ಕುರುಕ್ಷೇತ್ರದ ಯುದ್ಧವು ಜರುಗಿರುವುದು 18 ದಿನ ಎನ್ನುವುದು ನಿಜ. ಆದರೆ ಆ ಹದಿನೆಂಟು ದಿನಗಳು ನಿರಂತರ ಕಾಲಗಣನೆಯದಲ್ಲ. ಪ್ರಾರಂಭಗೊಂಡ ಯುದ್ಧವು ಅಂತ್ಯಗೊಳ್ಳುವಾಗ 32 ದಿನಗಳಾಗಿದ್ದವು. ಭೀಷ್ಮನ ಸೇನಾಧಿಪತ್ಯದೊಂದಿಗೆ ಮಾರ್ಗಶಿರ ಶುಕ್ಲ ಪ್ರತಿಪದೆಯಂದು ಜ್ಯೇಷ್ಠಾ ನಕ್ಷತ್ರದಲ್ಲಿ ಪ್ರಾರಂಭಗೊಂಡ ಆ ಯುದ್ಧವು ಅಶ್ವಿನಿನಕ್ಷತ್ರವಿರುವ ದಶಮಿಯ ತನಕ ಅಂದರೆ ಹತ್ತು ದಿನಗಳ ಕಾಲ ನಡೆಯಿತು. ಆನಂತರ ಮುಂದಿನ ಹತ್ತು ದಿನಗಳ ಕಾಲ ಯುದ್ಧ ವಿರಾಮವಾಗಿತ್ತು. ಅದೇ ಕೃಷ್ಣಪಕ್ಷದ ಷಷ್ಠಿಯಿಂದ ದಶಮಿಯವರೆಗಿನ ಐದು ದಿನಗಳ ಕಾಲ ದ್ರೋಣಾಚಾರ್ಯರ ಸೇನಾಧಿಪತ್ಯದಲ್ಲಿ ಯುದ್ಧ ಜರುಗಿ ಅವರ ವಧೆಯಾಗಿ ಎರಡು ದಿನಗಳ ಕಾಲ ಯುದ್ಧ ವಿರಾಮಗೊಂಡಿತ್ತು. ಪುನಃ ಆ ಚತುರ್ದಶಿ, ಅಮಾವಾಸ್ಯೆ ಈ ಎರಡೇ ದಿನ ಕರ್ಣನ ಸೇನಾಧಿಪತ್ಯದಲ್ಲಿ ಯುದ್ಧ ಜರುಗಿ ಕರ್ಣನ ವಧೆಯೂ ಆಯಿತು. ಮರುದಿನ ಪುಷ್ಯಮಾಸದ ಪ್ರತಿಪದೆಯಂದು ಒಂದು ದಿನ ಮಾತ್ರ ಯುದ್ಧಕ್ಕೆ ವಿರಾಮ. ಆ ಮರುದಿನ ಶಲ್ಯನ ಸೇನಾಧಿಪತ್ಯದಲ್ಲಿ ಅರ್ಧ ದಿನ ಮಾತ್ರ ಯುದ್ಧ. ಶಲ್ಯನ ವಧೆಯೂ ಆಯಿತು. ಯುದ್ಧ ನಿಲ್ಲಲಿಲ್ಲ. ಅಡಗಿದ್ದ ದುರ್ಯೋಧನನನ್ನು ಶೋಧಿಸಿದ ಅದೇ ದಿನವೇ ಭೀಮ, ಕೌರವರ ದ್ವಂದ್ವ ಗದಾಯುದ್ಧ. ಕೌರವನ ಮರಣದೊಂದಿಗೆ ಇಡೀ ಕುರುಕ್ಷೇತ್ರ ಸಂಗ್ರಾಮ ಅಂತಿಮಗೊಂಡಿತ್ತು. 32 ದಿನ ವ್ಯಾಪಿಸಿಕೊಂಡ ಸಂಗ್ರಾಮವು ಹೀಗೆ ಕೊನೆಗೊಂಡಿತು. ಅಂದರೆ ಪ್ರತ್ಯಕ್ಷವಾಗಿ ಯುದ್ಧ ಜರುಗಿದುದು 18 ದಿನಗಳ ಕಾಲವೆನ್ನುವುದು ಸುಸ್ಪಷ್ಟವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ