ಪುಟಗಳು

ಗುರುವಾರ, ಜನವರಿ 10, 2019

ಯಾರ್ಯಾರದೋ ಋಣದಲ್ಲಿ ಯಾಕಿರುತ್ತೀರಿ?

ಯಾರ್ಯಾರದೋ ಋಣದಲ್ಲಿ ಯಾಕಿರುತ್ತೀರಿ?


                  ಸತ್ಯದ ಹುಡುಕಾಟ ಈ ದೇಶದ ಮಣ್ಣಿನ ಗುಣ. ಈ ಹುಡುಕಾಟವೇ ಇಲ್ಲಿ ಪ್ರಶ್ನೆ ಕೇಳುವ ಧೈರ್ಯವನ್ನೂ ಸೃಜಿಸಿತು. ಹುಡುಕಿ ಸತ್ಯವನ್ನು ಕಂಡುಕೊಂಡವನ ಜ್ಞಾನ-ಮಾತು-ಮೌನ ಎಲ್ಲವೂ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಯಿತು. ಈ ಪ್ರಶ್ನೋತ್ತರಗಳೇ ಇಲ್ಲಿನ ಭವ್ಯ ಸಂಸ್ಕೃತಿಯ ಕೀರ್ತಿಶಿಖರಗಳಾದವು. ಆದರೆ ಈಗ ಈ ದೇಶದಲ್ಲಿ ಪ್ರಶ್ನಿಸುವುದು ಕೇವಲ ಜಾತ್ಯಾತೀತ ಎಂದು ಘೋಷಿಸಿಕೊಂಡವರ ಹಾಗೂ ಮತಾಂಧ ಶಕ್ತಿಗಳ ಸೊತ್ತು ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆದರೆ ಅವು ಹುಡುಕಾಟದ ಪ್ರಶ್ನೆಗಳಲ್ಲ; ಹುಡುಗಾಟದ ಪ್ರಶ್ನೆಗಳೂ ಅಲ್ಲ; ತಮಗಾಗದ್ದು ಇಲ್ಲಿ ಇನ್ನೂ ಯಾಕಿದೆ ಎನ್ನುವ ಪ್ರಶ್ನೆಗಳು! ಇಲ್ಲಿ ಹಿಂದೂ ದೇವತೆಗಳನ್ನು, ಹಿಂದೂ ಸಂಸ್ಕೃತಿಯನ್ನು, ಹಿಂದೂಗಳನ್ನು ಹೀಗಳೆಯುವುದು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಪಟ್ಟಿಯೊಳಗೆ ಸೇರುತ್ತದೆ. ಅನ್ಯ ಮತೀಯರ ಆಚಾರ-ವಿಚಾರ ಪಕ್ಕಕ್ಕಿಡಿ, ಅವರ ಸಮಾಜಘಾತುಕ ಕೆಲಸಗಳ ಬಗ್ಗೆ ಪ್ರಶ್ನೆ ಮಾಡಿದರೂ ನೀವು ಕೋಮುವಾದಿ ಎಂದೆನಿಸುಕೊಳ್ಳುವ ಕಾಲಕ್ಕೆ ಬಂದು ಮುಟ್ಟಿದ್ದೇವೆ!

                   ಪತ್ರಕರ್ತ ಎನ್ನುವ ಪದವನ್ನೇ ಗಬ್ಬೆಬ್ಬಿಸಲಾಗಿದೆ. ಯಾರೂ ಈ ನೆಲದ ಸಂಸ್ಕೃತಿಯನ್ನು ತುಚ್ಛೀಕರಿಸಿ, ಸೆಮೆಟಿಕ್ ಮತಗಳ ಕ್ರೌರ್ಯ, ಮತಾಂಧತೆಯ ಬಗ್ಗೆ ಮೌನವಹಿಸುತ್ತಾನೋ ಅವನಿಗಿಲ್ಲಿ ರಾಜಮರ್ಯಾದೆ! ಯಾರು ನಿಷ್ಪಕ್ಷಪಾತವಾಗಿ ಸುದ್ದಿ ಹೇಳುತ್ತಾನೋ, ಯಾರು ಅಧಿಕಾರ, ಜಾತ್ಯಾತೀತ ಸೋಗಿನ ಹಾಗೂ ಮತಾಂಧ ಶಕ್ತಿಗಳಿಗೆ ಹೆದರದೆ ನಿರ್ಭಿಡೆಯಿಂದ ತನ್ನ ವಿಚಾರವನ್ನು ಹೇಳುತ್ತಾನೋ ಅವನು ಕೋಮುವಾದಿ ಎಂದು ಕರೆಯಲ್ಪಡುತ್ತಿದ್ದಾನೆ! ಅವನನ್ನು ಈ ಎಲ್ಲಾ ಶಕ್ತಿಗಳು ಸೇರಿಕೊಂಡು ಈ ನೆಲದ ಕಾನೂನಿನ ಲೋಪದೋಷಗಳನ್ನೇ ಬಳಸಿಕೊಂಡು ಬಲಿಪಶುವನ್ನಾಗಿ ಮಾಡುತ್ತಿವೆ. ಅದಕ್ಕೆ ಸ್ಪಷ್ಟ ನಿದರ್ಶನ ಈ ಘಟನೆ. ಸುವರ್ಣ ನ್ಯೂಸ್ ಕನ್ನಡ ಚಾನೆಲ್ಲಿನ ಚರ್ಚೆಯೊಂದರಲ್ಲಿ ಅಜಿತ್ ಹನಮಕ್ಕನವರ್ ಅವರ "ಟಿಪ್ಪುವಿನ ಮತಾಂಧ ಮಾನಸಿಕತೆಯ ಮೂಲದ ಬಗ್ಗೆ ಹೇಳಿದ ಪತ್ರಕರ್ತರನ್ನು ರಾತ್ರೋರಾತ್ರಿ ಬಂಧಿಸಲಾಯಿತು" ಎನ್ನುವ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು "ಪ್ರವಾದಿಯವರಿಗೆ ಅವಮಾನ ಮಾಡಿದರು" ಎಂದು ಮಂಗಳೂರು ಮುಸ್ಲಿಮ್ ಎಂಬ ಪೇಸ್ ಬುಕ್ ಪೇಜ್ ಒಂದರಲ್ಲಿ ಅವರ ಮೇಲೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಲಾಯಿತು. ಅಜಿತ್ ಕ್ಷಮೆ ಕೇಳಿದರೂ ಪಟ್ಟು ಬಿಡದ ಮತಾಂಧ ಗುಂಪಿನಿಂದ ಅವರಿಕೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಅಲ್ಲದೆ ಈ ಮತಾಂಧ ಶಕ್ತಿಗಳು ಸುವರ್ಣ ನ್ಯೂಸ್ ಚಾನೆಲ್ಲಿನ ಮಾತೃ ಸಂಸ್ಥೆಯಾದ ಏಷಿಯಾ ನೆಟ್ ಅ್ಯಪ್ ನ ರೇಟಿಂಗ್ ಅನ್ನು 2.4.ಕ್ಕೆ ಇಳಿಸಿದ್ದರು. ಸುವರ್ಣ ನ್ಯೂಸ್ ಆ್ಯಪ್ ನ ರೇಟಿಂಗ್ ಅನ್ನು 2.1 ಕ್ಕೆ ಇಳಿಸಿದ್ದರು. ಈ ಪೇಜ್ ವಿಕೃತಿಯನ್ನು ಮೆರೆದದ್ದು ಇದೇ ಮೊದಲಲ್ಲ. ಪತ್ರಕರ್ತ ಸಂತೋಷ್ ತಮ್ಮಯ್ಯರ ಮೇಲೆ ಈ ಗುಂಪು ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿತ್ತು. ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾದಾಗ, "ಬ್ರಾಹ್ಮಣ ಸತ್ತನೆಂದು" ಸಂಭ್ರಮಿಸಿತ್ತು. ಬಂಟ್ವಾಳದಲ್ಲಿ ಶರತ್ ಮಡಿವಾಳನ ಹತ್ಯೆಯಾದಾಗ, ಬಂಟ್ವಾಳದಲ್ಲಿ ಹೆಣಬಿತ್ತು ಕಲ್ಲಡ್ಕದಲ್ಲಿ ಬೀಳುವುದು ಯಾವಾಗ? ಎನ್ನುವ ಪೋಸ್ಟ್ ಹಾಕಿ ಮರಣದಲ್ಲೂ ವಿಕೃತಿ ಮೆರೆದಿತ್ತು.

                   ಸದಾ ಹಿಂದೂಗಳ ಮೇಲೆ ಕೊಲೆ ಬೆದರಿಕೆ ಹಾಕುತ್ತಾ, ಹಿಂದೂ ಧರ್ಮವನ್ನು, ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿರುವ ಇಂತಹಾ ಸಮಾಜ ಘಾತುಕ ಪೇಜಿನ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿಕೊಳ್ಳಬೇಕಿತ್ತು. ಮಾಜಿ ಮುಖ್ಯಮಂತ್ರಿಯನ್ನು ಅಣಕಿಸಿದುದನ್ನೇ ಗುರಿಯಾಗಿಟ್ಟುಕೊಂಡು ಕೇಸು ದಾಖಲಿಸಿಕೊಂಡ ಪೊಲೀಸರಿಗೆ ಕೊಲೆ ಬೆದರಿಕೆ ಮಹತ್ವದ್ದಾಗಿ ಕಾಣಲೇ ಇಲ್ಲ. ಸ್ವಯಂಪ್ರೇರಿತ ಕೇಸು ಬಿಡಿ, ತಿಂಗಳ ಹಿಂದೆ ಈ ಪೇಜಿನ ಮೇಲೆ ಕೇಸು ದಾಖಲಾಗಿದ್ದರೂ ಇದುವರೆಗೂ ಪೇಜನ್ನು ನಿಷ್ಕ್ರಿಯಗೊಳಿಸಿಲ್ಲ, ಅದರ ನಿರ್ವಾಹಕರನ್ನು ಬಂಧಿಸಿಲ್ಲ ಎಂದಾದರೆ ಅಲ್ಲಿ ಯಾವ ಕಾಣದ "ಕೈ" ಕೆಲಸ ಮಾಡುತ್ತಿದೆ? ರಾಜಕಾರಣಿಗಳ 'ಘನ ಕಾರ್ಯ'ವನ್ನು ಅಣಕಿಸಿದವರನ್ನು ತಕ್ಷಣ ಬಂಧಿಸುವ ಪೊಲೀಸರಿಗೆ ಪ್ರಾಣ ಬೆದರಿಕೆ ಹಾಕಿದವರನ್ನು ಬಂಧಿಸಲು ಹುಟ್ಟುತ್ತಲೇ ಅಸಹನೆಯನ್ನು ಹೊತ್ತುಕೊಂಡು ಬಂದವರ ಭಯ ಕಾಡಿದೆಯೇ? ಹಿಂದೂ ದೇವತೆಗಳನ್ನು ನಿಂದಿಸಿದವರಿಗೆ, ಜನರು ಕಟ್ಟಿದ ತೆರಿಗೆಯ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಭದ್ರತೆ ಕೊಟ್ಟು ಸಾಕುವ ಸರಕಾರ ಅನ್ಯ ಮತೀಯರ ಬಗ್ಗೆ ಪ್ರಶ್ನೆ ಮಾಡಿದ ತಕ್ಷಣ ರಾತ್ರೋರಾತ್ರಿ ಬಂಧಿಸಿ ಬಿಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುತ್ತಿಗೆಗೆ ತೆಗೆದುಕೊಂಡವರೆಲ್ಲಾ ಈಗ ಬಹುಷಃ ಹೊಸ ವರ್ಷದ ಮತ್ತಿನಲ್ಲಿ ತೇಲಾಡುತ್ತಿರಬೇಕು!

                         ಕಲ್ಬುರ್ಗಿ, ಗೌರಿ ಹತ್ಯೆಯ ಬಗ್ಗೆ ಗೋಳೋ ಎಂದು ಅಳುತ್ತಿದ್ದವರಿಗೆಲ್ಲಾ ಸಾಲಾಸಾಲು ಸಂಘದ ಕಾರ್ಯಕರ್ತರು ಕೊಲೆಯಾಗುತ್ತಿದ್ದಾಗ ಕಣ್ಣೀರು ಬತ್ತಿ ಹೋಗಿತ್ತು. ಧಾರವಾಡದ ಸಾಹಿತ್ಯ ಸಂಭ್ರಮದ ಗೋಷ್ಠಿಯೊಂದರಲ್ಲಿ ಕಲಬುರ್ಗಿ ಹತ್ಯೆಯನ್ನು ಕುರಿತು ಅಜ್ಜಂಪುರ ಮಂಜುನಾಥ್ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಜಾತ್ಯಾತೀತ ಸೋಗಿನ ಸಾಹಿತಿಗಳು ದಾಂಧಲೆ ಎಬ್ಬಿಸಿ ಆಕ್ರಮಣಕ್ಕೆ ಉಪಕ್ರಮಿಸಿದ್ದರು. ರಾಜ್ಯದಲ್ಲಿ ಬಲವಂತವಾಗಿ ಮತಾಂಧ ಟಿಪ್ಪುವಿನ ಜಯಂತಿಯನ್ನು ಹೇರಲಾಗಿತ್ತು. ಟಿಪ್ಪುವಿನ ಮತಾಂಧತೆಯನ್ನು ಅನಾವರಣ ಮಾಡಿದವರ ಮೇಲೆಲ್ಲಾ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ, ಉ.ಪ್ರ. ಮುಖ್ಯಮಂತ್ರಿ ಯೋಗಿಯವರನ್ನು ಅಸಭ್ಯವಾಗಿ ಚಿತ್ರಿಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವೇದ, ರಾಮ, ರಾಮಾಯಣ, ಕೃಷ್ಣರು ಸುಳ್ಳು, ಭಗವದ್ಗೀತೆಯನ್ನು ಸುಡಬೇಕು, ಮನುವಾದ, ಜಗತ್ತೇ ಸುಳ್ಳೆಂದು ಹೇಳಿದರೂ ಆರ್ಯರು ವಲಸಿಗರು; ಇಲ್ಲಿನವರನ್ನು ಆಕ್ರಮಿಸಿದರು ಎಂದೆಲ್ಲಾ ನಿತ್ಯ ನಿಜವಾದ ಇತಿಹಾಸವನ್ನೂ, ಹಿಂದೂ ಭಾವನೆಯನ್ನು ಘಾಸಿಗೊಳಿಸುವವರೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಲ್ಲಿ ಪಾರಾಗುತ್ತಿದ್ದಾರೆ. ಆದರೆ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯ ಯಾರಾದರೂ ಸೆಮೆಟಿಕ್ ಮತಗಳ ಹುಟ್ಟನ್ನು ಪ್ರಶ್ನೆ ಮಾಡಿದಾಗ, ಅವುಗಳ ಇತಿಹಾಸವನ್ನು ಹೇಳಿದಾಗ ಇಲ್ಲವಾಗುತ್ತದೆ. ಯಾವ ಅಭಿವ್ಯಕ್ತಿ ಸ್ವಾತಂತ್ರ್ಯ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆಯನ್ನೇ ಕೋಮುವಾದಿ ಮಾಡಿಬಿಟ್ಟಿದೆಯೋ, ದೇಶದ ವಿರುದ್ಧ, ಸೈನಿಕರ ವಿರುದ್ಧ ಭಾಷಣಗಳನ್ನು ಮಾಡಿ, ಘೋಷಣೆಗಳನ್ನು ಕೂಗುತ್ತದೆಯೋ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯ ಸೆಮೆಟಿಕ್ ಮತಗಳ ಮೂಲ ಕೆದಕುವಾಗ ಅಸಹಿಷ್ಣುತೆಯ ರೂಪ ತಾಳುತ್ತಿದೆ.


                   ಐದು ವರ್ಷಗಳ ತುಘಲಕ್ ದರ್ಬಾರ್ ಈಗಲೂ ಮುಂದುವರೆದಿದೆ. ಸಾಲಾಸಾಲು ಹೆಣಗಳು ಬಿದ್ದಾಗಲೂ ಹೊದ್ದು ಮಲಗಿದ್ದ ಸರಕಾರ ಯಕಶ್ಚಿತ್ ಕೊಲೆ ಬೆದರಿಕೆಗೆಲ್ಲಾ ಎದ್ದು ಕುಳಿತು ಬಿಡುವುದೇ? ಅಲ್ಲಾ... ಆರು ವರ್ಷಗಳಿಂದ ಸರಿಯಾಗಿ ಗೃಹ ಸಚಿವರೇ ಇಲ್ಲದಿರುವಾಗ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿವಾಗಿರುವುದಾದರೂ ಹೇಗೆ? "ಅಹಿಂಸೈವಾಸಾಧು ಹಿಂಸಾ ಪಶುಮ್ ಶ್ರುತಿಚೋದನಾತ್" - ಹಂತಕರಿಗೂ, ಸಮಾಜದ್ರೋಹಿಗಳಿಗೂ ನೀಡಿದ ದಂಡನೆಯು ಯಜ್ಞದ ಬಲಿಪ್ರದಾನಕ್ಕೆ ಸಮನಾದ ಶಿಷ್ಟ ಕಾರ್ಯ ಎಂದಿದ್ದಾನೆ ಕೌಟಿಲ್ಯ ಅರ್ಥಶಾಸ್ತ್ರದಲ್ಲಿ. ಯಾಗ ಮಾಡಿ ಅಧಿಕಾರ ಪಡೆದುಕೊಂಡರಾಯಿತೇ ಮುಖ್ಯಮಂತ್ರಿಗಳೇ? ಯಾಗದಷ್ಟೇ ಪುಣ್ಯ ಕಾರ್ಯವಾದ ಸಮಾಜಘಾತುಕರನ್ನು ಬಂಧಿಸಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ತರುವುದನ್ನು ಬಿಟ್ಟು ಎಲ್ಲಿ ಮಲಗಿದ್ದೀರಿ? ಯಾರ್ಯಾರದೋ ಋಣದಲ್ಲಿ ಯಾಕಿರುತ್ತೀರಿ ಮುಖ್ಯಮಂತ್ರಿಗಳೇ? ನೀವು ಅಧಿಕಾರ ಪಡೆದುಕೊಂಡ ರಾಜ್ಯದ ಜನತೆಯ ಋಣದಲ್ಲಿದ್ದೀರಿ ಎನ್ನುವುದನ್ನು ಮರೆಯಬೇಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ