ಪುಟಗಳು

ಗುರುವಾರ, ಮಾರ್ಚ್ 31, 2016

ಸಂಘದ ಸಸಿಯಿಂದು ಹೆಮ್ಮರವಾಗಿದೆ...ನೋಡು ಬಾ ಕೇಶವ

ಸಂಘದ ಸಸಿಯಿಂದು ಹೆಮ್ಮರವಾಗಿದೆ...ನೋಡು ಬಾ ಕೇಶವ

            1897ರ ಜೂನ್ ತಿಂಗಳು. ಭಾರತದ ಹಳ್ಳಿ, ಪಟ್ಟಣಗಳು ವಿಕ್ಟೋರಿಯಾ ರಾಣಿ ಪಟ್ಟವೇರಿದ 60ನೇ ವರ್ಷದ ಸಂಭ್ರಮಾಚರಣೆಗೆ ಸಿದ್ಧವಾಗಿದ್ದವು. ಎಲ್ಲೆಡೆ ಭಿತ್ತಿಪತ್ರಗಳು, ತಳಿರು ತೋರಣ, ಸಡಗರ, ಬಡವರಿಗೆ ಅನ್ನದಾನ, ಚಿಂತಕರಿಗೆ ಪದವಿಪ್ರದಾನ! ಶಾಲೆಗಳಲ್ಲಿ ಹುಡುಗರು ಹೊಸಬಟ್ಟೆ ತೊಟ್ಟು ಮಿಠಾಯಿ ಚಪ್ಪರಿಸಿ ಸಂಭ್ರಮಿಸುತ್ತಿದ್ದರು. ನಾಗಪುರದ ಆ ಹುಡುಗ ಮಾತ್ರ ಖಿನ್ನನಾಗಿದ್ದ. ಮಿಠಾಯಿಯನ್ನು ತಿಪ್ಪೆಗೆಸೆದವನೇ ಮನೆಗೆ ಬಂದು ಸುಮ್ಮನೆ ಕುಳಿತುಬಿಟ್ಟ. ಅಣ್ಣ “ಯಾಕೋ ಮಿಠಾಯಿ ಸಿಗಲಿಲ್ಲವೋ” ಎಂದು ಕೇಳಿದೊಡನೆ "ನಮ್ಮ ಭೋಸಲೆ ರಾಜರನ್ನು ಕಿತ್ತೆಸೆದ ಆಕ್ರಮಕ ಅರಸೊತ್ತಿಗೆಯ ಸಮಾರಂಭವನ್ನು ಸಂಭ್ರಮಿಸುವುದಾದರೂ ಹೇಗೆ?" ಎನ್ನುವ ವಿಷಾದಪೂರ್ಣ ಕಿಡಿನುಡಿಯೊಂದು ಹೊರಬಿತ್ತು. ಮಿಠಾಯಿಯಲ್ಲಿದ್ದ ದಾಸ್ಯದ ಕಹಿಯನ್ನು ಎಂಟು ವರ್ಷದ ಹುಡುಗನ ರಾಷ್ಟ್ರಾಭಿಮಾನ ಗ್ರಹಿಸಿತ್ತು.

                1889ರ ಏಪ್ರಿಲ್ 1, ವಿರೋಧಿ ನಾಮ ಸಂವತ್ಸರದ ಮೊದಲ ದಿನ. ಶಕರ ಮೇಲೆ ಶಾಲಿವಾಹನನ ವಿಜಯದ 1811ನೇ ವರ್ಷಾಚರಣೆಗೆ ನಾಗಪುರದ ಪ್ರತಿ ಮನೆ ಸಿದ್ಧವಾಗಿತ್ತು. ಭಾನುವಾರದ ಆ ದಿನ ಭಾಸ್ಕರನ ಕಿರಣ ಬುವಿಯ ಚುಂಬಿಸುವ ಸಮಯಕ್ಕೆ ಸರಿಯಾಗಿ ಬಾಲ ರವಿಯೊಬ್ಬ ಉದಯಿಸಿದ. ಬಲಿರಾಮ ಪಂತ ಹಾಗೂ ರೇವತಿದೇವಿಯ ಆರು ಜನ ಮಕ್ಕಳಲ್ಲಿ ಐದನೆಯವನೇ ಕೇಶವ. ಧರ್ಮರಕ್ಷಣೆಗಾಗಿ ಶಂಕರಾಚಾರ್ಯರಿಂದ ನೇಮಿಸಲ್ಪಟ್ಟ ಪೂರ್ವಜರನ್ನು ಹೊಂದಿದ್ದ ಕಶ್ಯಪ ಗೋತ್ರದ ದೇಶಸ್ಥ ಬ್ರಾಹ್ಮಣ ವಂಶವದು. ಅಪ್ಪ ಪುರೋಹಿತರು. ಮಹಾಕೋಪಿಷ್ಠ! ತಾಯಿ ಶಾಂತಸ್ವಭಾವದ ಸದ್ಗೃಹಿಣಿ. ಕಿತ್ತು ತಿನ್ನುವ ಬಡತನ. ಮನೆಯವರೆಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಕೇಶವ ಹಾಗೂ ಆತನ ಇಬ್ಬರು ಸಹೋದರರು ಎದ್ದು ರಾತ್ರೋ ರಾತ್ರಿ ಬಾವಿಯ ಹೂಳು ತೆಗೆದು ನಿರ್ಮಲಗೊಳಿಸಿದಂತಹ ಅನೇಕ ಬಾಲಸಾಹಸಗಳಿಗೆ ಎಣೆಯಿರಲಿಲ್ಲ. ಹದಿಮೂರು ತುಂಬುವಾಗ ಹೆತ್ತವರು ಇಲಿಜ್ವರಕ್ಕೆ ಬಲಿಯಾದರು. ಮನೆಯಲ್ಲಿನ ವಿಪರೀತ ಕೆಲಸ, ಬರಿಯ ಹೊಟ್ಟೆ, ಸ್ವಾಭಿಮಾನದ ನಡುವೆಯೂ ಕೇಶವನ ವಿದ್ಯೆ ಓಡತೊಡಗಿತು. ಶಿವಾಜಿ ಆದರ್ಶನಾದ. ತಿಲಕರ ಭಾಷಣದಲ್ಲಿ ಮೈಮರೆತ. ಗೆಳೆಯರ ಚರ್ಚಾಮಂಡಳಿಯೊಂದನ್ನೇ ಹುಟ್ಟು ಹಾಕಿದ. 1857ರ ಸ್ವಾತಂತ್ರ್ಯ ಸಂಗ್ರಾಮದ ಸುವರ್ಣ ಮಹೋತ್ಸವ ಆಗಷ್ಟೇ ಮುಗಿದಿತ್ತು. ಫಡಕೆಯೆಂಬ ಕಿಡಿ ಆರದಂತೆ ಸಾವರ್ಕರ್ ಎಂಬ ಅಗ್ನಿದಿವ್ಯ ಮೊರೆದಿತ್ತು. "ವಂದೇ ಮಾತರಂ" ಕಿವಿಗೆ ಬಿದ್ದೊಡನೆ ಬ್ರಿಟಿಷರ ಎದೆ ಒಡೆವ ಕಾಲವದು.  ನಾಗಪುರದ ನೀಲ್ ಸಿಟಿ ವಿದ್ಯಾಲಯ. ಶಿಕ್ಷಣ ಇಲಾಖೆಯ ಪರೀಕ್ಷಾಧಿಕಾರಿ ಬರುವ ಸುದ್ದಿ ಕೇಳಿ ಅಧ್ಯಾಪಕರ ಸಹಿತ ವಿದ್ಯಾರ್ಥಿಗಡಣ ಗಂಭೀರವಾಗಿ ಕುಳಿತಿತ್ತು. ಸೂಜಿ ಬಿದ್ದರೂ ಕೇಳುವಷ್ಟು ಮೌನ! ಅಧಿಕಾರಿ ಮುಖ್ಯೋಪಾಧ್ಯಾಯರ ಜೊತೆ ಮೆಟ್ರಿಕ್ ವಿದ್ಯಾರ್ಥಿಗಳ ತರಗತಿಯೊಳಕ್ಕೆ ಕಾಲಿಟ್ಟದ್ದೇ ತಡ "ವಂದೇ ಮಾತರಂ" ಎಂಬ ಒಕ್ಕೊರಲ ಧ್ವನಿ ಸಿಂಹ ಘರ್ಜನೆಯಂತೆ ಕಿವಿಗಪ್ಪಳಿಸಿತು. ಕನಲಿದ ತನಿಖಾಧಿಕಾರಿ ಮುಂದಿನ ತರಗತಿಗೆ ಕಾಲಿಟ್ಟ. ಅಲ್ಲೂ ಅದೇ ರಣಮಂತ್ರದ ಉದ್ಘೋಷ! ಕೆರಳಿ ಕೆಂಡವಾದ ಅಧಿಕಾರಿ "ಇದು ರಾಜದ್ರೋಹ! ವಂದೇ ಮಾತರಂ ಹೇಳಿದವರನ್ನು ಶಾಲೆಯಿಂದ ಹೊರಗಟ್ಟಿ" ಎಂದು ಕಟ್ಟಪ್ಪಣೆ ಮಾಡಿ ಹೊರನಡೆದ. ವಂದೇ ಮಾತರಂ ಎಂದು ಘರ್ಜಿಸಿದ ಆ ಎರಡೂ ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಯಿತು. ಆದರೇನು ಶಾಲೆಯ ವಿದ್ಯಾರ್ಥಿ ಸಮೂಹಕ್ಕೆ ದೇಶಭಕ್ತಿಯ ಕಿಚ್ಚು ಹಚ್ಚಿದ ಕೇಶವನ ಸಂಘ ತತ್ವದ "ಬಲ" ಅಲ್ಲಿ ಮೊಳಕೆಯೊಡೆದಿತ್ತು!

                ನೀಲ್ ಸಿಟಿಯಿಂದ ಯವತಮಾಳದ ರಾಷ್ಟ್ರೀಯ ವಿದ್ಯಾಶಾಲೆ, ಅದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಬಿದ್ದು ಹೋದಾಗ ಪುಣೆ, ಅಮರಾವತಿ ಹೀಗೆ ಬಡತನದ ಬೇಗೆಯ ನಡುವೆಯೂ ವಿದ್ಯೆಯನ್ನು ಅರಸಿಕೊಂಡು ಹೋದ ಕೇಶವ ಕಲ್ಕತ್ತ ರಾಷ್ಟ್ರೀಯ ವಿದ್ಯಾಪೀಠದ ‘ಪ್ರವೇಶಿಕಾ’ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕ್ರಾಂತಿಯ ಗರ್ಭಗುಡಿ ಸೇರಿದ. ನದಿ ದಾಮೋದರ ಉಕ್ಕಿ ಹರಿದಿತ್ತು. ಲಕ್ಷಾಂತರ ಜನ ಮನೆಮಠ ಕಳೆದುಕೊಂಡು ಅಸಹಾಯಕರಾಗಿದ್ದರು. ಇಪ್ಪತ್ನಾಲ್ಕರ ತರುಣ ಕೇಶವ ತನ್ನ ಗೆಳೆಯರನ್ನು ಕಟ್ಟಿಕೊಂಡು ಹಸಿದವರ ತೃಷೆ ತೀರಿಸ ಹೊರಟ. ಹಗಲಿರುಳು ಭಾಷೆ, ಜಾತಿ, ಪ್ರಾಂತಗಳ ಗೋಡೆ ದಾಟಿ ನೊಂದವರ ಕಣ್ಣೀರು ಒರೆಸಿ ಹಸಿದವರಿಗೆ ಆಹಾರ ಒದಗಿಸಿದ. ಜೀವನದಲ್ಲಿ ಭರವಸೆ ಕಳೆದುಕೊಂಡವರಿಗೆ ಧೈರ್ಯ ತುಂಬಿದ. “ಸಂಘ ಸೇವೆ”ಯ ಬುಗ್ಗೆ ಚಿಮ್ಮತೊಡಗಿತ್ತು!

              ಕಲ್ಕತ್ತಾದಲ್ಲಿ ಕ್ರಾಂತಿಕಾರಿ ಸಂಘಟನೆ ಅನುಶೀಲನಾ ಸಮಿತಿಯಲ್ಲಿದ್ದುಕೊಂಡು ಬ್ರಿಟಿಷರ ವಿರುದ್ಧ ಸಾಹಿತ್ಯ ಸೃಷ್ಟಿಸಿ ಜನರಿಗೆ ತಲುಪಿಸತೊಡಗಿದ ಕೇಶವ. ಅನುಶೀಲನ ಸಮಿತಿಯಲ್ಲಿ ಕಾರ್ಯಕರ್ತರಿಗೆ ನೀಡುತ್ತಿದ್ದ ತರಬೇತಿಯೇ ವಿಶಿಷ್ಟವಾಗಿತ್ತು. ಕಾರ್ಯಕರ್ತರನ್ನು ಎರಡು ಗುಂಪುಗಳನ್ನಾಗಿಸಿ ಖಡ್ಗ, ಭರ್ಜಿಗಳನ್ನು ಕೊಟ್ಟು ಧರ್ಮ ಯುದ್ಧ ನಡೆಸಲಾಗುತ್ತಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿತ್ಯ ಶಾಖೆಗೆ ಇದೇ ಬೀಜರೂಪ ಒದಗಿಸಿತು! ವೈದ್ಯಕೀಯ ಪದವಿ ಪಡೆದ ಡಾಕ್ಟರ್ ಜೀ ತನ್ನ ಕೆಲಸ ರೋಗ ಬಂದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ಮಾಡುವುದಲ್ಲ, ಬದಲಾಗಿ ಹಿಂದೂ ಸಮಾಜಕ್ಕೆ ಬಂದಿರುವ ರೋಗಕ್ಕೆ ಮದ್ದು ಹುಡುಕುವುದು ಎನ್ನುವುದನ್ನು ಮನಗಂಡರು. ನಾಗಪುರಕ್ಕೆ ಬಂದು ಕ್ರಾಂತಿಸಂಘಟನೆಯಲ್ಲಿ ತೊಡಗಿದರು. ದೇಶಕ್ಕೆ ಬಂದೆರಗಿದ ಘೋರ ದಾಸ್ಯದ ಕುರಿತು ಜನರಮನಮುಟ್ಟುವ ಭಾಷಣ, ಜನರಿಂದ ಹಣ ಸಂಗ್ರಹ ಮಾಡಿ ಅದರಿಂದ ಶಸ್ತ್ರಾಸ್ತ್ರಗಳನ್ನು ಕೊಂಡು ಕ್ರಾಂತಿಕಾರಿಗಳಿಗೆ ಸರಬರಾಜು ಮಾಡತೊಡಗಿದರು. ನಾಗಪುರದ ಕಾಮಾಠಿಯಲ್ಲಿದ್ದ ಸೇನಾನೆಲೆಯಲ್ಲಿನ ಯೋಧರೊಂದಿಗೆ ಗೆಳೆತನ ಬೆಳೆಸಿ ಗುಟ್ಟಾಗಿ ಶಸ್ತ್ರಸಂಗ್ರಹಕ್ಕೆ ತೊಡಗಿದರು. ರಾಷ್ಟ್ರೀಯ ಉತ್ಸವ ಮಂಡಲವನ್ನು ರಚಿಸಿ ಶಿವಾಜಿ ಜಯಂತಿ, ಗಣೇಶೋತ್ಸವ, ಶಸ್ತ್ರ ಪೂಜೆಗಳನ್ನು ನಡೆಸಿ ತರುಣರನ್ನು ಹುರಿದುಂಬಿಸತೊಡಗಿದರು. ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿ ಭಾಷಣದ ಮೂಲಕ ಜನರನ್ನು ಪ್ರೇರೇಪಿಸಿದ ಕಾರಣ ರಾಜದ್ರೋಹದ ಆಪಾದನೆಯಡಿ ಬಂಧಿಸಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯೂ ದೊರಕಿತು.


                ಅಸಹಕಾರದ ವೈಫಲ್ಯಕ್ಕೆ ಅಶಿಸ್ತು, ಪ್ರಲೋಭನೆ, ದೂರದೃಷ್ಠಿಯಿಲ್ಲದಿರುವುದೇ ಕಾರಣವೆಂದು ಡಾಕ್ಟರ್ ಜೀ ಅರಿತರು. ಹಾಗೆಯೇ ಖಿಲಾಫತ್ತಿನ ಹುಚ್ಚಿನಿಂದ ಹಿಂದೂಗಳಿಗಾದ ಅನ್ಯಾಯಕ್ಕೆ ಅವರ ಹೃದಯ ಮರುಗಿತು. ಇದಕ್ಕಾಗಿ ಹಿಂದೂಗಳನ್ನು ಸಂಘಟಿಸಿ ಶಿಸ್ತುಬದ್ಧ ಹಾಗೂ ಪರಾಕ್ರಮಶೀಲರನ್ನಾಗಿಸುವ ಅನಿವಾರ್ಯತೆಯನ್ನು ಮನಗಂಡು ಹೆಚ್ಚು ಹೆಚ್ಚು ಹಿಂದೂ ತರುಣರೊಡನೆ ಸಂಪರ್ಕ ಬೆಳೆಸಿರು. 1925ರ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು. ಹನಿಹನಿ ಕೂಡಿ ಹಳ್ಳವಾಗುವಂತೆ ಬಡವ-ಬಲ್ಲಿದ, ಬ್ರಾಹ್ಮಣ-ಅಬ್ರಾಹ್ಮಣ ಎನ್ನುವ ಭೇಧವಿಲ್ಲದೆ ಸಂಘ ಬೆಳೆಯಿತು. ಅವರ ದಿನವೆಲ್ಲಾ ಸಂಘ ಕಾರ್ಯದಲ್ಲೇ ಕಳೆಯುತ್ತಿತ್ತು. ಆದರೆ ಬಡತನ ಮಾತ್ರ ಅವರ ಅನವರತದ ಸಂಗಾತಿಯಾಗಿತ್ತು. ಗೆಳೆಯರು ಪ್ರತಿ ತಿಂಗಳು ಅವರಿಗೆ ಹಣ  ಕೊಡಿಸುವ ಯೋಜನೆ ಹಾಕಿದಾಗ “ನನ್ನ ಸ್ವಂತಕ್ಕಾಗಿ ಸಮಾಜದ ಹಣ ಖರ್ಚು ಮಾಡುವುದು ಬೇಡ" ಎಂದುಬಿಟ್ಟರು. ಸಂಘದ ಕಾರ್ಯ ನಾಗಪುರಕ್ಕೆ ಸೀಮಿತವಾಗದೆ ಉಳಿದ ರಾಜ್ಯಗಳಲ್ಲಿಯೂ ಹಬ್ಬ ತೊಡಗಿತು. ಡಾಕ್ಟರ್ ಜೀ ಆಸೇತು ಹಿಮಾಚಲ ಸಂಚರಿಸಿ ಸಂಘದ ಸಸಿ ನೆಡುತ್ತಾ ಬಂದರು. 1930ರಲ್ಲಿ ಸತ್ಯಾಗ್ರಹ ಆಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಸಿಕ್ಕಿದ 9 ತಿಂಗಳ ಸೆರೆವಾಸ ವಿವಿಧ ಕಡೆಗಳ ತರುಣರನ್ನು ಸಂಘಕಾರ್ಯಕ್ಕೆ ಪ್ರೇರೇಪಿಸಲು ನೆರವಾಯಿತು. ಸಂಘದ ಸರಳತೆ, ಸಮಭಾವ, ತ್ಯಾಗ, ಸೇವಾ ಮನೋಭಾವಕ್ಕೆ ಸುಭಾಷ್, ಮಾಳವೀಯ, ಗಾಂಧಿಯಂತ ನಾಯಕರೇ ಮನಸೋತರು.


                  ಹಿಂದುತ್ವ ಮತ್ತು ರಾಷ್ಟ್ರೀಯತೆ ಬೇರೆಯಲ್ಲ. ಹಿಂದೂಗಳ ಸಂಘಟನೆಗಾಗಿ ಸಂಘವನ್ನು ಡಾಕ್ಟರ್ ಜೀ ಪ್ರಾರಂಭಿಸಿದ್ದರೂ ಅವರು ಅದಕ್ಕಿಟ್ಟ ಹೆಸರು ರಾಷ್ಟ್ರೀಯ ಸ್ವಯಂಸೇವಕ ಸಂಘ! ಹಿಂದೂಗಳನ್ನು ಸಂಘಟಿಸಿದರೆ ದೇಶ ಸದೃಢವಾಗುತ್ತದೆನ್ನುವುದು ಅವರ ವಿಶ್ವಾಸವಾಗಿತ್ತು. ಸಮಾನ ರಾಷ್ಟ್ರೀಯ ಧ್ಯೇಯದಿಂದ ಒಡಗೂಡಿದ ಜನರ ಸಂಘಟನೆಯೇ ಸಂಘ ಎಂದಿದ್ದರವರು. ಸ್ವಯಂಸೇವಕ ಎಂದರೆ ಸ್ವ ಇಚ್ಛೆಯಿಂದ ಶಿಸ್ತುಬದ್ಧನಾಗಿದ್ದು, ಸ್ವಾರ್ಥ ತೊರೆದು ಸರ್ವ ಸಮರ್ಪಣಾಭಾವದಿಂದ ಕಷ್ಟ-ದುಃಖಗಳನ್ನು ಲೆಕ್ಕಿಸದೆ ಸ್ವಪ್ರೇರಣೆಯಿಂದ ದೇಶಕ್ಕಾಗಿ ಕೆಲಸ ಮಾಡುವ ದೇಶಭಕ್ತ ಎನ್ನುವ ವ್ಯಾಖ್ಯೆಯನ್ನೇ ಕೊಟ್ಟರು. ಇಂದಿಗೂ ಈ ಬಗೆಯ ನಿಷ್ಠೆ ಕಂಡುಬರುವುದು ಇಬ್ಬರಲ್ಲಿ ಮಾತ್ರ, ಒಬ್ಬ ಭಾರತೀಯ ಸೈನಿಕ, ಇನ್ನೊಬ್ಬ ಕರಸೇವಕ! ಪ್ರತಿನಿತ್ಯ ಒಂದೆಡೆ ಎಲ್ಲರೂ ಪರಸ್ಪರ ಕಲೆತು ಕಲಿತು ಆಟವಾಡಿ ತಾಯಿ ಭಾರತಿಯನ್ನು ಪೂಜಿಸುವ ಮೂಲಕ ಜಾತಿ, ಮತ, ಪಂಥ ಭೇದಗಳನ್ನು ಮರೆತು ಹಿಂದೂ ಸಮಾಜವನ್ನು ಸಂಘಟಿಸಿ ಅಸೀಮ ಪಡೆಯೊಂದನ್ನು ಕಟ್ಟಬಹುದೆಂದು ಅವರು ತೋರಿಸಿಕೊಟ್ಟರು. ಪುರೋಹಿತ ವಂಶದಿಂದ ಬಂದವರಾದರೂ ಆ ಕಾಲಕ್ಕೆ ತೀರಾ ಆಧುನಿಕ ನಿಲುವಿನ ಪ್ರತೀಕವಾಗಿದ್ದ ಖಾಕಿ ಚಡ್ಡಿ ಮತ್ತು  ಅಂಗಿಯನ್ನು ಸಂಘಟನೆಯ ಸಮವಸ್ತ್ರವನ್ನಾಗಿ ಮಾಡಿದ್ದು ಕ್ರಾಂತಿಕಾರಕವೇ ಆಗಿತ್ತು. ಕೆಳಜಾತಿಯವರ ನೆರಳೂ ಸೋಕಬಾರದೆಂಬ ನಿಯಮಗಳಿದ್ದ ಕಾಲಕ್ಕೆ ಬ್ರಾಹ್ಮಣನೊಬ್ಬ ಜಾತಿಭೇದ ಮರೆತು ಎಲ್ಲರನ್ನೂ ಒಂದುಗೂಡಿಸಿದ್ದು ಸಾಮಾನ್ಯ ಸಾಧನೆಯೇನು?

               ಆಜನ್ಮ ಬ್ರಹ್ಮಚಾರಿಯಾಗಿ ಮನೆ-ಮಠಗಳನ್ನು ಮರೆತು ಸಂತನಂತೆ ಸರಳತೆಯೇ ಮೈವೆತ್ತಂತೆ ಬದುಕಿದ ಆ ಜೀವ ಹಿಂದೂ ಸಮಾಜದ ಸಂಘಟನೆಗಾಗಿ ರಾಷ್ಟ್ರವೇ ತನ್ನ ಮನೆಯೆನ್ನುವಂತೆ ಬದುಕಿತು. ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು, ಬರಿಗಾಲಲ್ಲಿ ಸಂಚರಿಸಿ ಹಿಂದೂ ಸಮಾಜದಲ್ಲಿ ಚಾರಿತ್ರ್ಯವಂತ ಪಡೆಯೊಂದನ್ನು ಕಟ್ಟಿತು. ಬದುಕಿದ ಐವತ್ತೊಂದು ವರ್ಷ ಮಾತ್ರವಲ್ಲದೆ ಇಂದಿಗೂ ಅನೇಕರನ್ನು ಆ ಆತ್ಮ ಪ್ರಭಾವಿಸುತ್ತಲೇ ಇದೆ. ವಿಷ್ಣು ಸರ್ವ ವ್ಯಾಪಿ. ಈ ಕೇಶವನೂ ಸರ್ವವ್ಯಾಪಿಯಾಗಿ ಇಂದು ಜಗದ ತುಂಬಾ ಹಬ್ಬಿ ನಿಂತಿದ್ದಾನೆ. 91 ವರ್ಷಗಳ ಹಿಂದೆ ಆತ ಹಚ್ಚಿದ ಸಣ್ಣ ಹಣತೆ ಇಂದು ಲಕ್ಷಾಂತರ ದೀಪಗಳಾಗಿ, ಭಾರತದ ಮೂಲೆ ಮೂಲೆಯನ್ನು ಬೆಳಗುತ್ತಾ ದೇಶದ ಗಡಿ ದಾಟಿ ಪ್ರಕಾಶ ಬೀರುತ್ತಿದೆ. ಇಂದು ಸಂಘವೆಂಬ ಬೃಹತ್ ಮರದ ಬಗೆಬಗೆಯ ಕೊಂಬೆಗಳು ಹಲವು ರೀತಿಯಲ್ಲಿ ಸಮಾಜದ ಹಲವು ವಿಭಾಗಗಳಲ್ಲಿ ಬೆಳೆದು ಕಾರ್ಯಾಚರಿಸುತ್ತಿವೆ. ಯುಗಾದಿಯ ಶುಭದಿನದಂದು ಜನಿಸಿ ನವ ಭಾರತದ ಸುವರ್ಣ ಯುಗಕ್ಕೆ ಕಾರಣನಾದ ಯುಗ ಪ್ರವರ್ತಕನ ಜನ್ಮ ದಿನದಂದು ಏನೆನ್ನಲಿ? ಒಂದೇ..."ಸಂಘದ ಸಸಿಯಿಂದು ಹೆಮ್ಮರವಾಗಿದೆ...ನೀನೇ ನೋಡು ಬಾ ಕೇಶವ" ಎಂದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ