೂ ಉಗ್ರವಾಗಿ ನಂಬಿದ್ದ ಪ್ರಧಾನಿ ನೆಹರೂ ಭಾರತದಲ್ಲೂ ಅಳವಡಿಸಲು ನಿರ್ಧರಿಸಿದರು. ಅದರ ಫಲವಾಗಿ ಭಾರತದಲ್ಲೂ  ಎಲ್ಲ ರಾಜ್ಯಕ್ಕೂ ಏನು ಒಳ್ಳೆಯದು, ಏನು ಕೆಟ್ಟದ್ದು ಅನ್ನುವುದನ್ನು ದೆಹಲಿಯಲ್ಲಿ ಕೂತು ನಿರ್ಧಾರ ಮಾಡುವಂತಹ ವ್ಯವಸ್ಥೆಯಾಗಿ ಯೋಜನಾ ಆಯೋಗ ಜಾರಿಗೆ ಬಂತು. ಸ್ವಾತಂತ್ರ್ಯ ಬಂದ ಹೊತ್ತಲ್ಲಿ ಎಳವೆಯಲ್ಲಿದ್ದ ಭಾರತದ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ಅಂತಹದೊಂದು ಸಂಸ್ಥೆ ಬೇಕು ಅನ್ನುವ ಮಾತಿಗೆ ಕೊಂಚವಾದರೂ ಅರ್ಥವಿತ್ತು, ಆದರೆ 65 ವರ್ಷದುದ್ದಕ್ಕೂ ಯೋಜನಾ ಆಯೋಗ ಅನ್ನುವ ದೆಹಲಿ ಕೇಂದ್ರಿಕೃತ ವ್ಯವಸ್ಥೆ ಭಾರತ ಒಕ್ಕೂಟಕ್ಕೆ ಒಳಿತಿಗಿಂತ ಕೆಡುಕು ಮಾಡಿರುವುದೇ ಹೆಚ್ಚು. ಇಂದು ಒಂದು ರಾಜ್ಯದ ಕೃಷಿ, ಉದ್ದಿಮೆ, ಮೂಲಭೂತ ಸೌಕರ್ಯ, ಆರೋಗ್ಯ, ಶಿಕ್ಷಣದಿಂದ ಹಿಡಿದು ಕೊನೆಗೆ ಒಂದು ರಾಜ್ಯ ಎಷ್ಟು ಮಕ್ಕಳು ಮಾಡಿಕೊಳ್ಳಬೇಕು ಅನ್ನುವುದನ್ನು ತಿಳಿಸುವಟೋಟಲ್ ಫರ್ಟಿಲಿಟಿ ರೇಟ್” ನಿರ್ಧರಿಸುವವರೆಗೂ ಯೋಜನಾ ಆಯೋಗದ ಕೈ ಎಲ್ಲೆಡೆ ಚಾಚಿದೆ. ಇದರ ನೇರ ಫಲವಾಗಿ ಹೆಚ್ಚಿನ ಯೋಜನೆಗಳಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ.
         ರಾಜ್ಯಗಳಿಗೆ ತಮ್ಮದೇ ಆದ ಹಕ್ಕುಗಳಿದ್ದರೂ, ಕೇಂದ್ರ ಏಕಮುಖವಾಗಿ ತನಗೆ ಬೇಕಾದಾಗ ರಾಜ್ಯಗಳ ಹಕ್ಕನ್ನು ಮೀರಿ ತನ್ನ ನಿರ್ಧಾರ ತಗೆದುಕೊಂಡಿರುವ ಹಲವಾರು ನಿದರ್ಶನಗಳಿವೆ. ಯೋಜನಾ ಆಯೋಗದ ಯೋಚನೆ ಹಾಗೂ ಯೋಜನೆಗಳಲ್ಲಿ ಇರುವುದು ಕೇಂದ್ರಿಕೃತ ವ್ಯವಸ್ಥೆ. ಯೋಜನಾ ಆಯೋಗವನ್ನು ಆರಂಭಿಸಿದಾಗ ಕೇಂದ್ರ ಮತ್ತು ರಾಜ್ಯಗಳ ಆಡಳಿತ ವಲಯದಲ್ಲಿ ಏಕರೀತಿಯ ನೀತಿಗಳನ್ನು ಹೊಂದಿರತಕ್ಕದ್ದು, ಎಲ್ಲಾ ರಾಜ್ಯಗಳು ಒಂದೇ ಬಗೆಯಲ್ಲಿ (Identical) ಇಲ್ಲದಿದ್ದರೂ ಎಲ್ಲ ರಾಜ್ಯಗಳನ್ನು ಸಮಾನ(ಸಿಮಿಲರ್) ಎಂದು ಹೋಲಿಸಿಕೊಳ್ಳಬಹುದು ಎನ್ನುವುದು ಯೋಜನಾ ಆಯೋಗದ ಯೋಚನೆಯಾಗಿತ್ತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲಾ ರಾಜ್ಯಗಳಲ್ಲೂ ಒಂದೇ ತರಹದ ಸ್ಥಿತಿಯಿದ್ದು, ಎಲ್ಲಾ ರಾಜ್ಯಗಳಲ್ಲೂ ಒಂದೇ ರೀತಿಯ ಆಡಳಿತ ಗುರಿ ಹಾಗೂ ಎಲ್ಲಾ ರಾಜ್ಯಗಳಿಗೂ ಒಂದೇ ತರಹದ ಹಣಕಾಸು ಸಹಾಯ ನೀಡಿದರೆ ಸಾಕು ಎನ್ನುವುದು ಯೋಜನಾ ಆಯೋಗದ ನಿಲುವಾಗಿತ್ತು. ಯೋಜನಾ ಆಯೋಗವು ತನ್ನ ಕೆಲಸವನ್ನು ಸುಲಭ ಮಾಡಿಕೊಳ್ಳಲು ಕೇಂದ್ರ, ರಾಜ್ಯ ಹಾಗೂ ಜಂಟಿ ಪಟ್ಟಿಗಳನ್ನು ಒಟ್ಟುಗೂಡಿಸಿಕೊಂಡಿತು. ರಾಜ್ಯಗಳು ರಾಜ್ಯ ಹಾಗೂ ಜಂಟಿ ಪಟ್ಟಿಯಲ್ಲಿ ಕೆಲಸ ಮಾಡುವ ಹಕ್ಕು ಹೊಂದಿದ್ದರೂ, ಅದರ ನಿಯಂತ್ರಣ ಕೇಂದ್ರದ ಕೈಯಲ್ಲಿ ಆಗುವಂತೆ ಮಾಡಿತು. ಹಾಗಾಗಿ ಯೋಜನಾ ಆಯೋಗ ಯಾವುದೇ ಯೋಜನೆಯನ್ನು ಮಾಡಿದರೂ, ಅದನ್ನು ಜಾರಿಗೆ ತರಲು ಒಂದೇ ತರಹದ ಆಡಳಿತ ನೀತಿ ಹಾಗೂ ಹಣಕಾಸನ್ನು ಎಲ್ಲಾ ರಾಜ್ಯಗಳಿಗೂ ಕೊಡಬೇಕಾಗುತ್ತಿತ್ತು. ಉದಾಹರಣೆಗೆ ಒಂದು ರಾಜ್ಯದಲ್ಲಿ ಎಲ್ಲಾ ಮನೆಗಳಲ್ಲೂ ಶೌಚಾಲಯವಿದ್ದು, ಇನ್ನೊಂದು ರಾಜ್ಯದಲ್ಲಿ ಕಡಿಮೆ ಶೌಚಾಲಯಗಳಿದ್ದಲ್ಲಿ, ಬಾರಿ ಯೋಜನಾ ಆಯೋಗ ಬಾರತ ಎಲ್ಲಾ ರಾಜ್ಯಗಳಲ್ಲಿರುವ ಮನೆಗಳಲ್ಲೂ ಶೌಚಾಲಯ ಹೊಂದಿರಬೇಕು ಎಂದು ಗುರಿ ನಿಗದಿ ಮಾಡಿ, ಅದಕ್ಕೆ ಇಂತಿಷ್ಟು ಹಣ ಎಂದು ಪ್ರತಿ ರಾಜ್ಯಕ್ಕೂ ಸಮನಾಗಿ ಹಂಚುತ್ತದೆ.ಈಗ ಸಮಸ್ಯೆ ಏನೆಂದರೆ ಮೊದಲನೆಯ ರಾಜ್ಯದ ಎಲ್ಲ ಮನೆಗಳಲ್ಲೂ ಶೌಚಾಲಯ ಇದ್ದರೂ, ರಾಜ್ಯಕ್ಕೆ ಯೋಜನೆಯನ್ನು ತಿರಸ್ಕರಿಸುವ ಹಕ್ಕಿಲ್ಲ ಅಥವಾ ಇದಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ವ್ಯಯಿಸುವ ಅಧಿಕಾರವಿಲ್ಲ. ಒಂದು ವೇಳೆ ರಾಜ್ಯ ಹಣವನ್ನು ಬಳಸದೆ ಹೋದರೆ ಕೇಂದ್ರ ಹಣವನ್ನು ಹಿಂದಕ್ಕೆ ಪಡೆದುಕೊಳ್ಳುತ್ತದೆ. ಇದು ಯೋಜನಾ ಆಯೋಗ ಕೆಲಸ ಮಾಡುವ ಪರಿ. ಹೀಗೆ ಹಣವನ್ನು ಗುಳುಂ ಮಾಡಲು ಅನಾಯಾಸವಾಗಿ ಯೋಜನಾ ಆಯೋಗವೇ ದಾರಿ ಮಾಡಿಕೊಟ್ಟಂತಾಗುತ್ತದೆ.
            ಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಿರುವ ಯೋಜನಾ ಆಯೋಗದ ವಿರುದ್ದ ಹಿಂದೆ 1984 ರಲ್ಲಿ ಅಂದಿನ ತಮಿಳುನಾಡು ಸರಕಾರ ಯೋಜನಾ ಆಯೋಗಕ್ಕೆ ಒಂದು ಮನವಿಯನ್ನು ಸಲ್ಲಿಸಿತ್ತು. ಅದರಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೇಳುತ್ತಾಸಂವಿದಾನದ ಯೋಜನೆಗಳ ಅನ್ವಯ, ಸಂಪನ್ಮೂಲಗಳನ್ನು ವಿಕೇಂದ್ರಿಕರಣಗೊಳಿಸುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ಹಣಕಾಸಿನ ಸ್ವಾತಂತ್ರ್ಯವನ್ನು ನೀಡಬೇಕು. ಆದರೆ ಅದರ ಬದಲಾಗಿ ನಿಯಮಬದ್ಧ ಅನುದಾನ ಸಂವಿಧಾನದ ಆಶಯಕ್ಕೆ ಮಾರಕಎಂದಿತ್ತು. ಹೀಗೆ ಪ್ರತಿ ಯೋಜನೆಯನ್ನು ತನ್ನ ಮೂಗಿನ ನೇರಕ್ಕೆ ನೋಡುವ, ಯೋಜನೆಯನ್ನು ಮಾಡಿದರೆ ಮಾತ್ರ ಹಣ ನೀಡುವುದಾಗಿ ಹೇಳುವ, ಯೋಜನೆಯಿಂದ ಒಂದು ರಾಜ್ಯಕ್ಕೆ ಒಳಿತಾಗುತ್ತದೋ? ಅಸಲಿಗೆ ಯೋಜನೆ ರಾಜ್ಯಕ್ಕೆ ಅವಶ್ಯಕವೇ ಎಂದು ನೋಡದೆ ಪ್ರತಿಯೊಂದನ್ನು ಗಂಟಲಲ್ಲಿ ತುರುಕಿದಂತೆ ಯೋಜನೆಗಳನ್ನು ರಾಜ್ಯದ ಒಪ್ಪಿಗೆ ಪಡೆಯದೇ ಜಾರಿಗೆ ತರಲು ಹೇಳುವುದು ಯೋಜನಾ ಆಯೋಗ ಮತ್ತು ಕೇಂದ್ರ ಸರಕಾರ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವಂತೆ ಮಾಡುತ್ತಿತ್ತು. ಅಲ್ಲದೆ ಯೋಜನಾ ಆಯೋಗ ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿರಲಿಲ್ಲ. ಜಾತಿ ಮತಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆ ರೂಪಿಸುತ್ತಿತ್ತು.
           60-70ರ ದಶಕದಲ್ಲಿ ಯೋಜನಾ ಆಯೋಗದ ಪ್ರಮುಖ ಸ್ಥಾನಗಳಲ್ಲಿದ್ದವರು ಹಾಗೂ ಸಮರ್ಥಕರು ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಗಳಂತಹ ಉಪಕ್ರಮಗಳ ವಿರುದ್ಧವಾಗಿಯೇ ಇದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಯೋಜನಾ ಆಯೋಗದ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿ ಅದಕ್ಕೊಂದು ಹೊಸ ಸ್ವರೂಪ ನೀಡ ಹೊರಟಿದ್ದರು. ಆದರೆ ಅವರ ನಂತರ ಯೋಜನಾ ಆಯೋಗ ಮತ್ತದೆ ಹಳೆಯ ಸ್ವರೂಪಕ್ಕೇ ಮರಳಿತು. 1960-80ರ ನಡುವೆ ಆಗ್ನೇಯಾ ಆಫ್ರಿಕಾದ ಮಲಾವಿಯಂತಹ ಬಡರಾಷ್ಟ್ರ ಕೂಡಾ ಭಾರತಕ್ಕಿಂತ ಹೆಚ್ಚು ಅಭಿವೃದ್ಧಿ ಕಂಡಿತ್ತು. ಅಚ್ಚರಿ ಹಾಗೂ ಅಘಾತಕಾರಿ ವಿಚಾರವೆಂದರೆ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಯಾವೆಲ್ಲಾ ಯೋಜನೆಗಳ ರೂಪುರೇಷೆಗಳು ಅವುಗಳ ಬಗೆಗಿನ ನಿರೀಕ್ಷೆ ಕಾಳಜಿಗಳು ವ್ಯಕ್ತವಾಗಿದ್ದವೋ ಅವೇ ಹನ್ನೆರಡನೇ ಪಂಚವಾರ್ಷಿಕ ಯೋಜನೆಯವರೆಗೂ ಮುಂದುವರಿದದ್ದು. ಆದರೆ ಈ ಯೋಜನೆಗಳಿಗೆ ಮಂಜೂರು ಮಾಡಲಾದ ಹಣವೇನು ಖರ್ಚಾಗದೇ ಉಳಿಯಲಿಲ್ಲ! 60ರ ದಶಕದ ನಂತರ ಕಾಂಗ್ರೆಸ್ಸೇತರ ಸರಕಾರಗಳಿದ್ದ ರಾಜ್ಯಗಳಿಗೆ ಹಣಕಾಸಿನ ಹಂಚಿಕೆಯಲ್ಲಿ ತಾರತಮ್ಯ ಎಸಗುವ ಪ್ರಕ್ರಿಯೆ ಆರಂಭವಾದರೆ, ಎಪ್ಪತ್ತರ ದಶಕದಲ್ಲಿ ಇಂದಿರಾರ ಅಡುಗೆ ಮನೆಯಂತಾಯಿತು. ಯೋಜನಾ ಆಯೋಗವನ್ನು "ಜೋಕರುಗಳ ಸಮೂಹ"ವೆಂದು ಕರೆದಿದ್ದ ರಾಜೀವ್ ಗಾಂಧಿಯೂ ಅನೇಕ ಆರ್ಥಿಕ ವೈಫಲ್ಯಗಳಿಗೆ ಕಾರಣ ಹಾಗೂ ಸಾಕ್ಷಿಯಾಗಿದ್ದ ಯೋಜನಾ ಆಯೋಗವನ್ನು ರದ್ದುಪಡಿಸುವ ಮನಸ್ಸು ಮಾಡಲಿಲ್ಲ. ಯೋಜನಾ ಆಯೋಗ ನಿಂತ ನೀರಾಗಿದೆ ಮತ್ತು ಬಿಳಿಯಾನೆಯಾಗಿದೆ ಎಂಬುದಕ್ಕೆ 2012ರಲ್ಲಿ ಅದು ಎರಡು ಶೌಚಾಲಯಗಳ ಜೀರ್ಣೋದ್ಧಾರಕ್ಕೆ 35 ಲಕ್ಷ ಖರ್ಚು ಮಾಡಿದ್ದು ಮತ್ತು ದಿನಕ್ಕೆ ರೂ.28 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡುವ ಸಾಮರ್ಥ್ಯವುಳ್ಳ ಭಾರತೀಯರು ಬಡವರಲ್ಲ ಎಂದು ಹೇಳಿದ್ದು ಸಾಕ್ಷಿ. ಯೋಜನಾ ಆಯೋಗದಡಿ 2009 ಫೆಬ್ರುವರಿಯಲ್ಲಿ ಭಾರತೀಯರಿಗೆಲ್ಲ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯು..ಡಿ... ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. 2013 ಸೆಪ್ಟಂಬರ್ವರೆಗೂ ಯೋಜನೆಗೆ ವ್ಯಯವಾಗಿದ್ದು ಸುಮಾರು 3,500 ಕೋಟಿ ರೂ.ಗಳು! ನೋಂದಣಿಯಾದವರು ಸುಮಾರು 50 ಕೋಟಿ ಭಾರತೀಯರು! ಡಿಸೆಂಬರ್ 2011ರಲ್ಲಿ ಸಂಸತ್ತಿನ ಹಣಕಾಸು ಸಮಿತಿ, ಯಾವ ಕಾನೂನಿನ ವ್ಯಾಪ್ತಿ, ಮಿತಿಗೂ ಒಳಪಡದೆ ಅನಾಥವಾಗಿದ್ದ ಆಧಾರ್ ಕುರಿತ ಬಿಲ್ಅನ್ನು ಅಂಗೀಕರಿಸಲು ನಿರಾಕರಿಸಿ, ಯೋಜನೆಯಿಂದ ದೇಶದ ಮೇಲಾಗುವ ಒಟ್ಟಾರೆ ಆರ್ಥಿಕ ಪರಿಣಾಮ ಹಾಗೂ ಯೋಜನೆಯ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಯೋಜನಾ ಆಯೋಗಕ್ಕೆ ಸೂಚಿಸಿದಾಗ ಅದ್ಯಾವುದನ್ನೂ ತಾನು ಪರಿಗಣಿಸಿಯೇ ಇಲ್ಲವೆಂದು ಯೋಜನಾ ಆಯೋಗ ಹೇಳಿತು! ಅಷ್ಟೇ ಅಲ್ಲ, ಗಡಿ ದಾಟಿ ಬಂದಿರುವ ಅಕ್ರಮ ವಲಸೆಗಾರರ ಮಾಹಿತಿ ನಿರ್ವಹಣೆ ಬಗ್ಗೆ ಹಾಗೂ ದೇಶದ ಪ್ರಜೆಗಳ ಸಂಪೂರ್ಣ ಮಾಹಿತಿಯನ್ನು ಸರ್ಕಾರೇತರ ಕಂಪೆನಿಗಳ ಕೈಗೊಪ್ಪಿಸಿದುದರಿಂದ ರಾಷ್ಟ್ರೀಯ ಭದ್ರತೆಗೆ  ಧಕ್ಕೆಯುಂಟಾಗಬಹುದಾದ ಬಗ್ಗೆಯಾಗಲಿ, ತಾಂತ್ರಿಕದೋಷರಹಿತವಾಗಿ ಆಧಾರ್ ಗುರುತಿನ ಚೀಟಿ ಒದಗಿಸುವ ಬಗ್ಗೆ(ಇಂಟಲಿಜೆನ್ಸ್ ಬ್ಯೂರೊ ಹಣ್ಣು, ತರಕಾರಿ, ನಾಯಿ, ಗಿಡಗಳ ಹೆಸರು ಮತ್ತು ಫೋಟೊಗಳಿದ್ದ ಗುರುತಿನ ಚೀಟಿಗಳನ್ನು ಪತ್ತೆ ಮಾಡಿತ್ತು) ಯೋಚನೆಯನ್ನೇ ಮಾಡಿರಲಿಲ್ಲ. ಇದು ಯೋಜನಾ ಆಯೋಗ ಯಾವ ರೀತಿ ಕೆಲಸ ಮಾಡುತ್ತಿತ್ತೆಂಬುದಕ್ಕೆ ಇತ್ತೀಚೆಗಿನ ಜ್ವಲಂತ ಸಾಕ್ಷಿ!
            ಹೀಗೆ ಯೋಜನೆಗಳ ಗುರಿ ಮತ್ತು ಪ್ರತಿಫಲಗಳ ನಡುವೆ ಹೊಂದಾಣಿಕೆಯಿಲ್ಲದೆ ದಿಕ್ಕು ತಪ್ಪಿದವು. ಆಯೋಗದ ದೃಷ್ಟಿಕೋನ ಮತ್ತು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನಗಳ ವಿಷಯದಲ್ಲಿ ಅನುಸರಿಸಿದ ತಾರತಮ್ಯ ನೀತಿಯಿಂದಾಗಿ ಹಲವಾರು ಆಕ್ಷೇಪಣೆಗಳಿಗೆ ಮತ್ತು ವಿವಾದಗಳಿಗೆ ಗುರಿಯಾಗಬೇಕಾಯಿತು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡಸಲು ಸೂಕ್ತವಾದ ಸಲಹೆ ಹಾಗೂ ಮಾರ್ಗದರ್ಶಕ ತಜ್ಞರ ಕೊರತೆಯಿಂದಾಗಿ ಯೋಜನಾ ಆಯೋಗವೆಂಬುದು ನಿವೃತ್ತ ರಾಜಕಾರಣಿಗಳ ಆಶ್ರಯ ತಾಣವಾಯಿತು. ಆಯೋಗದಲ್ಲಿ ಪ್ರಧಾನಿ ಪದನಿಮಿತ್ತ ಅಧ್ಯಕ್ಷರಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವುದರ ಮೂಲಕ ಆಡಳಿತದಲ್ಲಿರುವ ಕೇಂದ್ರ ಸರ್ಕಾರ ತನಗೆ ಇಷ್ಟ ಬಂದ ವ್ಯಕ್ತಿಯನ್ನು ನೇಮಕ ಮಾಡಬಹುದಾಗಿತ್ತು. ಉಳಿದಂತೆ ಕೇಂದ್ರ ಮಂತ್ರಿ ಮಂಡಲದಲ್ಲಿರುವ ಗೃಹ, ಆರೋಗ್ಯ, ರಾಸಾಯನಿಕ ಗೊಬ್ಬರ ಖಾತೆ ಸಚಿವ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸಚಿವರನ್ನು ನೇಮಕ ಮಾಡಲಾಗುತ್ತಿತ್ತು. ಜನರಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂಬ ಅರ್ಹತೆಯನ್ನು ಹೊರತು ಪಡಿಸಿದರೆ ಈ ಸಚಿವರಿಗೆ ಯೋಜನಾ ಆಯೋಗದಲ್ಲಿ ಸದಸ್ಯರಾಗಲು ಯಾವುದೇ ಅರ್ಹತೆಗಳಿರಲಿಲ್ಲ ಎಂಬುದು ಕಟುಸತ್ಯ. ಹೀಗೆ ವಲಯವಾರು ವಿಷಯಗಳ ತಂತ್ರಜ್ಞರಲ್ಲದ ಹಾಗೂ ರಾಜಕೀಯ ವ್ಯಕ್ತಿಗಳಿಂದ ತುಂಬಿ ಹೋಗಿರುವ ಆಯೋಗದಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ?
          ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಮೂರು ಅವಧಿ ಆಳ್ವಿಕೆ ಮಾಡಿದ್ದ ಮೋದಿಯವರಿಗೆ ಕೇಂದ್ರದ ಒಕ್ಕೂಟ ವಿರೋಧಿ ನೀತಿಗಳಿಂದ ತಮ್ಮ ರಾಜ್ಯದಲ್ಲಿ ಆಡಳಿತ ನಡೆಸಲು ಉಂಟಾದ ತೊಡಕಿನ ಬಗ್ಗೆ ಸ್ಪಷ್ಟ ಅರಿವಿದೆ. ಹಿಂದೊಮ್ಮೆಕೇಂದ್ರ ಗುಜರಾತಿಗೆ ನಯಾ ಪೈಸೆ ಕೊಡುವುದು ಬೇಡ, ನಾನು ಗುಜರಾತಿನ ಏಳಿಗೆಯನ್ನು ಮಾಡಿ ತೋರಿಸುತ್ತೇನೆಎಂದು ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಅವರು ಸವಾಲು ಎಸೆದಿದ್ದರು. ರೀತಿ ಮಾಡಿ ತೋರಿಸಿದ್ದರು ಕೂಡಾ. ಇವೆಲ್ಲದರ ಫಲವೇ ಯೋಜನಾ ಆಯೋಗವೆಂಬ ಬಿಳಿಯಾನೆಯನ್ನು ಹೊಂಡ ತೋಡಿ ಮುಚ್ಚಿದ್ದು. ಅದರ ಸ್ಥಾನದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬಲ್ಲ ನೀತಿ ಆಯೋಗವನ್ನು ತಂದಿರಿಸಿದ್ದು.
ನೀತಿ ಆಯೋಗದಲ್ಲಿರುವ ಎರಡು ಮುಖ್ಯ ಅಂಶಗಳು:
            ಮೊದಲನೆಯದಾಗಿ, ಹಿಂದೆ ರಾಜ್ಯಗಳ ಅಭಿವೃದ್ಧಿಯ ಗತಿ ಹೇಗಿರಬೇಕೆಂದು ಯೋಜನಾ ಆಯೋಗ ನಿರ್ಧರಿಸುತ್ತಿತ್ತು. ತಮ್ಮ ಬೆಳವಣಿಗೆಯ ನೀತಿಯನ್ನು ತಾವೇ ನಿರ್ಧರಿಸಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರಲಿಲ್ಲ. ನೀತಿ ಆಯೋಗದಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದ್ದು, ತಮ್ಮತಮ್ಮ ನೀತಿಗಳನ್ನು ನಿರ್ಧರಿಸಿಕೊಳ್ಳುವ ಅಧಿಕಾರವನ್ನು ಅವುಗಳಿಗೇ ಬಿಡಲಾಗಿದೆ. ಎರಡನೆಯದಾಗಿ, ಯೋಜನಾ ಆಯೋಗಕ್ಕೆ ದೇಶದಲ್ಲಿ ಕಾಲಕಾಲಕ್ಕೆ ಜಾರಿಗೊಳಿಸಬೇಕಾದ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ, ಅಂತಹ ಯೋಜನೆಗಳನ್ನು ರೂಪಿಸುವ, ಅವುಗಳಿಗೆ ಹಣಕಾಸು ಹಂಚಿಕೆ ಮಾಡುವ ಹಾಗೂ ಯೋಜನೆಗಳ ಜಾರಿಯ ಮೇಲೆ ನಿಗಾ ಇಡುವ ಅಧಿಕಾರಗಳಿದ್ದವು. ಈಗಿನ ನೀತಿ ಆಯೋಗಕ್ಕೆ ಸರ್ಕಾರಿ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಹಾಗೂ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿವೆಯೇ ಇಲ್ಲವೇ ಎಂಬುದರ ಮೇಲೆ ನಿಗಾ ಇಡುವ ಅಧಿಕಾರಗಳು ಮಾತ್ರ ಇವೆ. ಯೋಜನೆ ರೂಪಿಸುವ ಹಾಗೂ ಹಣಕಾಸು ಹಂಚಿಕೆ ಮಾಡುವ ಕಾರ್ಯಕಾರಿ ಅಧಿಕಾರಗಳು ನೀತಿ ಆಯೋಗಕ್ಕೆ ಇಲ್ಲ. ಇವುಗಳ ಬದಲಿಗೆ, ಬೇರೆ ಬೇರೆ ದೇಶಗಳಲ್ಲಿ ಮಾದರಿಯ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಗಮನಿಸಿ ಇಲ್ಲೂ ಅಳವಡಿಸಿಕೊಳ್ಳಲು ಸಲಹೆ ನೀಡುವ ಹಾಗೂ ಭಾರತದ ರಾಜ್ಯ ಸರ್ಕಾರಗಳ ಸಕ್ರಿಯ ಪಾತ್ರವನ್ನು ಪರಿಗಣಿಸಿ ಅವುಗಳ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಲು ಕೇಂದ್ರಕ್ಕೆ ಸಲಹೆ ನೀಡುವ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಸ್ಥೂಲವಾಗಿ ಗಮನಿಸಿದರೆ ಯೋಜನಾ ಆಯೋಗಕ್ಕಿದ್ದಷ್ಟು ಅಧಿಕಾರ ನೀತಿ ಆಯೋಗಕ್ಕಿಲ್ಲ. ಇದು ಉನ್ನತ ಮಟ್ಟದ ಚಿಂತಕರ ಚಾವಡಿಯಂತೆ ಕೆಲಸ ಮಾಡುತ್ತದೆಯಷ್ಟೆ.
             ಹಾಗಾದರೆ ಇನ್ನುಮುಂದೆ ಯೋಜನೆಗಳನ್ನು ರೂಪಿಸುವ ಹಾಗೂ ಅವುಗಳಿಗೆ ಹಣಕಾಸು ಹಂಚಿಕೆ ಮಾಡುವ ಕೆಲಸವನ್ನು ಯಾರು ಮಾಡುತ್ತಾರೆ? ಸದ್ಯಕ್ಕೆ ಸರ್ಕಾರ ವಿಷಯವಾಗಿ ಏನೂ ಹೇಳಿಲ್ಲ. ವಾಸ್ತವವಾಗಿ ಯೋಜನಾ ಆಯೋಗಕ್ಕಿದ್ದ ಮಹತ್ವದ ಹೊಣೆ ಇದೇ ಆಗಿತ್ತು. ಬಹುಶಃ ಕೇಂದ್ರ ಸರ್ಕಾರಿ ಸಚಿವಾಲಯಗಳಿಗೆ ಹಾಗೂ ಪ್ರಧಾನಿ ಸಚಿವಾಲಯಕ್ಕೆ ಅಧಿಕಾರ ಹಂಚಿಕೆಯಾಗಲಿದೆ. ನೀತಿ ಆಯೋಗದ ಸ್ಥಾಪನೆಯಲ್ಲಿ ಪ್ರಧಾನವಾಗಿ ಕಾಣುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಸಮಾನಾಂತರವಾಗಿರುವ ಅದರ ರಚನೆ. ಹಿಂದಿನ ಯೋಜನಾ ಆಯೋಗ ದೇಶಮಟ್ಟದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು, ವಿವಿಧ ನೀತಿಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ನಿರ್ದೇಶಿಸುತ್ತಿತ್ತು. ಆದರೆ ಈಗಿನ ನೀತಿ ಆಯೋಗದಲ್ಲಿ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆ| ಗವರ್ನರ್ಗಳು ಸದಸ್ಯರಾಗಿರುತ್ತಾರೆ. ತಲೆಕೆಳಗಾದ ಪಿರಮಿಡ್ಡನ್ನು ಹೋಲುವ ರಚನೆ ಆಯಾ ರಾಜ್ಯಗಳಿಗೆ ಅಗತ್ಯವಾದಂತಹ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ಅನುಕೂಲ ಮಾಡಿಕೊಡುತ್ತದೆ. ಆಯಾ ರಾಜ್ಯಗಳಿಗೆ ಬೇಕಾದ ಯೋಜನೆ, ನೀತಿಗಳನ್ನು ಅಲ್ಲಲ್ಲಿಂದಲೇ ಸಲಹೆ-ಸೂಚನೆ ಪಡೆದು ರೂಪಿಸುವ ಕ್ರಮ ಸರಿಯಾಗಿ ಅನುಷ್ಠಾನವಾದರೆ ಅಭಿವೃದ್ಧಿಯ ರೈಲು ಸರಿಯಾದ ಹಳಿಯಲ್ಲಿ ವೇಗವಾಗಿ ಸಾಗಲು ಸಾಧ್ಯ. ನೀತಿ ಆಯೋಗದ ರಚನೆಯಲ್ಲಿ ರಾಜ್ಯಗಳಿಗೆ ಪ್ರಾಮುಖ್ಯವಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳು ತಮ್ಮ ಅಗತ್ಯಗಳನ್ನು ಸಮರ್ಪಕವಾಗಿ ಅದರ ಗಮನಕ್ಕೆ ತಂದು ಆಯೋಗದ ಜತೆಗೆ ಕ್ರಿಯಾಶೀಲವಾಗಿ, ಮುಕ್ತ ಮನಸ್ಸಿನಿಂದ ಸಹಕರಿಸಿದರೆ ನೀತಿ ಆಯೋಗ ಸ್ಥಾಪನೆಯ ಉದ್ದೇಶ ಸಫಲವಾಗಬಹುದು. ಹಿನ್ನೆಲೆಯಲ್ಲಿ ಯೋಚಿಸಿದರೆ ಹೊಸ ಕಾಲಮಾನಕ್ಕೆ ಹೊಂದಿಕೊಳ್ಳುವ ದೂರದೃಷ್ಟಿಯಿಂದ ಸ್ಥಾಪನೆಯಾಗಿರುವ ನೀತಿ ಆಯೋಗಕ್ಕೆ ಕಾಂಗ್ರೆಸ್ಮತ್ತಿತರ ವಿಪಕ್ಷಗಳ ವಿರೋಧ ಹುರುಳಿಲ್ಲದ್ದು.
             ಭಾರತದ ಅಭಿವೃದ್ಧಿಯ ಮಟ್ಟಿಗೆ ಆಡಳಿತದ ನೀತಿ ನಿರೂಪಕರು, ಆಡಳಿತ ಮಧ್ಯಸ್ಥಗಾರರು ಹಾಗೂ ಸಂಶೋಧಕರು ಒಂದೇ ವೇದಿಕೆಯಡಿ ಬರುವ ಅಗತ್ಯವಿದೆ. ಅಲ್ಲದೆ ಪ್ರತಿಯೊಂದು ಯೋಜನೆ ಹಾಗೂ ಅದಕ್ಕೆ ನಿರ್ಣಯಿಸುವ ನಿಧಿಯ ನಡುವೆ ಸಮೀಕರಣವಿದ್ದು ಅದು ತಳಮಟ್ಟದಿಂದ ಬಂದ ಸಂಶೋಧನೆಯ ಫಲವಾಗಿರಬೇಕು. ಈ ಯೋಜನೆಗಳ ಅನುಷ್ಠಾನಕ್ಕೆ ಸಲಹೆ ನೀಡಬೇಕಾದ ಅದ್ಭುತ ಕಾರ್ಯಪಡೆಯ ಜೊತೆಗೆ ಮೌಲ್ಯ ಮಾಪನ ಹಾಗೂ ಯೋಜನೆಯ ಬೆಳವಣಿಗೆಯ ಬಗೆಗಿನ ಮಾಹಿತಿ, ಹಣಕಾಸಿನ ದುರುಪಯೋಗ ಆಗದಂತೆ ತಡೆಯಬೇಕಾದ ಕಟ್ಟುನಿಟ್ಟಿನ ಕ್ರಮ ಇವೆಲ್ಲವೂ ಅನಿವಾರ್ಯ. ಹಣದುಬ್ಬರ ನಿರ್ವಹಣೆ, ಹಂಚಿಕೆ ಮತ್ತು ಹೂಡಿಕೆ, ನಿರುದ್ಯೋಗ ನಿರ್ಮೂಲನೆಯಂತಹ ವಿಷಯಗಳಲ್ಲಿ ರಾಜ್ಯಗಳಿಗೆ ಶ್ರೇಣಿ(Rank)ಕೊಡಲಾರಂಭಿಸಿದರೆ ಅಭಿವೃದ್ಧಿಯಲ್ಲಿ ಆರೋಗ್ಯಕರ ಸ್ಪರ್ದೆ ಏರ್ಪಡಬಹುದು. ತಮ್ಮ ಅಭಿವೃದ್ಧಿಗಾಗಿ ತಮ್ಮದೇ ಯೋಚಿತ ಯೋಜನೆಗಳನ್ನು ರಾಜ್ಯಗಳು ಅಳವಡಿಸಿಕೊಳ್ಳಲು ನೀತಿ ಆಯೋಗದಿಂದಾಗಿ ಸಾಧ್ಯವಿದೆ. ಯೋಜನಾ ಆಯೋಗ ಇದ್ದಾಗಲೇ ಅದರ ನೆರವಿಲ್ಲದೆ, ತನ್ನದೇ ಬಂಡವಾಳ ಉಪಯೋಗಿಸಿಕೊಂಡು ಗುಜರಾತ್ ಸರಕಾರ ತನ್ನ ಮೀನುಗಾರರಿಗೆ ಸಹಾಯ ಮಾಡಲು ಮೀನುಗಳ ಇರುವಿಕೆಯ ಜಾಗದ ಉಪಗ್ರಹಾಧಾರಿತ ಚಿತ್ರ ಹಾಗೂ ಸಂದೇಶ ರವಾನೆಯಂತಹ ಸೇವೆಯನ್ನು ಆರಂಭಿಸಿತ್ತು. ಇದನ್ನು ಕರಾವಳಿ ತೀರವುಳ್ಳ ಉಳಿದ ರಾಜ್ಯಗಳು ಅನುಷ್ಠಾನ ಮಾಡಬಹುದು. ಹೀಗೆ ಬೇರೆ ರಾಜ್ಯದಲ್ಲಿ ಯಶಸ್ವಿಯಾದ ನವೀನ ಯೋಜನೆಗಳನ್ನು ಆ ರಾಜ್ಯದಂತೆ ಅನುಕೂಲತೆಯುಳ್ಳ ರಾಜ್ಯಗಳು ಅಳವಡಿಸಿಕೊಳ್ಳಬಹುದು. ಯೋಜನಾ ಆಯೋಗವಿದ್ದಾಗ ಇಂತಹ ಆನುಕೂಲತೆಯಿರಲಿಲ್ಲ. ಇದ್ದರೂ ಯೋಜನಾ ಆಯೋಗದಂದ ಹಣಕಾಸು ನೆರವು ಸಿಗುತ್ತಿರಲಿಲ್ಲ. ಈಗ ನೀತಿ ಆಯೋಗದಿಂದಾಗಿ ಅಂತಹ ಸಾಧ್ಯತೆಗಳು ಹೆಚ್ಚಾಗಿವೆ. ಒಟ್ಟಾರೆ ಅರವತ್ತೈದು ವರ್ಷಗಳ ಕಾಲ ದೇಶವನ್ನು ದುಃಸ್ವಪ್ನದಂತೆ ಕಾಡಿದ ಬಿಳಿಯಾನೆಯೊಂದರ ಅವಸಾನ ದೇಶದ ಆಡಳಿತ ನೀತಿ ಬದಲಾದ ಅಭಿವೃದ್ಧಿಯ ಮುನ್ಸೂಚನೆ ನೀಡುತ್ತಿರುವುದರ ಕುರುಹಾಗಿರುವುದಂತೂ ಸತ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ