ಹುತಾತ್ಮನನ್ನು ಜೀವಂತವಾಗಿಸಿದ ಆ ಎಪ್ಪತ್ತೆರಡು ಘಂಟೆಗಳು!
ಯಾರೂ ಇಲ್ಲ ಅಲ್ಲಿ ಎಂಬ ಮಾಹಿತಿ ಪಡೆದು, ಇನ್ನೇನು ಭಾರತದ ಈ ಭೂಭಾಗ ಅನಾಯಾಸವಾಗಿ ತಮಗೆ ದಕ್ಕುತ್ತೆ ಅಂತ ಮುಂಬರೆದು ಬರುತ್ತಿತ್ತು ಚೀನಾ ಪಡೆ! ಗುಂಡೊಂದು ತೂರಿ ಬಂದು ಚೀನೀ ಸೈನಿಕನ ಶಿರವನ್ನು ಹೊಕ್ಕಿತು. ಆತ ಅಲ್ಲೇ ಹೆಣವಾದ. ಯಾರೂ ಇಲ್ಲದ ಮೇಲೆ ಗುಂಡೆಲ್ಲಿಂದ ಬಂತು ಎಂದು ಉಳಿದವರೆಲ್ಲಾ ಸಾವರಿಸಿಕೊಂಡು ನೋಡ ನೋಡುತ್ತಿದ್ದಂತೆ ಮತ್ತೊಬ್ಬ ಸೈನಿಕ ಬಿದ್ದಿದ್ದ. ಈ ಬಾರಿ ಗುಂಡು ಬಂದ ದಿಕ್ಕು ಬದಲಾಗಿತ್ತು. ಒಬ್ಬರ ಹಿಂದೆ ಒಬ್ಬರು ವಿವಿಧ ದಿಕ್ಕುಗಳಿಂದ ಬರುತ್ತಿದ್ದ ಗುಂಡಿಗೆ ಬಲಿಯಾಗುತ್ತಿದ್ದಂತೆ ಭಾರತೀಯ ಸೈನಿಕರ ಪರಾಕ್ರಮದ ಬಗ್ಗೆ ಕೇಳಿ ಅರಿತಿದ್ದ 600ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಿಯರ ಎದೆಯಲ್ಲೊಂದು ಚಳಿ ಹುಟ್ಟಿತು. ಒಟ್ಟು ಎಷ್ಟು ಜನ ಯೋಧರಿರಬಹುದು ಎನ್ನುವ ಲೆಖ್ಖವೇ ಅವರಿಗೆ ಸಿಗದಾಯಿತು. ತರಗೆಲೆಗಳಂತೆ ತಮ್ಮವರ ತಲೆಗಳುರುಳುವುದನ್ನು ಅವರು ನೋಡುತ್ತಾ ಅಸಹಾಯಕರಾಗಿ ನಿಲ್ಲಬೇಕಾಯಿತು. ಅಲ್ಲೊಂದು ಅದ್ಭುತ ಶಕ್ತಿಯಿತ್ತು; ಅದು ಅಂದೂ ಮಾತೃಭೂಮಿಗಾಗಿ ಹೋರಾಡಿತು; ಇಂದಿಗೂ ಹೋರಾಡುತ್ತಲೇ ಇದೆ!
ಅರುಣಾಚಲ ಪ್ರದೇಶದ ಬಹುತೇಕ ಊರುಕೇರಿಗಳು 1962ರ ಭಾರತ-ಚೀನಾ ಯುದ್ಧಕ್ಕೆ ವೇದಿಕೆಗಳಾಗಿವೆ, ಸರಿಯಾದ ಶಸ್ತ್ರವಿಲ್ಲದೆಯೂ ಕಾದಾಡಿದ ಭಾರತೀಯ ಸೈನಿಕರ ಪರಾಕ್ರಮಕ್ಕೆ ಸಾಕ್ಷಿಗಳಾಗಿವೆ, ಯುದ್ಧ ಸ್ಮಾರಕಗಳಾಗಿವೆ. ಅಂತಹುದೊಂದು ಜಾಗ ನೂರಾನಾಂಗ್; ಸಮುದ್ರ ಮಟ್ಟದಿಂದ ಆರುಸಾವಿರ ಅಡಿ ಎತ್ತರದ ಪ್ರದೇಶ. ತವಾಂಗ್ ನಗರವನ್ನು ಬೊಮ್ದಿಲಾ ಹಾಗೂ ಅಸ್ಸಾಮಿನ ಚಾರಿದುವಾರ್ ಜೊತೆ ಜೋಡಿಸುವ ರಸ್ತೆ, ಹೃದಯದಲ್ಲಿ ಭೋರ್ಗರೆವ ಜಂಗ್ ಜಲಪಾತ; ಜೊತೆಗೆ ರುದ್ರ ರಮಣೀಯ ಪ್ರಕೃತಿ! ಒಂದು ಕಡೆ ಭೂತಾನ್, ಇನ್ನೊಂದೆಡೆ ಕಪಟಿ ಚೀನಾ; ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಜೊತೆಗೆ ಪಕ್ಕದ ಪುಟ್ಟ ಭೂತಾನಿಗೂ ಚೀನಾದಿಂದ ಧಕ್ಕೆಯಾಗದ ಹಾಗೆ ನೋಡಿಕೊಳ್ಳಬೇಕು. ಹೀಗೆ ಅದೊಂದು ಆಯಕಟ್ಟಿನ ಜಾಗ. ಅಲ್ಲಿತ್ತು ಭಾರತದ ಗಢವಾಲ್ ರೈಫಲ್ಸ್ ಪಡೆ. ಗಢವಾಲಿಗಳು ಹರಿದ್ವಾರ, ಡೆಹ್ರಾಡೂನ್, ರುದ್ರಪ್ರಯಾಗ ಸೇರಿದಂತೆ ಉತ್ತರಾಖಂಡದ ಪಶ್ಚಿಮ ಭಾಗದಲ್ಲಿ(ಗಢವಾಲ್ ಎಂದೇ ಕರೆಯಲ್ಪಡುವ) ಹರಡಿರುವ ಗಢವಾಲೀ ಭಾಷೆಯನ್ನೇ ಮಾತಾಡುವ ಒಂದು ಭಾರತೀಯ ಬುಡಕಟ್ಟು ಜನಾಂಗ. ಕ್ಷಾತ್ರವೃತ್ತಿ ಅದರ ರಕ್ತದಲ್ಲೇ ಹರಿದು ಬಂದಿರಬೇಕು. ಎರಡು ಮಹಾಯುದ್ಧಗಳಲ್ಲೂ ಸಕ್ರಿಯ ಪಾತ್ರವಹಿಸಿದ ಯೋಧಪಡೆಯದು.ಇವತ್ತದು 25000ಕ್ಕೂ ಹೆಚ್ಚು ಸೈನಿಕರುಳ್ಳ, 21 ಬೆಟಾಲಿಯನ್ನುಗಳಾಗಿ ವಿಂಗಡಿಸಲ್ಪಟ್ಟ ಬೃಹತ್ ಪಡೆ.
ಅಸಾಮಾನ್ಯ ಶಕ್ತಿಯನ್ನು ತೋರಿದ, ಮಾಡಲಸಾಧ್ಯ ಎಂದೇ ತೋರುವ ಸಾಹಸಗಳನ್ನು ಮಾಡಿದ ಮನುಷ್ಯ ಅತಿಮಾನುಷ ವಿಗ್ರಹಿಯಾಗಿ ದಂತಕಥೆಯಾಗುತ್ತಾನೆ. ಆ ದಂತಕಥೆಯಾದರೂ ಜನರ ಬಾಯಲ್ಲಿ ನಲಿದಾಡಿ ಮೆರೆದಾಡಿ ಜಾನಪದವಾಗುತ್ತದೆ. ಆ ಕಥೆಯಲ್ಲಿ ನಿಜದ ಜೊತೆಗೆ ನಂಬಿಕೆಯಿರುತ್ತದೆ; ರೋಮಾಂಚಕ ಅಭಿವ್ಯಕ್ತಿಯಿರುತ್ತದೆ. ಅಂತಹದ್ದೊಂದು ಅದಮ್ಯ ಧೈರ್ಯದ, ಅಸೀಮ ಸಾಹಸದ, ದೇಶಪ್ರೇಮ ಹಾಗೂ ವೃತ್ತಿ ಬದ್ಧತೆಯ ಕಥೆಯೊಂದು ಇಲ್ಲಿ ಪಡಿಮೂಡಿದೆ. 1962ರ ಭಾರತ ಚೀನಾ ಯುದ್ಧದ ಬಗೆಗೆ ಯಾರಿಗೆ ತಾನೇ ಗೊತ್ತಿಲ್ಲ? ಹಿಂದಿ ಚೀನೀ ಭಾಯಿ ಭಾಯಿಯೆಂಬ ಹಿಮಾಲಯದೆತ್ತರದ ಪ್ರಮಾದ ಯಾರಿಗೆ ತಾನೇ ಅರಿವಿಲ್ಲ? ಆಧುನಿಕ ಶಸ್ತ್ರಾಸ್ತ್ರಗಳಿಲ್ಲ, ಉಪಕರಣ, ಸಲಕರಣೆಗಳಿಲ್ಲ; ಕೊರೆಯುವ ಚಳಿ ತಡೆಯಲು ಸರಿಯಾದ ಬಟ್ಟೆಗಳಿಲ್ಲ; ಶಿರಸ್ತ್ರಾಣ, ಎದೆಕವಚ, ಸೂಕ್ತ ಪಾದರಕ್ಷಕಗಳಿಲ್ಲ! ಹೋಗಲು ರಸ್ತೆಗಳಿಲ್ಲ. ಗುದ್ದಲಿ, ಸಲಿಕೆಗಳನ್ನು ಹಿಡಿದು ಸೈನಿಕರೇ ರಸ್ತೆ ಮಾಡಿದ ಬಳಿಕ ಓಬೀರಾಯನ ಕಾಲದ ಜೀಪು ಮುಂದೆ ಸಾಗುತ್ತಿತ್ತು. ಆ ಜೀಪು ಕೊಳ್ಳುವುದರಲ್ಲೂ ದುಡ್ದು ತಿಂದಿದ್ದ ಕಮ್ಯೂನಿಸ್ಟ್ ಪ್ರೇಮಿ ನಾಯಕನ ಅಹಂ, ಅಧಿಕಾರ ದಾಹ, ಜಾಗತಿಕ ವೇದಿಕೆಗಳಲ್ಲಿ ಮಿಂಚುವ-ಇತಿಹಾಸದ ಪುಸ್ತಕಗಳಲ್ಲಿ ತನ್ನ ಸಾಧನೆಯನ್ನು ಬರೆಸಿಕೊಳ್ಳುವ ದುರಾಸೆಗೆ ಅಂದು ಬಲಿಯಾದದ್ದು ಬಡಪಾಯಿ ಭಾರತೀಯ ಯೋಧ! ಯುದ್ಧ ಸಿದ್ಧತೆಯಿಲ್ಲದೆ, ಸರಿಯಾದ ಸೌಕರ್ಯಗಳಿಲ್ಲದಿದ್ದರೂ ದೇಶಕ್ಕೋಸ್ಕರ ರೈಫಲ್ ಹೆಗಲೇರಿಸಿಕೊಂಡು ಕೊರೆವ ಚಳಿಯಲ್ಲಿ ನಡುಗುತ್ತಾ ಹೋದ ಸೈನಿಕರ ನರನಾಡಿಗಳಲ್ಲಿ ತುಂಬಿ ಹರಿಯುತ್ತಿದ್ದ ದೇಶಪ್ರೇಮ ಅಂದು ದೇಶವನ್ನು ರಕ್ಷಿಸದಿದ್ದರೆ ಇಂದಿಲ್ಲಿ ಚೀನೀ ಭಾಯಿಗಳದ್ದೇ ಅಧಿಕಾರವಿರುತ್ತಿತ್ತು! ಆಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದ ಒಂದು ಲಕ್ಷ ಚೀನಿ ಸೈನಿಕರ ಎದುರು ಹನ್ನೆರಡು ಸಾವಿರ ಸೈನಿಕರನ್ನು ಬಲಿಪಶು ಮಾಡಿದವರನ್ನು ಛೀಛೀ ಎಂದು ಕ್ಯಾಕರಿಸಿ ಉಗಿಯುವ ಬದಲು ಚಾಚಾ ಎಂದು ಕೊಂಡಾಡುತ್ತಿರುವ, ಇತಿಹಾಸದಿಂದ ಪಾಠ ಕಲಿಯದ ಗುಲಾಮೀ ಮಾನಸಿಕತೆಗೆ ಈ ದೇಶೀಯರ ರಕ್ತದಲ್ಲೇ ಇಳಿದಿರಬೇಕು!
ಸಿದ್ಧತೆ ಸಲಕರಣೆಗಳಿಲ್ಲದೆ ಅಸಹಾಯಕರಾಗಿ ಸೋಲುವ ಸಮಯದಲ್ಲೂ ವೀರೋಚಿತವಾಗಿ ಹೋರಾಡಿತ್ತು ಭಾರತೀಯ ಪಡೆ. ತನ್ನ ಬುದ್ಧಿಮತ್ತೆ, ಸ್ಥೈರ್ಯಗಳಿಂದ ಚೀನೀ ಪಡೆಯನ್ನು ಬೇಸ್ತು ಬೀಳಿಸಿತ್ತು. ಅಂತಹ ಅಪಾರ ಧೈರ್ಯ, ಅಸೀಮ ಸಾಹಸ, ಚಾಣಾಕ್ಷತೆಯ ಒಂದು ಮೂರ್ತಿಯೇ ಜಸ್ವಂತ್ ಸಿಂಗ್ ರಾವತ್. ಆರೂನೂರುಕ್ಕೂ ಹೆಚ್ಚು ಸೈನಿಕರಿದ್ದ ಚೀನೀ ಪಡೆ ಮುಂಬರಿದು ಬರುತ್ತಿತ್ತು. ತವಾಂಗ್ ಅನ್ನು ಆಕ್ರಮಿಸಿ ಅಲ್ಲಿದ್ದ ಬುದ್ಧನ ಮೂರ್ತಿಯ ಕೈ ಕತ್ತರಿಸಿತ್ತು. ನೂರಾನಾಂಗ್ ಬಳಿ ಭಾರತದ ಗಢವಾಲ್ ಪಡೆ ಅದನ್ನು ಸಮರ್ಥವಾಗಿ ಎದುರಿಸಿತು. ಕಲ್ಲುಗಳ ಮಧ್ಯೆ ತೆವಳುತ್ತಾ ಹೋರಾಡಿದ ಗಢ್ವಾಲ್ ಪಡೆ ಚೀನೀಯರಲ್ಲಿದ್ದ ಮೆಷಿನ್ ಗನ್ನುಗಳಲ್ಲಿ ಕೆಲವನ್ನು ವಶಕ್ಕೆ ತೆಗೆದುಕೊಳ್ಳಲು ಯಶಸ್ವಿಯಾಯಿತು. ಈ ನಡುವೆ ಜಸ್ವಂತ್ ಹಾಗೂ ಗೋಪಾಲ್ ಗುಸೈನ್ರನ್ನು ರಕ್ಷಿಸಲು ಕವರ್ ಮಾಡುತ್ತಿದ್ದ ಗಢ್ವಾಲ್ ರೈಫಲ್ಲಿನ ತ್ರಿಲೋಕ್ ಸಿಂಗ್ ನೇಗಿ ವೀರ ಮರಣವನ್ನಪ್ಪಿದ್ದರು. ಗೋಪಾಲ್ ಸಹಿತ ಎಂಟು ಜನ ಗಾಯಗೊಂಡಿದ್ದರು. ವಿಚಾರ ತಿಳಿದ ಮೇಲಾಧಿಕಾರಿಗಳಿಂದ ಹಿಂದಿರುಗುವಂತೆ ಗಢ್ವಾಲ್ ರೈಪಲ್ಸಿನ ಈ ನಾಲ್ಕನೇ ಬೆಟಾಲಿಯನ್ನಿಗೆ ಆದೇಶ ಬಂದಿತ್ತು. ಆದರೆ ಹಿಂದಿರುಗಲು ಜಸ್ವಂತ್ ಸಿಂಗ್ ರಾವತ್ ಮನ ಒಪ್ಪಲಿಲ್ಲ. ಪ್ರಾಣ ಹೋದರೂ ಸರಿ ನಮ್ಮ ಭೂಮಿಯನ್ನು ಬೇರೆಯವರಿಗೆ ಒಪ್ಪಿಸುವುದಿಲ್ಲ ಎಂಬ ದೃಢ ನಿರ್ಧಾರದಿಂದ ಚೀನೀ ಸೈನಿಕರನ್ನು ಎದುರಿಸಲು ಏಕಾಂಗಿಯಾಗಿ ಸಿದ್ಧನಾಗಿ ನಿಂತ. ಬಂಕರಿನ ಕಿಂಡಿಗಳಿಗೆ ಸರಿಯಾಗುವಂತೆ ಬಂದೂಕುಗಳನ್ನು ಸರಪಳಿಯಂತೆ ಬಿಗಿದ. ಬಂಕರಿನಿಂದ ಬಂಕರಿಗೆ ಹಾರುತ್ತಾ ಚೀನೀಯರ ಮೇಲೆ ಗುಂಡಿನ ಮಳೆಗೆರೆಯಲು ಆರಂಭಿಸಿದ. ಸ್ಥಳೀಯ ಮೋನ್ಪಾ ಜನರೊಂದಿಗೆ ಬೆರೆತು ಮಧುರ ಬಾಂಧವ್ಯ ವೃದ್ಧಿಸಿದ್ದ ಜಸ್ವಂತನಿಗೆ ಅದೇ ಈಗ ಸಹಾಯಕ್ಕೊದಗಿತ್ತು. ಏಕಾಂಗಿಯಾಗಿ ಹೋರಾಡುತ್ತಿದ್ದ ಅವನ ಸಾಹಸದಿಂದ ಸ್ಪೂರ್ತಿಗೊಂಡು ಸ್ಥಳೀಯರು ಆತನಿಗೆ ಆಹಾರ ಒದಗಿಸಲಾರಂಭಿಸಿದರು. ಸೆಲಾ ಹಾಗೂ ನೂರಾ ಎನ್ನುವ ಧೈರ್ಯಸ್ಥ ಹುಡುಗಿಯರಿಬ್ಬರು ಜಸ್ವಂತನಿಗೆ ಬೆಂಗಾವಲಾಗಿ ನಿಂತರು. ಪ್ರತಿಯೊಂದು ಬಂಕರುಗಳ ವಿವಿಧ ಭಾಗಗಳಿಂದ ತೂರಿ ಬರುತ್ತಿರುವ ಗುಂಡುಗಳನ್ನು ಕಂಡು ಚೀನೀ ಸೇನೆ ಗಾಬರಿಯಾಯಿತು. ಬಂಕರುಗಳಲ್ಲಿ ಇರುವ ಸೈನಿಕರೆಷ್ಟು ಎಂಬ ಲೆಖ್ಖ ಅವರಿಗೆ ಸಿಗದೇ ಹೋಯಿತು. ಉರುಳುತ್ತಿರುವ ತಮ್ಮವರ ತಲೆಗಳನ್ನು ಕಂಡು ಮನಸ್ಸು ಭೀತಿಗೊಂಡಿತು. ಈ ನಡುವೆ ಜಸ್ವಂತನಿಗೆ ಆಹಾರ ಸಾಗಿಸುತ್ತಿದ್ದ ವ್ಯಕ್ತಿ ಅಚಾನಕ್ಕಾಗಿ ಚೀನೀಯರ ಕೈಗೆ ಸಿಕ್ಕಿಬಿದ್ದ. ಆತನಿಂದ ಬಂಕರುಗಳಲ್ಲಿರುವುದು ಒಬ್ಬನೇ ಸೈನಿಕ ಎಂದು ತಿಳಿದ ಚೀನೀ ಪಡೆ ಏಕತ್ರವಾಗಿ ಅತ್ತ ಮುನ್ನುಗ್ಗಿ ಬಂತು. ಅವರೆಸೆದ ಗ್ರೆನೇಡ್ಗೆ ಸೆಲಾ ಬಲಿಯಾದಳು. ನೂರಾ ಸೆರೆಸಿಕ್ಕಳು. ತಾನು ಸೆರೆಸಿಗುವ ಬದಲು ಆತ್ಮಾರ್ಪಣೆ ಮಾಡಲು ನಿರ್ಧರಿಸಿದ ಜಸ್ವಂತ್ ವೀರ ಮರಣವನ್ನಪ್ಪಿದ. ಆದರೇನು ಆ ಎಪ್ಪತ್ತೆರಡು ಘಂಟೆಗಳ ಏಕಾಂಗಿ ಹೋರಾಟದಲ್ಲಿ ಆತ ಮುನ್ನೂರು ಚೀನಿಯರ ಬಲಿತೆಗೆದುಕೊಂಡಿದ್ದ. ತಮ್ಮನ್ನು ಬೇಸ್ತು ಬೀಳಿಸಿ ತಮ್ಮವರ ಮಾರಣ ಹೋಮ ನಡೆಸಿದ ಜಸ್ವಂತನ ಮೇಲಿನ ಸಿಟ್ಟಿನಿಂದ ಚೀನೀಯರು ಆತನ ತಲೆ ಕಡಿದು ತಲೆಯನ್ನು ತಮ್ಮೊಂದಿಗೆ ಹೊತ್ತೊಯ್ದರು.
ಆದರೆ ಈ ಎಪ್ಪತ್ತೆರಡು ಘಂಟೆಗಳ ಏಕಾಂಗಿ ಹೋರಾಟ ಹಾಗೂ ಬಲಿದಾನ ನೂರಾನಾಂಗಿನ ಕದನದ ಸ್ವರೂಪವನ್ನೇ ಬದಲಾಯಿಸಿತು. ಅರುಣಾಚಲ ಪ್ರದೇಶವನ್ನು ಚೀನಾ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುವುದನ್ನು ಅದು ತಡೆಯಿತು. ಸೇನೆಯ ಅಧಿಕೃತ ಮಾಹಿತಿಯಲ್ಲಿ ಗಢ್ವಾಲ್ ಪಡೆ ಮುನ್ನೂರು ಚೀನೀ ಸೈನಿಕರನ್ನು ಬಲಿ ತೆಗೆದುಕೊಂಡ ಮಾಹಿತಿ ಇದ್ದು, ಜಸ್ವಂತ್ ಏಕಾಂಗಿಯಾಗಿ ಹೋರಾಡಿದ ಬಗ್ಗೆಯಾಗಲೀ ಅಥವಾ ಸೆಲಾ ಹಾಗೂ ನೂರಾ ಬಗ್ಗೆಯಾಗಲೀ ಉಲ್ಲೇಖವಿಲ್ಲವಾದರೂ ಈ ಘಟನೆಯನ್ನು ಅಲ್ಲಗಳೆಯಲಾಗದಷ್ಟು ದಾಖಲೆಗಳು ಸಿಗುತ್ತವೆ. ಕದನ ವಿರಾಮ ಘೋಷಣೆಯಾದ ಬಳಿಕ ಚೀನೀಯರು ಜಸ್ವಂತ್ ಸಿಂಗನ ತಲೆಯನ್ನು ಗೌರವದಿಂದ ಹಿಂದಿರುಗಿಸಿ ಆತನ ಏಕಾಂಗಿ ಸಾಹಸವನ್ನು ಹಾಡಿ ಹೊಗಳಿದುದಲ್ಲದೇ ಆತನ ಹಿತ್ತಾಳೆಯ ಪ್ರತಿಮೆಯೊಂದನ್ನೂ ಕೊಟ್ಟರು. ಸೆಲಾಳ ಶೌರ್ಯಕ್ಕೆ ಪ್ರತೀಕವಾಗಿ 13700 ಅಡಿ ಎತ್ತರದ ಆ ಜಾಗಕ್ಕೆ ಸೆಲಾ ಪಾಸ್ ಎಂದೇ ಹೆಸರಿಡಲಾಗಿದೆ. ನೂರಾಳಿಗೆ ಗೌರವ ಸಮರ್ಪಿಸುವ ಸಲುವಾಗಿ ಯುದ್ಧ ನಡೆದ ಸ್ಥಳವನ್ನು ನೂರಾನಾಂಗ್ ಎಂದೂ, ಅಲ್ಲೇ ಇರುವ ಜಂಗ್ ಜಲಪಾತವನ್ನು ನೂರಾನಾಂಗ್ ಎಂದೂ ಕರೆಯಲಾಗಿದೆ. ಆ ಹಳ್ಳಿಗೆ ಈಗ ಜಸ್ವಂತ್ ಗಢ್ ಎಂದೇ ಹೆಸರಾಗಿದೆ. ಚೀನಾದ ಜೊತೆ ಭಾರತ ಸಾಧಿಸಿದ ಈ ಅಮೋಘ ವಿಜಯ ನೂರಾನಾಂಗ್ ಕದನವೆಂದೇ ಮಿಲಿಟರಿ ಇತಿಹಾಸದಲ್ಲಿ ದಾಖಲಾಗಿದೆ. ಈ ಜಯವನ್ನು ಸಾಧ್ಯವಾಗಿಸಿದ ಜಸ್ವಂತ್ ಸಿಂಗ್ ರಾವತ್ಗೆ ಮರಣೋತ್ತರ ಪರಮವೀರ ಚಕ್ರ ಪ್ರದಾನಿಸಿ ಗೌರವಿಸಲಾಗಿದೆ. ಜಸ್ವಂತ್ ಗಢದಲ್ಲಿ ಆತನ ಸ್ಮೃತಿಗಾಗಿ ಮಂದಿರವೊಂದನ್ನು ನಿರ್ಮಿಸಲಾಗಿದೆ.
ಜಸ್ವಂತ್ ಸಿಂಗ್ ಇಂದಿಗೂ ಜೀವಂತವಾಗಿದ್ದು ಭಾರತದ ಗಡಿಯನ್ನು ಕಾಯುತ್ತಿದ್ದಾರೆ ಎಂಬುದು ಬಹುತೇಕರ ನಂಬಿಕೆಯಾಗಿದೆ. ಅಲ್ಲಿನ ಜನರ ಹಾಡು, ಕಥೆಗಳಲ್ಲಿ ಜಸ್ವಂತ್ ಸಿಂಗರ ಸಾಹಸದ ಪುನಾರಾವರ್ತನೆಯಾಗುತ್ತದೆ. ಇನ್ನೂ ವಿಶೇಷವೆಂದರೆ ಜೀವಂತ ಸೈನಿಕರಿಗೆ ನೀಡಲಾಗುವ ಎಲ್ಲ ಗೌರವ, ಸ್ಥಾನಮಾನ, ಪದೋನ್ನತಿಯನ್ನು ಜಸ್ವಂತ್ ಗೆ ನೀಡಲಾಗಿದೆ. ಅವರ ಹಾಜರಾತಿ ಹಾಕಲಾಗುತ್ತದೆ. ಅವರಿಗಾಗಿ ಒಂದು ಹಾಸಿಗೆ, ತಲೆದಿಂಬು, ಹೊದಿಕೆಯನ್ನು ನೀಟಾಗಿ ಇಡಲಾಗುತ್ತದೆ. ಅದರ ಜತೆ ನೀರಿನ ಬಾಟಲು ಕೂಡ! ಮುಂಜಾನೆಯ ಚಹಾ, ಮಧ್ಯಾಹ್ನ ಹಾಗೂ ರಾತ್ರಿ ಸರಿಯಾದ ಸಮಯಕ್ಕೆ ಭೋಜನ ನೀಡಲಾಗುತ್ತದೆ. ಅವರ ಸಮವಸ್ತ್ರಕ್ಕೆ ನಿತ್ಯವೂ ಇಸ್ತ್ರಿ ಹಾಕಲಾಗುತ್ತದೆ, ಬೂಟುಗಳನ್ನು ಪಾಲಿಶ್ ಮಾಡಲಾಗುತ್ತದೆ. ಜಸವಂತ್ ತನಗೆ ಬೇಕಾದಾಗ ಬಂದು ಹೋಗಲು ಕೋಣೆಯ ಬಾಗಿಲನ್ನು ತೆರೆದಿಡಲಾಗುತ್ತದೆ! ಅವರಿಗೆ ರಜೆ ಘೋಷಣೆಯಾದ ದಿನ ಹರಿಯಾಣದಲ್ಲಿನ ಅವರ ಸ್ವಗ್ರಾಮಕ್ಕೆ ಸೈನಿಕರು ಅವರ ಫೋಟೋವನ್ನು ಕಾಯ್ದಿರಿಸಲಾದ ರೈಲು ಸೀಟಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ರಜೆ ಮುಗಿದ ಬಳಿಕ ಫೋಟೋವನ್ನು ಮರಳಿ ಸ್ಮೃತಿ ಮಂದಿರಕ್ಕೆ ತೆಗೆದುಕೊಂಡು ಬರುತ್ತಾರೆ. ತವಾಂಗ್ ಯತ್ರೆಗೆ ತೆರಳುವ ಜನ ಜನ ಹಣದ ರೂಪದಲ್ಲಿ ಕಾಣಿಕೆಯನ್ನು ಜಸವಂತನ ಪುತ್ಥಳಿಗೆ ಸಮರ್ಪಿಸಿ ಗೌರವಪೂರ್ವಕ ನಮನ ಸಲ್ಲಿಸಿ ಮುಂದಕ್ಕೆ ಸಾಗುತ್ತಾರೆ. ಅದು ಜಗತ್ತಿನಲ್ಲಿಯೇ ಅಪರೂಪದ ದೇಶಭಕ್ತಿಯ ದೇವಾಲಯ! ಜಸ್ವಂತ್ ಸಿಂಗರ ಸಾಹಸ "72 ಅವರ್ಸ್: ಮ್ಯಾರ್ಟಿಯರ್ ಹು ನೆವರ್ ಡೈಡ್" ಎಂಬ ಚಿತ್ರದಲ್ಲಿ ಇದೇ ಹದಿನೆಂಟರಂದು ತೆರೆ ಕಾಣಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ