ಸತ್ತ ತತ್ವಗಳ ಸತ್ವಹೀನ ಕೆಂಪು ಉಗ್ರರ ರಕ್ತರಾಜಕೀಯ
ಕಳೆದ ಮಾರ್ಚ್ ಎಂಟರಂದು ಎಂದಿನಂತೆ ತಲಶ್ಯೇರಿಯ ಪನ್ನೂರಿನ ಶಾಲೆಗೆ ಮಕ್ಕಳನ್ನು ತನ್ನ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದ ಎ.ವಿ. ಬಿಜು. ಆಗ ಬಂದ ಆರು ಜನ ಬಿಜುರನ್ನು ರಿಕ್ಷಾದಿಂದ ಹೊರಗೆಳೆದು ಮಕ್ಕಳ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಬಡಿದರು. ಬಡಿದವರು ಭಾರತ ಮಾತೆಯನ್ನು ತುಂಡು ತುಂಡು ಮಾಡಿ ಎಸೆಯುತ್ತೇನೆಂದು ಘೋಷಣೆ ಕೂಗಿದ ಕನ್ಹಯ್ಯ ಕುಮಾರ ತಮ್ಮ ಚಿನ್ನ, ರನ್ನ ಎಂದು ಹಾಡಿ ಹೊಗಳಿದ ಕಮ್ಯೂನಿಷ್ಟ್ ಪರಿವಾರದ ಕಾರ್ಯಕರ್ತರು! ಬಿಜುವಿನ ತಪ್ಪು ಆತ ಆರ್.ಎಸ್.ಎಸ್. ಕಾರ್ಯಕರ್ತನಾಗಿದ್ದುದು! ಮಾವೋ/ಸ್ಟಾಲಿನ್ ಭೂತ ಹೊಕ್ಕಿಸಿಕೊಂಡ ಕಮ್ಯುನಿಸ್ಟ್ ಕಟುಗರಿಗೆ ಮಕ್ಕಳ ಅಳು ಕೇಳಿಸಲೇ ಇಲ್ಲ. ಒಂದು ತಿಂಗಳ ಹಿಂದಷ್ಟೇ ಕಣ್ಣೂರು ಜಿಲ್ಲೆಯ ಪಾಪಿನೆಸ್ಸೇರಿಯ 27 ವರ್ಷದ ಆರ್.ಎಸ್.ಎಸ್ ಕಾರ್ಯಕರ್ತ ಸುಜಿತನ ಮನೆಗೆ ರಾತ್ರೋ ರಾತ್ರಿ ನುಗ್ಗಿದ್ದ ಕಮುನಿಸ್ಟ್ ಹಂತಕರು ಸುಜಿತನ ವಯೋವೃದ್ಧ ತಂದೆ ತಾಯಿಗಳ ಎದುರೇ ಆತನನ್ನು ಕೊಚ್ಚಿ ಹಾಕಿದ್ದರು. ತಡೆಯಲು ಬಂದ ಅಣ್ಣ,ತಂದೆ-ತಾಯಿಗೂ ಮಚ್ಚಿನಿಂದಲೇ ಹೊಡೆದರು. ಸುಜಿತ್ ಪ್ರಾಣಪಕ್ಷಿ ಹಾರಿ ಹೋಯಿತು.. ಉಳಿದವರನ್ನು ಆಸ್ಪತ್ರೆಗೆ ದಾಖಲಿಸಿದರು. ಕನ್ಹಯ್ಯ, ವೇಮುಲರಿಗೆ ಮರುಗಿದ್ದ ಯಾರೂ ವಯಸ್ಸಿಗೆ ಬಂದ ಮಗನನ್ನು ಕಣ್ಣೆದುರೇ ಕಳೆದುಕೊಂಡ ವಯೋವೃದ್ದ ದಂಪತಿಗಳನ್ನು ಮಾತನಾಡಿಸಲಿಲ್ಲ.ಕೇರಳದ ಈ ರಕ್ತಸಿಕ್ತ ಅಧ್ಯಾಯ ಇಂದು ನಿನ್ನೆಯದಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ತಮ್ಮ ತತ್ವಗಳಿಗೆ ಗಿರಾಕಿಗಳೇ ಸಿಗದಿದ್ದಾಗ ತಲವಾರು, ಮಚ್ಚು ಹಿಡಿದು ಮಾರ ಹೊರಟಿತು ಕೆಂಪು ಪಡೆ. ಕಣ್ಣೂರಿನಲ್ಲಿ ಸಂಘದ ಮೊದಲ ಶಾಖೆ ಆರಂಭವಾದದ್ದು 1943ರಲ್ಲಿ. ಇಪ್ಪತ್ತೈದು ವರ್ಷಗಳ ಕಾಲ ಸಂಘಟನೆ ನಿರಾತಂಕದಿಂದ ಮುನ್ನಡೆಯಿತು. ಈ ಅವಧಿಯಲ್ಲಿ ಅನೇಕ ಕಮ್ಯೂನಿಷ್ಟ್ ಕಾರ್ಯಕರ್ತರೂ ಸಂಘದ ತತ್ವಗಳಿಂದ ಆಕರ್ಷಿತರಾಗಿ ಸಂಘದ ಕಾರ್ಯಕರ್ತರಾದರು. ದಿನೇ ದಿನೇ ಬಲ ವೃದ್ಧಿಸಿಕೊಳ್ಳುತ್ತಿದ್ದ ಕೇಸರಿ ಪಡೆಯ ಉತ್ಕರ್ಷ ಕೆಂಪು ಉಗ್ರರ ಕಣ್ಣು ಕೆಂಪಗಾಗಿಸಿತ್ತು. ಹಾಗೇ ಆರಂಭವಾದದ್ದೇ ಕೇರಳದ ರಕ್ತಚರಿತೆ! ತಮ್ಮ ಪಿತಾಮಹರುಗಳಾದ ಸ್ಟಾಲಿನ್, ಮಾವೋತ್ಸೆತುಂಗರ ಕ್ರೌರ್ಯದ ದಿನಚರಿಯನ್ನೇ ಕಾರ್ಯಗತಗೊಳಿಸಿತು ಕಮ್ಯೂನಿಷ್ಟ್ ಪಡೆ. ಕಣ್ಣೂರಿನಲ್ಲಿ ಕೆಂಪು ಉಗ್ರರ ಅಟ್ಟಹಾಸಕ್ಕೆ ಮೊದಲ ಬಲಿಯಾದವರು ತಲಶ್ಯೇರಿಯ ಸಂಘದ ಮುಖ್ಯ ಶಿಕ್ಷಕರಾಗಿದ್ದ ರಾಮಕೃಷ್ಣನ್. ಈ ಕೊಲೆಯ ರೂವಾರಿ ಪಿಣರಾಯಿ ವಿಜಯನ್. ಇನ್ನೊಬ್ಬ ನೇತಾರ ಕೊಡಿಯೇರಿ ಬಾಲಕೃಷ್ಣನ್ ಸ್ವಯಂಸೇವಕ ಕರಿಂಬಿಲ್ ಸತೀಶನ್ ಅವರನ್ನು ಹತ್ಯೆಗೈದ. ಇವರಿಬ್ಬರೂ ಇಂದು ಕೇರಳ ಕಮ್ಯೂನಿಷ್ಟ್ ಪಕ್ಷದ ವರಿಷ್ಠ ನಾಯಕರು. ಇವರು ತೋರಿದ ದಾರಿಯಲ್ಲೇ ಸಾಗುತ್ತಿದೆ ಕೆಂಪು ಉಗ್ರರ ಪಡೆ! ಅಂದಿನಿಂದ ಸರಣಿಯಾಗಿ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಕಮ್ಯೂನಿಸ್ಟ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಕಮ್ಯೂನಿಷ್ಟರ ದಾಂಧಲೆಗೆ ಇಂತಹ ಜಾಗ, ಸಮಯ, ದಿನ ಎನ್ನುವ ನಿಯಮವಿಲ್ಲ. ತಮ್ಮ ಕುಕೃತ್ಯಕ್ಕೆ ಅಡ್ಡಿಯಾದವರು ಯಾರೇ ಆಗಿರಲಿ ಅವರನ್ನು ರಾಜಾರೋಷವಾಗಿ ಅಟ್ಟಾಡಿಸಿ ಕೊಲ್ಲುವುದೇ ಅವರ ಜಾಯಮಾನ. ಕೇರಳದ ಪರುಮಲ ಜಿಲ್ಲೆಯಲ್ಲಿ ದೇವಸ್ವಮ್ ಎನ್ನುವ ಕಾಲೇಜೊಂದಿದೆ. 1996ರ ಸೆಪ್ಟೆಂಬರ್ ಹದಿನೇಳರ ಒಂದು ದಿನ ಈ ಕಾಲೇಜಿಗೆ ನುಗ್ಗಿದ ಕೆಂಪು ಉಗ್ರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಕಮ್ಯೂನಿಷ್ಟ್ ಗೂಂಡಾಗಳಿಂದ ತಪ್ಪಿಸಿಕೊಂಡು ಓಡಿದ ಈ ಹುಡುಗರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪಂಪಾ ನದಿಗೆ ಹಾರಿದರು. ಅಲ್ಲಿಗೂ ಬಂದ ಕಮ್ಯೂನಿಷ್ಟ್ ಗೂಂಡಾಗಳು ವಿದ್ಯಾರ್ಥಿಗಳೆಡೆ ಕಲ್ಲೆಸೆಯಲಾರಂಭಿಸಿದರು. ನದಿಯ ಇನ್ನೊಂದು ತೀರದಲ್ಲಿ ಬಟ್ಟೆಯೊಗೆಯುತ್ತಿದ್ದ ಹೆಂಗಳೆಯರು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರ ಪ್ರಾಣ ಉಳಿಸುವ ಯತ್ನ ಮಾಡಿದಾಗ ಕೆಂಪು ಉಗ್ರರ ಕಲ್ಲು ಆ ಹೆಣ್ಣುಮಕ್ಕಳತ್ತ ತಿರುಗಿತು. ಕೆಲವೇ ಕ್ಷಣಗಳಲ್ಲಿ ಪಂಪೆ ಕೆಂಪಾದಳು. ಅಷ್ಟಕ್ಕೂ ಆ ಹುಡುಗರು ಮಾಡಿದ ತಪ್ಪಾದರೂ ಏನು? ಅವರು ಎಬಿವಿಪಿಯ ಕಾರ್ಯಕರ್ತರಾಗಿದ್ದುದೇ ಕಮ್ಯೂನಿಷ್ಟರ ಕಣ್ಣು ಕೆಂಪಗಾಗಲು ಕಾರಣವಾಗಿತ್ತು.
ಕೇರಳದ ಕಮ್ಯೂನಿಷ್ಟರ ರಕ್ತ ದಾಹಕ್ಕೆ ಕಿರೀಟಪ್ರಾಯವಾದ ಘಟನೆ ಜಯಕೃಷ್ಣ ಮಾಸ್ತರರ ಕೊಲೆ. ಕಳೆದ ಶತಮಾನದ ಕೊನೆಯ ತಿಂಗಳಲ್ಲೊಂದು ದಿನ ಭಾರತೀಯ ಜನತಾ ಯುವಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷರಾಗಿದ್ದ ಜಯಕೃಷ್ಣನ್ ಮಾಸ್ಟರ್ ಕಣ್ಣೂರು ಜಿಲ್ಲೆಯ ಶಾಲೆಯೊಂದರಲ್ಲಿ ಎಂದಿನಂತೆ 6ನೇ ತರಗತಿಯ ಮಕ್ಕಳಿಗೆ ಪಾಠ ಮಾಡುತಿದ್ದರು. ಏಳು ಜನ ಕಮ್ಯುನಿಸ್ಟ್ ಗೂಂಡಾಗಳು ಮಾರಕಾಸ್ತ್ರಗಳನ್ನು ಝಳಪಿಸುತ್ತ ನೇರವಾಗಿ ತರಗತಿಯೊಳಗೆ ನಡೆದು ಬಂದರು. ಮಕ್ಕಳನ್ನು ಕೂತ ಜಾಗದಿಂದ ಕದಲದಂತೆ ಬೆದರಿಸಿ, ಆ ಚಿಣ್ಣರ ಕಣ್ಣೆದುರೇ ಜಯಕೃಷ್ಣನ್ ಮಾಸ್ತರರಿಗೆ ಭೀಕರವಾಗಿ ಇರಿಯಲಾಯಿತು. 48 ಇರಿತದ ಗಾಯಗಳಿಂದ ಜರ್ಝರಿತವಾದ ಆ ಶರೀರ ನೆಲಕ್ಕೊರಗಿತು. ತಮ್ಮ ನೆಚ್ಚಿನ ಶಿಕ್ಷಕನ ಮೇಲಾದ ಭೀಕರ ದಾಳಿಯನ್ನು ನೋಡಿದ ಆ ಮಕ್ಕಳು ಆಘಾತಕ್ಕೊಳಗಾದರು. ಅವರನ್ನು ಸಹಜ ಸ್ಥಿತಿಗೆ ತರಲು ಕೌನ್ಸೆಲಿಂಗ್ ಮಾಡಬೇಕಾಯಿತು. ಅಮಾನುಷವಾಗಿ ಕೊಲೆ ಮಾಡಿದ ಬಳಿಕ ಶಾಲೆಯ ಬೋರ್ಡಿನಲ್ಲಿ ಸಾಕ್ಷಿ ಹೇಳಿದವರಿಗೂ ಇದೇ ಗತಿ ಎಂದು ಬರೆದ ಕೆಂಪು ಉಗ್ರರು ಕೇಕೆ ಹಾಕುತ್ತಾ ಹೊರನಡೆದರು.
ಕೆಂಪು ಉಗ್ರರ ರಕ್ತ ಪಥ...
>>1978ರಲ್ಲಿ ಕಣ್ಣೂರಿನಲ್ಲಿ ಸಂಘದ ಕಾರ್ಯಕರ್ತ ಚಂದ್ರನ್ ಹತ್ಯೆ.
>>2002ರಲ್ಲಿ ಸ್ವಯಂಸೇವಕ ಉತ್ತಮನ ಕೊಲೆ. ಉತ್ತಮನ ಅಂತ್ಯಕ್ರಿಯೆ ಮುಗಿಸಿ ಹಿಂತಿರುಗುತ್ತಿದ್ದ ಶ್ರೀಮತಿ ಅಮ್ಮು ಅಮ್ಮನ ಮೇಲೆ ನಾಡ ಬಾಂಬ್ ಎಸೆದು ಕೊಲೆ.
>> 2007ರ ನವೆಂಬರ್-ಡಿಸೆಂಬರಿನಲ್ಲಿ ಶೆರಿನ್, ಬಿಜು, ಜಿತು, ಶಾಜಿ, ಲಜೀಶ್ ಮೇಲೆ ದಾಳಿ ಮಾಡಿ ಕೈಕಾಲು ಕತ್ತರಿಸಲಾಯಿತು. ಶಾಜಿಗಂತೂ ಮಾತಾಡುವ ಭಾಗ್ಯವೇ ಇಲ್ಲದಂತಾಯಿತು.
>> 2008ರ ಫೆಬ್ರವರಿಯಲ್ಲಿ ರಮೇಶ ಬಾಬು, ಶಿಜಿತ್, ಸತೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಯಿತು.
>> 2008ರ ಫೆಬ್ರವರಿಯಲ್ಲಿ ಅಳಿಪೆಯ ಶಿವನ್'ರ ಮನೆಗೆ ಬೆಂಕಿ ಹಚ್ಚಲಾಯಿತು. ಶ್ರೀಕೃಷ್ಣ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಎಬಿವಿಪಿ ಕಾರ್ಯಕರ್ತ ಸನೂಪರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಯಿತು.
>>2008 ಮಾರ್ಚಿನಲ್ಲಿ ಕಣ್ಣೂರಿನ ಚಿಟ್ಟಾರಿಪರಂಬುನಲ್ಲಿ ಭಾಜಪಾ ಕಾರ್ಯಕರ್ತ, ಆಟೋ ಚಾಲಕ ಮಹೇಶ್, ಸತ್ಯನ್, ನಿಖಿಲ್ ಹತ್ಯೆ ಹಾಗೂ ಅನೀಶ್, ಸುಮೇಶ್ ಮೇಲೆ ಮಾರಣಾಂತಿಕ ಹಲ್ಲೆ. ನಾಡಬಾಂಬ್ ಎಸೆದು ಮೂವತ್ತಕ್ಕೂ ಹೆಚ್ಚು ಸಂಘದ ಕಾರ್ಯಕರ್ತರ ಮನೆಗಳ ನಾಶ. ಶಾಲೆ, ಸೇವಾಸಂಘಗಳ ಕಟ್ಟಡಗಳ ಮೇಲೆ ದಾಳಿ. ಎರಡೇ ದಿನಗಳಲ್ಲಿ ನಾಲ್ಕು ಜನ ಕಾರ್ಯಕರ್ತರ ಹತ್ಯೆ! ಹನ್ನೆರಡಕ್ಕೂ ಹೆಚ್ಚು ಕಾರ್ಯಕರ್ತರಿಗೆ ಮಾರಣಾಂತಿಕ ಗಾಯ.
>>2013 ಡಿಸೆಂಬರಿನಲ್ಲಿ ಅಕ್ರಮ ಗಣಿಗಾರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಐಕ್ಯವೇದಿ ಕಾರ್ಯಕ್ರಮದ ಮೇಲೆ ನಾಡಬಾಂಬ್ ದಾಳಿ. ಮರುದಿವಸವೇ ಕಲ್ಲಿಕೋಟೆಯ ವೈದ್ಯಕೀಯ ವಿದ್ಯಾಲಯದ ಆವರಣದಲ್ಲೇ ಸಂಘದ ಕಾರ್ಯಕರ್ತ ಅನೂಪ್(29) ಹತ್ಯೆ.
>>2015ರ ಜುಲೈನಲ್ಲಿ ಕೋಡುಂಗಲೂರಿನ ಪ್ರಸಿದ್ಧ ಶ್ರೀ ಭಗವತಿ ದೇವಸ್ಥಾನದ ಮೇಲೆ ಕಲ್ಲು ತೂರಾಟ.
ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಕೆಂಪು ಉಗ್ರರ ಅಟ್ಟಹಾಸಕ್ಕೆ ಮಿತಿಯೇ ಇಲ್ಲ. ಅವರ ರಕ್ತದಾಹಕ್ಕೆ ಬಲಿಯಾದ ಸಂಘದ ಸ್ವಯಂಸೇವಕರಿಗೆ ಲೆಖ್ಖವೇ ಇಲ್ಲ. ಬಿಜೆಪಿಯ ಪ್ರತಿಭಟನಾ ಸಭೆಗೆ, ಮೆರವಣಿಗೆಗೆ ಕತ್ತಿ,ಮಚ್ಚುಗಳೊಂದಿಗೆ ನುಗ್ಗಿ ಬಡಿಯುವುದಂತೂ ಕಮ್ಯೂನಿಷ್ಟರಿಗೆ ಬಲು ಇಷ್ಟದ ಕೆಲಸ.ಒಂದು ಕಾಲದಲ್ಲಿ ಕಮ್ಯೂನಿಷ್ಟ್ ಪಾಳಯದಲ್ಲಿದ್ದು ಅವರ ರಕ್ತ ರಾಜಕೀಯಕ್ಕೆ ಹೇಸಿ, ಸಂಘದ ತತ್ವಕ್ಕೆ ಬದ್ಧರಾದವರಂತೂ ಕೆಂಪು ಉಗ್ರರಿಗೆ ಬದ್ಧ ವೈರಿಗಳು. ಒಂದು ಕಾಲದಲ್ಲಿ ಕಮ್ಯುನಿಸ್ಟರಾಗಿದ್ದು ಬಳಿಕ ರಾ.ಸ್ವ.ಸಂ. ಸೇರಿದ್ದ ಸದಾನಂದ ಮಾಸ್ಟರ್ ಕಣ್ಣೂರಿನ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ತಮ್ಮವನೊಬ್ಬ ವಿರೋಧಿ ಪಾಳಯ ಸೇರಿದ್ದನ್ನು ಸಹಿಸದ ಸ್ಟಾಲಿನ್ ಭಕ್ತರು ಅವರ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಿದರು. 2014ರಲ್ಲಿ ಭಾರತೀಯ ಮಜ್ದೂರ್ ಸಂಘದ ಸುರೇಶ್ ಕುಮಾರ್ ಹಾಗೂ ಆರೆಸ್ಸೆಸ್ ಕಾರ್ಯಕರ್ತ ಇ. ಮನೋಜ್ ಅವರ ಹತ್ಯೆಯಾಗಿತ್ತು. ಆರೆಸ್ಸೆಸ್ ಕಾರ್ಯಕರ್ತರಾದ ಮನೋಜ್ ಹಾಗೂ ಪ್ರಮೋದ್ ಪ್ರಯಾಣಿಸುತ್ತಿದ್ದ ವೇಳೆ ಅವರ ವಾಹನಕ್ಕೆ ನಾಡಬಾಂಬ್ ಎಸೆಯಲಾಯಿತು. ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಮನೋಜ್ ಆಸ್ಪತ್ರೆಯ ದಾರಿಯಲ್ಲಿ ಹಾಗೂ ಪ್ರಮೋದ್ ಕೆಲದಿನಗಳ ನಂತರ ಆಸ್ಪತ್ರೆಯಲ್ಲಿ ತೀರಿಕೊಂಡರು. ಈ ಪ್ರಕರಣದಲ್ಲಿ ಸಿಪಿಎಂ ನೇತಾರ ಜಯರಾಜನ್ ಬಂಧನವಾಗಿದ್ದು ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿದೆ. ಇದೇ ಜಯರಾಜನ್ ಪುತ್ರ ಆರೆಸ್ಸೆಸ್ ಕಾರ್ಯಕರ್ತ ಕೆ.ಟಿ.ಮನೋಜ್ ಹತ್ಯೆ ಒಳ್ಳೆಯ ಸುದ್ದಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ.
2000ನೇ ಇಸವಿಯಲ್ಲಿ ಕೊಡಿಯೇರಿ ಬಾಲಕೃಷ್ಣನನ ಅಳಿಯ ಶಾಖೆಯ ಮೇಲೆ ದಾಳಿ ಮಾಡಿದ ನಂತರ ಕೊಡಿಯೇರಿಯ ಎಂಗಾಯಿಲ್ಪೀಡಿಕಾದಲ್ಲಿ ಶಾಖೆ ನಡೆಸಲು ಕೆಂಪು ಉಗ್ರರು ಅವಕಾಶವನ್ನೇ ಕೊಡುತ್ತಿಲ್ಲ. ಅಲ್ಲಿ ಸಂಘದ ಕಾರ್ಯಕರ್ತರ ಮೇಲೆ ಕಮ್ಯೂನಿಸ್ಟ್ ಗೂಂಡಾಗಳ ಅಘೋಷಿತ 144 ಸೆಕ್ಷನ್ ಜಾರಿಯಲ್ಲಿದೆ ಒಂದು ಕಡೆ ಕುಳಿತುಕೊಳ್ಳುವಂತಿಲ್ಲ. ಒಟ್ಟು ಸೇರಿ ಮಾತಾಡುವಂತಿಲ್ಲ. ಒಂದೋ ತಿರುಗಾಡುತ್ತಿರಬೇಕು ಇಲ್ಲವೇ ಒಬ್ಬರೇ ನಡೆದಾಡಬೇಕು. ಕಣ್ಣೂರಿನ ಐವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಶಾಖೆಗಳನ್ನು ನಡೆಸಲು ಕೆಂಪು ಉಗ್ರರು ಬಿಡುವುದೇ ಇಲ್ಲ. ಎಲ್ಲಾದರೂ ಶಾಖೆ ನಡೆಸುವ ಪ್ರಯತ್ನ ಯಾರಾದರೂ ಮಾಡಿದರೆ ತಲವಾರ್, ಮಚ್ಚು, ಬಾಂಬುಗಳೊಂದಿಗೆ ಸ್ಟಾಲಿನ್ ಭಕ್ತರು ಪ್ರತ್ಯಕ್ಷರಾಗುತ್ತಾರೆ. ಕಣ್ಣೂರಿನ 265 ಬೂತುಗಳಲ್ಲಿ ಸಿಪಿಎಂ ಗೂಂಡಾಗಳನ್ನು ಬಿಟ್ಟು ಯಾರೂ ಕೂರುವಂತಿಲ್ಲ. ಕಣ್ಣೂರಿನ ಭೀಬತ್ಸ ರಕ್ತಸಿಕ್ತ ಅಧ್ಯಾಯವನ್ನು ಕಂಡ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ರಾಮಕುಮಾರ್ 2008ರಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ರಾಜಕೀಯ ಒತ್ತಡವಿಲ್ಲದ ಪಡೆಯೊಂದನ್ನು ಇಲ್ಲಿ ನಿಯೋಜಿಸುವುದೇ ಶಾಂತಿ ಕಾಪಾಡಲು ಇರುವ ಏಕೈಕ ಮಾರ್ಗ ಎಂದಿದ್ದರು.
ಕೇರಳ, ಅದರಲ್ಲೂ ಮಲಬಾರ್ ಪ್ರದೇಶ ಕಳೆದ ಎರಡು ದಶಕಗಳಲ್ಲಿ ಹಲವಾರು ರಾಜಕೀಯ ಕೊಲೆಗಳನ್ನು ಕಂಡಿದೆ. ಕಣ್ಣೂರಂತೂ ವಧಾಕ್ಷೇತ್ರವೇ ಸರಿ. ಕಣ್ಣೂರಿನಲ್ಲಿ ನೂರಕ್ಕೂ ಹೆಚ್ಚು ಸಂಘ ಕಾರ್ಯಕರ್ತರನ್ನು ಕಮ್ಯೂನಿಷ್ಟರು ಕೊಲೆ ಮಾಡಿದ್ದಾರೆ. 1998ರ ಬಳಿಕ ಕಣ್ಣೂರಿನಲ್ಲಿ 3,500ಕ್ಕೂ ಅಧಿಕ ರಾಜಕೀಯ ಘರ್ಷಣೆಗಳು ನಡೆದಿದ್ದು , ಸುಮಾರು 60 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಬಹಳಷ್ಟು ಜನ ಕೈಕಾಲು ಕಳೆದುಕೊಂಡಿದ್ದಾರೆ. 16 ಲಕ್ಷ ಜನಸಂಖ್ಯೆಯ ಕಣ್ಣೂರು ಪ್ರಾಂತ್ಯದಲ್ಲಿ ಕಮ್ಯೂನಿಷ್ಟ್ ರಕ್ತರಾಜಕೀಯಕ್ಕೆ ಬಲಿಯಾಗಿ ಗಂಭೀರವಾಗಿ ಗಾಯಗೊಂಡು ಜೀವನ ಕೆಡಿಸಿಕೊಂಡವರು 3 ಸಾವಿರ ಸಂಖ್ಯೆಯಲ್ಲಿದ್ದಾರೆ. ಕಮ್ಯೂನಿಷ್ಟರ ಈ ರಕ್ತದಾಟ ಅವರಿಗೇ ಮುಳ್ಳಾಗಿರುವುದು ಕೂಡಾ ಸುಳ್ಳಲ್ಲ.. ರಾಜಕೀಯ ಕಾರಣಕ್ಕಾಗಿ ತಮ್ಮವರನ್ನು ಕೊಲೆ ಮಾಡಲೂ ಅವರು ಹೇಸುವುದಿಲ್ಲ. ಸಿಪಿಎಂನ ನವ ಉದಾರವಾದಿ ನೀತಿಯನ್ನು ವಿರೋಧಿಸುತ್ತಾ ಪಕ್ಷದ ಕೆಲವು ನಾಯಕರ ಭ್ರಷ್ಟಾಚಾರ ಮತ್ತು ಸಂಪತ್ತು ಗಳಿಕೆಯನ್ನು ಬಯಲಿಗೆಳೆಯುತ್ತಿದ್ದ ಅಚ್ಯುತಾನಂದನ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಟಿ.ಪಿ. ಚಂದ್ರಶೇಖರನ್ ಅವರನ್ನೂ ಬಿಡಲಿಲ್ಲ ಕೆಂಪು ಉಗ್ರರು. ಪಿಣರಾಯಿ ಗುಂಪಿನ ನಾಯಕರ ಜೀವನಶೈಲಿಯನ್ನು ಟಿ.ಪಿ. ಬಯಲಿಗೆಳೆಯಲು ಆರಂಭಿಸಿದ್ದು, ಅದರಿಂದ ಆತ ಸಿಪಿಎಂಗೆ ನುಂಗಲಾರದ ಬಿಸಿ ತುಪ್ಪದಂತಾಗಿದ್ದ. ಹಂತಕರು ಮೊದಲಿಗೆ ಮೋಟಾರ್ ಬೈಕಿನಲ್ಲಿ ಹೋಗುತ್ತಿದ್ದ ಚಂದ್ರಶೇಖರ್ ಮೇಲೆ ನಾಡ ಬಾಂಬ್ಗಳನ್ನು ಎಸೆದರು. ಬೈಕಿನಿಂದ ಕೆಳಗೆ ಬಿದ್ದ ಅವರನ್ನು 51 ಬಾರಿ ಕಡಿದ ಕಾರಣ ಅವರ ಮುಖ ಗುರುತು ಹಿಡಿಯಲಾಗದಷ್ಟು ವಿರೂಪಗೊಂಡಿತ್ತು. ಈ ಎಲ್ಲಾ ಕೊಲೆಗಡುಕರಿಗೆ ಅಚ್ಯುತಾನಂದನ್, ಕೊಡಿಯೇರಿ ಬಾಲಕೃಷ್ಣನ್, ಪಿಣರಾಯಿ ವಿಜಯನ್, ಕಾರಟ್ ದಂಪತಿಗಳು, ಯೆಚೂರಿಗಳ ಕೃಪಾ ಹಸ್ತವಿದೆ. ಈಚೆಗಂತೂ ರಾಜಕೀಯ ಕೊಲೆಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ತಮ್ಮ ರಾಜಕೀಯ ವಿರೋಧಿಗಳನ್ನು ಮುಗಿಸುವುದಕ್ಕೆ ಸುಪಾರಿ ಹಂತಕರ ಸಹಾಯ ಪಡೆಯಲಾಗುತ್ತಿದೆ. ಸುಪಾರಿ ಹಂತಕರು ತಮಗೆ ವಹಿಸಿದ ಕೆಲಸವನ್ನು ವೃತ್ತಿಪರವಾಗಿ ಮಾಡಿ ಮುಗಿಸುತ್ತಾರೆ. ಹತ್ಯೆ ಪೂರೈಸಿದ ಬಳಿಕ ಅವರಿಗೆ ಕಾನೂನಿನ ನೆರವು ಮತ್ತು ರಕ್ಷಣೆಯನ್ನು ನೀಡಲಾಗುತ್ತದೆ. ಚಂದ್ರಶೇಖರ್ ಕೊಲೆಯೇ ಇದಕ್ಕೊಂದು ಉದಾಹರಣೆ.
ಕೇರಳ ಕಮ್ಯೂನಿಸ್ಟರ ಆಡುಂಬೊಲ. ಆ ರಾಜ್ಯದಲ್ಲಿ ಒಂದೋ ಎಡಪಕ್ಷಗಳು ಅಧಿಕಾರದಲ್ಲಿರುತ್ತವೆ ಇಲ್ಲವೇ ಕಾಂಗ್ರೆಸ್ ಅಧಿಕಾರ ಗದ್ದುಗೆಯಲ್ಲಿರುತ್ತದೆ. ರಾಜ್ಯದಲ್ಲಿ ಕೇಸರಿ ಪಡೆಯ ಬಲವರ್ಧನೆಯಾಗುತ್ತಿರುವುದು ಕಮ್ಯುನಿಸ್ಟ್ ರಾಜಕಾರಣದ ಪಾಲಿಗೆ ಸಹಿಸಲಾಗದ ವಿದ್ಯಮಾನ. ತಮ್ಮ ರಾಜಕೀಯ ನೆಲೆ ಕಳೆದುಕೊಳ್ಳುವುದನ್ನು ಕಮ್ಯುನಿಸ್ಟರು ಸುತಾರಾಂ ಬಯಸುವುದಿಲ್ಲ. ಅದಕ್ಕಾಗಿ ಕಮ್ಯೂನಿಸ್ಟರು ಕಂಡುಕೊಂಡ ಹಾದಿ ರಕ್ತರಾಜಕೀಯ. ಸಿಪಿಎಂ ಪಾಳೆಯದಲ್ಲಿದ್ದ ಕಾರ್ಯಕರ್ತರೇ ಸಂಘದ ಕಡೆ ಬರುತ್ತಿರುವುದರಿಂದ ಸಿಪಿಎಂ ಮತ್ತಷ್ಟು ವ್ಯಗ್ರವಾಗಿದೆ. ಕೇರಳಾದ್ಯಂತ ಕೇಸರಿ ಧ್ವನಿ ಮೊರೆಯಲಾರಂಭಿಸಿದುದು ಸಿಪಿಎಂಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನಾರಾಯಣ ಗುರುಗಳ ಪೀಠಾನುವರ್ತಿಗಳಾದ ಕೇರಳದ ದೊಡ್ಡ ಸಮುದಾಯ ಈಳವ, ಬಿಜೆಪಿ ಕಡೆ ವಾಲಿರುವುದು, ಈಳವ ಸಮುದಾಯದ ಪೀಠ ‘ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ’ (ಎಸ್.ಎನ್.ಡಿ.ಪಿ) ಬಿಜೆಪಿಗೆ ಹತ್ತಿರವಾಗಿರುವುದು ಕೆಂಪು ಉಗ್ರರಿಗೆ ನುಂಗಲಾರದ ತುತ್ತಾಗಿದೆ. ಅದಕ್ಕಾಗಿಯೇ ಹಿಂದೂ ಮತಗಳನ್ನು ಸೆಳೆಯುವ ಸಲುವಾಗಿ ಕಳೆದ ವರ್ಷ ಗಣೇಶೋತ್ಸವ ಹಾಗೂ ಜನ್ಮಾಷ್ಟಮಿ ಮೆರವಣಿಗೆಗಳನ್ನು ಆಯೋಜಿಸಿತು ಸಿಪಿಎಂ.
ಇದು ಕೇರಳದ ಕಥೆಯಾದರೆ ಬಂಗಾಳದ ಕಮ್ಯೂನಿಷ್ಟರ ಕಥೆಯೇ ಇನ್ನೊಂದು ಬಗೆ. ಅಲ್ಲಿ ತಮ್ಮ ರಾಜಕೀಯ ಎದುರಾಳಿಗಳನ್ನು ಕಿಡ್ನ್ಯಾಪ್ ಮಾಡಿ ತಂದು ಗುಂಡಿ ತೆಗೆದು ಜೀವಂತ ಹೂತು ಹಾಕುವುದೇ ಕೆಂಪು ಉಗ್ರರ ಚಾಳಿ. ಹೊರ ಜಗತ್ತಿಗೆ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ. ಪಶ್ಚಿಮ ಬಂಗಾಳದಲ್ಲಿ 1970ರಲ್ಲಿ ಸೈನ್ ಸಹೋದರರನ್ನು ಕೊಂದು ಆ ರಕ್ತದಲ್ಲಿ ಅವರ ತಾಯಿಗೆ ಬಲವಂತವಾಗಿ ಅನ್ನವನ್ನು ಅದ್ದಿ ತಿನ್ನಿಸಿ ಹುಚ್ಚಿಯನ್ನಾಗಿಸಿದ ಸೈನ್ ಬಾರಿ ಹತ್ಯಾಕಾಂಡ, 79ರಲ್ಲಿ ಬಾಂಗ್ಲಾದಿಂದ ಮತಾಂತರಗೊಳ್ಳುವುದರಿಂದ ತಪ್ಪಿಸಿ ಆಶ್ರಯಕ್ಕಾಗಿ ಭಾರತಕ್ಕೆ ಓಡಿ ಬಂದು ಸುಂದರ ಬನದಲ್ಲಿದ್ದ 60ಸಾವಿರ ಹಿಂದೂಗಳ ಸರಕಾರೀ ಪ್ರಾಯೋಜಿತ ಮರೀಚ್ ಝಾಪಿ ಹತ್ಯಾಕಾಂಡ, ಹದಿನೇಳು ಜನ ಆನಂದಮಾರ್ಗಿ ಸನ್ಯಾಸಿ/ನಿಗಳನ್ನು ಜೀವಂತವಾಗಿ ಸುಟ್ಟ ಘಟನೆ, ನಾನೂರ್ ಹಾಗೂ ಇತಿಹಾಸ ಪ್ರಸಿದ್ಧ ನಂದಿಗ್ರಾಮದ ಹತ್ಯಾಕಾಂಡದ ಘಟನೆಗಳೇ ಸಾಕು ಕೆಂಪು ಉಗ್ರರು ಯಾವ ಪರಿಯ ರಾಕ್ಷಸರು ಎನ್ನುವುದನ್ನು ಅರಿಯಲು. ಕಾಮ್ರೇಡುಗಳ ಮಾತಿಗೂ ಕೃತಿಗೂ ಇರುವ ಅಂತರವನ್ನು ಎತ್ತಿ ತೋರಿಸಲು ಬಡವರ ಪರ ಎಂದು ಬಿಂಬಿಸಿಕೊಳ್ಳುವ ಈ ಕಾಮ್ರೇಡುಗಳು ನಂದಿಗ್ರಾಮದಲ್ಲಿ ಬಡವರ ಭೂಮಿಯನ್ನು ಬೈದು-ಬೆದರಿಸಿ-ಕೊಲೆ ಮಾಡಿ ಕಿತ್ತುಕೊಂಡು ಕೇಕೆ ಹಾಕಿದ ಘಟನೆಯೊಂದೇ ಸಾಕು!
1962ರ ಚೀನಾ ಯುದ್ಧದ ಸಮಯದಲ್ಲಿ ಕಮ್ಯುನಿಸ್ಟರ ದೇಶ ವಿರೋಧಿ ಧೋರಣೆಯಿಂದಾಗಿ ನಾಯಕರನ್ನೆಲ್ಲ ಬಂಧಿಸಿ ಜೈಲಿಗಟ್ಟಲಾಗಿತ್ತು. ಜೈಲಿನಲ್ಲಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಭಾರತೀಯ ಸೈನಿಕರ ರಕ್ತ ನಿಧಿಗೆ ಕಮ್ಯುನಿಸ್ಟರು ರಕ್ತದಾನ ಮಾಡುವ ಪ್ರಸ್ತಾಪವೊಂದನ್ನು ಜೈಲಿನಲ್ಲೇ ನಡೆದ ಕಮ್ಯುನಿಸ್ಟರ ಸಭೆಯ ಮುಂದಿಡುತ್ತಾರೆ. ಪ್ರಸ್ತಾವನೆಗೆ ಭಾರಿ ವಿರೋಧ ವ್ಯಕ್ತವಾಯಿತು. ಯಾರೋ ಅದನ್ನು ಸೀನಿಯರ್ ಕಾಮ್ರೇಡ್ ಜ್ಯೋತಿ ಬಸು ಅವರ ಕಿವಿಗೂ ತಲುಪಿಸಿದರು. ಈ ಪ್ರಕರಣ ಕಡೆಗೆ ಅಚ್ಯುತಾನಂದನ್ ಅವರನ್ನು ಸೆಂಟ್ರಲ್ ಕಮಿಟಿಯಿಂದ ಜಿಲ್ಲಾ ಮಟ್ಟಕ್ಕಿಳಿಸುವವರೆಗೆ ತಲುಪಿತು. ಇತ್ತೀಚೆಗೆ ಈ ಘಟನೆಯ ಬಗ್ಗೆ ಮಾತನಾಡಿದ್ದ ಅಚ್ಯುತಾನಂದನ್ ನಾನು ಭಾರತೀಯ ಸೈನಿಕರಿಗೆ ಪಕ್ಷದ ಸೂಚನೆಯಂತೆ ರಕ್ತವನ್ನು ನೀಡಿರಲಿಲ್ಲ. ಆದರೂ ಕೆಲವರ ಸಂಚಿನಿಂದಾಗಿ ಪಕ್ಷವಿರೋಧಿ ಆರೋಪಕ್ಕೊಳಗಾದೆ ಅಂದಿದ್ದರು. ಇದು ಕಮ್ಯೂನಿಸ್ಟರ ವರಸೆ! ಅವರಿಗೆ ತಮ್ಮ ದೇಶಕ್ಕಿಂತಲೂ ತಮ್ಮ ತತ್ವಗಳು, ಅದಕ್ಕಿಂತಲೂ ತಮ್ಮ ಪಕ್ಷ, ಅಥವಾ ವೈಯುಕ್ತಿಕ ಆಕಾಂಕ್ಷೆಯೇ ಮುಖ್ಯವಾಗಿರುತ್ತದೆ.
ಎಲ್ಲರಿಗೂ ಸಮಾನ ಸಂಪತ್ತು ಎನ್ನುವ ಕಮ್ಯೂನಿಸ್ಟರ ತತ್ವ ಪುಸ್ತಕಗಳಲ್ಲಿ ಮಾತ್ರ. ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಕಮ್ಯೂನಿಸ್ಟರು ನಡೆಸಿದ ಲೂಟಿಗೆ ಲೆಖ್ಖವೇ ಇಲ್ಲ. ಕೇರಳದಲ್ಲಿ 1960ರ ದಶಕದಲ್ಲಿ ನಂಬೂದರಿಪಾಡ್ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಭ್ರಷ್ಟಾಚಾರವಂತೂ ಇತಿಹಾಸ ಪ್ರಸಿದ್ಧ. ಈಗಲೂ ಅಕ್ರಮ ಸಂಪತ್ತು, ಭೃಷ್ಟಾಚಾರಗಳಿಂದ ಸ್ವಪಕ್ಷೀಯರಿಂದಲೇ ನಿಂದನೆಗೊಳಗಾಗುತ್ತಿರುವ ಸ್ಟಾಲಿನ್ ಭಕ್ತ ನಾಯಕರು ಅನೇಕ. ಇದು ಕೇವಲ ಕೇರಳಕ್ಕೆ ಮಾತ್ರ ಸೀಮಿತವಲ್ಲ. ಕಮ್ಯೂನಿಸ್ಟರು ಎಲ್ಲೆಲ್ಲಾ ಅಧಿಕಾರದ ಸುಖ ಅನುಭವಿಸಿದ್ದಾರೋ ಅಲ್ಲೆಲ್ಲಾ ಅವರದ್ದು "ಆಡುವುದೊಂದು ಮಾಡುವುದೊಂದು" ಎನ್ನುವ ನೀತಿಯೇ! ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ನೀಡುವುದೇ ಕಮ್ಯೂನಿಸ್ಟರ ಆರ್ಥಿಕ ಸಮಾನತೆ. ಬಂಗಾಳದಲ್ಲಿ ಮೂಲ ಬಂಗಾಲಿ ಜಮೀನ್ದಾರರನ್ನು ನಿರ್ನಾಮ ಮಾಡಿದ ಕಮ್ಯುನಿಸ್ಟರು, ರಾಜಸ್ಥಾನ ಹಾಗೂ ಗುಜರಾತ್ ಮೂಲದ ಬಂಡವಾಳಶಾಹಿಗಳೊಂದಿಗೆ ವಾಣಿಜ್ಯ ವ್ಯವಹಾರದಲ್ಲಿ ನಿರತರಾಗಿದ್ದರು. ಅಧಿಕಾರಕ್ಕಾಗಿ ತತ್ವಗಳೊಡನೆ ರಾಜೀ ಮಾಡಿಕೊಂಡು ಮುಸ್ಲಿಮ್ ಲೀಗ್, ಕಾಂಗ್ರೆಸ್ ಯಾರೊಂದಿಗಾದರೂ ಕೈ ಜೋಡಿಸಲು ಅವರು ಸಿದ್ಧ. ಇಂದು ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕೆಂಪು ಉಗ್ರರಿಗೆ ಕೇರಳದಲ್ಲಿ ಕಾಂಗ್ರೆಸ್ ಬದ್ಧ ವೈರಿ.
ಈ ಕೆಂಪು ಉಗ್ರರಿಗೆ ಬೌದ್ಧಿಕವಾಗಿ ಸಹಾಯ ಮಾಡುವ ಒಂದು ವರ್ಗವಿದೆ. ಅವರೆಲ್ಲಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪೂರೈಸಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದಾರೆ. ಆರ್ಥಿಕವಾಗಿ ಬಲಿಷ್ಟರಾಗಿರುವ ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಧಿಪತ್ಯವನ್ನು ಸ್ಥಾಪಿಸಿ ತಮ್ಮ ಚಿಂತನೆಯೇ ಮಾನ್ಯತೆ ಪಡೆಯುವಂತೆ, ಅದನ್ನೆ ಜನ ನಂಬುವಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ತಾವು ಜಾತ್ಯಾತೀತರು ಎಂದು ಬೊಬ್ಬಿರಿವ ಇವರು ಅತೀ ದೊಡ್ದ ಜಾತಿವಾದಿಗಳೂ, ಕೋಮುವಾದಿಗಳೂ ಆಗಿರುತ್ತಾರೆ. ಜನರನ್ನು ಜಾತಿವಾದದ ಮೂಲಕ ಪ್ರತ್ಯೇಕಿಸಿ ತಮ್ಮ ಅನ್ನದಾತರಿಗೆ ಅವರನ್ನು ಮತಬ್ಯಾಂಕನ್ನಾಗಿಸಿ ತನ್ಮೂಲಕ ತಮ್ಮ ಧಣಿಗಳ ಋಣ ತೀರಿಸುವುದೇ ಅವರ ಉದ್ದೇಶ. ಶಿಕ್ಷಣ, ಸಾಹಿತ್ಯ, ಮಾಧ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದಲು ಹುಳುಗಳಂತೆ ತುಂಬಿಕೊಂಡ ಇವರುಗಳು ದೊಡ್ಡ ದನಿಯಲ್ಲಿ ಚೀರಾಡುವುದೇ ಜಗತ್ತಿನೆಲ್ಲೆಡೆ ಮೊಳಗುತ್ತದೆ. ಇತ್ತೀಚೆಗೆ "ಪ್ರಶಸ್ತಿ ವಾಪಸಿ' ಅಥವಾ "ಗೋಮಾಂಸ ಭಕ್ಷಣೆಗೆ ಬೆಂಬಲ'ದಂಥ ಘಟನೆಗಳ ಮೂಲಕ ಸುದ್ದಿಯಾದವರೆಲ್ಲಾ ಇಂಥವರೇ. ಇಂಥ ಚಿಂತಕರು ಸುದ್ದಿ ಮಾಧ್ಯಮದಲ್ಲಿ ಎದ್ದು ತೋರುತ್ತಾರೆ. ಆಗಾಗ ಜಾತ್ಯತೀತತೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಅಲ್ಪಸಂಖ್ಯಾಕರ ರಕ್ಷಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಬಿತ್ತರಿಸುತ್ತಿರುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಷ್ಟು ಕಾಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ, ವಿವಿಧ ಅಕಾಡೆಮಿಗಳಲ್ಲಿ ಅಧಿಕಾರ ಅನುಭವಿಸಿ ದೇಶ ಒಡೆವ ಸಾಧನೆ ಮಾಡಿದ ಈ ವಾಮಪಂಥೀಯ ಬುದ್ಧಿಜೀವಿಗಳಿಗೆ ಕೇಂದ್ರದಲ್ಲಿ ಭಾಜಪಾ ಅಧಿಕಾರಕ್ಕೆ ಬಂದೊದನೆ ತಮ್ಮ ಅಡಿಪಾಯ ಕುಸಿದು ಬೀಳುತ್ತಿರುವ ಹತಾಷೆಯ ಭಾವ ಆವರಿಸಿದೆ! ಇವರಿಂದಾಗಿಯೇ ಕೇರಳ, ಬಂಗಾಳಗಳಲ್ಲಾದ ಕೆಂಪು ಉಗ್ರರ ರಕ್ತರಾಜಕೀಯ ಹೊರ ಜಗತ್ತಿಗೆ ಮುಚ್ಚಿ ಹೋದದ್ದು!
ಇತ್ತೀಚೆಗಂತೂ ಕಾಮ್ರೇಡುಗಳ ಗುಪ್ತ ಸಭೆಗಳಲ್ಲಿ ಮೊಬೈಲ್ ಜಾಮರುಗಳನ್ನು ಬಳಸಲಾಗುತ್ತೆ. ತಮ್ಮ ಮಂಥನದ ವಿಷಯ ಹೊರಹೋಗಬಾರದೆಂದು ಕಾಮ್ರೇಡುಗಳು ಬಹಳ ಎಚ್ಚರ ವಹಿಸುತ್ತಿದ್ದಾರೆ. ಕಣ್ಣೂರಿನ ರಕ್ತಪಾತ ಹೊರ ಜಗತ್ತಿನಲ್ಲಿ ಪ್ರತಿಧ್ವನಿಸಿದಾಗ ಬಂಗಾಳದ ಮಾದರಿಯನ್ನೇ ಅನುಸರಿಸೋಣ ಎಂದು ಪಿಣರಾಯಿ ವಿಜಯನ್ ಕರೆ ಕೊಟ್ಟದ್ದು ನೆನಪಿರಬಹುದು. ಈ ಅಂತರಂಗಿಕ ಸಭೆಗಳಲ್ಲಿ ನಡೆಯುವುದು ಇಂತಹುದ್ದೇ! ವಾಮಪಂಥೀಯರು ಭಾರತದಲ್ಲಿ ತಾವೇನು ಮಾಡಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿದ್ದಾರೆ. ಅವರ ಗುರಿ ಒಂದೇ...ಹಿಂದೂ ನಾಗರೀಕತೆಯನ್ನು ನಾಶ ಮಾಡಿ ಮಾರ್ಕ್ಸಿಸ್ಟ್ ರಾಜ್ಯದ ಸ್ಥಾಪನೆ. ಇದಕ್ಕಾಗಿ ಕಳೆದ 80 ವರ್ಷಗಳಲ್ಲಿ ಮಾನವ ಹಕ್ಕುಗಳು, ಮಹಿಳಾ ಸಬಲೀಕರಣ, ಮಹಿಳಾ ಹಕ್ಕುಗಳು, ಜಾತ್ಯಾತೀತ ಸಮಾಜ, ಅವರ್ಗೀಕೃತ ಸಮಾಜ ಮುಂತಾದ ಧನಾತ್ಮಕ/ ಜನಪ್ರಿಯ ವಿಷಯಗಳ ಬಗ್ಗೆ ಯಾರಿಗೂ ಅರ್ಥವಾಗದ ರೀತಿಯಲ್ಲಿ ಚರ್ಚೆ ನಡೆಸಿ ಜನರ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹಿಂದೂಗಳನ್ನು ತುಳಿಯಲು ಸಿಗುವ ಯಾವ ದಾರಿಯನ್ನೂ ಅವರು ಕಳೆದುಕೊಳ್ಳಲಿಚ್ಛಿಸುವುದಿಲ್ಲ. ಅದು ಜನರನ್ನು ಮರುಳುಗೊಳಿಸುವ ವಿಧಾನವಾದರೂ ಆದೀತು ಅಥವಾ ರಕ್ತಪಥವಾದರೂ ಸರಿ. ಹಿಂದೂಗಳು ಒಗ್ಗಟ್ಟಾಗಿ ಈ ಕಾಮ್ರೇಡುಗಳಿಗೆ ಪಾಠ ಕಲಿಸದಿದ್ದರೆ ಉಳಿಗಾಲವಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ