ಪುಟಗಳು

ಶುಕ್ರವಾರ, ಮಾರ್ಚ್ 11, 2016

ರಾಷ್ಟ್ರೀಯತೆಯನ್ನು ಸೆಕ್ಯುಲರ್ ಮಾಡ ಹೊರಟ "ನವರಾಷ್ಟ್ರವಾದ"

ರಾಷ್ಟ್ರೀಯತೆಯನ್ನು ಸೆಕ್ಯುಲರ್ ಮಾಡ ಹೊರಟ "ನವರಾಷ್ಟ್ರವಾದ"


                     ವೈಚಾರಿಕಾ ವ್ಯಭಿಚಾರಿಗಳ ಅಸಹಿಷ್ಣು ಆಂದೋಲನವೆಂಬ ನಾಟಕದ ವಿರುದ್ಧ ಬೃಹತ್ ಜಾಥಾವನ್ನೇ ಕೈಗೊಂಡು ದೇಶದ ಸಾಮಾನ್ಯ ಜನತೆಯ ಗಮನ ಸೆಳೆದವರು ಅನುಪಮ್ ಖೇರ್. ಅಸಹಿಷ್ಣುತಾವಾದಿಗಳ ಢೋಂಗಿತನವನ್ನು, ಎಡಬಿಡಂಗಿತನವನ್ನು ಬಟಾಬಯಲು ಮಾಡಿ ರಾಷ್ಟ್ರೀಯವಾದಿಗಳಿಂದ ಭೇಷ್ ಅನ್ನಿಸಿಕೊಂಡು ಅಸಹಿಷ್ಣುತಾವಾದಿಗಳ ಅಸಹಿಷ್ಣುತೆಗೆ ಬಲಿಯಾದವರು ಅವರು. ಪ್ರತಿಯೊಂದು ಹಂತದಲ್ಲೂ ಬುಜೀಗಳ ಅರಚಾಟಕ್ಕೆ ತಕ್ಕ ಉತ್ತರ ನೀಡಿ ಪ್ರಸಕ್ತ ಕೇಂದ್ರ ಸರಕಾರದ ರಕ್ಷಣೆಗೆ ಹಲವು ಬಾರಿ ಧಾವಿಸಿದ್ದಾರೆ ಖೇರ್. ಇದಕ್ಕೆ ಅವರ ಪತ್ನಿ ಭಾಜಪಾ ಸಂಸದೆಯಾಗಿರುವುದೂ ಕಾರಣವಾಗಿರಬಹುದು ಅಥವಾ ಅದು ಸಾಮಾನ್ಯ ಭಾರತೀಯನ ದೇಶಪ್ರೇಮದ ಸೌಗಂಧದ ಸ್ಪುರಣವೂ ಆಗಿರಬಹುದು. ಆದರೆ ಅಂತಹ ಅನುಪಮ್ ಖೇರ್ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಟೆಲಿಗ್ರಾಫ್ ರಾಷ್ಟ್ರೀಯ ಸಮ್ಮೇಳನದಲ್ಲಿ ಅಸಹಿಷ್ಣುತೆಯ ಬಗ್ಗೆ ನಡೆದ ಚರ್ಚೆಯಲ್ಲಿ ಮಾತಿನ ಭರದಲ್ಲಿ "ಬಾಯಿಗೆ ಬಂದಂತೆ ಅಸಂಬದ್ಧ ಮಾತುಗಳನ್ನಾಡುವ ಸಾಧ್ವಿ, ಯೋಗಿಗಳನ್ನು ಭಾಜಪಾದಿಂದ ಕಿತ್ತೆಸೆಯಬೇಕು, ಜೈಲಿಗೆ ಹಾಕಬೇಕು" ಎಂದಿದ್ದು ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಅವರು ಯಾರನ್ನೂ ನೇರವಾಗಿ ಉಲ್ಲೇಖ ಮಾಡಲಿಲ್ಲವಾದರೂ ಜಗಳ ಹಚ್ಚಿಡುವಲ್ಲಿ ಸದಾ ನಿರತವಾದ ಮಾಧ್ಯಮಗಳು ಅನುಪಮ್ ಉಲ್ಲೇಖಿಸಿದ್ದು ಯೋಗಿ ಆದಿತ್ಯನಾಥ್, ಸಾಧ್ವಿ ಪ್ರಾಚೀಯವರನ್ನು ಎಂಬಂತೆ ಬಿಂಬಿಸಿವೆ. ಕೆರಳಿದ ಯೋಗಿ ಆದಿತ್ಯನಾಥ್ ಹಾಗೂ ಸಾಧ್ವಿ ಪ್ರಾಚೀ ಸಹಜವಾಗೇ ಕಿಡಿಕಾರಿದ್ದಾರೆ. ಅನುಪಮ್ ತೆರೆಯ ಮೇಲೂ ನಿಜ ಜೀವನದಲ್ಲೂ ಖಳನಾಯಕರಂತೆಯೇ ವರ್ತಿಸುತ್ತಿದ್ದಾರೆ ಎಂದಿದ್ದು ಮಾಧ್ಯಮಗಳಿಗೆ ಆಜ್ಯವಾಗಿ ದೊರಕಿದೆ.

               ಅನುಪಮ್ ಖೇರ್ ತನ್ನ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಅವರನ್ನೇ ಉಲ್ಲೇಖಿಸಿದರೋ ಇಲ್ಲವೋ ಅಥವಾ ಅದು ಮಾಧ್ಯಮಗಳ ಸೃಷ್ಟಿಯೋ ಎನ್ನುವುದರ ಸ್ಪಷ್ಟನೆ ಅವರಿಂದಲೇ ಬರಬೇಕು.. ಒಂದು ವೇಳೆ ಖೇರ್ ಗುರಿ ಆದಿತ್ಯನಾಥ್ ಅವರೇ ಆಗಿದ್ದಲ್ಲಿ ಅನುಪಮ್ ಮಾಡಿದ್ದು ಬಹುದೊಡ್ಡ ತಪ್ಪು! ಯೋಗಿ ಆದಿತ್ಯನಾಥ್ ಅವರ ಕೃತಿಗಳನ್ನು ಸ್ವತಃ ಕಣ್ಣಾರೆ ನೋಡಿದ್ದರೆ ಖೇರ್ ಈ ಮಾತುಗಳನ್ನು ಆಡುತ್ತಿರಲಿಲ್ಲ. ಗೋಕಳ್ಳತನ, ಲವ್ ಜಿಹಾದ್ಗಳು ತಾರಕಕ್ಕೇರಿದ್ದ ಕಾಲದಲ್ಲಿ ಗೋರಖ್ ಪುರದ ಪೀಠವನ್ನೇರಿದವರು ಯೋಗಿ ಆದಿತ್ಯನಾಥ್. ಬಿ.ಎಸ್.ಸಿ ಪದವೀಧರರೂ ಆಗಿದ್ದ ಇಪ್ಪತ್ತೆರಡು ವರ್ಷದ ಈ ಕ್ಷತ್ರಿಯ ಯುವಕನ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್. ಕುಶಲ ಸಂಘಟಕರಾಗಿದ್ದ ಆದಿತ್ಯನಾಥರ ಮೇಲ್ವಿಚಾರಣೆಯಲ್ಲಿ ಗೋರಖ್ ಪುರ ತನ್ನ ಹಿಂದಿನ ಖದರನ್ನು ಮರಳಿ ಪಡೆಯತೊಡಗಿತು. ನಿಸ್ವಾರ್ಥ ಸೇವೆ, ಧಾರ್ಮಿಕ ಶಿಕ್ಷಣ, ಸಕಲರಿಗೂ ಸಿಗಬಹುದಾದ ವೈದ್ಯಕೀಯ ಸೇವೆ, ಸಾಮೂಹಿಕ ಸಹಭೋಜನ, ಸರ್ವರಿಗೂ ಶಿಕ್ಷಣದ ಮೂಲಕ ಹಿಂದೂ ಸಮಾಜವನ್ನು ಬೆಸೆದರು. ಅಕ್ರಮವಾಗಿ ಬೇರೂರಿದ್ದ ಇಸ್ಲಾಂ ಕುರುಹುಗಳನ್ನು ಕಿತ್ತೆಸೆದರು. ಮುಸ್ಲಿಮರ ಪುಂಡಾಟಕ್ಕೆ ತಕ್ಕ ಉತ್ತರವನ್ನು ನೀಡಿ ಹಿಂದೂಗಳ ತಂಟೆಗೆ ಬಂದರೆ ಉಳಿಗಾಲವಿಲ್ಲವೆಂದು ಬಹಿರಂಗವಾಗಿ ಸಾರಿದರು. ಗೆದ್ದಲು ಹುಳುಗಳಂತೆ ಹಿಂದೂಸಮಾಜದೊಳಗೆ ನುಗ್ಗಿ ಮತಾಂತರ ಮಾಡುತ್ತಿದ್ದ ಕ್ರೈಸ್ತ ಪಾದ್ರಿಗಳ ನಡು ಮುರಿದರು. ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಬರಮಾಡಿಕೊಂಡರು. 2005ರಲ್ಲಿ 5000ದಲಿತರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಾಗ ಎದುರಾದ ಬೃಹತ್ ವಿರೋಧಕ್ಕೆ ಬಗ್ಗದೆ ತಮ್ಮ ಹಿಂದೂಪರ ನಿಲುವನ್ನು ಸಮರ್ಥಿಸಿಕೊಂಡರು. ಇವತ್ತು ಗೋರಖ್ ಪುರ "ಗೋರಿ ಪುರ"ವಾಗದೆ ಶಿವಕ್ಷೇತ್ರವಾಗಿಯೇ ಉಳಿದಿದೆಯೆಂದಾದರೆ ಅದಕ್ಕೆ ಕಾರಣ ಯೋಗಿ ಆದಿತ್ಯನಾಥರು. ಆಡಿದ ಮಾತು ಮಾಡಿದ ಕೃತಿಗಳ ನಡುವಿನ ಸಾಮ್ಯತೆಯಿಂದಾಗಿಯೇ ಕೇವಲ ಇಪ್ಪತ್ತಾರು ವರ್ಷಕ್ಕೆ ಸಂಸದರಾದ ಆದಿತ್ಯನಾಥ್ 1999ರಿಂದ ಸತತವಾಗಿ ಅಗಾಧ ಅಂತರದಿಂದ ಗೆದ್ದು ಬರುವುದಕ್ಕೆ ಸಾಧ್ಯವಾಗಿದೆ. ಇಂತಹ ಕಾರ್ಯಗಳೆಲ್ಲ ಚಲನಚಿತ್ರಗಳಲ್ಲಷ್ಟೇ ಎಂದುಕೊಳ್ಳುವ, ಸಾಮಾನ್ಯ ಜನರೊಡನೆ ಒಡನಾಟವಿಲ್ಲದ ಅನುಪಮ್ ಖೇರ್'ಗೆ ಇದೆಲ್ಲಾ ಹೇಗೆ ಅರ್ಥವಾದೀತು?

              ರಾಷ್ಟ್ರೀಯತೆಯ ಬಗ್ಗೆಯಾಗಲೀ, ಹಿಂದುತ್ವದ ಬಗ್ಗೆಯಾಗಲೀ ಅನುಪಮರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಯೋಗಿಗಿಲ್ಲ. ಹಿಂದುತ್ವವನ್ನು ರಾಷ್ಟ್ರೀಯತೆಯಿಂದ ಹೊರಗಿಡುವ ತಪ್ಪನ್ನು ಮಾಡಿದರೆ ಸಾಯುವುದು ರಾಷ್ಟ್ರೀಯತೆಯೇ ಹೊರತು ಹಿಂದುತ್ವವಲ್ಲ. ಅಷ್ಟಕ್ಕೂ ರಾಷ್ಟ್ರೀಯತೆಯೆಂದರೇನು? ರಾಷ್ಟ್ರ ಎನ್ನುವ ಪರಿಕಲ್ಪನೆಯನ್ನು ಕೊಟ್ಟದ್ದೇ ಸನಾತನ ಧರ್ಮ. ರಾಷ್ಟ್ರವಿಲ್ಲದೇ ಇದ್ದರೆ ರಾಷ್ಟ್ರೀಯತೆ ಎಲ್ಲಿಂದ ಹುಟ್ಟೀತು? ರಾಷ್ಟ್ರವೆಂದರೆ ಬರಿಯ ಕಲ್ಲುಮಣ್ಣುಗಳ ಭೂಭಾಗವಲ್ಲ. ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ವಾಸ್ತವಿಕವಾಗಿ ಭಾರತ ಎಂಬ ಹೆಸರೇ ಇದು ನಮ್ಮ ತಾಯಿ ಎಂದು ಸೂಚಿಸುತ್ತದೆ. ತಮ್ಮ ಮೂಲವನ್ನು ಮೆಕ್ಕಾ-ಮದೀನಾ-ವ್ಯಾಟಿಕನ್ನಿನಲ್ಲಿ ನೋಡುವವರ್ಯಾರು ಈ "ರಾಷ್ಟ್ರ"ವನ್ನು ತಾಯಿಯೆಂದು ಪೂಜಿಸಲಾರರು. ಭಾರತವನ್ನು ದೇಶವೆಂದೇ ಪರಿಗಣಿಸದ ಕಮ್ಯೂನಿಷ್ಟರಿಗೆ ಭಾರತ ರಾಷ್ಟ್ರವಾಗಿ ಹೇಗೆ ಗೋಚರಿಸೀತು? ರಾಷ್ಟ್ರವೆಂದರೆ ಸಂಸ್ಕೃತಿಯ ಪ್ರವಾಹ. ಆ ಸಂಸ್ಕೃತಿಯನ್ನು ನಾಶವಾಗದಂತೆ ತಡೆಯುವುದೂ ರಾಷ್ಟ್ರರಕ್ಷಣೆಯೇ. ಆ ಕೆಲಸವನ್ನೇ ಯೋಗಿ ಆದಿತ್ಯನಾಥ್ ಮಾಡುತ್ತಿರುವುದು. ಇದು ಎಡಪಂಥೀಯರ ಕಣ್ಣಿಗೆ ಉಗ್ರಹಿಂದುತ್ವದಂತೆ ರಾಚಿ ತಮ್ಮ ಬುಡಕ್ಕೆ ಬಿಸಿನೀರು ಬೀಳುತ್ತಿರುವುದನ್ನು ಕಂಡು ಅವರು ಅಬ್ಬರಿಸುತ್ತಾರೆ. ಅನುಪಮರಂತಹ ನವರಾಷ್ಟ್ರವಾದಿಗಳಿಗೆ ಈ ಬೊಬ್ಬೆಯೇ ಕೇಳುತ್ತದೆಯೇ ಹೊರತು ಆದಿತ್ಯನಾಥರ ಕಾರ್ಯದ ಮಹತ್ವ ಅರ್ಥವಾಗುವುದಿಲ್ಲ.

              ನೇರವಾಗಿ ಹಿಂದೂಧರ್ಮವನ್ನು ನಾಶಪಡಿಸಲು ಸಾಧ್ಯವಾಗದೇ ಇದ್ದಾಗ ಮತಾಂತರಿಗಳು ಹಿಡಿದದ್ದು ಅಡ್ಡ ಮಾರ್ಗ. ಅದಕ್ಕಾಗಿ ಅವರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿದರು. ಭಾರತದ ಇತಿಹಾಸವನ್ನೇ ಬುಡಮೇಲು ಮಾಡಲು ನೋಡಿದರು. ಭಾರತೀಯ ಕಲೆಗಳನ್ನು ಕಲಿತು ಕಲಸುಮೇಲೋಗರವನ್ನಾಗಿಸಿ ಶಿಲುಬೆ-ಇಸ್ಲಾಮಿನ "ಕಲೆ" ಉಳಿಸಿ ಹೋದರು. ಇದು ನಮ್ಮ ಸೆಕ್ಯುಲರ್ ಇತಿಹಾಸಕಾರರ ಕಣ್ಣಿಗೆ "ಸಮನ್ವಯ ರಚನೆ"ಯಾಗಿ ಕಂಡಿತು. ವಿಪರ್ಯಾಸವೆಂದರೆ ವೈಭವದ ಶಿಖರವೇರಿದ್ದ ನಮ್ಮ ಆಧ್ಯಾತ್ಮಿಕ ಕೇಂದ್ರಗಳನ್ನು ನಾಶಪಡಿಸಿ ಅವುಗಳ ಅಸ್ಥಿಗಳನ್ನು ಉಪಯೋಗಿಸಿ ಮಾಡಿದ ರಚನೆಗಳು ನಮಗೆ ಸಹಿಷ್ಣುತೆಯ ಆಗರವಾಗಿ, ಹಿಂದೂ-ಮುಸ್ಲಿಂ ಸಮನ್ವಯ ರಚನೆಯೆಂಬ ಹೊಸ ತಳಿಯಾಗಿ ಕಾಣುತ್ತಿವೆ. ಅವನ್ನೇ ನಮ್ಮ ದೇಶದ ಹೆಮ್ಮೆಯೆಂಬಂತೆ ಜಗತ್ತಿಗೆ ತೋರಿಸುತ್ತಿದ್ದೇವೆ.  ಇದಕ್ಕೆ ಕಾರಣ ಮತಾಂತರಿಗಳು ನಮ್ಮ ಶಿಕ್ಷಣದ ಒಳಹೊಕ್ಕು ಕೊಟ್ಟ ವೈಚಾರಿಕ ಮತಾಂತರವೆಂಬ ಶಿಕ್ಷೆ! ಇಂತಹ ಶಿಕ್ಷಣವನ್ನು ಪಡೆದ ಕಾರಣದಿಂದಲೇ ಭರತ ನಾಟ್ಯ ಕ್ರಿಸ್ತ ನಾಟ್ಯವಾಗಿ ಬದಲಾದರೂ ನಮಗೆ ತಿಳಿಯಲಿಲ್ಲ. ಆರ್ಯ-ದ್ರಾವಿಡ ವಿಭಜನೆ ಮಾಡಿ ವಲಸೆ ಬಂದ ಆರ್ಯರು ಮೂಲ ನಿವಾಸಿ ದ್ರಾವಿಡರನ್ನು ಜೀತಕ್ಕಾಗಿ ಇರಿಸಿಕೊಂಡರು ಎಂಬ ಕಟ್ಟುಕಥೆಯನ್ನೇ ಇತಿಹಾಸವೆಂದು ಭ್ರಮಿಸುತ್ತಿದ್ದೇವೆ. ದೇವಾಲಯಕ್ಕೆ ಬೆಂಕಿಬಿದ್ದರೂ ಸಹಿಷ್ಣುಗಳಾಗಿದ್ದೇವೆ. ಹಿಂದೂ ಹುಡುಗಿಯೊಬ್ಬಳು ಲವ್ ಜಿಹಾದಿಗೆ ಬಲಿಯಾದಾಗ "ಕಾಲದ ಬದಲಾವಣೆ"ಯೆಂದು ಮುಗುಮ್ಮಾಗಿ ಕುಳಿತುಬಿಡುತ್ತೇವೆ. ಪಕ್ಕದ ಮನೆ ಹುಡುಗ ಮತಾಂತರವಾದಾಗಲೂ ಊರ ಉಸಾಬರಿ ನಮಗೇಕೆ ಎಂದು ಸುಮ್ಮನಿರುತ್ತೇವೆ. ತಲವಾರ್ ತೋರಿಸಿ ಮನೆಯ ಹಟ್ಟಿಯಿಂದಲೇ ಗೋವನ್ನು ಕಟುಕರು ಒಯ್ದಾಗಲೂ ನಮಗೆ "ಆಹಾರ ಸ್ವಾತಂತ್ರ್ಯ"ದ ನೆನಪಾಗುತ್ತದೆ. ಸಾಲುಸಾಲಾಗಿ "ಕಮ್ಮಿ ನಿಷ್ಠರು" ದೇಶದ್ರೋಹ ಘೋಷಣೆ ಕೂಗಿದಾಗ ಏನೋ ರಾಜಕೀಯ ಇದೆ ಎಂದು ಬದಿಗೆ ಸರಿಸುತ್ತೇವೆ. ಹೆಚ್ಚೇಕೆ ಯಾವನಾದರೂ ಭಯೋತ್ಪಾದಕ ಬಂಧಿತನಾದಾಗ "ಎಲ್ಲರೂ ಹಾಗಿರುವುದಿಲ್ಲ" ಎಂದು ನಮ್ಮ ನಡುವಿನ ಯಾರೋ ಉಸುರಿದಾಗ ಹೌದೆಂದು ತಲೆಯಾಡಿಸಿಬಿಡುತ್ತೇವೆ. ಇದಕ್ಕೆಲ್ಲಾ ಕಾರಣ ನಾವು ಪಾಲಿಸಬೇಕಾದ ಧರ್ಮದ ಬಗ್ಗೆ, ರಕ್ಷಿಸಬೇಕಾದ ನಮ್ಮ ಸಂಸ್ಕೃತಿಯ ಬಗ್ಗೆ ನಮಗೊಂದು ರೀತಿಯ ಅಸಡ್ಡೆಯ ಭಾವನೆ ಬೆಳೆದು ಬಿಟ್ಟಿದೆ. ದೇಶದ ಬಗ್ಗೆ ಒಲವಿದ್ದರೂ ಈ ಬಗ್ಗೆ ಮಾತನಾಡಿದರೆ ಯಾರು ತನ್ನನ್ನು ಕೋಮುವಾದಿ ಎಂದುಬಿಡುತ್ತಾರೋ, ಎಲ್ಲಿ ತನ್ನ ಮುಸ್ಲಿಂ-ಕ್ರೈಸ್ತ ಸ್ನೇಹಿತರಿಗೆ ಬೇಸರವಾಗುತ್ತದೋ ಎಂಬ ಭಯ! ಈ ಜಾಢ್ಯವನ್ನು ಸರಿಯಾಗಿ ಬಳಸಿಕೊಂಡ ಸೆಕ್ಯುಲರುಗಳು ಇಂತಹವರಿಗೆ ಸೌಮ್ಯ ಹಿಂದೂಗಳು ಅಥವಾ ಸೌಮ್ಯ ರಾಷ್ಟ್ರೀಯವಾದಿಗಳೆಂಬ ಪಟ್ಟಕಟ್ಟಿಬಿಟ್ಟಿದ್ದಾರೆ. ಅಂದರೆ ನಮ್ಮ ದೇಶದ ಮೇಲೆ ಉಗ್ರರು ಘಾತಕವಾಗಿ ಎರಗಿದಾಗಲೂ, ದೇಶದ ಅನ್ನ ತಿಂದವರು ದೇಶವನ್ನೇ ತುಂಡು ಮಾಡುತ್ತೇವೆ ಎಂದಾಗಲೂ, ನಮ್ಮ ದೇವಸ್ಥಾನಗಳನ್ನು ಪುಡಿಪುಡಿಗಟ್ಟಿದಾಗಲೂ, ನಮ್ಮ ಅಕ್ಕತಂಗಿಯರ ಮೈಮೇಲೆ ಕೈಹಾಕಿದಾಗಲೂ, ನಮ್ಮ ಸಂಸ್ಕೃತಿ-ಇತಿಹಾಸ-ಶಿಕ್ಷಣ-ಕಲೆ-ಜನಾಂಗವನ್ನೇ ಮತಾಂತರ ಮಾಡಿದಾಗಲೂ ಸುಮ್ಮನಿರುವುದು, ಗಾಂಧಿಯ ಅಹಿಂಸೆಯನ್ನು ಪಾಲಿಸುವುದು ಸೌಮ್ಯ ಹಿಂದುತ್ವವೇ? ಇದರ ವಿರುದ್ಧ ಹೋರಾಡುವುದು ಉಗ್ರಹಿಂದುತ್ವವಾದರೆ  ಈ ಬಗೆಯ ಹಿಂದುತ್ವ ಸಿದ್ಧಾಂತದ ಉಗಮಕ್ಕೆ ಕಾರಣರಾರು? ಹಿಂದೂಗಳನ್ನು ಈ ರೀತಿಯಲ್ಲಿ ಒಡೆಯುವ ಬುದ್ಧಿಜೀವಿಗಳ ಹುನ್ನಾರವನ್ನು ಅಭಿವೃದ್ಧಿ ಒಂದೇ ಸಾಕೆನ್ನುವ "ನವರಾಷ್ಟ್ರೀಯವಾದಿಗಳು" ಅರ್ಥೈಸಿಕೊಳ್ಳಬೇಕು. ತನ್ನ ಹಿಂದೂ ಆಡಳಿತ ನೀತಿಯನ್ನು ಸಡಿಲಿಸಿದ ಕಾರಣದಿಂದ ಹಾದಿ ಬೀದಿಯಲ್ಲಿ ಚಿನ್ನ ಮಾರುತ್ತಿದ್ದ ಕಾಲದ ವೈಭವೋಪೇತ ವಿಜಯನಗರ ಸಾಮ್ರಾಜ್ಯವೇ ಉಳಿಯಲಿಲ್ಲ. ಧರ್ಮ ಸಂಸ್ಕೃತಿಯೆಡೆಗಿನ ಶೃದ್ಧೆಯನ್ನು ಮೈಗೂಡಿಸಿಕೊಳ್ಳದಿದ್ದ ಚಂದ್ರಗುಪ್ತನ ಬೃಹತ್ತಾದ ಮೌರ್ಯ ಸಾಮ್ರಾಜ್ಯವನ್ನೇ ಆಗಿನ ಕಾಲದ ಅವೈದಿಕ ಮತಾಂಧರು ನಾಶಮಾಡಿಬಿಟ್ಟರು.  ಇನ್ನು ಸೆಕ್ಯುಲರುಗಳಿಂದ ತುಂಬಿರುವ ಈಗಿನ ಭಾರತದ ಪಾಡೇನು?

              ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವುದು ಉಗ್ರಹಿಂದುತ್ವವಾದರೆ ಆ ಹಿಂದುತ್ವವೇ ಭಾರತಕ್ಕೆ ಬೇಕಾಗಿರುವುದು. ಕಾನೂನೆಂಬುದು ಕ್ರಮ ಕೈಗೊಳ್ಳದಿದ್ದಾಗ ಗೋಕಳ್ಳರನ್ನು ಹಿಡಿದು ಬಾರಿಸುವುದು ಕೋಮುವಾದವಾಗುವುದಾದರೆ ಅದರ ಅಗತ್ಯವೇ ಸಮಾಜದ ರಕ್ಷಣೆಗೆ ಬೇಕಾಗುವುದು. ಲವ್ ಜಿಹಾದ್ ವಿರುದ್ಧ ದನಿಯೆತ್ತಿ ಕಾರ್ಯಾಚರಣೆ ಮಾಡುವುದು ಉಗ್ರಹಿಂದುತ್ವವಾದರೆ ಅದರ ಅವಶ್ಯಕತೆಯೇ ತುರ್ತಾಗಿ ಇರುವುದು. ದೇಶದ್ರೋಹಿಗಳನ್ನು ಸದೆಬಡಿಯುವುದು ಉಗ್ರಹಿಂದುತ್ವವಾದರೆ ಭಾರತವನ್ನು "ರಾಷ್ಟ್ರ"ವಾಗುಳಿಸಲು ಅದೇ ಬೇಕು. ಹಿಂದುತ್ವದಲ್ಲಿ ಉಗ್ರ-ಸೌಮ್ಯ ಎನ್ನುವುದೆಲ್ಲಾ ಇಲ್ಲ. ಅದೆಲ್ಲಾ ಎಡಚರ, ಎಲ್ಲೂ ಸಲ್ಲದವರ ಕಲ್ಪನೆಯಷ್ಟೇ. ಇದಕ್ಕೆಲ್ಲಾ ಬಲಿಯಾಗುವ ಹಿಂದೂವಿನ ಭೋಳೇತನ ಯಾವತ್ತು ನಾಶವಾಗುವುದೋ? ದೇಶ ಸ್ವಾತಂತ್ರ್ಯಹೋರಾಟ ನಡೆಸುತ್ತಿದ್ದ ಕಾಲದಲ್ಲೇ ಸಾವರ್ಕರ್ ದೇಶದ ಮುಂದಿನ ಭವಿಷ್ಯ ಹೇಗಿರಬೇಕೆಂದು ತಮ್ಮ ಅನಿಸಿಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ ಎನ್ನುವ ಅವರ ಘೋಷಣೆಯ ಗೂಡಾರ್ಥವನ್ನು ಯಾರೂ ಅರ್ಥೈಸಿಕೊಳ್ಳಲಿಲ್ಲ. ಅರ್ಥೈಸಿಕೊಂಡು ಅನುಸರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. "ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಸಂವಿಧಾನವನ್ನು ರಚಿಸುವಾಗ ಭಾರತವನ್ನು ಹಿಂದೂರಾಷ್ಟ್ರ ಎಂದು ಘೋಷಿಸುವಂತೆಯೂ, ಹಿಂದೂಗಳಿಗೆ ಪ್ರಧಾನ ಸ್ಥಾನಮಾನವಿತ್ತು, ಅಲ್ಪಸಂಖ್ಯಾತರು ಇಲ್ಲಿನ ರಾಷ್ತ್ರೀಯತೆ-ಸಂಸ್ಕೃತಿ-ಸಂವಿಧಾನವನ್ನು ಒಪ್ಪಿ ಹಿಂದೂಗಳೊಡನೆ ಸಾಮರಸ್ಯದೊಡನೆ ಬಾಳಿದರೆ ಮಾತ್ರ ಅವರಿಗಿಲ್ಲಿ ಇರಲು ಅವಕಾಶ ಕೊಡಬೇಕೆಂಬ" ಸಾವರ್ಕರ್ ವಾದವನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಕೇಳುತ್ತಿದ್ದರೆ ದೇಶವನ್ನು ನೆಹರೂ ಕುಟುಂಬ ತನ್ನ ಪಿತ್ರಾರ್ಜಿತ ಆಸ್ತಿಯಂತೆ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಮತಾಂತರ, ಮತಾಂಧತೆಗೆ ಕಡಿವಾಣ ಬೀಳುವುದರ ಜೊತೆಗೆ ರಾಷ್ಟ್ರೀಯತೆಯ ಶಿಕ್ಷಣ ದೊರೆತು ಇಂದಿನ ಸೆಕ್ಯುಲರ್ ಪಡೆ ಮಸಣದತ್ತ ಮುಖಮಾಡುತ್ತಿತ್ತು! ರಾಷ್ಟ್ರೀಯವಾದದಲ್ಲೂ ನವಬೌದ್ಧರ ರೀತಿಯ ಅವಕಾಶವಾದಿತನದ "ನವರಾಷ್ಟ್ರೀಯವಾದ" ಹುಟ್ಟುತ್ತಿರಲಿಲ್ಲ. ಸಾವರ್ಕರ್ ನೀಡಿದ್ದ ಹಿಂದುತ್ವದ ಪರಿಕಲ್ಪನೆಯಲ್ಲಿ ದೇಶ ಸಾಗಿದ್ದರೆ ಸೌಮ್ಯ ಹಿಂದುತ್ವ-ಉಗ್ರ ಹಿಂದುತ್ವ ಎನ್ನುವ ವರ್ಗೀಕರಣ ಮಾಡಿ ಒಳಗೊಳಗೆ ಕಾರ್ಯ ಸಾಧಿಸಿಕೊಳ್ಳುವ ಎಡಚರ ಕೈ ಮಡಚಿ ಹೋಗುತ್ತಿತ್ತು!

2 ಕಾಮೆಂಟ್‌ಗಳು: